ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೊಗಸೆಯಲ್ಲಿ ಕಡಲು: ಕೆ ವಿ ತಿರುಮಲೇಶ್ ಅಂಕಣ ಬರಹಗಳು

-ಡಾ. ಗೋವಿಂದ ಹೆಗಡೆ

ಡಾ. ಕೆ ವಿ ತಿರುಮಲೇಶ್ ಎಂದ ಕೂಡಲೇ ಮೊದಲಿಗೆ ನೆನಪಿಗೆ ಬರುವುದು ಅವರ ಕವನಗಳು. ನನಗಂತೂ ಅವರು ಕವಿಯಾಗಿಯೇ ಪರಿಚಿತರು. ೮೦ರ ದಶಕದಲ್ಲಿ ಓದಿದ ಅವರ ‘ಮುಖಾಮುಖಿ’ ಕವಿತೆಯ ಗುಂಗು ಈಗಲೂ ಇದೆ.’ಒಂದು ಕುಂಬಳಕಾಯಿ ಮೇಲೆ ನಿಂತು ನೋಡುವುದೆಂದರೆ’ ಎಂದು ಬರೆದು ಕವಿತೆಯನ್ನು ಹಾಗೂ ನೋಡುವುದನ್ನು ಕಲಿಸಿದವರು ಅವರು.

ತಿರುಮಲೇಶರ ಎಂಬತ್ತರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಶಿಷ್ಯ ಕವಿ, ಲೇಖಕ ಟಿ ಜಿ ಭಟ್ಟ ಹಾಸಣಗಿಯವರು ಉತ್ತರ ಕನ್ನಡ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ತಿರುಮಲೇಶರ ಸಾಹಿತ್ಯ ಕುರಿತು ಸಂವಾದ ಕಾರ್ಯಕ್ರಮ ಮಾಲಿಕೆಯನ್ನು ಆಯೋಜಿಸಿದರು. ಈ ಸಂದರ್ಭದಲ್ಲಿ ಎರಡು ಕಾರ್ಯಕ್ರಮಗಳಲ್ಲಿ ನಾನು ತಿರುಮಲೇಶರ ಅಂಕಣ ಬರಹಗಳ ಬಗ್ಗೆ ಮಾತನಾಡುವ ಸಂದರ್ಭ ಬಂತು. ಇದಕ್ಕಾಗಿ ಓದುತ್ತ ಓದುತ್ತ ತಿರುಮಲೇಶರು ಈಗ ನನಗೆ ಅಂಕಣಕಾರರಾಗಿ ಕೂಡ ಪರಿಚಿತರು ಎಂದು ಹೇಳಬಲ್ಲೆ.

ಪ್ರಧಾನವಾಗಿ ಕವಿಯಾದರೂ ತಿರುಮಲೇಶರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಸಣ್ಣ ಕಥೆಗಳು, ಕಾದಂಬರಿ, ನಾಟಕ, ಅನುವಾದ- ಹೀಗೆ ಹಲವು ಮುಖಗಳ ಸಾಹಿತ್ಯಸೃಷ್ಟಿ ಅವರಿಂದ ನಡೆದಿದೆ. ಹಾಗೆಯೇ ಕನ್ನಡ ಭಾಷೆ ಬಗೆಗಿನ ಅವರ ಚಿಂತನೆ, ಕಾಳಜಿಗಳನ್ನು ಕೂಡ ಅವರು ಕೃತಿರೂಪದಲ್ಲಿ ತಂದಿದ್ದು, ಸುಮಾರು ೪೫ ಗ್ರಂಥಗಳನ್ನು ನೀಡಿದ್ದಾರೆ. ತಮ್ಮ ಅಭಿವ್ಯಕ್ತಿಯ ಒಂದು ಮಾಧ್ಯಮವಾಗಿ, ಅಂಕಣವನ್ನು ಬಳಸಿಕೊಂಡು, ವ್ಯಾಪಕವಾದ ಓದುಗ ವರ್ಗವನ್ನು ತಲುಪುವಂತೆ ಬರೆದದ್ದು ೨೦೦೬ರಿಂದ.

“‘ವಿಜಯಕರ್ನಾಟಕ’ದಲ್ಲಿ ಸುಮಾರು ೨೦೦೬ನೇ ಇಸವಿಯ ಕೊನೆಯಿಂದ ನಾನು ಪ್ರತಿವಾರ ಬರೆಯುತ್ತಿರುವ ಲೇಖನಗಳಲ್ಲಿ ಕೆಲವನ್ನು ಇಲ್ಲಿ ಒಟ್ಟಾಗಿ ಕೊಡಲಾಗಿದೆ. ಈ ಲೇಖನಗಳನ್ನು random ಆಗಿ ಕಲೆ ಹಾಕಿದ್ದೇನೆ’ ಎಂದು ತಮ್ಮ ಅಂಕಣ ಬರಹಗಳ ಮೊದಲ ಸಂಕಲನ ‘ಆಳ-ನಿರಾಳ ೧’ ರ ಅರಿಕೆಯಲ್ಲಿ ತಿರುಮಲೇಶ್ ಹೇಳುತ್ತಾರೆ. ಆಳ-ನಿರಾಳದ ಒಂದು ಮತ್ತು ಎರಡನೇ ಸಂಪುಟಗಳು ೨೦೦೯ರಲ್ಲಿ ಬಂದವು. ಮೂರನೆಯ ಭಾಗ ೨೦೧೦ರಲ್ಲಿ ಮತ್ತು ಕೊನೆಯ ನಾಲ್ಕನೆಯ ಭಾಗ ೨೦೧೧ರಲ್ಲಿ ಬೆಳಕು ಕಂಡಿವೆ. ಆಳ-ನಿರಾಳದ ಒಟ್ಟು ನಾಲ್ಕು ಭಾಗಗಳಲ್ಲಿ ೨೫೧ ಲೇಖನಗಳಿವೆ. ಪುಟಗಳ ಸಂಖ್ಯೆ ಸುಮಾರು ೧೩೦೦. ಇನ್ನು ವಾಗರ್ಥ ವಿಲಾಸ ಕಸ್ತೂರಿ ಮಾಸಿಕದಲ್ಲಿ ಭಾಷೆ-ಸಾಹಿತ್ಯಗಳ ಬಗ್ಗೆ ಅವರು ಬರೆದ ಅಂಕಣಗಳ ಸಂಗ್ರಹ. ‘ವಾಚನ ಶಾಲೆ’ ಉದಯವಾಣಿಯಲ್ಲಿ ಬರೆದ ಅಂಕಣಗಳ ಸಂಕಲನ.

ಈ ಲೇಖನದಲ್ಲಿ ನಾನು ಹೆಚ್ಚಾಗಿ ಆಳ-ನಿರಾಳದ ಪ್ರಸ್ತಾಪವನ್ನು ಮಾಡಿದ್ದೇನೆ.

   ಈ ಹಂತದಲ್ಲಿ ನಾವು ತಿರುಮಲೇಶರು ಈ ಅಂಕಣಗಳನ್ನು ಬರೆಯುವಾಗ ಅವರಿದ್ದ ಸಂದರ್ಭವನ್ನು ಗಮನಿಸಬೇಕು. ಅವರೇ ಹೇಳುವಂತೆ ಆಗ ಅವರು ‘ಕನ್ನಡ ನಾಡಿನಿಂದ ದೂರ ಇರುವವರು’. ಅಂದರೆ ಆಗ ಅವರು ವಿದೇಶದಲ್ಲಿದ್ದರು. ಹಾಗಾಗಿ ಅವರು ಹೇಳುತ್ತಾರೆ-“ಕರ್ನಾಟಕದ ಆಗುಹೋಗುಗಳಿಗೆ ಒಬ್ಬ ಜರ್ನಲಿಸ್ಟ್‌ನ ತುರ್ತಿನಿಂದ ಸ್ಪಂದಿಸುವುದು ಕಷ್ಟ. ಆದರೆ ಇದು ಒಂದು ಮಿತಿ ಎಂದು ನಾನು ಅಂದುಕೊಂಡೇ ಇಲ್ಲ. ಬಹುಶಃ ಇದೊಂದು ಅನುಕೂಲವೇ. ಜರ್ನಲಿಸ್ಟಿಕ್ ರೀತಿಯಲ್ಲಿ ಬರೆಯುವವರು ಸಾವಿರ ಮಂದಿ ಇದ್ದಾರೆ. ನಾನು ನನ್ನದೇ ರೀತಿಯಲ್ಲಿ ಬರೆಯಬೇಕು. ಆದ್ದರಿಂದ ನನ್ನೀ ಇತಿ-ಮಿತಿಗಳೇ ನನ್ನ ಸನ್ನಿವೇಶದ ಪ್ರತ್ಯೇಕತೆಯೂ ಎಂದುಕೊಂಡು ಈ ಲೇಖನಗಳನ್ನು ಬರೆಯುತ್ತ ಬಂದಿದ್ದೇನೆ. ಎಂದರೆ ನಾನೊಬ್ಬ ಓದುಗ, ಅಧ್ಯಾಪಕ, ಚಿಂತಕ, ಲೇಖಕ, ಕವಿ, ಕನ್ನಡಿಗ, ಹೊರನಾಡಿನ ವ. ನಾನು ಓದಿದ ಚಿಂತಿಸಿದ ವಿಚಾರಗಳನ್ನು ಕನ್ನಡಿಗರ ಜೊತೆ ಹಂಚಿಕೊಳ್ಳುವುದಕ್ಕೆ ಇಷ್ಟಪಡುವವ. ಅದೇ ರೀತಿ ಕನ್ನಡನುಡಿಯನ್ನು ಹೊಸ ವೈಚಾರಿಕತೆಗೆ ಒಗ್ಗಿಸುವ ಕಾರ್ಯಕ್ರಮದಲ್ಲಿ ಆಸಕ್ತಿಯುಳ್ಳವ’.

ತಾನು ‘ಕನ್ನಡವನ್ನು ಯಾವೆಲ್ಲ ಆಯಾಮಗಳಿಂದ ಪರಿಭಾವಿಸಿದ್ದೇನೆ ಮತ್ತು ಹೊಸ ವೈಚಾರಿಕತೆಗೆ ಕನ್ನಡವನ್ನು ಒಗ್ಗಿಸುವ ತಮ್ಮ ಆಸಕ್ತಿ’ ಇವೆರಡೂ ಸೇರಿ ಅಂಕಣಬರಹಕ್ಕೆ ಕೈ ಹಾಕಿದ್ದು ಎಂದು ಅವರು ಇಲ್ಲಿ ಹೇಳಿದ್ದಾರೆ.

ಆಳ ನಿರಾಳದ ಮೊದಲ ಭಾಗದ ಅರಿಕೆಯಲ್ಲಿ ಅವರು ಹೇಳುತ್ತಾರೆ- ‘ನನಗೆ ಆಸಕ್ತಿಯಿರುವ ಹಲವಾರು ವಿಷಯಗಳ ಬಗ್ಗೆ ಬರೆಯುತ್ತಾ ಬಂದಿದ್ದೇನೆ…. ಒಂದು ಭಾಷೆಯಲ್ಲಿ ಎಲ್ಲವೂ ಸಾಧ್ಯವಾದರೇನೇ ಅದನ್ನು ಆಡುವ ಜನಪದ ಬೆಳೆಯುತ್ತದೆ ಎನ್ನುವ ಉದ್ದೇಶ ನನ್ನ ಮುಂದಿದೆ…. ಕನ್ನಡದ ಜೇನುಗೂಡಿಗೆ ತರುವ ಯತ್ನ ನಡೆಸಿದ್ದೇನೆ. ಇದೊಂದು ರೀತಿಯ ಮಧುಕರ ವೃತ್ತಿ ಯಲ್ಲದೆ ಇನ್ನೇನೂ ಅಲ್ಲ’. ಇಲ್ಲಿಯೇ ಅವರು ‘ನನಗೆ ಕನ್ನಡದಲ್ಲಿ ವೈಚಾರಿಕವಾಗಿ ಬರೆಯಲು ಇದೊಂದು ಪರೀಕ್ಷೆಯಾಗಿತ್ತು’ ಅಂತ ಹೇಳುತ್ತಾರೆ.

ಈ ಮಾತುಗಳ ಮೂಲಕ ಅವರ ಬರಹದ ಆಶಯವನ್ನು ನಾವು ಗುರುತಿಸಬಹುದು. ಅದನ್ನು ಅವರು ಹೇಗೆ ಸಾಧಿಸಿದರು,ಆ ನಡಿಗೆ ಎಂಥದಿತ್ತು ಅನ್ನುವುದನ್ನು ಅವರೇ ಬರೆಯುತ್ತಾರೆ, ಎರಡನೇ ಭಾಗದ ಅರಿಕೆಯಲ್ಲಿ.

“….. ಒಬ್ಬ ಲೇಖಕ ತನಗೆ ಆಸಕ್ತಿಯಿರುವ ವಿಷಯಗಳ ಬಗ್ಗೆ ಮಾತ್ರವೇ ಚೆನ್ನಾಗಿ ಬರೆಯಬಲ್ಲ. ಆದರೆ ಓದುಗರೆಲ್ಲರೂ ಅವನ್ನು ಇಷ್ಟಪಡ್ತಾರೆ ಅನ್ನುವಂತಿಲ್ಲ. ಕೆಲವರಿಗೆ ವಸ್ತು ಸ್ವಾರಸ್ಯಕರ ಅನಿಸುವುದಿಲ್ಲ; ಇನ್ನು ಕೆಲವರಿಗೆ ಶೈಲಿ ಕ್ಲಿಷ್ಟಕರವಾಗುತ್ತದೆ; ಇನ್ನೂ ಕೆಲವರು ಮನರಂಜನೆಯನ್ನಷ್ಟೇ ಅಪೇಕ್ಷಿಸುತ್ತಾರೆ; ಮತ್ತೆ ಕೆಲವರು ವರ್ತಮಾನದಲ್ಲಿ ಎಷ್ಟು ಮುಳುಗಿಹೋಗಿರುತ್ತಾರೆ ಎಂದರೆ ಅವರಿಗೆ ಸದ್ಯೋಜಾತ ಸಂಗತಿಗಳನ್ನು ಹೊರತುಪಡಿಸಿದರೆ ಇನ್ನಾವುದೂ ಬೇಕಾಗಿರುವುದಿಲ್ಲ. ಆದರೆ ನಾನು ಯಾವುದೇ ಓದುಗ ವರ್ಗವನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಲೇಖನಗಳನ್ನು ಬರೆದುದಲ್ಲ. ಬರೆಯುವಾಗ ಓದುಗರನ್ನು ಮುಂದಿರಿಸಿಕೊಳ್ಳುವುದಕ್ಕಿಂತಲೂ ನಾನು ವಿಷಯದಲ್ಲೇ ಲಕ್ಷ್ಯ ಕೇಂದ್ರೀಕರಿಸಲು ಬಯಸುವುದು”.

ಈ ಮಾತುಗಳಲ್ಲಿ ಅವರ ಅಂಕಣ ಬರಹಗಳ ಒಂದು ಸ್ವರೂಪ ನಮಗೆ ಸ್ಪಷ್ಟವಾಗುತ್ತದೆ. ಅವರು ಓದುಗನನ್ನು ಒಲಿಸಿಕೊಳ್ಳಲು ರಾಜಿಯಾಗುವವರಲ್ಲ; ಸರ್ಕಸ್ ಮಾಡುವವರಲ್ಲ. ಮನರಂಜನೆ ಅವರ ಗುರಿಯಲ್ಲ. ಬದಲಿಗೆ ತಾನು ಬರೆಯುವ ವಿಷಯವನ್ನು ಸಾಂದ್ರವಾಗಿ ಆದಷ್ಟು ಸಮಗ್ರವಾಗಿ ಆಸಕ್ತ ಓದುಗರಿಗೆ ತಲುಪಿಸುವುದು ಅವರ ಗುರಿ. ಹಾಗಾಗಿ ಅವರ ಮಾತುಗಳಲ್ಲಿ ಮುಕ್ತತೆ ಇದೆ, ಪ್ರಾಮಾಣಿಕತೆಯಿದೆ, ಖಚಿತತೆ- ಅಥೆಂಟಿಸಿಟಿ- ಇದೆ.

    ಇಲ್ಲಿನ ಒಂದು ಬರಹದಲ್ಲಿ ಅವರು ಎರಡು ಬಗೆಯ ಶೈಲಿಗಳನ್ನು, ಟೆಕ್ಸ್ಟ್‌ಗಳನ್ನು ಹೇಳುತ್ತಾರೆ- ಇನ್ನೊಬ್ಬ ವಿದ್ವಾಂಸರ ಮಾತನ್ನು ಆಧರಿಸಿ. ಒಂದು ವಾಚನೀಯ ಶೈಲಿ readerly text. ಇನ್ನೊಂದು ಲೇಖನೀಯ ಶೈಲಿ writerly text. ವಾಚನೀಯ ಶೈಲಿ ಲಘು ಓದುವಿಕೆಗೆ. ಅಲ್ಲಲ್ಲಿ ಕಣ್ಣುಹಾಯಿಸಿದರೆ ಮಾಹಿತಿಯನ್ನು ಬಿಟ್ಟು ಕೊಡುವಂತಹದ್ದು. ಪದಗಳನ್ನು ವಾಕ್ಯಗಳನ್ನು ಎಗರಿಸಿ ಓದಿದರೂ ನಿಮಗೆ ಸಾರಾಂಶ ಸಿಗುತ್ತದೆ ; ಒಟ್ಟಾರೆ ಆಶಯದ ಪರಿಚಯವಾಗುತ್ತದೆ. ಇನ್ನು ಲೇಖನೀಯ ಶೈಲಿಯಲ್ಲಿ ಪ್ರತಿ ಪದ, ವಾಕ್ಯ ಬಿಟ್ಟು ಮುಂದುವರಿಯುವಂತೆಯೇ ಇಲ್ಲ! ಅಂದರೆ ಓದುಗನೂ ಲೇಖಕನೇ! ಎನ್ನುತ್ತಾರೆ ತಿರುಮಲೇಶ್. ಅವರ ಈ ಬರಹಗಳು ಲೇಖನೀಯ ಶೈಲಿಗೆ ಸಮರ್ಥ ಉದಾಹರಣೆಯಾಗಿ ನಿಲ್ಲುತ್ತವೆ.

‘ಆಳ-ನಿರಾಳ’ದ ಒಟ್ಟು ೨೫೧ ಲೇಖನಗಳು, ‘ವಾಗರ್ಥ ವಿಲಾಸ’ದ ೨೩, ‘ವಾಚನ ಶಾಲೆ’ಯ ಎಪ್ಪತ್ತಕ್ಕೂ ಹೆಚ್ಚು ಲೇಖನಗಳಲ್ಲಿ ಎಲ್ಲವನ್ನೂ ನಾನು ಓದಿ ಮುಗಿಸಿಲ್ಲ. ಇವುಗಳೊಂದಿಗೆ ಮುಖಾಮುಖಿಯಾದಾಗ ನನಗೆ ತಿರುಮಲೇಶರು ಎಜ್ರಾ ಪೌಂಡ್‌ನ ಬಗ್ಗೆ ಬರೆಯುತ್ತ ಉಲ್ಲೇಖಿಸಿದ ಸಂಗತಿ ಅನುಭವಕ್ಕೆ ಬಂತು.

‘ಕವಿಗಳ ಕವಿ’ ಎಂದು ಟಿ ಎಸ್ ಎಲಿಯಟ್ ನಿಂದ ಕರೆಯಿಸಿಕೊಂಡ ಪೌಂಡ್ ೩೦ ವರ್ಷಗಳ ಕಾಲ ತನ್ನ ಕ್ಯಾಂಟೊಸ್ ( cantos- ಖಂಡಗಳು) ಕೃತಿಯನ್ನು ಬರೆಯುತ್ತ ತಿದ್ದುತ್ತ ಹೋದ. ಕೊನೆಯಲ್ಲಿ ಅವನು ಹೇಳುತ್ತಾನೆ – ‘ಇವೆಲ್ಲವನ್ನೂ ನಾನು ಹೊಂದಿಸಲಾರೆ!’ ಅಂತ.

ಇಲ್ಲಿ ನಾನು ಬರೆದವನಲ್ಲ. ಆದರೆ ಈ ಬಗ್ಗೆ ಮಾತನಾಡಬೇಕು/ ಬರೆಯಬೇಕು ಎಂದಾಗ ಯಾವುದನ್ನು ,ಎಷ್ಟನ್ನು ಹೇಳಬೇಕು; ಹೇಗೆ ಇಡಬೇಕು ಎಂಬ ಗೊಂದಲ. ಇಲ್ಲಿನ ವಿಷಯ, ವ್ಯಾಪ್ತಿ, ವೈವಿಧ್ಯ ಅಷ್ಟು ದೊಡ್ಡದು.

ತಿರುಮಲೇಶರ ಅಂಕಣ ಬರಹಗಳ ಬಗ್ಗೆ ಒಂದು ಕಾರ್ಯಕ್ರಮದಲ್ಲಿ ಮಾತನಾಡಿ, ಎರಡನೆಯದಕ್ಕೆ ತಯಾರಿ ನಡೆಸುತ್ತಿರುವಾಗ, ಅವರೊಂದಿಗೆ ಮಾತನಾಡುವ ಒಂದು ಅಪೂರ್ವ ಅವಕಾಶವನ್ನು ಕಲ್ಪಿಸಿಕೊಂಡೆ. ತಮ್ಮ ಅಂಕಣ ಬರಹಗಳ ಬಗ್ಗೆ ಒಟ್ಟಾರೆಯಾಗಿ ಅವರ ಅನಿಸಿಕೆ, ಅಭಿಪ್ರಾಯ ಏನು ಎಂದು ಅವರನ್ನು ಕೇಳುವುದಕ್ಕಾಗಿ ನಾನು ಕರೆ ಮಾಡಿದ್ದು. ಮೊದಲಲ್ಲೇ ಕೇಳಿದೆ-“ಇಷ್ಟೊಂದು ವಿಷಯಗಳ ಬಗ್ಗೆ, ಕ್ಷೇತ್ರಗಳ ಬಗ್ಗೆ ಬರೆದಿರಲ್ಲ, ಈ ಅಂಕಣಗಳನ್ನು ನೀವು ಹೇಗೆ ಕಾಣುತ್ತೀರಿ, ಹೇಗೆ ವರ್ಗೀಕರಿಸುತ್ತೀರಿ, ಈ ಬಗ್ಗೆ ಏನು ಹೇಳ್ತೀರಿ?” ಅಂತ. ಒಂದೇ ಮಾತಿನಲ್ಲಿ ಅವರು ಅವನ್ನೆಲ್ಲ ಆಚೆಗಿಟ್ಟುಬಿಟ್ಟರು. ಅವರು ಹೇಳಿದ್ದು “ಯಾಕೆ ವರ್ಗೀಕರಿಸಬೇಕು? ಅಂಕಣ ಬರವಣಿಗೆ ಎಲ್ಲೂ ಆರಂಭವಾಗಿ ಎಲ್ಲೂ ಮುಗಿಸಬಹುದಾದದ್ದು. ಯಾವುದೇ ವಾಕ್ಯದಲ್ಲೂ ನಿಲುಗಡೆ ಅದಕ್ಕೆ”. ತಮ್ಮ ಬರಹಗಳ ಬಗ್ಗೆ ಎಂಥ ನಿರ್ಮಮ ದೃಷ್ಟಿ ಅವರದು ಅಂತ ನನಗೆ ತಿಳಿಯಿತು. ತಮ್ಮ ಬರಹಗಳ ವಸ್ತು, ವ್ಯಕ್ತಿ, ವಿಷಯಗಳ ಬಗ್ಗೆ ಅವರು ಮಾತನಾಡುವಂತೆ ಮಾಡಲು ನಾನು ಬೇರೆಯದೇ, ಪರೋಕ್ಷ ಉಪಾಯವನ್ನು ಅನುಸರಿಸಬೇಕಾಯಿತು.

ಈ ಮೊದಲೇ ಹೇಳಿದಂತೆ ಈ ಬರಹಗಳ ವ್ಯಾಪ್ತಿ ತುಂಬಾ ದೊಡ್ಡದು. ಸಾಹಿತ್ಯದ ಗಂಭೀರ ಓದುಗರಾಗಿ, ವಿದ್ಯಾರ್ಥಿಯಾಗಿ ಕಾವ್ಯ,ಸಾಹಿತ್ಯ, ಅವರ ಮೊದಲ ಆದ್ಯತೆ ಎನ್ನಬಹುದು. ನೆನಪಿಡಬೇಕಾದದ್ದು, ಇದು ಈ ಚರ್ಚೆಗಾಗಿ ನಾನು ಮಾಡಿಕೊಂಡ ವರ್ಗೀಕರಣ. ಉದಾಹರಣೆಗೆ ಆಳ-ನಿರಾಳ ೧ರ ಮೊದಲ ಲೇಖನವೇ ಭಾರತ ಸಿಂಧುರಶ್ಮಿಯ ‘ಪರಮಸಿದ್ಧಿ’. ಈ ಮಹಾಕಾವ್ಯ ಓದುಗನ ಮುಂದಿಡುವ ಹಲವು ಸವಾಲುಗಳನ್ನು ಚರ್ಚಿಸುತ್ತ, ಈ ಕಾವ್ಯವನ್ನು ‘ಓದುಗನಿಗೆ ತಲುಪಿಸುವ ಕೆಲಸ ಆಗಬೇಕಾಗಿದೆ’ ಎನ್ನುತ್ತಾರೆ. ಇದು ಮೊದಲ ಗುಂಪು.

ಎರಡನೆಯದಾಗಿ ಒಬ್ಬ ಅಧ್ಯಾಪಕರಾಗಿ ಅವರು, ಶಿಕ್ಷಣ ಪದ್ಧತಿಯ ಬಗ್ಗೆ, ಪ್ರಾಥಮಿಕ ಶಿಕ್ಷಣದಿಂದ ವಿಶ್ವವಿದ್ಯಾಲಯಗಳವರೆಗೆ ,ಬೋಧನಾ ಕ್ರಮಗಳ ಬಗೆಗೆ, ಚರ್ಚಿಸಿದ್ದಾರೆ. ಆಳ-ನಿರಾಳ ಒಂದರ, ಎರಡನೆಯ ಲೇಖನ ‘ಭಾಷಣದಿಂದ ಸಂಭಾಷಣೆಗೆ’. ಇದು ಲೆಕ್ಚರ್ ಕೊಡುವ ವಿಧಾನದಿಂದ ಇಂಟರ್‌ಆಕ್ಷನ್ ಆಂದರೆ ಸಂವಾದಕ್ಕೆ ‘ಪಾಠ’ ‘ಕಲಿಸುವಿಕೆ’ ಬದಲಾಗಬೇಕು ಎನ್ನುತ್ತದೆ. ‘ಅಧ್ಯಾಪಕರಿಗೆ ಕಿವಿಮಾತು’ ಎಂಬ ಒಂದು ಬರಹದಲ್ಲಿ ಅವರು ೧,೨,೩ ಹೀಗೆ ಪಟ್ಟಿಮಾಡಿ, ಒಟ್ಟು ೩೨ ಕಿವಿಮಾತುಗಳನ್ನು ಹೇಳಿದ್ದಾರೆ. ಇಡೀ ಲೇಖನ ಅಷ್ಟೇ.ವಿದೇಶಗಳಲ್ಲಿ ತಾವು ಅಧ್ಯಾಪನ ಮಾಡಿದಾಗ ಜಾರಿಗೆ ತಂದ ಕೆಲವು ಬದಲಾವಣೆ, ನಡೆಸಿದ ಪ್ರಯೋಗ, ಅವನ್ನು ವಿದ್ಯಾರ್ಥಿಗಳು ಸ್ವೀಕರಿಸಿದ ರೀತಿಯನ್ನೂ ಅವರು ಬರೆಯುತ್ತಾರೆ.

ಮೂರನೆಯದು ಭಾಷೆ, ಭಾಷಾಶಾಸ್ತ್ರಕ್ಕೆ ಸಂಬಂಧಿಸಿದ್ದು. ಅವರೊಬ್ಬ ಭಾಷಾಶಾಸ್ತ್ರಜ್ಞ. ಪಿಎಚ್ ಡಿ ಅಧ್ಯಯನ ಮಾಡಿದ್ದು ಲಿಂಗ್ವಿಸ್ಟಿಕ್ಸ್‌ನಲ್ಲಿ. ಮರಿಯಪ್ಪ ಭಟ್ಟರು, ಎಚ್ ಎಸ್ ಬಿಳಿಗಿರಿ ಅವರ ಬಗ್ಗೆ ,ನಿಘಂಟುವಿನ ಬಗ್ಗೆ, ಶಿಕ್ಷಣದಲ್ಲಿ ಭಾಷೆಯ ಬಗ್ಗೆ ಕನ್ನಡ ಸಂಸ್ಕೃತಗಳ ಕೊಡುಕೊಳ್ಳುವಿಕೆಯ ಬಗ್ಗೆ (ಒಂದು ಲೇಖನ- ‘ತುಂಬಿಯೂ ಇರಲಿ; ಭೃಂಗವೂ ಇರಲಿ’. ಹೆಸರು ಎಷ್ಟು ಧ್ವನಿಪೂರ್ಣ!) ಬರೆಯುವಾಗ ಭಾಷಿಕ ಅಧ್ಯಯನದ ಒಂದು ಮಾದರಿ ಸಿಗುತ್ತದೆ. ‘ಭಾಷೆಯೂ ಲೋಕ ಸೌಂದರ್ಯವೂ’, ‘ಭಾಷೆ ಮತ್ತು ಸಂದರ್ಭ ಮುಕ್ತತೆ’, ‘ಭಾಷೆಗಳ ನಂದನವನ’, ‘ಭಾಷಾವಲೋಕನ ೧,೨,೩’ ಇವು ಈ ವರ್ಗದ ಲೇಖನಗಳಲ್ಲಿ ಕೆಲವು.

ನಾಲ್ಕನೆಯದು ತಮಗೆ ಖುಷಿ ಕಂಡ ವಿಚಾರಗಳು. ಇಲ್ಲಿ ಸಮಕಾಲೀನ ಸಂಗತಿಗಳ ಬಗೆಗಿನ ಬರಹಗಳೂ ಇವೆ. ‘ಜಾತ್ರೆ ಮರುಳು, ಪಕ್ಷಿ ವೀಕ್ಷಣೆ, ಬೂಸ್ಟುಗಳ ಬೆರಗಿನ ಲೋಕ, ಅಜ್ಞಾನ-ವಿಜ್ಞಾನ-ತತ್ವಜ್ಞಾನ (೪ ಭಾಗಗಳು) ಗೆಲಿಲಿಯೋ-ಧರ್ಮ ಮತ್ತು ವಿಜ್ಞಾನ, ವಿಜ್ಞಾನ – ವಿಧಿ ಮತ್ತು ವಿಧಾನ’ ಇತ್ಯಾದಿ. ಕನ್ನಡದ ಬಗೆಗೆ ಕೆಲವು ಚಿಂತನೆಗಳಿವೆ. ‘ಪ್ರಬುದ್ಧ ಕನ್ನಡ-ಸಮೃದ್ಧ ಕನ್ನಡ’, ‘ಕನ್ನಡದಲ್ಲಿ ವಿಮರ್ಶಕರ ಸಂಖ್ಯೆ ಕಡಿಮೆಯಾಗುತ್ತಿದೆಯೇ?’ ‘ಕನ್ನಡದ ಚಿಂತನೆ-ಪತ್ರಿಕೆಗಳ ಜವಾಬ್ದಾರಿ’ ಹೀಗೆ.

ಸಾಹಿತ್ಯ-ಸಾಹಿತಿಗಳ ಬಗ್ಗೆ ಬರೆದ ಅಂಕಣಗಳಲ್ಲಿ ಕೆಲವು ಮಾದರಿಗಳನ್ನು ಗುರುತಿಸಬಹುದು. ತಮ್ಮ ಜೊತೆಯ ಕನ್ನಡ ಸಾಹಿತಿಗಳ ಬಗೆಗೆ ಇಲ್ಲಿ ‘ಇನ್ನೊಮ್ಮೆ ಅಡಿಗರು’, ‘ನವ್ಯಕಾವ್ಯದ ಎರಡನೇ ಮೇರೆ ಎ ಕೆ ರಾಮಾನುಜನ್’, ‘ಶರ್ಮರನ್ನು ನೆನೆದು’, ‘ಗೆಳೆಯ ವ್ಯಾಸ’, ‘ಅನಂತಮೂರ್ತಿ ಬಗ್ಗೆ’ ‘ಚಂಪಾರ ಕಾವ್ಯಲೋಕ’ ಮೊದಲಾದ ಲೇಖನಗಳನ್ನು ಹೆಸರಿಸಬಹುದು. ಯಾವುದನ್ನೂ ಯಾರನ್ನೂ ವೈಭವೀಕರಿಸದ, ಆತ್ಮೀಯವಾಗಿ ಬರೆಯುತ್ತಲೇ ಆಯಾ ಲೇಖಕರ ಬಗ್ಗೆ ಸೂಕ್ಷ್ಮ ಒಳನೋಟಗಳನ್ನು ನೀಡುವ ಬರಹಗಳು ಇವು.

ಪಾಶ್ಚಾತ್ಯ ಲೇಖಕರ ಬಗ್ಗೆ ‘ಕವಿಗಳ ಕವಿ ಎಜ್ರಾ ಪೌಂಡ್’, ‘ಓದಲೆಂದೇ ಹುಟ್ಟಿದ ಹೆರಾಲ್ಡ್ ಬ್ಲೂಮ್’, ‘ಕೀಟ್ಸ್ ಎಂಬ ಕವಿ’ ಇತ್ಯಾದಿ ಲೇಖನಗಳು. ಇಲ್ಲಿ ಕಾಫ್ಕಾ,ಮುಯಿರ್, ಹೈಡೆಗ್ಗರ್, ಸ್ಯಸೂರ್, ಡೆರಿಡಾ, ವ್ಯಾಲೇಸ್ ಎಲ್ಲ ಬರುತ್ತಾರೆ.

ಈ ಬರಹಗಳ ಒಟ್ಟು ಗುಣ ಧೋರಣೆ ಏನು ಅಂತ ಕೇಳಿದರೆ ನನಗನಿಸುವುದು- ಪರಿಚಯ ಮತ್ತು ಪರಿಶೀಲನೆ. ಅವರು ಒಂದು ಕಡೆ ‘ಶೋಧನೆ’ ಎಂಬ ಪದ ಬಳಸಿದ್ದಾರೆ. ಇಲ್ಲಿ ಅವರು ಸಾಮಾನ್ಯವಾಗಿ ಅನುಸರಿಸುವ ಕ್ರಮ ಎಂದರೆ, ನಮ್ಮ ಓದುಗರಿಗೆ ಅಷ್ಟಾಗಿ ತಿಳಿದಿರದ ವಸ್ತು, ವ್ಯಕ್ತಿಗಳ ಬಗ್ಗೆ ಬರೆಯುವಾಗ ಅದು ಹೆಚ್ಚು ಪರಿಚಯ; ಈಗಾಗಲೇ ಗೊತ್ತಿರುವ ಸಂಗತಿಗಳ ಬಗ್ಗೆ ಹೇಳುವಾಗ, ಪ್ರಧಾನವಾಗಿ ಪರಿಶೀಲನೆ.

ಇನ್ನು ಕನ್ನಡದಲ್ಲಿ ಇಷ್ಟೊಂದು ಅಂಕಣಕಾರರು ಇದ್ದಾರೆ; ಇವರ ನಡುವೆ ತಿರುಮಲೇಶರ ಅನನ್ಯತೆ ಏನು? ಈ ಬಗ್ಗೆ ಚರ್ಚಿಸುತ್ತಿದ್ದಾಗ ಲೇಖಕಿ ಶ್ರೀಮತಿ ಮಾಲಿನಿ ಗುರುಪ್ರಸನ್ನ ಒಂದು ಮಹತ್ವದ ಮಾತನ್ನು ಹೇಳಿದರು. ಅವರು ಹೇಳಿದ್ದು, ತಿರುಮಲೇಶರ ವಿಶೇಷತೆ ಇರುವುದು ಅವರ ನಿರ್ಮಮತೆಯಲ್ಲಿ. ಅವರು ಇಷ್ಟೊಂದು ಕಾವ್ಯ, ಕಥೆ, ನಾಟಕ ಬರೆದಿದ್ದಾರೆ; ಅನುವಾದ ಮಾಡಿದ್ದಾರೆ, ಆದರೆ ಎಲ್ಲೂ ನಾನು ಅದನ್ನು ಬರೆದೆ, ಇದನ್ನು ಬರೆದೆ ಅಂತ ಹೇಳಲು ಹೋಗುವುದಿಲ್ಲ-ಅಂತ. ನಾನು ಓದಿದ ಸುಮಾರು ನೂರೈವತ್ತಕ್ಕೂ ಹೆಚ್ಚು ಲೇಖನಗಳಲ್ಲಿ ಅವರು ಕಾಣಿಸಿಕೊಂಡಿದ್ದು ಒಂದೆರಡು ಸಾರಿ ಇರಬಹುದು. ಯಾವುದೋ ಮಾತಿಗೆ ಉದಾಹರಣೆಯಾಗಿ ಕೂಡ ಅವರು ತಮ್ಮ ಬರಹಗಳನ್ನು ಪ್ರಸ್ತಾಪಿಸಿದ್ದು ಕಾಣುವುದಿಲ್ಲ. ಅವರನ್ನು ಮಾತನಾಡಿಸಿದಾಗಲೂ ತಮ್ಮ ಅಂಕಣಗಳ ಬಗ್ಗೆ ಮಾತನ್ನೇ ನಿರಾಕರಿಸಿದ್ದನ್ನು ಈ ಮೊದಲು ಹೇಳಿದ್ದೇನೆ. ಇದು ಒಂದು ವಿಶೇಷ ಗುಣ. ಹೀಗೆ ‘ನಾನು’ವನ್ನು ಹೊರಗಿಟ್ಟದ್ದರಿಂದ ಈ ಬರಹಗಳಿಗೆ ಒಂದು ವಸ್ತುನಿಷ್ಠ ದೃಷ್ಟಿಕೋನವನ್ನು ನೀಡಲು ಅವರಿಗೆ ಸಾಧ್ಯವಾಗಿದೆ.

ವಾಚನೀಯ, ಲೇಖನಿಯ ಶೈಲಿಗಳ ಬಗ್ಗೆ ಹಿಂದೆ ಹೇಳಿದ್ದೇನೆ. ಇನ್ನೊಂದು ಕಡೆ ಅವರು ಓಡಿಸಿಕೊಂಡು ಹೋಗುವ ಬರಹಗಳ ಬಗ್ಗೆ ಹೇಳುತ್ತಾರೆ. ಕೆಲವು ನಡೆಸಿಕೊಂಡು ಹೋಗುವ ಬರಹಗಳಂತೆ! ಅವರದು ಓದಿಸಿಕೊಳ್ಳುವ ಬರಹ, ರೀತಿ.

ಅವರ ಕಾವ್ಯ ಸಾಹಿತ್ಯಗಳ ಬಗೆಗಿನ ಬರಹಗಳನ್ನು ಒಟ್ಟಾಗಿ ಓದಿದರೆ ಅದು ಒಂದು ರೀತಿಯ ‘ಕಾವ್ಯ ಮೀಮಾಂಸೆ’ ಆಗುತ್ತದೆ ಎಂದು ನನ್ನ ಅನಿಸಿಕೆ. ‘ಸಾಹಿತ್ಯದ ಸ್ವಯಂ ಪ್ರಜ್ಞೆ’, ‘ಆಧುನಿಕೋತ್ತರ ಅಸ್ಥಿರ ಲೋಕ’, ‘ಕವಿತೆ: ಅರ್ಥ ಮತ್ತು ಅಭಿನಯ’, ‘ಲಾಫೋರ್ಗ್: ಮುಕ್ತಚಂದ ಮತ್ತು ಮುಕ್ತ ಸಂಬಂಧ’, ‘ಸಾಹಿತ್ಯ ಎಷ್ಟು ವಾಸ್ತವ, ಎಷ್ಟು ಕಾಲ್ಪನಿಕ’,’ ನಮ್ಮ ಕಾಲದ ಕವಿತೆ ೧,೨’, ‘ಕತೆ: ವಾಸ್ತವತೆ ಮತ್ತು ಅನನ್ಯತೆಗಳ ನಡುವೆ’, ‘ಕವಿತೆ ಪ್ರಮೇಯ ಮತ್ತು ಪರಿಣಾಮ’, ‘ಪ್ರತಿಯೊಂದು ಕವಿತೆಯು ಕವಿತೆಯ ಬಗ್ಗೆಯೇ’ಮೊದಲಾದ ಇಲ್ಲಿನ ಬಹುಪಾಲು ಬರಹಗಳು ಈ ವರ್ಗದವು. ಮಾತ್ರವಲ್ಲ, ವ್ಯಕ್ತಿ ಚಿತ್ರಗಳಲ್ಲೂ ಅವರು ಸಾಹಿತ್ಯದ ಬಗ್ಗೆ ತಮ್ಮ ಒಳನೋಟಗಳನ್ನು ನೀಡುತ್ತಲೇ ಹೋಗುತ್ತಾರೆ.

ತಮ್ಮ ಜೊತೆಯ ಸಾಹಿತಿಗಳ ಬಗೆಗಿನ ಬರೆಹದಲ್ಲಿ ತುಂಬ ಆತ್ಮೀಯವಾದ ಅಷ್ಟೇ ನಿಖರವಾದ ಮಾತುಗಳಿವೆ. ಶರ್ಮ, ಎಚ್ಚೆಸ್ವಿ,ಗೆಳೆಯ ಎಂ ವ್ಯಾಸರ ಬಗೆಗಿನ ಬರಹಗಳು ಇದಕ್ಕೆ ಉದಾಹರಣೆಗಳು. ವಿಶಿಷ್ಟ ಕತೆಗಾರ ಎಂ ವ್ಯಾಸರ ಬಗ್ಗೆ ಅವರ ಕೆಲವು ನೆನಪುಗಳನ್ನು ನಾನು ನಮ್ಮ ಮಾತಿನ ನಡುವೆ ಪ್ರಸ್ತಾಪಿಸಿದಾಗ ಅವರು ಹೇಳಿದರು- ‘ವ್ಯಾಸರ ಕಾಲು ನೆಲಕ್ಕೆ ತಾಗುತ್ತಲೇ ಇರಲಿಲ್ಲ’ ಅಂತ. ಜನವಿದೂರ ಬರಹಗಾರ,ಗುಂಪಿನಲ್ಲಿ ಸೇರದ, ಮದುವೆ ಮತ್ತೊಂದು ಅಂತ ಜನರೊಂದಿಗೆ ಬೆರೆಯದ ವಿಶಿಷ್ಟ ಜೀವಿ ಅವರು- ಅಂತ ನೆನಪಿಸಿಕೊಂಡರು.

ಅವರು ಸಾವಿರಾರು ಗಂಟೆಗಳ ಕಾಲ ಓದಿ ಸುಮಾರು ಎರಡು ಸಾವಿರ ಪುಟಗಳಲ್ಲಿ ಕಟ್ಟಿಕೊಟ್ಟಿದ್ದನ್ನು ಒಂದು ಲೇಖನದ ಮಿತಿಯಲ್ಲಿ ಹೇಳಲು ಪ್ರಯತ್ನಿಸುವುದು ಕರಿಗೆ ಕನ್ನಡಿಯನ್ನು ಹಿಡಿದಂತೆ. ಅವರ ಸಮಕಾಲೀನರೂ ಸ್ನೇಹಿತರೂ ಆದ ಹಿರಿಯ ಲೇಖಕ ಸುಬ್ರಾಯ ಚೊಕ್ಕಾಡಿ ಅವರ ಈ ಮಾತುಗಳನ್ನು ಇಲ್ಲಿ ಗಮನಿಸಬಹುದು-” ಅವರ ಓದು ಬಹು ವಿಸ್ತಾರವಾದುದು. ಮುಖ್ಯವಾಗಿ ಅವರ ಲೇಖನಗಳು ವಿಪುಲ ಮಾಹಿತಿಯುಕ್ತವಾದುವು.ಅನೇಕ ಬರಹಗಳು ತಾನು ಓದಿದ ಉತ್ತಮ ಕೃತಿಗಳನ್ನು ಕನ್ನಡ ಓದುಗರಿಗೆ ಪರಿಚಯಿಸಬೇಕೆಂಬ ಸದುದ್ದೇಶದಿಂದ ಸೃಷ್ಟಿಯಾದವುಗಳು.ಅಂದರೆ ಇವು ಓದುಗ ಸಂಸ್ಕೃತಿಯನ್ನು ಬೆಳೆಸುವ ಉದ್ದೇಶದವು. ಹಾಗಾಗಿಯೇ ವಿಮರ್ಶೆಯ ತಾಂತ್ರಿಕ ಪದಗಳಿಗೆ, ಜಾರ್ಗನ್ನುಗಳಿಗೆ ಹೊರತಾದ ಸರಳ ನಿರೂಪಣೆಯನ್ನು ಒಳಗೊಂಡಿವೆ, ಎಂದು ಹೇಳಬಹುದು”.

‘ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕನ್ನಡ ಲೇಖಕರು’ ಮಾಲಿಕೆಗಾಗಿ ‘ಕೆ ವಿ ತಿರುಮಲೇಶ್’ ಪುಸ್ತಕವನ್ನು ಬರೆದ ಹಿರಿಯ ವಿಮರ್ಶಕ ಎಸ್. ಆರ್. ವಿಜಯಶಂಕರ ಹೇಳುತ್ತಾರೆ-

“ಒಂದು ಭಾಷೆಯಲ್ಲಿ ಎಲ್ಲವೂ (ಅಂದರೆ, ಜ್ಞಾನ, ಮಾಹಿತಿ, ಕೌಶಲ್ಯ, ವಿಚಾರಗಳು ಇತ್ಯಾದಿ) ಸಾಧ್ಯವಾದಾಗ ಮಾತ್ರ ಅದನ್ನು ಮಾತನಾಡುವ ಜನಪದ ಬೆಳೆಯುತ್ತದೆ ಎಂಬ ನಂಬುಗೆ ತಿರುಮಲೇಶರದು. ಭಾಷೆಯನ್ನು ಕಟ್ಟಲು ವಿಜ್ಞಾನ ಹಾಗೂ ಜಗತ್ತಿನ ಎಲ್ಲಾ ಜ್ಞಾನದ ಸಾಧ್ಯತೆಗಳನ್ನು ಕನ್ನಡದಲ್ಲಿ ಉಂಟುಮಾಡಬೇಕೆಂದು ಬಯಸಿ ಕಾರ್ಯಪ್ರವೃತ್ತರಾದ ಶಿವರಾಮ ಕಾರಂತ, ಡಿ. ವಿ. ಜಿ. ಮೊದಲಾದವರ ಪಂಥಕ್ಕೆ ಸೇರಿದ ಆಧುನಿಕರು. ವಿಜ್ಞಾನ, ಕಲೆ ತತ್ವಶಾಸ್ತ್ರ, ರಾಜಕೀಯ, ಪ್ರಜಾಪ್ರಭುತ್ವದ ಮೂಲಸತ್ವ, ಚರಿತ್ರೆ, ರಾಮಾಯಣ,ಮಹಾಭಾರತ, ಇಂಗ್ಲಿಷ್ ಸಾಹಿತ್ಯ, ಕನ್ನಡ ಸಾಹಿತ್ಯ, ವೈಚಾರಿಕ ಬರೆಹಗಳು, ವಿದ್ಯಾಭ್ಯಾಸ ಕುರಿತ ಚಿಂತನೆಗಳು- ಹೀಗೆ ಹಲವು ಹತ್ತು ವಿಚಾರಗಳನ್ನು ಕನ್ನಡ ಸಂಸ್ಕೃತಿ, ಸಾಹಿತ್ಯ ಹಾಗೂ ಜ್ಞಾನ ವಿಸ್ತರಣದ ಪರಿಪ್ರೇಕ್ಷ್ಯದಲ್ಲಿಟ್ಟು ತಿರುಮಲೇಶರು ‘ಆಳ-ನಿರಾಳ’ದ ಅಂಕಣಗಳನ್ನು ಬರೆದರು. ಇವುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಯಾವ ಯೋಚನೆಯೂ ಇಲ್ಲದೆ ಬರೆಹಕ್ಕೆ ತೊಡಗಿದ್ದರಿಂದಲೇ ಇದಕ್ಕೊಂದು ಸ್ವಸಂಪೂರ್ಣವಾದ ಪತ್ರಿಕಾ ಅಂಕಣದ ಸ್ವರೂಪ ಲಭ್ಯವಾಯಿತು. ಮುಂದೆ ಓದುಗರ ಹಾಗೂ ಪ್ರಕಾಶಕರಾದ ‘ಅಭಿನವ’ ರವಿಕುಮಾರ್ ಅವರ ಒತ್ತಡದಿಂದ ಅವುಗಳೆಲ್ಲಾ ನಾಲ್ಕು ಪುಸ್ತಕಗಳಾಗಿ ಹೊರಬಂತು. ಅದು ಕನ್ನಡಿಗರಾದ ಲಾಭ”.

ತಿರುಮಲೇಶ್ ತಮ್ಮ ವ್ಯಾಪಕವಾದ ಸಾಹಿತ್ಯ ಮತ್ತು ಇನ್ನಿತರ ಓದಿನಿಂದ, ತಮ್ಮ ಜ್ಞಾನದ ಕಡಲಿನಿಂದ ಬೊಗಸೆ ಬೊಗಸೆಯಾಗಿ ಆಣಿಮುತ್ತುಗಳನ್ನು ಎತ್ತಿ ಕೊಟ್ಟಿದ್ದಾರೆ. ಅವರು ಬೇರೇನನ್ನೂ ಬರೆಯದೆ ಈ ಅಂಕಣ ಬರೆಹಗಳನ್ನಷ್ಟೇ ಬರೆದಿದ್ದರೂ ನಮ್ಮ ಸಾಹಿತ್ಯದಲ್ಲಿ ಮಹತ್ವದ ಸ್ಥಾನವನ್ನು ಪಡೆಯುತ್ತಿದ್ದರು. ಈ ಅಂಕಣ ವ್ಯವಸಾಯವನ್ನು ಕೈಗೊಂಡಿದ್ದಕ್ಕಾಗಿ ನಮ್ಮ ಓದುಗರು ಅವರಿಗೆ ಋಣಿಯಾಗಿರಬೇಕು.

( ನಿನ್ನೆ ಡಾ. ಕೆ ವಿ ತಿರುಮಲೇಶ್ ನಮ್ಮನ್ನು ಅಗಲಿದ ದಿನ)

‍ಲೇಖಕರು avadhi

31 January, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading