ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೇಂದ್ರೆಯವರ ಕವನ ಪುಟ್ಟ ವಿಧವೆ…

ಮಾಲಾ ಮ ಅಕ್ಕಿಶೆಟ್ಟಿ

ಬೇಂದ್ರೆಯವರ ಜೀವನವೇ ಕವನ. ತನ್ನೆಲ್ಲಾ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟು, ಹಲವು ಕವನಗಳನ್ನು ರಚಿಸಿ, ಪ್ರತೀ ಕವನವೂ ಶ್ರೇಷ್ಠ ಎನ್ನುವುದನ್ನು ಅದರ ಜನಪ್ರಿಯತೆಯೇ ಸಾರುತ್ತದೆ. ‘ಬೆಂದಾಗ ಬೇಂದ್ರೆ’ ಎನ್ನಿಸಿಕೊಂಡು, ಜೀವನದ ಏಳು ಬೀಳುಗಳನ್ನು ಸವಿಯುತ್ತಲೇ ಕವನಗಳನ್ನು ಬರೆದವರು.         

ಧರ್ಮದ ಹೆಸರಿನಲ್ಲಿ, ಆತ ಬಾಲಕನಿರುವಾಗ ಆಕೆ ಇನ್ನೂ ಕೂಸಿದ್ದಾಗ ಮದುವೆ ಮಾಡಿ, ಚಿಕ್ಕ ವಯಸ್ಸಿಗೇ ವೈಧವ್ಯವನ್ನು ಕಂಡು, ಜೀವನ ನರಕವಾದ,ಸಾಮಾಜಿಕ ಕಳಕಳಿಯ ಕವನ “ಪುಟ್ಟ ವಿಧವೆ” ನನಗೆ ಅಚ್ಚುಮೆಚ್ಚು. ಕರಿಮಣಿ, ಗಲ್ಲಕ್ಕೆ ಅರಿಶಿನ, ಮೂಗು ಬೊಟ್ಟು,ಉದ್ದ ಕುಂಕುಮ ಮುತ್ತೈದೆಯ ಸಂಕೇತ. ಎಲ್ಲವೂ ಚೆಂದವೇ! ಆಕೆ ದೊಡ್ಡವಳಾಗಿ ಶೋಭಾನ ಮಾಡಿ, ವರ್ಷ ತುಂಬುವುದರಲ್ಲಿ ಮಗನನ್ನು ಹೆತ್ತು, ಆ ಅವಧಿಯಲ್ಲೇ ಗಂಡನನ್ನೂ ಕಳೆದುಕೊಂಡು ಪುಟ್ಟ ವಿಧವೆಯಾಗುತ್ತಾಳೆ. ಮಗುವೂ ಗಂಡನ ದಾರಿ ಹಿಡಿಯುತ್ತದೆ. ಗಂಡನೂ ಇಲ್ಲ, ಮಗುವೂ ಇಲ್ಲ!          

ಮೊದಲಿನಿಂದಲೂ ವೈಧವ್ಯ ಅಪಶಕುನದ ಸಂಕೇತ. ಮಡಿ ಮೈಲಿಗೆಯಲ್ಲಿ ಬಂಧಿಸಿಕೊಂಡು, ಮುತ್ತೈದೆಯರ ಕಾರ್ಯಗಳಲ್ಲಿ ನಿಷೇಧವನ್ನು ಕಟ್ಟಾ ಆಕೆ ಪಾಲಿಸಬೇಕಾಗಿತ್ತು. ಸದಾ ಕೆಂಪು ಸೀರೆಯುಟ್ಟು, ಹರೆಯವನ್ನು ಮುದುಕರಂತೆ ಕಳೆಯಬೇಕಿತ್ತು. ದೇಹ ಮನಸ್ಸಿನ ಆಕಾಂಕ್ಷೆಗಳನ್ನು ಬಾವಿಗೆ ತಳ್ಳಿ ಒಬ್ಬ ಸನ್ಯಾಸಿಗಿಂತಲೂ ಕಠಿಣ ಜೀವನ ನಡೆಸಬೇಕಿತ್ತು. ದೇವರು, ದಿಂಡಿರು, ಅಧ್ಯಾತ್ಮ ವಯಸ್ಸಿಗೆ ತಕ್ಕಂತೆ ಇಳಿವಯಸ್ಸಿನಲ್ಲಿ ತಂತಾನೆ ಆಕರ್ಷಿಸುವ ವಿಷಯಗಳು, ಆದ್ರೆ ವಿಧವೆಯರಿಗೆ ಅದು ಕಡ್ಡಾಯವಾಗಿತ್ತು.

ಈ ಕಡ್ಡಾಯದಲ್ಲಿ ನಿಜವಾದ ಒಲವಿತ್ತೇ ಎನ್ನುವುದು ಸಂಶಯ. “ಹಿಟ್ಟು ಅವಲಕ್ಕಿಯ ಸೇವಿಸಲು, ಹೂಬತ್ತಿ ಹೊಸೆಯಲು ಬಂದಳೇ” ಎನ್ನುವ ಕವಿಯ ಸಾಲುಗಳಲ್ಲಿ ದುಃಖದ ಮಡುವಿದೆ. ಪುರಾಣದ ಅಧ್ಯಾತ್ಮಕ್ಕೆ ಬಂದಾಗಲೂ ಮೂರ್ತಿಗೆ ಮಂಕು, ಆಚಾರ್ಯನಿಗೆ ಉರಿ ಎನ್ನುವಾಗ ರೋಷ ಉಕ್ಕುತ್ತದೆ.ಆಚಾರ್ಯನ ಕಾಮುಕ ದೃಷ್ಟಿಯಿಂದ, ಜಾರ ಕೃಷ್ಣನ ಕಥೆಯಾಗುವಳು.ವಿಧವೆ,ಅವಿವಾಹಿತೆ ಮತ್ತು ಗಂಡ ತೊರೆದ ಹೆಣ್ಣಿನ ಸ್ಥಿತಿ ಸಮಾಜದಲ್ಲಿ ಗಂಭೀರವಾಗಿದೆ.ಗಂಡಸರ ಕಾಮುಕ ಕಣ್ಣು ಇವರನ್ನು ಹಿಂಬಾಲಿಸುತ್ತಲೇ ಇರುತ್ತದೆ.ಆಕೆ ಬಂದದ್ದು ಅಧ್ಯಾತ್ಮದಲ್ಲಿ ಲೀನವಾಗಲು ಅಲ್ಲವೇ? ಅದಕ್ಕೂ ಅವಕಾಶವಿಲ್ಲವೇ? ಎಲ್ಲವನ್ನೂ ನಿಷೇಧದ ಚೌಕಟ್ಟಿನಲ್ಲಿ ನಿಲ್ಲಿಸುವಾಗ, ಜೀವನ ಎಷ್ಟು ದುಸ್ತರ ಅಂತಾ ಕ್ಷಣ ಯೋಚಿಸಬೇಕಾಗುತ್ತದೆ. ಬೇಡದ ಅನಿವಾರ್ಯದ ಜೀವನ ಅದು. ನರಕವೇ!          

ಈ ಕಟ್ಟುನಿಟ್ಟನ್ನು ಈಗಿನವರಿಗೆ ಹೋಲಿಸಿದರೆ ಎಷ್ಟೊಂದು ಅಜಗಜಾಂತರ ವ್ಯತ್ಯಾಸವೆಂದು ತಿಳಿದು ಬರುತ್ತದೆ.ಮದುವೆಯೆಂಬ ಬಂಧನಕ್ಕಿಂತ ಮೊದಲೇ ಸ್ವೇಚ್ಛೆಯಾಗಿ ನಡೆದುಕೊಂಡು, ಪವಿತ್ರ ಅನ್ನೋದನ್ನೆಲ್ಲಾ ಕಳೆದುಕೊಂಡು,ಗರತಿಯಂತೆ /ರಾಮನಂತೆ ಸೋಗು, ರೋಷದ ಆಶ್ಚರ್ಯವನ್ನುಂಟುಮಾಡುತ್ತದೆ. ಪವಿತ್ರತೆ ಇಬ್ಬರಲ್ಲೂ ಇರಬೇಕು.ಇನ್ನು ಮದುವೆಯಾಗಿ, ಮಕ್ಕಳಾಗಿ, ಮಕ್ಕಳು ಮದುವೆಗೆ ಬಂದಾಗಲೂ ಇತರರೊಂದಿಗೆ ನಡೆಸುವ ಅನೈತಿಕ ಅನ್ನುವಂತಹ ಮಾತು, ಭೇಟಿ, ಮುಂದುವರಿದ ಸಂಬಂಧಗಳ ಮುಂದೆ ಪುಟ್ಟ ವಿಧವೆ ದೇವತೆಯಂತೆ ಕಾಣುತ್ತಾಳೆ.

ಆಧುನಿಕ ಆ್ಯಪ್ ಗಳ ಮುಖಾಂತರ ನಡೆಸುವ ಚಾಟ್ (flirt) ಇದರ ಪರಿಧಿಯಲ್ಲಿದೆ. ವರ್ಚುವಲ್ ಜಗತ್ತಿನಲ್ಲಿ ಇಂಥವು ಸಾಕಷ್ಟಿವೆ. ಏನೂ ಇಲ್ಲದಾಗ ಅಂದರೆ ಗಂಡ, ಹೆಂಡತಿ ಅಥವಾ ಮಕ್ಕಳು ಇಲ್ಲದಾಗ ಸಂಬಂಧಗಳ ಆಸೆ ನಡೆದೀತು ಆದರೆ ಎಲ್ಲವೂ ಇದ್ದು, ಅನೈತಿಕ ಹಾದಿಯನ್ನು ತಾವಾಗಿಯೇ ಬಯಸಿ, ಅದರ ಕಲ್ಪನೆಯೂ ಇಲ್ಲದವರೊಂದಿಗೆ ಅದರ ರುಚಿಯನ್ನು ತೂರಿಸುವ ಪ್ರಯತ್ನ ಮಾಡುವುದು ಎಷ್ಟು ಸರಿ? ಇಂಥ ಸಂದರ್ಭದಲ್ಲಿ ಪುಟ್ಟ ವಿಧವೆ ಶ್ರೇಷ್ಠ ಅನ್ನಿಸುವುದಿಲ್ಲವೇ? ವಿಧವೆಯ ಕಷ್ಟ ಅರಿತ ಸಮಾಜೋದ್ಧಾರಕರು ಸಮಾಜದಲ್ಲಿ ಬದಲಾವಣೆ ಮಾಡಿ, ಕೆಲವು ಸಡಿಲಿಕೆಗಳನ್ನು ಕೊಟ್ಟರೆ, ಆಧುನಿಕ ಜನ ಹೀಗೆ ಬಳಸಿಕೊಳ್ಳುತ್ತಿದ್ದಾರೆ! ದೇಹ ಮನಸ್ಸಿನ ಹತೋಟಿಯನ್ನು ಪುಟ್ಟ ವಿಧವೆ ಸಾಧಿಸಿದ್ದಾಳೆ.                      

ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ 4 ಕೋಟಿ ವಿಧವೆಯರಿದ್ದಾರೆ.ಸ್ವಾತಂತ್ರ್ಯ, ಆಸ್ತಿಯ ಹಕ್ಕನ್ನು ಕಳೆದುಕೊಂಡು ದೌರ್ಜನ್ಯಕ್ಕೊಳಗಾಗಿ, ಭಿಕ್ಷಾಟನೆ ಮತ್ತು ವೈಶ್ಯಾವೃತ್ತಿಯಲ್ಲಿ ತೊಡಗಿದ್ದಾರೆ. ವಿಧವೆಯರನ್ನು ಕಾಶಿ ವೃಂದಾವನದಲ್ಲಿ ಬಿಡುತ್ತಾರೆ ಎಂಬ ಪ್ರತೀತಿ ಇದೆ. ಅಲ್ಲಿ ಹೆಚ್ಚಿನವರು ಭಿಕ್ಷಾಟನೆ ಮಾಡುತ್ತಾರೆ. ರಾಜ್ ಲೂಂಬಾ ತನ್ನ ತಾಯಿಯ ವೈಧವ್ಯವನ್ನು ಕಣ್ಣಾರೆ ಕಂಡು ಅವರ ನೋವುಗಳಿಗೆ ಮಿಡಿಯುವದಕ್ಕಾಗಿ 1997ರಲ್ಲಿಯೇ ಲೂಂಬಾ ಪ್ರತಿಷ್ಠಾನವನ್ನು ಸ್ಥಾಪಿಸಿ, ವಿಧವೆಯರ ಸ್ವಾತಂತ್ರ್ಯ ಮತ್ತು ಹಕ್ಕುಗಳ ಬಗ್ಗೆ ಚಿಂತಿಸಿದ್ದಾರೆ.ಹೀಗಾಗಿ ವಿಧವೆಗಂಟಿದ ಅಪಶಕುನ ಕಾಣೆಯಾಗಬೇಕಾಗಿದೆ. ಕೊಟ್ಟ ಸ್ವಾತಂತ್ರ್ಯವನ್ನು ಸರಿಯಾಗಿ ಆಕೆ ಬಳಸಬೇಕಾಗಿದೆ.ವಿಧವೆಯ ಪಟ್ಟ ಇಟ್ಟುಕೊಂಡು ಅನುಕಂಪದ ಆಸೆ ಬೇಡ. ಸ್ವತಂತ್ರ ಹೊಸ ಬದುಕನ್ನು ನ್ಯಾಯ ನೀತಿಯ ಪರಿಧಿಯಲ್ಲಿ ಕಟ್ಟಿಕೊಳ್ಳಬೇಕು.ಕಷ್ಟಗಳನ್ನು ಬದಿಗೊತ್ತಿ ಯಶಸ್ಸಿನ ಬದುಕನ್ನು ಜಗತ್ತಿಗೆ ತೋರಿಸುವಂತಾಗಬೇಕು.

‍ಲೇಖಕರು Admin

1 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading