ಬೆಂಗಳೂರು ಎನ್ನುವ ಮಾಯಾವಿ – ದಿವ್ಯ ಬರೀತಾರೆ

ಮನ ಸೆಳೆದ ಬೆಂದಕಾಳೂರು

ದಿವ್ಯ ಎಂ ಆರ್

ಪಡ್ಡೆ ಹೈಕಳ ಜೊತೆ ಆಡಿಕೊಂಡಿದ್ದ ನಾನು 2004ರಲ್ಲಿ ನಮ್ಮ ಊರಿನ ಸಾಬರ ಎಸ್.ಟಿ.ಡಿ.ಯತ್ತ ನನ್ನ ಚಿಕ್ಕಪ್ಪನಿಗೆ ಕರೆ ಮಾಡಲು ಹೋಗಿದ್ದೆ. ನನ್ನನ್ನು ಚಿಕ್ಕ ವಯಸ್ಸಿನಿಂದ ನೋಡುತ್ತಿದ್ದ ಸಾಬರು ನಿನ್ನದು ಎಸ್.ಎಸ್.ಎಲ್.ಸಿ. ಮುಗಿದಿದೆ ಅಲ್ವ ಎಂದರು. ನಾನು ಫೇಲ್ ಆಗಿದ್ದನ್ನು ಮುಚ್ಚಿಟ್ಟು ಹೌದು ಎಂದೆ. ಆಗ ಅವರು ಇವತ್ತಿನ ಪೇಪರ್ನಲ್ಲಿ ಎಸ್.ಎಸ್.ಎಲ್.ಸಿ ಆದವರಿಗೆ ಬೆಂಗಳೂರಿನಲ್ಲಿ ಬಾಲ ಸೇವಿಕಾ ತರಬೇತಿ ನೀಡುತ್ತಿದ್ದಾರಂತೆ. ನೀನೂ ಹೋಗು ಎಂದರು. ನನ್ನ ಊರಿನ ಪಕ್ಕದಲ್ಲಿರುವ ಸಿಟಿಯನ್ನೇ ನೋಡದಿರುವ ನಾನು ಬೆಂಗಳೂರಿಗೆ ಹೋಗೋದ! ಅಂತ, ನೀವು ತಮಾಶೆ ಮಾಡಬೇಡಿ ಎಂದು ಮನೆ ಕಡೆ ಹೋದೆ.
ಅವರು ಹೇಳಿದ್ದು ನಿಜವಾಗಿದ್ದರಿಂದ ಒಮ್ಮೆ ಕುಳಿತು ಯೋಚಿಸಿ ಅಪ್ಪನೊಂದಿಗೆ ತಿಳಿಸಿದೆ. ಮನೆಯಲ್ಲಿ ಎಲ್ಲರೂ ಬೈದರು. ನನ್ನ ತಾಯಿ ನನ್ನನ್ನು ಬಿಟ್ಟು ಹೇಗೆ ಹೋಗ್ತೀಯ ಎಂದು ಅಳಲು ಶುರು ಇಟ್ಟುಕೊಂಡರು. ಹಾಗೂ ಹೀಗೂ ಎಲ್ಲರನ್ನೂ ಒಪ್ಪಿಸಿ ಹೊರಡಲು ಅನುವಾದೆ. ಆದರೆ ಬಹಳಷ್ಟು ಜನರು ಬೆಂಗಳೂರು ಒಂದು ದೊಡ್ಡ ನಗರ, ನೀನು ಹೇಗೆ ಇರುತ್ತೀಯೋ ಎನೋ? ಅಲ್ಲಿ ಒಂದು ವಾರ ಕೂಡ ಇರಲು ನಿನಗೆ ಸಾಧ್ಯವಿಲ್ಲ. ನಿಮ್ಮಪ್ಪನ ಹಣ ಸುಮ್ಮನೆ ಪೋಲು ಮಾಡುತ್ತೀಯ ಎಂಬ ಬುದ್ಧಿ ಮಾತಿಗೇನೂ ಬರವಿರಲಿಲ್ಲ. ನಮ್ಮ ದೂರದ ಸಂಬಂಧಿಯೊಬ್ಬರು ಬೆಂಗಳೂರಿನಲ್ಲಿ ಇದ್ದರು. ದೂರವಾಣಿ ಮೂಲಕ ಅವರಿಗೆ ನಾನು ಬರುವ ವಿಷಯವನ್ನು ತಿಳಿಸಿದೆವು. ನನ್ನ ಜೊತೆ ನನ್ನ ತಂದೆ ಮತ್ತು ಚಿಕ್ಕಪ್ಪ, ಅವರ ಮಗಳು ಸೇರಿ ನಾಲ್ಕು ಜನ ಸೇರಿ ಬೆಂಗಳೂರಿನ ಬಸ್ಸು ಹತ್ತಿ ಸವಾರಿ ಹೊರಟೆವು. ಆದರೆ 20 ಕಿ.ಮಿ. ಪ್ರಯಾಣ ಕೂಡ ಮಾಡದ ನಾನು ಬೆಂಗಳೂರಿಗೆ ಬರುವುದೆಂದರೆ ಸುಮ್ಮನೆ ನಾ? 350 ಕಿ.ಮಿ. ಕ್ರಮಿಸಬೇಕು. ದೂರದ ಪರಿವೆಯೇ ಇಲ್ಲದ ನಾನು ತಮಾಶೆ ಮಾಡಿಕೊಂಡು ಬಹಳ ಸಂತೋಷದಿಂದ ಕೆಂಪೆಗೌಡ ಬಸ್ಟಾಂಡಿಗೆ ಬಂದಿಳಿದಾಗ ಮಧ್ಯಾಹ್ನ 2 ಗಂಟೆಯಾಗಿತ್ತು.
ಬಸ್ ಇಳಿದ ತಕ್ಷಣ ನಮ್ಮನ್ನು ಕಾಡಿದ್ದು ಬೆಂಗಳೂರಿನ ಬಿಸಿಲು. ನಂತರ ಮೇಕ್ರಿ ಸರ್ಕಲ್ಗೆ ಹೋಗಲು ಎಲ್ಲಿ ಬಸ್ ಹತ್ತಬೇಕು ಎಂದು ಗಾಬರಿಯಿಂದ ಎತ್ತ ನೋಡಿದರೂ ಎತ್ತರದ ಬಿಲ್ಡಿಂಗ್ಗಳು, ಥರ ಥರದ ಅಂಗಡಿಗಳು, ಜನರ ಓಡಾಟ ಮತ್ತು ಸಿಕ್ಕಾಪಟ್ಟೆ ಧೂಳು. ಇವೆಲ್ಲಾ ನಮಗೆ ಹೊಸದಾಗಿತ್ತು. ನನ್ನ ಮನಸ್ಸಿನಲ್ಲಿ ನಮ್ಮ ಊರಿನಂತೆಯೇ ಈ ಊರೂ ಇರುತ್ತದೇನೋ? ಎಂದುಕೊಂಡಿದ್ದೆ. ಆದರೆ ಈ ಜನಗಳ ಜಂಗುಳಿ ನೋಡಿದರೆ ಈ ಬೆಂಗಳೂರು ಬೇಡಪ್ಪ. ಮತ್ತೆ ನನ್ನ ಅಪ್ಪನ ಜೊತೆ ಹೋಗಿಬಿಡೋಣ ಅನಿಸತೊಡಗಿತ್ತು. ಅಷ್ಟರಲ್ಲಿ ನನ್ನ ತಂದೆ ತರಬೇತಿಯ ಮೇಡಂನವರಿಗೆ ಒಂದು ಕರೆ ಮಾಡಿ ನಾವು ಯಾವ ಊರಿನ ಕಡೆ ಬಸ್ ಹತ್ತಬೇಕು ಎಂದು ಖಾತರಿ ಮಾಡಿಕೊಂಡರು.
23ನೇ ಫ್ಲಾಟ್ ಫಾರ್ಮ್ ನಲ್ಲಿ ನಿಂತು ಸಿಟಿ ಬಸ್ಗಾಗಿ ಕಾದರೆ, ಸಿಟಿ ಬಸ್ ಎಲ್ಲಿ ಬರುತ್ತೆ ಹೇಳಿ ಅದರ ಪರಿವೂ ಕೂಡ ನಮಗೆ ಇರಲಿಲ್ಲ. ಸುಮಾರು 2 ಗಂಟೆಗಳ ಕಾಲ ಕಾದೆವು. ಅಷ್ಟರಲ್ಲಿ ನನ್ನ ಪಕ್ಕದಲ್ಲಿ ಒಬ್ಬ ವ್ಯಕ್ತಿ ಬಂದು ಕುಳಿತ, ಅವನು ಹೇಗೇಗೋ ಆಡುತ್ತಿದ್ದ. ಅವನಿಗೆ ಏನು ಅನಿಸ್ತಿತ್ತೋ ನನಗೆ ತಿಳಿಲಿಲ್ಲ. ಕೊನೆಗೆ ಅವನೇ ನಮ್ಮನ್ನು ಮಾತನಾಡಿಸಿಯೇ ಬಿಟ್ಟ. ಮೊದಲೇ ಊರಿನಲ್ಲಿ ಹೇಳಿದ್ರಲ್ಲಾ ಬೆಂಗಳೂರಿನಲ್ಲಿ ಯಾರನ್ನೂ ಮಾತನಾಡಿಸಬಾರದು ಅಂತಾ.. ಅವರು ಏನೇನೋ ಹೇಳಿ ನಮ್ಮನ್ನು ಬೇರೆ ಕಡೆ ಕರ್ಕೊಂಡು ಹೋಗಿಬಿಡ್ತಾರೆ ಎಂದು ಬಹಳ ಗಾಬರಿಯಿಂದ ನನ್ನ ಅಪ್ಪನನ್ನು ನೋಡಿದೆ. ಏನು ಅಂತ ತಿರುಗಿ ನನ್ನ ತಂದೆ ಕೇಳಿದ್ರು. ಆ ವ್ಯಕ್ತಿ ನೀವು ಎಲ್ಲಿಗೆ ಹೋಗ್ಬೇಕು. ಇಲ್ಲಿ ಯಾಕೆ ಅಷ್ಟು ಹೊತ್ತಿನಿಂದ ಕುಳಿತಿದ್ದೀರಿ ಅಂದ. ನಮ್ಮಪ್ಪ ಏನೂ ಉತ್ತರಿಸಿದೇ ನಿಮಗ್ಯಾಕೆ ನಿಮ್ಮ ಕೆಲಸ ನೀವು ನೋಡ್ಕೋಳಿ ಅಂತ ಗದ್ರಿಸಿದ್ರು.
ನಂತರ ನಮ್ಮ ಸಂಬಂಧಿಕರಿಗೆ ಕರೆ ಮಾಡಿದ್ರು. ಆಗ ಒಂದು ಕರೆಗೆ 2 ರೂ.ಗಳು ಆದರೆ ಆ ಅಂಗಡಿಯ ಯುವಕ ಒಂದು ಕರೆಗೆ 4 ರೂ.ಗಳನ್ನು ಪಡೆಯುತ್ತಿದ್ದ. ಕೊನೆಗೆ ಮೂರು ಕರೆಗಳಿಗೆ 6 ರೂ. ತೆಗೆದುಕೊಳ್ಳದೇ 12 ರೂ. ತಗೆದುಕೊಂಡ ಆಗ ನಮ್ಮ ಅಪ್ಪ ಮುಗುಳು ನಗೆಯಿಂದ ನನ್ನನ್ನು, ನೋಡಮ್ಮ ಇದೇ ಬೆಂಗಳೂರಿನ ವಿಶೇಷ ಅಂತ ಹೇಳಿದ್ರು. ನಂತ್ರ ಊಟಕ್ಕೆ ಅಂತ ಹೊಟೇಲ್ಗೆ ಹೋದೆವು. ಅಲ್ಲಿ ಎಲ್ಲರೂ ನಿಂತುಕೊಂಡೇ ಊಟ ಮಾಡ್ತಿದ್ರು. ಅದನ್ನು ನೋಡಿ ಒಂದು ಕ್ಷಣ ಏನಪ್ಪ ಜನ ನಿಂತು ಊಟ ಮಾಡುತ್ತಿದ್ದಾರಲ್ಲ. ಕುಳಿತುಕೊಳ್ಳೋಕೆ ಹೋಟೆಲ್ನಲ್ಲಿ ಜಾಗ ಇಲ್ವ ಎಂದು ಒಳಗೆ ಹೋಗಿ ನೋಡಿದೆವು. ಆದರೆ ಎಲ್ಲರೂ ಕೂಡ ನಿಂತ್ಕೊಂಡೆ ಊಟ ಮಾಡ್ತಿದ್ರು. ಯಾಕಂದ್ರೆ ಆ ಹೋಟಲ್ನಲ್ಲಿ ಕೂತ್ಕೊಳೋಕೆ ಕುರ್ಚಿಗಳೇ ಇರಲಿಲ್ಲ. ಇದು ಒಂದು ರೀತಿಯ ಸಂಸ್ಕೃತಿ ಇರಬಹುದೇನೋ ಅಂತ ಅನಿಸೋಕೆ ಶುರುವಾಯ್ತು.
ಅಷ್ಟರಲ್ಲಿ ನನ್ನ ದೂರದ ಸಂಬಂಧಿ ರಾಜಣ್ಣ ಬಂದ್ರು. ಅವರ ಮನೆಗೆ ಕರೆದುಕೊಂಡು ಹೋಗಲು ಬಿ.ಎಂ.ಟಿ.ಸಿ ಬಸ್ಟಾಂಡ್ಗೆ ಕರ್ಕಂಬಂದ್ರು. ಇದೇನಪ್ಪ ಎರಡೆರಡು ಬಸ್ಟಂಡ್ ಇದಾವಲ್ಲ ಬೆಂಗಳೂರಲ್ಲಿ ಅಂತ ಆಶ್ಚರ್ಯದಿಂದ ಕೇಳಿದೆ. ಆಗ ನನ್ನ ಸಂಬಂಧಿ ಬೆಂಗಳೂರಿನ ಬಗ್ಗೆ ಸ್ವಲ್ಪ ಮಾಹಿತಿ ನೀಡಿದರು. ನಂತರ ಅವರ ಮನೆಗೆ ಹೋದೆವು. ಯಥಾ ಪ್ರಕಾರ ನಮ್ಮ ಮನೆಗಳಂತೆ ಚಪ್ಪಲಿಗಳನ್ನು ಹೊರಗೆ ಬಿಡುತ್ತಿದ್ದೆವು, ಅದರಂತೆಯೇ ಚಪ್ಪಲಿ ಹೊರಗೆ ಬಿಟ್ಟಾಗ, ರಾಜಣ್ಣ ಚಪ್ಪಲಿಗಳನ್ನು ಒಳಗೆ ಬಿಡಿ ಅಂತ ಹೇಳಿದರು. ಆಗ ನನ್ನ ಚಿಕ್ಕಪ್ಪನ ಮಗಳು ನಗುತ್ತಾ ಅಯ್ಯೋ ರಾಜಣ್ಣ ಚಪ್ಪಲಿಗಳು ಹೊರಗೇ ಇರಬೇಕು ಅಂತ ಹೇಳಿದಳು. ಅವರು ಹೊರಗೆ ಬಂದು ನೋಡಮ್ಮ ರಾಜಣ್ಣ ಅಂತ ಕರೀಬೇಡ, ಅಂಕಲ್ ಅಂತ ಕರಿ ಅಂದ್ರು. ಅಂಕಲ್ ಅಂದ್ರೆ ಏನು ಅಂತ ನನಗೆ ಗೊತ್ತೇ ಇರಲಿಲ್ಲ. ಅವ್ರು ತಿಳಿಸಿದಾಗಲೇ ನನಗೆ ಗೊತ್ತಾದದ್ದು. ಯಾಕಂದ್ರೆ ನಮ್ಮ ಮನೆಯ ಓನ್ರು ಮತ್ತು ಅಕ್ಕ ಪಕ್ಕದಲ್ಲಿರುವವ್ರು, ನೀವು ಹೀಗೆಲ್ಲಾ ಕರೆದ್ರೆ ನೀವೆಲ್ಲಾ ಹಳ್ಳಿ ಗುಗ್ಗುಗಳು ಅಂದ್ಕೊತಾರೆ, ಅದ್ಕೆ ನೀವು ಅಂಕಲ್ ಅಂತ್ಲೇ ಕರೀಬೇಕು ಅಂದ್ರು.
ಅವರ ಮನೆಯೆಲ್ಲಾ ವಿಚಿತ್ರ ಅನಿಸೋಕೆ ಶುರು ಆಯ್ತು. ಮನೆ ಒಳಗಡೆನೇ ಶೌಚಾಲಯ, ಸ್ನಾನ ಗೃಹ, ಅದರ ಪಕ್ಕದಲ್ಲೇ ಅಡುಗೆ ಮನೆ, ಅದರ ಮುಂದೆ ದೇವರ ಮನೆ ಎಲ್ಲವೂ ಬಹಳ ವಿಚಿತ್ರ ಅನಿಸ್ತಿತ್ತು. ಆವ್ರ ಮನೆ ಬೇರೆ ಬಹಳ ಚಿಕ್ಕದಾಗಿತ್ತು. ನಂತ್ರ ಹಾಗೆ ಸುತ್ತಾಡಿ ಬರುವ ಅಂತ ಹೊರಗೆ ಬಂದೆವು. ಅಲ್ಲಿ ಒಂದು ಚಿಕ್ಕದಾದ ಹೂದೋಟ ಇತ್ತು. ಅದನ್ನ ನೋಡಿ ಹೊರ ಬಂದಾಗ ದಾರಿ ತಪ್ಪಿ ಸದಾಶಿವ ನಗರದ ರಸ್ತೆಗೆ ಬಂದೆವು. ಆಗ ಎರಡೂ ಬದಿಯಲ್ಲಿ ಬಸ್ಗಳು ಓಡಾಡುತ್ತಿದ್ದದ್ದನ್ನು ನೋಡಿ, ಮೇಕ್ರಿ ಸರ್ಕಲ್ ಕಡೆಗೆ ಹೋಗುವ ದಾರಿ ಯಾವುದೆಂದು ತಿಳಿಯದೇ, ಮುಂಭಾಗದ ಕಡೆ ಹೋಗುವ ಬಸ್ ಹತ್ತಿದೆವು. ಆ ಬಸ್ಸಿನ ಮೇಲೆ ಮೇಕ್ರಿ ಸರ್ಕಲ್ ಮತ್ತು ವಿಜಯನಗರ ಎಂದು ಬರೆದಿತ್ತು. ಅದಕ್ಕೇ ಹತ್ತಿದ್ದೆವು. ಟಿಕೇಟ್ ಕೇಳಿದ ಕಂಡಕ್ಟರ್ ಎಲ್ಲಿಗೆ ಹೋಗಬೇಕು ಎಂದು ಕೇಳಿದ. ನಾವು ಮೇಕ್ರಿ ಸರ್ಕಲ್ಗೆ ಎಂದಾಗ ಬಹಳ ಕೋಪದಿಂದ ಥೂ.. ನೀವೆಲ್ಲಾ ಯಾಕೆ ಬೆಂಗ್ಳೂರಿಗೆ ಬರ್ತೀರಾ.. ಅಂತ ಹಿಗ್ಗಾ ಮುಗ್ಗಾ ಬೈದ. ನಮ್ಮನ್ನು ಮಧ್ಯದಾರೀಲೇ ಇಳಿಸಿಬಿಟ್ಟ. ಅವನು ಯಾಕೆ ಬೈದ್ದದ್ದು ಎಂಬುದನ್ನು ಹೇಳಲೇ ಇಲ್ಲ. ಅಲ್ಲೇ ನಿಂತಿದ್ದ ಒಬ್ಬ ವ್ಯಕ್ತಿ ನಮ್ಮನ್ನು ನೋಡಿ ಯಾಕೆ ಗಾಬರಿಯಾಗಿದ್ದೀರ? ಅಂತ ಕೇಳಿ, ನಮಗೆ ಮೇಕ್ರಿ ಸರ್ಕಲ್ ಕಡೆಗೆ ಹೋಗುವ ಬಸ್ ತೋರಿಸಿದ. ಆಗಲೇ ನಮಗೆ ಗೊತ್ತಾದ್ದದ್ದು ನಾವು ತಪ್ಪು ಬಸ್ ಏರಿದ್ದರಿಂದ ಆ ಕಂಡಕ್ಟರ್ ನಮಗೆ ಬೈದಾ ಅಂತ. ನಮ್ಮ ಹುಚ್ಚುತನಕ್ಕೆ ನಾವೇ ನಗುತ್ತಾ ಬಸ್ ಏರಿ ಮನೆ ಕಡೆ ಹೊರಟ್ವಿ…
 

‍ಲೇಖಕರು G

November 11, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: