ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆತ್ತಲೆ ಅರಸನ ರಾಜ ರಹಸ್ಯ…

ಪ್ರೀತಿ ನಾಗರಾಜ್

ನಾಟಕ: ಬೆತ್ತಲೆ ಅರಸನ ರಾಜ ರಹಸ್ಯ
ಮೂಲ ಕಥೆ: ಎಂ ಎಸ್ ಕೆ ಪ್ರಭು
ರಂಗರೂಪ: ಕುಸುಮಾ ಆಯರಹಳ್ಳಿ
ನಿರ್ದೇಶನ: ಮಂಡ್ಯ ರಮೇಶ್

ಚಂದಮಾಮದಲ್ಲಿ ಬರುತ್ತಿದ್ದ ಚಂದದ ಕಥೆಗಳ ಚಂದದ ರಾಜ ಇವನಲ್ಲ. ಆದರೂ ಇಡೀ ನಾಟಕ ಚಂದಮಾಮದ ಕಥೆಯ ಹಾಗೆ ಭಾಸವಾಗುತ್ತದೆ. ಅಲ್ಲೊಬ್ಬ ರಾಜ, ಅವನಿಗೊಬ್ಬ ಕಾರುಭಾರಿ, ಅವನಿಗೊಬ್ಬ ಮಂತ್ರಿ…

ರಾಜನಿಗೊಂದು ವಿಚಿತ್ರ ಖಾಯಿಲೆ. ಶೃಂಗಾರ ಕವಿತೆಗಳನ್ನು ಕೇಳಿದರೆ ಮಾತ್ರ ರಾಜನಿಗೆ ಜೀವ ಸಂಚಾರವಾಗುತ್ತದೆ. ಇಲ್ಲದಿದ್ದರೆ ಖಾಯಿಲೆ ಬಿದ್ದವರ ಹಾಗೆ ಇರುತ್ತಾನೆ. ವಿಚಿತ್ರ ಅಂದರೆ ಆ ಖಾಯಿಲೆ ದೇಹ-ಮನಸ್ಸು ಎರಡನ್ನೂ ಸಿಗಿದು ಹಾಕುತ್ತಿದೆ. ಅವ ಬಟ್ಟೆ ಉಡಲಾರ, ಉಣ್ಣಲಾರ, ನೀರು ಕುಡಿಯಲಾರ…ಯಾವಾಗ ನೋಡಿದರೂ ಉರಿ ಉರಿ ಎನ್ನುತ್ತಾ ಇರುವ.

’ಕಾರುಭಾರಿಗೆ’ ಗಡಂಗಿನ ನಶೆಯ ಹಿತವಾದ ನೆರಳಲ್ಲಿ ಕವಿತೆಗಳನ್ನು ಬರೆಯುತ್ತಿದ್ದ ಕವಿಗಳನ್ನು ತರಿಸಿ ಅವರನ್ನು ಚೆನ್ನಾಗಿ ಪೋಷಿಸಿ ಅವರಿಂದ ಬಲವಂತವಾಗಿ ಕವಿತೆ ಬರೆಸುವ ಕೆಲಸ. ಇದು ಇಡೀ ರಾಜ್ಯದಲ್ಲಿ ತಮಾಷೆಯಾಗಿ ನಿಂತಿರುವ ಸಂಗತಿ. ಕವಿಗಳು ಅರಮನೆಯಲ್ಲಿ ಕವನ ಬರೆಯಲು ಸಾಧ್ಯವಾಗದಾಗ ಅವರಿಗೆ ಸ್ಫೂರ್ತಿ ನೀಡಲು ಹೆಣ್ಣುಗಳ ವ್ಯವಸ್ಥೆ. ಹೀಗೆ ಮಾಡುತ್ತಾ ರಾಜ್ಯದಲ್ಲಿ ಹೆಣ್ಣುಗಳು ಖಾಲಿ.

ಮಳೆ ಇಲ್ಲ ಬೆಳೆ ಇಲ್ಲ. ಯಾರ ಮುಖದಲ್ಲೂ ನಗುವೂ ಇಲ್ಲ. ಮೇಲೆ ಕವಿತೆಯಂತೂ ಬರೆಯಲು ಆಗುತ್ತಲೇ ಇಲ್ಲ. ಅಂತ್ಯಕ್ಕೆ ಸಾಗುತ್ತಾ, ಸೃಜನಶೀಲತೆ ಎನ್ನುವುದು ಅಧಿಕಾರಕ್ಕೆ ಸಲಾಮು ಹಾಕದು, ಸ್ಫೂರ್ತಿ ಎನ್ನುವುದು ಕಟ್ಟಿ ಹಾಕಿ ನಾಟಿ ಮಾಡಿ ಬೆಳೆಯಿಸುವ ವಸ್ತುವಲ್ಲ, ಜೀವ ಇರುವ ಯಾವುದೂ ಅಂಕೆಗಳಲ್ಲಿ ಅರಳುವುದಿಲ್ಲ ಎನ್ನುವ ಬಹು ಪ್ರಸ್ತುತ ಸಂದೇಶವುಳ್ಳ ನಾಟಕ.

ನಮ್ಮ ಕುಸ್ಮಾಗೆ ನಾಟಕದ ಬರಹ, ಆ ಚೌಕಟ್ಟು ಬಹಳ ಚೆನ್ನಾಗಿ ಒಗ್ಗಿದೆ. ಅಲ್ಲಲ್ಲಿ ಬೇರೆ ಬೇರೆ ನಮೂನೆಯ ಭಾಷಾ ಪ್ರಯೋಗ, ಮಾತುಗಳ ಅಚ್ಚುಕಟ್ಟು, ಒಂದು ದೃಶ್ಯದಿಂದ ಇನ್ನೊಂದಕ್ಕೆ ಸರಳವಾಗಿ ಸಾಗುವ ನಾಟಕ, ಅಲ್ಲಲ್ಲಿ ಚುಮುಕಿಸುವ ಒಳನೋಟಗಳ ಮಾತುಗಳು, ಬೇರೆ ಬೇರೆ ವಿಷಯಗಳನ್ನು ಒಳಗೊಳ್ಳುವ ಸಹಜತೆ… ದಿಶಾ ರಮೇಶ್ ಸಂಗೀತ ಹಾಗೂ ಮೇಘ ಸಮೀರರ ವಿನ್ಯಾಸ ನಾಟಕಕ್ಕೆ ಪುಟವಿಟ್ಟ ಹಾಗಿದೆ.

ಮಂಡ್ಯ ರಮೇಶ್ ಅವರ ನಿರ್ದೇಶನದ ನಾಟಕ ಅಂದರೆ “ಟೋಟಲ್ ಥಿಯೇಟರ್”. ಎಲ್ಲೂ ಬಿಟ್ಟೂ ಬಿಡದೆ ನಾಟಕ ಎನರ್ಜಿ ಕಳೆದುಕೊಳ್ಳುವುದಿಲ್ಲ. ಎಲ್ಲಾ ಪಾತ್ರಧಾರಿಗಳೂ ತಮ್ಮ ಕ್ಯಾರೆಕ್ಟರಿನ ಮಿತಿ ಹಾಗೂ ವಿಸ್ತಾರವನ್ನು ಅರಿತು ಸಂಪೂರ್ಣ ತೊಡಗಿಸುವಿಕೆಯಿಂದ ಅಭಿನಯಿಸುತ್ತಾರೆ. ನಟನದ ಹೆಗ್ಗಳಿಕೆ ಅಂದರೆ ಜೀವನದ ಯಾವುದೋ ಘಟ್ಟದಲ್ಲಿ ನಿಂತಿದ್ದರೂ ಅಲ್ಲಿಂದ ನಿಮ್ಮನ್ನು ರಂಗಭೂಮಿಗೆ ಸೆಳೆಯುವ ಶಕ್ತಿವಂತ ಚುಂಬಕ ಇದು.

ಕೊನೆಗೆ ತಮ್ಮ ಪಾತ್ರ ಪರಿಚಯ ಮಾಡಿಕೊಳ್ಳುವಾಗ ಪ್ರತೀ ನಟರೂ ತಮ್ಮ ಊರು, ಹಾಗೂ ವೃತ್ತಿಯನ್ನು ಹೇಳಿದ್ದು ವಿಶೇಷ ಎನ್ನಿಸಿತು. ಒಂದು ಸೂಪರ್ ಮಾರ್ಕೆಟ್ ನಲ್ಲಿ ಕೆಲಸ ಮಾಡುವ ವ್ಯಕ್ತಿಯಲ್ಲಿ, ಒಬ್ಬ ಮೇಷ್ಟ್ರಲ್ಲಿ, ಒಬ್ಬ ಫ಼ಾಸ್ಟಾಗ್ ಉದ್ಯೋಗಿಯಲ್ಲಿ, ಒಬ್ಬ ವಿದ್ಯಾರ್ಥಿಯಲ್ಲಿ, ಒಬ್ಬ ಎಂಜಿನಿಯರನಲ್ಲಿ ನಟರನ್ನು ಕಟೆದು ಶಿಲ್ಪ ಮಾಡುವುದು ಅಂದರೆ ರಂಗಭೂಮಿಗೆ ಹೊಸ ಜೀವ ಉಸುರಿದಂತೆ. ರಮೇಶ್ ಇದರಲ್ಲಿ ಸಿದ್ಧ ಹಸ್ತರು. ಅವರ ಜೊತೆಗೆ ಸತೀಶ್ ಬೈಕಾಡಿ, ಮೇಘ, ದಿಶಾ, ರಾಮು ಇನ್ನಿತರ ಪ್ರತಿಭಾವಂತರ ದೊಡ್ಡ ದಂಡೇ ಇದೆ.
ನಟನ ಬೆಳೆಯಲಿ, ಬೆಳಗಲಿ!!!

ನಾಟಕದ ಅವಧಿ ಕಡಿಮೆ ಆಗಬಹುದಿತ್ತು ಎನ್ನಿಸಿತು. ಆದರೆ ನಿರ್ದೇಶಕರ ಮನಸ್ಸು ನೋಡುವವರ ಮನಸ್ಸಿಗಿಂತಲೂ ಸಂಕೀರ್ಣ. ಯಾವುದಕ್ಕೆ ಯಾವುದು ಲೀಡ್ ಮಾಡ್ತಾ ಇದೆಯೋ ಅದನ್ನು ಕತ್ತರಿಸುವುದು ಹೇಗೆ? ಹಾಗಾಗಿ ಅವಧಿಯ ಬಗ್ಗೆ ನನ್ನದು ಒಂದು ಮಾತಷ್ಟೇ. ಸಲಹೆ/ತಾಕೀತು ಯಾವುದೂ ಅಲ್ಲ.

ಹೋದ ವಾರ ಹೋಗಿ ನಾಟಕಕ್ಕೆ ಟಿಕೇಟು ಸಿಗದೆ ಖುಷಿಯಾಗಿ ವಾಪಾಸು ಬಂದು ಮತ್ತೆ ಈ ವಾರ ಹೋಗಲು ಬಹಳವೇ ಸಂತೋಷವಾಯಿತು. ಈ ಬಾರಿಯೂ ರಂಗಮಂದಿರ ತುಂಬಿ ಜನ ಮತ್ತೊಂದು ಷೋ ಬಗ್ಗೆ ಕೇಳಿಕೊಂಡು ಹೋಗಿದ್ದು ಮನಸ್ಸು ತುಂಬಿ ಬಂದ ಹಾಗೆ ಭಾಸವಾಯಿತು. ರಂಗಭೂಮಿಯಲ್ಲಿ ಜೀವ ಜಲ ಹರಿಯಲು ಶುರುವಾಗಿದೆ. ಒಳ್ಳೆಯ ದಿನಗಳು ಹೀಗೇ ಇರಲಿ ಎನ್ನುವ ಹಾರೈಕೆ.

ಜೊತೆಗೆ ಕುಸುಮಾ ಬೇಗ ಇನ್ನೂ ಹೆಚ್ಚಿನ ನಾಟಕ ಬರೆಯಬೇಕು. ಆ ರಸಗ್ರಹಿಕೆ ಇನ್ನೂ ಹೆಚ್ಚಾಗಿ ಒಳ್ಳೊಳ್ಳೆ ನಾಟಕಗಳು ಕನ್ನಡಕ್ಕೆ ಕುಸುಮಾ ಮೂಲಕ ಬರುವಂತಾಗಲಿ ಎನ್ನುವ ಮನದಾಳದ ಆಶಯ.
ಚಿತ್ರ ಕೃಪೆ : Mithra Law

‍ಲೇಖಕರು Admin

16 February, 2022

1 Comment

  1. Kotresh T A M

    ಅಭಿನಂದನೆಗಳು ತಂಡಕ್ಕೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading