ಬೆಂಗ್ಳೂರ್ ಮಾರ್ಕೆಟ್ಟಲ್ಲಿ ಮಸಿ ಮಾಯೆ!

ಪಂಪನ ಕಾವ್ಯದಲ್ಲಿ ಬೆಳ್ಳುಳ್ಳಿ ಪ್ರಸ್ತಾಪದ ಬಗ್ಗೆ ಬಿ ಜಿ ಎಲ್ ಸ್ವಾಮಿಯವರು ಬರೆದದ್ದನ್ನು ಹಿಂದೊಮ್ಮೆ ಇಲ್ಲಿ ಪ್ರಕಟಿಸಿದ್ದೆವು. ಸ್ವಾಮಿಯವರ ಅದೇ “ಸಸ್ಯ ಪುರಾಣ” ಪುಸ್ತಕದಲ್ಲಿ ಬಸವಣ್ಣನ ವಚನಗಳಲ್ಲಿ ಬರುವ ಸಸ್ಯ ಪ್ರಸ್ತಾಪದ ಬಗ್ಗೆಯೂ ಬರಹವಿದೆ. ಅದರ ಒಂದು ಸ್ವಾರಸ್ಯಕರ ಭಾಗ, ಅವಧಿ ಓದುಗರಿಗಾಗಿ.

* * *

“ಮಸಿಯ ಹುಸಿ ನೇರಲ ಹಣ್ಣು ಮಾರುವಂತೆ”

tomato.jpgಬೆಂಗಳೂರು ಪಟ್ಟಣದ ಮಾರುಕಟ್ಟೆಯಲ್ಲಿ ಕಳೆದ ವರ್ಷ ಕಣ್ಣಾರೆ ಕಂಡ ದೃಶ್ಯದ ನೆನಪಾಗುತ್ತದೆ. ಹಳದಿ ಬಣ್ಣದ ದೋರಗಾಯಿ ಟೊಮೇಟೊ ರಾಶಿ ಒಂದು ಕೆಲದಲ್ಲಿ; ವರಿಸೆವರಿಸೆಯಾಗಿ ಗಾತ್ರ ಪ್ರಕಾರ ಒಪ್ಪವಾಗಿ ಪೇರಿಸಿಟ್ಟಿದ್ದ ಕೆಂಪು ಟೊಮೇಟೊ ಗೋಪುರಗಳು ಇನ್ನೊಂದು ಕೆಲದಲ್ಲಿ. ಈ ಗುಂಪುಗಳ ನಡುವೆ ಮಾಲೀಕ. ಹಳದಿ ದೋರಗಾಯೊಂದನ್ನು ಕೈಲಿ ಹಿಡಿದುಕೊಳ್ಳುತ್ತಾನೆ. ಬಟ್ಟೆಯ ಚಿಂದಿಯೊಂದನ್ನು ಯಾವುದೋ ಕೆಂಪು ಬಣ್ಣದ ದ್ರಾವಕದಲ್ಲಿ ಅದ್ದಿ ಅದರಿಂದ ದೋರಕಾಯನ್ನು ಉಜ್ಜುತ್ತಾನೆ. ಒಂದೆರಡು ನಿಮಿಷಗಳಲ್ಲಿ ಅದರ ಹಳದಿ ಬಣ್ಣ ಮಾಯವಾಗಿ ಹೊಳೆ ಹೊಳೆಯುವ ಕೆಂಬಣ್ಣ ಲಭಿಸುತ್ತದೆ. ಇನ್ನೊಂದು ಬಟ್ಟೆಯಿಂದ “ಹಣ್ಣ”ನ್ನು ತಿಕ್ಕಿ ಒರೆಸಿ ಗೋಪುರದಲ್ಲಿ ಅಡಕುತ್ತಾನೆ.

ಇದು ಯಕ್ಷಿಣಿಯೇ? ಇರಬಹುದೇನೋ ಏನೋ ಎನ್ನುವಂತೆ ಹಣ್ಣನ್ನು ಕೊಳ್ಳಬಂದವರು ಕುತೂಹಲದಿಂದ ನೋಡುತ್ತಿದ್ದಾರೆ. ಅವರಲ್ಲೊಬ್ಬ “ಈ ರಾಶಿಯ ಹಣ್ಣು ಹಳದಿ, ಆ ರಾಶಿಯದು ಕೆಂಪು. ಅದು ಹೇಗೆ ಇಷ್ಟು ಬೇಗ ಹಣ್ಣಾಯಿತು?” ಎಂದ. ಮಾಲೀಕನದು ಖಚಿತವಾದ ಉತ್ತರ: “ಇಷ್ಟವಿದ್ದರೆ ಕೊಂಡುಕೊ, ಬೇಡವಾದರೆ ಬಿಡು! ಪ್ರಶ್ನೆಗಿಶ್ನೆ ಬೇಡ!”

ಯಕ್ಷಿಣಿಯ ರಹಸ್ಯವಿಷ್ಟೆ: ಎರಿತ್ರೋಸಿನ್ ಎಂಬ ಕೆಂಪು ಬಣ್ಣವಿದೆ. ಬಯಾಲಜಿ ಲ್ಯಾಬೊರೆಟೊರಿಗಳಲ್ಲಿ ಸಾಧಾರಣವಾಗಿ ಉಪಯೋಗಿಸುತ್ತೇವೆ (ವೈದ್ಯರಲ್ಲೂ ಆಂಟಿ-ಬಯೋಟಿಕ್ ಆಗಿ ಉಪಯೋಗ ಪಡೆದಿದೆ). ಇದು ನೀರು, ಸೀಮೆ ಎಣ್ಣೆ, ಪೆಟ್ರೋಲ್, ಆಲ್ಕೊಹಾಲು ಮೊದಲಾದ ದ್ರಾವಕಗಳಲ್ಲೆಲ್ಲ ಕರಗುತ್ತದೆ. ಯಕ್ಷಿಣಿ-ಮಾಲೀಕನ ಎದುರು ಬಟ್ಟಲಿನಲ್ಲಿದ್ದದ್ದು ಎರಿತ್ರೋಸಿನ್ ಲೀನವಾದ ಸೀಮೆ ಎಣ್ಣೆ. ಸಸ್ಯದ ತಿಸು(ತಿಸ್ಸುಎ)ಗಳು ಈ ಬಣ್ಣವನ್ನು ಅತಿ ಶೀಘ್ರವಾಗಿ ಹೀರಿಕೊಳ್ಳುತ್ತವೆ. ಹೀರಿದ ಬಣ್ಣ ಕೈಗೆ ಅಂಟದು, ನೀರಿನಲ್ಲಿ ತೊಳೆದರೂ ಹೋಗದು. ಕಾಯಿನ ಹೊರಸಿಪ್ಪೆ ಮಾತ್ರ ಕೆಂಪಾಗುತ್ತದೆ: ಸೀಮೆ ಎಣ್ಣೆಯಿಂದಾಗಿ ಹೊಳಪು ಪಡೆಯುತ್ತದೆ. ಬಸವಣ್ಣನವರ ಕಾಲದಲ್ಲಿ ನೇರಿಳೆಕಾಯಿಗೆ ಮಸಿ ಬಳಿದು ಹಣ್ಣು ಎಂದು ಮಾರುತ್ತಿದ್ದರು; ನಮ್ಮ ಕಾಲದಲ್ಲಿ ಟೊಮೇಟೊ ಕಾಯಿಗೆ ಎರಿತ್ರೋಸಿನ್ ಬಳಿದು ಹಣ್ಣು ಎಂದು ಮಾರುತ್ತಾರೆ. ಆವುದು ಹುಸಿ, ಆವುದು ಕಿರಿದು ಎಂಬುದನ್ನು ತಿಳಿಯದ ಜನ ಕೊಂಡುಕೊಳ್ಳುತ್ತಾರೆ.

ಬಸವಣ್ಣನವರ ಈ ನುಡಿ ಇಂದಿಗೂ ಸತ್ಯವಾಗಿದೆ. ಅವರ ಕಾಲಕ್ಕೂ ನಮ್ಮ ಕಾಲಕ್ಕೂ ಇರುವ ಅಂತರಕ್ಕೆ ಇಂದಿನ ವ್ಯಾಪಾರಿ ಸೇತುವೆಯನ್ನು ಕಟ್ಟಿದ್ದಾನೆಯಲ್ಲವೆ?

‍ಲೇಖಕರು avadhi

July 26, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. chetanachaitanya

    ಅವಧಿಗೆ ಕಾಲಿಇದ್ದು ತಡವಾಯಿತು. ಸ್ವಾಮಿಯವರ ಪುಸ್ತಕಗಳನ್ನು ಓದಿದ್ದರೂ ಇದೊಂದು ಗ್ರಹಿಸಬಹುದಾದ ವಿಷಯ ಅನಿಸಿರಲಿಲ್ಲ. ಓದುವ ಕಲೆಯನ್ನು ತಿಳಿದಂತಾಯಿತು!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: