ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಬೊಳುವಾರು’ ಎಂಬ ‘ಪೆದಂಬು’ ಕಾಕ!

ಹಂಝ ಮಲಾರ್

ಬೊಳುವಾರು ಎಂಬೀ ಹೆಸರಿಗೂ ನನ್ನ ಸಾಹಿತ್ಯಕ್ಕೂ ಅವಿನಾಭಾವ ನಂಟು. ಸುಮಾರು 25 ವರ್ಷಗಳ ಹಿಂದೆ ಅಂದರೆ ಕುದ್ರೋಳಿಯ ನಾರಾಯಣ ಗುರು ಕಾಲೇಜಿನಲ್ಲಿ ಕಾಲಹರಣಕ್ಕಾಗಿ ಗ್ರಂಥಾಲಯದ ಕಪಾಟು ತೆರೆದು ಒಳ್ಳೆಯ ಪುಸ್ತಕಗಳಿಗಾಗಿ ಪರದಾಡುವಾಗ ಕೈಗೆ ಸಿಕ್ಕಿದ “ಆಕಾಶಕ್ಕೆ ನೀಲಿ ಪರದೆ” ಎಂಬ ಕಥಾಸಂಕಲನವನ್ನು ಓದದೇ ಇದ್ದಿದ್ದರೆ ನಾನಿಂದು “ಕತೆಗಾರ/ಸಾಹಿತಿ” ಅಂತ ನಾಲ್ಕು ಮಂದಿಯ ಮಧ್ಯೆ ಗುರುತಿಸಿಕೊಳ್ಳುತ್ತಿರಲಿಲ್ಲವೋ ಏನೋ?. ಹಾಗೇ “ಬೊಳುವಾರು” ಅವರನ್ನು ಓದತೊಡಗಿದ ನನಗೆ ಅವರ “ದೇವರುಗಳ ರಾಜ್ಯದಲ್ಲಿ/ ಅಂಕ/ ಒಂದು ತುಂಡುಗೋಡೆ/ಜಿಹಾದ್/ಸ್ವಾತಂತ್ರ್ಯದ ಓಟ/ಓದಿರಿ/ಉಮ್ಮಾ/ಪುನ್ನಪ್ಪ ವಯಲಾರ್ ಸಮರ/ತಟ್ಟು ಚಪ್ಪಾಳೆ ಪುಟ್ಟ ಮಗು/ಪಾಪು ಗಾಂಧಿ, ಗಾಂಧಿ ಬಾಪು ಆದ ಕತೆ-ಇತ್ಯಾದಿ ಕೃತಿಗಳು ಹೊಸ ಲೋಕವನ್ನೇ ಸೃಷ್ಟಿಸಿತ್ತು. ಅವರ ಪ್ರಪ್ರಥಮ ಕಥಾಸಂಕಲನ “ಅತ್ತ ಇತ್ತಗಳ ಸುತ್ತಮುತ್ತ” ಪುಸ್ತಕವನ್ನು ಓದಲಲ್ಲ, ಕನಿಷ್ಟ ಮುಟ್ಟಿ ನೋಡಲಾದರೂ ಕೊಡಿ ಎಂದು ನಾನು ಭಿನ್ನವಿಸಿಕೊಂಡರೂ ಕೂಡ ಬೊಳುವಾರು ಒಂದೊಂದೇ ನೆಪ ಹೇಳಿ ಕೊಡಲು ತಪ್ಪಿಸಿಕೊಂಡಿದ್ದರು.

ಆ ಬಳಿಕ ಬಹುತೇಕ ಮುಸ್ಲಿಂ ಲೇಖಕ-ಲೇಖಕಿಯರ ಕೃತಿಗಳನ್ನು ಓದಿ ಸಂಗ್ರಹಿಸಿಡುವ ಹವ್ಯಾಸ ಬೆಳೆಸಿದ್ದ ನನಗೆ ಬೊಳುವಾರರ “ಅತ್ತ ಇತ್ತ” ನನ್ನ ಸಂಗ್ರಹದಲ್ಲಿಲ್ಲ ಎಂಬ ಕೊರಗು/ನಿರಾಶೆ ಆದದ್ದು ಸುಳ್ಳಲ್ಲ. ಮೂರ್ನಾಲ್ಕು ವರ್ಷಗಳ ಹಿಂದೆ ಮುಸ್ಲಿಂ ವಿದ್ಯಾರ್ಥಿನಿಯೊಬ್ಬರು ಕರೆ ಮಾಡಿ ಪಿಎಚ್‌ಡಿ ಅಧ್ಯಯನಕ್ಕಾಗಿ ನಿಮ್ಮ ಬಳಿ ಇರುವ ಮುಸ್ಲಿಂ ಸಾಹಿತಿಗಳ ಕೃತಿ ಕೊಡಬಹುದಾ? ಎಂದು ಕೇಳಿದಾಗ ಇಲ್ಲ ಎನ್ನಲಾಗಲಿಲ್ಲ. ನಾನು ನನ್ನ ಬಳಿಯಿದ್ದ ಕೃತಿಗಳನ್ನು ಆಕೆಗೆ ಕೊಟ್ಟು ಬೊಳುವಾರು ಅವರ ಬಳಿ ಹೋಗು. ಅವರ “ಅತ್ತ ಇತ್ತಗಳ ಸುತ್ತಮುತ್ತ” ಕಥಾ ಸಂಕಲನ ಕೇಳು. ಸಿಕ್ಕಿದರೆ ನನಗೊಂದು ಕ್ಸೆರಾಕ್ಸ್ ಪ್ರತಿ ಕೊಟ್ಟ ಉಪಕಾರ ಮಾಡು ಎಂದಿದ್ದೆ. ಅದರಂತೆ ಆ ವಿದ್ಯಾರ್ಥಿನಿಯು ನನಗೆ ಆ ಕಥಾಸಂಕಲನದ ಕ್ಸೆರಾಕ್ಸ್ ಮಾಡಿಸಿಕೊಟ್ಟು ತುಂಬಾ ಉಪಕಾರ ಮಾಡಿದ್ದಳು.

ಆ ಮೂಲಕ ಬೊಳುವಾರು ಅವರ ಎಲ್ಲಾ ಕತೆ, ಕಾದಂಬರಿ ಓದಿದ ಹೆಗ್ಗಳಿಕೆಯೂ ನನ್ನದಾಗಿತ್ತು. ಓದಲೂ, ಮುಟ್ಟಲೂ ಕೊಡದಿದ್ದ ಬೊಳುವಾರಿಗೆ “ಅತ್ತ ಇತ್ತಗಳ ಸುತ್ತಮುತ್ತ” ಕೃತಿಯನ್ನು ನಾನು ಓದಿದೆ ಎಂದಾಗ ದೊಡ್ಡ ಶಾಕ್!. ಯಾವಾಗ ಓದಿದಿರಿ, ಯಾರು ಕೊಟ್ಟರು ನಿಮಗೆ? ಅದು ನನ್ನ ಆರಂಭದ ಕಥಾಸಂಕಲನ ಅಲ್ವಾ? ಹಾಗಾಗಿ ಅದನ್ನು ಮರುಮುದ್ರಿಸಲು ಆಸಕ್ತಿ ವಹಿಸಿಲ್ಲ ಎಂದೆಲ್ಲಾ ಹೇಳಿಕೊಂಡರು.

ನಾನು ಪಿಎಚ್‌ಡಿ ವಿದ್ಯಾರ್ಥಿನಿಯು ಮಧ್ಯಸ್ಥಿಕೆ ವಹಿಸಿದ್ದನ್ನು ನೆನಪಿಸಿದೆ.ಇಂತಹ ಬೊಳುವಾರುವನ್ನು ನಾನು ನೋಡಿದ್ದು, 1997 ಅಥವಾ 1998ನೆ ಇಸವಿಯಲ್ಲಿ. ಅಂದರೆ ಮಂಗಳೂರಿನಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಬೊಳುವಾರು ಅವರನ್ನು ಮುಖತಃ ಕಂಡು ನಾನು ಪರಿಚಯಿಸಿ ಮಾತನಾಡಿದ್ದೆ. ಅವರು ನಿಮಿಷಕ್ಕೊಂದರಂತೆ ಅರ್ಧ ಸಿಗರೇಟು ಸುಡುತ್ತಿದ್ದರು. ಕೈಯಲ್ಲೊಂದು ಪುಸ್ತಕವೂ ಇತ್ತು. ಅದನ್ನು ಆಗಾಗ ಕಂಕುಳಲ್ಲಿಡುತ್ತಿದ್ದರು.

ಸಮ್ಮೇಳನದ ಗೋಷ್ಠಿಯಲ್ಲಿ ನಡೆದ ಬಿಸಿಬಿಸಿ ಚರ್ಚೆಯ ಮುಂದುವರಿದ ಭಾಗವಾಗಿ ಸಭಾಂಗಣದಲ್ಲೂ ಕೂಡ ಬಿರುಸಿನ ಚರ್ಚೆ ನಡೆಯುತ್ತಿತ್ತು. ಅವರ ಸುತ್ತಮುತ್ತ ಅಭಿಮಾನಿಗಳು ಸುತ್ತುವರಿದಿದ್ದರು. ಆಗಿನ್ನೂ ಸಾಹಿತ್ಯದ ರಂಗ ಪ್ರವೇಶಕ್ಕೆ ಸಜ್ಜಾಗುತ್ತಿದ್ದ ನನಗೆ ಇದೆಲ್ಲಾ ಉತ್ತರ ಸಿಗದ ಪ್ರಶ್ನೆಯಾಗಿತ್ತು. ಬೊಳುವಾರರ ಒಬ್ಬ ಅಭಿಮಾನಿಯಂತೂ “ಅವ ಮತ್ತೆ ಮತ್ತೆ ನಿಮ್ಮನ್ನು ಕೆಣಕಿದ್ದರೆ ನಾನು ಚಪ್ಪಲಿಯಿಂದ ಹೊಡೆಯುತ್ತಿದ್ದೆ” ಎನ್ನುತ್ತಿದ್ದ.

ಸಾಹಿತ್ಯದ ಮನಸ್ಸುಗಳಿಗೆ ಅಥವಾ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡ ಕೈಗಳು ಚಪ್ಪಲಿಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಾ? ಎಂಬ ಪ್ರಶ್ನೆ ನನ್ನಲ್ಲಿ ಆಗ ಹುಟ್ಟಿದ್ದು ಕೂಡ ಸುಳ್ಳಲ್ಲ.ಇದನ್ನೆಲ್ಲಾ ಯಾಕೆ ಹೇಳಿದೆನೆಂದರೆ, ಮಾ.18ರ ಶುಕ್ರವಾರ (2022) ಬೊಳುವಾರು ಅವರ “ಮೋನುಸ್ಮತಿ” ಕೃತಿಯನ್ನು ನಾನು ಓದಿದೆ. ಹಾಗೇ ಓದಿದ ಬಳಿಕ ನಾಲ್ಕು ಮಾತು ಬರೆಯದಿರಲು ಸಾಧ್ಯವಾಗಲಿಲ್ಲ. ಯಾವುದೇ ಸರಹದ್ದುಗಳು ಅನ್ವಯಿಸದ ಎಂದು ಸ್ವತಃ ಬೊಳುವಾರು ಹೇಳಿಕೊಂಡು ನಮ್ಮ ಕೈಗಿತ್ತ “ಮೋನುಸ್ಮತಿ” ಒಂದೊಳ್ಳೆಯ ಆತ್ಮಕತೆ ಅಂತ ನನಗೆ ಅನಿಸಲೇ ಇಲ್ಲ. ಅವರೆಲ್ಲಾ ಕತೆ, ಕಾದಂಬರಿಯನ್ನು ಓದಿದ್ದ ನನಗೆ ಇದು ಅದರ ಮುಂದುವರಿದ ಭಾಗ ಅಂತ ಭಾಸವಾಗತೊಡಗಿತ್ತು.

ಕತೆ, ಕಾದಂಬರಿಯಲ್ಲಿರುವಂತಹ ತಿರುವುಗಳು ಕೂಡ ಮೋನುಸ್ಮತಿಯ ಕೆಲವು ಅಧ್ಯಾಯಗಳಲ್ಲಿ ಕಾಣಿಸಿಕೊಂಡಿವೆ. ಉಮ್ಮ/ಉಪ್ಪ/ಅಕ್ಕ/ತಂಗಿ/ತಮ್ಮಂದಿರು/ಪತ್ನಿ/ಮಕ್ಕಳ ಬಗ್ಗೆ ಉಲ್ಲೇಖಿಸುತ್ತಲೇ “ವ್ಯವಸ್ಥೆಯೊಂದಿಗೆ ನಾನು ದಾರಿತಪ್ಪಿದೆನೇ ಅಥವಾ ವ್ಯವಸ್ಥೆಯೇ ನನ್ನನ್ನು ದಾರಿತಪ್ಪಿಸಿತೇ?” ಎಂಬ ಪ್ರಶ್ನೆಗೆ ಉತ್ತರ ಕಂಡು ಹಿಡಿಯುವ ಮುಕ್ತ ಅವಕಾಶವನ್ನು ಓದುಗರ ವಿವೇಚನೆಗೆ ಬಿಟ್ಟುಕೊಡುವ “ಹಿಕ್ಮತ್”ನ್ನು ಬೊಳುವಾರು ಇಲ್ಲೂ ಛಾಪಿಸಿದ್ದಾರೆ. ತನ್ನ ಉಗ್ಗಿನ ಸಮಸ್ಯೆ, ಬದುಕಿನ ವಿವಿಧ ಮಜಲುಗಳು, ಶಿಕ್ಷಣ, ಉದ್ಯೋಗ, ಸಂಸಾರ, ಸಾಹಿತ್ಯ-ಸಾಂಸ್ಕೃತಿಕ ಚಟುವಟಿಕೆ, ಸಾಹಿತ್ಯ ಲೋಕದೊಳಗಿನ ಗೊಜಲುಗಳನ್ನು ವಿಶಿಷ್ಟ ಶೈಲಿಯಲ್ಲಿ ನಿರೂಪಿಸಿರುವ ಬೊಳುವಾರು ಕೋಳಿಮೊಟ್ಟೆ (ಪುಟ ಸಂಖ್ಯೆ-80) ವಿಷಯದಲ್ಲಿ “ಸುಳ್ಳು ಹೇಳಲು ನಾನು ಕಲಿತದ್ದೇ ನನ್ನ ಉಮ್ಮನಿಂದ!” ಅಂತ ಬರೆದುದನ್ನು ಓದುವಾಗ “ಯಾವ ಉಮ್ಮ ತನ್ನ ಮಕ್ಕಳಿಗೆ ಸುಳ್ಳು ಹೇಳಲು ಕಲಿಸುತ್ತಾರೆ” ಎಂಬ ಪ್ರಶ್ನೆ ಕಾಡದಿರಲು ಸಾಧ್ಯವೇ ಇಲ್ಲ.

ಬೊಳುವಾರು ಒಬ್ಬ “ಪೆದಂಬ” ಎಂಬುದಕ್ಕೆ ಉಮ್ಮ-ಉಪ್ಪನ ಬಗ್ಗೆ ಅವರು ಬರೆದ ಇಲ್ಲಿನ ಕೆಲವು ಗೆರೆಗಳೇ ಸಾಕ್ಷಿಯಾಗುತ್ತಿದೆ. ಬಹುತೇಕ ವಾಕ್ಯಗಳಲ್ಲಿ ಬಳಸಿದ ಪದಗಳ ಆಟವು, ಅದರಲ್ಲಿ ಮಿಂದೆದ್ದ ಶೈಲಿಯು ರೋಚಕ ಹುಟ್ಟಿಸುತ್ತಿದೆ. ಈ ಸಾಹಿತಿಗಳಿಗೆ ಸನ್ಮಾನದ ಹಂಗೇಕೆ? ಸನ್ಮಾನಕ್ಕೆ ಕೊರಳೊಡ್ಡದೆ ತನ್ನ ಪಾಡಿಗೆ ತಾನು ಬರೆಯುತ್ತಾ ಇರಬಾರದೇ ಎಂದು ನಾನು ಹಲವು ವರ್ಷಗಳ ಹಿಂದೊಮ್ಮೆ ಬೊಳುವಾರರ ಬಳಿ ಕೇಳಿದ್ದೆ. ಹಾಗಿದ್ದರೆ ನೀನು “ಅವುಲಿಯವಾ? ಸನ್ಯಾಸಿಯಾ?. ಅವರಿಗಾದರೆ ಅದ್ಯಾವುದರ ಹಂಗಿಲ್ಲ. ಮನುಷ್ಯನಿಗೆ ಆಸೆ ಸಹಜ.

ಸಾಹಿತಿಯೂ ಮನುಷ್ಯ ತಾನೆ. ಇಂತಹ ಸಣ್ಣ ಸಣ್ಣ ಆಸೆಗಳನ್ನು ಹತ್ತಿಕ್ಕಿಕೊಳ್ಳಬಾರದು. ಸನ್ಮಾನ ಬೇಡ, ಪ್ರಶಸ್ತಿ ಬೇಡ ಎಂದರೆ ಹೇಗೆ ಎಂದು ನನ್ನಲ್ಲೇ ಕೇಳಿದ್ದ ಬೊಳುವಾರು ಮುಸ್ಲಿಂ ಲೇಖಕರ ಸಂಘದ ನಗದುರಹಿತ ಗೌರವ ಪ್ರಶಸ್ತಿ ಪುರಾಣವನ್ನು ಬಿಚ್ಚಿಟ್ಟ ಶೈಲಿಯು ಸಂಘಕ್ಕೆ ನೀಡಿದ ಸಲಹೆ ಎನ್ನದೆ ನನಗೆ ವಿಧಿಯಿಲ್ಲ.ಆದಾಗ್ಯೂ ಬೊಳುವಾರು ತನ್ನ ಮೋನುಸ್ಮತಿಯಲ್ಲಿ ಎಲ್ಲವನ್ನೂ ಹೇಳಲಿಲ್ಲ. ಇನ್ನೂ ಹೇಳಲು ಸಾಕಷ್ಟು ಬಾಕಿ ಇಟ್ಟಿದ್ದಾರೆ ಎಂದೇ ನನಗೆ ಅನಿಸುತ್ತಿದೆ. ಅಂದರೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಪ್ರಥಮ ಅವಧಿಯಲ್ಲಿ ಹರೇಕಳ ಹಾಜಬ್ಬ ಅವರಿಗೆ “ಅಕ್ಕರೆಯ ಅವಧೂತ” ಎಂಬ ಬಿರುದನ್ನು ನೀಡಲಾಗಿತ್ತು. ಈ ಹೆಸರನ್ನು ಸೂಚಿಸಿದವರು ಕೂಡ ಬೊಳುವಾರು.

ಬೆಂಗಳೂರಿನಲ್ಲಿ ನಡೆದ ಬ್ಯಾರಿ ಕಾರ್ಯಕ್ರಮದಲ್ಲಿ ಹಾಜಬ್ಬರ ಸಾಹಸವನ್ನು ಕಂಡು ವೇದಿಕೆಯಲ್ಲೇ ಉದ್ಘಾರ ಎತ್ತಿದವರೂ ಇದೇ ಬೊಳುವಾರು. ಹಾಜಬ್ಬರ ಶಾಲೆಗೆ ತಾನು ಉದ್ಯೋಗ ಮಾಡುತ್ತಿದ್ದ ಸಿಂಡಿಕೇಟ್ ಬ್ಯಾಂಕ್‌ನಿಂದ ವಿಶೇಷ ನೆರವು ನೀಡುವ ಮುನ್ನ ಹರೇಕಳದ ನ್ಯೂಪಡ್ಪು ಶಾಲೆಯ ಸುತ್ತಮುತ್ತ ಓಡಾಡಿದ್ದೂ ಇದೇ ಬೊಳುವಾರು. ಹೀಗೆ ಬೊಳುವಾರು ಹೇಳಲು ಇಂತಹ ಅನೇಕ ಸಂಗತಿಗಳನ್ನು ಬಾಕಿಯಿಟ್ಟಿದ್ದಾರೆ.

ಮುಂದುವರಿದ ಭಾಗದಲ್ಲಿ ಅದೆಲ್ಲಾ ಸೇರಿಸಿಕೊಳ್ಳಬಹುದು ಎಂಬ ವಿಶ್ವಾಸ, ನಿರೀಕ್ಷೆ ನನ್ನದು. ಅಂದಹಾಗೆ ನಾನು ಬೊಳುವಾರು ಅವರ ಸಾಹಿತ್ಯದ ವಿದ್ಯಾರ್ಥಿ, ಅಭಿಮಾನಿ. ಹಾಗಂತ ಅವರ ಕೆಲವು ನಿಲುವು, ವಿಚಾರಗಳ ಬಗ್ಗೆ ನನಗೆ ಸಹಮತವಿಲ್ಲ. ಮುಸ್ಲಿಮ್ ಎಂಬ ಹೆಸರಿದ್ದ ಕಾರಣವೋ ಅವರ “ಸಾಹಿತ್ಯ ಕೃಷಿ”ಗೆ ತಕ್ಕ ಮನ್ನಣೆ ಸಿಕ್ಕಿಲ್ಲ ಎಂಬ ಕೊರಗು ಈ ಹಿಂದಿನಂತೆ ನನಗೆ ಈಗಲೂ ಕಾಡುತ್ತಿದೆ. ಇಂತಹ ಬೊಳುವಾರು ಒಬ್ಬ “ಹರಾಮಿ” ಅಣ್ಣನಂತೆ ನನಗೆ ಯಾವತ್ತೂ ಕಾಣಲಿಲ್ಲ.

ಸದಾ “ಪೆದಂಬು” ಕಾಕನಾಗಿ ಕಂಡಿದ್ದಾರೆ ಮತ್ತು ಕಾಣುತ್ತಾರೆ/ಕಾಣುತ್ತಿದ್ದಾರೆ. ಇನ್ನು ಮುಂದೆಯೂ ಅವರು ಹಾಗೇ ಕಾಣಬೇಕು. ಹಾಗೇ ಕಂಡಾಗ ಮಾತ್ರ ಮನಸ್ಸಿಗೆ ತಟ್ಟುವಂತಹ ಕೃತಿಗಳನ್ನು ನಮಗೆ ಅವರಿಂದ ನಿರೀಕ್ಷಿಸಲು ಸಾಧ್ಯ. ಬೊಳುವಾರರ “ಪೆದಂಬು” ಹೀಗೆ ಮುಂದುವರಿಯಲಿ ಎಂದು ನಾನು ಆಶಿಸುವೆ. ಜೊತೆಗೆ ಸಾಹಿತ್ಯದ ವಿದ್ಯಾರ್ಥಿಗಳು ಬೊಳುವಾರರ “ಮೋನು ಸ್ಮತಿ”ಯನ್ನು ಓದಿದರೆ ಚೆನ್ನ.

‍ಲೇಖಕರು Admin

20 March, 2022

1 Comment

  1. T S SHRAVANA KUMARI

    ಬೋಳುವಾರರ ಉತ್ತಮ ಪರಿಚಯ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading