ಪ್ರಶಾಂತ್ ಪಂಡಿತ್
“ಅಣಬೆ ತಿನ್ನೋ ದೊರೆಗುಳೆಲ್ಲ ಡೆಲ್ಲಿಲಿದಾರೆ ಅಂದ್ರೆ ಮೈಸೂರಲ್ಲೂ ಅವ್ರಲ್ಲಪ್ಪಾ!” ದೇವರಾಜ ಮಾರ್ಕೆಟ್ಟಿನ ಗದ್ದಲದ ನಡುವೆಯೂ ಬೆನ್ನಹಿಂದಿನಿಂದ ಬಂದ ದೊಡ್ಡ ನಗುವಿನಿಂದ ಕೂಡಿದ ಮಾತಿಗೆ ತಿರುಗಿ ನೋಡಿದರೆ ಹೊಟ್ಟೆ ಕುಲುಕುತ್ತ ನಗುತ್ತಿದ್ದ ಜಡೆಮುದ್ದಣ್ಣ! ನೋಡಿದರೆ ಕೈಯಲ್ಲಿ ಬ್ರೋಕೋಲಿ. ಬಿಡ್ತೀನಾ? “Look who is talking! ಬ್ರೋಕೋಲಿ ಎಲ್ಲಾ ಫಾರಿನ್ ದೊರೆಗುಳು ತಿನ್ನೋದು ಬುದ್ಧೀ. ಅಣಬೆ ಗಿಣಬೆ ಎಲ್ಲಾ ಯಾವ ಲೆಕ್ಕ ನಿಮಗೆ?!” ಎಂದು ಕಿಚಾಯಿಸಿದ್ದೆ. ಇದು ಎರಡು ವಾರದ ಹಿಂದಿನ ಮಾತು. ನಾಲ್ಕೇ ದಿನದ ಹಿಂದೆ ಆರ್ಟಿಕಲ್ 15 ಚಿತ್ರ ನೋಡಲು ಹೋದಾಗ ಗೆಳೆಯ ಮನು ಇದನ್ನ ಫೇಸ್ಬುಕ್ನಲ್ಲಿ ಹಾಕಿ, ಮುದ್ದುಕೃಷ್ಣ ಹಿಂಗೇ ಹಾಕ್ತಿರ್ತಾರೆ, ಈ ಸಲ ನಾವೇ ಫಸ್ಟ್ ಎಂದಾಗ ಎಫ್ಬಿ ಅಪ್ಡೇಟ್ ಮಾಡಿ ನಕ್ಕಿದ್ದೆವು. ಮೊನ್ನೆ ಆ ಸಿನಿಮಾ ಕುರಿತ ಮೂರ್ನಾಲ್ಕು ವಿಮರ್ಶೆಗಳ ಲಿಂಕುಗಳನ್ನು ಮುದ್ದಣ್ಣ ವಾಟ್ಸ್ಯಾಪ್ ಮಾಡಿದ್ದರು.
ನಮ್ಮದೊಂದು ವಾಟ್ಸ್ಯಾಪ್ ಗುಂಪಿದೆ. “ಐಎಫ್ಎಫ್ಕೆ ಕರ್ನಾಟಕ ಗ್ಯಾಂಗ್” ಅಂತ ಹೆಸರು! ಇದರ ಜನಕ ಮುದ್ದಣ್ಣ. ನಾವೊಂದಿಷ್ಟು ಗೆಳೆಯರು ತಿರುವನಂತಪುರ ಚಿತ್ರೋತ್ಸವಕ್ಕೆ ಹೋದಾಗ ಹುಟ್ಟಿದ ಗುಂಪು ಇದು. ಅಲ್ಲಿಯೂ ಹಾಗೇ. ಸಿನಿಮಾಗಳ ಕುರಿತ ವಿಮರ್ಶೆ, ಚರ್ಚೆಗಳ ಲಿಂಕುಗಳನ್ನು ಶೇರ್ ಮಾಡುತ್ತಿದ್ದ ಮುದ್ದಣ್ಣ ಚಿತ್ರೋತ್ಸವದಲ್ಲಿದ್ದಾಗ ಯಾವ ಹಾಲಿನಲ್ಲಿ ಯಾವ ಚಿತ್ರ ಇದೆ, ಯಾವುದು ಚೆನ್ನಾಗಿಲ್ಲ, ಯಾವುದು ಮಸ್ಟ್ವಾಚ್ ಎಲ್ಲಾ ಶೇರ್ ಮಾಡುತ್ತಿದ್ದರು. ಮುಂದೆ ಇದೇ ಗುಂಪು ಬೆಂಗಳೂರು ಚಿತ್ರೋತ್ಸವದಲ್ಲೂ ಉಪಯೋಗಕ್ಕೆ ಬಂತು!
ನಿಂತಲ್ಲಿ ನಿಲ್ಲದ, ಕೂತಲ್ಲಿ ಕೂರದ ಚಂಚಲ ಮನಸ್ಸಿನವರಂತೆ ಕಾಣುವ ಮುದ್ದಣ್ಣ ಮಾತಿಗಿಳಿದರೂ ಎಲ್ಲಿಂದ ಎಲ್ಲಿಗೋ ಲಿಂಕ್ ಮಾಡಿ, ಹತ್ತಾರು ಉದಾಹರಣೆ ಕೋಟ್ ಮಾಡಿ, ಸ್ಟ್ಯಾನ್ಲೀ ಕ್ಯುಬ್ರಿಕ್ನಿಂದ ಅರವಿಂದನ್, ಬಾದಲ್ ಸರ್ಕಾರ್ ರಿಂದ ಆಲನಹಳ್ಳಿ, ನಿಜಲಿಂಗಪ್ಪರಿಂದ ಪುಟಿನ್ವರೆಗೆ ಹಾರಿ ಕೆಲವೊಮ್ಮೆ ಹೊಸದೇನನ್ನೋ ಹೊಳೆಯಿಸಿ ಮತ್ತೆ ಕೆಲವೊಮ್ಮೆ ಗೊಂದಲಮಾಡಿ ಏನೂ ಆಗೇ ಇಲ್ಲ ಎಂಬಂತೆ ಮುಂದೆ ಹೋಗಿಬಿಡುತ್ತಿದ್ದರು!
“ಅಸ್ಸಲಾಮ್ ಆಲೇಕುಂ” ಮುದ್ದಣ್ಣ ಎಂದು ಅವರ ಫೋನ್ ಕರೆಗೆ ಉತ್ತರಿಸಿದರೆ “ಕ್ಯಾಜಿಜೀ ಪಂಡಿತ್ಜೀ ತುಮ್ನಾ ಪುಳ್ಚಾರ್ ಬೊಮ್ಮನ್, ಇದರ್ ನಜರ್ಬಾದ್ ಮೇ ಆಕೋ ಕೀಮಾ ಕಬಾಬ್ ಖಾವೋ ಔರ್ ಸಾಥ್ ಮೇ ಪಿಚ್ಚರ್ ದೇಖೋ” ಎನ್ನುತ್ತ ಕಾಲೆಳೆದು ನಂತರ “ವಾಟ್ ಡು ಯು ಥಿಂಕ್ ಎಬೌಟ್ ದೇವ್ ಡಿ ಎಂಡ್ ಅನುರಾಗ್ ಕಶ್ಯಪ್” ಎಂದು ಶುರುವಾದ ಮಾತು ಸಿನಿಮಾದಿಂದ ರಾಜಕೀಯಕ್ಕೆ ಅಲ್ಲಿಂದ ಪೋಲಿ ಜೋಕಿಗೆ ಅಲ್ಲಿಂದ ಯಾವುದೋ ವಿಷಯ ಕುರಿತ ಅಸಮಾಧಾನ, ಯಾರದ್ದೋ ನಿಲುವಿನ ಬಗ್ಗೆ ಟೀಕೆ, ಯಾವುದೋ ಗೆಳೆಯನ ಬಗ್ಗೆ concern, ಅವರ ಮುಂದಿನ ಪ್ರಯಾಣದ ವಿವರ, ಒಳ್ಳೆ ವೈನ್ ಎಲ್ಲಿ ಸಿಗುತ್ತದೆ ಎಂಬ ಮಾಹಿತಿ, ಯಾವ ಪ್ರೊಜೆಕ್ಟರ್ ಕೊಂಡರೆ ಒಳ್ಳೆಯದು ಎಂಬ ಪ್ರಶ್ನೆ, ಎಲ್ಲಾ ಒಂದರ ಹಿಂದೆ ಒಂದು ಸಹಜವಾಗಿ ಬರುತ್ತಿತ್ತು.
He was high on life!
ಅವರ ಪಾಲಿನ ಶಾಂತಿಯನ್ನೂ ಮೌನವನ್ನೂ ತಾವೇ ಪಡೆದಂತಿದ್ದ ಸಂಗಾತಿ ಇಂದ್ರಾಣಿ ಅವರೊಂದಿಗೆ ಒಟ್ಟಿಗೇ ಎದ್ದು ನಡೆದ ಜಡೆಮುದ್ದಣ್ಣ ಅಲ್ಲೆಲ್ಲೋ ದೂರದಲ್ಲಿ ಕೈಯಲ್ಲಿ ಬೀಡಿ ಹಿಡಿದು, ವೈನ್ ಕುಡಿಯುತ್ತ, ಚಡಪಡಿಸುತ್ತಾ ಸಿನಿಮಾ ನೋಡುತ್ತಿರಬಹುದು…






ರಂಗ ಕರ್ಮಿ ಶ್ರೀ ಮುದ್ದುಕೃಷ್ಣ ಮತ್ತು ಶ್ರೀ ಮತಿ ಇಂದ್ರಾಣಿ ಅವರ ಅಗಲಿಕೆಯ ನೋವನ್ನು ಹೃದಯಕ್ಕೆ ಹತ್ತಿರವಾಗುವ ರೀತಿಯಲ್ಲಿ ಕಟ್ಟಿಕೊಟ್ಟ ಈ ಲೇಖನವನ್ನು ಬಹುಕಾಲ ನೆನಪಾಗಿ ಇಟ್ಟುಕೊಳ್ಳಬಹುದು. ಅಗಲಿದ ದಂಪತಿಗಳ ಆತ್ಮಗಳಿಗೆ ಶಾಂತಿ ಕೋರುವೆ.