ಬೆಳಗಿ(ಕಿ)ನ ಚಹಾ ಕುದಿಯುತ್ತಿದೆ!

ಸುಚಿತ್ರಾ ಹೆಗಡೆ

ಎದೆಯ ಪದಗಳು ಕೆಳಗಿಳಿದು

ಬೆರಳುಗಳೊಂದಿಗೆ ಬೆರೆಯುವಂತೆ

ತಣ್ಣಗಿನ ಹಾಲು ಬಿಸಿ ಚಾನೀರಿನ ಜೊತೆಯಾಗಿ

ನಿಧಾನವಾಗಿ ಸುತ್ತಿ ಸುಳಿದು ನಸು ಬಿಳಿ ಮಸುಕಾಗಿ

ತಿಳಿಗೆಂಪಾಗುವ ಹೊತ್ತು

ನನ್ನೊಳಗೇ ನಾನು ಕೂತು

ಸುತ್ತಲೂ ನೋಡುತ್ತೇನೆ

ಒಳಗಿನ ಪದರಗಳನ್ನು ತಡಕಾಡುತ್ತೇನೆ

ಇದ್ದಬದ್ದ ಸವಕಲು ಪದಗಳನ್ನೆಲ್ಲ

ಒಟ್ಟುಗೂಡಿಸಿ ಬಾಡಿಗೆಗಿವೆ

ಬೋರ್ಡು ತೂಗುಬಿಡುತ್ತೇನೆ

ಹತಾಶ  ಕವಿಗಳೇನಾದರೂ

ಅರ್ಜಿ ಹಾಕುವರೇ ಎಂದು

ಮಂಜುಗಣ್ಣಾಗಿ ಕಾಯುತ್ತೇನೆ

ಕಿಟಕಿಯಾಚೆಗೆ ಚಳಿಗಾಳಿ  

ರಾತ್ರಿಯೊಡನೆ ಪಿಸುಗುಟ್ಟಿ 

ನಡೆಸುತ್ತಿದೆ ಓಡಿಹೋಗುವ ಹುನ್ನಾರ

ಕತ್ತಲ ಬಗೆದು ಬೆಳಕು ಗೋರಿಕೊಳ್ಳುವ

ಅವಸರ ಆಗಸದೆತ್ತರದ ಕೈಕೊಂಬೆಗಳಿಗೆ

ನಿಶೆಯ ಪಾತಕ ಲೋಕದ

ಗುಟ್ಟು ರಟ್ಟು ಮಾಡುವ 

ಸಡಗರದಲಿ ಚಿಲಿಪಿಲಿಗುಟ್ಟುವ ಖಬರಿಗಳು

ಅಂತರಂಗದ ಮಿಡತೆಯೊಂದು 

ಮುಚ್ಚಿದ ಗಾಜಿನ ಬಾಗಿಲು ತಟ್ಟಿ 

ತೆರೆಯಲು ಗೋಗರೆಯುತ್ತಿದೆ

ಉಕ್ಕಿ ಬರುವ ಭಾವನೊರೆಯ

ಕಲಕಿ, ಸೋಸಿ ಕಾವ್ಯದ

ಕಪ್ಪಿನೊಳಗೆ ಜರ್ರನೆ ಸುರಿದಾಗ

ಹಬೆಯಾಡುವ ಹೊಸ ದಿನವೊಂದರ ಉದಯ!

ಕವಿಯ ಕಟಕಟೆಯಲ್ಲಿ…

ನನ್ನ ಕವಿತೆಗೂ ಕವನಕ್ಕೂ  

ಸದಾ ದ್ವಂದ್ವಯುದ್ಧ

ನನ್ನ ಕೈಯ ತಕ್ಕಡಿಗೋ

ಉಭಯಸಂಕಟ

ದೊಡ್ಡ ಮಗ ಕವನ-ಹುಳುಕಿಲ್ಲ

ತುಸು ಬೋಳೆ ಸಾಫ್ ಸೀದಾ

ಮೃದುಭಾಷಿ ನೇರಾತಿನೇರ

ಹೆತ್ತವರ ಅಂಕೆ ಮೀರದ

ಚೌಕಟ್ಟು ದಾಟದ ಪೋರ

ಪ್ರತಿ ಪದಗಳಿಗೂ ಅದರದ್ದೇ ಜಾಗ

ನೀ ಓದಿದ್ದೇ ನಿನ್ನ ಭಾಗ

ಹಸನ್ಮುಖಿಯ ಗುರಿ ನೇರ

ರಸಾಸ್ವಾದಕಿಲ್ಲ ಬರ

ನನ್ನ ತುಂಟಿ ಮಗಳು ಕವಿತೆ

ತುಸು ಬಜಾರಿ ಕಡುಜಾಣೆ

ಹೇಳುವದೊಂದು

ಮಾಡುವದೇ ಇನ್ನೊಂದು

ಅಂಕುಡೊಂಕಿನ ಒಗಟುಮಾತು

ನೂರುಮಾತಿಗಳಿಗೂ ಒಂದೇ ಸಾಲು

ಒಂದೇ ಪದಕೆ ನೂರೆಂಟು ನಂಟು

ಚುರುಕು ಮಾತಿನ ಬಾಯಿ ಬಡಿವಾರ

ನಿಯಮಗಳೆಲ್ಲ  ಗಾವುದ ದೂರ

ಸುತ್ತು ಬಳಸಿನ ದಾರಿ ನಿಗೂಢ ನಾರಿ

ಒರಟು ಚಿಪ್ಪಿನಲಡಗಿದ ಹುಂಗು

ವ್ಯರ್ಥ ವಾದವಿದು ಯಾರು ಮಿಗಿಲು

ಗಳಿಗೆಗೊಮ್ಮೆ ಪರಡಿ ಬದಲು

ಗುರಿಯೊಂದೆ ದಾರಿ ಹಲವು

ನೇರ ಕವನ ಓರೆ ಕವಿತೆ ಹೋಗಿ

ತಟ್ಟುವದು ಭಾವದೆದೆಯ ಕದವನ್ನೆ

ತಾಯಿಗೆಲ್ಲಿಯ ತಾರತಮ್ಯ

ಜಿನುಗುವದು ಇಬ್ಬರಿಗೂ

 ಕವಿರಸದ ವಾತ್ಸಲ್ಯ!

‍ಲೇಖಕರು Avadhi

January 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: