ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆಳ್ಳೇಕೆರೆ ಮತ್ತ ಸಾರೆಕೊಪ್ಪದ ಬಂಗಾರಪ್ಪ

ಪ್ರಸಾದ್ ರಕ್ಷಿದಿ

ಸಾರೆಕೊಪ್ಪದ ಬಂಗಾರಪ್ಪ ವಿಧಿವಶರಾಗಿದ್ದಾರೆ. ಕರ್ನಾಟಕದ ರಾಜಕೀಯ ಸಾಮಾಜಿಕ, ಸಾಂಸ್ಕೃತಿಕ, ಇತಿಹಾಸದಲ್ಲಿ ಅವರು ಖಂಡಿತವಾಗಿಯೂ ಚಿರಸ್ಥಾಯಿಯಾಗಿದ್ದಾರೆ. ಅವರ ಸಾಮಾಜಿಕ ಕಾಳಜಿಯ ಒಂದು ಕಿರುಪರಿಚಯ ಇಲ್ಲಿದೆ. ಇದು ನನ್ನ ಬೆಳ್ಳೇಕೆರೆ ಹಳ್ಳಿ ಥೇಟರ್ ಪುಸ್ತಕದಲ್ಲಿ ಬರುವ ಒಂದು ಅಧ್ಯಾಯದ ಭಾಗ

‘ಜೈ ಕರ್ನಾಟಕ ಸಂಘ’ ಆ ವೇಳೆಗಾಗಲೇ ಹಾಸನ ಜಿಲ್ಲೆಯಲ್ಲಿ ಸ್ವಲ್ಪಮಟ್ಟಿಗೆ ಪರಿಚಿತ ಸಂಸ್ಥೆಯಾಗಿತ್ತು. ನೀನಾಸಂ ತಿರುಗಾಟದ ಪರಿಚಯ ಪತ್ರದಲ್ಲಿ ಪ್ರಕಟಿಸುವ ಕರ್ನಾಟಕದ ನಕ್ಷೆಯಲ್ಲಿ ನಮ್ಮೂರಿನ ಹೆಸರು ಪದೇ ಪದೇ ಕಾಣಿಸಿಕೊಳ್ಳುತ್ತಿತ್ತು. ಇದರಿಂದಾಗಿ ನಮ್ಮ ಸಣ್ಣ ಹಳ್ಳಿಯ ಹೆಸರು ರಾಜ್ಯಮಟ್ಟದಲ್ಲೂ ನಾಟಕ ವಲಯದ ಕೆಲವರಿಗೆ ಗೊತ್ತಿತ್ತು.

ನಮ್ಮ ಕಾರ್ಯಕ್ರಮಗಳೆಲ್ಲಾ ‘ಪ್ರಕೃತಿ ರಂಗಮಂಚ ರಕ್ಷಿದಿ’ ಎಂದರೆ, ರಕ್ಷಿದಿ ಶಾಲಾ ಆವರಣದಲ್ಲಿ ನಡೆಯುತ್ತಿದ್ದುದರಿಂದ ನಾವು ಶಾಲೆಗೆ ತೊಂದರೆಯಾಗದಂತೆ ಕಾರ್ಯಕ್ರಮಗಳನ್ನು ಮಾಡಬೇಕಿತ್ತು. ನಾವೇ ಕಟ್ಟಿ ಬೆಳೆಸಿದ ಶಾಲೆಯಾದರೂ ಅನೇಕ ಸಾರಿ ನಾವು ಅಲ್ಲಿ ಕಾರ್ಯಕ್ರಮಗಳನ್ನು ನಡೆಸಲು, ಶಿಕ್ಷಣ ಇಲಾಖೆಯ ಅನುಮತಿ ಪಡೆಯಬೇಕಾಗಿತ್ತು. ಇದು ಕಾನೂನಿನಂತೆ ಅನಿವಾರ್ಯವಿತ್ತು. ಇದರಿಂದ ಕೆಲವು ಸಾರಿ ನಮಗೆ ಕಿರಿಕಿರಿಯಾಗತೊಡಗಿತು. ನಮ್ಮದೇ ಆದ ಸ್ಥಳವಿದ್ದರೆ ಒಳ್ಳೆಯದು ಅನ್ನಿಸತೊಡಗಿತು.

ಆಗ ಬಂಗಾರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅವರ ರಾಜಕೀಯ ನಿಲುವುಗಳೇನೆ ಇರಲಿ, ಅವರ ಸಮಾಜವಾದಿ ಹಿನ್ನೆಲೆ, ಸಂಸ್ಕೃತಿಯ ವಿಷಯಗಳಲ್ಲಿ ಅವರಿಗಿರುವ ನಿಲುವುಗಳು ನಮಗೆ ತಿಳಿದಿತ್ತು. ಆದ್ದರಿಂದ ನಮ್ಮ ಕಾರ್ಯಕ್ರಮಗಳ ಪತ್ರಿಕಾವರದಿಗಳು, ಕರಪತ್ರಗಳು ಇನ್ನಿತರ ವಿವರಗಳ ಪ್ರತಿಗಳನ್ನಿಟ್ಟು-ನಮಗೆ ರಂಗ ಮಂದಿರ ನಿರ್ಮಾಣಕ್ಕೆ ಸ್ಥಳ ನೀಡುವಂತೆ ಕೇಳಿ ಇದಕ್ಕೆ ನಮಗೆ ಅನುಕೂಲವಾದ ಖಾಲಿ ಇರುವ ಸರ್ಕಾರಿ ಸ್ಥಳವನ್ನು ಸೂಚಿಸಿ, ಬಂಗಾರಪ್ಪನವರಿಗೆ ಒಂದು ಅರ್ಜಿಯನ್ನು ಬರೆದು, ನೇರವಾಗಿ ಅವರ ವೈಯಕ್ತಿಕ ವಿಳಾಸಕ್ಕೆ ಕಳುಹಿಸಿಕೊಟ್ಟೆವು. ನಮಗ್ಯಾರಿಗೂ ಬಂಗಾರಪ್ಪನವರ ಸಂಪರ್ಕವಾಗಲೀ ಪರಿಚಯವಾಗಲೀ ಇರಲಿಲ್ಲ. ಆದರೂ ಏನೋ ಒಂದು ಮನಸ್ಸಿಗೆ ಬಂದ ಕೆಲಸವನ್ನು ಮಾಡಿದ್ದೆವು ಅಷ್ಟೆ.

ಅರ್ಜಿ ಕಳುಹಿಸಿ ಎರಡು ವರ್ಷ ಕಳೆದಿರಬೇಕು. ನಮಗೆ ನಮ್ಮ ಅರ್ಜಿಯ ವಿಷಯ ಕೆಲವು ಸಾರಿ ನೆನಪಾದರೂ ಅದೀಗ ಕಸದ ಬುಟ್ಟಿ ಸೇರಿರಬೇಕೆಂದು ಸುಮ್ಮನಾಗಿದ್ದೆವು. ಸಕಲೇಶಪುರದ ತಹಸೀಲ್ದಾರ್ರನ್ನು ಒಮ್ಮೆ ವಿಚಾರಿಸಿದಾಗ ಅವರು ಹಾಗೆಲ್ಲ ಕಂಡಕಂಡವರಿಗೆಲ್ಲ ಸ್ಥಳ ಕೊಡಲು ಬರುವುದಿಲ್ಲ ವೆಂದು ತಿಳಿಸಿದರು. ಆಗ ಇದ್ದ ಶಾಸಕರೂ ನಮ್ಮ ಪಕ್ಷದವರಲ್ಲವೆಂದು ಅವರನ್ನು ಮಾತಾಡಿಸದೆ ಸುಮ್ಮನೆ ಕೂತಿದ್ದೆವು.!

ಒಂದು ದಿನ ನಾವೊಂದಷ್ಟು ಜನ ಬೆಳ್ಳೇಕೆರೆಯ ಪಂಚಾಯತ್ ಆಫೀಸಿನಲ್ಲಿ ಹರಟೆ ಹೊಡೆಯುತ್ತ ಕೂತಿದ್ದೆವು. ಹಾನುಬಾಳು ಹೋಬಳಿ ರೆವಿನ್ಯೂ ಇನ್ಸ್ಪೆಕ್ಟರ್, ಹೊರಗೆ ಯಾರಲ್ಲೋ ‘ಜೈ ಕರ್ನಾಟಕ ಸಂಘ’ ಎಲ್ಲಿದೆ ಎಂದು ವಿಚಾರಿಸುತ್ತಿದ್ದರು. ಅವರು ಹೊಸದಾಗಿ ವರ್ಗವಾಗಿ ಬಂದವರಾದ್ದರಿಂದ ಅವರಿಗೂ ನಮ್ಮ ಪರಿಚಯ ಇರಲಿಲ್ಲ. ನಂತರ ಒಳಗೆ ಬಂದು ನಮ್ಮ ಪರಿಚಯ ಮಾಡಿಕೊಂಡರು.

ನಮಗೆ ಆಶ್ಚರ್ಯವಾಗುವಂಥ ಸುದ್ದಿಯಿತ್ತು. ಬಂಗಾರಪ್ಪ ಮುಖ್ಯ ಮಂತ್ರಿಯಾಗಿದ್ದಾಗಲೇ ನಮಗೆ ನಾವು ಬಯಸಿದ ಜಾಗದಲ್ಲಿ ಒಂದು ಎಕರೆ ಸ್ಥಳವನ್ನು ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದರು. ಆ ಆದೇಶ ಸರ್ಕಾರಿ ಯಂತ್ರದೊಳಗೆ ಹಾದು ಇಲ್ಲಿಗೆ ತಲುಪಿದಾಗ ಇಷ್ಟು ಸಮಯವಾಗಿತ್ತು. ಆ ವೇಳೆಗಾಗಲೇ ಬಂಗಾರಪ್ಪನವರು ಅಧಿಕಾರ ಕಳೆದುಕೊಂಡಿದ್ದರು. ಬಂಗಾರಪ್ಪನವರು ನಮ್ಮಲ್ಲಿ ಯಾರನ್ನೂ ನೋಡದೇ ಇದ್ದರೂ ಸಹ ನಮ್ಮ ಅರ್ಜಿಯ ವಿವರಗಳನ್ನು ನೋಡಿ ಅದರ ಆಧಾರದ ಮೇಲೆ ನಮಗೆ ಸ್ಥಳ ಮಂಜೂರು ಮಾಡಲು ಆದೇಶ ಕೊಟ್ಟಿದ್ದರು.

ಕೇವಲ ಇಪ್ಪತ್ತೆರಡು ರೂಪಾಯಿ ಖರ್ಚಿನಲ್ಲಿ ನಮಗೆ ಜಾಗ ಸಿಕ್ಕಿತ್ತು. ರಕ್ಷಿದಿಯಲ್ಲಿ ಸಕಲೇಶಪುರ ಹಾನುಬಾಳು ರಸ್ತೆಯ ಪಕ್ಕದಲ್ಲಿ, ಗುಡ್ಡದ ಇಳಿಜಾರಿನಲ್ಲಿ ಒಂದು ಎಕರೆ ಜಾಗ ನಮ್ಮ ರಂಗಮಂದಿರ ಯೋಜನೆಗೆ ದೊರೆತಿತ್ತು.

(ಈಸ್ಥಳದಲ್ಲೀಗ ಪೂರ್ಣಚಂದ್ರತೇಜಸ್ವಿ ರಂಗಮಂದಿರ, ಮತ್ತು.ರಂಗಜಂಗಮ ಬಯಲುರಂಗಮಂದಿರ, ನಿರ್ಮಾಣವಾಗುತ್ತಿದೆ ರಂಗಧಾಮ ಅತಿಥಿಗೃಹ ಪೂರ್ಣಗೊಂಡಿದೆ, ಗ್ರಂಥಾಲಯ, ಕಛೇರಿಗಳೂ ನಿರ್ಮಾಣವಾಗುತ್ತಿವೆ.)

ಜೈ ಕರ್ನಾಟಕ ಸಂಘ ಬೆಳ್ಳೇಕೆರೆಯ ಎಲ್ಲ ಗೆಳೆಯರು ಶ್ರದ್ಧಾಂಜಲಿಯನ್ನು ಆರ್ಪಿಸುತ್ತಿದ್ದಾರೆ.

‍ಲೇಖಕರು G

27 December, 2011

ನಿಮಗೆ ಇವೂ ಇಷ್ಟವಾಗಬಹುದು…

3 Comments

  1. jagadishkoppa

    ಪ್ರಸಾದ್ ನಿಮ್ಮೂರಿಗೆ ಬಂದು ಒಂದು ದಿನ ಇದ್ದು ನಿಮ್ಮೆಲ್ಲಾ ನಾಟಕ ಚಟುವಟಿಕೆ ನೋಡಬೇಕು ಅಂತಾ ಅನಿಸುತ್ತಿದೆ.

  2. prasad raxidi

    ಮುಂದಿನ ಏಪ್ರಿಲ್ ತಿಂಗಳಲ್ಲಿ ಬಯಲು ರಂಗಮಂದಿರದ ಉದ್ಘಾಟನೆಗೆ ಬಂಗಾರಪ್ಪನವರನ್ನು ಆಹ್ವಾನಿಸಿ ಅವರನ್ನು ಚಕಿತಗೊಳಿಸಬೇಕೆಂದು ನಿರ್ಧರಿಸಿದ್ದೆವು, ಈಗ ಅದು ಹಾಗೇ ಉಳಿದುಹೋಯಿತು..

  3. ಕವಿಸ್ವರ, ಶಿಕಾರಿಪುರ

    ಬಂಗಾರಪ್ಪನವರ ಕಲ್ಪನೆಯ ಮೂಸೆಯಲ್ಲಿ ಅರಳಿದ ವಿಶ್ವ,ಆರಾಧನಾ,ಆಶ್ರಯ,ಗ್ರಾಮೀಣ ಕೃಪಾಂಕಗಳಂತಹ ಬಡಪರ-ಜನಪರ ಕಾರ್ಯಕ್ರಮಗಳು ಒಂದೆಡೆ ಅವರಲ್ಲಿನ ಅಪ್ಪಟ ಮನುಷ್ಯನನ್ನು ಅನಾವರಣಗೊಳಿಸಿದರೆ, ಇನ್ನೊಂದೆಡೆ ಅವರ ಸಿಟ್ಟು,ಹುಂಬತನ,ಅವಸರ,ಅಸಹನೆಗಳು ಅವರೊಳಗಣ ಅಸಡ್ಡಾಳ ರಾಜಕಾರಣಿಯನ್ನು ಬಡಿದೆಬ್ಬಿಸುತ್ತಿತ್ತು.. ಬಹುಶಃ ಬಂಗಾರಪ್ಪನವರ ಅಸಲೀಯತ್ತೇ ಹಾಗಿತ್ತೇನೋ, ತನ್ನೊಳಗಿನ ರಾಜಕಾರಣಿ ಹಾಗೂ ಮನುಷ್ಯನ ನಡುವೆ ದ್ವಂದ್ವಕ್ಕೆ ಬಿದ್ದವರಂತೆ ವರ್ತಿಸಿದರು..ಈ ದ್ವಂದ್ವಯುದ್ಧ ಅಂತರಂಗವನ್ನೂ ಮೀರಿ ಬಹಿರಂಗವಾಗಿ ಮತ್ತು ಸಾರ್ವಜನಿಕವಾಗಿ ಸಾದರಗೊಳ್ಳುತ್ತಿತ್ತು.
    ಅವರ ಬಗೆಗಿನ ಅನೇಕ ದಂತಕತೆಗಳಲ್ಲಿ ನಾನು ಕಣ್ಣಾರೆ ಕಂಡ ಸತ್ಯಕತೆಯಂತಹ ಸನ್ನಿವೇಶವನ್ನು ಹಂಚಿಕೊಳ್ಳಲು ಬಯಸುತ್ತೇನೆ..
    ಬಂ.ರವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ಕರ್ನಾಟಕ ಸರ್ಕಾರ ಸಚಿವಾಲಯದ ಗ್ರೂಪ್-ಡಿ ಹುದ್ದೆಗಳನ್ನು ಹಲವಾರು ವರ್ಷಗಳಿಂದ ಗುತ್ತಿಗೆಯಾಧಾರದಲ್ಲಿ ಕನಿಷ್ಟ ವೇತನದಲ್ಲಿ ದುಡಿಯುತ್ತಿದ್ದ ನೂರಾರು ಬಡ ಜವಾನರನ್ನು ಸರ್ಕಾರಿ ಸೇವೆಯಲ್ಲಿ ವಿಲೀನಗೊಳಿಸಿದರು.. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ತಮ್ಮ ಅಹವಾಲನ್ನು ಯಾವುದೇ ಅಧಿಕಾರಿ-ಮಂತ್ರಿ ಮಹೋದಯರು ಆಲಿಸಿಕೊಳ್ಳಲಾಗದ ಸಮಯದಲ್ಲಿ, ಮುಖ್ಯಮಂತ್ರಿಯೊಬ್ಬ ತಮ್ಮನ್ನು ಪರಿಗಣಿಸಿದ ರೀತಿಗೆ ಮಾರುಹೋಗಿದ್ದರು.. ಅಂತಹ ನಾಲ್ಕನೇ ಸ್ತರದ ನೌಕರನೊಬ್ಬ ಆಗ ತನಗೆ ಹುಟ್ಟಿದ ಮಗನಿಗೆ ಬಂಗಾರಪ್ಪನೆಂದು ಹೆಸರಿಡುವ ಮೂಲಕ ತನ್ನ ಕುಟುಂಬದಲ್ಲಿ ಅವರ ಹೆಸರನ್ನು ಪ್ರತಿಷ್ಟಾಪಿಸಿಬಿಟ್ಟರು.. ನರಸಿಂಹಲು ಎಂಬ ತೆಲುಗು ಮಾತೃಭಾಷಿಕ ಆ ನೌಕರರು ಅಪ್ಪಟ ಕನ್ನಡದ ಹೆಸರನ್ನು ಆ ಹೆಸರಿನ ವ್ಯಕ್ತಿಯೆಂಬ ಮಹೋದಯನನ್ನು ಅಳಿಸಲಾರದಂತೆ ಉಳಿಸಿದ್ದು ಹೀಗೆ..
    ಬಂಗಾರಪ್ಪನವರ ಅಸಲೀಯತ್ತೇ ಹೀಗೆ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading