ಬೊಳುವಾರ್ ಈದ್


“ನಾವು ಮೆರವಣಿಗೆ ಮಾಡುವುದೆಲ್ಲ ಸರಿ. ಆದ್ರೆ ನನ್ನ ಅಂಗಡಿಗೆ ಬಂದವರು, ಈದ್ ಮಿಲಾದ್ ಎಂದರೆ ಮೊಹರಮ್ ನ ಹಾಗೆ ದುಃಖದ ದಿನವಾ, ಅಥ್ವಾ ರಮ್ಜಾನಿನ ಹಾಗೆ ಸಂತೋಷದ ದಿನವಾ ಅಂತ ಪ್ರಶ್ನೆ ಕೇಳಿದ್ರೆ ನಾನು ಎಂತ ಉತ್ರ ಹೇಳ್ಬೇಕು?” ಕ್ಯಾಸೆಟ್ ಅಂಗಡಿಯ ಚೈಯಬ್ಬ, ಅಧಿಕಪ್ರಸಂಗದ ಪ್ರಶ್ನೆಯೊಂದನ್ನು ಮುಂದಿಟ್ಟಾಗ, ಜಮಾತ್ ಮೀಟಿಂಗ್ ನಲ್ಲಿದ್ದವರಿಗೆಲ್ಲ ಕೋಪ ಬಂದಿತ್ತು.
ಆದರೆ ಮಸೀದಿಯ ಇಮಾಂ ಇಕ್ಬಾಲ್ ಮೌಲವಿಯವರ ಯೋಚನೆಯೇ ಬೇರೆ ಬಗೆಯಲ್ಲಿತ್ತು. ’ಈದ್ ಮಿಲಾದ್’ ಅಂತ ಹೇಳುವುದೇ ತಪ್ಪು. ’ಈದ್’ ಅಂದರೆ ಹಬ್ಬ; ಇದು ಹಬ್ಬವಲ್ಲ. ಸಂತೋಷಪಡಬೇಕಾದ ದಿನವೂ ಅಲ್ಲ. ಈದ್ ಮಿಲಾದ್ ಬದಲಿಗೆ ’ಮಿಲಾದುನ್ನೆಬಿ’ ಅಂದರೆ ಚೈಯಬ್ಬನ ಪ್ರಶ್ನೆಗೂ ಉತ್ತರ ಸಿಗುತ್ತದೆ.
ಮೌಲವಿಯವರು ತಮ್ಮ ಅಭಿಪ್ರಾಯವನ್ನು ಹಾಗೆಯೇ ಸಭೆಗೆ ತಿಳಿಸಿದ್ದರು.
“ದೊಡ್ಡ ದೊಡ್ಡ ಉಲೇಮಾಗಳು ಹೇಳುವುದನ್ನು ಒಪ್ಪಿಕೊಳ್ಳುವುದಾದರೆ, ನೆಬಿಯವರ ಹುಟ್ಟಿದ ದಿನದ ಬಗ್ಗೆ ಯಾವ ದಾಖಲೆಯೂ ಸಿಗುವುದಿಲ್ಲ; ಯಾಕೆಂದರೆ ಹುಟ್ಟುವಾಗ ಅವರು ಪ್ರಸಿದ್ಧರಲ್ಲ. ಮುಂದಿನ ದಿನಗಳಲ್ಲಿ ಪ್ರಸಿದ್ಧರಾಗುತ್ತಾರೆಂದು ಆಗ ಯಾರೂ ಭಾವಿಸಿದ್ದಿರಲಿಲ್ಲ. ಅವರು ಗರ್ಭದಲ್ಲಿದ್ದಾಗಲೇ ಅಬ್ಬ ತೀರಿಕೊಂಡಿದ್ದರು. ಹಾಗಾಗಿ ಹುಟ್ಟಿದ ದಿನದ ಬಗ್ಗೆ ಯಾರೂ ದಾಖಲೆ ಇಟ್ಟಿರಲು ಸಾಧ್ಯವಿಲ್ಲ. ಮುಂದೆ ಪ್ರಸಿದ್ಧರಾದ ಪ್ರವಾದಿಯವರು ತೀರಿ ಹೋದ ಸೋಮವಾರದ ದಿನವನ್ನು ಎಲ್ಲರೂ ನೆನಪಿಟ್ಟುಕೊಂಡಿರಲು ಸಾಧ್ಯ. ಆದ್ದರಿಂದಲೇ ಈ ದಿನವನ್ನು ಮಿಲಾದುನ್ನೆಬಿ ಎಂದು ಆಚರಿಸುತ್ತಿದ್ದೇವೆ. ಇದು ಹಬ್ಬದ ದಿನವಲ್ಲ; ತೀರಿಕೊಂಡಿರುವ ಪ್ರವಾದಿಯವರಿಗೆ ಒಳ್ಳೆಯದಾಗಲಿ ಎಂದು ಅಲ್ಲಾಹುವಿಗೆ ದುವಾ ಸಲ್ಲಿಸುವ ದಿನ”

ಸಭೆಯಲ್ಲಿದ್ದ ಚಾಂದಾಜ್ಜನವರಿಗೆ ಇದೇನೂ ಹೊಸ ಮಾಹಿತಿಯಾಗಿದ್ದಿರಲಿಲ್ಲ. ಹಿಂದೆ ಕರಾಚಿಯಲ್ಲಿ ಕುರಾನು ಓದಿತ್ತಿದ್ದ ದಿನಗಳಲ್ಲೇ ಗೊತ್ತಾಗಿತ್ತು. ಇನ್ನೂ ಕೆಲವರು ಅದೇ ದಿನದಂದೇ ಪ್ರವಾದಿಯವರು ಹುಟ್ಟಿದ್ದು ಮತ್ತು ಅದೇ ದಿನದಂದೇ ಆವರು ತೀರಿಕೊಂಡದ್ದು ಎಂದೂ ವಾದಿಸುತ್ತಿದ್ದರು.
ಪ್ರವಾದಿಯವರನ್ನು ಸಾಕಿ ಸಲಹುತ್ತಿದ್ದ ಅಜ್ಜ ಬಹಳ ಪ್ರಸಿದ್ಧರಾಗಿದ್ದವರಾದ್ದರಿಂದ ಜನ್ಮ ದಿನದ ದಾಖಲೆಗಳನ್ನು ಅವರು ಇಟ್ಟಿರುವ ಸಾಧ್ಯತೆಯೂ ಇದೆ ಎಂದು ಹೇಳುವವರೂ ಇದ್ದರು.
ಪ್ರವಾದಿಯವರು ತೀರಿ ಹೋದ ದಿನವನ್ನು ಮುಸ್ಲಿಮರೆಲ್ಲ ಸಂತೋಷದಿಂದ ಆಚರಿಸಲಿ ಎಂಬ ದುರ್ಬುದ್ಧಿಯಿಂದ ಯೆಹೂದಿಗಳು ತೇಲಿಬಿಟ್ಟಿರುವ ಕುಚೇಷ್ಟೆ ಇದು ಎಂದು ಹೇಳುವವರೂ ಕರಾಚಿಯಲ್ಲಿ ಇದ್ದರು.
 
[ಸ್ವಾತಂತ್ಯದ ಓಟ: ೮೮೯-೮೯೦]
 

‍ಲೇಖಕರು G

January 15, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. h a patil

    – ಬೋಳುವಾರ ರವರೆ ನನಗೂ ಈದ್ ಮಿಲಾದ್ ಎಂದರೆ ಏನು ಎನ್ನುವುದು ಗೊತ್ತಿರಲಿಲ್ಲ, ಈ ಕುರಿತು ಸರಳ ಕನ್ನಡದಲ್ಲಿ ಮನದಟ್ಟು ಮಾಡಿದ್ದೀರಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: