ಬೇಕಾಗಿದ್ದಾರೆ: ಹಳೆಯ ಟಿಎನ್ ಸೀತಾರಾಮ್ ಸರ್!

-ಶ್ರೀವಿಭಾವನ

ಸೀತಾರಾಮ್ ಸರ್.
ನಮಸ್ಕಾರಗಳು.

ಮಾಧ್ಯಮಗಳಲ್ಲಿ ನಿಮ್ಮ ಸಂದರ್ಶನಗಳು, ‘ಮಗಳು ಜಾನಕಿ’ಯಲ್ಲಿ ನಿಮ್ಮ ನಟನೆ, ಹಾವಭಾವ ಎಲ್ಲಾ ನೋಡಿದಾಗ ಇತ್ತೀಚಿನ ದಿನಗಳಲ್ಲಿ ನೀವು ತೀರಾ ಭಾವುಕಜೀವಿಯಾಗಿರುವಂತಿದೆ. ಖಂಡಿತಾ ಈ ಪತ್ರ ನಿಮಗೆ ಬೇಸರ ಉಂಟು ಮಾಡಬಹುದು.

ಆದರೆ ನನ್ನ ಉದ್ದೇಶ ಅದಲ್ಲ; ಬದಲಿಗೆ ಧಾರವಾಹಿ ನಿರ್ದೇಶನದಲ್ಲಿ ನಿಮ್ಮ ಹಿಡಿತ ಜಾರುತ್ತಿದ್ದೆನೆಯೇನೋ ಎಂಬ ಕಳಕಳಿಯೊಂದಿಗೆ ನಿಮ್ಮ ಜತೆಗೆ ನನ್ನ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದೇನೆ. ನಿಮ್ಮ ಮೇಲಿನ ಅಭಿಮಾನದಿಂದ ಈ ಪತ್ರವಷ್ಟೇ ಹೊರತು, ಇನ್ನಾವುದದೇ ಉದ್ದೇಶದಿಂದಲ್ಲ.

ಜೊತೆಗೆ ನಿಮ್ಮ ಜೊತೆಗಿನ ಕಥಾಬರಹಗಾರರ ಅನುಭವ ಕೊರತೆ, ಒಂದು ಧಾರಾವಾಹಿ ತಂಡಕ್ಕೆ ಇರಬೇಕಾದ ಕನಿಷ್ಠ ಸಂಶೋಧನೆಯ ಬದ್ಧತೆ ಇಲ್ಲದಿರುವಿಕೆ, ನಟರ ಪೇಲವ ಅಭಿನಯ ಹೇಗೆ ನಿಮ್ಮ ಮಹತ್ವದ ಧಾರವಾಹಿಯನ್ನು ಅಧ:ಪತನಕ್ಕೆ ತಳ್ಳಬಹುದು ಎನ್ನುವುದನ್ನು ನಿಮ್ಮ ಗಮನ ಸೆಳೆಯುವುದು ನನ್ನ ಉದ್ದೇಶ. ನಿಮ್ಮ ಜೊತೆಗಿರುವವರು ನಿಮ್ಮನ್ನು, ಧಾರವಾಹಿಯನ್ನು, ನಟ-ನಟಿಯರನ್ನು ಸೂರ್ಯಚಂದ್ರ ಎಂದು ಹೊಗಳಬಹುದು. ಆದರೆ ಧಾರವಾಹಿಯಲ್ಲಿ ನಿಮ್ಮ ಹಳೆಯ ಛಾಪು ಕಣ್ಮರೆಯಾಗಿರುವುದನ್ನು ಕಂಡು ವೀಕ್ಷಕರ ಮನಸ್ಸಿಗೆ ಅದೇನೋ ಸಂಕಟವಾಗುತ್ತಿದೆ.

ಮತ್ತೆ ಮತ್ತೆ ಹೇಳುತ್ತಿದ್ದೇನೆ; ನಿಮ್ಮ ಮನಸ್ಸಿಗೆ ಈ ಲೇಖನದ ಕೆಲವೊಂದು ಸಾಲುಗಳು ಘಾಸಿ ಮಾಡಬಹುದು. ಅದಕ್ಕೆ ಮೊದಲಿಗೆ ಕ್ಷಮೆಯಾಚಿಸುತ್ತೇನೆ. ಜತೆಗೆ ನಿಮಗೆ ನೋವುಂಟು ಮಾಡುವ ಉದ್ದೇಶದಿಂದ ಬರೆದ ಲೇಖನವಲ್ಲವಿದು. ಇದು ನನ್ನ ಕಳವಳ-ನಿಮ್ಮ ಧಾರವಾಹಿಯೊಂದು ಇಷ್ಟು ಜಾಳುಜಾಳಾಗಿ ಮೂಡಿಬಂದಾಗ ನಿಮ್ಮ ನೈಜ ಅಭಿಮಾನಿಯೊಬ್ಬನಿಗೆ ಆದ ನಿರಾಸೆ ಇದು. ಇದು ಹಲವರ ಅನುಭವ. ಅದಕ್ಕೆ ಅಕ್ಷರ ರೂಪ ಮಾತ್ರ ನನ್ನದು.

ಕನ್ನಡದ ಧಾರವಾಹಿ ಲೋಕದಲ್ಲಿ ಇತ್ತೀಚಿನ ದಿನಗಳಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಸಾಧಿಸಿದ್ದು ‘ಅಗ್ನಿಸಾಕ್ಷಿ’. ನಮಗೆಲ್ಲಾ ಗೊತ್ತಿತ್ತು; ಅದು ಲಾಜಿಕ್ ಇಲ್ಲದ ಧಾರವಾಹಿಯೆಂದು. ನಾವು ಧಾರವಾಹಿಯನ್ನು ಧಾರವಾಹಿಯಾಗಿಯೇ ನೋಡಿದೆವು-ಖುಷಿಪಟ್ಟೆವು. ಮರೆತು ಬಿಟ್ಟೆವು. ಈಗ ಅ ಧಾರವಾಹಿ ಪ್ರಸಾರವಾಗುತ್ತಿದೆ. ಆದರೂ ನೋಡುವವರಾರಿಲ್ಲ. ಆದರ ಪಾತ್ರಧಾರಿಗಳ ಮುಖಪರಿಚಯವಿಲ್ಲ. ಅದರ ಕಥೆಗಾರ, ನಿರ್ದೇಶಕ ಯಾರೆಂದೇ ಗೊತ್ತಿಲ್ಲ. ಅದರ ನಿರ್ದೇಶಕರಿಗೆ ಕನ್ನಡದ ಯಾವುದೇ ಸಾರಸ್ವತ ಲೋಕದ ಕಿರೀಟದ ಹಂಗಿರಲಿಲ್ಲ. ಹಾಗಾಗಿ ಇಡೀ ಧಾರವಾಹಿ ಬಗ್ಗೆ ಯಾವುದೇ ಭೌದ್ದಿಕ ಚರ್ಚೆಗಳು ನಡೆದುದಿಲ್ಲ.

ಆದರೆ, ಸೀತಾರಾಮ್ ಸರ್, ಬೇಸರವಿರುವುದು ನಿಮ್ಮ ಮೇಲೆ- ನಮ್ಮೆಲ್ಲಾ ನಿರೀಕ್ಷೆಗಳನ್ನು ಹುಸಿಮಾಡಿದ್ದೀರಿ-ಮಾಡುತ್ತಿರುವಿರಿ ಎಂಬ ಕಾರಣಕ್ಕೆ. ಏಕೆಂದರೆ ನೀವು ಅಗ್ನಿಸಾಕ್ಷಿಯಂತೆ ಮಗಳು ಜಾನಕಿ ಧಾರವಾಹಿಯನ್ನು ನೀವು ನೋಡುವಂತೆ ಮಾಡುತ್ತಿದ್ದೀರಿ. ನಿಮ್ಮ ಧಾರವಾಹಿಯನ್ನು ಅಗ್ನಿಸಾಕ್ಷಿ, ಪುಟ್ಟ ಗೌರಿ ಮದುವೆ, ಲಕ್ಷ್ಮಿ ಬಾರಮ್ಮ ಧಾರವಾಹಿ ಮಟ್ಟದಲ್ಲೇ ನೋಡುವಂತೆ ಫರ್ಮಾನು ಹೊರಡಿಸಿ… ನಾವೇನು ಅಪೇಕ್ಷಿಸುವುದಿಲ್ಲ; ನಿಮ್ಮ ಬಗ್ಗೆ ಯಾವುದೇ ತಕರಾರು ವ್ಯಕ್ತಪಡಿಸುವುದಿಲ್ಲ.

ಸಮಸ್ಯೆ ಇರುವುದು ನಿಮ್ಮ-ನಮ್ಮ ನಿರೀಕ್ಷೆಗಳ ಭಾರದಲ್ಲಿ. ನಿಮ್ಮ ಅಪೇಕ್ಷೆ ಭೌದ್ದಿಕ ವರ್ಗ ನಿಮ್ಮ ಧಾರವಾಹಿಯನ್ನು ನೋಡಬೇಕೆನ್ನುವುದು. ಅದು ನಮಗೆ ಸಾಧ್ಯವಾಗುತ್ತಿಲ್ಲ. ನಮಗೆ ನಿಜವಾಗೂ ಹಿಂಸೆಯಾಗುತ್ತಿದೆ. ಲಾಜಿಕ್ ಇಲ್ಲದ ಮ್ಯಾಜಿಕ್‍ನಂತಿದೆ ನಿಮ್ಮ ಧಾರವಾಹಿ.

ಒಂದೆರಡು ಚಿಕ್ಕ ದೃಶ್ಯಗಳ ಬಗ್ಗೆ ಮಾತನಾಡೋಣ ಸರ್. ಧಾತ್ರಿ ಎಸ್‍ಪಿ. ಒಬ್ಬ ಟ್ರೈನಿ ಕಾನ್‍ಸ್ಟೇಬಲ್‍ಗೊಂದು ಕರೆ ಮಾಡಿ ಕೇಳಿ. ಎಸ್‍ಪಿ ಹುದ್ದೆಯ ಅಧಿಕಾರಿಗಳು ರಿವಾಲ್ವರ್ ಇಲ್ಲದೆ ದೂರ ಪ್ರಯಾಣ ಮಾಡುವುದಿಲ್ಲ. ಮಹಿಳೆಯರ ಮೇಲಿನ ದೌರ್ಜನ್ಯ ದಿನೇ ದಿನೇ ಸುದ್ದಿಯಾಗುತ್ತಿರುವ ಈ ದಿನಗಳಲ್ಲಿ ಧಾತ್ರಿ ರಿವಾಲ್ವರ್ ಇಲ್ಲದೆ ಕ್ಯಾಬ್‍ನಲ್ಲಿ ಪ್ರಯಾಣ ಮಾಡುವುದು ಕ್ಯಾಬ್ ಕೆಟ್ಟು ನಿಂತಾಗ 100ಗೆ ಡಯಲ್ ಮಾಡದೇ ಇರುವುದು ಸುರಕ್ಷಾ ಆಪ್ ಮೊಬೈಲ್‍ನಲ್ಲಿ ಇಲ್ಲದೆ ಇರುವುದು.

ಸೀತಾರಾಮ್ ಸರ್,

ಅದೆಲ್ಲಾ ಬಿಡಿ. ಒಬ್ಬ ಎಸ್‍ಪಿ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಾನೆ/ ಇದ್ದಾಳೆ, ಅದೂ ಸಂಜೆ ಬಳಿಕ ಅಂದರೆ ಸ್ಥಳೀಯ ಪೊಲೀಸ್ ವಾಹನವನ್ನೇ ವ್ಯವಸ್ಥೆ ಮಾಡಿರುತ್ತಾರೆ. ಇಲ್ಲವೆ ಪೊಲೀಸ್ ಸಿಬ್ಬಂದಿ ವಿಮಾನ ನಿಲ್ದಾಣದಲ್ಲಿ ಹಾಜರಿರುತ್ತಾರೆ… ಇದನ್ನೂ ಬಿಡಿ.. ನಿಮ್ಮ ಪರಿಚಿತ ಪೊಲೀಸ್ ಅಧಿಕಾರಿಗಳೊಂದು ಮೊಬೈಲ್ ಕರೆ ಮಾಡಿ. ಯಾವುದೇ ಮಹಿಳಾ ಪೊಲೀಸ್ ಅಧಿಕಾರಿ ಭದ್ರತಾ ಸಿಬ್ಬಂದಿ ಇಲ್ಲದೆ ಹೊರಗೆ ಕಾಲಿಡುವುದಿಲ್ಲ. ಎಲ್ಲೇ ಹೋದರೂ ಅವರ ಕಾವಲಿರುತ್ತದೆ.

ಆಯ್ತು… ಇದು ಧಾರವಾಹಿ ಟ್ವಿಸ್ಟ್ ಅಂದುಕೊಳ್ಳೋಣ… ಉಜ್ವಲಾ ಶೇಖರ್ ಪ್ರಕರಣವನ್ನೇ ಗಮನಿಸೋಣ. ಇಡೀ ಅಪಘಾತದ ಕಥೆಯೆ ಜಾಳುಜಾಳು. ಚಿರಂತನ್ ಬಳಿ ಉಜ್ವಲಾ ತನ್ನ ಮುಂದಿನ ನಡೆಯನ್ನು ಹೇಳಿಕೊಳ್ಳುವುದು, ಚತುರ ಅಧಿಕಾರಿ ಜಾನಕಿಗೆ ತನಗೆ ಬಂದ ಕರೆಯ ಜಾಡು ತಿಳಿಯದಾಗುವುದು, ಕಾಲರ್ ಐಡಿ ಇಲ್ಲದ ಪೊಲೀಸ್ ಠಾಣೆಯ ದೂರವಾಣಿ…

ಸರ್, ಇದು ಒಂದೆರಡು ದೃಶ್ಯಗಳ ಕಥೆಯಲ್ಲ. ಪ್ರತಿ ಎಪಿಸೋಡ್ ಕೂಡಾ ಹೀಗೆ. ಎಲ್ಲಾದರೂ ಅಪ್ಪಿತಪ್ಪಿ ನಾವು ನಮ್ಮ ಮನಸ್ಸಿನ ಲಾಜಿಕ್ ಉಪಯೋಗಿಸಿದರೆ ನಿಮ್ಮ ಮೇಲೆ ಕೋಪ ಉಕ್ಕೇರುತ್ತದೆ. ಧಾತ್ರಿ-ಶ್ಯಾಮಲತ್ತೆ, ಅಮ್ಮ-ಮಗಳ ಕೂಡುವಿಕೆಯ ಸನ್ನಿವೇಶ! ಎಷ್ಟೊಂದು ಪೇಲವವಾಗಿತ್ತು.

ಕೆಪಿಎಸ್‍ಸಿ ಕಚೇರಿಗೆ ಒಂದೇ ಒಂದು ಬಾರಿ ಫೋನ್ ಮಾಡಿ. ಡಿವೈಎಸ್‍ಪಿ ಹುದ್ದೆಗೆ ಜಾನಕಿಯಷ್ಟು ಕಷ್ಟ ಪಟ್ಟು ಆಯ್ಕೆಯಾಗಲು ಸಾಧ್ಯವಿದೆಯೇ ಎಂದು ಕೇಳಿ ನೋಡಿ. ನಿಮ್ಮ ಜಾನಕಿ ಪಾತ್ರದ ಬಗ್ಗೆ ಒಂದಿನಿತು ವಿಚಾರಿಸಿ. ಅದು ನಗೆಪಾಟಲಾಗಿದೆ.

ನಿಮ್ಮಂತವರಿಂದ ಇಂತಹ ಅನ್ಯಾಯವನ್ನು ಒಂದು ಪಾತ್ರಕ್ಕೆ ನಾನು ನಿರೀಕ್ಷಿಸಿರಲಿಲ್ಲ. ಇನ್ನು ಪಾತ್ರಧಾರಿಗಳ ಬಗ್ಗೆ. ಬಹುತೇಕರ ಬಗ್ಗೆ ಮಾತನಾಡದಿರುವುದೇ ಕ್ಷೇಮ. ಏಕೆಂದರೆ ಜಾನಕಿ ಪಾತ್ರಧಾರಿಯಿಂದಿಡಿದು ಬಹುತೇಕ ಎಲ್ಲರ ಬಗ್ಗೆ ನಮಗೆ ಸಮಸ್ಯೆಗಳಿವೆ. ಸಮಸ್ಯೆ ಇಲ್ಲದಿರುವ ಕಲಾವಿದರು ನೀವು ಮತ್ತು ಭಾರ್ಗಿ.!

ಪ್ರೀತಿಯ ಸೀತಾರಾಮ್ ಸರ್.
ಕನ್ನಡದ ಅಭಿಮಾನಿಗಳಾದ ನಾವು ಈಗ ಸಾಕಷ್ಟು ಪ್ರಬುದ್ಧರಾಗಿದ್ದೇವೆ. ಮನಸ್ಸು-ಧ್ಯಾನ-ನಿಂತ ನೀರಿನ ಸುಳಿಯ ನಡುವೆ ಒಂಟಿ ಮೀನಿನ ಹಾಡು ಇಂತಹ ಫೇಸ್‍ಬುಕ್‍ನ ಬಾಲಿಶ ಕವನಗಳ ಸಾಲಿನಿಂದ ತುಂಬಾ ಮುಂದುವರಿದ್ದೇವೆ. ಸಂಜೆಯಲ್ಲಿ ಗಡ್ಡ ಬಿಟ್ಟು ಪೋಸ್ ಕೊಟ್ಟ ಹುಡುಗ, ಕೆರೆಯ ನೀರಿನಲ್ಲಿ ಪಾದ ಹರಿಬಿಟ್ಟಿರುವ ಹುಡುಗಿ ಚಿತ್ರನೋಡಿ ಮನಸೋಲುವ ದಿನಗಳು ಕಳೆದಿವೆ. ಅಂತಹ ಚಿತ್ರಗಳನ್ನೇ ಅಪ್‍ಲೋಡ್ ಮಾಡುತ್ತಾ ಕಾಲ ಕಳೆಯುವ ಸೋಮಾರಿಗಳು ಸೃಷ್ಟಿಸುವ ಸಂಭಾಷಣೆಗಳಿಂದ ನಾವೆಷ್ಟೋ ದೂರ ಸಾಗಿದ್ದೇವೆ.

ನನ್ನ ಸಮಸ್ಯೆ ಇರುವುದು ಇಲ್ಲೇ. ನಿಮ್ಮ ಪಾತ್ರಗಳಿನ್ನೂ ಆ ಕಾಲದಲ್ಲೇ ಇವೆ.

ಕೊನೆಗೊಂದು ಮಾತು.

ನನ್ನ ಹಳೆಯ ಸೀತಾರಾಮ್ ಸರ್‍ಗೆ ನಾನು ಹುಡುಕಾಡುತ್ತಿದ್ದೇವೆ. ನಿಮಗೆ ಸಿಕ್ಕಿದರೆ, ನನ್ನ ಕಳವಳಗಳನ್ನು ಅವರಿಗೆ ತಿಳಿಸಿ.

ಇಂತಿ ನಿಮ್ಮ ನೈಜ ಅಭಿಮಾನಿ
ಶ್ರೀವಿಭಾವನ

‍ಲೇಖಕರು

December 13, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. Padmaraj s

    ಮೊನ್ನೆ ಎಪಿಸೋಡ್ ನೋಡಿದ ಮೇಲೆ ಹುಟ್ಟಿದ ನನ್ನ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟಿದ್ದೀರಿ.
    ಯಾಕೋ ಇದು ಹತ್ತರಲ್ಲಿ ಹನ್ನೊಂದು ಆಗ್ತಾ ಇದೆಯಾ?
    ಇವತ್ತಿನ ಕಾಲಕ್ಕೆ ಧಾರಾವಾಹಿ ಬರಹಗಾರ ಅಪ್ಡೇಟ್ ಆಗಬೇಕಿದೆ. ಧಾತ್ರಿ ಘಟನೆ ಇವತ್ತಿನ ಸಮಯದಲ್ಲಿ ಇಷ್ಟೋಂದು ಕೂಲಾಗಿ ಆಗೋಕೆ ಚಾನ್ಸೇ ಇಲ್ಲ ಅಂತ ಅನುತ್ತೆ.
    ಅಗ್ನಿಸಾಕ್ಷಿ ಧಾರಾವಾಹಿಯ ಕಥೆ ಮುಗಿದು ತುಂಬಾ ದಿನ ಆಯ್ತು. ಬೇರೆ ಕಥೆಗೆ ಅದೇ ಹೆಸರಿಟ್ಟು ಓಡಿಸ್ತ ಇದ್ದಾರೆ.
    ಪರಮೇಶ್ವರ್ ಗುಂಡ್ಕಲ್ ಬಗ್ಗೆ ಅನುಕಂಪ ಇದೆ.

    ಪ್ರತಿಕ್ರಿಯೆ
  2. Dhanyakumar

    ಶ್ರೀ ವಿಭಾವನ ಮತ್ತು ಶ್ರೀ ‌ಪದ್ಮರಾಜ ಅವರು ಅತಿಯಾದ ಗೌರವ ಮತ್ತು ಅಳುಕಿನಿಂದ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
    ಮಗಳು ಜಾನಕಿ ತನ್ನ ಮೂಲಕಥೆಯಿಂದ ಬೇರ್ಪಟ್ಟು ದೂರ ಸಾಗಿ ಬಂದಿದೆ. ಹಲಾವಾರು ಘಟನೆಗಳು ಮಧ್ಯದಲ್ಲಿ ಬಂದು ಯಾವುದೇ ಅಂತ್ಯ ಕಾಣದೆ ಮರೆಯಾಗಿ ಮತ್ತೆ ಎಷ್ಟೋ ಕಂತಿನಂತರ ಧುತ್ತನೆ ಬಂದು ನಿಲ್ಲುತ್ತವೆ. ಉದಾ: ಶಾಂತರಾಜು, ಶಂಕರದೇವಘಟ್ಟ , ವಾಸುಕಿ ವೈಭವ‌,
    ಶಾಮಲತ್ತೆಯ ಮಗನ ಕತೆ ಹಾಗೂ ಭಾರ್ಗಿ ಅವರ ಅಕ್ಕನ ಕತೆ .‌ಇವುಗಳ ಎಳೆಗಳನ್ನು ಸ್ವಲ್ಪ ಹಿಂಜಿ ಹಾಗೆ ಬಿಟ್ಟಿದ್ದಾರೆ. ಇನ್ನು ಇಂತಹ ಎಷ್ಟೊಂದು ಉಪಕತೆಗಳು ಮುಂದಿನಕಂತುಗಳಲ್ಲಿ ತೆರೆದು ಕೊಳ್ಳ ಬಹದೋ ತಿಳಿಯದು. ಒಟ್ಟಾರೆ ವಿಸ್ತಾರವಾದ ಕಥಾಹಂದರ, ಕತೆಯನ್ನು ಹೇಗೆ ಮುಂದುವರಿಸ ಬೇಕೆಂಬುದು
    ತಿಳಿಯದೆ ಸಂಚಿಕೆ ನಿರ್ದೇಶಕರು ಕಕ್ಕಾಬಿಕಾಕಿಯಾಗಿದ್ದಾರೆ. ಈ ಹೊತ್ತಿನಲ್ಲಿ ಪ್ರಧಾನ ನಿರ್ದೇಶಕರಾದ ಟಿ ಎನ್ ಎಸ್ ಅವರು ಸಾರಥ್ಯವಹಿಸಿದರೆ ಮಾತ್ರ ಮಗಳು ಜಾನಕಿ ಯಶಸ್ವಿಯಾಗಬಹುದು.

    ಪ್ರತಿಕ್ರಿಯೆ
  3. Kumar Vantamure

    ಬೇರೆ ಬೇರೆ ಧಾರಾವಾಹಿಗಳಿಗೆ ತುಲನೆ ಮಾಡಿದಾಗ ಮಗಳು ಜಾನಕಿ ಎಲ್ಲರ ಮನಸ್ಸು ಗೆದ್ದು ಯಶಸ್ವಿಯಾಗಿ ಮುಂದುವರಿಯುತ್ತಿದೆ.ಕುಟುಂಬ ಸಮೇತ ಎಲ್ಲರೂ ವಿಕ್ಷಿಸುತ್ತಿದ್ದಾರೆ.ಇಂತದರಲ್ಲಿ ಮೊಸರಲ್ಲಿ ಕಲ್ಲು ಹುಡುಕಿದ ಹಾಗೆ ತಪ್ಪುಗಳನ್ನು ಹುಡುಕುವದಹು ಯಾವ ಸ್ವಾರ್ಥಕ್ಕೋಸ್ಕರ.

    ಪ್ರತಿಕ್ರಿಯೆ
    • Vijayakka

      ತುಂಬಾ ಧೈರ್ಯ ಮಾಡಿದ್ದೀರಿ..ನಿರೀಕ್ಷೆ ಇದ್ದಾಗಲಷ್ಟೇ ನೋವು ಅನ್ನೋದೂ ನಿಜವಾಯ್ತು .. ತಲೆ ,ಬುಡವಿಲ್ಲದ ಅದೆಷ್ಟು ಸೀರಿಯಲ್ ಗಳಿವೆ ನೀವು ಹೇಳಿದಂತೆ , ಕಥೆ ಯಾರದ್ದು, ನಿರ್ದೇಶನ ಯಾರದ್ದು ಕುತೂಹಲಗಳೇ ಇಲ್ಲ..ಹೌದು ಜಾನಕಿ ಬಗ್ಗೆ ನೀವು ಬರೆದದ್ದು ಒಂದು ಸಮಾಧಾನ.. ಶ್ರೀವಿಭಾವನ
      ರುಚಿ,ಶುಚಿಗೆ ಹೆಸರಾದ ಹೋಟೆಲಿಗೆ, ಅಲ್ಲಿಯ ಕಾಫಿಗೋ, ತಿಂಡಿಗೋ ಅಭ್ಯಾಸ ಹಾಕಿಕೊಂಡ ಕಾಯಂ ಗಿರಾಕಿಗಳಿರುತ್ತಾರೆ.. ಅಲ್ಲಿಯ ರುಚಿ, ಕಾಫಿ ಕುಡಿಯದವರು ಸಹ ಅಲ್ಲಿ ಮಾತ್ರ ಕುಡಿಯುತ್ತಾರೆ.. ಆ ಹೋಟೆಲ್ ಬಗ್ಗೆ, ಮಾಲೀಕನ ಬಗ್ಗೆ ಪ್ರೀತಿ , ಗೌರವ..ಸಹಜವಾಗಿ ಬೇರೂರಿ ಹೋಗಿರುತ್ತೆ .ಯಾವುದೇ ಕಾರಣದಿಂದಾಗಿ ಗುಣಮಟ್ಟ ಹಿಂದಿನಂತಿಲ್ಲಾ ಅನಿಸಿದಾಗ ಅವರ ಗಮನಕ್ಕೆ ತರಬೇಕಾದದ್ದು ಅವರನ್ನು ಪ್ರೀತಿಸುವವರ ಜವಾಬ್ದಾರಿ ..
      ವರ್ಷಾನುಗಟ್ಟಲೆ ಒಳ್ಳೇದನ್ನೇ ಕೊಟ್ಟು ಬಂದಿರುವ ಮಾಲೀಕ ಗುಣಮಟ್ಟ ಎಲ್ಲಿ ಹೇಗೆ ಕಡಿಮೆಯಾಗುತ್ತಿದೆ ಅನ್ನೋದನ್ನ ಖಂಡಿತಾ ಸರಿಪಡಿಸಬಲ್ಲ..ಕೆಲವರು ಮಾಡುವ ತಪ್ಪೆಂದರೆ , ಅಷ್ಟು ವರ್ಷ ಹೆಸರು ಮಾಡಿದ ಹೋಟೆಲ್ ಅದು ..ಗುಣ ಮಟ್ಟ ಹಿಂದಿನಂತಿಲ್ಲ ಅಂತ ಹೇಳಿ,ಬೇಸರ ಮಾಡಿಸುವುದು ಯಾಕೆ? ಬಾಕಿ ಹೋಟೆಲ್ ನಲ್ಲಿ ಏನ್ ಕೊಡ್ತಾರೆ ಅಂತ ನೋಡಿದ್ರೆ ಗೊತ್ತಾಗೋದು ..ಅಂದ್ರಾ? ನಿಮ್ಮನ್ನು ಹಾಗೆಲ್ಲ ಹೋಲಿಸೋಕ್ಕೆ ಸಾಧ್ಯವಾಗದಷ್ಟು ಮೇಲಿದ್ದಿರಿ .. ನಮಗೆ ನೀವು ಬೇಕು..ಬದಲಾದ ನೀವು

      ಪ್ರತಿಕ್ರಿಯೆ
  4. NA DIVAKAR

    ನಿಮ್ಮ ಮಾತು ನಿಜ ಎನಿಸುತ್ತದೆ. ಕಳೆದ ಮೂರು ವಾರಗಳಲ್ಲಿ ಕಥೆ ಜಾಳುಜಾಳಾಗುತ್ತಿದೆ. ಮೈತ್ರಿ ಮಹಾನಂದ ಪ್ರಕರಣವೂ ಸಹ ಅಸಹಜ ಎನಿಸುತ್ತದೆ. ಬಹುಶಃ ಇತರ ಕಥಾ ಬರಹಗಾರರಿಗೆ ಸೀತಾರಾಂ ಅವರಷ್ಟು ಸೂಕ್ಷ್ಮತೆ ಇಲ್ಲವೇನೋ ಎನಿಸುವುದು ಸಹಜ. ವರುಣ್ ವೈಭವ್ ಮೊಕದ್ದಮೆಯ ತಾರ್ಕಿಕ ಅಂತ್ಯವೂ ಕಂಡುಬಂದಿಲ್ಲ. ಕಥೆ ಮುಂದುವರೆಸಲೆಂದೇ ಕೆಲವು ಎಪಿಸೋಡ್ ಗಳನ್ನು ರೂಪಿಸಿದಂತೆಯೂ ಕಾಣುತ್ತದೆ. ನಿಮ್ಮ ನೇರ ಅಭಿಪ್ರಾಯ ಒಪ್ಪುವಂತಹುದೇ. ಹೀಗಾಗಬಾರದು ಎಂದೇನಿಲ್ಲ. ಎಂತಹ ಉತ್ಕೃಷ್ಟ ನಿರ್ದೇಶಕರಾದರೂ ಕೆಲವೊಮ್ಮೆ ಹೀಗಾಗುತ್ತದೆ. ಸರಿಹೋಗಬಹುದು. ನೋಡೋಣ – ನಾ ದಿವಾಕರ

    ಪ್ರತಿಕ್ರಿಯೆ
  5. ಉಮೇಶ್ ಉಗ್ನೇದುಂಡಿ

    ನನಗಂತೂ ನಿರಂಜನ್ ಪಾತ್ರ ಬರ್ತಿದ್ದಾಗೇ ಅಯ್ಯೊ ಪಾಪ ಅನ್ಸೋಕೆ ಸುರುವಾಗುತ್ತೆ

    ಪ್ರತಿಕ್ರಿಯೆ
  6. Ashwani Kumar K

    ಹೌದು ಏನೋ ಸಮಸ್ಯೆ ಖಂಡಿತಾ ಇದೆ. TNS ಅವರ ಮೇಲೆ ಯಾವ ಥರದ ಒತ್ತಡ ಇದೆಯೋ ಗೊತ್ತಾಗುತ್ತಿಲ್ಲ…

    ಪ್ರತಿಕ್ರಿಯೆ
  7. ಎಂ.ಜವರಾಜ್

    ಪತ್ರದ ಸಾರ ಅಲ್ಲಗಳೆಯುವಂತಿಲ್ಲ. ಕೊರತೆಗಳು ಸಾಕಷ್ವಿವೆ. ಹಾಗೆ ನಾವು ಒಂದು ಚಿತ್ರವನ್ನು, ಒಂದು ಕಲೆಯನ್ನು, ಒಂದು ಬರಹವನ್ನು, ಬದುಕುವ ಕ್ರಮವನ್ನು ನಾವು ನೋಡುತ್ತಿರುವ ಅನುಭವಿಸುತ್ತಿರುವ ಕಾಲ ಘಟ್ಟವನ್ನು ನೋಡಬೇಕು ಅಲ್ಲವೇ? ಸಾರಾಸಗಟು ಎಲ್ಲವನ್ನು ಲೋಪಗಳೇ ಇಲ್ಲದ ಸ್ಥಿತಿಯಲ್ಲಿ ನೋಡುವುದು ಕಷ್ಟ!

    ಇರಲಿ, ರಾಜ್ ಕುಮಾರ್ ಕನ್ನಡದ ಐಕಾನ್. ಅವರ ಚಿತ್ರದಲ್ಲಿ ಲೋಪಗಳೇ ಇಲ್ಲವೇ? ಹಾಗಿದ್ದೂ ಒಂದು ಚಿತ್ರದ ಒಟ್ಟು ಆಶಯವನ್ನು ಪರಿಗಣಿಸಿದ್ದೇವೆ. ಕವಿರತ್ನ ಕಾಳಿದಾಸ ಚಿತ್ರದಲ್ಲಿ ರಾಜಕುಮಾರಿ ಮದುವೆಗೆ ನಡೆಯುವ ವರ ಪರೀಕ್ಷೆಗೆಂದು ಬಂದ ಕುರಿಗಾಹಿಯೊಬ್ಬ ರಾಜನ ಪೋಷಾಕು ತೊಟ್ಟು ಬಂದಿರುತ್ತಾನೆ. ಅದಕ್ಕೆ ಅಲ್ಲಿನ ಆಸ್ಥಾನ ಮಂತ್ರಿಯ ಕುತಂತ್ರವೂ ಇರುತ್ತದೆ. ರಾಜಕುಮಾರಿಯ ಎಲ್ಲ ಪ್ರಶ್ನೆಗೂ ಆ ಆ ಆಸ್ಥಾನ ಮಂತ್ರಿಯೇ ಉತ್ತರಿಸುತ್ತಾನೆ. ಗುರಿಗಾಹಿ ರಾಜನಂತಿದ್ದವನು ಪೆಕರು ಪೆಕರಾಗಿ ನೋಡುತ್ತ ಹಲ್ಲು ಕಿಸಿಯುತ್ತಾನೆ. ಅವರಿಬ್ಬರ ಹಾವಭಾವ ಕ್ಲೋಸ್ ಅಪ್ ನಲ್ಲಿ ತರೆಯ ಮೇಲೆ ಮೂಡುತ್ತದೆ. ನಮಗೆ ಕ್ಲೋಸ್ ಅಪ್ ಕಂಡರು ಇಡೀ ಆಸ್ಥಾನದಲ್ಲಿ ಕುಂತವರಾರಿಗೂ ಮತ್ತು ರಾಜಕುಮಾರಿಗೆ ತಿಳಿಯುವುದಿಲ್ಲವೇ? ಹಾಗೆ ಆ ಆಸ್ಥಾನ ಮಂತ್ರಿ ತನ್ನ ಮಗನಿಗೆ ಆ ರಾಜಕುಮಾರಿ ಮದುವೆ ಮಾಡಿ ತಾನು ಮೆರೆಯಬೇಕೆಂದಿರುತ್ತಾನೆ. ರಾಜಕುಮಾರಿಯ ಪ್ರಶ್ನೆಗೆ ಉತ್ತರಿಸಲಾಗದೆ ಸೋತಿರುತ್ತಾನೆ. ಕುರಿಗಾಹಿಗೆ ರಾಜಪೋಷಾಕು ತೊಡಿಸಿ ತಂದು ಕೂರಿಸಿ ರಾಜಕುಮಾರಿಯ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿ ಮೆಚ್ಚಿಸುವ ಮಂತ್ರಿಗೆ ತನ್ನ ಮಗನಿಗೆ ಎಲ್ಲ ಉತ್ತರ ಹೇಳಿ ರಾಜಕುಮಾರಿಯ ಮೆಚ್ಚಿಗೆ ಗಳಿಸಬಹುದಿತ್ತಲ್ಲವೇ?

    ಹಾಗೆ ಒಂದು ಸಿನಿಮಾ, ಒಂದು ದಾರಾವಾಹಿ , ಒಂದು ಪದ್ಯ, ಒಂದು ಕತೆ ಕಾದಂಬರಿ ,
    ಲೋಪವಿಲ್ಲದೆ ಇರದೇ? ಹಾಗಾಗಿ ಈಗ ಮೂಡಿ ಬರುತ್ತಿರುವ ದಾರಾವಾಹಿಗಳಲ್ಲಿ ಇದ್ದುದರಲ್ಲಿ ನೋಡಬಹುದಾದದ್ದು ಅನ್ನಬಹುದು.

    ದಾರಾವಾಹಿಗೆ ಸಂಬಂಧ ಪಟ್ಟ, ಟಿ.ಎನ್.ಸೀತಾರಾಂ ನಿರ್ದೇಶನಕ್ಕೆ ಸಂಬಂಧ ಪಟ್ಟ ಪತ್ರ ಸಾರ ಸೊಗಸಾಗಿದೆ. ಆದರೆ ಬದಲಾದ ಕಾಲಘಟ್ಟದಲ್ಲಿ ನಾವು ನೋಡುವ ಕೇಳುವ ಗ್ರಹಿಸುವ ಓದುವ ಮಾನದಂಡಗಳೂ ಬದಲಾಗಬೇಕಾ ಬೇಡವಾ ಅಥವ ನಾವು ಅರ್ಥೈಸಿಕೊಳುವ ಕ್ರಮವೂ ಸುಧಾರಿಸಬೇಕಾ ಎಂಬುದು ಸದ್ಯದ ಪ್ರಶ್ನೆ!

    ಪ್ರತಿಕ್ರಿಯೆ
  8. Srinivasa KR

    ನಾನು ನನ್ನ ಜೀವನದಲ್ಲಿ ನೋಡಿದ ಮತ್ತು ನೋಡುವುದು ಸೀತಾರಾಮ್ ಸರ್ ರವರ ಧಾರಾವಾಹಿಗಳನ್ನು ಮಾತ್ರ. ಶ್ರೀವಿಭಾವನ ಅವರ ಪಟ್ಟಿಗೆ ಇನ್ನೂ ಬಹಳಷ್ಟು ನ್ಯೂನ್ಯತೆಗಳನ್ನು ಸೇರಿಸಬಹುದು. ಬಹು ಮುಖ್ಯವಾಗಿ ನಾನು ಒಂದನ್ನು ಸೆರಿಸಲಿಚ್ಛಿಸುತ್ತೇನೆ. ಅದು “ಯಾವುದೇ ಒಂದು ಘಟನೆ ನಡೆದಾಗ ಅದನ್ನು ಮತ್ತೆ ಮತ್ತೆ ಹಲವು ಪಾತ್ರಗಳು ಇನ್ನು ಹಲವು ಪಾತ್ರಗಳಿಗೆ ಕಾಮೆಂಟರಿ ರೂಪದಲ್ಲಿ ಹೇಳುವುದು!!” ಇತ್ತೀಚಿಗೆ ನಿಜವಾಗ್ಲೂ ಇದು ಟಿ ಎನ್ ಎಸ್ ಅವರ ನಿರ್ದೇಶನದ ಧಾರಾವಾಹಿನ!! ಎನಿಸುತ್ತದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: