ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆಂಗಳೂರೇ ತವರು ಮನೆಯಾಯಿತು..

ಅಮೆರಿಕಾದ ‘ನಾವಿಕೋತ್ಸವ’ದಲ್ಲಿ ಬಿಡುಗಡೆಯಾದ ‘ನಮ್ಮೊಳಗೊಂದು ಬೆಂಗಳೂರು’ ಪುಸ್ತಕದಲ್ಲಿನ ಲೇಖನ.

-ಎಂ ಆರ್ ಕಮಲ

ನಿಂತ ನೀರಂತಿದ್ದರೆ ಅವು ನಗರಗಳೇ ಆಗುತ್ತಿರಲಿಲ್ಲವೇನೋ?

ಬದಲಾಗುವುದೇ ಮಹಾನಗರಗಳ ಗುಣ ಲಕ್ಷಣವೇನೋ? ನಗರಗಳು ನಿಂತ ನೀರಂತಿದ್ದರೆ ಬಹುಶಃ ಅವು ನಗರಗಳೇ ಆಗುತ್ತಿರಲಿಲ್ಲ. ನಗರವೆಂದರೆ ನಿರಂತರ ಬದಲಾವಣೆಗೆ ಪಕ್ಕಾಗುವುದು ಎಂದೇ ಅರ್ಥ. ಇಲ್ಲದಿದ್ದರೆ ಎಲ್ಲಕಾಲದಲ್ಲೂ, ಎಲ್ಲ ತಲೆಮಾರಿನ ಜನರಿಗೂ ಅವು ಚಳಿಗಾಲದ ಕನಸುಗಳಿಗೆ ಬೆಚ್ಚನೆಯ ಭಾವ ನೀಡುವ ಹೊದಿಕೆಗಳಂತೆ ಕಾಣಲಾರವೇನೋ!

ಇಂತಹ ಮಹಾನಗರಗಳಲ್ಲಿ ಒಂದಾದ ಬೆಂಗಳೂರಿಗೆ ನಾನೂ ದಶಕಗಳ ಹಿಂದೆ ಕನಸುಗಳನ್ನು ಹುಡುಕಿಕೊಂಡು ಬಂದವಳೇ. ಎಷ್ಟು ಕನಸಿನ ಮೊಗ್ಗುಗಳು ಅರಳಿ ಹೂವಾದವೆಂದು ಎಣಿಸಿ ಹೇಳಲಾರೆನಾದರೂ ನಾನು ಕನಸಿದ ಊರೇ ಇದು ಎಂದು ಖತಿಗೊಳ್ಳುವಷ್ಟು ಬೆಂಗಳೂರು ಬದಲಾಗಿರುವುದಂತೂ ನಿಜ. ನನ್ನ ಭಾವಕೋಶದಲ್ಲಿ ಅರಳಿ ಘಮಿಸುತ್ತಿದ್ದ ಊರಂತೂ ಇದಲ್ಲವೇ ಅಲ್ಲ ಅನ್ನಿಸುತ್ತಿರುತ್ತದೆ. ಆಗೆಲ್ಲ ಲಂಗ, ಬ್ಲೌಸ್‌ನಲ್ಲಿ ಮಲ್ಲೇಶ್ವರದ `ಎಂಇಎಸ್’ ಕಾಲೇಜಿಗೆ ಹೋಗುವಾಗ ಸಂಪಿಗೆ ರಸ್ತೆಗೆ ಕಾಲಿಟ್ಟರೆ ಅಲ್ಲಿ ನಿಜಕ್ಕೂ ಸಂಪಿಗೆಯ ಘಮಲು ಮೈ ಮನಸ್ಸುಗಳನ್ನು ತುಂಬುತ್ತಿತ್ತು. ಹಗಲಲ್ಲೂ ಕತ್ತಲೆ ಹೆಣೆಯುತ್ತಿದ್ದ ಭಾರಿ ಮರಗಳು ಚಾಮರಾಜಪೇಟೆಯ ಬೀದಿಗಳಲ್ಲಿದ್ದವು. ಬೆಂಗಳೂರಿನ ವಿಶಾಲವಾದ ರಸ್ತೆಗಳಲ್ಲಿ ಸಾಲುಸಾಲಾಗಿ ನಾವು, ಅಂದರೆ ಬೆಂಗಳೂರು ವಿಶ್ವವಿದ್ಯಾಲಯದ ಗೆಳೆಯ-ಗೆಳತಿಯರೆಲ್ಲ ಖುಷಿಯಿಂದ ಕುಣಿದು ಬರುತ್ತಿದ್ದೆವು. ಆ ದಾರಿ ಎಲ್ಲಿದೆ ಎಂದು ಈಗ ಹುಡುಕಬೇಕಾಗುತ್ತದೆ.

ಓದು ಮುಗಿದು, ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಹಳೇಬೀಡಿನಲ್ಲಿ ಕೆಲಸ ಸಿಕ್ಕ ಮೇಲೂ ಬೆಂಗಳೂರಿನ ಮೋಹ ಕಡಿಮೆಯಾಗಿರಲಿಲ್ಲ. ಬೆಂಗಳೂರಿನಲ್ಲಿಯೇ ನೆಲೆಸಿದ್ದ ಹುಡುಗನನ್ನು ಮದುವೆಯಾದ ಮೇಲಂತೂ ಸ್ವರ್ಗ ಕೈಗೆಟುಕಿದ ಭಾವನೆ. ರಾಜಾಜಿನಗರ ಬಡಾವಣೆಯಲ್ಲಿರುವ ಮನೆಯಲ್ಲಿ ಅಂದಿನಿಂದ ಇಂದಿನವರೆಗೂ ನನ್ನ ವಾಸ. ಆಗೆಲ್ಲ ನನ್ನ ದಿನಚರಿ ಆರಂಭವಾಗುತ್ತಿದ್ದದ್ದು ಬೆಳಗ್ಗೆ ಐದು ಗಂಟೆಗೆ. ಚಹಾದ ನೀರು ಹಬೆಯಾಡುವಾಗ ಅಡುಗೆ ಮನೆಗೆ ತಾಗುವಂತಿದ್ದ ಮಾವಿನ ಮರದ ಮೇಲೆ ಕೂತು ಕೋಗಿಲೆ ಕೂಗುತ್ತಿದ್ದರೆ ಅದನ್ನು ಅಣಕಿಸುವುದೇ ನನ್ನ ಹವ್ಯಾಸವಾಗಿತ್ತು. ಮಲ್ಲೇಶ್ವರದ ರೈಲ್ವೆ ನಿಲ್ದಾಣಕ್ಕೆ ಬಂದ ಅರಸೀಕೆರೆ ಪ್ಯಾಸೆಂಜರ್ ಕೂಗನ್ನು ಕೇಳಿದರೆ ತವರಿಗೆ ಹೋದಷ್ಟು ಸಂತಸವಾಗುತ್ತಿತ್ತು. (ನನ್ನ ತವರು ಅರಸೀಕೆರೆಯ ಸಮೀಪದಲ್ಲಿರುವ ಮೇಟಿಕುರ್ಕೆ ಎಂಬ ಹಳ್ಳಿ) ಆಮೇಲೆ, ನೆರೆಮನೆಯವರು ಮಾವಿನ ಮರವನ್ನು ಕಡಿದು ಹಾಕಿದರು. ಒಂದೂವರೆ ಕಿಲೋಮೀಟರ್ ದೂರದ ರೈಲು ನಿಲ್ದಾಣ ಅದ್ಯಾವಾಗ ಹತ್ತಾರು ಕಿಲೋಮೀಟರ್ ಆಯಿತೋ! ರೈಲಿನ ಶಬ್ದಕೇಳುವುದು ನಿಂತೇ ಹೋಯಿತು. ತಂದೆ-ತಾಯಿಗಳು ಹಳ್ಳಿಯನ್ನು ಬಿಟ್ಟು, ಬೆಂಗಳೂರಿನಲ್ಲಿಯೇ ವಾಸ ಮಾಡಲು ಆರಂಭಿಸಿದ ಮೇಲೆ ಆ ತವರು ಅನಾಥವಾಗಿ ಬೆಂಗಳೂರೇ ತವರು ಮನೆಯಾಯಿತು.

ಮನೆಯೆದುರಿನ ಉದ್ಯಾನವನ ಶಾಂತ, ಪ್ರಶಾಂತವಾಗಿತ್ತು. ವಾಕ್ ಮಾಡಬೇಕಾದರೆ ಹಿಂದೆಲ್ಲ ಅಲ್ಲಿ ಅದೆಷ್ಟು ಬಗೆಯ ಹಕ್ಕಿಗಳನ್ನು ನೋಡುತ್ತಿದ್ದೆನೋ? ಪುಟ್ಟ ಪುಟ್ಟ ಗುಂಡಿಯಲ್ಲಿ ನಿಂತಿದ್ದ ನೀರಿನಲ್ಲಿ ಗುಬ್ಬಿಗಳು ಮೈ ತೊಳೆಯುವುದನ್ನು ಕಂಡರಂತೂ ಏನೋ ಖುಷಿ! ಅಲ್ಲೊಂದು ಗಿಣಿ, ಇಲ್ಲೊಂದು ಕೋಗಿಲೆ ಎಂದು ಮಕ್ಕಳಿಗೆ ತೋರಿಸುವಾಗೆಲ್ಲ ಚಿಕ್ಕ ಹುಡುಗಿಯಾಗಿದ್ದೇನೆ ಅನ್ನಿಸುತ್ತಿತ್ತು. ಎಲ್ಲರ ಮನೆಯ ಕಾಂಪೌಂಡಿನೊಳಗೆ ಚಕ್ಕೋತ, ಹಲಸು, ಮಾವು, ದಾಳಿಂಬೆ, ಸಂಪಿಗೆ ಹೀಗೆ ಲೆಕ್ಕವಿರದಷ್ಟು ಹೂವಿನ ಗಿಡಗಳು. ಬೀದಿಗೂ ಚಾಚುತ್ತಿದ್ದ ಕೊಂಬೆಗಳಿಂದ ಒಂದೆರಡು ಸಂಪಿಗೆಯನ್ನು ಕಿತ್ತು, ಹಾದಿಯುದ್ದಕ್ಕೂ ಅದರ ಘಮವನ್ನು ಹೀರುತ್ತಾ ಹೋಗುವುದು ರೂಢಿಯಾಗಿತ್ತು. ನಂತರ ಒಂದೊಂದೇ ಗಿಡಗಳನ್ನು ಕಡಿದು, ಇಡೀ ಸೈಟಿನಲ್ಲಿ ಮನೆಗಳನ್ನು ನಿರ್ಮಿಸಿದರು. ರಸ್ತೆಯಲ್ಲಿದ್ದ ಮರಗಳು ತಮ್ಮ ಚಂದದ ಮನೆಯನ್ನು ಮರೆ ಮಾಡಿಬಿಡುತ್ತವೆ ಎಂದು ಯಾವ ಅನುಮತಿಯನ್ನು ತೆಗೆದುಕೊಳ್ಳದೆ ಮರಗಳನ್ನು ಕಡಿದುಹಾಕಿದರು. ರಾಜಾಜಿನಗರದ ಕಾರ್ಡ್ ರಸ್ತೆಯಲ್ಲಿ, ಮರಗಳ ತಂಪಿನಲ್ಲಿ ವಾಕಿಂಗ್ ಮುಗಿಸಿ ಉಲ್ಲಸಿತಳಾಗಿ ಬರುತ್ತಿದ್ದ ನನಗೆ ಅದೀಗ ಕನಸು. ಫ್ಲೈ ಓವರ್, ಮೆಟ್ರೋ ಹೀಗೆ ಅಭಿವೃದ್ಧಿಯ ಹೆಸರಿನಲ್ಲಿ ಸರ್ವಿಸ್ ರಸ್ತೆಯಲ್ಲಿದ್ದ ದೊಡ್ಡ ದೊಡ್ಡ ಮರಗಳೆಲ್ಲ ಧರೆಗುರುಳಿಹೋದವು.

ನಗರದ ಬದುಕಿನ ಧಾವಂತದಲ್ಲಿ ಒಂದಿಷ್ಟು ಜೀವಂತಿಕೆಯನ್ನು, ನಿಸರ್ಗ ಪ್ರೇಮವನ್ನು ಉಳಿಸಿಕೊಳ್ಳಲು ಈಗ ಅದೆಷ್ಟು ಹೋರಾಟ ಮಾಡಬೇಕಿದೆ? ಸರ್ಕಾರಿ ಕೆಲಸದಲ್ಲಿ ನೂರಾರು ಮೈಲಿ ಪಯಣಿಸುತ್ತ ಬೆಳಗಿನ ಆರು ಗಂಟೆಯೊಳಗೆ ಅಡುಗೆ, ತಿಂಡಿ ಮುಗಿಸಿ ಕೆಲಸಕ್ಕೆ ಓಡುತ್ತಿದ್ದೆನಲ್ಲ! ಆಗೆಲ್ಲ ನನ್ನದು ಎಂದು ಸಿಗುತ್ತಿದ್ದ ಸಮಯವೆಂದರೆ ಮೆಜೆಸ್ಟಿಕ್ ಅಥವಾ ಮಾರ್ಕೆಟ್‌ಗೆ ಸ್ಕೂಟರ್‌ನಲ್ಲಿ ಹಾಡಿಕೊಂಡು ಹೋಗುವ ಖುಷಿ. ದಾರಿಯುದ್ದಕ್ಕೂ ಎಲೆಯ, ಹೂವಿನ ಪರಿಮಳವನ್ನು ಆಸ್ವಾದಿಸುತ್ತ, ಸೂರ್ಯೋದಯಕ್ಕೆ ಖುಷಿಪಡುತ್ತ, ಐದಾರು ಹಾಡುಗಳನ್ನು ಹಾಡಿ ಮುಗಿಸುವಷ್ಟರಲ್ಲಿ ತಲುಪಬೇಕಾದ ಜಾಗ ಸಿಗುತ್ತಿತ್ತು. ಆ ತಂಗಾಳಿ, ಪ್ರಶಾಂತತೆ, ಬೆಳಗು ಅದೆಷ್ಟು ಮುದ ನೀಡಿ ಮುಂದೆ ಕ್ರಮಿಸುವ ಹಾದಿ ದೂರವಿದ್ದರೂ ಚೈತನ್ಯ ತುಂಬುತ್ತಿತ್ತು.

ಈಗ ಮರಗಳೆಲ್ಲವನ್ನು ಕಡಿದು ಕಡಿದು ಬೋಳು ಮಾಡಿರುವ, ನೆರಳು ಹಸಿರಿಲ್ಲದ ಹಾದಿಯಲ್ಲಿ ಜನರು ನಡೆಯಬೇಕಿದೆ, ತುತ್ತಿನ ಚೀಲವನ್ನು ತುಂಬಿಸಿಕೊಳ್ಳಲು ಎಲ್ಲರೂ ಎಲ್ಲಿಗೋ ಬಸ್ಸು, ಮೆಟ್ರೋ ಹಿಡಿಯಲು ದಿಕ್ಕೆಟ್ಟು ಓಡುತ್ತಿರುವಾಗ ಹಸಿರಿರಬೇಕಿತ್ತು ಎಂದು ಯೋಚಿಸುವುದಕ್ಕೆ ಯಾರಿಗೂ ಪುರುಸೊತ್ತಿಲ್ಲ. ತಮ್ಮ ಸರಾಗ ಓಡಾಟಕ್ಕೆ ಅಡ್ಡ ಬರುತ್ತವೆ ಎಂದು ಮನೆಯೆದುರಿರುವ ಮರಗಳನ್ನೇ ಜನ ಸುಳ್ಳು ಕಾರಣಗಳನ್ನು ಕೊಟ್ಟು ಕಡಿಸಿ ಹಾಕುತ್ತಿದ್ದಾರೆ. ಬಿದ್ದ ಹೂಗಳು, ಎಲೆಗಳನ್ನು `ಕಸ’ ಎಂದು ಕರೆಯುವಷ್ಟು ಜನ ಅಸೂಕ್ಷ್ಮವಾಗಿದ್ದಾರೆ! `ಗಾರ್ಡನ್ ಸಿಟಿ’ ಎಂಬ ಬೆಂಗಳೂರಿನ ಹೆಸರು ವಿಷಾದ ಹುಟ್ಟಿಸುತ್ತಿದೆ. ಇಷ್ಟೆಲ್ಲದರ ನಡುವೆ ಮರಗಳಿಂದ ಮನಸ್ಸಿಗೆ ದಿವ್ಯತೆ ತುಂಬುವ ಕಬ್ಬನ್ ಪಾರ್ಕ್, ಲಾಲ್ ಬಾಗ್ ಬೆಂಗಳೂರಿನಲ್ಲಿ ಇನ್ನೂ ಉಳಿದುಕೊಂಡಿವೆಯಲ್ಲ ಎಂದು ನಿಟ್ಟುಸಿರು ಬಿಡುವಂತಾಗಿದೆ.

ಆಗ ಇಡೀ ರಸ್ತೆಯಲ್ಲಿ ಪ್ರತಿ ಮನೆಗೂ ಕಡ್ಡಾಯ ಎನ್ನುವಂತೆ ಒಂದು ಪುಟ್ಟ ಔಟ್‌ಹೌಸ್ ಇರುತ್ತಿತ್ತು. ಬೆಳಗು, ಸಂಜೆಯೆನ್ನದೆ ಅವರ ಮನೆಯಿಂದ ಇವರ ಮನೆಗೆ, ಇವರ ಮನೆಯಿಂದ ಅವರ ಮನೆಗೆ ಓಡಾಟ ನಡೆಯುತ್ತಿತ್ತು. ಸಣ್ಣ ಪುಟ್ಟ ಕಿರಿಕಿರಿಗಳ ನಡುವೆ ತಿಂಡಿಗಳು ಸರಬರಾಜಾಗುತ್ತಿದ್ದವು. ಒಟ್ಟಿಗೆ ಸಿನೆಮಾ ನೋಡುತ್ತಿದ್ದೆವು. `ವರ್ಲ್ಡ್ ಕಪ್ ಫೈನಲ್’ ಎಂದಾಗ ದೂರದಿಂದ ಗೆಳೆಯರು, ಬಂಧುಗಳು ಜೊತೆಯಲ್ಲಿ ಕೂತು ಟಿವಿ ನೋಡಲು ಬರುತ್ತಿದ್ದರು. ನೆರೆಮನೆಯ ಔಟ್‌ಹೌಸ್‌ನಲ್ಲಿದ್ದ ಕಾಶ್ಮೀರಿ ಹೆಂಗಸು ಬಿಡುವಿನ ವೇಳೆಯಲ್ಲಿ ನನಗೆ ಸ್ವೆಟರ್ ಹಾಕುವುದನ್ನು, ರಸ್ತೆಯ ಮೂರನೆಯ ಮನೆಯಲ್ಲಿದ್ದ ಪಂಜಾಬಿಗಳು ಪುಲ್ಕ ಮಾಡುವುದನ್ನು ಹೇಳಿಕೊಡುತ್ತ ಕನ್ನಡ ಕಲಿಯುತ್ತಿದ್ದರು. ಉದ್ಯಾನವನಕ್ಕೆ ನಡಿಗೆಗೆಂದು ಬರುತ್ತಿದ್ದ ಅಜ್ಜಿಯೊಬ್ಬರು ಏನೇನೂ ಪರಿಚಯವಿಲ್ಲದ ನನ್ನ ಮನೆಗೆ ಬಂದು `ಅರಳು ಸಂಡಿಗೆ’ ಮಾಡುವುದನ್ನು ಹೇಳಿಕೊಟ್ಟಿದ್ದರು. ಮಕ್ಕಳು ಅವರನ್ನು ಬಹಳ ಕಾಲ `ಸಂಡಿಗೆ ಅಜ್ಜಿ’ ಅನ್ನುತ್ತಿದ್ದರು. ನಮ್ಮ ಮನೆಯ ತುಳಸಿ ಗಿಡ ಬಾಡಿರುವುದನ್ನು ಕಂಡರೆ ಹೊಸ ಗಿಡವನ್ನು ತಂದು ಮತ್ತೊಬ್ಬರು ಊರುತ್ತಿದ್ದರು. ಅವರು `ತುಳಸಿ ಅಜ್ಜಿ’. ಈಗ `ಸಂಡಿಗೆ ಅಜ್ಜಿ’, `ತುಳಸಿ ಅಜ್ಜಿ’ಯಂಥವರು ಹುಡುಕಿದರೂ ಸಿಗುವುದಿಲ್ಲ. ತುರ್ತಾಗಿ ನಾನೆಲ್ಲಿಯೋ ಹೋಗಬೇಕೆಂದಿದ್ದರೆ ಮಕ್ಕಳನ್ನು ಪಕ್ಕದ ಮನೆಯಲ್ಲಿ ಬಿಟ್ಟು ಹೋಗುವ ಪರಿಪಾಠವಿತ್ತು. ಈಗ ನೆರೆಯಲ್ಲಿ ಯಾರಿದ್ದಾರೆ ಎಂಬುದೇ ತಿಳಿಯದಷ್ಟರ ಮಟ್ಟಿಗೆ ಜನರು ದ್ವೀಪಗಳಾಗಿದ್ದಾರೆ. ಹತ್ತಿರವಿದ್ದೂ ಹಮ್ಮಿನ ಕೋಟೆಯಲ್ಲಿ ಬಂಧಿತವಾಗಿದ್ದಾರೆ. ಅದೇ ರೂಢಿಯಾಗಿ ಜನರು ಹೀಗೆ ಬರುವುದು, ಹೋಗುವುದು ಕಿರಿಕಿರಿ ಎನ್ನುವಷ್ಟು ಸ್ವಾರ್ಥಿಗಳಾಗಿದ್ದೇವೆ.

ವಸತಿ ಪ್ರದೇಶಗಳೆಲ್ಲ ಈಗ ಪಕ್ಕಾ ವಾಣಿಜ್ಯ ವ್ಯವಹಾರದ ಪ್ರದೇಶಗಳಾಗಿರುವುದಂತೂ ಗಾಬರಿ ಹುಟ್ಟಿಸುವಂತಿದೆ. ಹಿಂದಿನಂತೆ `ಕಮರ್ಷಿಯಲ್ ಸ್ಟ್ರೀಟ್’ ಎಂದು ಪ್ರತ್ಯೇಕಿಸಿ ಹೇಳಬೇಕಿಲ್ಲ. ಬೇಕಾದುದನ್ನು ಕೊಳ್ಳಲು ಅಲ್ಲಿಗೆ ಹೋಗಲೇಬೇಕಿಲ್ಲ. ಹಳೆಯ ಮಲ್ಲೇಶ್ವರ, ರಾಜಾಜಿನಗರ, ಗಾಂಧಿ ಬಜಾರು, ವಿಜಯನಗರ, ಹನುಮಂತನಗರ ಬಡಾವಣೆಗಳು ಕೂಡ `ಕಮರ್ಷಿಯಲ್ ಸ್ಟ್ರೀಟ್’ಗಳಾಗಿ ತಮ್ಮ ಸ್ವರೂಪವನ್ನೇ ಕಳೆದುಕೊಂಡಿವೆ. ಎಲ್ಲ ಕಡೆ ಅಪಾರ್ಟ್ಮೆಂಟುಗಳು ಎದ್ದು ಸೂರ್ಯೋದಯ, ಸೂರ್ಯಾಸ್ತದ ದೃಶ್ಯಗಳನ್ನು ಕಾಣುವುದರಿಂದ ಬೆಂಗಳೂರಿಗರು ವಂಚಿತರಾಗಿದ್ದಾರೆ. ಯಾವುದೋ ಪುಟ್ಟ ಅಂಗಡಿಯ ಮೂಲಕ ಹಿಂದೆಲ್ಲ ಗುರುತುಗಳನ್ನು(ಲ್ಯಾಂಡ್ ಮಾರ್ಕ್) ಹೇಳುತ್ತಿದ್ದೆವಲ್ಲ! ಮರೆಯಾಗಿ ಹೋಗಿರುವ ಅವೆಲ್ಲವನ್ನು ನೆನಪಿಟ್ಟುಕೊಂಡು ಮನೆಯನ್ನು ಹುಡುಕುವುದು ಅಸಾಧ್ಯ. ಜಿಪಿಎಸ್ ನೆರವಿಲ್ಲದೆ ಬೆಂಗಳೂರಿನಲ್ಲಿ ಓಡಾಡುತ್ತೇನೆ ಎನ್ನುವುದನ್ನು ಕಲ್ಪನೆ ಮಾಡಿಕೊಳ್ಳುವುದು ಕಷ್ಟ. ಎರಡು ರಸ್ತೆಯಾಚೆಗಿನ ಮನೆಗೂ ನಮಗದರ ಬೆಂಬಲ ಬೇಕಾಗಿದೆ. ನಾವು ನೋಡಿದ ಚಿತ್ರಗಳನ್ನು ನೆನಪಿಸುತ್ತಿದ್ದ ಪ್ರಸಿದ್ಧ ಚಿತ್ರಮಂದಿರಗಳೆಲ್ಲ ಕಣ್ಮರೆಯಾಗಿವೆ. ನಂದಾ ಥಿಯೇಟರ್ ಎದುರಿನ ರಸ್ತೆ, ಕಾವೇರಿ ಥಿಯೇಟರ್ ಪಕ್ಕದ ರಸ್ತೆ ಎಂದು ಈಗ ಹೇಳಲಾರೆವು. ಆ ಜಾಗದಲ್ಲೀಗ ಝಗಮಗಿಸುವ ಮಾಲ್‌ಗಳು ಬಂದಿವೆ. ಸಣ್ಣ ಪುಟ್ಟ ಅಂಗಡಿಗಳು ಅನಾಥವಾಗಿ ಕಾಣುತ್ತಿವೆ.

ಜನ ವಿರಳತೆಯೇ ಇಲ್ಲಿನ ವಿಶೇಷತೆ ಅನ್ನುವುದು ಈ ಊರಿಗೆ ಮರೆತೇ ಹೋಗಿರಬೇಕು. ಸಾಹಿತ್ಯ ಗೋಷ್ಠಿ, ಸಮುದಾಯದ ನಾಟಕಗಳು, ರಂಗಭೂಮಿಯ ಹೊಸ ಪ್ರಯೋಗಗಳೆಂದು ಅಲೆಯುತ್ತಿದ್ದ ನಮಗೆ ಈಗ ಮನೆಯಿಂದ ಆಚೆಗೆ ಕಾಲಿಡುವುದಕ್ಕೂ ಆತಂಕವಾಗುತ್ತದೆ. ಅಂತಹ ಪ್ರಯತ್ನಗಳು, ಪ್ರಯೋಗಗಳು ಈಗಲೂ ಸಾಕಷ್ಟು ನಡೆಯುತ್ತಿದೆ ನಿಜ, ಆದರೆ ನಾನೇ ಭಾಗಿಯಾಗಬೇಕಾದ ಕವಿಗೋಷ್ಠಿಗೆ ಹೋಗಲು ಕೂಡ ಮೈಯನ್ನು ಆಲಸ್ಯ ಆವರಿಸುವಷ್ಟು ಟ್ರಾಫಿಕ್ ಚುಚ್ಚುತ್ತದೆ. ಕವಿ ನಿಸಾರ್ ಅಹಮದ್ ಅವರು ಹೇಳುವಂತೆ `ರಸ್ತೆ ಹಿರಿದಾಗಿ ಫುಟ್ಪಾತು ಕಿರಿದಾಗಿ, ಲೋಕ ಕಂಪ್ಯೂಟರಿನ ಸ್ವಿಚ್ಚು ತಂತಿಗಳಂತೆ ಸಂದಿಗ್ಧವಾಗಿ’ ಪ್ರತಿಕ್ಷಣವೂ ಹಿರಿಕಿರಿಯರೆನ್ನದೆ ಎಲ್ಲರಿಗೂ ಸವಾಲನ್ನು ಎಸೆಯುತ್ತಿದೆ. ಇಲ್ಲಿಯ ಟ್ರಾಫಿಕ್ ನೆನೆದೇ ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ಯುವಕ ಯುವತಿಯರು ಹಿಂದಿರುಗಲು ಅಂಜುತ್ತಾರೆ. ಈ ಟ್ರಾಫಿಕ್ ಕಿರಿಕಿರಿಯಲ್ಲಿ ಹೊಡೆದಾಟ, ಜಗಳಗಳಂತೂ ತೀರಾ ಸಾಮಾನ್ಯ. ಕೆಲವೊಮ್ಮೆ ಅದು ಕೊಲೆಯ ಹಂತಕ್ಕೂ ಹೋಗಿದೆ.

ಆಗೆಲ್ಲ ಫೋನುಗಳು ಬೆರಳೆಣಿಕೆಯಷ್ಟಿದ್ದರಿಂದ ಗೆಳೆಯರನ್ನು, ಸಂಬಂಧಿಗಳನ್ನು ಭೇಟಿಯಾಗಬೇಕೆಂದರೆ ಖುದ್ದಾಗಿಯೇ ಹೋಗಬೇಕಿತ್ತು. ಆ ಸುಖ ಬೇರೆಯಾಗಿತ್ತು. ಆದರೀಗ ಹೋಗುವುದೇ ಅಸುಖವೆನಿಸುತ್ತಿದೆ. ಈ ಊರಿನೊಂದಿಗೆ ಜನ, ಮನ ಎಲ್ಲವೂ ಬದಲಾಗಿದೆ. ಎಲ್ಲೋ ಕನಸುಗಳನ್ನು ಕಳೆದುಕೊಂಡು, ಪಾದವೂರಿ ಹುಡುಕಲು ತಾವಿಲ್ಲದಿರುವ ಜನಜಂಗುಳಿಯ ನಡುವೆ ಹಳವಂಡಗಳನ್ನು ಹುಡುಕುತ್ತಿದ್ದೇವೆ ಎಂದು ಎಷ್ಟೋ ಸಲ ಅನಿಸುತ್ತದೆ. ಎದುರಿಗೆ ಬಂದಾಗ ಕೃತಕತೆ, ಏನೋ ಅವಸರ, ಧಾವಂತ, ಮನೆಗಳಿಗೆ ಹೋದರೆ ಬಂದವರ ಮುಖಗಳಿಗಿಂತ ಮೊಬೈಲ್, ಟಿವಿ ಪರದೆಗಳ ಮೇಲೆಯೇ ನೆಟ್ಟ ಕಣ್ಣುಗಳು. `ಬರುತ್ತೇವೆ’ ಎಂದಾಗ ತಿರುಗಿ ಕೂಡ ನೋಡದೆ `ಬೈ’ ಹೇಳುವುದನ್ನೆಲ್ಲ ಕಲಿಸಿರುವುದು ಬೆಂಗಳೂರೇ! ಕಣ್ಣಿಗೆ ಕಾಣುವ ಎಲ್ಲವೂ ಕೈಗೆಟುಕಿ ಮನೆಯ ಮೊಗಸಾಲೆಯಲ್ಲಿರಬೇಕು ಎನ್ನುವ ಸ್ವಾರ್ಥವನ್ನು ತುಂಬಿ, ಕೊಳ್ಳುಬಾಕರನ್ನಾಗಿ ಮಾಡಿರುವುದು ಈ ಬೆಂಗಳೂರೇ. ಕಾರು, ಡಿಶ್ ವಾಷರ್, ವಾಷಿಂಗ್ ಮಷೀನ್ ಇತ್ಯಾದಿಗಳಿಲ್ಲದ ಚಿಕ್ಕ ಊರುಗಳಲ್ಲಿ ಜೀವನ ಇಲ್ಲಿನದಕ್ಕಿಂತ ಸುಂದರವೂ, ನೆಮ್ಮದಿಯಿಂದ ಕೂಡಿರುತ್ತದೆ ಎಂದು ಯೋಚಿಸಲು ಈ ಮಾಯಾನಗರಿ ಬೆಂಗಳೂರು ಬಿಡುವುದಿಲ್ಲ. ಇದರ ಆಕರ್ಷಣೆಯೇ ಅಂಥದ್ದು. ಇಲ್ಲಿ ಬರಬಹುದಷ್ಟೆ, ಇಲ್ಲಿಂದ ಕಾಲು ಕೀಳುವುದು ಸುಲಭವಲ್ಲ.

ಈ ಬೆಂಗಳೂರಿಗೆ ಯಾರೂ ಅಸ್ಪೃಶ್ಯರಲ್ಲ. ಸಮಾನತೆ, ಸೋದರ ಭಾವವನ್ನು ಕಟ್ಟಿಕೊಂಡೇ ಹುಟ್ಟಿರುವ ಊರಿದು. ಬಂದವರನ್ನೆಲ್ಲ ಅಪ್ಪಿಕೊಂಡು ಸ್ವಾಗತಿಸುವುದರಿಂದಲೋ ಏನೋ ವಲಸಿಗರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಹಾಗೆ ನೋಡಿದರೆ ಇದೊಂದು ಅವಕಾಶಗಳ ಅಮರಾವತಿ. ಹಸಿದು ಬಂದವರಿಗೆ ಯಾವುದೋ ಉದ್ಯೋಗವನ್ನು ಕೊಟ್ಟು ಎರಡು ಹೊತ್ತಿನ ಊಟ ದೊರಕಿಸಿ ಕೊಡುವ ಬೆಂಗಳೂರು ಬಡವರ ಪಾಲಿಗೆ `ಅನ್ನಪೂರ್ಣೆ’ ಎಂದರೂ ತಪ್ಪಿಲ್ಲ. ಆದರೆ ಉತ್ತರ ಭಾರತದಿಂದ ದಿನವೂ ರೈಲಿನಲ್ಲಿ ಬಂದಿಳಿಯುವವರನ್ನು ನೋಡುತ್ತಿದ್ದರೆ ಮಾತ್ರ ಕೊಂಚ ಆತಂಕವಾಗುತ್ತದೆ. ಬಂದವರು ಇಲ್ಲಿಯ ನೆಲ, ಜಲ, ಭಾಷೆಗೆ ಗೌರವವನ್ನು ಕೊಡುವುದರಲ್ಲಿ ಎಡವುತ್ತಿದ್ದಾರೆ. ಆಕ್ರಮಣಕಾರಿ ನಡವಳಿಕೆಗಳಿಂದ ಬೆಂಗಳೂರನ್ನು ಬೆಚ್ಚಿ ಬೀಳಿಸಿದ್ದಾರೆ. ಅಪರಾಧಗಳು ಹೆಚ್ಚಿವೆ. ಅತ್ಯಾಚಾರಗಳ ಸುದ್ದಿಯಂತೂ ಸಾಮಾನ್ಯವಾಗಿಬಿಟ್ಟಿದೆ. ಕನ್ನಡ ನೆಲದಲ್ಲಿಯೇ ಕನ್ನಡದ ಉಳಿವಿಗೆ ಹೋರಾಟ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಒಂದು ಕಡೆ ನಗರ ತನ್ನ ಮಿತಿಯನ್ನು ಮೀರಿ ಬೆಳೆಯುತ್ತಿದೆ. ಅದಕ್ಕೆ ತಕ್ಕ ಹಾಗೆ ಯೋಜನೆಗಳನ್ನು ರೂಪಿಸುವುದಕ್ಕೆ ಸಾಧ್ಯವಾಗಿಲ್ಲ. `ಮೆಟ್ರೋ’ ನಿರ್ಮಾಣವಂತೂ ಎಂಟು, ಹತ್ತು ವರ್ಷಗಳಾದರೂ ಮುಗಿಯದೆ ರಸ್ತೆಗಳೆಲ್ಲ ಹಾಳಾಗಿ ಹೋಗಿವೆ. ಗುಂಡಿ ಗೊಟರುಗಳಲ್ಲಿ ವಾಹನವನ್ನು ನಡೆಸುವುದೇ ಸವಾಲು. ಈ ರಸ್ತೆಗಳು ಮಳೆಗಾಲದಲ್ಲಿ ಅನೇಕರ ಜೀವವನ್ನು ತೆಗೆದಿವೆ. ಕೆರೆಕಟ್ಟೆಗಳನ್ನೆಲ್ಲ ಮುಚ್ಚಿಹಾಕಿ ನಿರ್ಮಿಸಿರುವ ಹೊಸ ಬಡಾವಣೆಗಳು ಒಂದು ಮಳೆಗೆ ತತ್ತರಿಸಿಬಿಡುತ್ತವೆ. ಬದುಕುಗಳು ಕೊಚ್ಚಿ ಹೋಗುತ್ತವೆ. ಅವಘಡಗಳು ನಡೆಯುತ್ತವೆ.

ಇನ್ನೂ ಅಪಾಯವೆಂದರೆ ಒಂದೆಡೆ ಬೆಂಗಳೂರಿನ ಸಂಸ್ಕೃತಿಯನ್ನು ಗಾಳಿಗೆ ತೂರಬಲ್ಲ ಕುಸಂಸ್ಕೃತಿ ಪ್ರಭಾವ ಬೀರುತ್ತಿದೆ. ಯುವ ಜನಾಂಗ ಸಂಬಂಧಗಳಿಗಿಂತ ಮುಖ್ಯವಾಗಿ ಝಣ ಝಣ ಹಣದ ಹಿಂದೆ ಬಿದ್ದಿದ್ದಾರೆ. ಅದನ್ನು ಕಂಡು ಆನಂದ ತುಂದಿಲರಾಗುವ ಪೋಷಕರಿದ್ದಾರೆ. ಹಣವನ್ನು ಯಾವ ಮಾರ್ಗದಲ್ಲಿ ದುಡಿದು ಸಂಪಾದಿಸಬೇಕು ಎಂಬ ಮೌಲ್ಯವೀಗ ಮುಖ್ಯವಾಗಿಯೇ ಇಲ್ಲ. ಇನ್ನು ಮೂವತ್ತು ಕೂಡ ದಾಟದವರನ್ನು ಆಂಟಿ-ಅಂಕಲ್‌ಗಳೆಂದು ಏಕಪ್ರಕಾರವಾಗಿ ಕರೆದು ಸಂಬಂಧಗಳ ಅರ್ಥಗಳನ್ನೇ ಕಳೆಯುತ್ತಿದ್ದಾರೆ. ಯುವಜನಾಂಗದ ಕಿವಿ ಹಿಂಡಿ, ಚಿಕ್ಕಮ್ಮ, ದೊಡ್ಡಪ್ಪ, ಅಣ್ಣ, ಅತ್ತೆ ಇತ್ಯಾದಿಗಳನ್ನು ಕಲಿಸಬೇಕಾಗಿರುವ ಅಮ್ಮಂದಿರು ಕೂಡ ತಮ್ಮ ಸಮವಯಸ್ಕರನ್ನು ‘ಊಟ ಆಯಿತಾ ಆಂಟಿ’ ಎಂದು ಕೇಳುವಷ್ಟರ ಮಟ್ಟಿಗೆ ತಮ್ಮತನ ಕಳೆದುಕೊಂಡಿದ್ದಾರೆ!

ಒಂದಕ್ಕೊಂದು ಸಂಬಂಧವಿಲ್ಲದಂತೆ ಬದುಕುತ್ತಿರುವ ಯುವ ಜನಾಂಗ ಅಚ್ಚರಿ ಹುಟ್ಟಿಸುತ್ತಿದ್ದಾರೆ. ಆಧುನಿಕತೆಯನ್ನು ಬಾಚುತ್ತಿರುವವರು ಹೊಸ ಕಾರು ಕೊಂಡರೆ ಸರ್ಕಲ್ ಮಾರಮ್ಮನ ದೇವಸ್ಥಾನದಲ್ಲಿ ಪೂಜೆ ಮಾಡಿಸುತ್ತಾರೆ. ಹೊಸ ಹೊಸ ಬಗೆಯ ಉಡುಪುಗಳನ್ನು ತೊಟ್ಟು ಓಡಾಡುವ ವಿದ್ಯಾರ್ಥಿನಿಯರು ವ್ರತ ಕತೆಗಳಲ್ಲಿ ಮುಳುಗಿ. ಕಾಲೇಜಿನಲ್ಲಿ ಪ್ರಸಾದ ಹಂಚುತ್ತಾರೆ. ಕಂಡು ಕೇಳಿಲ್ಲದ ಹೊಸ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಈ ಹಬ್ಬಗಳಿಗೆ ಪೈಪೋಟಿಯಲ್ಲಿ ಖರ್ಚು ಮಾಡುತ್ತಾ ಸಾಲಗಾರರಾಗಿರುವುದೂ ಉಂಟು. ಮಾರುಕಟ್ಟೆ ಸೃಷ್ಟಿಸಿರುವ `ಸಮೂಹ ಸನ್ನಿ’ಗೆ ಒಳಗಾಗಿ ಬೇಕಿಲ್ಲದ್ದನ್ನು ಮನೆ, ಮನಗಳಿಗೆ ತುಂಬಿಕೊಳ್ಳುತ್ತಿದ್ದಾರೆ. ಏನಾದರೂ ಸರಿ, ಬೆಂಗಳೂರಿನಲ್ಲಿ ಸಣ್ಣದಾದರೂ ಒಂದು ಮನೆ ಕಟ್ಟಿ ಬದುಕಬೇಕು ಎನ್ನುವ ಜನರ ಕನಸು `ರಿಯಲ್ ಎಸ್ಟೇಟ್’ ದಂಧೆ ಹೆಚ್ಚುವಂತೆ ಮಾಡಿದೆ. ಇದೇನು? ಬರಿಯ ನಕಾರಾತ್ಮಕ ವಿಷಯಗಳನ್ನು ಹೇಳುತ್ತಿದ್ದೇನೆ ಎಂದುಕೊಂಡಿರ? ಇಲ್ಲ, ಇದು ಸದ್ಯದ ಬೆಂಗಳೂರು.

`ಲಂಗು ಲಗಾಮು ಏನೊಂದು ಇರದೆ ಬೆಳೆಯುತ್ತಿರುವ ಬೆಂಗಳೂರೇ, ನಿನ್ನಲ್ಲಿ ಎಲ್ಲವು ಇದೆ, ಮನುಷ್ಯರ ಬೆಲೆಯ ಹೊರತಾಗಿ’ ಎಂದು ಉನ್ಮತ್ತ ಕುದುರೆಯಂತೆ ಕೆನೆಯುತ್ತಿರುವ ಬೆಂಗಳೂರನ್ನು ನೋಡಿ ನಿಟ್ಟುಸಿರುಬಿಡುತ್ತೇನೆ. ಈ ನಿಟ್ಟುಸಿರು ಫಲಿಸಲು ದೀರ್ಘ ಕಾಲಾವಕಾಶ ಬೇಕು ಎಂಬ ಕವಿನುಡಿ ನೆನಪಾಗಿ ಮನಸ್ಸು ಮತ್ತಷ್ಟು ಮುದುರುತ್ತದೆ. ಜಾಗತೀಕರಣದ ಸಕಾರಾತ್ಮಕತೆಯನ್ನು ಒಪ್ಪಿಕೊಂಡಂತೆ ನಕಾರಾತ್ಮಕತೆಯನ್ನು ಅನಿವಾರ್ಯವಾಗಿ ಸ್ವೀಕರಿಸಬೇಕಿದೆ.

ಆದರೆ ನಾನು ಆಶಾವಾದಿ. `ಏರಿದ್ದು ಕೆಳಗಿಳಿಯಲೇಬೇಕು, ಎಲ್ಲವೂ ಮೊದಲಿನ ಸ್ಥಿತಿಗೆ ಹಿಂದಿರುಗಬೇಕು’ ಎಂದು ನಂಬಿರುವವಳು. ಈ ಊರಿಗಿರುವ ಶಕ್ತಿ ಏನೆಂದು ಯೋಚಿಸಿದರೆ ಎಂಥವರಿಗೂ ಅದು ನೀಡುವ ಎರಡು ತುತ್ತಿನ ಬದುಕು ಎಂಬ ಉತ್ತರ ದೊರಕಿದಾಗ ಮನಸ್ಸಿಗೇನೋ ದೊಡ್ಡ ಸಮಾಧಾನವಾಗುತ್ತದೆ. ಇಷ್ಟೆಲ್ಲ ಇದ್ದರೂ ನನ್ನ ಭಾವಕೋಶದಲ್ಲಿ ಸೇರಿ ಹೋಗಿರುವ ಬೆಂಗಳೂರನ್ನು ಬಿಟ್ಟು ಬದುಕುವ ಕಲ್ಪನೆ ನನಗೆ ಅಸಾಧ್ಯ. ಎಷ್ಟೋ ಕಾರಣಗಳಿಗೆ ನಾನದಕ್ಕೆ ಋಣಿಯಾಗಿದ್ದೇನೆ. ಅದು ನನ್ನ ಬದುಕನ್ನು ವಿಸ್ತರಿಸಿದೆ, ನೋಡುವ ಕ್ರಮವನ್ನು ಬದಲಿಸಿದೆ, ಸಂಕಷ್ಟಗಳಿಗೆ ಮಿಡಿಯುವುದನ್ನು ಕಲಿಸಿದೆ. ನನ್ನ ಟೀಕೆ ಟಿಪ್ಪಣಿಗಳು ಬೆಂಗಳೂರಿನ ಬಗ್ಗೆ ಹಲವಾರು ವಿಷಯಗಳಲ್ಲಿ ಇದ್ದರೂ, ಹೊರಗಿನ ಜನ ಬೆಂಗಳೂರಿನ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿದರೆ ಸಿಟ್ಟಿಗೇಳುತ್ತೇನೆ. ನಮ್ಮ ಮಕ್ಕಳ ವಿಷಯದಲ್ಲಿ ಕೂಡ ನಾವು ಹೀಗೆ ವರ್ತಿಸುವುದಿಲ್ಲವೇ?

‍ಲೇಖಕರು Admin

22 October, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading