ಬೊಳುವಾರು
“ಬಂತಾ…? ”
“ಇಲ್ಲ…”
“ಈಗ ಬಂತಾ?”
“ಇಲ್ಲಾ.. ಇಲ್ಲ…”
“ಇನ್ನೂ ಬಂದಿಲ್ವಾ..?…… ಈಗಾ..?”
“ ಹಾಂ.. ಹಾಂ..!, ಗುಜು.. ಗುಜು.. ಬರ್ಲಿಕ್ಕೆ ಶುರುವಾಯ್ತು…!, ಇನ್ನೂ ಸ್ವಲ್ಪ ಬಲಕ್ಕೆ ತಿರುಗಿಸು.”
“ ಸಾಕಾ.. ಇಷ್ಟು…? …ಈಗಾ…?”
“ ಹೋ.. ಹೋ.. ಬಂತು.. ., ಬಂತು… ಇನ್ನು ತಿರ್ಗಿಸ್ಬೇಡಾ.., ನೀನಿನ್ನು ಇಳ್ದು ಬಾ…”

ಮನೆಯಂಗಳದ ಉತ್ತರಕ್ಕಿದ್ದ ದಿಣ್ಣೆಯೇರಿದ್ದ ನೆರೆಮನೆಯ ಮಾಂಕು ಪೂಜಾರಿಯ ಮೊಮ್ಮಗಳು ಗುಲಾಬಿ, ಮಹಾ ಯುದ್ದವನ್ನು ಗೆದ್ದವಳಂತೆ ಹೆಚ್ಚು ಕಮ್ಮಿ ಜಾರುತ್ತಲೇ ದಿಣ್ಣೆಯಿಳಿದು, ’ಆಯಿಷಾ ಮಂಜಿಲ್’ ಜಗಲಿಯೇರಿದವಳು, ಹೊಸ್ತಿಲಿಗಡ್ಡವಾಗಿ ಕೂತಿದ್ದ ತಮ್ಮ ಸಂಜೀವನನ್ನು ಪಕ್ಕಕ್ಕೆ ತಳ್ಳಿ, ಅಲ್ಲೇ ಒತ್ತಿಕೊಂಡು ಕುಳಿತುಕೊಂಡಳು. ಹಜಾರದಲ್ಲಿ ಅದಾಗಲೇ ಹತ್ತು-ಹನ್ನೆರಡು ಜೋಡಿ ಕಣ್ಣುಗಳಲ್ಲಿ ’ತ್ರೇತಾಯುಗ’ ಪ್ರತಿಫಲಿಸುತ್ತಿತ್ತು.
ಅಷ್ಟರಲ್ಲಿ, ಪ್ರತಿ ರವಿವಾರದಂತೆ ತೋಟದ ಬೆಳಗ್ಗಿನ ಕೆಲಸ ಮುಗಿಸಿ ಬಂದ ಚಾಂದಜ್ಜ, ಹೊಸ್ತಿಲಲ್ಲಿ ಕುಳಿತಿದ್ದ ಸಂಜೀವನನ್ನೆತ್ತಿಕೊಂಡು ಒಳಕ್ಕೆ ಕಾಲಿಟ್ಟವರು, “ ಓಹ್..! ಆಗ್ಲೇ ಶುರುವಾಗಿಬಿಟ್ಟಿತಾ? ” ಎಂದು ಪರಿತಪಿಸಿದ್ದರು. “ ಶುರು ಎಂಥದ್ದು? ಮುಗೀಲಿಕ್ಕೆ ಬಂತು. ” ಐಸಮ್ಮ ಭಂಗಿ ಬದಲಿಸದೆ ಉತ್ತರಿಸಿದ್ದರು. ಹೆಂಡತಿಯ ನಿರ್ಲಕ್ಷಕ್ಕೆ ಸಿಟ್ಟಾದ ಚಾಂದಜ್ಜ, “ಶುರುವಾಗುವಾಗ್ಲೇ ನನ್ನನ್ನು ಕರೀಬೇಕು ಅಂತ ಎಷ್ಟು ಸರ್ತಿ ಹೇಳಿಲ್ಲ ನಿನ್ಗೇ?” ಚಾಂದಜ್ಜನವರು ಅರಚಿದ್ದರು. “ನೀವು ಹೇಳ್ಳಿಲ್ಲ ಅಂತ ನಾನು ಯಾವಾಗ ಹೇಳಿದೇ? ನಮ್ಮ ಮನೆಯಲ್ಲಿ ಯಾವಾಗ್ಲೂ ಅದು ಶುರುವಾಗುವುದೇ ಅರ್ಧ ಮುಗ ಮೇಲೆ. ಆ ಕಂಭದ ಮೇಲೆ ಇದ್ದ ಅಡ್ಡಪಟ್ಟಿ ಮತ್ತೊಮ್ಮೆ ತಿರುಗಿತ್ತು..” ತಮ್ಮ ನಿರಾಸೆಯನ್ನು ಹಾಗೆಯೇ ಹೊರಹಾಕಿದ್ದರು ಐಸಮ್ಮ.
ಹಜಾರದಲ್ಲಿದ್ದ ಆರಾಮ ಕುರ್ಚಿಯಲ್ಲಿ ಒರಗುತ್ತಾ, “ ನಿನ್ಗೆ ನಾನು ಮಗುವಿಗೆ ಹೇಳಿದ ಹಾಗೆ ಹೇಳಿದ್ನಾ ಇಲ್ವಾ? ಮೀನು ಕೊಯ್ದು ಆರಿಸುವ ಕೆಲ್ಸವನ್ನು ಆ ಕಂಭದ ಹತ್ರ ಮಾಡ್ಬೇಡಾ ಅಂತ… ಕಂಭದ ಅಡ್ಡಪಟ್ಟಿಯ ಮೇಲೆ ಕಾಗೆಗಳು ಕೂತ್ರೆ ಅದು ತಿರ್ಗದೆ ಇರ್ತದಾ?” ತಪ್ಪೆಲ್ಲ ಹೆಂಡತಿಯದ್ದೇ ಎಂಬಂತೆ ಆರೋಪಿಸಿದ್ದರು ಚಾಂದಜ್ಜ.
“ಹೌದೌದು. ತಪ್ಪೆಲ್ಲ ನನ್ನದೇ.” ಸಿಡುಕಿದ್ದರು ಐಸಮ್ಮ . “ನಿಮ್ಗೆ ಎಷ್ಟು ಸರ್ತಿ ದಮ್ಮಯ ಹಾಕ್ಲಿಲ್ಲ? ಆ ಕಂಭವನ್ನು ಅಲ್ಲಿಂದ ತೆಗ್ದು ಬೇರೆ ಕಡೆ ಹಾಕ್ಸಿ ಅಂತಾ..? ನೀವು ಗಂಡಸ್ರು ಹೆಂಡ್ತಿ ಮಾತಿಗೆ ಯಾವಾಗ್ಲಾದ್ರೂ ಬೆಲೆ ಕೊಟ್ಟದ್ದು ಉಂಟಾ?”.
ಹೆಂಡತಿಯ ಮುಖವನ್ನು ನೇರವಾಗಿ ದಿಟ್ಟಿಸಿದ ಚಾಂದಜ್ಜ ವ್ಯಂಗ್ಯವಾಡಿದ್ದರು, “ ಹೆಂಡ್ತಿ ಮಾತಿಗೆ ಬೆಲೆ ಕೊಟ್ರೆ ಏನಾಗ್ತದೆ ಅಂತ ನೀನೇ ನೋಡಿಲ್ವಾ? ಬಂಗಾರದಂತ ಮಗ ಮತ್ತು ಸೊಸೆ ಕಾಡಿಗೆ ಹೋಗುವ ಹಾಗೆ ಆಗ್ಲಿಲ್ವಾ? ”.
ಐಸಮ್ಮ ಸುಲಭದಲ್ಲಿ ಸೋಲುವವರಲ್ಲ. ಎಚ್ಚರಿಸುವ ಸ್ವರದಲ್ಲೇ ಗೊಣಗಿದ್ದರು,
“ ಎರಡು ಮೂರು ಕಟ್ಟಿಕೊಳ್ಳುವವರಿಗೆ ಅಲ್ಲಾಹು ಕೊಡುವ ಶಿಕ್ಷೆ ಅದು. ”
[ಸ್ವಾತಂತ್ರ್ಯದ ಓಟ: 773-774]






Hahahahahahahahahahahahaha ….. Serige savvaa seru !
ಜೈ ಹೊ ಐಸಮ್ಮ…
ಆದ್ರೂ ನೋಡಿ…ಶ್ರೀರಾಮ ಒಂದೇ ಕಟ್ಟಕಂಡಿದ್ದಲ್ವಾ ಐಸಮ್ಮಾ…ಅವನೇನ್ ಸುಖಾ ಕಂಡ..ಸೀತೆ ಏನ್ ಸುಖಾ ಕಂಡ್ಳೂ?
ಒಂದೋ ಎರಡೋ…ಸುಖದ ಋಣಾ ಮಾತ್ರ ಅಲ್ಲಾಹುವನ್ನ ಕೇಳಿಯೇ ಪಡ್ಕೋಬೇಕಂತ ಅನಿಸ್ತದೆ ಐಸಮ್ಮಾ ನನಗಂತೂ…
ಆದ್ರು ನೀವು ಹೇಳಿದ್ದು ಸರ್ರೀ ತಾಕುತ್ತೆ ಅಂಥೋರಿಗೆ..ಅದಕ್ಕೇ ಜೈ ಹೋ….
good, Isamma.