ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಬೀದಿ' ಬಗ್ಗೆ ಒಂದಿಷ್ಟು….

ತಿಪಟೂರು ಸಾಹಿತ್ಯ ಸಮ್ಮೇಳನದ ಅಂಗವಾಗಿ ‘ಬೀದಿ’ ಎನ್ನುವ ಕವನ ಸಂಕಲನವನ್ನು ಕನ್ನಡ ಸಾಹಿತ್ಯ ಪರಿಷತ್ ಪ್ರಕಟಿಸಿದೆ.

ಈ ಸಂಕಲನದ ಸಂಪಾದಕರು ಪತ್ರಕರ್ತ, ಕವಿ ಉಗಮ ಶ್ರೀನಿವಾಸ್.

ಅವರ ಮಾತುಗಳಲ್ಲಿ ‘ಬೀದಿ ‘ಹೀಗಿದೆ-

ಉಗಮ ಶ್ರೀನಿವಾಸ್

ತಿಪಟೂರು ಸಾಹಿತ್ಯ ಸಮ್ಮೇಳನದ ನೆಪದಲ್ಲಿ ತಿಪಟೂರಿನ ಕವಿಗಳ ಆಯ್ದ ಕವಿತೆಗಳನ್ನು ಸಾಹಿತ್ಯ ಪರಿಷತ್ ವತಿಯಿಂದ ತರುತ್ತಿದ್ದು ಅದನ್ನು ನೀವೇ ಸಂಪಾದಿಸಿಕೊಡಬೇಕೆಂದು ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗು ಗೆಳೆಯ ಉಜ್ಜಜ್ಜಿ ರಾಜಣ್ಣ ಹೇಳಿದ ಕೂಡಲೇ ಒಪ್ಪಿಕೊಂಡೆ. ಅದಕ್ಕೆ ಕಾರಣವೂ ಇತ್ತು. ನಾನು ಸೇರಿದಂತೆ ಈ ಸಂಕಲನದಲ್ಲಿರುವ ಬಹುತೇಕ ಕವಿಗಳು ಸಾಹಿತ್ಯವನ್ನು ಜೀವ ದ್ರವ್ಯವೆಂಬಂತೆ ಭಾವಿಸಿದ್ದೆವು.

ಅದಕ್ಕೆ ಪೂರಕವಾಗಿ ತಿಪಟೂರಿನ ಅಧ್ಯಾಪಕರಾದ ಕೆ.ಆರ್. ಬಸವರಾಜು, ಸಿದ್ಧಗಂಗಯ್ಯ ಹೊಲತಾಳು, ಜಿ.ಎಸ್. ರಮೇಶ್, ಟಿ.ಎಸ್. ನಾಗರಾಜಶೆಟ್ಟಿ, ಕೃಷ್ಣಮೂರ್ತಿ ಬಿಳಿಗೆರೆ, ಎಸ್. ಗಂಗಾಧರಯ್ಯ, ತಮ್ಮಾಜಿರಾವ್ ಮುಂತಾದವರ ಒಡನಾಟ, ನಟರಾಜ್ ಹೊನ್ನವಳ್ಳಿ, ಅಚ್ಯುತಕುಮಾರ, ಧಮೇಂದ್ರ ಅರಸ್ ಅವರು ಹುಟ್ಟು ಹಾಕಿದ್ದ `ಪ್ರೊಧಿಯೂ’ ರಂಗ ತಂಡದ ಮೂಲಕ ಹೊಸ ಅಲೆಯ ನಾಟಕಗಳೆಲ್ಲಾ ತಿಪಟೂರಿನ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ವಾತಾವರಣವನ್ನು ಹೆಚ್ಚಿಸಿತ್ತು.

`ಶಿರಾ’ ಊರಿನವರಾದರೂ ತಿಪಟೂರಲ್ಲೇ ಬಹುಪಾಲು ಸಮಯ ಕಳೆದ ಗೆಳೆಯ ಪಿ. ಮಂಜುನಾಥ್ ನಮ್ಮ ಸಮಕಾಲಿನ ಗೆಳೆಯರಿಗೆಲ್ಲಾ ಸಾಹಿತ್ಯದ ಗುಂಗು ಹತ್ತಿಸಿದವರು.ಪ್ರೊಥಿಯೂ ಮೂಲಕ 15 ಕ್ಕೂ ಹೆಚ್ಚು ಮಂದಿ ರಂಗಕಮರ್ಿಗಳು `ನೀನಾಸಂ’ ಪದವಿ ಪಡೆಯಲು ಸಾಧ್ಯವಾಯಿತು. ದಿನ ನಿತ್ಯದ ಸಾಹಿತ್ಯಿಕ ಚರ್ಚೆಗಳು, ಹಳೆಗನ್ನಡ ನಾಟಕಗಳು, ಪಶ್ಚಿಮದ ನಾಟಕಗಳು, ಸ್ವತಃ ನಾವೇ ನಾಟಕಗಳಲ್ಲಿ ಅಭಿನಯಿಸಿದ್ದು ಕೂಡ ಎಲ್ಲರ ಬೆಳವಣಿಗೆಗೆ ನೆರವಾಯಿತು.

ತಮ್ಮಾಜಿರಾವ್ ನಂಗಲಿ, ಕೃಷ್ಣಮೂರ್ತಿ ಬಿಳಿಗೆರೆಯಂತಹ ಹಿರಿಯರಿಂದ ಹಿಡಿದು ಸ್ಮಿತಾ ಮಾಕಳ್ಳಿ ವರೆಗೆ 17 ಕವಿಗಳ ಕವಿತೆಗಳನ್ನು ಸಂಕಲನದಲ್ಲಿ ಸೇರಿಸಿಕೊಳ್ಳಲಾಗಿದೆ.ಕಾವ್ಯ, ಮಕ್ಕಳ ಕಾವ್ಯ, ನಾಟಕ, ಕೃಷಿ, ಹಾಡು, ಪ್ರಕಾಶನ ಸಂಸ್ಥೆ, ಅಧ್ಯಾಪಕ ವೃತ್ತಿಯಿಂದ ಈಗಾಗಲೇ ಸಾಹಿತ್ಯ ವಲಯದಲ್ಲಿ ಹೆಸರುವಾಸಿಯಾಗಿರುವ ಕೃಷ್ಣಮೂರ್ತಿ ಬಿಳಿಗೆರೆ ಅವರು ವಸ್ತು ವೈಶಿಷ್ಟ್ಯ, ಹೊಸ ತನದ ಕಾವ್ಯದ ಮೂಲಕ ಗುರುತಿಸಿಕೊಂಡಿದ್ದಾರೆ.

ಅದರಲ್ಲೂ ಗ್ರಾಮೀಣ ಭಾಗದಲ್ಲಿ ಕೃಷಿ ಸಂಬಂಧಿ ವಿಚಾರವನ್ನು ತಿಳಿಸಿತ್ತು, ಏಕತಾರಿ ಹಿಡಿದು ಪದ ಹಾಡುತ್ತ ಒಂದರ್ಥದಲ್ಲಿ `ಜನಪದ’ರಾಗಿದ್ದಾರೆ.ಇತಿಹಾಸ ಉಪನ್ಯಾಸಕರಾದರೂ ಸಾಹಿತ್ಯದ ಬಗ್ಗೆ ಅಪಾರವಾದ ಒಲವುಳ್ಳ ತಮ್ಮಾಜಿರಾವ್ ಅವರು ಆಗಾಗ ತಮ್ಮ ಮನೆಗೆ ಕವಿಗಳನ್ನು ಕರೆಸಿಕೊಂಡು ಹಸಿವಿನ ದಿನಗಳಲ್ಲಿ ನಮ್ಮೆಲ್ಲರಿಗೂ ಊಟ ನೀಡಿ ಕವಿತೆ ಓದಿ, ನಾವು ಓದಿದ್ದನ್ನೂ ಕೇಳಿಸಿಕೊಂಡು ಸಾಹಿತ್ಯದ ಕೊಡುಕೊಳ್ಳುವಿಕೆಗೆ ಕಾರಣರಾಗಿದ್ದಾರೆ. ಈಗಾಗಲೇ ಎರಡು ಕವನ ಸಂಕಲನ ಹಾಗೂ ಒಂದು ಕಥಾ ಸಂಕಲನವನ್ನು ಹೊರತಂದಿದ್ದಾರೆ.

ಅನಾರೋಗ್ಯದಿಂದ ಅಕಾಲಿಕವಾಗಿ ಸಾವನ್ನಪ್ಪಿದ ಕವಿ ಟಿ.ಎಂ. ಷಡಕ್ಷರಿ ಅವರು ಕಾವ್ಯದ ಬಲದಿಂದಲೇ 19 ವರ್ಷಗಳ ಸುದೀರ್ಘ ಕಾಲದವರೆಗೆ ಆಸ್ಪತ್ರೆಯ ಏಕತಾನತೆಯಲ್ಲೇ ಬದುಕಿದವರು. ಜಿ.ಎಸ್. ಶಿವರುದ್ರಪ್ಪ ಅವರನ್ನು ತಮ್ಮ ಕಾವ್ಯ ಗುರುವನ್ನಾಗಿ ಸ್ವೀಕರಿಸಿದ್ದ ಷಡಕ್ಷರಿ ಅವರು ಆಸ್ಪತ್ರೆ ಅನುಭವ ಕುರಿತ ಎರಡು ಪುಸ್ತಕಗಳು ಹಾಗು ಎರಡು ಕವನ ಸಂಕಲನ ತಂದಿದ್ದಾರೆ.

`ಹಿಮದ ಹೆಜ್ಜೆ’ ಹಾಗೂ `ಚಿತ್ರದ ಬೆನ್ನು’ ಕವನ ಸಂಕಲನದ ಮೂಲಕ ಹೊಸ ರೀತಿಯ ಕವಿತೆಗಳನ್ನು ಬರೆದು ಅಕಾಲಿಕ ಮರಣಕ್ಕೆ ತುತ್ತಾದ ಎನ್.ಕೆ. ಹನುಮಂತಯ್ಯ ಅವರು ಕಡಿಮೆ ಅವಧಿಯಲ್ಲಿ ಶಕ್ತಿಯುತವಾಗಿ ಬರೆದಿದ್ದಾರೆ. `ಕವಿಬಳಗ’ದ ಮೂಲಕ ತಿಪಟೂರಿನ ಗೆಳೆಯರಿಗೆ ಪರಿಚಯವಾದ ಎನ್.ಕೆ. ಹನುಮಂತಯ್ಯ ಪತ್ರಿಕೆ, ಕವಿತೆ, ನಾಟಕ, ಆತ್ಮಕಥೆ, ಸಿನಿಮಾ ಹಾಡು ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಕ್ರಿಯಾಶೀಲತೆ ಮೆರೆದರು.


ತಿಪಟೂರಿನ ವಿದ್ಯಾನಗರದ ಗುಡಿಸಿಲಿನಂಗಡಿಯಲ್ಲಿ ಕುಳಿತು `ವಚನ’ ಬರೆಯುತ್ತಿದ್ದ ರವಿ ದ್ರಾವಿಡ ಈಗ `ಓಯಸಿಸ್’ ಹಾಗೂ `ಒಂದೆಸಳ ಹುಲ್ಲಿಗೆ’ ಕವನ ಸಂಕಲನ ತರುವ ಮೂಲಕ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ.ಮೂರನೇ ತರಗತಿಯಷ್ಟೆ ಓದಿರುವ ಜೀವನ ನಿರ್ವಹಣೆಗಾಗಿ `ನೇಕಾರ’ ವೃತ್ತಿಯಲ್ಲಿ ತೊಡಗಿಕೊಂಡಿದ್ದ ಆಲೂರು ದೊಡ್ಡನಿಂಗಪ್ಪ ಕಾವ್ಯ ಬಲದಿಂದಲೆ ಮೈಸೂರಿನ `ರಂಗಾಯಣ’ ದಲ್ಲಿ ಉದ್ಯೋಗ ಪಡೆದಿದ್ದಾನೆ. ಈಗಾಗಲೇ `ನೇಕಾರ’ ಮತ್ತು `ಮುಟ್ಟು’ ಎಂಬ ಕವನ ಸಂಕಲನವನ್ನು ಹೊರತಂದಿದ್ದಾನೆ.

ತಿಪಟೂರು ಪಕ್ಕದ ಹಾಲ್ಕುರಿಕೆಯವರಾದ ಶಿವಶಂಕರ ಕೂಡ ಸಾಹಿತ್ಯ ಹಾಗು ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ಕೊಪ್ಪಳದ ಕುಗ್ರಾಮದಲ್ಲಿ ರಂಗ ತಂಡ ಕಟ್ಟಿಕೊಂಡು ರಂಗ ಜಂಗಮರಾಗಿದ್ದಾರೆ. ಕವಿಯಾಗಿ ಪರಿಚಯರಾದ ಶಿವಶಂಕರ್ ತಿಪಟೂರಿನಲ್ಲಿ `ಲಂಕೇಶ’ ರ `ಗುಣಮುಖ’ ನಾಟಕದಲ್ಲಿ ಅಭಿನಯಿಸಿ ಆ ಮೂಲಕವೇ `ನೀನಾಸಂ’ ನಲ್ಲಿ ರಂಗಶಿಕ್ಷಣ ಮುಗಿಸಿ `ತಿರುಗಾಟ’ ಮಾಡಿ ಬೆಂಗಳೂರು, ಕೊಡಗು, ಕೋಲಾರ ಅಂತೆಲ್ಲಾ ಸುತ್ತಾಡಿ ಈಗ ಕೊಪ್ಪಳದ ಕುಗ್ರಾಮದಲ್ಲಿ ನೆಲೆ ನಿಂತಿದ್ದಾರೆ.

ಅತ್ಯಂತ ಸಂಕೋಚದ ಡಿ.ಕೆ. ರಮೇಶ್ ಸತ್ವಯುತ ಕವಿ. ಪತ್ರಿಕೋದ್ಯಮದ ಜೊತೆಜೊತೆಗೆ ಕಾವ್ಯ ಕೃಷಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಈಗಾಗಲೆ ಹೊಸ ಬಗೆಯ ಕವಿತೆಗಳನ್ನು ಅವರು ಬರೆದಿದ್ದಾರೆ. `ಕಿಚ್ಚಿಲ್ಲದ ಬೇಗೆ’ ಎಂಬ ಅನುಭವ ಕಥನದ ಮೂಲಕ ಎನ್. ಎಸ್. ಶೈಲಜಾ ಗಮನ ಸೆಳೆದಿದ್ದಾರೆ. ರಂಗ ಕಲಾವಿದೆಯಾಗಿ, ಕನ್ನಡ ಪುಸ್ತಕ ಪ್ರಾದಿಕಾರದ ಪುಸ್ತಕ ಮಳಿಗೆ ಇಟ್ಟುಕೊಂಡು ಜನರಿಗೆ ಪರ್ಯಾಯ ಪುಸ್ತಕ ಓದಿಸುವ ಕಾರ್ಯದಲ್ಲಿ ತೊಡಗಿಕೊಂಡಿರುವ ವಾಣಿ ಸತೀಶ್ ಈಗ ಬರವಣಿಗೆ ಆರಂಭಿಸಿದ್ದಾರೆ. ಕಡಿಮೆ ಬರೆದಿದ್ದರು ಪರಿಣಾಮಕಾರಿಯಾಗಿ ಬರೆದಿದ್ದಾರೆ.

`ಎದೆಗಿಲಕಿ’ ಸಂಕಲನದ ಮೂಲಕ ಗುರುತಿಸಿಕೊಂಡಿರುವ ಮಂಜುನಾಥ್, ತಾಜತನದಿಂದ ಬರೆಯುವ ಮಹಾಲಿಂಗಯ್ಯ, ಈಗಾಗಲೇ ಪುಸ್ತಕಗಳನ್ನು ಹೊರತಂದಿರುವ ಶಾಂತ ಕಂಪಾರಳ್ಳಿ, ಮಹಾಲಿಂಗಯ್ಯ, ಸಾಹಿತ್ಯ ಪತ್ರಿಕೆ, ಹೋರಾಟ, ಸಂಘಟನೆ ಮೂಲಕ ಗಮನಸೆಳೆದಿರುವ ಉಜ್ಜಜ್ಜಿ ರಾಜಣ್ಣ, ಈಗಾಗಲೇ ಗಮನಸೆಳೆದಂತಹ ಕವಿತೆಗಳನ್ನು ಬರೆದಿರುವ ಕೆ.ಬಿ. ಸರಸ್ವತಿ, ವಿದ್ಯಾರ್ಥಿ ದೆಸೆಯಿಂದಲೇ ಪ್ರಬಂಧಗಳನ್ನು ಬರೆತು ಗುರುತಿಸಿಕೊಂಡಿರುವ ಸ್ಮಿತಾ ಮಾಕಳ್ಳಿ ಅವರ ಕವಿತೆಗಳು ಇಲ್ಲಿ ಸೇರಿವೆ.

ಇಲ್ಲಿರುವ ಬಹುತೇಕ ಕವಿಗಳು ದಿನದ ಬಹುಪಾಲು ಸಮಯ `ಬೀದಿ’ ಗಳಲ್ಲೇ ಕಳೆದವರು. ಈಗ ಆ `ಬೀದಿ’ಗೆ ಶಕ್ತಿ ತುಂಬುತ್ತಿದ್ದಾರೆ. ಹೀಗಾಗಿ ಈ ಸಂಕಲನಕ್ಕೆ `ಬೀದಿ’ ಎಂದೇ ಹೆಸರಿಟ್ಟಿದ್ದಾನೆ. ಇಂತದ್ದೊಂದು ಸಂಕಲನ ಸಂಪಾದಿಸಿಕೊಡುವಂತೆ ಉಜ್ಜಜ್ಜಿ ರಾಜಣ್ಣ ನನ್ನನ್ನು ಕೇಳುವ ಮೂಲಕ ಮತ್ತೆ ನನ್ನೆಲ್ಲಾ ಗೆಳೆಯರ ಕವಿತೆಗಳ ಜೊತೆ ಸಂವಾದ ನಡೆಸಲು ಅವಕಾಶ ಕಲ್ಪಸಿದ್ದಾರೆ. ಹಾಗಾಗಿ ಅವರಿಗೂ ಪುಸ್ತಕ ಪ್ರಕಟಿಸುವ ಮೂಲಕ ಸಾಹಿತ್ಯ ಸಮ್ಮೇಳನಕ್ಕೊಂದು ಅರ್ಥಪೂರ್ಣ ಮುನ್ನುಡಿ ಹಾಕಿರುವ ತಿಪಟೂರು ಸಾಹಿತ್ಯ ಪರಿಷತ್ಗೂ ಕವನ ನೀಡಿದ ನನ್ನೆಲ್ಲಾ ಪ್ರೀತಿಯ ಕವಿಗಳಿಗೆ ವಂದನೆಗಳು.

‍ಲೇಖಕರು avadhi

21 March, 2013

4 Comments

  1. bharathi

    odabeku …

  2. sujatha

    wow nice collection sir….hige munduvarisi sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading