ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೇಲೂರು ರಘುನಂದನ್ ಕಟ್ಟುಪದ ಈಗ ’ಭೂಮಿ’ಯಾಗಿ…

– ಅಮರೇಂದ್ರ ಶೆಟ್ಟಿ


ಬೇಲೂರು ರಘುನಂದನ್ ಸುಮಾರು 400 ಕ್ಕೂ ಹೆಚ್ಚು ಕಟ್ಟುಪದಗಳನ್ನು ಬರೆದಿದ್ದಾರೆ. ಆಧುನಿಕ ವಚನಗಳನ್ನು ಕಟ್ಟುಪದಗಳು ಅಂತ ಕರೆಯುವ ಇವರು ಸಂವೇದನಾ ಶೀಲ ಕವಿತೆಗಳನ್ನು ಮತ್ತು ವಚನಗಳನ್ನು ಕಟ್ಟಿಕೊಡುತ್ತಿದ್ದಾರೆ. ಈಗ ಇವರ ಕಟ್ಟುಪದಗಳನ್ನು ಆಧರಿಸಿ ಭೂಮಿ ಅನ್ನುವ ನಾಟಕ ರಂಗರೂಪವಾಗುತ್ತಿರುವುದು ಖುಷಿಯ ವಿಷಯ. ನೂರೊಂದು ವಚನಗಳು, ಅರಿವು ತೊರೆ , ಬೆತ್ತಲು ಮತ್ತು ಅಮ್ಮ ಅನ್ನುವ ಕಟ್ಟುಪದ ಸಂಕಲನಗಳು ಪ್ರಕಟಗೊಂಡಿವೆ. ಆಧುನಿಕ ವಚನಗಳನ್ನು ಆಧರಿಸಿದ ಮೊದಲ ರಂಗ ಪ್ರಯೋಗ ಇದಾಗಿದ್ದು ಅನೇಕ ಸಾಧ್ಯತೆಗಳಿಂದ ಹೊಸ ಗ್ರಹಿಕೆಗಳಿಂದ ಹೆಣ್ಣನ್ನು ಕಟ್ಟಿಕೊಡುವ ಪ್ರಯತ್ನ ಇದಾಗಿದೆ. ಕಾವ್ಯ ರಂಗಭೂಮಿ ಸಿನೆಮಾ ಹೀಗೆ ಎಲ್ಲಿ ಸಾಧ್ಯವೋ ಅಲ್ಲೆಲ್ಲಾ ಯುವಕರಿಗೆ ಕಾಜಾಣದ ಮೂಲಕ ಸ್ಪೇಸ್ ಮಾಡಿಕೊಡುತ್ತಿರುವ ಬೆಲೂರರು ರಂಗ ಪಯಣ ಅನ್ನುವ ಯುವ ಉತ್ಸಾಹಿರಾಜಗುರು ಮತ್ತು ನಯನ ಸೂಡ ಅವರ ಕೈಗೆ ಈ ನಾಟಕದ ಪರಿಕಲ್ಪನೆಯನ್ನು ಕೊಟ್ಟು ಯುವ ಪ್ರತಿಭೆಯನ್ನು ಅನಾವರಣ ಮಾಡಲು ಪ್ರಯತ್ನಿಸಿದ್ದಾರೆ.

ಹೆಣ್ಣಿನ ಸಂಕಟ, ತಳಮಳ, ಕನಸುಗಳನ್ನೇ ಕೇಂದ್ರ ಕಾಳಜಿಯಾಗಿಟ್ಟುಕೊಂಡ ಕಾವ್ಯದ ರಚನೆ ಬೇಲೂರರ ವೈಶಿಷ್ಟ್ಯ. ಹೆಣ್ಣಿನ ಅಂತರಂಗದ ತಾಕಲಾಟಗಳನ್ನು ಹೆಣ್ಣು ಮಾತ್ರ ಕಾಣಬಲ್ಲಳು, ಹೆಣ್ಣು ಮಾತ್ರವೇ ಶಕ್ತವಾಗಿ ಅಭಿವ್ಯಕ್ತಿಸಬಲ್ಲಳು ಎನ್ನುವ ಗ್ರಹೀತಗಳನ್ನು ಮುರಿಯುವ ಸಂಕಲ್ಪ ತೊಟ್ಟಂತಿರುವ ಬೇಲೂರರು, ಹೆಣ್ಣಿನ ಮನೋಲೋಕವನ್ನು ಪ್ರೇಮಲ ಮನಸ್ಸಿನ ಗಂಡು ಕೂಡ ಅರ್ಥ ಮಾಡಿಕೊಳ್ಳಬಲ್ಲ ಎನ್ನುವ ತಾತ್ವಿಕತೆಯನ್ನು ಮುಂದಿಡುತ್ತಾರೆ. ಈ ಹೆಂಗರುಳಿನ ಕವಿಗೆ ಹೆಣ್ಣಿನ ಬಗೆಗಿನ ಲೋಕ ಗ್ರಹಿಕೆಗಳನ್ನೇ ಮರು ರೂಪಿಸಿಬೇಕೆನ್ನುವ ತವಕ. ಅವಳ ವ್ಯಕ್ತಿತ್ವ ಚಿತ್ರಗಳನ್ನು ಹೊಸ ಜೀವಂತಿಕೆಯ ಹೊಸ ಅರ್ಥ ಸಾಧ್ಯತೆಯ ರೇಖೆಗಳ ಮೂಲಕವೇ ಮೂಡಿಸಬೇಕು ಎನ್ನುವ ತುಡಿತ. ಅವರ ಕಾವ್ಯದಲ್ಲಿ ಹತ್ತು ಹಲವು ರೂಪಗಳಲ್ಲಿ ಹೆಣ್ಣು ಮಾತ್ರ ಓಡಾಡುತ್ತಾಳೆ. ಆದ್ದರಿಂದಲೇ ಅವರ ಕಾವ್ಯವು ಗತ, ವರ್ತಮಾನ ಹಾಗೂ ಭವಿಷ್ಯಗಳಲ್ಲಿ ಸರಿದಾಡುತ್ತ ಹೆಣ್ಣಿನ ಕಾಲಾತೀತ ಪ್ರಸ್ತುತತೆಯನ್ನು ಮಂಡಿಸಲೆತ್ನಿಸುತ್ತದೆ. ಆದರೆ ಅದೊಂದು ದೊಡ್ಡ ಸವಾಲಿನ ಹಾಗೂ ತುಂಬ ಸಂಕೀರ್ಣವಾದ ಕೆಲಸ. ಹಾಗಾಗಿಯೇ ತಾನು ಕಟ್ಟಲೆತ್ನಿಸುತ್ತಿರುವ ಕಾವ್ಯ ಹಾಗೂ ಕಾವ್ಯದೊಳಗಿನ ಹೆಣ್ಣಿನ ಕಥನ ನಿಜದ ನೆಲೆಗಳಲ್ಲಿ ಕಾಲೂರಬೇಕಾದರೆ ತಮ್ಮ ಗ್ರಹಿಕೆಗಳು ಇನ್ನಷ್ಟು ಆಳವಾಗಬೇಕು ಎನ್ನುವ ಎಚ್ಚರ ಬೇಲೂರರಿಗೆ ಇದೆ. ಅವರ ಈ ವಿನಯವಂತಿಕೆ ಹಾಗೂ ಎಚ್ಚರವೇ ಅವರ ಕಾವ್ಯವನ್ನು ಓದಲು ನಮ್ಮನ್ನು ಆಹ್ವಾನಿಸುತ್ತದೆ.

ಆಧುನಿಕ ಕಾವ್ಯದ ಸಂದರ್ಭದಲ್ಲಿ ‘ಕಟ್ಟು ಪದ’ ಎನ್ನುವ ಪ್ರಕಾರವನ್ನು ಹುಟ್ಟು ಹಾಕಿರುವ ಬೇಲೂರರು ಅದನ್ನು ಆಧುನಿಕ ವಚನಗಳೆಂದೂ ಕರೆಯುತ್ತಾರೆ. ವಿಶೇಷವೆಂದರೆ, ಬೇಲೂರರು ಅದನ್ನು ಕಾವ್ಯ ಎನ್ನುವುದಿಲ್ಲ. ಬದಲಾಗಿ ತೀವ್ರ ತುಡಿತಗಳ, ಕಾವ್ಯ ಗುಣದ, ಸ್ವಚ್ಚಂದ ಲಹರಿಯ ಗದ್ಯ ಎನ್ನುತ್ತಾರೆ. ಕಟ್ಟುಪದ ಎನ್ನುವುದೇ ಒಂದು ವಿಶಿಷ್ಟ ಶಬ್ಧಗುಚ್ಚ. ಬೇಲೂರರ ಕಟ್ಟುಪದಗಳೆಲ್ಲ ಹೆಣ್ಣಿಗೆ ಸಂಬಂಧಿಸಿದ್ದೇ ಆಗಿರುವುದರಿಂದ ಅವುಗಳನ್ನು ಹೆಣ್ಣಿನ ಡಿಕ್ಷನರಿಯ ಮೂಲಕವೇ ಆಥೈಸಿಕೊಳ್ಳುವುದು ಸೂಕ್ತವೆನ್ನಿಸುತ್ತದೆ. ಕಟ್ಟು ಎನ್ನುವುದು ಬಂಧನ, ಹೊರೆ, ಏಕತೆ, ಸಂಬಂಧ ಅರ್ಥಗಳನ್ನು ಕೊಡುತ್ತದೆ. ಕಟ್ಟುಪದ ಎನ್ನುವುದು ಕಟ್ಟಲ್ಪಟ್ಟ ಪದ ಅಥವಾ ಕಾಲು, ಹೆಣ್ಣಿನ ಪದಕ್ಕೆ ಹಾಕಿದ ಕಟ್ಟು ಅಥವಾ ಕಾಲಿಗೆ ಕಟ್ಟಿದ ಸಂಕೋಲೆ- ಎನ್ನುವಂತಹ ಅರ್ಥಗಳನ್ನೂ ಹೊರಡಿಸುತ್ತದೆ. ಬಹುಶಃ ಬೇಲೂರರ ಕಟ್ಟುಪದಗಳಲ್ಲಿ ಮುಕ್ತ ಛಂದದ ಗುಣವೇ ಪ್ರಧಾನವಾಗಿರುವುದು ಸಂಕೋಲೆಗಳಿಂದ ಹೊರಬರುವ ಹೆಣ್ಣಿನ ಕಾತರವನ್ನು ಸಂಕೇತಿಸಲೆಂದೇ ಇರಬೇಕು. ಹಾಗೆಯೇ ‘ಕಟ್ಟುಪದ’ಕ್ಕೆ ‘ಕಟ್ಟುಕಥೆ’ ಎನ್ನುವ ಶಬ್ಧಕ್ಕಿರುವಂತೆ ‘ಸುಳ್ಳು ಕಥನ’ ಎನ್ನುವ ಅರ್ಥದ ಸಾಧ್ಯತೆಯೂ ಇದೆ. ಆದರೆ ಆ ಅರ್ಥವನ್ನು ಯಶಸ್ವಿಯಾಗಿ ಮೀರುವ ಬೇಲೂರರು ಕಟ್ಟುಪದಗಳನ್ನು ಹೆಣ್ಣನ್ನೇ ಪ್ರಧಾನವಾಗಿಸಿದ ಜೀವನ್ಮುಖಿಯಾದ ಪದ ಕಟ್ಟುವಿಕೆ ಅಥವಾ ಕಾವ್ಯ ಕಟ್ಟುವಿಕೆ ಎನ್ನುವ ಸೃಜನಶೀಲ ನೆಲೆಗೆ ತಲುಪಿಸುತ್ತಾರೆ.
 

‍ಲೇಖಕರು G

13 September, 2014

ನಿಮಗೆ ಇವೂ ಇಷ್ಟವಾಗಬಹುದು…

2 Comments

  1. Beluru Ragunandan

    ಅವಧಿಗೆ ಮತ್ತು ಈ ಮಾತುಗಳನ್ನು ಬರೆದ ಕಥೆಗಾರ ಸಂವೇದನಾ ಶೀಲ ಮನಸ್ಸು ಅಮರೇಂದ್ರ ಶೆಟ್ಟಿ ಅವರಿಗೂ ಅನೇಕ ನಮಸ್ಕಾರಗಳು…..

  2. shobhavenkatesh

    all the best

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading