ಬೆಳಕು ಹರಿವ ಮುನ್ನ..

ಟಿ ಎಸ್ ಶ್ರವಣಕುಮಾರಿ 

ಗಡಿಯಾರದ ಗೂಡಿನಿಂದ ಹೊರಬಂದ ಪುಟ್ಟ ಕೋಳಿ ಹನ್ನೆರಡು ಬಾರಿ ರಾಗವಾಗಿ ಉಲಿಯಿತು. ಟೀವಿ ನೋಡುತ್ತಾ ಕುಳಿತಿದ್ದ ಕುಸುಮ ತಲೆಯೆತ್ತಿ ನೋಡಿದಳು – ಶುರುವಾಯಿತು ಇನ್ನೊಂದು ದಿನ…. ಹೀಗೆಯೇ ಬರುತ್ತಲೇ ಇದೆ – ಪ್ರತಿ ಇಪ್ಪತ್ನಾಲ್ಕು ಗಂಟೆಗೊಂದು ಹೊಸದಿನ. ಆದರೆ ತನ್ನ ಜೀವನ ಯಾವ ಹೊಸತನ್ನೂ ಕಾಣುತಿಲ್ಲ. ಎಷ್ಟೋ ವರ್ಷಗಳಿಂದ ಕಾಲ ಹೀಗೇ… ಗೀರು ಬಿದ್ದ ರೆಕಾರ್ಡಿನ ಪ್ಲೇಟಿನಂತೆ ಒಂದೇ ಸಾಲಿನಲ್ಲಿ ಸುತ್ತುತ್ತಿದೆಯೇನೋ ಅನ್ನಿಸುತ್ತಿರುವ ಅಸಹ್ಯ ಅಸಹನೀಯ ಭಾವ ಅವಳನ್ನು ಮುತ್ತುತ್ತಿದೆ… ಎಷ್ಟು ವರ್ಷಗಳಾಗಿರಬಹುದು… ತಾನು ಬೆಳಗಿನ ಕೆಲಸದ ಆಯಾಸ, ಕೆಲಸದಿಂದ ಸಿಕ್ಕ ಸಂತೃಪ್ತಿಯಿಂದ ರಾತ್ರಿ ಹತ್ತೂವರೆ ಹನ್ನೊಂದಕ್ಕೆಲ್ಲಾ ಮಲಗಿ, ಬೆಳಗ್ಗೆ ಐದು ಗಂಟೆಗೆ ಉತ್ಸಾಹದಿಂದ ಎದ್ದು ಹೊಸದಿನವನ್ನು ಸ್ವಾಗತಿಸುತ್ತಿದ್ದದ್ದು…. ಮುಂಚಿನಿಂದಲೂ ನಿದ್ರೆ ಕಡಿಮೆಯೇ; ಸಣ್ಣ ಸಪ್ಪಳಕ್ಕೆಲ್ಲಾ ಎಚ್ಚರವಾಗಿಬಿಡುತ್ತಿತ್ತು. ನಾಲ್ಕೈದು ಗಂಟೆ ಕಾಲ ಒಳ್ಳೆಯ ನಿದ್ರೆ ಸಿಕ್ಕರೂ ಸಾಕು – ದೇಹ, ಮನಸ್ಸು ಹಗುರಾಗುತ್ತಿತ್ತು. ಈಗ ಕಾಲದಂತೆಯೇ ದೇಹ, ಮನಸ್ಸು ಎಲ್ಲಾ ಜಡವಾಗಿ ಹೋಗಿದೆ. ದಿನ ಶುರುವಾಗುವಾಗ ಇವತ್ತು ಇನ್ನೇನು ಹೊಸ ಕಷ್ಟ ಕಾರ್ಪಣ್ಯಗಳೋ ಎನ್ನುವ ಚಿಂತೆ; ಮುಗಿಯುವಾಗ ನಾಳೆಗಿನ್ನೇನು ಕಾದಿದೆಯೋ ಅನ್ನುವ ಯೋಚನೆ… ತಂಬೂರಿಗೂ, ಕಂಠಕ್ಕೂ ಶೃತಿ ಸರಿಹೊಂದುತ್ತಲೇ ಇಲ್ಲ… ಬರಿಯ ಅಪಸ್ವರವೇ… ಮತ್ತೆ ಟೀವಿಯ ಕಡೆ ಕಣ್ಣು ಹಾಯಿಸಿದಳು. ಅಲ್ಲಾದರೂ ಒಂದು ಸಂತೋಷವೇ?! ಏನೋ ದುಃಖ, ದುಮ್ಮಾನ, ಹೊಡೆದಾಟ, ಕ್ರೌರ್ಯ… ಸಾಕಾಗಿ ಹೋಗುತ್ತದೆ. ಆರಿಸಿದರೆ ಚುಚ್ಚುವ ಭಯಂಕರ ಮೌನ… ಜೋರಾಗೊಮ್ಮೆ ಆಕಳಿಸಿದಳು.. ಹೀಗೇ ನಿದ್ದೆ ಬಂದುಬಿಟ್ಟರೆ ಎಷ್ಟು ಚೆನ್ನ! ಎಷ್ಟು ನಿದ್ದೆಯೋ ಎಂದು ಲೈಟು ಆರಿಸಿ ಮಲಗಿದರೆ ಕಣ್ಣೆವೆಗಳು ಮುಚ್ಚುವುದೇ ಇಲ್ಲ; ರಾತ್ರಿಯ ಮೌನದಲ್ಲಿ ಹೊರಳಾಡುವುದಕ್ಕಿಂತ ಬೇರೆ ಶಿಕ್ಷೆಯುಂಟೆ? ಎದ್ದು ಕುಳಿತಿರುವುದೇ ಅದಕ್ಕಿಂತ ವಾಸಿ…

ರೂಮಿನಲ್ಲಿ ಮಂಚ ಕಿರ್ರೆಂದ ಸದ್ದು.. ವಿಕ್ರಮ ಎದ್ದಿರಬೇಕು; ಅವನಿಗೂ ನಿದ್ದೆ ಬಂದಿಲ್ಲವೇನೋ.. ನಾಳೆಯ ಕಟ್ಟಬೇಕಾದ ದುಡ್ಡಿಗೆ ವ್ಯವಸ್ಥೆಯಾಯಿತೋ ಇಲ್ಲವೋ… ಬೆಳಗಿನಿಂದ ರಾತ್ರಿಯವರೆಗೆ ಒಂದೇ ಸಮನೆ ನಾಯಿಯಂತೆ ಅಲೆಯುತ್ತಾನೆ; ದಣಿದು ಶಕ್ತಿ ಉಡುಗಿಹೋಗಿ ಮನೆಗೆ ಬರುತ್ತಾನೆ. ಸ್ವಲ್ಪ ಒಳ್ಳೆಯ ಮೂಡಿನಲ್ಲಿದ್ದರೆ, ಮನಸ್ಸಾದರೆ.. ಫ್ರಿಜ್ಜಿನಲ್ಲಿರುವ ಪಾನೀಯವನ್ನು ಬೆರೆಸಿಕೊಂಡು, ಗ್ಲಾಸನ್ನು ಹಿಡಿದುಕೊಂಡು ಬಂದು ಎದುರು ಕುಳಿತು ಆ ದಿನದ ಕತೆಯನ್ನೇನಾದರೂ ಹೇಳುತ್ತಾನೆ. ನಂತರ ತಟ್ಟೆಯಲ್ಲಿ ಒಂದಿಷ್ಟು ಊಟ ಹಾಕಿಕೊಂಡು ತಿನ್ನುತ್ತಾನೆ. ರೂಪಾಯಲ್ಲಿ ಒಂದು ಹತ್ತು ಪೈಸೆ ಭಾಗ ಕೆಲಸವಾಗಿದ್ದರೂ ಅವನಲ್ಲಿ ಏನೋ ನೆಮ್ಮದಿ ಕಾಣಿಸತ್ತೆ. ಆದರೆ ಬೆಳಗಿನ ಅಲೆತ, ದುಡಿತ ಎಲ್ಲವೂ ವ್ಯರ್ಥವೆಂದಾದಾಗ ಅವನಿಗೆ ಏನೂ ಬೇಕಿಲ್ಲ… ಹೊರಗಿನಿಂದ ಬಂದವನು ರೂಮಿನೊಳಹೊಕ್ಕು ಎಷ್ಟು ಹೊತ್ತಾದರೂ ಹೊರ ಬರದಿದ್ದರೆ, ಆ ದಿನವೆಲ್ಲಾ ದಂಡದ ದುಡಿತವೆಂದು ಅರ್ಥವಾಗಿ ಹೋಗುತ್ತದೆ… ಹೀಗೇ ಊಟವೂ ಇಲ್ಲದೆ ಮಲಗಿದ್ದಾನಲ್ಲಾ ಎಂದು ಆದಿನ ಕರೆಯಲು ಹೋದಾಗ… ನೆನಸಿಕೊಂಡರೆ ಈಗಲೂ ಭಯವಾಗತ್ತೆ… ಅವನಿಗೆಂಥಾ ಕೋಪ ಬಂದಿತ್ತು…! “ಅದೇನು ಯಾವಾಗ್ಲೂ ಊಟ ಊಟ ಅಂತ ಸಾಯ್ತೀಯ.. ನೆಮ್ಮದಿಯಾಗಿ ಎರಡು ಹೊತ್ತು ತಿನ್ನಕ್ಕೇಂತ ತಾನೇ ನಾನಿಷ್ಟು ಓಡಾಡ್ತಿರೋದು.. ಜನ್ಮಕ್ಕಂಟಿದ ಶನಿಯ ಹಾಗೆ ಕಾಡ್ತೀಯ” ಅನ್ನುತ್ತಾ ಕೈಬೀಸಿ ರಪ್ಪನೆ ಕೆನ್ನೆಗೆ ಹೊಡೆದ. ಇದನ್ನು ನಿರೀಕ್ಷಿಸದಿದ್ದವಳು ಕೆಳಗೆ ದೊಪ್ಪೆಂದು ಬಿದ್ದರೆ ಅದೇನು ಪೈಶಾಚಿಕ ಕೋಪ ಬಂದಿತ್ತೋ ಕಾಲಲ್ಲಿ ಝಾಢಿಸಿ ಒದ್ದ; ಎಳೆದುಕೊಂಡು ಹೋಗಿ ಗೋಡೆಗೆ ತಲೆಯನ್ನು ಕುಟ್ಟಿಸಿದ; ಮತ್ತೆ ಎಳೆದುಕೊಂಡು ಹೋಗಿ ರೂಮಿನ ಹೊರಗೆ ದೂಡಿ ಬಾಗಿಲನ್ನು ರಪ್ಪನೆ ಮುಚ್ಚಿಕೊಂಡ.. ಆಯ ತಪ್ಪಿ ದೀವಾನದ ಕಟ್ಟಿಗೆ ಹಣೆಬಡಿದು ಬೋರು ಬಂದು ವಾಸಿಯಾಗಲು ಹೆಚ್ಚು ಕಡಿಮೆ ಒಂದು ತಿಂಗಳೇ ಹಿಡಿದಿತ್ತು. ಸಧ್ಯ! ಆ ಗಲಾಟೆಗೆ ಮಲಗಿದ್ದ ಸುಹಾಸ್‌, ಸ್ಮಿತಾರಿಗೆ ಎಚ್ಚರವಾಗಿರಲಿಲ್ಲ. ಮರುದಿನ ಕೇಳಿದ ಮಕ್ಕಳಿಗೆ ಬಚ್ಚಲಲ್ಲಿ ಜಾರಿ ಬಿದ್ದೆನೆಂದು ಸುಳ್ಳು ಹೇಳಿದ್ದಾಗಿತ್ತು. ವಿಕ್ರಮನಿಗೂ ತನ್ನ ವರ್ತನೆಗೆ ತುಂಬಾ ನೋವಾಗಿತ್ತು. ಮರುದಿನ ಎಷ್ಟೆಷ್ಟೋ ಬೇಡಿಕೊಂಡ.. ರಮಿಸಿದ.. ಕ್ಷಮೆಯಾಚಿಸಿದ.. ಆಣೆ-ಪ್ರಮಾಣಗಳನ್ನು ಮಾಡಿದ.. ಹಣೆಯ ಮೇಲಿನ ಗಾಯವೇನೋ ವಾಸಿಯಾಯಿತು. ಆದರೆ ತನ್ನ ಮನಸ್ಸಿಗಾದ ಶಾಕ್‌ನಿಂದ ಹೊರಬರಲಾಗಿಲ್ಲ.

ಅಂದಿನಿಂದ ಬಂದ ತಕ್ಷಣ ಅವನ ಮೂಡ್‌ ನೋಡಿಕೊಂಡು ಮಾತಾಡಿಸುತ್ತಿದ್ದಳು. ಹೇಗೂ ಮಕ್ಕಳು ಊಟ ಮಾಡಿ ಮಲಗಿರುತ್ತಿದ್ದರು. ಅವರು ಅಪ್ಪನನ್ನು ನೋಡುವುದೇ ಅಪರೂಪ. ಬೆಳಗ್ಗೆ ಎಂಟಕ್ಕೆಲ್ಲಾ ಶಾಲೆಯಲ್ಲಿ ಇರಬೇಕಾದವರು ಮನೆಯನ್ನು ಏಳು ಗಂಟೆಗೆ ಬಿಡುತ್ತಾರೆ. ಒಂದು ಲೋಟ ಹಾಲು, ಎರಡು ಪೀಸ್‌ ಬ್ರೆಡ್‌ ಜೊತೆಗೆ ಜಾಮ್‌ ಅಥವಾ ಬೆಣ್ಣೆ ಅವರಿಗೆ ಎಷ್ಟೋ ವರ್ಷಗಳಿಂದ ಅಭ್ಯಾಸವಾದ ಬ್ರೇಕ್‌ಫಾಸ್ಟ್.‌ ಖಾಲಿಯಾದ ತಕ್ಷಣ ಹೋಗಿ ತಂದಿಡುವುದೂ ಅವರೇ. ಮಧ್ಯಾಹ್ನದ ಊಟ ಶಾಲೆಯಲ್ಲೇ ಕೊಡುತ್ತಾರೆ. ರಾತ್ರಿಯೊಂದೇ ಅವರು ಮನೆಯಲ್ಲಿ ಏನಾದರೂ ತಿನ್ನುವುದು. ಇತ್ತೀಚೆಗೆ ತಾನೂ ಅವರೊಂದಿಗೆ ಕೂತು ಊಟ ಮುಗಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾಗಿದೆ. ವಿಕ್ರಮನ ರಾತ್ರಿಯೂಟದ ನೆಚ್ಚಿಗೆಯಿಲ್ಲ. ಬೆಳಗ್ಗೆ ಅದೇ ಅನ್ನವನ್ನೇ ಚಿತ್ರಾನ್ನ ಕಲಿಸಿಕೊಟ್ಟರೆ ಬೇಸರವೂ ಇಲ್ಲ. ರಾತ್ರಿ ಅನ್ನ ಮಿಗದಿದ್ದರೆ ಮಾತ್ರ ಬೇರೆ ಏನಾದರೂ ತಿಂಡಿ ಮಾಡುವ ಯೋಚನೆ. ತಾನೂ ಅದನ್ನೇ ತಿಂದುಬಿಟ್ಟರೆ ರಾತ್ರಿ ಮಕ್ಕಳ ಜೊತೆ ಊಟಮಾಡುವ ತನಕ ತನಗೂ ಬೇರೇನೂ ಬೇಕೆನಿಸುವುದಿಲ್ಲ.

ಮತ್ತೆ ಪುಟ್ಟ ಕೋಳಿ ಹೊರಬಂದು ಒಂದು ಗಂಟೆಯೆಂದಿತು. ಗಂಟೆಗೊಂದು ಸಲ ಬಂದು ಕೂಗಬೇಕಲ್ಲ; ಅದಕ್ಕೂ ತನ್ನ ಹಾಗೆ ರಾತ್ರಿಯೆಲ್ಲಾ ನಿದ್ರೆಯಿಲ್ಲ ಎನ್ನಿಸಿ ತನ್ನ ಹೋಲಿಕೆಗೆ ಸಣ್ಣಗೆ ನಗು ಬಂತು. ಆ ಗಡಿಯಾರ ಮನೆಗೆ ಬಂದ ದಿನ ಎಂಥ ಸಂಭ್ರಮ! ವಿಕ್ರಮನಿದ್ದ ಕಂಪನಿಯಲ್ಲಿ ಅವನ ಗುರಿಸಾಧನೆಗೆ ಬಂದಿದ್ದ ಉಡುಗೊರೆ ಅದು. ಅದನ್ನು ಯಾವ ಜಾಗದಲ್ಲಿ ತೂಗು ಹಾಕಬೇಕೆಂದು ಎಲ್ಲರ ಚರ್ಚೆ. ತಮ್ಮ ರೂಮು, ಮಕ್ಕಳ ರೂಮು, ಡೈನಿಂಗ್‌ ಹಾಲು…. ಕಡೆಗೆ ಯಾರಿಗೂ ಅನ್ಯಾಯ ಬೇಡವೆಂದು ಹಾಲಿಗೆ ಬಂದಿತ್ತು. ಒಂದೆರಡು ದಿನ ಅದು ಕೂಗುವಾಗೆಲ್ಲಾ ಎಲ್ಲಿದ್ದರೂ ಓಡಿಬಂದು ಕೋಳಿಯನ್ನು ನೋಡುತ್ತಾ ಖುಷಿಪಡುತ್ತಿದ್ದದ್ದು ನೆನೆಸಿಕೊಂಡರೆ ಈಗ ನಗು ಬರುತ್ತದೆ. ಒಂದೊಂದು ಅಚೀವ್‌ಮೆಂಟ್‌ಗೂ ಏನೋ ಒಂದು ಉಡುಗೊರೆ ಕೊಡುತ್ತಿದ್ದ ಕಂಪನಿ. ಎಷ್ಟೊಂದು ಮಜವಾಗಿತ್ತು ಆ ದಿನಗಳು! ಒಂದೊಂದು ಟಾರ್ಗೆಟ್‌ ಮುಟ್ಟಿದಾಗಲೂ ನಿನ್ನ ಕಾಲ್ಗುಣದಿಂದ ಎಂದು ಉಬ್ಬಿಸುತ್ತಿದ್ದ ವಿಕ್ರಮ.. ಎಂದೋ-ಎಲ್ಲೋ-ಏನೋ ಕೇಳಿದ್ದನ್ನು ನೆನಪಿನಲ್ಲಿಟ್ಟುಕೊಂಡು ತಂದು ಕೊಡುತ್ತಿದ್ದ. ಅಂಥದೇನಾದರೂ ಬಂದರೆ ಅವಳಿಗೆ ಗ್ಯಾರಂಟಿ – ಅವನು ಏನೋ ಸಾಧಿಸಿದ್ದಾನೆ ಅಂತ… ಎಷ್ಟೊಂದು ಸೀರೆಗಳ, ಡ್ರೆಸ್‌ಗಳ ರಾಶಿ.. ರಿಸ್ಟ್‌ವಾಚು, ಉಂಗುರ, ಓಲೆ, ಪರ್ಸ್‌, ಸ್ಲಿಪರ್…‌ ಒಂದೇ ಎರಡೇ – ಈಗ ಅಲ್ಮೈರಾದಲ್ಲಿ ಅಡಗಿ ಕುಳಿತಿವೆ – ಮ್ಯೂಸಿಯಂನಲ್ಲಿ ಜೋಪಾನವಾಗಿಟ್ಟ ರಾಜ ಮಹಾರಾಜರ ಒಡವೆ ವಸ್ತ್ರಗಳಂತೆ – ಧರಿಸಲು ಬೇಕಿಲ್ಲ, ಮಾರಲು ಬರುವುದಿಲ್ಲ…..

ಬರೀ ಇಷ್ಟೇನೆ?! ಅವನ ಪ್ರೀತಿಯ ಮಹಾಪೂರವೆಂಥದು! ಮದುವೆಯಾದ ವರ್ಷದೊಳಗೇ ಸುಹಾಸ ಮಡಿಲು ತುಂಬಿದಾಗ ಇಬ್ಬರನ್ನೂ ಚುಡಾಯಿಸಿದವರೆಷ್ಟು… ʻಏನಿಷ್ಟು ಅವಸರ… ಒಂದೆರಡು ವರ್ಷ ಹಾಯಾಗಿರಬಹುದಿತ್ತಲ್ಲʼ ಅಂತ. ಹೆರಿಗೆಗೆ ತವರಿಗೆ ಕಳಿಸಲು ಮನಸ್ಸಿಲ್ಲದೆ ಒಂಭತ್ತು ತಿಂಗಳಾದರೂ ಇಲ್ಲೇ ಇದ್ದಾಗ ಅಪ್ಪ, ಅಮ್ಮ ಇಬ್ಬರೂ ಬಂದು ಇವನನ್ನು ಅನುನಯಿಸಿ ಕರೆದುಕೊಂಡು ಹೋಗಿರಲಿಲ್ಲವೇ?! ಮೂರೆಂದರೆ ಮೂರೇ ತಿಂಗಳು, ಮತ್ತೆ ವಾಪಸ್ಸು.. ಎಷ್ಟು ಸುಖದ ದಿನಗಳವು! ʻಕುಸುಮ್‌ ಕುಸುಮ್…‌ʼ ಎಂದು ಸದಾ ಹಿಂದೆ ಮುಂದೆ ಸುತ್ತುತ್ತಿದ್ದ. ಸುಹಾಸನಿಗೂ, ಸ್ಮಿತನಿಗೂ ಹೆಚ್ಚು ಅಂತರವಿಲ್ಲ ಬರೀ ಎರಡು ವರ್ಷ. ಇಬ್ಬರು ಮಕ್ಕಳನ್ನೂ ಕಟ್ಟಿಕೊಂಡು ಸ್ಕೂಟರಿನಲ್ಲಿ ಕೂತು ಇಡೀ ಬೆಂಗಳೂರೆಲ್ಲಾ ನಮ್ಮದೇ ಎನ್ನುವಂತೆ ಸುತ್ತಿದ್ದೆಷ್ಟು!! ಮಕ್ಕಳು ಕೇಳಿದ್ದನ್ನು ಇಲ್ಲವೆಂದೇ ಗೊತ್ತಿರಲಿಲ್ಲ ಅವನಿಗೆ. ಎಲ್ಲರೂ ಹೊಟ್ಟೆಕಿಚ್ಚು ಪಡುವಂಥ ಸಂಸಾರ… ಎಷ್ಟು ಬೇಗ ಕಳೆದು ಹೋದವು ಸುಖದ ಆ ದಿನಗಳು…. ಅದರ ಅಮಲಿನಲ್ಲೇ ಇರುವಂತೆ ಕಣ್ಮುಚ್ಚಿ ಆ ದಿನಗಳನ್ನು ಮತ್ತೆ ಅನುಭವಿಸಿದಳು ಕುಸುಮ…

ಕುಳಿತಲ್ಲೇ ಸಣ್ಣ ಜೊಂಪು ಹೊತ್ತಿತ್ತೇನೋ.. ಎರಡು ಸಲ ಕೂಗಿದ ಕೋಳಿ ಸದ್ದಿಗೆ ಎಚ್ಚರಾಗಿಹೋಯಿತು. ಇನ್ನೂ ಉರಿಯುತ್ತಲೇ ಇದೆ ಟೀವಿ. ಕಣ್ಣ ಮುಂದೆ ಚಿತ್ರಗಳು ಕುಣಿಯುತ್ತಿವೆ. ಮೆದುಳಿನೊಳಗೆ ಒಂದೂ ಹೋಗುತ್ತಿಲ್ಲ. ರಾತ್ರಿ ಬೀಟಿನವನ ವಿಷಲ್‌ ಶಬ್ದ.. ಬೂಟಿನ ಟಕಟಕ ಸದ್ದು.. ವಿಮಾನವೊಂದು ತಲೆಮೇಲೆ ಹಾರಿದಂತಾಯಿತು. ಬಂದದ್ದೋ, ಹೋಗುತ್ತಿರುವುದೋ ಗೊತ್ತಿಲ್ಲ.. ಎಷ್ಟೋ ವರ್ಷಗಳಿಂದ ಅಭ್ಯಾಸವಾಗಿ ಹೋಗಿದೆ ಈ ಶಬ್ದಗಳು.. ಉರಿಯುತ್ತಿದ್ದ ಝೀರೋ ಕ್ಯಾಂಡಲ್‌ ದೀಪವನ್ನೂ ಆರಿಸಿ ಕಿಟಕಿಗೆ ಬಂದು ನಿಂತಳು. ಇಡೀ ಬೆಂಗಳೂರು ಮೌನವನ್ನು ಹೊದ್ದು ಮಲಗಿದೆಯೇನೋ… ಎಲ್ಲೋ ದೂರದಲ್ಲಿ ಒಂದು ನಾಯಿ ಬೊಗಳಿದ ಸದ್ದು.. ದೋಬಿಗಾಟಿನ ಆಚೆಗಿರಬೇಕು. ಕಿಟಕಿಯೆದುರೇ ಕಾಣಿಸುವ ಮುಖ್ಯ ರಸ್ತೆ. ಮಂಕಾಗಿ ಉರಿಯುವ ಬೀದಿ ದೀಪ. ಬೆಳಗಾದರೆ ನಿಮಿಷಕ್ಕೆ ಹತ್ತಾದರೂ ವಾಹನ ಓಡಾಡುವ ರಸ್ತೆಗೀಗ ನಿದ್ರೆಯ ಅಮಲು.. ಎಚ್ಚರಿಲ್ಲದೆ ಮಲಗಿದೆ ಅನ್ನಿಸಿ ಮೆಲ್ಲನೆ ನಗು ಬಂತು. ಇಡೀ ಪ್ರಪಂಚಕ್ಕೆಲ್ಲಾ ಬಂದ ನಿದ್ರೆ ತನ್ನಿಂದೇಕೆ ದೂರ?! ಎಚ್ಚರವಾಗಿರುವುದು ತಾನೂ ಮತ್ತು ಗಡಿಯಾರ ಮಾತ್ರವೇನೋ ಎನ್ನಿಸಿ ಅದರ ಕಡೆ ನೋಡಿದಳು. ಬೀದಿ ದೀಪದ ಮಂಕು ಬೆಳಕಿನಲ್ಲಿ ಮಸಕಾಗಿ ಕಾಣುತ್ತಿರುವ ಮುಳ್ಳುಗಳು.. ಮೂರು ಗಂಟೆಯ ಹತ್ತಿರವಿರಬಹುದು. ಬಾಯಾರಿಕೆಯೆನ್ನಿಸಿ ನೀರು ಕುಡಿಯಲು ಫ್ರಿಜ್ಜಿನ ಬಾಗಿಲು ತೆರೆದಳು. ತಣ್ಣಗಿನ ನೀರಿನ ಬಾಟಲನ್ನೆತ್ತಿ ಗಟಗಟನೆ ಅರ್ಧ ಬಾಟಲು ಕುಡಿದಳು. ಬಾಗಿಲು ಹಾಕುವಾಗ ಏನೋ ಕನವರಿಕೆಯ ಸದ್ದು. ಮಕ್ಕಳ ರೂಮಿನತ್ತ ನಡೆದಳು. ಮಂಚದ ಮೇಲೆ ಅಡ್ಡಾದಿಡ್ಡಿಯಾಗಿ ಮಲಗಿದ್ದ ಮಕ್ಕಳು – ಅವರೆಲ್ಲೋ, ಹೊದಿಕೆಯೆಲ್ಲೋ.. ಸರಿಮಾಡಿ ಅವರ ಪಕ್ಕದಲ್ಲೇ ಉರುಳಿಕೊಂಡಳು.. ನಾಳೆ ಸುಹಾಸನ ಟ್ಯೂಷನ್‌ ಫೀಸಿನ ಎರಡನೇ ಕಂತು ಕಟ್ಟಬೇಕು. ಕಟ್ಟದಿದ್ದರೆ.? ಮುಂದಿನ ವರ್ಷ ಸೆಕೆಂಡ್‌ ಪಿಯುಸಿ. ಅವರ ಹತ್ತಿರ ಟ್ಯೂಷನ್‌ ಬುಕಿಂಗ್‌ ಸಿಗುವುದೇ ಕಷ್ಟ. ಅಂಥದರಲ್ಲಿ ನಮ್ಮ ತಾಪತ್ರಯಕ್ಕೆ ಅವನ ಓದಿಗೆ ಕಲ್ಲು ಹಾಕುವುದೇ? ಆದರೆ ದುಡ್ಡು..? ಇವತ್ತೆಲ್ಲಾ ಹೊಂದಿದ ಹಾಗೆ ಕಾಣಲಿಲ್ಲ. ಇಲ್ಲದಿದ್ದರೆ ವಿಕ್ರಮ ರಾತ್ರಿಯೇ ತನ್ನ ಹತ್ತಿರ ಕೊಟ್ಟಿರುತ್ತಿದ್ದ. ಅವನಿಗೂ ತಲೆಕೆಟ್ಟು ಹೋಗಿದೆ. ಹೋದವಾರವಷ್ಟೇ ಸ್ಮಿತನ ಮೂರು ತಿಂಗಳ ಸ್ಕೂಲ್‌ಫೀಸು, ವ್ಯಾನ್‌ಫೀಸು ಎಲ್ಲಾ ಸೇರಿ ಮೂವತ್ತು ಸಾವಿರ ರೂಪಾಯಿ ಕಟ್ಟಿದ್ದಾಗಿದೆ. ಈ ಶರಂಪರೆ ಮುಗಿಯುವ ಹಾಗೆಯೇ ಇಲ್ಲ…….

ಏನೋ ಸ್ವಲ್ಪ ಕಷ್ಟವಾಗಿದ್ದರೂ ಇವನ್ಯಾಕೆ ಕಂಪನಿ ಬಿಟ್ಟು ಬರಬೇಕಾಗಿತ್ತು? ಇವನ ಕೈಕೆಳಗಿನವನು ಇವನಿಗೆ ಬಾಸ್‌ ಆಗಿ ಬಂದನಂತೆ. ಇವನ ಅಹಂಗೆ ದೊಡ್ಡ ಪೆಟ್ಟು. ತನ್ನ ಎಕ್ಸ್‌ಪೀರಿಯೆನ್ಸ್‌ ಏನು, ಪರ್‌ಫಾರ್ಮೆನ್ಸ್‌ ಏನು… ನಿನ್ನೆ ಮೊನ್ನೆ ಬಂದು ಬಾಸ್‌ಗೆ ಕಾಕಾಪುಡಿ ಹೊಡೆದು ಮೇಲಕ್ಕೆ ಹೋಗೋದು ಎಂದರೇನು?! ಅವನು ಕಂಪನಿಯ ಮ್ಯಾನೇಜಿಂಗ್‌ ಡೈರೆಕ್ಟರ ಸಂಬಂಧಿಯಂತೆ. ಅವರು ಬಿಟ್ಟುಕೊಡುತ್ತಾರೆಯೇ? ಕೂರಿಸಿದರು ಅವನನ್ನೇ ಕುರ್ಚಿಯ ಮೇಲೆ. ಇವನ ಸ್ವಾಭಿಮಾನ ಕೆಣಕಿಹೋಯಿತು. ʻಕಂಪನಿ ಬಿಡುತ್ತೇನೆʼ ಎಂದು ಕೂಗಾಡಿದ… ಹಾರಾಡಿದ… ತಾನೆಷ್ಟು ಹೇಳಿದೆ “ಯಾರು ಏನು ಬೇಕಾದರೂ ಆಗಲಿ. ನಿನ್ನ ಸಂಬಳ ನಿನಗೆ ನಿಯತ್ತಾಗಿ ಬರ್ತಾ ಇದೆ. ಬೇಕಾದಷ್ಟು ಇನ್‌ಸೆಂಟಿವ್‌ ಇದೆ. ಇನ್ನೂ ಹೈಸ್ಕೂಲು, ಮಿಡಲ್‌ ಸ್ಕೂಲಿನಲ್ಲಿ ಓದ್ತಿರೋ ಮಕ್ಕಳು. ಕೆಲ್ಸ ಬಿಟ್ಟು ಬೇರೆ ಏನು ಮಾಡ್ತಿ? ಅಂಥ ಮೂರ್ಖ ಕೆಲಸ ಮಾಡ್ಬೇಡ. ನಿಂಗೆ ಬೇಜಾರಾದ್ರೆ ಈ ಪ್ರಪಂಚ ಅಯ್ಯೋ ಅನ್ನಲ್ಲ…” ಕಿವಿಯ ಮೇಲಾದ್ರೂ ಬಿದ್ದವೇ ಈ ಮಾತುಗಳು?! “ನಿಂಗೇನು ಅರ್ಥ ಆಗತ್ತೆ? ನಂಗಿರೋ ಅನುಭವಕ್ಕೆ ಇದಲ್ಲದಿದ್ರೆ ಇನ್ನೊಂದು ಕಂಪನಿ. ಎಷ್ಟು ಕಂಪನಿಗಳವರು ನನ್ನನ್ನ ಕರೀತಿದಾರೆ ಗೊತ್ತಾ! ಇಲ್ದಿದ್ರೆ ಸ್ವಂತ ಏನಾದ್ರೂ ಮಾಡ್ತೀನಿ. ಅವನ ಹತ್ರ ಹೋಗಿ ಸಲಾಂ ಹೊಡೆಯಲ್ಲ” ಅಬ್ಬರಿಸಿದ. “ಸ್ವಂತ ಮಾಡಕ್ಕೆ ಏನು ಬಂಡವಾಳ ಇದೆ. ಕೆಲ್ಸ ಬಿಟ್ರೆ ಇರೋಕೆ ಒಂದು ಸ್ವಂತ ಮನೇನೂ ನಮ್ಗಿಲ್ಲ. ಬಂದಿರೋ ಅಷ್ಟು ದುಡ್ಡನ್ನೂ ಉಡಾಯ್ಸಿದೀವಿ. ಅಂತಾದ್ರಲ್ಲಿ ಎಂಥ ಮುಠ್ಠಾಳ ಮಾತಾಡ್ತೀಯ. ಮೊದ್ಲು ಬೇರೆ ಕೆಲ್ಸ ಹುಡುಕ್ಕೊಂಡು ಆಮೇಲೆ ಬಿಡೋ ಮಾತಾಡು. ಸ್ವಂತ ಬಿಸಿನೆಸ್ಸಿನ ಮಾತು ಬೇಡ. ಅದು ನಮ್ಮಂತವರಿಗಲ್ಲ” ಬುದ್ಧಿವಾದದ ಮಾತನ್ನ ಕೇಳೋ ಮನಸ್ಥಿತೀಲಿ ಇದ್ನಾ ಅವ್ನು. ಅಪ್ಪನ ಹತ್ತಿರ ಹೇಳಿಸಿದೆ. ಅವರಮ್ಮನ ಹತ್ರ ಹೇಳಿಸಿದ್ದಾಯ್ತು. ಯಾರ ಮಾತನ್ನೂ ಕೇಳೋದಕ್ಕೇ ಸಿದ್ಧ ಇರ್ಲಿಲ್ಲ ಅವ್ನು. ಬೇರೇವ್ರು ಹೇಳಿದಷ್ಟೂ ಅವನ ಹಟ ಬೆಳೀತಾ ಹೋಯ್ತು. ಕೆಲಸ ಬಿಟ್ಟ. ಬಂದ ದುಡ್ಡಲ್ಲಿ ಈ ಮನೇನ ಭೋಗ್ಯಕ್ಕೆ ಹಾಕ್ಕೊಂಡಿದ್ದೊಂದೇ ಬುದ್ಧಿವಂತಿಕೆ ಕೆಲ್ಸ ಮಾಡಿದ್ದು. ಯಾವ ಯಾವ ಕಂಪನೀಗೋ ಅಲೆದ. ಮೊದಲು ಆಶ್ವಾಸನೆ ಕೊಟ್ಟಿದ್ದೋರೂ ಬಿಟ್ಬಂದ ಮೇಲೆ ಈಗಿದ್ದದ್ದಕ್ಕಿಂತ ಕಡಿಮೆ ಜಾಗ, ಸಂಬಳ ತೋರಿಸೋರೆ. ಆರು ತಿಂಗಳು ಅಲೆದಲೆದು ಹತಾಶನಾಗಿ ಹೋದ…

ಸ್ವಂತ ಬಿಸಿನೆಸ್‌ ಮಾಡ್ತೀನಿ ಅಂತ ಉಳಿದಿದ್ದ ಹಣವನ್ನೆಲ್ಲಾ ಯಾವ ಯಾವ್ದೋ ಬಿಸಿನೆಸ್ಸಿಗೆ ಬಂಡವಾಳ ಹಾಕ್ದ. ಒಂದೇ ಒಂದ್ರಲ್ಲಾದ್ರೂ ಹಾಕಿದ ಬಂಡವಾಳಾನೂ ವಾಪಸ್ಸು ಬರ್ಲಿಲ್ಲ. ಸಾಲ ಮಾಡ್ದ ಮತ್ತೆ ಬಿಸಿನೆಸ್ಸಿಗೆ ಹಾಕ್ದ. ಮತ್ತೆ ಸಾಲ… ಮತ್ತೆ ಸೋಲು… ಮದುವೇಲಿ ಅವರ ಮನೇಲಿ, ನಮ್ಮನೇಲಿ ಹಾಕಿದ್ದ ಒಡವೆಗಳೆಲ್ಲಾ ಕರಗಿ ಹೋದ್ವು. ಅವರಮ್ಮ ತಮ್ಮ ಜೀವನಕ್ಕೆ ಅಂತ ಇಟ್ಕೊಂಡಿರೋ ದುಡ್ಡಿನ ಮೇಲೆ ಇವನ ಕಣ್ಣು. ಅವರ್ಯಾಕೆ ಕೊಟ್ಟಾರು? ಸೋರೋ ಜರಡಿಗೆ ನೀರು ತುಂಬೋಷ್ಟು ದಡ್ಡರೇನಲ್ಲ ಅವ್ರು. ಅಪ್ಪ ಆಗೀಗ ಸ್ವಲ್ಪ ಏನಾದ್ರೂ ಕೊಡ್ತಾರೆ. ಅವರು ತಾನೆ ಎಲ್ಲಿಂದ ತರ್ತಾರೆ? ಮದುವೆ ಮಾಡಿಕೊಟ್ಟ ಮೇಲೂ ಮಗಳ ಸಂಸಾರದ ಜವಾಬ್ದಾರಿ ಹೊರಕ್ಕೆ ಸಾಧ್ಯಾನೆ? ಅವ್ರು ಚೀಟಿ ಎತ್ತಿ ಕೊಡಿಸಿದ್ದ ಎರಡು ಲಕ್ಷ ರೂಪಾಯನ್ನೇ ಇನ್ನೂ ವಾಪಸ್ಸು ಕೊಟ್ಟಿಲ್ಲ ಇವ್ನು. ಇನ್ಯಾವ ಮುಖ ಇಟ್ಕೊಂಡು ಮಾವನ ಹತ್ರ ಕೇಳ್ತಾನೆ? ʻನಂದೂ ಡಿಗ್ರಿ ಆಗಿದೆ. ಮನೇಲೂ ಅಂತಾ ಕೆಲ್ಸ ಏನಿಲ್ಲ. ಎಲ್ಲಾದ್ರೂ ನಾನೂ ಕೆಲ್ಸಕ್ಕೆ ಸೇರಿಕೊಳ್ತೀನಿ. ಸ್ವಲ್ಪಾನಾದ್ರೂ ಸಹಾಯ ಆಗತ್ತೆʼ ಅಂದ್ರೆ ಸುತರಾಂ ಒಪ್ಪಲ್ಲ. ʻನನ್ನ ಹೆಂಡ್ತಿ ದುಡಿದ ದುಡ್ಡಲ್ಲಿ ಸಂಸಾರ ಮಾಡಕ್ಕೆ ತಯಾರಿಲ್ಲ ನಾನುʼ ಅನ್ನೋ ಅಹಂಕಾರದ ಮಾತು ಬೇರೆ. ಅದೆಲ್ಲೆಲ್ಲಿ ಸಾಲ ಮಾಡ್ತಾ ಇದಾನೋ, ಹೇಗೆ ತಂದು ಹಾಕ್ತಾ ಇದಾನೋ ಆ ದೇವರೇ ಬಲ್ಲ! ಯಾವ್ದಾದ್ರೂ ಫೋನ್‌ ಬಂದ್ರೆ ತೊಗೊಳ್ಳೋಕೆ ಭಯ ಆಗತ್ತೆ. ನಿನ್ನೆ ಬೆಳಗ್ಗೆ ಯಾರು ಅದು… ಆದಿತ್ಯ ಫೈನಾನ್ಸ್‌ನವನೇ ಇರ್ಬೇಕು. ಎಷ್ಟು ಮಾತಾಡ್ದ. ತಾನೂ ಸಮಾಧಾನವಾಗೇ ಉತ್ತರ ಕೊಟ್ಟೆ. ನಾಳೆ ಸಂಜೆಯೊಳಗೆ ಕೊಡ್ದೇ ಇದ್ರೆ ಆಮೇಲೇನಿಲ್ಲ… ಅಂದ… ಇನ್ನೂ ಏನೇನೋ… ಕೇಳಬಾರದಂತಹ ಮಾತುಗಳು… ದಿನನಿತ್ಯ ಇಂತವೆಷ್ಟೋ. ಹೋದ ವಾರ ಯಾರವ್ನು ಕೋಲಾರದವನಂತೆ. ಇವ್ನು ಮನೇಲಿಲ್ಲ ಅಂತ ಹೇಳಿದ್ರೂ ಕೇಳ್ಳಿಲ್ಲ. ಸೀದಾ ಒಳಗೆ ಬಂದು ಅವನ ಮನೆ ಅನ್ನೋ ಹಾಗೆ ಕಾಲ ಮೇಲೆ ಕಾಲು ಹಾಕಿಕೊಂಡು ಹಾಲಲ್ಲೇ ಕುಳಿತುಬಿಟ್ಟ. ಬರೋವರ್ಗೂ ಕಾಯ್ತೀನಿ ಅಂದ. ಮಕ್ಕಳು ಸ್ಕೂಲಿಗೆ ಹೋಗಿದ್ರು ತನಗೆಷ್ಟು ಭಯ ಆಗಿತ್ತು… ಕಾಫಿ ಮಾಡಿಕೊಟ್ಟು ಕೆಳಗೆ ಬಂದು ಪಬ್ಲಿಕ್‌ ಬೂತಿನಿಂದ ಅಣ್ಣಂಗೆ ಫೋನ್‌ ಮಾಡ್ದೆ ಹೀಗೇಂತ. ವಿಕ್ರಮಂಗೇ ಮಾಡೋಣಾಂದ್ರೆ ಅವ್ನು ಹೊರಗೆ ಹೋದಾಗ ಮೊಬೈಲ್‌ ಸ್ವಿಚ್‌ಆಫ್‌ ಮಾಡ್ಕೊಂಡೇ ಹೋಗೋದು. ತನಗೆ ಬೇಕಾದಾಗ ಮಾತ್ರ ಓಪನ್‌ ಮಾಡ್ಕೋತಾನೆ. ಮನೆಯಲ್ಲಿ ಕೂತೋನಿಗೆ ಅನುಮಾನ ಬರದ ಹಾಗೆ ಕೊತ್ತಂಬರಿ ಕಂತೆ, ನಿಂಬೆ ಹಣ್ಣು ತೆಗೆದುಕೊಂಡು ಮನೆಗೆ ವಾಪಸ್ಸು ಹೋದೆ. ಸ್ವಲ್ಪ ಹೊತ್ತಲ್ಲೇ ಅಣ್ಣ ಮನೆಗೆ ಬಂದ. ಬಂದವ್ನೇ “ಅಮ್ಮಂಗೆ ಹುಷಾರಿಲ್ವೆ. ಇಲ್ಲೇ ಸಂತೋಷ್‌ ನರ್ಸಿಂಗ್‌ ಹೋಮ್‌ನಲ್ಲಿದಾರೆ. ಅವರ ಜೊತೆ ಯಾರೂ ಇಲ್ಲ ಬಾ” ಅಂತ ಕರೆದ. “ಸ್ವಾಮಿ, ನೀವು ರಾತ್ರಿ ಎಂಟು ಗಂಟೆ ಮೇಲೆ ಬನ್ನಿ, ವಿಕ್ರಮ್‌ ಸಿಕ್ತಾನೆ. ಈಗ ಇವ್ಳನ್ನ ಕರ್ಕೊಂಡು ಹೋಗ್ಬೇಕು” ಅಂತ ಅತನ್ನ ಬಲವಂತವಾಗಿ ಕಳಿಸಿ ತನ್ನನ್ನೂ ಕರ್ಕೊಂಡು ಹೊರಟ. ತಾನು ಸಾಯಂಕಾಲದ ತನಕ ಅವನ ಮನೇಲಿ ಕೂತಿದ್ದು ಮಕ್ಕಳು ಮನೆಗೆ ಬರುವ ಹೊತ್ತಿಗೆ ಬಂದೆ. ಮಕ್ಕಳು ಬಂದ್ರು… ಮತ್ತೆ ಹಿಂದೇನೇ ಅವನೂ ಬಂದ… ಏನಂದ್ರೆ ಮಕ್ಕಳು ಮನೇಲಿದಾರೆ ಅನ್ನೋ ಧೈರ್ಯ. ಅವತ್ತು ವಿಕ್ರಮ ಬಂದಿದ್ದು ರಾತ್ರಿ ಒಂಭತ್ತು ಗಂಟೆಗೆ. ಅದೇನು ಹೇಳಿದ್ನೋ ಅವ್ನಿಗೆ… ಅಂತೂ ಅವನು ಹೋದ… ಮಾರನೆಯ ದಿನ ಬೆಳಗ್ಗೆ ನಡೆದಿದ್ದನ್ನ ಹೇಳಿದ್ದಕ್ಕೆ ನನ್ಮೇಲೇ ರೇಗ್ದ. “ನೀನ್ಯಾಕೆ ಅದನ್ನ ನಿಮ್ಮಣ್ಣನಿಗೆ ಹೇಳಿ ದೊಡ್ಡ ಇಶ್ಯೂ ಮಾಡ್ದೆ? ಏನು ಮಾಡಿರ್ತಿದ್ದ ಅವ್ನು? ಕೂತು ಬೇಜಾರಾದ್ರೆ ಎದ್ದು ಹೋಗಿರ್ತಿದ್ದ” ಎಷ್ಟು ಸಲೀಸಾಗಿ ಹೇಳ್ದ… ಮೂಡಲ್ಲಿಲ್ಲದಿರುವಾಗ ಮಾತಾಡಿದ್ರೆ ವೃಥಾ ಜಗಳಕ್ಕೆ ನಾಂದಿ ಅಂತ ಸುಮ್ಮನಾಗಿದ್ದಾಗಿತ್ತು. ಹೇಗೂ ಆ ದಿನ ಕಳೆದಿತ್ತಲ್ಲ!

ಇಕ್ಕಟ್ಟಿನಲ್ಲಿ ಮಲಗಿಕೊಂಡು ಇರುಸುಮುರುಸಾಗುತ್ತಿದೆ. ಎದ್ದವಳು ತನ್ನ ರೂಮಿಗೆ ನಡೆದಳು. ಹಾಲಿನ ಕೋಳಿ ನಾಲ್ಕಾಯಿತೆಂದು ಹೇಳಿತು. ವಿಕ್ರಮ ಸೊಂಪಾದ ನಿದ್ರೆಯಲ್ಲಿದ್ದ. ಅವನಿಗಾದರೂ ಸುಖವೆ?! ಊಟ, ತಿಂಡಿ ಎಲ್ಲಾನೂ ಎಷ್ಟೊಂದು ರೆಲಿಷ್‌ ಮಾಡಿಕೊಂಡು ತಿನ್ನುತ್ತಾ ಇದ್ದವನು ಸರಿಯಾಗಿ ಊಟವನ್ನು ಮಾಡಿ ವರ್ಷಗಳೇ ಕಳೆದಿವೆ. ಒಂದೊಂದು ಕಡೆ ಹೋಗುವಾಗ ಒಂದೊಂದು ಡ್ರೆಸ್‌ ಕೋಡ್‌ ಇಟ್ಟುಕೊಂಡಿದ್ದವನಿಗೆ ಈಗ ಯಾವುದರಲ್ಲೂ ಆಸಕ್ತಿಯಿಲ್ಲ. ಮಕ್ಕಳ ಹುಟ್ಟು ಹಬ್ಬ, ತಮ್ಮ ಮದುವೆಯ ದಿನ ಎಲ್ಲವೂ ಅವನಿಗೆ ಮರೆತೇ ಹೋಗಿದೆ. ಜ್ಞಾಪಿಸಿಕೊಂಡರೆ ತಾನೆ ಏನು ಪ್ರಯೋಜನ?! ಭವಿಷ್ಯದ ಬಗ್ಗೆ ಏನೋ ಆಸೆ, ನಂಬಿಕೆ ಇದೆ. ಅದಕ್ಕಾಗೇ ದಿನದಿನವೂ ಒದ್ದಾಡ್ತಾನೆ…. ಎಲ್ಲ ಸರಿ, ಈಗ ನಾಳೆ ಸುಹಾಸನ ಫೀಸು… ಸದ್ದಾಗದಂತೆ ಬೀರುವಿನ ಬಾಗಿಲು ತೆರೆದಳು. ಲಾಕರ್‌ ಎಲ್ಲಾ ಖಾಲಿ… ಅಲ್ಲಿ ಮೂಲೆಯಲ್ಲಿ ಮಸಕಾಗಿ ಕಾಣುತ್ತಿರುವ ಪೆಟ್ಟಿಗೆ… ಇಷ್ಟು ದಿನ ಇದೆಲ್ಲಿ ಅಡಗಿತ್ತು?!  ಕೈ ಹಾಕಿದಳು… ಪೆಟ್ಟಿಗೆ ತೆರೆದರೆ ಅಜ್ಜಿ ಕೊಟ್ಟಿದ್ದ ಜಡೆಬಿಲ್ಲೆ.. ನಾಗರಬಿಲ್ಲೆ. ತನಗೆ ಮೊಗ್ಗಿನಜಡೆ ಹೆಣೆಯುವಾಗ ಹಾಕುತ್ತಿದ್ದಿದ್ದು… ಒಬ್ಬಳೇ ಮೊಮ್ಮಗಳೆಂದು ಸಾಯುವಾಗ ಕೊಟ್ಟಿದ್ದಿದ್ದು… ಎಷ್ಟು ತೂಕವಿರಬಹುದೋ? ಸಾಕಷ್ಟು ಭಾರವಿದೆ. ಮಾರಿದರೆ ಒಂದು ಮೂವತ್ತು ಸಾವಿರಕ್ಕೆ ಮೋಸವಿಲ್ಲ. ಹಳೆಯಕಾಲದ ಗಟ್ಟಿ ಬಂಗಾರ. ಮೊಗ್ಗಿನ ಜಡೆ ಹಾಕಿ ನೆಟಿಕೆ ಮುರಿದು ದೃಷ್ಟಿ ತೆಗೆಯುತ್ತಿದ್ದ ಅಜ್ಜಿ… ನಗುವಿನ ಹಿಂದೆಯೇ ಕಣ್ಣಲ್ಲಿ ನೀರು ತುಂಬತೊಡಗಿತು. ನಾಗರಬಿಲ್ಲೆಯನ್ನು ಕೈಗೆ ತೆಗೆದುಕೊಂಡು ಮೆಲ್ಲನೆ ಬಾಗಿಲು ಮುಚ್ಚಿದಳು… ಮಂಚದ ಮೇಲೆ ಕುಳಿತುಕೊಂಡು ಮತ್ತೆ ಮಂದ ಬೆಳಕಲ್ಲಿ ಇನ್ನೊಮ್ಮೆ ನೋಡಿದಳು. ಕಣ್ಣಲ್ಲಿ ತುಂಬಿಕೊಂಡ ನೀರು ಕೆನ್ನೆಯನ್ನು ತೋಯಿಸತೊಡಗಿತು… ದಿಂಬಿನ ಮೇಲೆ ಒರಗಿ ಕಣ್ಣು ಮುಚ್ಚಿಕೊಂಡಳು……

ತಲೆಯ ಮೇಲೆ ಏರೋಪ್ಲೇನ್‌ ಹಾರಿದ ಸದ್ದು… ಹಿಂದಿನ ಬೀದಿಯ ಮಸೀದಿಯ ಮುಲ್ಲಾನ ಕರೆಯಲ್ಲಿ ಗಡಿಯಾರದ ಕೋಳಿಯ ಕೂಗು ಮುಚ್ಚಿ ಹೋಯಿತು… ಮೂಲೆಯ ವೆಂಕಟೇಶ್ವರ ದೇವಸ್ಥಾನದಲ್ಲಿ ಕೌಸಲ್ಯಾ ಸುಪ್ರಜಾ ರಾಮಾ… ಶುರುವಾಯಿತು… ಹಾಲಿನ ಹುಡುಗರ ಸೈಕಲ್‌ ಸದ್ದು.. ಪೇಪರ್‌ ಹಂಚುವ ಹುಡುಗರ ಓಡಾಟ.. ಅಲ್ಲೊಂದು ಇಲ್ಲೊಂದು ಆಟೋ.. ಫ್ಯಾಕ್ಟರಿ ಬಸ್ಸುಗಳ ಹಾರ್ನ್..‌ ನಾಗರಬಿಲ್ಲೆಯನ್ನು ಕೈಯಲ್ಲಿ ಹಿಡಿದ ಕುಸುಮನಿಗೆ ಹಾಗೆಯೇ ಕಣ್ಣುಗಳು ಮುಚ್ಚಿಕೊಂಡವು… ಹತ್ತು ನಿಮಿಷಗಳಲ್ಲಿ ಗಾಢವಾದ ನಿದ್ರೆಯಲ್ಲಿ ಮುಳುಗಿಹೋದಳು…

‍ಲೇಖಕರು avadhi

July 12, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Srinivas B S

    ಹೃದಯಸ್ಪರ್ಶಿ ಕಥೆ! ಸೊಗಸಾಗಿದೆ! ಅಭಿನಂದನೆಗಳು

    ಪ್ರತಿಕ್ರಿಯೆ
  2. ಚಂದ್ರಪ್ರಭ ಕಠಾರಿ

    ಬೆಳಕು ಹರಿಯುವ ಮುನ್ನ…ಬೆಳಕು ಹರಿಯಿತೇ? ನಗರದಲ್ಲಿಯ ಮಧ್ಯಮವರ್ಗದ ಬದುಕಲ್ಲಿರುವ ಆಸೆ, ಹತಾಶೆ, ನೋವು ತಟ್ಟನೆ ಆಕಾಶಕ್ಕೆ ನೆಗೆಯ ಬೇಕೆಂಬ ಅತಿಯಾದ ಆತ್ಮವಿಶ್ವಾಸ, ಹುಂಬತನವನ್ನು ಅನಾವರಣಗೊಳಿಸಿದೆ. ಅಲ್ಲದೆ ಗೃಹಿಣಿಯಾಗಿ ಕುಟುಂಬ ವ್ಯವಸ್ಥೆಯನ್ನು ನಿಭಾಯಿಸುತ್ತಲೇ ತನ್ನ ಅಸ್ತಿತ್ವಕ್ಕೆ ಬೆಲೆಯಿಲ್ಲದ ಪರಿಸ್ಥಿತಿಯಲ್ಲಿ ಇರಬೇಕಾದ ಅನಿವಾರ್ಯತೆ, ಅದರಿಂದ ಆಚೆ ಬರಲಾಗದ ಅಸಹಾಯಕತೆ ಮನಮುಟ್ಟುತ್ತದೆ. ನಿದ್ದೆ ಬಾರದ ಒಂದು ರಾತ್ರಿಯ ಸ್ವಗತವಾಗಿ ಕತೆ ಚೆನ್ನಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: