ರಾಜೇಶ್ವರಿ ಹುಲ್ಲೇನಹಳ್ಳಿ
ಶಾಲಾ ದಿನಗಳ ಬೇಸಿಗೆ ರಜೆಗೂ ಮಕ್ಕಳ ಆಟಕ್ಕೂ, ಹುಡುಗಾಟಕ್ಕೂ ಅದೆಂಥ ನಂಟು!? ಬೇಸಿಗೆ ರಜೆ ಬಂದರೆ ಖುಷಿಯೋ ಖುಷಿ ಯಾಕಂದ್ರೆ ರಜೆ ಕಳೆಯಲು ಹಳ್ಳಿಗೆ ಹೋಗಬಹುದಲ್ಲಾ ಎಂದು!. ರಜೆ ಬಂದೊಡನೆ ಹಳ್ಳಿಗಳಲ್ಲಿರುವ ಅಜ್ಜಿ ಮನೆ ದೊಡ್ಡಮ್ಮ ಚಿಕ್ಕಮ್ಮ ಸೋದರತ್ತೆಯರ ಮನೆಗಳ ಮದುವೆ ಮುಂಜಿ ಜಾತ್ರೆ ಪರಿಷೆಗಳಿಗೆ ಹೋರಡುವುದೇ ಸರಿ!. ಸಾಮಾನ್ಯವಾಗಿ ಈ ಜಾತ್ರೆ ಪರಿಷೆ ಮದುವೆಗಳೆಲ್ಲಾ ಯುಗಾದಿ ಕಳೆದು ಬೇಸಿಗೆ ಬಂದೊಡನೆಯೇ ತಾನೇ?. ಊರಿಗೆ ಹೋಯಿತೆಂದರೆ ಪೇಟೆಯಿಂದ ಬಂದ ಮಕ್ಕಳನ್ನು ಹಳ್ಳಿಗಳಲ್ಲಿರುವ ನೆಂಟರ ಮನೆಯಲ್ಲೆಲ್ಲಾ ತಿಂಡಿ ಊಟಕ್ಕೆ ಕರೆಯೋರು.
ನಮಗೋ ಶ್ಯಾವಿಗೆ ಕಾಯಿ ಹಾಲು,ಕೋಳಿ ಸಾರು, ಕಾಯಿದೋಸೆ, ಹೋಳಿಗೆ, ನಾಟಿ ರಾಸುಗಳ ಕೆನೆ ಮೊಸರು ಒಲೆಯ ಮೇಲಿನ ಕೆನೆ ಹಾಲು ಯಾರ ಮನೆಯಲ್ಲಾದರೂ ಹಸು, ಎಮ್ಮೆ ಕರು ಹಾಕಿದ್ರೆ ಗಿಣ್ಣು, ಹೀಗೆ ಹಲವು ರೀತಿಯ ದೇಸೀ ಊಟ ತಿಂಡಿಯ ಔತಣ ಸಿಗುತ್ತಿತ್ತು. ಹಳ್ಳಿಯಲ್ಲಿದ್ದ ಸಂಬಂಧಿಕರ ಹಾಗೂ ನಮ್ಮಂತೆ ರಜೆಗೆ ಬಂದ ಬೇರೆ ಮನೆಯ ಓರಗೆಯ ಹೆಣ್ಣು, ಗಂಡು ಮೊಮ್ಮಕ್ಕಳು ಎಲ್ಲ ಕೂಡಿ ಹೊಲ ಗದ್ದೆ ತಿರುಗಿ ಎಳನೀರು ಕುಡಿದು, ಊರ ಮುಂದಿನ ಮಾವಿನ ತೋಪಿಗೆ ಲಗ್ಗೆ ಇಟ್ಟು ಮಾವಿನ ಕಾಯಿಗೆ ಉಪ್ಪು ಕಾರ ಬೆರಸಿ ತಿನ್ನುತ್ತಿದ್ದೆವು.
ಆಗೆಲ್ಲ ನಮ್ಮೂರುಗಳಲ್ಲಿ ವಾರದಲ್ಲಿ ಎರಡು ದಿನ ಮಾತ್ರವಷ್ಟೇ ಸ್ನಾನ. ಒಂದು ಸೋಮವಾರ ಮತ್ತೊಂದು ಶುಕ್ರವಾರ. ಇತರೆ ದಿನಗಳಲ್ಲಿ ಕುರಂಬಳೆಯ ಇದ್ದಿಲು ಮತ್ತು ಉಪ್ಪಿನಿಂದ ಹಲ್ಲುಜ್ಜಿ ಲೈಫ್ ಬಾಯ್ ಸೋಪಿನಿಂದ ಕೈಕಾಲು ಮುಖ ತೊಳೆಯುವುದಷ್ಟೇ. ನಿತ್ಯವೂ ಬೆಳಗಿನ ತಿಂಡಿ ಸಾಮಾನ್ಯವಾಗಿ ರೊಟ್ಟಿಯೇ ಆಗಿರುತ್ತಿತ್ತು. ಒಲೆಯ ಕೆಂಡದಲ್ಲಿ ಬೇಯಿಸಿದ ರಾಗಿ ಇಲ್ಲವೇ ಬಿಳಿ ಜೋಳದ ರೊಟ್ಟಿಗೆ ತೆಂಗಿನ ಕಾಯಿ ಚಟ್ನಿ, ಇಲ್ವೇ ಕೆಂಪು ಮೆಣಸಿನ ಕಾಯಿಯ ಗೊಡ್ಡಗಾರ, ಅಥವಾ ಹಸಿ ಮೆಣಸಿನ ಕಾಯಿ ಟೊಮೆಟೋ ಕಾಯಿ ಬೇಯಿಸಿ ಜೀರಿಗೆ ಬೆಳ್ಳುಳ್ಳಿ ಹಾಕಿ ದಪ್ಪ ದಪ್ಪಗೆ ರುಬ್ಬಿದ ಚಟ್ನಿಯನ್ನು ಸ್ವಲ್ಪ ಒಗ್ಗರಣೆಯಲ್ಲಿ ಬೇಯಿಸಿದ ಹಸಿಮೆಣಸಿನ ಕಾಯಿ ಗೆಜ್ಜಗಾರವೆಂಬ ಹೆಸರಿನ ಕಾರಕ್ಕೆ ಆಗಷ್ಟೇ ಕಡೆದು ತೆಗೆದ ಬೆಣ್ಣೆ ಅಥವಾ ಹಳಗೆಯಲ್ಲಿ ಹೆಪ್ಪಿಟ್ಟ ಗಿಣ್ಣದಂತಹ ಕೆನೆ ಮೊಸರು. ಇವುಗಳ ಕಾಂಬಿನೇಷನ್ ಅದೆಷ್ಟು ರುಚಿಯಾಗಿರಿತ್ತಿತ್ತೆಂದರೆ ಈಗಲೂ ಬಾಯಿ ಚಪ್ಪರಿಸುವಂತಾಗುತ್ತದೆ. ಈಗಲೂ ಇದೇ ಗೆಜ್ಜಗಾರವನ್ನು ಮಾಡುತ್ತೇವೆ. ಆದರೆ ಅಂದಿನ ರುಚಿ ಸಿಗುತ್ತಿಲ್ಲ, ಹಾಗೂ ಗ್ಯಾಸ್ಟ್ರಿಕ್ ಹೆಚ್ಚುತ್ತದೆ. ಹಿಂದೆ ಅದೆಷ್ಟು ಚಟ್ನಿ ತಿಂದರೂ ಈ ಗ್ಯಾಸ್ಟ್ರಿಕ್ ಹತ್ತಿರ ಸುಳಯುತ್ತಿರಲಿಲ್ಲ ಬಹುಶಃ ಆ ಪದವೇ ಗೊತ್ತಿರಲಿಲ್ಲ.

ಇನ್ನು ಹಿತ್ಲಲ್ಲಿ ಬೆಳೆದ ಮುಳ್ಳಗಾಯಿ ಕಡ್ಳೆಕಾಳು ಸಾರು ಬೇಳೆ ಬಸ್ಸಾರು, ಗಣಿಕೆ ಸೊಪ್ಪಿನ ಪಜ್ಜಿ ನೀರೆಸ್ರು ನೆಂಚಕ್ಕೆ ಹೆ್ಳೆ ಕಾಳು ಬೆಂಗ್ಳು,ತಿಗಳುಳ್ಲಿ ಕಾಳು ಹಾಕಿದ ಮಜ್ಜಿಗೆಸಾರು ಬೆಣ್ಣೆ ತುಪ್ಪ, ಬಿಸಿ ಮುದ್ದೆ ಅನ್ನ ಹೊಟ್ಟೆ ತುಂಬಾ ಕಡೆದ ಮಜ್ಜಿಗೆ. ಸಾಲಾಗಿ ಎಲ್ಲ ಕುಳಿತು ಊಟ ಮಾಡ್ತಿದ್ದು. ಕಂಚಿನ ಗಂಗ್ಳಕ್ಕೆ ಮಾತ್ರ ನನಗೆ ನನಗೆ ಅಂತ ಕಿತ್ತಾಡ್ತಿದ್ದಿದ್ದು ನೆನಪು.
ಇನ್ನು ವಾರಕ್ಕೊಮ್ಮೆಬೇಸ್ತ್ವಾರ ಗಂಡಸಿ ಸಂತೆಗೆ ಏನಾದರೂ ಮಾರಾಟ ಮಾಡಲು ಇಲ್ಲವೆ ತಮಗೆ ಬೇಕಾದ ಉಪ್ಪು ಹುಳಿ ಕೊಳ್ಳಲು (ಏನೇ ಬೆಳೆ ಬೆಳೆದರೂ ಉಪ್ಪನ್ನು ಬೆಳೆಯಲಾಗುತ್ತಿರಲಿಲ್ಲವಲ್ಲ!)
ಗಾಡಿ ಹೂಡಿಕೊಂಡು ನಮ್ಮ ಸೋದರ ಮಾವ ಹೋಗುತ್ತಿದ್ದರು. ಸಂಜೆ ಜಗಲಿಯ ಮೇಲೆ ಕೂತು ಅವರು ಬರುವುದನ್ನೇ ಕಾಯುತ್ತಿದ್ದೆವು. ಸಂತೆಗೆ ಹೋದ ನೆರೆ ಹೊರೆಯವರು ಯಾರಾದರೂ ಬಂದರೆ ನಮ್ಮ ಮಾಮ ಬರ್ಲಿಲ್ವಾ ಅಂತ ಕೇಳೋದು ಯಾಕಂದ್ರೆ ಸಂತೆಯಿಂದ ಅವರ ಹೆಗಲಿನ ಮೇಲಿನ ಟವೆಲ್ಲಿನಲ್ಲಿ ಕಟ್ಟಿಕೊಂಡು ಬರುತ್ತಿದ್ದ ಸಂತೆಯ ಪುರಿಗಾಗಿ!. ತಂದ ಕೂಡಲೇ ಸೋದರತ್ತೆ ಎಲ್ಲರನ್ನೂ ಕೂರಿಸಿ ಎಲ್ಲರಿಗೂ ಸಮನಾಗಿ ಅವರವರ ಲಂಗದ ಮಡಿಲಿಗೆ ಹಾಕಿ ಕಾಫಿ ಕೊಟ್ಟರೆ ಅದನ್ನು ಕಾಫಿಯ ಲೋಟದೊಳಗೆ ತುಸು ತುಸುವೇ ಹಾಕಿ ಪುರಿ ಕಾಫಿ ಹೀರುವುದೇ ಒಂದು ಸಂಭ್ರಮ ಬಿಡಿ.
ಮನೆಯಲ್ಲಿ ಚಿಕ್ಕಮ್ಮ ಅತ್ತೆ ನೀರು ತರಲು ಕಲ್ಲುಬಾವಿ (ಕಲ್ಯಾಣಿ) ಗೆ ಹೋದರೆ ಅವರೊಂದಿಗೆ ನಾವೂ ಪುಟ್ಟ ಬಿಂದಿಗೆಯಲ್ಲಿ ನೀರು ತರುತ್ತಿದ್ದೆವು ಪಾತ್ರೆತೊಳೆಯಲು ಸೇದೋ ಬಾವಿಗೆ ಹೋದರೆ ನಾವೂ ಜೊತೆಗೂಡುತ್ತಿದ್ದೆವು. ಇನ್ನು ಬಟ್ಟೆ ಒಗೆಯಲು ಕೆರೆಗೆ ಹೋದ್ರಂತೂ ನಮ್ಮ ಸಂತೋಷಕ್ಕೆ ಪಾರವೇ ಇಲ್ಲ. ಬಟ್ಟೆ ಒಗೆಯಲು ಇಡೀ ದಾಯಾದಿಗಳ ಮನೆಯವರೆಲ್ಲ ಒಟ್ಟಿಗೆ ಹೋಗುತ್ತಿದ್ದರು. ನಾವೂ ಹೋಗಿ ಕೆರೆ ನೀರಲ್ಲಿ ಆಡುತ್ತಾ ಅವರು ಒಗೆದ ಬಟ್ಟೆಗಳನ್ನು ದಡದ ಹುಲ್ಲು, ಕಲ್ಲಿನ ಮೇಲೆ ಒಣ ಹಾಕಿ ಒಣಗಿದ ಬಟ್ಟೆಗಳನ್ನು ಮಡಿಸಿ ಕೊಳ್ಳುತ್ತಿದ್ದೆವು.
ಈ ನಡುವೆ ಕೆಲ ಹಿರಿಯರು ಸೀರೆಯಲ್ಲಿ ಮುದ್ದೆಯ ತುಣುಕುಗಳನ್ನು ಹಾಕಿ ಸಣ್ಣಮೀನು ಹಿಡಿಯುತ್ತಿದ್ದರು. ನಂತರ ಚನ್ನಾಗಿ ಕೈ ಕಾಲು ತೊಳೆದು ಒಂದು ಸುತ್ತು ಎಲೆ ಅಡಿಕೆ ತಿನ್ನುತ್ತಾ ತಮ್ಮಕಷ್ಟಸುಖಗಳನ್ನು ಹಂಚಿಕೊಳ್ಳುವುದರೊಂದಿಗೆ ಊರಿನ ಇತ್ತೀಚಿನ (Breaking news ಮತ್ತು Flash news )ಸುದ್ಧಿಗಳ ವಿನಮಯ ಮಾಡಿಕೊಂಡು ಕೊನೆಗೆ ಮಾಡ್ದೋರ್ ಪಾಪ ಆಡ್ದೋರ್ ಬಾಯ್ಲಿ ಕಂಡೋರ್ಮನೆ ಸುದ್ದಿ ನಮಿಗ್ಯಾಕೆ ಬಲ್ಲಿ!? ಎಂದು ಸಮಾರೋಪ ಹಾಡಿ ಒಣಗಿದ ಬಟ್ಟೆಗಳನ್ನು ಕುಕ್ಕೆಯಲ್ಲಿ ತುಂಬಿಕೊಂಡು ಮನೆಗೆ ಬರುತ್ತಿದ್ದರು.
ಇನ್ನು ನಮ್ಮಗಣಿಕೆ ಹಣ್ಣು ಮಿಣಿಕೆ ಹಣ್ಣುಕಾರೆ ಹಣ್ಣು, ಈಚಲಹಣ್ಣು, ಸೀಬೆ ಕಾಯಿ, ಸೀಮೆ ಹುಣಿಸೆ ಹಣ್ಣಿನ (ಬೆಟ್ಟದ ಹುಣಿಸೆ ಹಣ್ಣು) ಹುಡುಕಾಟ. ಯಾರದೋ ಹಿತ್ತಿಲಲ್ಲಿದ್ದ ಸೀಮೆ ಹುಣಿಸೆ ಮರದ ಬಳಿಗೆ ಹೋದರೆ ಅದನ್ನು ಕೆಡವೋರು ಒಬ್ರಾದ್ರೆ ಆಯ್ಕೊಳೋರು ಹತ್ತಾರು ಜನ. ಆಯ್ಕೊಂಡು ಲಂಗಕ್ಕೆ ತುಂಬಿಕೊಳ್ಳೋದು. ಪಾಪ ಮರ ಹತ್ತಿ ಕೆಡವಿದವ್ನಿಗೆ, ಹಂಚಿದವರಿಗೆ ಪಿಂಚಣ್ಣ ಎನ್ನುವಂತೆ ಸಿಗುತ್ತಲೇ ಇರಲಿಲ್ಲ. ಹೀಗಾಗುವುದೆಂದು ತಿಳಿದವರು ಮೊದಲೇ ಕಂಡೀಷನ್ ಹಾಕಿ ಎಲ್ಲವನ್ನು ಒಟ್ಟುಗೂಡಿಸಿ ಮರ ಹತ್ತಿದವ ಕೆಳಗಿಳಿದ ಮೇಲೆ ಎಲ್ಲರಿಗೂ ಸಮನಾಗಿ ಹಂಚುತ್ತಿದ್ದ. ಅಷ್ಟರಲ್ಲಿ ಹೆಣ್ಣು ಮಕ್ಕಳು ನಾವು ಮರದ ಮೇಲಿರುವವರಿಗೆ ತಿಳಿಯದಂತೆ ಮೆಲ್ಲಗೆ ಸ್ವಲ್ಪ ಸ್ವಲ್ಪ ತಿಂದು ಬಿಡುತ್ತಿದ್ದೆವು. ಅಲ್ಲಿಯೂ ಸಣ್ಣಪುಟ್ಟ ಜಗಳ ಕಿತ್ತಾಟಗಳು ನಡೆಯುತ್ತಿದ್ದವು. ಆದರೆ ಆ ಜಗಳಗಳು ಕ್ಷಣ ಮಾತ್ರದಲ್ಲಿ ಮರೆತುಹೋಗುತ್ತಿದ್ದವು. ಅದು ಮಕ್ಕಳ ಮನಸ್ಸು ಮತ್ತು ವಯಸ್ಸಿನ ಪ್ರಭಾವ!
ಆರು ಮನೆ, ಹನ್ನೆರಡು ಮನೆಯ ಚೌಕಾಬಾರ ಆಟ, ಅಳುಗುಳಿ ಮನೆಯಾಟ ಎಲ್ಲಕೂ ಮಿಗಿಲಾಗಿ ಪಿಲ್ಲಿಕಲ್ಲಾಟ. ಗಂಡು ಮಕ್ಕಳು ಕಬ್ಬಡ್ಡಿ ಲಗೋರಿ ಆಟ. ಗದ್ದೆಗಳ ಬಳಿಯಿಂದ ಗಂಡು ಹುಡುಗರು ಹಿಡಿದು ತಂದುಕೊಟ್ಟ ಸುಂದರವಾದ ಆಕರ್ಷಕವಾದ ಬಣ್ಣ ಬಣ್ಣದ ರೇಶಿಮೆಯಂತಹ ಜೀರುಂಬೆಯನ್ನು ಅದರ ಬಣ್ಣಕ್ಕೆ ಮಾರು ಹೋಗಿ ಖಾಲಿ ಬೆಂಕಿ ಪೊಟ್ಟಣದಲ್ಲಿ ರಾಗಿಹಿಟ್ಟು ಹಾಕಿಟ್ಟುಕೊಳ್ಳುತ್ತಿದ್ದೆವು. ಆಗ್ಗಾಗ್ಗೆ ಬೆಂಕಿ ಪೊಟ್ಟಣದ ಬಾಯನ್ನು ಚೂರು ಚೂರೇ ತೆಗೆಯೋದು ನೋಡೋದು. ಕೆಲವರಂತೂ ಆ ಹುಳುವನ್ನು ಕೈಗಳ ಮೇಲೆ ಬಿಟ್ಟುಕೊಳೋದು, ಇನ್ನು ಕೆಲವ್ರು ಅದರ ಕಾಲಿಗೊಂದು ದಾರ ಕಟ್ಟಿ ನೆಲದ ಮೇಲೆ ಓಡಾಡಲು ಬಿಡೋರು. ಪಾಪ ಅವುಗಳಿಗೆ ಎಷ್ಟೆಲ್ಲ ಹಿಂಸೆ ಕೊಡುತ್ತಿದ್ದೆವು! ನಾವು ನಿದ್ರಿಸಿದಾಗಷ್ಟೇ ಅವುಗಳಿಗೆ ನೆಮ್ಮದಿ.
ಊರ ಮುಂದೆ ಒಂದು ಬುಗುರಿ ಕಾಯಿ ಮರವಿತ್ತು ಅಲ್ಲಿ ಬಿದ್ದ ಬುಗುರಿ ಕಾಯಿಗಳನ್ನು ಎಕ್ಕಿ ತಂದು ಅದಕ್ಕೆ ಹಂಚಿ ಕಡ್ಡಿಯನ್ನು ಸಿಕ್ಕಿಸಿ ಬುಗುರಿಯಂತೆ ತಲೆಕೆಳಕಾಗಿ ತಿರುಗಿಸಿ ಬಿಡುತ್ತಿದ್ದೆವು. ಅದರಲ್ಲಿ ಕಾಂಪಿಟೇಷನ್ ಬೇರೆ ಇರುತ್ತಿತ್ತು ಯಾರ ಬುಗುರಿಕಾಯಿ ಹೆಚ್ಚು ಸಮಯ ತಿರುಗುತ್ತದೆ ಅವರು ಗೆದ್ದರು ಎಂದು ಘೋಷಿಸಲಾಗುತ್ತಿತ್ತು. ಹಾಗೇ ಬಸವನ ಹೂವಿನ ಕೋಳಿ ಜಗಳ (ಕಾಳಗ) ಬೇರೆ ಆಡ್ತಿದ್ವು. ಈ ಬಸವನ ಹೂವು ಇದೇ ಬೇಸಿಗೆಯ ಬಸವ ಜಯಂತಿ ಸಮಯದಲ್ಲೇ ಮರದ ಎಲೆ ಕಾಣದಂತೆ ತುಂಬಿಹೋಗಿರುತ್ತಿತ್ತು. ಬಸವ ಜಯಂತಿಯ ಕಾಲದಲ್ಲಿ ಬಿಡುತ್ತಿದ್ದ ಕಾರಣಕ್ಕಾಗಿಯೇ ಇದನ್ನು ಬಸವನ ಹೂ ಎಂದು ಹಳ್ಳಿಗಳಲ್ಲಿ ಕರೆಯುತ್ತಿದ್ದರೆನಿಸುತ್ತದೆ. ಅಂದು ಹೋರಿಗಳಿಗೆ ಈ ಹೂವಿನ ಮಾಲೆ ಹಾಕುತ್ತಿದ್ದರು. ಸಮಯದಲ್ಲಿ ನಡೆಯುವ ಮದುವೆ ಮುಂಜಿ ಚಪ್ಪರಗಳಿಗೆ ಇದೇ ಹೂವಿನಿಂದ ಅಲಂಕರಿಸುತ್ತಿದ್ದರು.
ನನ್ನಜ್ಜಿ ಮನೆಯ ಪಕ್ಕದ ಮನೆಯವರ ಅಂಗಳದಲ್ಲಿ ತುಂಬ ದೊಡ್ಡ ಹೂವಿನ ತೋಟವಿತ್ತು. ಬಹಳಷ್ಟು ಹೂ ಬಿಡುತ್ತಿತ್ತು. ನಾನು ಅವರ ಮನೆಯನ್ನು ಸಾಹುಕಾರರ ಮನೆ ಅಂತ ಕರೀತಿದ್ದೆ. ಚಿಕ್ಕಂದಿನ ದಿನಗಳಲ್ಲಿ ನೋಡಿದ ಸಿನೆಮಾಗಳಲ್ಲಿ ಸಿರಿವಂತರ ಮನೆಯ ಮುಂದಿನ ಕಾಂಪೌಂಡಿನಲ್ಲಿ ದೊಡ್ಡ ಹೂವಿನ ತೋಟವನ್ನು ನೋಡಿ ನನಗೆ ಅವರ ಮನೆ ಸಾಹುಕಾರರ ಮನೆ ಎನಿಸಿದ್ದು ನನ್ನಬಾಲ್ಯದ ಅನಿಸಿಕೆ!
ಹಳ್ಳಿಗಳ ಬೀದಿಯ ಪಕ್ಕದ ಬೇಲಿ ಹಾಗೂ ಸಂದು ಗೊಂದುಗಳಲ್ಲೆಲ್ಲಾ ಸಂಜೆಯಾದೊಡನೆ ಅರಳುವ ಒಂದೇ ಜಾತಿಯ ಹತ್ತಾರು ಬಣ್ಣಗಳ ಹೂವಿನ ಗಿಡಗಳು ತಂತಾನೆ ಬೆಳೆದುಕೊಂಡಿರುತ್ತಿದ್ದವು. (ಈಗಲೂ ಕೂಡ ನಗರದ ಖಾಲಿ ಸೈಟುಗಳಲ್ಲಿ ಇವುಗಳನ್ನು ಕಾಣಬಹುದು) ಹಳದಿ, ಕೆಂಪು,ಬಿಳಿ, ಗುಲಾಬಿ ಬಣ್ಣ,ಸರಸ್ವತಿ ಬಣ್ಣ, ನೇರಳೆ ಬಣ್ಣ, ಹೀಗೆ ಹಲವಾರು ಬಣ್ಣಗಳಲ್ಲಿ ಗಿಡದ ತುಂಬಾ ಹೂ ಬಿಡುವ ಈ ಹೂವನ್ನು ಚಂದ್ರ ಮಲ್ಲಿಗೆ ಎಂದು ಕರೆಯಿತ್ತಿದ್ದರು. ಯಾಕಂದ್ರೆ ಸೂರ್ಯ ಮರೆಯಾದೊಡನೆ ಬೇಸರದಿ ಮುದುಡುವ ಸಹಸ್ರಾರು ಜಾತಿಯ ಹೂಗಳಿದ್ದರೆ ಸೂರ್ಯ ಮರೆಯಾಗಿ , ಚಂದ್ರನ ಕಂಡೊಡನೆ ಅರಳಿ ನಗುವ ನೈದಿಲೆ ಮತ್ತು ಈ ಚಂದ್ರ ಮಲ್ಲಿಗೆ ಹೂಗಳು ಹಗಲೆಲ್ಲ ಅರಳದೆ ಚಂದ್ರನನ್ನು ಕಂಡೊಡನೆ ಅರಳುವುದರಿಂದ ಈ ಹೂವನ್ನು ಚಂದ್ರ ಮಲ್ಲಿಗೆ ಎಂದು ಕರೆಯುತ್ತಿದ್ದರೆನಿಸುತ್ತದೆ.
ಈ ಹೂವು ಗಿಡದಲ್ಲಿಯೇ ಒಣಗಿದ ನಂತರ ಅದರಲ್ಲಿ ಕಪ್ಪನೆಯ ಬೀಜ ಸಿಗುತ್ತಿತ್ತು. ಅದು ಹೆಚ್ಚು ಕಡಿಮೆ ಕಾಳು ಮೆಣಸಿನ ಗಾತ್ರ ಮತ್ತು ಆಕಾರದಲ್ಲಿಯೇ ಇರುತ್ತಿತ್ತು. ಓರಗೆಯ ಹೆಣ್ಣು ಮಕ್ಕಳೆಲ್ಲ ಅವನ್ನು ಶೇಖರಿಸಿ ತಂದು ಕಲ್ಲಿನಿಂದ ಜಜ್ಜಿದರೆ ಬಿಳಿಯ ಪುಡಿ ಸಿಗುತ್ತಿತ್ತು. ಆ ಬಿಳಿಯ ಪುಡಿಯನ್ನು ಪೌಡರು ಎಂದು ಮುಖಕ್ಕೆ ಹಚ್ಚಿಕೊಳ್ಳುತ್ತಿದ್ದೆವು. ಈ ಕೆಲಸಗಳೆಲ್ಲಾ ಮನೆಯ ಹೊರಗೆ ನಡೆಯುತ್ತಿದ್ದುದರಿಂದ ಕನ್ನಡಿಯೆಲ್ಲಿ ಸಿಗಬೇಕು? ಅದಕ್ಕಾಗಿ ಒಬ್ಬರ ಮುಖಕ್ಕೆ ಒಬ್ಬರು ಈ ಪೌಡರ್ ಲೇಪಿಸಿಕೊಳ್ಳುತ್ತಿದ್ದೆವು. ಹಾಗೇ ಇನ್ನೊಂದು ಸಂಗತಿಯೆಂದರೆ ಕಣ್ಣಿನ ಪಕ್ಕಕ್ಕೆ ಕಾಡಿಗೆಯ ಬದಲು ರೊಟ್ಟಿ ಹಂಚಿನ ಕೆಳಗಿನ ಮಸಿಗೆ ಬೆರಳ ತುದಿಯಲ್ಲಿ ನೀರು ಚುಮುಕಿಸಿ ಊದುಗಡ್ಡಿಯ ತುದಿಯ ಕಡ್ಡಿಯಿಂದ ಹಚ್ಚಿಕೊಳ್ಳುತ್ತಿದ್ದೆವು.
ಇದು ನಮ್ಮ ಮುಗ್ಧ ಬಾಲ್ಯದ ಮುಖದ ಮೇಕಪ್ಪು! ಹಾಗೇ ಊರ ಮುಂದಿದ್ದ ಒಂದು ದೊಡ್ಡ ಮರದಲ್ಲಿ ತುಸು ಕೆಂಪು ತುಸು ನೇರಳೆ ಮಿಶ್ರಿತ ಬಣ್ಣದ ಒಂದು ರೀತಿಯ ಹೂವು ಬಿಡುತ್ತಿತ್ತು. ನೆಲದ ಮೇಲೆ ಬಿದ್ದಿರುತ್ತಿದ್ದ ಆ ಹೂವನ್ನು ಆಯ್ದು ಲಂಗದಲ್ಲಿ ತುಂಬಿಕೊಂಡು ಬಂದು ಜಗಲಿಯ ಮೇಲೆ ಕುಳಿತು ಅದರಲ್ಲಿರುವ ಕೆಂಪು ರಸವನ್ನು ಉಗುರುಬಣ್ಣವೆಂದು ಉಗುರುಗಳಿಗೆ ಹಚ್ಚಿಕೊಳ್ಳುತ್ತಿದ್ದೆವು. ನಾವೇನೂ ಕಮ್ಮಿ ಇರಲಿಲ್ಲ ಬಿಡಿ ಸ್ಥಳದಲ್ಲೇ ದೊರೆಯುವ ವಸ್ತುಗಳನ್ನ ನಮ್ಮ ಅಲಂಕಾರಿಕ ಸಾಧನಗಳಾಗಿ ನಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದೆವು.ನಿಮಗೇನಾದರೂ ಇದರ ಅನುಭವ ಇದೆಯಾ?
ನಮ್ಮಜ್ಜಿ ಊರಿನ ಗ್ರಾಮದೇವತೆ ಶಕ್ತಿ ದೇವತೆ ಕೋಡಿಯಮ್ಮನ ದೇವಸ್ಥಾನದ ಮುಂದೆ ದೊಡ್ಡ ಕೆರೆ ಹಾಗೂ ದೇವಸ್ಥಾನದ ಪಕ್ಕದಲ್ಲಿ ಒಂದು ಮಾವಿನ ತೋಪಿತ್ತು . ಅಲ್ಲಿ ಕಸಿ ಮತ್ತೆ ಜೀರಿಗೆ ಮಾವಿನ ಮರಗಳಿದ್ದವು. ಇನ್ನು ಯಾರದೋ ತೋಟಗಳಲ್ಲಿ ಗಿಣಿ ಮಾವಿನ ಮರಗಳಿದ್ದು, ಊರಿಗೆ ಮೊಮ್ಮಕ್ಕಳು ಅಪರೂಪಕ್ಕೆ ಪೇಟೆಯಿಂದ ಬರ್ತಾರೆ ಅಂತ ವಿಶೇಷವಾಗಿ ನಮಗೆ ಎಲ್ಲವನ್ನೂ ಕೊಡುತ್ತಿದ್ದರು. ನಮಗೋ ಆಗ ಹಲ್ಲು ಗಟ್ಟಿಯಾಗಿದ್ದವು ಹುಳಿ ತಿಂದರೆ ಜುಂ ಎನ್ನುತ್ತಿರಲಿಲ್ಲ. ಗೆಜ್ಜುಣಸೆ ಹಣ್ಣು ಮಾವಿನ ಕಾಯಿ ತಿಂದದ್ದೇ ತಿಂದದ್ದು. ಒಮ್ಮೆ ನನ್ನ ತಂಗಿ ಮತ್ತೆ ಚಿಕ್ಕಪ್ಪನ ಮಗ ಇಬ್ಬರೂ ಸೇರಿ ಅದೆಷ್ಟು ಉಪ್ಪು ಹಚ್ಚಿಕೊಂಡು ಮಾವಿನ ಕಾಯಿ ತಿಂದಿದ್ದರೋ ಗೊತ್ತಿಲ್ಲ ಉಪ್ಪಿನಂಶ ಹೆಚ್ಚಾಗಿ ಕಾಲು ಮುಖವೆಲ್ಲ ಊದಿಕೊಂಡ ಕಾರಣ ಅಪ್ಪ ಇದೇ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾಕ್ಟರ್ ಡಾ.ಜನಾರ್ಧನ್ ರವರ ಬಳಿ ಚಿಕಿತ್ಸೆ ಕೊಡಿಸಿದ್ದರು. ನಾವೆಲ್ಲ ಸಿಟ್ಟು ಬಂದಾಗ ಅವರಿಬ್ಬರನ್ನೂ ಮಾವಿನಕಾಯಿ ಊದ. ಉಪ್ಪಿನ ಊದಿ ಎಂದು ಅಣಕಿಸುತ್ತಿದ್ದೆವು. ಇನ್ನು ಗದ್ದೆಯಲ್ಲಿ ಬೆಳೆದ ಮೆಂತ್ಯದ ಗಿಡದ ಮೆಂತ್ಯದ ಕಾಯಿಯನ್ನು ಕಿತ್ತು ತಂದು ಎಳೆಯ ಹಸಿ ಮೆಂತ್ಯದ ಕಾಳನ್ನು ತಿಂದರೆ ಕಹಿ ಗುಣದ ಮೆಂತ್ಯ ಅದರ ಬಾಲ್ಯದಲ್ಲಿ ಸಿಹಿಯಾಗಿ ರುಚಿಯಾಗಿ ಇರುತ್ತಿತ್ತು. ಬಹುಷಃ ಎಲ್ಲ ಮಕ್ಕಳೂ ಬಾಲ್ಯದಲ್ಲಿ ಒಳ್ಳೆಯವರೇ ಆಗಿ ಬೆಳೆದ ಮೇಲಷ್ಟೇ ಅವಗುಣಗಳು ಕಾಣುವಂತೆ ಇರಬೇಕು!
ಅಜ್ಜಿಮನೆಯ ಊರ ಮುಂದಿನ ಹಿತ್ತಲಲ್ಲಿದ್ದ ಪಾಲಿವಾಣದ ಮರಕ್ಕೆ ಹಬ್ಬಿಸಿದ್ದ ಮಲ್ಲಿಗೆ ಬಳ್ಳಿಯಲ್ಲಿ ಕುಕ್ಕೆಗಟ್ಟಲೇ ಬಿಡುತ್ತಿದ್ದ ಮಲ್ಲಿಗೆ ಹೂವನ್ನು ನಮ್ಮ ಕೈಗೆಟಕುತ್ತಿದ್ದಷ್ಟನ್ನು ಕಿತ್ತು ಪುಟ್ಟ ಪುಟ್ಟ ಬಿದಿರಿನ ಚಿಬ್ಬಲಿನಲ್ಲಿ ತುಂಬಿಸಿಕೊಂಡು ಬರುತ್ತಿದ್ದೆವು. ಹಿರಿಯರು ಅವರ ಕೈಗೆಟುಕುವಷ್ಟು ಎತ್ತರದಲ್ಲಿದ್ದ ಹೂಗಳನ್ನು ಕಿತ್ತರೆ ಗಂಡು ಮಕ್ಕಳು ಇನ್ನೂ ಎತ್ತರದಲ್ಲಿದ್ದ ಹೂವನ್ನು ಏಣಿಯ ಮೇಲೆ ಹತ್ತಿ ಕೀಳುತ್ತಿದ್ದರು. ಮನೆಗೆ ಬಂದು ಸೂಜಿ ದಾರದಿಂದ ಪೋಣಿಸಿ ನಮಗೆ ಜಡೆ ಹಾಕಿ ತಲೆ ತುಂಬಾ ಹೂ ಮುಡಿಸುತ್ತಿದ್ದರು. ಆ ಮಲ್ಲಿಗೆ ಒಂಥರಾ ಸೀಸನಲ್ . ಕೆಲವೇ ದಿನಗಳು ಅದರಲ್ಲೂ ಬೇಸಿಗೆಯಲ್ಲಿ ಮಾತ್ರ ಬಿಡುತ್ತಿದ್ದುದು ವಿಶೇಷ!
ಬೇಸಿಗೆಯ ಹುಣ್ಣಿಮೆಗೆ ಹಳ್ಳಿಗಳಲ್ಲಿ ಬಲು ಮಹತ್ವ . ಹುಣ್ಣಿಮೆ ಬಂತು ಅಂದ್ರೆ ತಿಂಗಳ ಮಾವನ ಮದುವೆ ಮಾಡೋಕೆ ಕೇರಿಯ ಹಿರಿಯರು ಕಿರಿಯರು ಎಲ್ಲ ಒಗ್ಗೂಡುತ್ತಿದ್ದರು. ತಿಂಗಳು ಮಾವ ಅಂದ್ರೆ ಯಾರು ಗೊತ್ತಾ ನಿಮಗೆ?. ಅದೇ ನಮ್ಮ ನಿಮ್ಮ ಚಂದಾ ಮಾಮ. ನನಗೂ ಗೊತ್ತಿರಲಿಲ್ಲ ಬಿಡಿ. ನಮ್ಮ ರಜೆಯಲ್ಲಿ ಹಳ್ಳಿಗೆ ಹೋದಾಗ ತಿಳೀತು. ತಿಂಗಳಿಗೊಮ್ಮೆ ಹಣ್ಣಿಮೆಯಂದು ಬೆಳದಿಂಗಳನ್ನು ಎಲ್ಲೆಡೆ ಚೆಲ್ಲಿಕೊಂಡು ಬರುತ್ತಿದ್ದುದರಿಂದ ತಿಂಗಳ ಮಾವನೆಂದು ಕರೆಯುತ್ತಿದ್ದರೆನಿಸುತ್ತದೆ. ಇವನೊಂಥರಾ ಸೋದರ ಮಾವನಂತೆ, ಪುರಾಣದ ಪ್ರಕಾರ ಲಕ್ಷ್ಮಿ ಚಂದ್ರನ ಸಹೋದರಿಯಂತೆ ಅದಕ್ಕೆ ಎಲ್ಲ ಹೆಣ್ಣು ಮಕ್ಕಳಿಗೂ ಚಂದ್ರ ಸಹೋದರ ಸಮಾನ ಅದಕ್ಕೇ ಇರಬಹುದು ಎಲ್ಲ ಹೆಂಗಸರು ತಮ್ಮ ಮಕ್ಕಳಿಗೆ ಚಿಕ್ಕಂದಿನಲ್ಲಿ ಅಸಗಸದಲ್ಲಿರುವ ಚಂದ್ರನನ್ನು ತೋರಿಸಿ ಮಾಮನೆಂದೇ ಪರಿಚಯಿಸುತ್ತಿದ್ದರು.

ಊಟ ತಿಂಡಿಯನ್ನು ಚಂದ ಮಾಮನನ್ನು ತೋರಿಸಿಯೇ ತಿನಿಸುತ್ತಿದ್ದರು ಹಾಗೇ ಅಳುವ ಮಕ್ಕಳಿಗೆ ಕೂಡ ಚಂದಾ ಮಾಮನನ್ನು ತೋರಿಸಿ ರಮಿಸುತ್ತಿದ್ದರು. ಈಗ ಮಕ್ಕಳು ಅತ್ತರೆ ಊಟ ತಿಂಡಿ ತಿನ್ನದಿದ್ದರೆ ಆಗಸದೆಡೆಗೆ ದಿಟ್ಟಿಸಿ ಚಂದ್ರನನ್ನು ತೋರಿಸುವ ಪುರುಸೊತ್ತು ಮನಸು ಎರಡೂ ಇಲ್ಲದೆ ಮಕ್ಕಳ ಕೈಗೆ ಮೊಬೈಲ್ ಕೊಡುತ್ತಾರೆ ಅಷ್ಟೇ!. ಇನ್ನು ನಮ್ಮ ಕವಿಗಳು ಚಂದಿರನನ್ನು ಹೆಣ್ಣಿನ ಮೊಗದ ಸೌಂದರ್ಯ ವರ್ಣನೆಗೆ ಒಂದು ಉಪಮೆಯಾಗಿಸುತ್ತಿದ್ದರು. ಇಂದಿಗೂ ಚಂದ್ರ ಕವಿಗಳ ಸೊತ್ತೇ. ಚಂದಿರನೇತಕೆ ಓಡುವನಮ್ಮ ಮೋಡಕೆ ಹೆದರಿಹನೇ ? ಎಂದು ಮಕ್ಕಳು ಪ್ರಶ್ನಿಸುವ ಪದ್ಯ ಹಾಗೂ ಗೋಪಿ ಪುಟ್ಟು ಹೊರಗಡೆ ಬಂದು ಬಾವಿಗೆ ಇಣುಕಿದರು, ಬಾವಿಲಿ ಚಂದ್ರನ ಬಿಂಬವ ಕಂಡು ಚಂದ್ರನು ಬಾವಿಗೆ ಬಿದ್ದನು ಎಂದು ಚಂದ್ರನ ಮೇಲಕೆ ಎತ್ತಲಿಕೆಂದು ಹಗ್ಗವ ಹುಡುಕಿದರು. ಎಂಬ ಪದ್ಯಗಳು ನಮ್ಮ ಸಮ ವಯಸ್ಕರರಿಗೆಲ್ಲಾ ನೆನಪಿರಬಹದಲ್ಲವೇ? ಒಂದು ರಜೆಯಲ್ಲಿ ಊರಿಗೆ ಹೋದಾಗ ಓರಗೆಯವರೆಲ್ಲ ಏಯ್ ತಿಂಗ್ಳು ಮಾವುನ್ ಮದ್ವಿಗೆ ಎಲ್ಲಾರ್ ಮಲ್ಲೂ ಅಸೀಟು (ರಾಗಿ ಜೋಳದ ಹಿಟ್ಟು) ರಂಗಾಲೆ ಇಸ್ಕ ಬರ್ಬೇಕು ತಿಂಗ್ಳಮಾವುನ್ ಬರ್ಯಾಕೆ ಎಂದಾಗ ನನಗೆ ಏನೆಂದು ತಿಳಿಯದೆ ಹಿರಿಯರನ್ನು ಕೇಳಿದಾಗ ಹೇಳಿದ್ದು ಹೀಗೆ.
ಚಂದ್ರನಿಗೆ ಹೆಣ್ಣು ಸಿಗದೆ ಮದ್ವೆ ಆಗಿಲ್ವಂತೆ ಹೇಗಾದ್ರೂ ಮಾಡಿ ಅವನಿಗೆ ಮದ್ವೆ ಮಾಡ್ಬೇಕಂತೆ. ಅದಕ್ಕಾಗಿ ಬೇಸಿಗೆಯ ಹುಣ್ಣಿಮೆಯಂದು ಚಂದ್ರನಿಗೆ ಮದುವೆ ಮಾಡ್ತೀವಿ ಎಂದರು. ನಾನೂ ಗೋಣಾಡಿಸಿದೆ ನನಗಾಗ ತಿಳಿದಿರಲಿಲ್ಲ ಪುರಾಣದ ಪ್ರಕಾರ ಚಂದ್ರನು ದಕ್ಷನ ಇಪ್ಪತ್ತೇಳು ಪುತ್ರಿಯರನ್ನು ವಿವಾಹವಾಗಿದ್ದನೆಂದು. ಅವೇ ಇಪ್ಪತ್ತೇಳು ನಕ್ಷತ್ರಗಳೆಂದು. ಆದರೆ ನಮ್ಮ ಹಳ್ಳಿಯ ಹಿರೀಕರ ಮಾತಿನಂತೆ ಚಂದ್ರನಿಗೆ ಮದುವೆಯಾಗಿರಲಿಲ್ಲವಂತೆ. ಅದಕ್ಕೆ ಹುಣ್ಣಿಮೆಯಂದು ಅವನ ಮದುವೆ ಮಾಡ್ತಿದ್ದರಂತೆ. ಈ ಚಂದ್ರಮನ ಮದುವೆ ಮಾಡೋದಂದ್ರೆ ಇಡೀ ಊರಿಗೇ ಸಂಭ್ರಮ! ಅದೊಂದು ನಿಜವಾದ ಮದುವೆಯೇ ಎನ್ನುವಂತೆ ಆಚರಿಸುತ್ತಿದ್ದರು. ಅದಕ್ಕೆ ಊರೆಲ್ಲ ಸೇರಿ ಎರಡು ಗಂಡು ಮಕ್ಕಳನ್ನು ಆಯ್ಕೆ ಮಾಡಿಕೊಂಡು ಒಬ್ಬ ಹುಡುಗನನ್ನು ಗಂಡು ಮಾಡಿ ಮತ್ತೊಬ್ಬ ಹುಡುಗನಿಗೆ ಹೆಣ್ಣಿನ ಉಡುಗೆ ತೊಡಿಸಿ ಓಲೆ ಬಂಗಾರ ಒಡವೆ ಹಾಕಿ ಹೆಣ್ಣಾಗಿಸಿ ಈ ಮದುವೆಯನ್ನು ಶಾಸ್ತ್ರೋಕ್ತವಾಗಿ ಮಾಡುತ್ತಿದ್ದರು. ಅಮಾವಾಸ್ಯೆ ಕಳೆದು ಬಿದಿಗೆ ಚಂದ್ರ ಮೂಡುವ ದಿನದಿಂದ ಈ ಕಾರ್ಯಕ್ರಮ ಸುಮಾರು ಹದಿನೈದು ದಿನ ಹುಣ್ಣಿಮೆಯವರೆಗೆ ನಡೆದು ಹುಣ್ಣಿಮೆಯಂದು ನಡೆಯುವ ಮದುವೆಯಲ್ಲಿ ಕೊನೆಗೊಳ್ಳುತ್ತಿತ್ತು.
ಕೆಲವೊಮ್ಮೆ ಈ ಕಾರ್ಯಕ್ರಮ ಮೂರು ದಿನ, ಐದು ದಿನ, ಒಂಬತ್ತು ದಿನ, ಹನ್ನೆರಡು ದಿನಗಳಿಗೆ ಮೊಟಕಾದರೂ ಒಟ್ಟಾರೆಯಾಗಿ ಹುಣ್ಣಿಮೆಯಂದೇ ಮದುವೆ ನಡೆಯ ಬೇಕಿತ್ತ .ಮಕ್ಕಳು ಮನೆ ಮನೆಗೆ ಹೋಗಿ ರಾಗಿ ಹಿಟ್ಟು ಮತ್ತು ರಂಗೋಲಿಯನ್ನು ಸಂಗ್ರಹಿಸಿ ತರುತ್ತಿದ್ದರು. ಪ್ರತಿ ದಿನ ರಂಗೋಲಿಯಲ್ಲಿ ಹಸೆ ಬರೆದು ಸೂರ್ಯ ಚಂದ್ರರ ಚಿತ್ರವನ್ನು ಹಸೆಯ ಮೇಲಿನ ತೇರಿನ ಹೂವಿನ ಪಕ್ಕದಲ್ಲಿ ಬರೆಯುತ್ತಿದ್ದರು. ಮೊದಲ ದಿನ ಕಲಶವಿಟ್ಟು ರೊಟ್ಟಿಯನ್ನಿಟ್ಟು ಪೂಜೆ ಮಾಡುತ್ತಿದ್ದರು.
ಕೊನೆಯ ದಿನ ಹುಣ್ಣಿಮೆಯಂದು ಚಪ್ಪರ ಹಾಕಿ ಮೊದಲೇ ನಿಗದಿ ಪಡಿಸಿ ಆಯ್ಕೆ ಮಾಡಿಕೊಂಡ ಗಂಡು ಮತ್ತು ಹೆಣ್ಣಿನ ಪಾತ್ರಧಾರಿಗಳಿಗೆ ಥೇಟ್ ಹೆಣ್ಣು ಗಂಡಿನ ಅಲಂಕಾರ ಒಡವೆ ವಸ್ತ್ರಗಳನ್ನು ಹಾಕಿ ಊರೊಳಗಿಂದ ಓಲಗದೊಂದಿಗೆ ದಿಬ್ಬಣದ ಮೆರವಣಿಗೆ ಮಾಡಿ ಊರ ಮುಂದಿನ ಹಸೆ ಬರೆದು ಪೂಜಿಸಿದ ಜಾಗಕ್ಕೆ ಬಂದು ಗಂಡು ಹೆಣ್ಣಿಗೆ ಹೂವಿನ ಹಾರವನ್ನು ಹಾಕಿ ಹಸೆಯ ಮೇಲೆ ಕೂರಿಸಿ ಸೋಬಾನೆ ಹಾಡುಗಳೊಂದಿಗೆ ಓಲಗ ಡೋಲು ಬಡಿತ ಗಂಡು ಮಕ್ಕಳ ಕುಣಿತದೊಂದಿಗೆ ಶಾಸ್ತ್ರೋಕ್ತವಾಗಿ ಮದುವೆ ಶಾಸ್ತ್ರ ಮುಗಿಸಿ ಎಲ್ಲರ ಮನೆಯಿಂದ ಸಂಗ್ರಹಿಸಿದ್ದ ರಾಗಿ ಹಿಟ್ಟಿನಿಂದ ತಯಾರಿಸಿದ ರೊಟ್ಟಿಯನ್ನು ಪೂಜಿಸಿ ರೊಟ್ಟಿ ಚಟ್ನಿ ಹಾಗೂ ಬೇಯಿಸಿದ ಒಣಗಾಳನ್ನು ಮದುವೆ ಊಟವೆಂದು ಕೊಡುತ್ತಿದ್ದರು.
ಎಲ್ಲರ ಮನೆಯ ಹಿಟ್ಟನ್ನು ಒಂದೆಡೆ ಸೇರಿಸಿ ರೊಟ್ಟಿ ಮಾಡುತ್ತಿದ್ದರು ಇಲ್ಲವೆ ಎಲ್ಲರೂ ಅವರವರ ಮನೆಯಿಂದಲೇ ರೊಟ್ಟಿ ಮಾಡಿಕೊಂಡು ತರುತ್ತಿದ್ದರು. ಹಾಗೇ ಕಡ್ಲೆ ಹಿಟ್ಟಿಗೆ ಕಾಯಿ ತುರಿ ಬೆಲ್ಲ ಹಾಕಿ ಮದುವೆ ಸಿಹಿಯೆಂದು ಹಂಚುತ್ತಿದ್ದರು. ಎನೇ ಇರಲಿ ತಿಂಗ್ಳ ಮಾವನ ಮದುವೆಗೆ ರೊಟ್ಟಿ ಊಟವೇ ಮುಖ್ಯವಾಗಿರುತ್ತಿತ್ತು. ಊರಿನವರೆಲ್ಲಾ ಒಂದೆಡೆ ಸೇರಿ ಒಗ್ಗಟ್ಟಾಗಿ ಬಡವ ಬಲ್ಲಿದನೆನ್ನದೆ ತಿಂಗ್ಳ ಮಾವನ ಮದುವೆ ಮಾಡುತ್ತಿದ್ದುದು ಭಾವೈಕ್ಯತೆಯ ಸಂಕೇತವಾಗಿತ್ತು. ಹಾಗೂ ಇದೊಂಥರಾ ಮನರಂಜನೆ ಕೂಡಾ ಆಗಿತ್ತು. ಇದು ಹಿರಿಯರು ಕಿರಿಯರಿಗೆಲ್ಲ ಊರ ಹಬ್ಬವೇ ಆಗಿತ್ತು.ಪೇಟೆಯಿಂದ ಹೋದ ನಮಗೆ ಇದೆಲ್ಲವನ್ನು ನೋಡಿದಾಗ ಆಗುತ್ತಿದ್ದ ಖುಷಿಗೆ ಪಾರವೇ ಇಲ್ಲವಾಗಿತ್ತು.
ಇನ್ನು ನಮ್ಮೂರು ಹುಲ್ಲಳ್ಳಿಗೂ, ಅಮ್ಮನ ತೌರು ಹೊನ್ನಾವರಕ್ಕೂ ಫರ್ಲಾಂಗು ದೂರವಷ್ಟೇ. ನಮ್ಮೂರ ಬೋರೆಯ ದಾಟಿ ಹೊನ್ನಾವರದ ಕೆರೆ ದಾಟಿ ತೋಟದ ಸಾಲಲಿ ಹೋದ್ರೆ ನಮ್ಮಜ್ಜಿ ಊರು. ನಾವು ಅಪ್ಪನ ಊರಿಗೂ ಅಜ್ಜಿಯ ಊರಿಗೂ ನಡೆದುಕೊಂಡೇ ಓಡಾಡುತ್ತಿದ್ದೆವು. ರಜೆಯಲ್ಲಿ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಓಡಾಡುತ್ತಿದ್ದೆವು. ಏನೇ ಇರಲಿ ಮಂಗಾರು ಮಳೆ ಬಿದ್ದೊಡನೆ ಚಿಕ್ಕಪ್ಪ ಬಂದು ಅಜ್ಜಿ ಊರಿನಿಂದ short cut ನಲ್ಲಿ ಗದ್ದೆ ಬದುವಿನ ಮೇಲೆ ನನ್ನನ್ನು ಹೆಗಲ ಮೇಲೆ ಕೂರಿಸಿಕೊಂಡು ನಮ್ಮೂರು ಹುಲ್ಲಳ್ಳಿಗೆ ಕರ್ಕೊಂಡು ಹೋಗುತ್ತಿದ್ದರು. ಹಾಗೆ ಹೋಗುವಾಗ ಒಮ್ಮೆ ಜಾರಿ ನನ್ನನ್ನೂ ಬೀಳಿಸಿಕೊಂಡು ಬಿದ್ದದ್ದು ನನಗಿನ್ನೂ ಚನ್ನಾಗಿ ನೆನಪಿದೆ.

ಮುಂಗಾರು ಮಳೆ ಬಿದ್ದೊಡನೆ ಹೊಲ ಉಳುಮೆ ಮಾಡಿ ರಾಗಿ ಬಿತ್ತುವಾಗ ಮೊದಲ ಸಾಲಿಗೆ ನನ್ನಿಂದಲೇ ಮೊದಲು ರಾಗಿ ಬಿತ್ತನೆ ಮಾಡಿಸುತ್ತಿದ್ದರು . ಹಿರಿಯ ಹೆಂಗಸರುಗಳು ಸೀರೆಯ ಮಡಿಲಿಗೆ ಬಿತ್ತನೆ ರಾಗಿಯನ್ನು ಕಟ್ಟಿಕೊಂಡು ಕೈಯಲ್ಲಿ ಬಿತ್ತಿದರೆ ನನಗೆ ಸಗಣಿ ಗಂಜಲದಿಂದ ಸಾರಿಸಿದ ಬಿದಿರಿನ ಒಂದು ಪುಟ್ಟ ಕುಕ್ಕೆಯಲ್ಲಿ ಬಿತ್ತನೆ ರಾಗಿ ಮತ್ತು ಬಿತ್ತಲು ಸಡ್ಡೆಯನ್ನು ಕೊಟ್ಟು ಅದರೊಳಗಿನಿಂದ ಬಿತ್ತಿಸೋರು. ನಮ್ಮ ಚಿಕ್ಕಪ್ಪನಿಗೆ ನಾನು ಮನೆಗೆ ಹಿರಿಯ ಮಗಳೆಂದು ಅದೇನು ಸಂಭ್ರಮವೋ ಪ್ರೀತಿಯೋ ನನ್ನಿಂದಲೇ ಮೊದಲ ಬಿತ್ತನೆ ಮಾಡಿಸುತ್ತಿದ್ದ ಚಿತ್ರಣ ಈಗಲೂ ನನ್ನ ಕಣ್ಣಮುಂದೆ ಹಾದು ಹೋಗುತ್ತದೆ , ಕಣ್ಣಂಚು ಆನಂದದಿಂದ ತೇವವಾಗುತ್ತದೆ ಮನಸು ಅರ್ದ್ರಗೊಳ್ಳುತ್ತದೆ. ಆ ಭಾವುಕ ಸಂಬಂಧಗಳು ಮುಂದಿನ ಪೀಳಿಗೆಗೆ ಕಥೆಯಾಗಬಹುದಷ್ಟೇ.!
ಇಂದು ನಗರೀಕರಣ ಯಾಂತ್ರೀಕರಣ ತಾಂತ್ರಿಕತೆಯ ಭರದಲ್ಲಿ ಹಳ್ಳಿಗಳೆಲ್ಲ ನಗರಗಳಾಗಿ ಎಲ್ಲ ಕಾಂಕ್ರೀಟ್ ಮಯವಾಗಿ ಮಕ್ಕಳಿಗೆ ಭೂತಾಯ ಮಣ್ಣಿನ ಸ್ಪರ್ಷವೇ ಇಲ್ಲದಂತಾಗಿ , ಹಳ್ಳಿ ಹಬ್ಬಗಳು ದೇಸೀ ಆಟ ಊಟ ಮಾಯವಾಗಿ ಮುಂದೊಮ್ಮೆ ಇವೆಲ್ಲ ಇತಿಹಾಸ, ಕಥೆಗಳಾಗುವುದರಲ್ಲಿ ಸಂಶಯವಿಲ್ಲವೆನಿಸುತ್ತದೆ. ಗ್ರಾಮೀಣ ಬದುಕಿನ ಚಿತ್ರಣವೇ ಇಲ್ಲವಾಗಿ ಬೇಸಿಗೆ ರಜೆ ಕಳೆಯಲು ಈಗಾಗಲೇ ಸಮ್ಮರ್ ಕ್ಯಾಂಪುಗಳ ಮೊರೆ ಹೋಗಿದ್ದಾರೆ. ಹೊಲಮಾಳ, ಗದ್ದೆ, ಬೋರೆಗಳೆಲ್ಲ ಸೈಟುಗಳಾಗಿ ಹಳ್ಳಿಗಳೇ ಕಡಿಮೆಯಾಗುತ್ತಿದ್ದು, “ಭಾರತ ಹಳ್ಳಿಗಳ ದೇಶ, ದೇಶದ ಬೆನ್ನೆಲುಬು ರೈತ” ಎನ್ನುವ ಪಾಠದ ಸಾಲುಗಳು ಮರೆತು ಹೋಗಬಹುದೇ ಎನಿಸುತ್ತಿದೆ.! ಮೊನ್ನೆ ಓದುಗರೊಬ್ಬರು ನನ್ನ ಹಳೆಯ ಹಾಸನದ ಚಿತ್ರಣದ ಲೇಖನವನ್ನು ಓದಿ, ಮೇಡಂ ಹೆಂಚಿನ ಮನೆಗಳು ಮಣ್ಣಿನ ಅಂಗಳ ಯಾವುದೂ ಇಲ್ಲವಾಗಿ ಎಲ್ಲ ಕಾಂಕ್ರೀಟ್ ರಸ್ತೆಗಳು ಬಾಕ್ಸ್ ಚರಂಡಿಗಳಾಗಿ ಹಾದಿಯಲ್ಲಿ ಕೆಮ್ಮು ಬಂದರೆ ಉಗಿಯಲೂ ಎಲ್ಲೂ ಮಣ್ಣು ಸಿಗದಂತಾಗಿದೆ.!ಎಂದು ನೊಂದು ಕೊಂಡದ್ದು ನಿಜವೆನಿಸುತ್ತದೆ.
ಮುಂದೊಮ್ಮೆ ಅಂಗಡಿಯಲ್ಲೋ ಮಾಲ್ ಗಳಲ್ಲೋ ಮಣ್ಣನ್ನು ಕೊಂಡು ತಂದು ಮಕ್ಕಳಿಗೆ ಮಣ್ಣಿನ ಸ್ಪರ್ಷ ಅನುಭವಿಸಲು ಬಿಡಬೇಕಾಗಬಹುದು. ಮೊದಲ ಮಳೆ ಬಿದ್ದಾಗ ಬರುವ ಮಣ್ಣಿನ ಘಮ್ಮೆನ್ನುವ ಕಂಪನ್ನುಆಘ್ರಾಣಿಸಲು ಹತ್ತಿರದಲ್ಲಿ ಮಣ್ಣಿದ್ದರೆ ತಾನೇ?! ಆದರೂ ಹೊಲ ಗದ್ದೆ, ಹಳ್ಳಿ ಮಣ್ಣಿನ ಸ್ಪರ್ಷ ಸುಖವನ್ನು ಅನುಭವಿಸಿದ ನಮ್ಮ ಪೀಳಿಗೆಯೇ ಅದೃಷ್ಟವಂತ ಪೀಳಿಗೆಯೆನಿಸುತ್ತದೆ. ವಿನಾಶದತ್ತ ಸಾಗಿರುವ ಪರಿಸರ ಪಕೃತಿಯನ್ನುಳಿಸಲು ಇಂದು ಅದೆಷ್ಟೋ ವಿಚಾರವಂತರು ಕೆರೆ ಕಟ್ಟೆಗಳನ್ನು ಉಳಿಸಲು ಗಿಡ ಮರಗಳನ್ನು ಬೆಳಸಿ ಹಸಿರು ಉಳಿಸಲು ಟೊಂಕ ಕಟ್ಟಿ ತಂಡೋಪ ತಂಡವಾಗಿ ನಿಸರ್ಗದ ಅರಿವನ್ನು ಮೂಡಿಸಲು ಹೊರಟಿದ್ದು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ಎಂದಾದರೂ “ಮರಳಿ ಹಳ್ಳಿಗೆ ಮರಳಿ ಮಣ್ಣಿಗೆ” ಎಂಬ ಕಾಲ ಬರಬಹುದೇ ಎಂದು ಆಶಿಸುತ್ತೇನೆ.






ನಗರಿಕರಣದ ಅಬ್ಬರದಲ್ಲಿ ಗ್ರಾಮ ಭಾರತ ನಲುಗಿಹೋಗಿದೆ ಅಥವಾ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ, ಅದರ ಜೊತೆಗೆ ಪರಿಷೆ, ಜಾತ್ರೆ, ಸಂತೆ ಮುಂತಾದ ಗ್ರಾಮೀಣ ಸೊಬಗನ್ನು ಕಳೆದುಕೊಳ್ಳುತ್ತಿದೆ, ಮಾನವೀಯ ಸಂಬಂಧಗಳ ಸ್ವರೂಪ ಬದಲಾಗುತ್ತಿದೆ, ಪರಸ್ಪರ ಒಂದೆಡೆ ಸೇರುವುದು ಅಪರೂಪ ಆಗುತ್ತಿದೆ, ನಗರದ ಮಕ್ಕಳು ಓದಿ, ಒಳ್ಳೆಯ ಕೆಲಸಕ್ಕೆ ಸೇರುವುದು, ಹಣ ಗಳಿಕೆ ಮಾಡುವುದೇ ಜೀವನದ ಪರಮ ಉದ್ದೇಶ ಎಂಬoತಾಗಿದೆ, ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಕೈ ಹಿಡಿಯದೆ ಕೃಷಿಯನ್ನೇ ತ್ಯಜಿಸಿ ನಗರ ಪ್ರದೇಶಕ್ಕೆ ವಲಸೆ ಹೋಗಿ ಜೀವಸದೆ ಅನ್ಯ ಮಾರ್ಗವಿಲ್ಲದಂತಾಗಿದೆ, ಅತಿಯಾದ ನಗರಿಕರಣದಿಂದ ಭಾರತದ ಭೂಪಟದಿಂದ ಗ್ರಾಮಗಳೇ ಮಾಯವಾಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಿರುವಾಗ ಮಾನವ ಸಂಬಂಧಗಳಿಗೆ ಬೇರೆಯದೆ ವ್ಯಾಖ್ಯಾನ ಮಾಡುವ ಸಂಧರ್ಭಗಳು ಭವಿಷ್ಯದಲ್ಲಿ ಹೆಚ್ಚಾಗಿದೆ.
ಮಣ್ಣಿನ ವಾಸನೆಯ ಬರಹ. ಬರಹ ಓದಿ ತುಂಬಾ ತುಂಬಾ ಖುಷಿಯಾಯಿತು.ಧನ್ಯವಾದಗಳು ಮೇಡಂ ಅವರಿಗೆ.
ರಮೇಶ.ಪಟ್ಟಣ .kalaburagi
ಮಣ್ಣಿನ ವಾಸನೆಯ ಬರಹ. ಬರಹ ಓದಿ ತುಂಬಾ ತುಂಬಾ ಖುಷಿಯಾಯಿತು.ಧನ್ಯವಾದಗಳು ಮೇಡಂ ಅವರಿಗೆ.
ರಮೇಶ.ಪಟ್ಟಣ. kalaburagi