
ಎನ್ ಸಂಧ್ಯಾರಾಣಿ
ರಂಗಕರ್ಮಿ, ಹೆಸರಾಂತ ಕಲಾವಿದ ಕೃಷ್ಣ ರಾಯಚೂರು ಹೊಸ ಕೃತಿಯೊಂದಿಗೆ ನಮ್ಮೆದುರು ಬರುತ್ತಿದ್ದಾರೆ. ‘ಬೆಂಡು ಬತ್ತಾಸು’ ಅದರ ಹೆಸರು.
ಕೃಷ್ಣ ರಾಯಚೂರು ಅವರ ಗೆರೆಗಳನ್ನಷ್ಟೇ ನೋಡಿದವರಿಗೆ ಅವರ ಅಕ್ಷರ ಮೋಡಿಗೂ ಒಳಗಾಗುವ ಅವಕಾಶ ಇಲ್ಲಿದೆ.
‘ಅವಧಿ’ಯ ಎನ್ ಸಂಧ್ಯಾರಾಣಿ ಎಂದಿನಂತೆ ತಮ್ಮದೇ ಆಪ್ತ ಶೈಲಿಯಲ್ಲಿ ಕೃಷ್ಣ ರಾಯಚೂರು ಅವರನ್ನೂ ಹಾಗೂ ಅವರ ಬರವಣಿಗೆಯ ನಡಿಗೆಯನ್ನೂ ಇಲ್ಲಿ ಕಟ್ಟಿ ಕೊಟ್ಟಿದ್ದಾರೆ.

ಲಂಕೇಶರ ಒಂದು ನೀಲು ಪದ್ಯ ಇದೆ.
‘ಸುಖಕ್ಕಾಗಿ ಕಾತರಿಸುವ
ಕೋಟ್ಯಾಂತರ ಜನಕ್ಕೆ ಹಣ, ನೆಲ
ಹೊನ್ನು ಬೇಕು,
ಕೆಲವರಿಗೆ ಪ್ರೀತಿ
ಎಲ್ಲೋ ಕೆಲವರಿಗೆ ಕುಗ್ರಾಮದ
ಹಿತ್ತಿಲೊಂದರ ಹೂವು,
ಬಡಜೋಗಿಯ ಹಾಡು’
ಈ ಕವನದಲ್ಲಿ ಬರುವ ’ಎಲ್ಲೋ ಕೆಲವರ’ ಸಾಲಿನಲ್ಲಿ ನಿಲ್ಲುವ ಹೆಸರು ಕೃಷ್ಣ ರಾಯಚೂರು. ಕಿರಂ ಅವರೇ ಇವರನ್ನು ಬಣ್ಣಿಸುವ ಹಾಗೆ ಎರಡುಗಂಟೆ ಜೊತೆಯಲ್ಲಿ ಕುಳಿತಿದ್ದರೂ ನಾಲ್ಕು ವಾಕ್ಯಗಳನ್ನು ಮಾತನಾಡುವುದಿಲ್ಲ ಅನ್ನಿಸುವಂತೆ ಕಂಡರೂ ಆಪ್ತವಲಯದಲ್ಲಿ ನಿನ್ನಿನ ಪುಟಗಳನ್ನು ಹಿಡಿದು ಕಾಲವನ್ನು ಮರೆಸುವಂತೆ ಮಾತನಾಡಬಲ್ಲರು, ಹಾಗೆ ಮಾತನಾಡುತ್ತಲೇ ಕಾರಣವೇ ನೀಡದೆ ಇದ್ದಕ್ಕಿದ್ದಂತೆ ಮೌನವಾಗಿ ಬಿಡಬಲ್ಲರು, ಒಂದು ಇನ್ನಿಲ್ಲದ ಸಂಕೋಚ ಮತ್ತು ಜೊತೆಜೊತೆಯಲ್ಲಿಯೇ ’ಅದಕ್ಕೇನಿವಾಗ’ ಎನ್ನಬಲ್ಲ ಮನೋಭಾವ ಒಟ್ಟೊಟ್ಟಿಗೆ ಇರುವ ಸ್ವಭಾವ ಅವರದು.
ಇದೋ ಈ ಕಾರ್ಯಕ್ರಮದಲ್ಲಿ ಇದ್ದಾರೆ ಎಂದುಕೊಂಡಿರುವಾಗಲೇ ಯಾವ ಮಾಯದಲ್ಲೋ ಎದ್ದು ಹೋಗಿ ಬಿಟ್ಟಿರುತ್ತಾರೆ. ಹಾಗೆ ಹೋಗುವಾಗಲೂ ’ಕುಗ್ರಾಮದ ಹಿತ್ತಿಲೊಂದರ ಹೂವು, ಬಡಜೋಗಿಯ ಹಾಡು’ ಎದುರಾದರೆ ಅಲ್ಲೇ ನಿಲ್ಲಬಲ್ಲರು. ಆಧುನಿಕತೆ ಸೃಷ್ಟಿಸಿದ ಧಾವಂತದ ನಡಿಗೆಯಲ್ಲಿ ಹಾಗೆ ಎಲ್ಲಾದರೂ ಕ್ಷಣಕಾಲ ನಿಲ್ಲಬಲ್ಲಂತಹ ವ್ಯವಧಾನವೇ ಮರೆಯಾಗುತ್ತಿರುವ ಕಾಲಮಾನದಲ್ಲಿ ಇವರು ಹಾಗೆ ನಿಂತು, ಆಲಿಸಿದ ಫಲವೇ ಈ ಪುಸ್ತಕ.
ನನಗೆ ಕೃಷ್ಣರಾಯಚೂರು ಅವರ ಪರಿಚಯವಾಗಿದ್ದು ಕಲಾವಿದರಾಗಿ ಮತ್ತು ಒಂದು ಕಾರ್ಯಕ್ರಮವನ್ನು ಅತ್ಯಂತ ಕಲಾತ್ಮಕವಾಗಿ ಮಾಡಬಲ್ಲಂತಹ ನೋಟ ಇರುವ ಸಂಘಟಕರಾಗಿ. ಆಮೇಲೆ ನಾನು ಇಷ್ಟಪಟ್ಟು, ಕಾದು ನೋಡುತ್ತಲಿದ್ದದ್ದು ಅವರ ’ಇರುವೆ ನಡಿಗೆಯ ಸದ್ದು’ ಸಾಲಿನ ರೇಖಾ ಚಿತ್ರಗಳನ್ನು ಮತ್ತು ಅಲ್ಲಿ ಅವರು ಬರೆಯುತ್ತಿದ್ದ ಸಣ್ಣ ಸಣ್ಣ ಕವಿತೆಗಳನ್ನು. ಒಂದು ಚಿತ್ರದ ತಲೆದೆಸೆಯಲ್ಲಿ ’ಎದುರುಗೊಂಡ ಮಲ್ಲಿಕಾರ್ಜುನ ಅಕ್ಕಳಿಂದ ಪಡೆದಿದ್ದ ಅರಿವಿನ ಸಸಿಯನ್ನ’ ಎಂದು ಬರೆದು ಅವರು ನನ್ನನ್ನು ಬೆಚ್ಚಿಬೀಳಿಸಿದ್ದರು. ಆ ಸಾಲಿನಲ್ಲಿ ಇನ್ನೂ ಚಿತ್ರಗಳನ್ನು ರಚಿಸಿ ಮತ್ತು ಅವುಗಳ ಪುಸ್ತಕವನ್ನು ತನ್ನಿ ಎಂದು ಇವತ್ತಿಗೂ ಅವರು ಸಿಕ್ಕಾಗಲೆಲ್ಲೀ ಗೌರವ ಪೂರ್ವಕ ಒತ್ತಾಯವನ್ನು ಹೇರುತ್ತಿರುತ್ತೇನೆ!
ಆ ನಂತರ ನಾನು ಈಟೀವಿ ನ್ಯೂಸ್ ಗಾಗಿ ’ಸೈಡ್ ವಿಂಗ್’ ಕಾರ್ಯಕ್ರಮ ಮಾಡುವಾಗ ಅವರನ್ನು ಸಂದರ್ಶಿಸಿದ್ದೆ. ಆಗ ಅವರು ತಮ್ಮ ಕೆಲವು ಹನಿಗವಿತೆಗಳನ್ನು ಓದಿದ್ದರು. ಅವರು ಪದಗಳನ್ನು ಅತ್ಯಂತ ಜಿಪುಣತನದಲ್ಲಿ ಬಳಸಿ ಕಟ್ಟಿಕೊಡುತ್ತಿದ್ದ ಪ್ರತಿಮೆಗಳು ನನಗೆ ಇಷ್ಟವಾಗಿದ್ದವು. ಅವರ ಕವಿತೆಗಳನ್ನು ನಾನು ಓದಿದ್ದು ಆ ನಂತರ. ಇವರಲ್ಲಿರುವ ಕಲಾವಿದ ಮತ್ತು ಕವಿ ಇಬ್ಬರೂ ಸೇರಿದಾಗ ಅವರು ವ್ಯಕ್ತಿಗಳನ್ನು, ಸನ್ನಿವೇಶಗಳನ್ನು ಮತ್ತು ಘಟನೆಗಳನ್ನು ಹೇಗೆ ಗ್ರಹಿಸುತ್ತಾರೆ ಎನ್ನುವುದರ ಬಗ್ಗೆ ನನಗೆ ಕುತೂಹಲವಿತ್ತು. ಈ ಪುಸ್ತಕದಲ್ಲಿ ಇವರ ಕವಿತೆಗಳ ಬಗ್ಗೆ ಕೀರಂ ಮಾತನಾಡಿರುವುದನ್ನು ಓದಿದಾಗ ಅವು ಹೇಗೆ ಇವರಲ್ಲಿ ರೇಖಾಚಿತ್ರವಾಗಿ, ಶಬ್ಧಚಿತ್ರಗಳಾಗಿ ಮೂಡಿಬಂದಿವೆ ಎನ್ನುವುದು ಅರ್ಥವಾಯಿತು.
ಕೃಷ್ಣ ರಾಯಚೂರ್ ಅವರು ಒಂದು ಬದುಕನ್ನು ಮಾತ್ರ ನೋಡುವುದಿಲ್ಲ, ಒಂದು ಕಾಲಘಟ್ಟ ಮತ್ತು ಅದರೊಡನೆ ಹೆಣೆದುಕೊಂಡ ಬದುಕು ಎರಡನ್ನೂ ನೋಡುತ್ತಾರೆ. ಹಾಗಾಗಿಯೇ ಇಲ್ಲಿನ ಬರಹಗಳ ಕ್ಯಾನ್ ವಾಸ್ ದೊಡ್ಡದು. ಸೀಮಾತೀತವಾಗಿ ಹರಡಿಕೊಂಡಿರುವ ಕ್ಯಾನ್ವಾಸಿಗೆ ಸ್ವತಃ ಕಲಾವಿದರಾಗಿರುವ ಅವರು ಅಲ್ಲಲ್ಲಿ, ಅಲ್ಲಲ್ಲಿ ಫ್ರೇಂ ಹಾಕಿ ನಮ್ಮ ಕೈಗಿಡುತ್ತಾರೆ. ಹಾಗಾಗಿಯೇ ಇವರು ಕಟ್ಟಿಕೊಡುವ ಚಿತ್ರಗಳು ಚೌಕಟ್ಟಿನಾಚೆಗೂ ಬೆಳೆಯುತ್ತಿರುತ್ತವೆ.ಈ ಪುಸ್ತಕದಲ್ಲಿ ಅವರ ಆತ್ಮಚರಿತ್ರೆಯ ಪುಟಗಳಿವೆ, ವ್ಯಕ್ತಿ ಚಿತ್ರಗಳಿವೆ, ಸಾಂಸ್ಕೃತಿಕ ಬದುಕಿನ ಚಿತ್ರಣ ಮತ್ತು ಕಾಲಸಂಧಿಗಳ ನಿರೂಪಣೆಯೂ ಇದೆ. ಆರ್ ನಾಗೇಶ್, ಸಿಜಿಕೆ, ಕಿರಂ, ಮನ್ಸೂರರು ಇದ್ದಾರೆ. ಹಾಗೆ ಪ್ರಸಂಗ, ಕಾವ್ಯಭೂಮಿ, ಬೆಂಗಳೂರು ಆರ್ಟ್ ಫೌಂಡೇಶನ್, ರಂಗಮಂಟಪ, ಕಲಾಧ್ಯಾನ್, ಕಲಾ ಪುರಸ್ಕಾರ್, ಸಂಸ ರಂಗಮಂದಿರ, ಕಲಾಕ್ಷೇತ್ರದ ಕ್ಯಾಂಟೀನು ಸಹ ಇದೆ. ಕೃಷ್ಣ ರಾಯಚೂರು ಅವರಿಗೆ ಹೊಳೆದ ಹೊಳಹುಗಳನ್ನು ಅವರು ಒಂದು ನಿರ್ಲಿಪ್ತ ಅಂತರದೊಂದಿಗೆ ನಮ್ಮ ಮುಂದೆ ಇಡುತ್ತಾ ಹೋಗುತ್ತಾರೆ. ಅವರ ಭಾಷೆಯಲ್ಲಿ ವಿಶೇಷಣಗಳು, ಗುಣವಾಚಕಗಳು ಕಡಿಮೆ, ಆ ಹೊಳಹು ನಮ್ಮ ಮನಸ್ಸಿನಲ್ಲಿ ನಾವೇ ಒಂದು ಘಟನೆಯನ್ನು ಕಟ್ಟಿಕೊಳ್ಳಲು ಪ್ರೇರಕವಾಗುತ್ತದೆಯೇ ಹೊರತು ಅದು ಆ ಕಟ್ಟಡವನ್ನು ನಿರ್ದೇಶಿಸುವುದಿಲ್ಲ. ಆ ಮಟ್ಟಿಗೆ ಈ ಬರಹಗಳಿಗೆ ಒಂದು ಕವಿತಾ ಗುಣವಿದೆ. ಅದಕ್ಕೆ ಒಂದು ಉದಾ, ’ಕೇಡುಗಣ್ಣುಗಳು’ ಎನ್ನುವ ಬರಹ. ಅವರು ಎಲ್ಲೂ ಇದನ್ನು ಭಾವುಕ ಬರಹವನ್ನಾಗಿಸದೆ ಬರೆದು ಕಡೆಯಲ್ಲಿ, ’ಕೇಳಬೇಕು ಕ್ಷಮೆ ಹೂದಳವ ನೋಡುತಾ’ ಅಂದು ಸುಮ್ಮನಾಗಿಬಿಡುತ್ತಾರೆ.
ರಾಯಚೂರು ಅವರು ಕಟ್ಟಿಕೊಡುವ ವ್ಯಕ್ತಿಚಿತ್ರಗಳು ಯಾಕೆ ಮುಖ್ಯವಾಗುತ್ತವೆ ಎಂದರೆ ಅವು ಒಂದೇ ಕಾಲಕ್ಕೆ ವೈಯಕ್ತಿಕವಾಗಿಯೂ ಮತ್ತು ಸಾರ್ವತ್ರಿಕವಾಗಿಯೂ ಸಲ್ಲುತ್ತವೆ. ಹಾಗಾಗಿ ಅವು ಕೇವಲ ಅವರ ಅನುಭವಗಳಾಗದೆ ಒಂದು ಕಾಲಘಟ್ಟದ ಕಥಾನಕವನ್ನು ಹೇಳುತ್ತಿರುತ್ತದೆ. ಇಲ್ಲಿ ಅವರು ಕಲಾವಿದ ಹುಸೇನ್ ಬಗ್ಗೆ ಬರೆದರೆ ಅದು ಸಫ್ದರ್ ಹಷ್ಮಿಯ ಕಥೆಯೂ ಹೌದು, ಜನ ನಾಟ್ಯಮಂಚ್ ಕಥೆಯೂ ಹೌದು, ಕಲಾವಿದರ ತಲೆಯ ಮೇಲೆ ತೂಗುಬಿಟ್ಟ ಕತ್ತಿಗಳ ಕಥೆಯೂ ಹೌದು.
ಇಲ್ಲಿ ಇವರು ವ್ಯಕ್ತಿ ಚಿತ್ರಗಳನ್ನು ಕಟ್ಟಿಕೊಡುವ ರೀತಿ ವಿಭಿನ್ನವಾಗಿದೆ. ಕೆಲವು ಇವರ ಶಬ್ಧಗಳ ಮೂಲಕ, ಕೆಲವು ಇವರು ಹೆಕ್ಕಿ ಕೊಟ್ಟ ಆ ವ್ಯಕ್ತಿಗಳ ಭಾಷಣ, ಕವನ, ಕಾವ್ಯದ ಮೂಲಕ ನಮ್ಮನ್ನು ತಾಕುತ್ತದೆ. ಇಲ್ಲಿ ಅವರು ಕಿರಂ ಬಗೆಗಿನ ಬರಹದಲ್ಲಿ ಕೇವಲ ತಮ್ಮ ಬರಹ ಮತ್ತು ಕವಿತೆಯ ಮೂಲಕ ಮಾತ್ರ ಕಿರಂ ಅವರನ್ನು ಕಟ್ಟಿಕೊಡುವುದಿಲ್ಲ, ಜೊತೆಯಲ್ಲೇ ಇರುವ ಕಿರಂ ಅವರ ಭಾಷಣದ ಸಾಲುಗಳು ಕವಿತೆಯ ಬಗ್ಗೆ, ಕವಿತೆಯ ಗ್ರಹಿಕೆಯ ಬಗ್ಗೆ ಹೇಳುತ್ತಲೇ ಕಿರಂ ಬಗ್ಗೆಯೂ ಹೇಳುತ್ತಿರುತ್ತದೆ. ಕೃಷ್ಣ ಕೀರಂ ಬಗ್ಗೆ ಬರೆದ ಸಾಲುಗಳು,ಕೆಲವೊಮ್ಮೆ ರಾಯಚೂರು ಕೊಡುವ ಒಂದು ಸಾಲಿನ ತಲೆಬರಹ ಅವರ ಇಡೀ ಲೇಖನದಷ್ಟೇ ಪ್ರಬಲವಾಗಿ ವ್ಯಕ್ತಿಚಿತ್ರವನ್ನು ಕಟ್ಟಿಕೊಡುತ್ತದೆ, ಉದಾ : ’ರಾಜ್ ಎನ್ನುವ ಕನ್ನಡ’. ಅವರು ಏನನ್ನೂ ಬರೆಯದೆ, ಬರೀ ಈ ತಲೆಬರಹವನ್ನು ಕೊಟ್ಟಿದ್ದರೂ ಅದು ನಮ್ಮೆಲ್ಲರ ಮನೋಲೋಕದಲ್ಲಿ ಹಾಸುಹೊಕ್ಕಾಗಿರುವ ರಾಜ್ ರನ್ನು ಕಟ್ಟಿಕೊಟ್ಟುಬಿಡುತ್ತಿತ್ತು. ಇವರು ವಾಕ್ಯಗಳನ್ನು ಕುಂಚದಂತೆ ಬಳಸುತ್ತಾರೆ. ಅದಕ್ಕೆ ಒಂದು ಉದಾಹರಣೆ ’ಅಲ್ಲಿ ಜೀವರಾಜ ಆಳ್ವರೂ ಅಷ್ಟೇ, ಕಲಾಕ್ಷೇತ್ರದ ಯಲ್ಲಮ್ಮನೂ ಅಷ್ಟೇ ಸಿಜಿಕೆಯ ಸರಳ ರೇಖೆಯಲ್ಲಿ’. ಸಿಜಿಕೆ ಅಮ್ಮನಂತೆ ನಮ್ಮ ಎದೆಯೊಳಾಕ್ಕೆ ಇಳಿದುಬಿಡುತ್ತಾರೆ ಇದನ್ನು ಓದಿದಾಗ. ಸಿಜಿಕೆ ಇವರನ್ನು ಸದಾ ಕಾಡುವ ವಾತ್ಸಲ್ಯ ಮತ್ತು ನೆನಪು.
ಇವರು ಕಟ್ಟಿಕೊಡುವ ಚಿತ್ರಗಳಲ್ಲಿ ಎಲ್ಲೂ ಕಹಿ ಇಲ್ಲ, ಆಪಾದನೆ ಇಲ್ಲ, ನೆಗಟಿವ್ ಗುಣಗಳ ಬಗ್ಗೆ ಇವರು ಮಾತನಾಡುವುದೇ ಇಲ್ಲ. ತಮಗಿರುವುದು ವ್ಯಕ್ತಿಯೊಬ್ಬನ ಒಳ್ಳೆಯ ಗುಣಗಳನ್ನು ಮಾತ್ರ ನೋಡುವ ಹೃದಯ ಎನ್ನುವಂತೆ ಇವರು ಬರೆಯುತ್ತಾ ಹೋಗುತ್ತಾರೆ. ವ್ಯಕ್ತಿಯ ಕಲೆಯನ್ನು ವಸ್ತುನಿಷ್ಠವಾಗಿ, ನಿಷ್ಠುರವಾಗಿ ವಿಮರ್ಶಿಸುವ ಇವರು ವ್ಯಕ್ತಿಯನ್ನು ಮಾತ್ರ ಉದ್ದಕ್ಕೂ ವಾತ್ಸಲ್ಯದ ಕಣ್ಣುಗಳಿಂದಲೇ ನೋಡುತ್ತಾರೆ. ಇವರನ್ನು ನಿರಂತರವಾಗಿ ಕಾಡುವ ಮತ್ತು ಕಾಯುವ ಬುದ್ಧ, ಬಸವಣ್ಣ ಮತ್ತು ಗಾಂಧಿ ಇವರ ಬರಹದಲ್ಲಿ ಹಾಸುಹೊಕ್ಕಾಗಿರುವುದು ಹೀಗೆ.
ಈ ಪುಸ್ತಕದ ಇನ್ನೊಂದು ಬರಹದ ಬಗ್ಗೆ ನಾನು ಬರೆಯಲೇಬೇಕು. ಅದು ಹೆಣ್ಣನ್ನು ಕುರಿತು ಇವರು ಬರೆದ ಲೇಖನ. ಅದರ ತಲೆಬರಹ ’ಸರ್ವಋತುಗಳು…’. ಬಹುಶಃ ಅವರಲ್ಲಿರುವ ಕವಿ ಮತ್ತು ಕಲಾವಿದ ಇಬ್ಬರೂ ಸೇರಿ ಬರೆದ ಬರಹ ಇದು. ಹೆಣ್ಣಿನಲ್ಲಿರುವ ಅಲಂಕಾರದ ಬಗೆಗಿನ ಆಸಕ್ತಿ, ಬಳೆ, ಓಲೆ, ಜುಮ್ಕಿ, ಕಾಲ್ಗೆಜ್ಜೆಯ ಬಗೆಗಿನ ಆಕರ್ಷಣೆ ಹಾಸ್ಯಕ್ಕೆ ವಸ್ತುವಾಗುವುದು ಸಾಮಾನ್ಯ. ಆದರೆ ಇವರು ಅವುಗಳ ಸಂಯೋಜನೆಯಲ್ಲಿ ಒಂದು ಕಲಾಕೃತಿಯನ್ನು ಕಾಣುತ್ತಾರೆ. ಇದರಲ್ಲಿ ಬರಹ ಒಂದು ತೂಕವಾದರೆ ಇವರು ಇದಕ್ಕೆ ಕೊಟ್ಟಿರುವ ತಲೆಬರಹವೇ ಇನ್ನೊಂದು ತೂಕ.
ರಾಯಚೂರು ಅವರನ್ನು ಅವರ ಕಲೆಯಂತೆ, ಕವಿತೆಗಳಂತೆ ರಂಗಭೂಮಿಯೂ ಹಂಚಿಕೊಂಡಿದೆ. ’ಮಲೆಗಳಲ್ಲಿ ಮದುಮಗಳು’ ನೋಡಿಬಂದ ಅವರು ಬರೆದ ಹನಿಗವಿತೆಗಳಲ್ಲಿ ನನಗೆ ಇಷ್ಟವಾದದ್ದುಪೀಂಚಲು ಮೈಮರೆತು
ನರ್ತಿಸುವಾಗ
ಎಲ್ಲರ ಎದೆಯೊಳಗೆ
ಹಣತೆ ಹೊತ್ತಿದ್ದವು.
**
ಮದುಮಗಳು ತಿಮ್ಮಿ
ಪದವಾದಳು
ಅವಳೊಲಿದರೆ
ಕೊರಡು ಕೊನರುವುದು
ಅವರು ಇಷ್ಟಪಟ್ಟು ಪದೇ ಪದೇ ನೋಡುವ ನಾಟಕ ’ಗಾಂಧಿ ಬಂದ’. ಅವರೇ ಅದರ ಒಂದು ಭಾಗವಾಗಿ ಹೋದ ನಾಟಕ ’ಅನಭಿಜ್ಞ ಶಾಕುಂತಲ’. ಅದರ ಬಗ್ಗೆ ಅವರು ಬರೆಯುವಾಗ ಅವರು ಎಷ್ಟು ಆರ್ದ್ರವಾಗುತ್ತಾರೆ ಎಂದರೆ ಅವರ ನಿರ್ಲಿಪ್ತ ನಿರೂಪಣೆ ಅವರಿಂದ ದೂರಾಗಿರುವುದು ಬಹುಶಃ ಈ ಬರಹದಲ್ಲಿ ಮಾತ್ರ. ಕೆವೈಎನ್, ಪ್ರಕಾಶ್ ಶೆಟ್ಟಿ, ನಾರಾಯಣ ರಾಯಚೂರು, ಮಂಗಳಾ, ಚಂಪಾ ಶೆಟ್ಟಿ, ವೇಣು, ಅಪ್ಪಯ್ಯ, ನಂದಕಿಶೋರ್, ರಾಮಚಂದ್ರ ಹಡಪದ್ ಎಲ್ಲರೂ ಸೇರಿ ಕಟ್ಟಿದ ಈ ಗಂಧರ್ವಲೋಕ ಹುಟ್ಟಿದ ಕಥೆಯನ್ನು ಇವರು ಅಷ್ಟೇ ಮಾಂತ್ರಿಕತೆಯಿಂದ ಕಟ್ಟಿಕೊಡುತ್ತಾರೆ.
ಇಷ್ಟೆಲ್ಲಾ ಬರೆಯುವಾಗಲೂ ಈ ಬರಹದಲ್ಲಿ ನಾನು ಕಂಡ ಒಂದು ಕೊರೆಯ ಬಗ್ಗೆ ಬರೆಯದೆ ಹೋದರೆ ಬರಹ ಏಕಮುಖವಾಗಬಹುದು ಎನ್ನುವ ಎಚ್ಚರಿಕೆಯಲ್ಲಿ ಇದನ್ನು ಬರೆಯುತ್ತಿದ್ದೇನೆ. ಕೃಷ್ಣ ಅವರಿಗೆ ವಿಷಯದ ಆಳಕ್ಕೆ ಇಳಿದು ಯೋಚಿಸುವ ಶಕ್ತಿ ಇದೆ, ಹಾಗೆ ಯೋಚಿಸುವುದರ ಒಂದು ಉದಾಹರಣೆ ರಾಷ್ಟ್ರೀಯತೆಯ ಬಗ್ಗೆ ಅವರು ಬರೆದಿರುವ ಬರಹ. ಇಂದಿನ ಕಾಲಮಾನಕ್ಕೆ ಇದು ಅತ್ಯಂತ ಪ್ರಸ್ತುತವಾದ ಬರಹ. ಸಹಜವಾಗಿ ಒಂದು ದೇಶದ ಅಂತಸ್ಥ ಶಕ್ತಿಯಾಗಿರುವ ದೇಶಭಕ್ತಿಯನ್ನು ಆಡಳಿತ ಪಕ್ಷ ನಿರ್ವಚನಕ್ಕೊಳಪಡಿಸಿದಾಗ ಆಗುವ ಅಪಾಯವನ್ನು ನಾವು ನೋಡುತ್ತಿದ್ದೇವೆ. ಈ ಲೇಖನದಲ್ಲಿ ಕೃಷ್ಣ ರಾಯಚೂರು ಅದನ್ನು ತುಂಬಾ ಚೆನ್ನಾಗಿ ಮಂಡಿಸಿದ್ದಾರೆ. ಆದರೆ ಕೆಲವು ಸಲ ಅವರು ಹಾಗೆ ಖಚಿತವಾಗಿ ಏನನ್ನೂ ಹೇಳದೆ ಬಿಟ್ಟುಬಿಡುವುದೂ ಉಂಟು. ಹಾಗಾದಾಗ ಯೋಚನೆಯಲ್ಲಿರುವ ಆಳ ನಿರೂಪಣೆಯಲ್ಲಿ ಬರದೆ ಹೋಗುವ ಅಪಾಯ ಇರುತ್ತದೆ. ಆಗ ಅದು ಓದುಗರಲ್ಲಿ ಒಂದು ’ದ್ವನಿ’ಯನ್ನು ಮೂಡಿಸಲು ಸೋಲುತ್ತದೆ ಎನ್ನುವುದು ನನ್ನ ಅನಿಸಿಕೆ.
ಇದರ ಹೊರತಾಗಿಯೂ ಇವರ ಶಬ್ಧಚಿತ್ರಗಳು ಅಗಣಿತ ’ಭಾವ’ಚಿತ್ರಗಳ ಗಣಿ. ಬಾಲ್ಯದಲ್ಲಿ ಅಜ್ಜನ ಊರಿನ ಜಾತ್ರೆಯಲ್ಲಿ, ಅಲ್ಲಿನ ಬಡತನದ ನಡುವೆಯೂ ನಾಲಿಗೆಯಲ್ಲಿ ಬಣ್ಣವಾಗಿ, ರುಚಿಯಾಗಿ ಉಳಿದಿರುವ ಬೆಂಡು ಬತ್ತಾಸು ಮತ್ತು ಅದು ಪ್ರತಿನಿಧಿಸುವ ’ಅವರು ಗರ್ಭದಲ್ಲಿ ಧರಿಸಿದ’ ಅವರ ಊರು ಇವರನ್ನು ಇಂದಿಗೂ ಕಾಡುತ್ತಲೆ ಇದೆ. ಅದು ಅಜ್ಜಿ ಹೊಲೆದುಕೊಟ್ಟ ಕೌದಿಯ ಹಾಗೆ ದೇಹಕ್ಕೆ ಬಿಸುಪನ್ನೂ, ಮನಸ್ಸಿಗೆ ಅಜ್ಜಿಯ ಮಡಿಲ ಪರಿಮಳವನ್ನೂ ಕೊಡುತ್ತಿರುತ್ತದೆ. ಅಂತಹ ಕೌದಿಯ ಆಪ್ತತೆ ಮತ್ತು ಬಿಸುಪು ಇಲ್ಲಿನ ಬರಹಗಳಿಗಿವೆ ಎಂದು ಹೇಳುತ್ತಾ…



ತುಂಬ ಚೆನ್ನಾಗಿದೆ … ಪುಸ್ತಕಕ್ಕೆ ಕಾಯುತ್ತಿದ್ದೇನೆ