ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೇಲೂರು ರಘುನಂದನ್ ಕಾಲಂ : ಮಗಳು ಕುಡಿತದ ಚಟ ಬಿಡಿಸಿದಳು


ಬಾಗಲ ಕೋಟೆಯ ಮಹಾಲಿಂಗಪುರದ ವಾಸಿ ಅನಿಲ್ ದೇಸಾಯ. ವಯಸ್ಸು ಮೂವತ್ತೆಂಟು ವರ್ಷ. ವಿದ್ಯಾವಂತರೂ ಕೂಡ. ಪಿಗ್ಮಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಊರು ಮನೆಯಲ್ಲಿ ಸತ್ಯನಾರಯಣ ಪೂಜೆ ಇತರೆ ಪೂಜೆಗಳನ್ನು ಮಾಡುವ ಪೌರೋಹಿತ್ಯ ಸಹ ಮಾಡುತಿದ್ದವರು. ಹೀಗಿರುವ ಅನಿಲ್ ಅವರ ಬದುಕು ಸದಾ ಕುಡಿತದ ಮತ್ತಿನಲ್ಲಿ ಇದ್ದು ಬದುಕನ್ನು ದುಸ್ತರ ಮಾಡಿಕೊಂಡಿದ್ದರು. ಹಗಲೆನ್ನದೇ, ನಡು ಮಧ್ಯಾನ್ಹವೆನ್ನದೇ ಸದಾ ಮದ್ಯಪಾನಕ್ಕೆ ತನ್ನ ತಾ ಅರ್ಪಿಸಿಕೊಂಡುಬಿಟ್ಟಿದ್ದರು ಅನಿಲ್.
ಇವರ ಬದುಕನ್ನು ಕುಡಿತ ಚಟದಿಂದ ಹೊರಗೆ ಬರದಂತೆ ಬಂಧಿಸಿಬಿಟ್ಟಿತು. ಅನಿಲ್ ದೇಸಾಯಿ ಅವರಿಗೆ ಉಮಾಶ್ರೀ ಅವರೆಂದರೆ ತಾಯಿಗಿಂತ ಹೆಚ್ಚು. ಉಮಾಶ್ರೀ ಅವರನ್ನು ಕಂಡಾಗ ಮಗುವಂತೆ ಮುದುಡಿ ಮಡಿಲು ಸೇರಬೇಕು ಅಂತ ಅನ್ನಿಸುತ್ತಿತ್ತಂತೆ ಅವರಿಗೆ. ಹೀಗಿದ್ದಾಗ ಉಮಾಶ್ರೀ ಅವರು ಮಹಾಲಿಂಗ ಪುರಕ್ಕೆ ಬಂದಾಗಲೆಲ್ಲಾ, ಅವರೊಡನೆ ಮಾತಾಡಬೇಕಾದ ಸಂದರ್ಭ ಎದುರಾದಾಗಲೆಲ್ಲಾ ಮಾರು ದೂರ ನಿಂತು ಮಾತಾಡುತ್ತಿದ್ದರಂತೆ. ಅನಿಲ್ ದೇಸಾಯಿ ಅವರ ಬಗ್ಗೆ ಸಾಕಷ್ಟು ತಿಳಿದಿದ್ದ ಉಮಾಶ್ರೀ ಅವರೂ ಕೂಡ ಅನಿಲ್ ಅವರನ್ನು ಗಮನಿಸುತ್ತಲೇ ಇದ್ದರಂತೆ. ಸಾಕಷ್ಟು ಸಲ ಕುಡಿತದ ಚಟ ಒಳ್ಳೆಯದಲ್ಲ ಎಂಬ ಪಾಠವನ್ನು ಹೇಳಿದ್ದರಂತೆ ಕೂಡ. ಇಷ್ಟಾದರೂ ಅನಿಲ್ ಅವರು ಇದಕ್ಕೆ ಉಪ್ಪು ಸೊಪ್ಪು ಹಾಕಿರದೇ ಚಟದಿಂದ ಹೊರ ಬರಲು ಸಾಧ್ಯ ಆಗಿರಲೇ ಇಲ್ಲವಂತೆ. ಕುಡಿತದ ವ್ಯಸನ ತನ್ನ ಬದುಕಿಗೆ ಮಾರಕ ಅನ್ನುವ ಅಂಶ ತಿಳಿದಿದ್ದರೂ ಅದರಿಂದ ವಿಮುಖವಾಗಲು ಅನಿಲ್ ಅವರಿಗೆ ಸಾಧ್ಯವೇ ಆಗಿರಲಿಲ್ಲವಂತೆ. ಅನಿಲ್ ಅವರ ಬಗೆಗೆ ಉಮಾಶ್ರೀ ಅವರಿಗೂ ತುಂಬು ಪ್ರೀತಿ ಮತ್ತು ಮಮಕಾರಗಳಿದ್ದವು ಅನ್ನುವುದನ್ನು ಅನಿಲ್ ಅವರ ನಿಕಟವರ್ತಿಗಳು ಹೇಳುತ್ತಾರೆ. ಅನಿಲ್ ಮಾತುಗಳಲ್ಲೂ ಉಮಾಶ್ರೀ ಅವರ ಬಗೆಗಿನ ವಿಶ್ವಾಸ ಅರಳುವುದುದನ್ನು ಕಾಣಬಹದಾಗಿದೆ.
ಹೀಗೊಂದು ದಿನ ಮಹಾಲಿಂಗಪುರದಲ್ಲಿ ಉಮಾಶ್ರೀ ಅವರು ಅನಿಲ್ ಅವರನ್ನು ಒಳಗೊಂಡ ಯುವ ಸಮುದಾಯದ ಜೊತೆ ಮಾತುಕತೆ ಮಾಡುವ ಸಮಯದಲ್ಲಿ ಎಲ್ಲರ ಎದುರು ಅನಿಲ್ ಅವರಿಂದ ತನ್ನ ತಲೆಯ ಮೇಲೆ ಕೈ ಇಡಿಸಿಕೊಂಡು ಇನ್ನು ಮುಂದೆ ಕುಡಿಯುವುದಿಲ್ಲ ಎಂದು ಭಾಷೆ ಕೊಡು ಎಂದು ಕೇಳಿದರಂತೆ. ಅನಿಲ್ ಅವರಿಗೆ ತಕ್ಷಣ ಏನು ಮಾಡಬೇಕು ಎಂದು ತಿಳಿಯದೇ ಯಾವ ನಿರ್ಧಾರಕ್ಕೆ ಬರಬೇಕೆಂಬುದರ ಬಗ್ಗೆ ಗೊಂದಲಗಳು ಉಂಟಾದರೂ ತಾನು ನಂಬಿದ ಮತ್ತು ಗೌರವಿಸುವ ವ್ಯತಿತ್ವದ ಮಾತಿಗೆ ಬದ್ಧನಾಗಲೇ ಬೇಕಾದ ಗಳಿಗೆ ಸನಿಹ ಬಂದೇ ಬಿಟ್ಟಿತ್ತಂತೆ. ಕುಡಿತದ ವ್ಯಸನದಿಂದ ಬಳಲುತ್ತಿದ್ದ ಅರಿವು ಎಚ್ಚರಗೊಂಡು ಉಮಾಶ್ರೀ ಅವರಿಗೆ ಇನ್ನು ಮುಂದೆ ಕುಡಿಯುವುದಿಲ್ಲ ಎಂದು ಅನಿಲ್ ಭಾಷೆ ಕೊಟ್ಟರಂತೆ. ಇದೆಲ್ಲಾ ಆಗಿ ಈಗಾಗಲೇ ಸುಮಾರು ಎಂಟು ಹತ್ತು ತಿಂಗಳುಗಳು ಕಳೆದಿವೆ. ಅನಿಲ್ ಹೆಂಡದ ಅಂಗಡಿಯನ್ನು ತಿರುಗಿ ಕೂಡ ನೋಡಿಲ್ಲ ಅನ್ನುವುದನ್ನು ಮಹಾಲಿಂಗಪುರದ ಯುವ ಮಿತ್ರರು ಹೇಳುತ್ತಾರೆ.

“ಮೊದಲು ಸಿನೆಮಾ ನಟಿ ಅಂದುಕೊಂಡಿದ್ದೆ. ಒಳ್ಳೇ ನಟನೆ ಮಾಡುತ್ತಾರೆ. ಆಕೆ ಸಿನಿಮಾಲೋಕದ ತಾರೆ ಜನರ ಕಷ್ಟ ಸುಖಗಳಿಗೆ ಭಾಗಿ ಆಗುವುದು ತುಸು ಕಷ್ಟ ಅಂತಲೇ ಭಾವಿಸಿದ್ದೆ. ಇದನ್ನೆಲ್ಲಾ ಮೀರಿ ಯಾರು ಎಷ್ಟೇ ತುಳಿದರೂ ಗರಿಕೆಯಂತೆ ಮತ್ತೆ ಮತ್ತೆ ಚಿಗುರಿ ತೇರದಾಳ ಅನ್ನುವ ಕ್ಷೇತ್ರದ ಪ್ರೀತಿಯನ್ನು ಪ್ರೇಮದಿಂದ ಸಂಪಾದಿಸಿದರು. ಅದೇ ಪ್ರೇಮ ಅವರನ್ನು ಶಾಸಕಿಯನ್ನಾಗಿ ಮಾಡಿತು. ಅವರು ಶಾಸಕಿಯಾಗಿ ಮಾತ್ರ ನಿಲ್ಲದೆ ಈಗವರು ಸರ್ಕಾರವನ್ನು ಪ್ರತಿನಿಧಿಸುವ ಸಚಿವೆ. ಒಬ್ಬ ಮಹಿಳೆ ಯಾರೂ ಗಾಡ್ ಫಾದರ್ ಇಲ್ಲದೇ ಎಷ್ಟು ಎತ್ತರಕ್ಕೆ ಬೆಳೆಯಬಹುದೋ ಅಷ್ಟು ಎತ್ತರಕ್ಕೆ ಬೆಳೆದಿದ್ದಾರೆ ಅಂದುಕೊಂಡೆ. ಆದರೆ ಈಗ ಅವರ ಪ್ರೇಮದಿಂದ ನನ್ನ ಕುಡಿತದ ಚಟವನ್ನು ಬಿಡಿಸಿದ್ದಾರೆ. ಯಾವ ಔಷಧಿಗಳೂ ಮಾಡದ ಕೆಲಸವನ್ನು ಉಮಾಶ್ರೀ ಮೇಡಂ ಮಾಡಿದ್ದಾರೆ. ಅವರು ಈ ಕ್ಷೇತ್ರದ ಶಾಸಕಿ ಮಾತ್ರ ಅಲ್ಲ. ಸರ್ಕಾರದ ಸಚಿವೆ ಮಾತ್ರವಲ್ಲ. ನಮ್ಮಂತಹ ಅನೇಕರ ಬದುಕು ದಿಕ್ಕು ತಪ್ಪಿ ಜೀವನವನ್ನು ಹಾಳು ಮಾಡಿಕೊಂಡಿದ್ದವರಿಗೆ ಆಕೆ ಒಬ್ಬ ಮಾರ್ಗದರ್ಶಕ ಶಕ್ತಿ. ಅವರು ರಾಜಕೀಯದಲ್ಲಿ ಇನ್ನೂ ಎತ್ತರಕ್ಕೆ ಹೋಗಬೇಕು ಅನ್ನುವ ಮಹದಾಸೆ ಇದೆ ನನಗೆ. ನನಗೆ ಮಾತ್ರವಲ್ಲ ನಮ್ಮಂಥ ಅನೇಕ ಯುವ ಪಡೆಗೆ ಅದೇ ಬಯಕೆ ಇದೆ. ಪಾದರಸದಂತೆ ತೇರದಾಳ ಮತ ಕ್ಷೇತ್ರದಲ್ಲಿ ಸಂಚಲನ ಶಕ್ತಿ ತುಂಬಿದವರು ಅವರು. ನನ್ನೊಬ್ಬನಿಗೆ ಮಾತ್ರವಲ್ಲ ನನ್ನ ಹಾಗೇ ಅನೇಕ ಯುವ ಮಿತ್ರರಿಗೆ ಕುಡಿತದ ಚಟದಿಂದ ಹೊರ ಬರುವಂತೆ ಮಾಡಿದ್ದಾರೆ.
ಕ್ಷೇತ್ರದ ಎಲ್ಲಾ ಅಭಿವೃದ್ದಿಗಳ ಜೊತೆ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿ ಅರ್ಥಪೂರ್ಣ ಬದುಕು ಮಾಡಿಕೊಳ್ಳುವಂತೆ ಹೇಳಿಕೊಡುವದು ಒಬ್ಬ ತಾಯಿಗೆ ಮಾತ್ರ ಸಾಧ್ಯ. ಮನುಷ್ಯನಲ್ಲಿ ಪ್ರೀತಿ ತೋರಿಸಿ ಅವನ ಬದುಕನ್ನು ಅರ್ಥ ಮಾಡಿಸುವುದೂ ಕೂಡ ಒಬ್ಬ ಜನ ಪ್ರತಿನಿಧಿಯ ಕರ್ತವ್ಯ. ಅದನ್ನು ನಮ್ಮ ಉಮಾಶ್ರೀ ಅಮ್ಮನವರು ಮಾಡಿದ್ದಾರೆ. ಹಾಗಾಗಿ ತೇರದಾಳಕ್ಕೆ ಉಮಾಶ್ರೀ ಕೇವಲ ಶಾಸಕಿ, ಸಚಿವೆ ಮಾತ್ರ ಅಲ್ಲ. ಆಕೆ ಒಂದು ಶಕ್ತಿ. ರಾಜಕೀಯದ ಜೊತೆ ಜೊತೆಗೆ ಸಿನಿಮಾದಲ್ಲೂ ಅಭಿನಯಿಸಬೇಕು ಅನ್ನುವ ದೊಡ್ಡ ಆಸೆ ನಮಗೆಲ್ಲಾ ಇದೆ. ಯಾಕೆಂದರೆ ಆಕೆ ಕರ್ನಾಟಕದ ಮಹಾ ಕಲಾವಿದೆ. ಕೆಲಸದಿಂದಲೇ ಜನರ ಮನಸನ್ನು ಗೆದ್ದ ಪ್ರಾಮಾಣಿಕ ವ್ಯಕ್ತಿತ್ವ ಉಮಾಶ್ರೀ ಎಂದರೆ ಯಾವ ತಪ್ಪೂ ಇಲ್ಲ “ ಎಂದು ಅನಿಲ್ ದೇಸಾಯಿ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾ ಭಾವುಕರಾಗುತ್ತಾರೆ. ಈಗ ಮತ್ತೆ ತನ್ನ ಬದುಕನ್ನು ಹಸನುಗೊಳಿಸಿಕೊಂಡು ತನ್ನ ಮೂಲ ವೃತ್ತಿಯನ್ನು ಮಾಡುತ್ತಾ ಸಮಾಜಕ್ಕೆ ಬೇಕಾದ ವ್ಯಕ್ತಿಯಾಗಿದ್ದಾರೆ ಅನಿಲ್ ಅವರು. ಬದುಕಿನ ಬದಲಾವಣೆಗೆ ನೆರವಾಗುವ ಒಂದು ಸಣ್ಣ ಹುಲ್ಲುಕಡ್ಡಿ ಸಿಕ್ಕರೂ ಜೀವನವನ್ನು ಸರಿಪಡಿಸಿಕೊಂಡು ಅರ್ಥಪೂರ್ಣ ಮಾಡಿಕೊಳ್ಳಬಹುದು ಅನ್ನುವುದಕ್ಕೆ ಅನಿಲ್ ಅವರ ಬದುಕು ಉತ್ತಮ ಉದಾಹರಣೆ ಎನ್ನಬಹುದು.

****

ಭಾಗವತರು ಸಂಸ್ಥೆಯವರು ಉಮಾಶ್ರೀ ಅವರನ್ನು ಕುರಿತು ಮೂರು ದಿನಗಳ ರಂಗ ಉತ್ಸವ ಮಾಡಿದ್ದರ ನೆನಪನ್ನು ಈ ಹಿಂದೆ ಕೂಡ ಹಂಚಿಕೊಂಡಿದ್ದೆ. ಆ ಉತ್ಸವದಲ್ಲಿ ಉಮಾಶ್ರೀ ಅವರು ಅಭಿನಯಿಸಿದ ನಾಟಕಗಳ ಪ್ರದರ್ಶನ. ಅವರ ಅಭಿನಯದ ಬಗೆಗೆ ಮಾತುಕತೆ ಮತ್ತು ಉಮಾಶ್ರೀ ಅವರೇ ಸ್ವತಹ ತಮ್ಮ ಬದುಕಿನ ಕೆಲ ಅನುಭವಗಳನ್ನು ಹಂಚಿಕೊಳ್ಳುವ ಒಂದು ಅರ್ಥಪೂರ್ಣ ಕಾರ್ಯಕ್ರಮ. ಒಡಲಾಳ, ಹರಕೆಯ ಕುರಿ, ಸಂಸಾರದಲ್ಲಿ ಸರಿಗಮ, ಬಸ್ ಕಂಡಕ್ಟರ್, ಪೌರಾಣಿಕ ಆಂಜನೇಯನ ಪಾತ್ರವುಳ್ಳ ನಾಟಕಗಳು ಇದ್ದವು. ಕಡೇ ದಿನ ಉಮಾಶ್ರೀ ಅವರು ಸಂವಾದದಲ್ಲಿ ಭಾಗಿಯಾಗಿ ತಮ್ಮ ಅನುಭವಗಳನ್ನು ರಂಗಪ್ರೇಮಿಗಳ ಜೊತೆ ಹಂಚಿಕೊಳ್ಳುವ ಕಾರ್ಯಕ್ರಮ ಆದಾಗಿತ್ತು. ಆ ಕಾರ್ಯಕ್ರಮದಲ್ಲಿ ‘ನನ್ನ ಮಗಳು ಕುಡಿತದ ಚಟ ಬಿಡಿಸಿದಳು’ ಅನ್ನುವ ಮಾತನ್ನು ಉಮಾಶ್ರೀ ನೆರದಿದ್ದವರ ನಡುವೆ ಹಂಚಿಕೊಂಡರು. ತೆರೆದ ಪುಸ್ತಕದಂತೆ ತನ್ನ ಇಡೀ ಬದುಕನ್ನು ನಮ್ಮೆದುರು ಹರಹಿದ ಉಮಾಶ್ರೀ ಅವರ ಮಾತು ಇವತ್ತಿನ ತನಕ ನನ್ನಲ್ಲಿ ಕಾಡುತ್ತಲೇ ಇತ್ತು. ಈ ವಿಷಯವಾಗಿ ಉಮಾಶ್ರೀ ಅವರ ಮಗಳು ಡಾ. ಗಾಯತ್ರಿ ರಮೇಶ್ ಅವರನ್ನು ಕೇಳಿದಾಗ ಅಮ್ಮನ ಅಸಹಾಯಕ ಸ್ಥಿತಿಯನ್ನು ತನ್ನ ಮಾತುಗಳಲ್ಲಿ ಹೀಗೆ ನೆನಪಿಸಿಕೊಳ್ಳುತ್ತಾರೆ,
“ನನಗೆ ಚೆನ್ನಾಗಿ ನೆನಪಿದೆ. ನಾನು ಮೂರನೇ ಕ್ಲಾಸ್ ಇರಬೇಕು. ಸೋಮೇಶ್ವರ ನಗರದಲ್ಲಿ ಅಜ್ಜಿ ತಾತನ ಮನೆಯಲ್ಲಿ ನಾನು ನನ್ನ ತಮ್ಮ ಬಾಬು ಇದ್ವಿ. ಅಮ್ಮ ಜಯನಗರದ ಒಂದು ಹಳೇ ಮನೆಯಲ್ಲಿ ಇದ್ದರು. ನಾಟಕದ ಓಡಾಟ ಸಿನೆಮಾ ಹೀಗೆ ಹೆಚ್ಚು ಮಕ್ಕಳ ಕಡೆ ಗಮನ ಕೊಡಲು ಸಾಧ್ಯ ಆಗಲ್ಲ ಎಂದು ನಮ್ಮಿಬ್ಬರನ್ನು ಅಜ್ಜಿ ತಾತನ ಬಳಿ ಬಿಟ್ಟಿದ್ದರು. ಒಂದಿನ ನಮ್ಮ ಅಜ್ಜಿಯ ಬಳಿ ಎಂಟಾಣಿ ದುಡ್ಡು ಕೇಳಿದೆ. ಅದಕ್ಕವರು ಕೋಪಗೊಂಡು ‘ನನ್ ಹತ್ರ ಏನ್ ಕೇಳ್ತೀಯೆ. ನಿಮ್ಮ ಅಮ್ಮನ ಹತ್ರ ಹೋಗಿ ಕೇಳು. ಇಲ್ಲಾ ಅಂದ್ರೆ ಅವಳು ಕುಡ್ದು ಕುಡ್ದು ಸತ್ತೊಗ್ತಾಳೆ’ ಅಂದ್ರು. ನನಗೆ ಅಳು ತಡೆಯಲು ಆಗಲಿಲ್ಲ. ಈಗಲೇ ಅಮ್ಮನ ಹತ್ತಿರ ಹೋಗಿ ಅಜ್ಜಿ ಹೇಳಿದ ವಿಷಯವನ್ನು ಹೇಳಿ ಬಿಡಬೇಕು ಅಂದುಕೊಂಡು ಅಮ್ಮನ ಬಳಿಗೆ ಹೊರಟೆ. ತಾತನ ಜೊತೆ ಸೋಮೇಶ್ವರ ನಗರದಿಂದ ಜಯನಗರಕ್ಕೆ ನಡೆದುಕೊಂಡು ಹೋಗಿ ಬರುತ್ತಿದ್ದ ರಸ್ತೆಯನ್ನು ನೆನಪಿಸಿಕೊಂಡು ನನ್ನ ತಮ್ಮ ಬಾಬು ಕರ್ಕೊಂಡು ಸೀದಾ ನಡೆಯುತ್ತಾ ಹೋದೆ. ರಸ್ತೆ ಪೂರ್ತಿ ಗೊತ್ತಾಗಲಿಲ್ಲ. ರಸ್ತೆ ತಪ್ಪಿಸಿಕೊಂಡು ಬಿಟ್ಟೆ ಅನ್ನೋ ಭಯದಿಂದ ಮತ್ತೆ ಹೋದ ದಾರಿಯಲ್ಲೇ ನಾವಿಬ್ಬರು ವಾಪಸ್ ಮನೆಗೆ ಬಂದ್ವಿ. ನನ್ನ ತಮ್ಮ ಬಾಬು ನಡೆದ ವಿಷಯವನ್ನೆಲ್ಲಾ ನಮ್ಮ ಅಜ್ಜಿಗೆ ಹೇಳಿಬಿಟ್ಟ. ಯಾಕಂದ್ರೆ ಅವನು ಅಜ್ಜಿಯ ಪ್ರೀತಿಯ ಮೊಮ್ಮೊಗ ಆಗಿದ್ದ, ಏನೇ ನಡೆದ್ರೂ ಎಲ್ಲವನ್ನೂ ಅಜ್ಜಿಗೆ ಹೇಳಿಬಿಡುತ್ತಿದ್ದ ಅವನು. ನನ್ನ ತಮ್ಮನ ಮಾತುಗಳನ್ನು ಕೇಳಿದ ಅಜ್ಜಿಯಿಂದ ನನಗೆ ಸರಿಯಾಗಿ ಪೂಜೆಯೂ ಆಯಿತು ಅವತ್ತು. ಇದನ್ನೆಲ್ಲಾ ಗಮನಿಸಿದ ನಮ್ಮ ತಾತ ನಮ್ಮಿಬ್ಬರನ್ನು ನಮ್ಮ ಅಮ್ಮನ ಬಳಿ ಕರೆದುಕೊಂಡು ಹೋದರು. ನನಗೆ ಇನ್ನೂ ಚೆನ್ನಾಗಿ ನೆನಪಿದೆ ನಾವು ಹೋಗುವ ಹೊತ್ತಿಗೆ ಸುಮಾರು ಎಂಟು ಗಂಟೆ ಹೊತ್ತಾಗಿತ್ತು. ಅಷ್ಟು ಹೊತ್ತಿಗಾಗಲೇ ಅಮ್ಮ ಒಬ್ಬರೇ ಕುಡಿಯುತ್ತಾ ಕೂತಿದ್ದರು. ಆಗ ಅಮ್ಮ ಏನು ಮಾಡುತ್ತಿದ್ದಾರೆ ಎಂದು ತಿಳಿಯಲಿಲ್ಲ. ಅಜ್ಜಿ ಕುಡಿಯುವ ವಿಷಯ ಹೇಳಿದಾಗಲೂ ಏನೂ ಎಂದು ಗೊತ್ತಾಗಿರಲಿಲ್ಲ. ನಾನು ಇನ್ನೂ ಮಗು. ಅಮ್ಮನ ಏನು ಮಾಡುತ್ತಿದ್ದಾರೆ ಎಂದು ತಿಳಿಯದೇ ಅಳಲು ಶುರು ಮಾಡಿದೆ. ‘ಯಾಕೆ ಬಂದಿರಿ ?’ ಈಗ ಎಂದು ಅಮ್ಮ ಕೇಳಿದರು. ಅದಕ್ಕೆ ಅಜ್ಜಿಯ ಬಳಿ ಎಂಟಾಣಿ ಕೇಳಿದೆ. ಅದಕ್ಕೆ ಅಜ್ಜಿ ದುಡ್ಡು ಕೊಡದೇ ‘ನೀನು ಕುಡ್ದು ಕುಡ್ದು ಸಾಯ್ತೀಯಂತೆ’ ಅಂತ ಹೇಳಿದರು. ಹೌದೇನಮ್ಮ, ನೀನು ಕುಡಿದು ಕುಡಿದು ಸಾಯ್ತೀಯೇನಮ್ಮ ? ಎಂದು ಮುಗ್ಧವಾಗಿ ಕೇಳಿ ಒಂದೇ ಸಮನೇ ಅಳಲು ಶುರು ಮಾಡಿದೆ.
ನನ್ನ ಮಾತುಗಳನ್ನು ಕೇಳಿದ ಅಮ್ಮನಿಗೆ ಏನನ್ನಿಸಿತೋ ಏನೋ ಗೊತ್ತಿಲ್ಲ. ಅವತ್ತೇ ‘ಇನ್ನು ಮುಂದೆ ನಾನು ಕುಡಿಯಲ್ಲ ಮಗಳೇ’ ಎಂದು ನನ್ನ ತಲೆ ಮೇಲೆ ಕೈ ಇಟ್ಟು ಪ್ರಮಾಣ ಮಾಡಿದರು. ಅವರ ಬದುಕಿನ ಒತ್ತಡಗಳನ್ನು ಮರೆಯುವ ಸಲುವಾಗಿ ಕುಡಿಯುತ್ತಿದ್ದರು ಅನ್ನಿಸುತ್ತೆ ಈಗ. ಈ ಘಟನೆ ಆದ ಮೇಲೆ ಅಮ್ಮಾ ಎಂದೂ ಆ ರೀತಿ ನಡೆದುಕೊಳ್ಳಲಿಲ್ಲ. ಕುಡಿಯಲೂ ಇಲ್ಲ. ಇಡೀ ಬದುಕನ್ನು ನನ್ನ ಮತ್ತು ನನ್ನ ತಮ್ಮನ ಬದುಕನ್ನು ರೂಪಿಸಲು ಮುಡಿಪಾಗಿ ಇಟ್ಟರು. ಅವತ್ತು ನಮ್ಮ ಅಮ್ಮ ನಡೆದುಕೊಂಡ ರೀತಿಯಾಗಲಿ, ಅಜ್ಜಿ ಹೇಳಿದ ಮಾತುಗಳಾಗಲಿ ಏನೂ ಅರ್ಥ ಆಗಿರಲಿಲ್ಲ. ಈಗ ನಮ್ಮ ಅಮ್ಮನ ಬದುಕನ್ನು ನೋಡಿದರೆ ಅವರು ಎಷ್ಟೆಲ್ಲಾ ಕಷ್ಟಪಟ್ಟಿದ್ದಾರೆ ನಮಗಾಗಿ ಎಂದು ತಿಳಿಯುತ್ತದೆ. ಅಂದು, ತನ್ನ ಪುಟ್ಟ ಮಗುವಿನ ಮನಸಿಗೆ ನೋವಾಗಿದೆ ಎಂದು ತಿಳಿದು ತನಗೆ ಅಂಟಿಕೊಂಡಿದ್ದ ದುಶ್ಚಟದಿಂದ ದೂರ ಸರಿದರು. ಇಂದು ಇಡೀ ಸಮಾಜವನ್ನು ತಿದ್ದಿ ತೀಡುವ ಜಾಗದಲ್ಲಿ ಇದ್ದಾರೆ. Yes, she is really great” ಎಂದು ಉಮಾಶ್ರೀ ಅವರ ಮಗಳು ಗಾಯತ್ರಿ ರಮೇಶ್ ಅವರು ತನ್ನ ಅಮ್ಮನ ಕುಡಿತದ ಬಗೆಗಿನ ನೆನಪುಗಳನ್ನು ಬಿಚ್ಚಿಡುತ್ತಾ ಕಣ್ಣು ತೇವ ಮಾಡಿಕೊಂಡು ಮೌನಕ್ಕೆ ಜಾರುತ್ತಾರೆ.

****

ಉಮಾಶ್ರೀ ಅವರ ಒಂದೊಂದು ಕಥೆಯನ್ನು ಹೇಳುವ ಘಟನೆಗಳು ಮತ್ತೊಬ್ಬರ ಬದುಕಿಗೆ ಮಾದರಿಯಾಗಿ ನಿಂತು ಬಿಡುತ್ತದೆ. ಅಂದು ತನ್ನ ಅಸಹಾಯಕತೆಗಳನ್ನೂ ಮೀರಲು ಮತ್ತು ಬಹು ಬೇಗ ಒದಗಿದ ಒಂಟಿತನವನ್ನು ಮರೆಯಲು ಕುಡಿತದ ದಾಸ್ಯಕ್ಕೆ ಉಮಾಶ್ರೀ ಅವರೂ ಕೂಡ ಬಲಿಯಾಗಿದ್ದರು. ತನ್ನ ಪುಟಾಣಿ ಮಗುವಿನ ಮಾತು ತನ್ನ ಅರಿವನ್ನು ಮತ್ತು ತಿಳುವಳಿಕೆಯನ್ನು ಎಚ್ಚರಿಸಿ ಬಾಳಿನ ಬಂಡಿಯನ್ನು ಸರಿ ಮಾಡಿಕೊಂಡ ದಿಟ್ಟ ಹೆಣ್ಣು ಮಗಳು ಉಮಾಶ್ರೀ. ಮಿತಿಗಳೇ ಇಲ್ಲದ ಜೀವಿಗಳು, ಮನುಷ್ಯ ಈ ಜಗತ್ತಿನಲ್ಲಿ ಯಾರೂ ಇಲ್ಲ. ಇರಲೂ ಸಾಧ್ಯವಿಲ್ಲ ಕೂಡ. ಇಷ್ಟರ ನಡುವೆ ತನ್ನ ಮಿತಿಗಳನ್ನು ಗುರುತಿಸಿಕೊಂಡು ಸರಿಯಾದ ದಾರಿಯಲ್ಲಿ ನಡೆಯುವ ವ್ಯಕ್ತಿ ಬದುಕನ್ನು ಧನಾತ್ಮಕವಾಗಿ ರೂಪಿಸಿಕೊಂಡ ಹೆಣ್ಣು ಮಗಳು ಉಮಾಶ್ರೀ ಅವರು. ಕನಸುಗಳನ್ನು ತನ್ನೊಳಗೆ ಬಿತ್ತಿಕೊಳ್ಳುತ್ತಾ ಅದನ್ನು ಮಹತ್ವಾಕಾಂಕ್ಷೆಯಾಗಿ ಕಟ್ಟಿಕೊಳ್ಳುತ್ತಾರೆ. ಅದರ ಮೂಲಕ ತನ್ನ ಬದುಕನ್ನು ಮತ್ತು ತಾನು ನಂಬಿದವರ ಬದುಕನ್ನು ಸರಿಯಾದ ಕ್ರಮದಲ್ಲಿ ನಡೆಯುವಂತೆ ನೋಡಿಕೊಳ್ಳುತ್ತಾರೆ. ಉಮಾಶ್ರೀ ಅನ್ನುವ ವ್ಯಕ್ತಿ ಬಹು ದೊಡ್ಡ ವ್ಯಕ್ತಿತ್ವ ಆಗುತ್ತಲೇ ಸಮಾಜವನ್ನು ಕೂಡ ಕಟ್ಟುವಲ್ಲಿ ಬದ್ಧತೆಯಿಂದ ದುಡಿಯುತ್ತಿದ್ದಾರೆ ಅನ್ನುವುದು ಸತ್ಯ. ಹಾಗಾಗಿ ಅನಿಲ್ ದೇಸಾಯಿ ಅನ್ನುವಂಥಹ ಅನೇಕರಲ್ಲಿ ಕುಡಿತದ ಚಟವನ್ನು ಬಿಡಿಸುವ ತಾಕತ್ತು ಪಡೆದುಬಿಡುತ್ತಾರೆ. ಅನುಭವ ತುಂಬಿದ ಬದುಕು ಜಗತ್ತಿನ ಪ್ರತಿಬಿಂಬವಾಗಿ ರೂಪುಗೊಳ್ಳುತ್ತಾ ಹೋಗುತ್ತದೆ. ಹಾಗೆಯೇ ಜಗತ್ತು ಕೂಡ ಅನುಭವಸ್ಥ ವಕ್ತಿತ್ವವನ್ನು ತನ್ನಲ್ಲಿ ತುಂಬಿಕೊಳ್ಳುತ್ತಾ ಹೋಗುತ್ತದೆ. ತನ್ನ ಸುತ್ತ ಮುತ್ತಲಿನ ಪರಿಸರದಲ್ಲಿ ತನ್ನನ್ನು ಪ್ರೀತಿಸುವ ಜೀವಗಳನ್ನು ಏನೂ ಭಾದಿಸಬಾರದು ಎಂದು ಅಂಥವರನ್ನು ಮಡಿಲಿಗೆ ಹಾಕಿಕೊಂಡು ಕಾಪಾಡುವುದು ತಾಯ ಶಕ್ತಿ ಅಲ್ಲದೆ ಬೇರೆಯದ್ದು ಅಂತ ಅನ್ನಿಸುವುದೇ ಇಲ್ಲ. ಇದೆಲ್ಲದಕ್ಕೂ ಅಂದು ತಾನು ಮಗಳ ಮೇಲೆ ಮಾಡಿದ ಪ್ರಮಾಣ ಇಂದು ಅನಿಲ್ ದೇಸಾಯಿ ಅವರಿಂದ ತನ್ನ ಮೇಲೆ ಪ್ರಮಾಣ ಮಾಡಿಸುವಂತೆ ಮಾಡುತ್ತದೆ. ಇಲ್ಲೆಲ್ಲಾ ಹರಿದಾಡುವ ಬಹಳ ದೊಡ್ಡ ಶಕ್ತಿ ಎಂದರೆ ಅಲ್ಲಮನ ‘ಅರಿವೇ ಗುರು’ ಏನಂತೀರಿ ?
 

‍ಲೇಖಕರು G

2 August, 2015

ನಿಮಗೆ ಇವೂ ಇಷ್ಟವಾಗಬಹುದು…

7 Comments

  1. ಮಮತ

    ಬಹಳ ಹೃದಯಸ್ಪರ್ಶಿ. ತಪ್ಪು ತಿದ್ದಿಕೊಂಡು , ಚಟಗಳಿಂದ ಬಿಡಿಸಿಕೊಂಡು ನಿರಾಳವಾಗುವ ಕ್ಷಣಗಳೇ ಬದುಕಿನ ಭಾಗವಾಗುತ್ವೆ. . ಅದಕ್ಕೆ ಪೂರಕವಾಗಿ ಘನ ವ್ಯಕ್ತಿತ್ವದ ಮಾರ್ಗದರ್ಶನವೂ ಮುಖ್ಯವಾಗುತ್ತೆ. ಈ ಸಂದರ್ಭಗಳು ಮಾತ್ರ ಕೆಲವೊಮ್ಮೆ ಅಪರೂಪವಾಗುತ್ತೆ.

  2. Pramod Hadimani

    Hats of to Amma..love u for your work..

  3. ನಿಮ್ಮ ದತ್ತು ಮಗಳು

    ಉಮಾಶ್ರೀ ಅಮ್ಮ
    ಕಷ್ಟಗಳ ಮಲೆಯನ್ನೆ ಕೊರಳಲ್ಲಿ ಧರಿಸಿಕೊಂಡು ಮತ್ತೊಬ್ಬರ ಕಷ್ಟಗಳಲ್ಲಿ ಬ್ಹಾಗವಹಿಸಿ ಅದ್ರಿಂದ ಅವರನ್ನು ಮುಕ್ತಿಹೊಳಿಸುವ ಯಲ್ಲಾ ಪ್ರಯತ್ನ ಮಾಡುತ್ರ್ಹಾರೆ
    ಈ ಉಮಾಶ್ರೀ ಅಮ್ಮ ಅಧುನಿಕ ಮೇರಿ ಅಮ್ಮವಾ????
    ಮೇರಿ ಅಮ ಎಲ್ಲರ ಕಷಗಳನು ನಿವಾರಣೆ ಮಾಡುತ್ತಿದ್ದಳು ಹಾಗೆ ಈ ಅಮ್ಮ ಕೂಡ ವಿಶ್ವವಿದ್ದ್ಯಾಯಲಯಗಳು ಹಾಗು ಸಂಘ್ಹ ಸಂಸ್ಟೆಗಳಿಗೆ ಇವರಿಗೆ ಬೆರಿದು ಹಾಗು ಡೊಕ್ಟರೇಟ ಕೊಟ್ಟು ಸನ್ಮ್ಠಾಮ ಮಡಲು ಇನ್ನು ಯಾಕೆ ವಿಳಂಬ್ಹವೋ ತಿಳಿಯ್ದು
    ಮಹಿಳಾ ಕನ್ಣಣಿ ಎಂದು ಬೇಗ ಬೀರಿದು ಸಿಗಲಿ ಅಮನಿಗೆ
    ಅಮ ನನ್ನನು ದತ್ತು ಮಗಳನ್ನಾಗಿ ಮಾಡಿಕೊಳ್ಳಿ
    ನಿಮ್ಮಾ ಅಭ್ಹಿಮಾನಿ
    ದೇವಿಯ್ ಆಶಿರ್ವಾದ ಸದಾ ನಿಮಗಿರಲಿ

    • Natarajappa

      Fine

  4. ಪ್ರವೀಣ ಗೆಜ್ಜಿ

    ಮುಂಚೆ ಅಭಿವೃದಿ ಎಂದರೆ ಗುಜರಾತಗೆ ಹೋಗಿ ಬನ್ನಿ ಎನ್ನುತ್ತಿದ್ದರು ಈಗ ಅಭಿವೃದಿ ಎಂದರೆ ತೇರದಾಳಕ್ಕೆ ಹೋಗಿ ಬನ್ನಿ ಎನ್ನುತ್ತಿದ್ದಾರೆ ಆ ಕ್ಷೇತ್ರದಲ್ಲಿ ಅಮ್ಮ ರಾಜಕೀಯವಾಗಿ ಮಾತ್ರ ಅಲ್ಲ ಸರಳತೆ, ಮಾನವೀಯತೆ, ಮಮತಾಮಯಿ, ನೊಂದವರ ಚಿಲುಮೆ ಆಗಿ ರೈತರ ಆಪ್ತ ಸ್ನೇಹಿತೆಯಾಗಿ ಒಟ್ಟಾರೆಯಾಗಿ ಒಂದು ಶಕ್ತಿಯಾಗಿ ಅಮ್ಮ ತೇರದಾಳ ಕ್ಷೇತ್ರದ ಜನರ ಮನ ಹೊಕ್ಕಿದಾರೆ ….

  5. suresh rajamane, rannabelagali

    ತುಂಬಾ ಸೊಗಸಾಗಿ ಬಿಂಬಿಸಿದ್ದಿರಾ ಸರ್.
    ನಿಮ್ಮ ಬರಹದ ರೀತಿ ತುಂಬಾ ಹಿಡಿಸುತ್ತದೆ ಸರ್.
    ಸೂಪರ್.

  6. ರಮೇಶ ಎಸ್ ಕಂಕಣವಾಡಿ

    ತುಂಬಾ ಅದ್ಬತವಾಗಿ ಬಿಂಬಿತವಾಗೆದೆ ಸರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading