ಜಗದೀಶ ಕೊಪ್ಪ
ಬೇಂದ್ರೆ ಮತ್ತು ಕಾರ್ನಾಡರ ಒಂದು ಹಾಸ್ಯ ಪ್ರಸಂಗ.
ಧಾರವಾಡದ ಸಾಧನಕೇರಿಯ ಬೇಂದ್ರೆ ನಿವಾಸದ ಮುಂದೆ ನಿಂತಾಗಲೆಲ್ಲಾ ಈ ಹಾಸ್ಯ ಪ್ರಸಂಗ ನನಗೆ ನೆನಪಾಗುತ್ತದೆ.
ಇದನ್ನು ಹೇಳಿದವರು ಧಾರವಾಡದ ನನ್ನ ಆತ್ಮೀಯ ಮಿತ್ರ ಸುರೇಶ್ ಕುಲಕರ್ಣಿ.
ಗಿರೀಶ್ ಕಾರ್ನಾಡರ ಶಿಷ್ಯರಾಗಿ, ಒಡನಾಡಿಯಾಗಿ ದುಡಿದಿರುವ ಸುರೇಶ್ ಕುಲಕರ್ಣಿಯವರು ಹಳೆಯ ಹಿಂದಿ ಸಿನಿಮಾಗಳ ಇತಿಹಾಸ, ನಟ, ನಟಿಯರ ಮಾಹಿತಿ, ಮರಾಠಿ ರಂಗಭೂಮಿ, ಹಿಂದೂಸ್ತಾನಿ ಸಂಗಿತ ಕುರಿತಂತೆ ಆಧಿಕಾರಯುತವಾಗಿ ಮಾತನಾಡಬಲ್ಲ ಮಿತ್ರ.
ಎಪ್ಪತ್ತು ವರ್ಷದ ಈ ಹಿರಿಯ ಮಿತ್ರನನ್ನು ನಾನು ನಡೆದಾಡುವ ಡಿಕ್ಷನರಿ ಎಂದು ಎಲ್ಲರಿಗೂ ಪರಿಚಯಿಸುತ್ತೇನೆ. ಬೆಳಿಗ್ಗೆ ಧಾರವಾಡ ರೈಲು ನಿಲ್ದಾಣದ ಬಳಿ ವಾಕ್ ಮಾಡುವಾಗ ಮತ್ತು ರಾತ್ರಿಯ ಗುಂಡು ಮೇಜಿನ ಪರಿಷತ್ತಿನಲ್ಲಿ ಗೆಳೆಯನ ಮಾತು ಕೇಳುವುದೇ ಚಂದ. ಸುರೇಶ್ ಹೇಳಿದ ಕಥೆಯಿದು.
ಇದು 1975 ಅಥವಾ 1976 ರ ಆಜುಬಾಜು ವರ್ಷದಲ್ಲಿ ನಡೆದದ್ದು. ಕಾರ್ನಾಡರು ಬೇಂದ್ರೆಯವರ ಕುರಿತು ಸಾಕ್ಷ್ಯಚಿತ್ರ ನಿರ್ಮಾಣ ಮಾಡುತ್ತಿದ್ದರು. ಖ್ಯಾತ ಹಿಂದಿ ಸಿನಿಮಾ ನಿರ್ದೇಶಕ ಗೋವಿಂದ ನಿಹಲಾನಿ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಸ್ವತಂತ್ರ ಪ್ರವೃತ್ತಿಯ, ಸ್ವಲ್ಪ ಮುಂಗೋಪದ ಬೇಂದ್ರೆ, ಬೆಳಿಗ್ಗೆಯಿಂದ ಸಂಜೆಯವರೆಗೆ ಕಾರ್ನಾಡ್ ಹೇಳಿದಂತೆ ನಿಲ್ಲಿ ಅಂದ ಜಾಗದಲ್ಲಿ ನಿಂತು, ನಡೆ ಅಂದ ಜಾಗದಲ್ಲಿ ನಡೆದು, ಕೂತು, ಅತ್ತ, ಇತ್ತ ನೋಡಿ ಎಂದ ಕಡೆ ನೋಡಿ ಸಧ್ಯ ಚಿತ್ರೀಕರಣ ಮುಗಿದರೆ ಸಾಕು ಎನ್ನುವ ಸ್ಥಿತಿ ತಲುಪಿದ್ದರು.
ಕೊನೆಯ ದೃಶ್ಯವನ್ನು ಬೇಂದ್ರೆ ನಿವಾಸದ ಮುಂದೆ ಸಂಜೆ ಐದರ ವೇಳೆ ಚಿತ್ರೀಕರಿಸಲಾಗುತ್ತಿತ್ತು. ಮನೆಯ ಮುಂದೆ ನೂರು ಅಡಿ ಅಗಲ, ಉದ್ದದ ಜಾಗವಿದ್ದ ಕಾರಣ. ಬೇಂದ್ರೆಯವರು ಮನೆಯ ಬಾಗಿಲು ತೆರೆದು ನಿಧಾನವಾಗಿ ಗೇಟ್ ಬಳಿ ನಡೆದುಬಂದು ರಸ್ತೆಯನ್ನು ನೋಡುತ್ತಾ ನಿಲ್ಲುವ ಹಾಗೆ ಚಿತ್ರೀಕರಣ ನಡೆಯುತ್ತಿತ್ತು.
ಬೇಂದ್ರೆಯವರು ಗೇಟಿನ ಬಳಿ ಬಂದು ನಿಲ್ಲುತ್ತಿದ್ದಂತೆ ಮನೆಯ ಬಳಿ ಇದ್ದ ಮಂಗವೊಂದು ಓಡಿ ಬಂದು ಕಾಂಪೌಂಡ್ ಮೇಲೆ ನಡೆದು ಬೇಂದ್ರೆ ಬಳಿ ಬಂದು ಕುಳಿತುಕೊಂಡಿತು. ಬೇಂದ್ರೆಯವರ ಜೊತೆ ಆತ್ಮೀಯತೆ ಬೆಳಿಸಿಕೊಂಡಿದ್ದ ಮಂಗಕ್ಕೆ ಅವರು ತಮ್ಮ ಕೋಟಿನ ಜೇಬಿನಿಂದ ಪೆಪ್ಪರ್ ಮೆಂಟ್ ತೆಗೆದು ಕೊಟ್ಟು. ಅದರ ತಲೆಯನ್ನು ಒಮ್ಮೆ ಸವರಿ ಕಳಿಸಿಕೊಟ್ಟರು.
ಅನಿರೀಕ್ಷಿತವಾಗಿ ನಡೆದ ಈ ಘಟನೆಯೂ ಚಿತ್ರೀಕರಣವಾಯಿತು. ಇದರಿಂದ ಉತ್ತೇಜಿತರಾದ ನಿಹಲಾನಿ ಇದನ್ನ ಮತ್ತೊಮ್ಮೆ ಶೂಟ್ ಮಾಡೋಣ. ಬೇಂದ್ರೆ ಮತ್ತು ಮಂಗನ ದೃಶ್ಯಗಳನ್ನು ಕ್ಲೋಸ್ ಅಪ್ ನಲ್ಲಿ ಚಿತ್ರೀಕರಿಸುತ್ತೇನೆ ಎಂದು ಗಿರೀಶ್ ಕಾರ್ನಾಡರಿಗೆ ತಿಳಿಸಿದರು. ಕಾರ್ನಾಡರಿಗೂ ಅದು ಸೂಕ್ತ ಅನಿಸಿತು. ಅವರು ಬೆಂದ್ರೆಯವರ ಬಳಿ ತೆರಳಿ, ನೀವು ಮತ್ತೊಮ್ಮೆ ಗೇಟಿನವರೆಗೆ ನಡೆದು ಬಂದು, ಮಂಗನನ್ನ ಕರೆದು ಬಾಳೆ ಹಣ್ಣು ನೀಡಬೇಕೆಂದು ಕೇಳಿಕೊಂಡರು.
ಬೇಂದ್ರೆಯವರ ಸಹನೆ ಕಟ್ಟೆಯೊಡೆಯಿತು.
ಲೇ ಗಿರೀಶಾ ತಿಳ್ಕೋ
ನಾ ಬೇಂದ್ರೆ ಮಾಸ್ತರ, ಅದು ಮಂಗ್ಯಾ.
ನೀ ಹೇಳದಂಗ ಕೇಳಾಕ ಆ ಮಂಗ್ಯಾನನ್ನು ಬೇಂದ್ರೆ ಮಾಸ್ತರ ಅಂತಾ ತಿಳ್ಕಂಡಿಯೇನು? ಎಂದು ರೇಗಿದರು.
ಬೇಂದ್ರೆಯವರ ಈ ಮಾತು ಕೇಳುತ್ತಿದ್ದಂತೆ ಕಾರ್ನಾಡ್ ಮತ್ತು ಚಿತ್ರ ತಂಡಕ್ಕೆ ನಗು ತಡೆಯಲಾಗಲಿಲ್ಲ. ಗೋವಿಂದ ನಿಹಲಾನಿಗೆ ಕನ್ನಡ ತಿಳಿಯದೆ ಪೆಚ್ಚಾಗಿ ನಿಂತಿದ್ದಾಗ, ಕಾರ್ನಾಡರು, ಬೇಂದ್ರೆಯವರ ಮಾತನ್ನು ಅವರಿಗೆ ಹಿಂದಿಯಲ್ಲಿ ಹೇಳಿದರು. ಅವರೂ ಸಹ ನಕ್ಕು ಅಂದಿನ ಚಿತ್ರೀಕರಣಕ್ಕೆ ಮುಕ್ತಾಯ ಹಾಡಿದರು.






0 Comments