ರಂಗಭೂಮಿಯ ‘ತಾಯಿ’
‘ಕರಿಮಾಯಿ’ ತಾಯಿ
ಹಾಡಿದರೆಂದರೆ ಸಮುದ್ರ ಭೋರ್ಗರೆದಂತೆ ಧ್ವನಿತರಂಗಗಳು ಮಾರ್ದನಿಸುತ್ತವೆ. ಈ ತಾಯಿಯ ಆತ್ಮಕಥನ ಪ್ರೀತಿ ನಾಗರಾಜ್ ನಿರೂಪಿಸಿರುವ ‘ಕಣ್ಣಾ ಮುಚ್ಛೇ ಕಾಡೇ ಗೂಡೇ..’ ಇನ್ನೇನು ಕೆಲವೇ ದಿನಗಳಲ್ಲಿ ನಮ್ಮ ಮುಂದೆ ಬರುತ್ತಿದೆ.
ಹಿಂದೊಮ್ಮೆ ಇವರೊಡನೆ ಸಂಗೀತಕ್ಕೆ ಸಂಬಂಧಿಸಿದಂತೆ ಮಾತಾಡಲು ಕುಳಿತಾಗ ಆಕೆ ತಮ್ಮ ಮನ:ಪಟಲದಿಂದ ಕೆಲವು ವಿಷಯಗಳನ್ನು ನನ್ನೊಡನೆ ಹಂಚಿಕೊಂಡದ್ದು ಹೀಗೆ……..
ಅವರ ಆತ್ಮಕಥನ ಹೊರಬರುವ ಹೊತ್ತಲ್ಲಿ ಅದನ್ನು ಅವರ ಮಾತಿನಲ್ಲಿಯೇ ನಿಮ್ಮೊಡನೆ ಹಂಚಿಕೊಳ್ಳುವ ಆಶಯ ನನ್ನದು.
-ಮಂಗಳಾ. ಎನ್
ಸಮುದ್ರ ಇದ್ದ ಹಾಗೆ….. ಈ ರಂಗಸಂಗೀತ
ನನಗೆ ಚೆನ್ನಾಗಿ ನೆನಪಿರೋದು ಅಂದ್ರೆ, ‘ವೇದ ಶಿಶು’ ಪಾತ್ರ. ಅದಕ್ಕೂ ಮೊದಲು ಕೃಷ್ಣ ಲೀಲೆ ನಾಟಕದಲ್ಲಿ ನಾನು ಕೃಷ್ಣನ ಪಾತ್ರ ಮಾಡ್ತಿದ್ದೆ. ಮಾತುಗಳು ಏನೂ ಇರುತ್ತಿರಲಿಲ್ಲ. ಸುಮ್ಮನೆ ಡ್ಯಾನ್ಸ್ ಮಾಡ್ತಿದ್ದೆ. ಪುಟ್ಟ ಕೃಷ್ಣ ಆಗಿದ್ದಾಗ ತಪ್ಪಿಸಿಕೊಂಡು ತಪ್ಪಿಸಿಕೊಂಡು ಓಡಾಡೋದು; ಕೃಷ್ಣ ಕೊಳಲು ನುಡಿಸಿದ ತಕ್ಷಣ ಗೊಲ್ಲರ ಜುಟ್ಟು ಎಗರಿ ನಿಲ್ಲೋದು; ಕೃಷ್ಣನನ್ನು ಪೆಟ್ಟಿಗೇಲಿ ಕೂಡಿ ಹಾಕಿರೋರು. ಪೆಟ್ಟಿಗೆ ತೆಗೆದ ತಕ್ಷಣ ಕರಡಿ ಹೊರಗೆ ಬರೋದು; ಹೀಗೆ…. ಇಂಥವೆಲ್ಲ ನನಗೆ ತಮಾಷೆ ಅನ್ನಿಸೋದು. “ಕೃಷ್ಣಲೀಲೆ” ನಾಟಕದ ಹಾಡುಗಳೆಲ್ಲ ಕಿವಿ ಮೇಲೆ ಬೀಳ್ತಾ ಇರೋದು.
ನನಗೆ ರಂಗಭೂಮಿ ರಂಗಭೂಮಿಯಾಗಷ್ಟೇ ಉಳೀಲಿಲ್ಲ. ರಂಗಭೂಮಿ ಅಂದರೆ ಮನೆ. ರಂಗಭೂಮಿಯನ್ನು ತಮಾಷೆಯಾಗಿ ನೋಡ್ದೋಳು ನಾನು (ಹಾಗೆ ಕೆಲವೊಮ್ಮೆ ಹೆದರಿಕೊಂಡೂ ನೋಡಿದೀನಿ.) ಅಬ್ಬಾ!!! ಅದ್ಭುತ ಅಂತ ಬೆರಗುಗಣ್ಣುಗಳಲ್ಲಿ ನೋಡೀದೀನಿ.
‘ಕಾಳಿಂಗ ಮರ್ದನ’ ದೃಶ್ಯವನ್ನು ಮೊದಲ ವಿಂಗ್ ನಲ್ಲಿ ಕುಳಿತು ನೋಡ್ದಾಗ ಅದ್ಭುತ ಅನ್ನಿಸೋದು. ‘ನಾನೂ ಮಾಡಬೇಕು’ ಅಂತ ಅನ್ನಿಸೋದು. ಅದರಲ್ಲಿ ಕೃಷ್ಣನ ಸೊಂಟಕ್ಕೆ, ಭುಜಕ್ಕೆ ಹಗ್ಗ ಕಟ್ಟಿಬಿಟ್ಟು ಮೇಲಿಂದ ಇಳಿಬಿಡೋರು, ಅಂದರೆ ಏರೋಪ್ಲೇನ್ ಹತ್ತಿಸೋದು ಅಂತೀವಲ್ಲ, ಹಾಗೆ. ಆ ರೀತಿ ಇಳಿಬಿಟ್ಟಾಗ ಈಜು ಹೊಡಕೊಂಡು ಮೇಲಿಂದ ಇಳೀತಿದ್ದರು. ಕೆಳಗೆ ಇಳಿಯೋವಾಗ ಹಾವು ಬುಸ್ ಬುಸ್ ಅಂತ ಮೇಲಕ್ಕೆ ಬರೋದು. ಆಗ ಹಿಂದಕ್ಕೆ ಓಡಿಹೋಗಿ ಮತ್ತೆ ವಾಪಸ್ಸು ಓಡಿಬರೋ ಅಷ್ಟರಲ್ಲಿ ಹಗ್ಗ ಮೇಲೆಳೆಯೋರು. ಆಗ ಕಾಲಿಂದ ಹಾವನ್ನು ಒದ್ದು ಕೃಷ್ಣ ಮೇಲಕ್ಕೆ ಹೋಗಿಬಿಡ್ತಿದ್ದ. ಅದನ್ನು ಹೊರಗಡೆಯಿಂದ ನೋಡ್ದಾಗ ಕೃಷ್ಣ ಹಾವಿನ ಜೊತೆ ಹೊಡೆದಾಡ್ತಿದಾನೆ ಅನ್ನೋ ಹಾಗೆ ಫೀಲ್ ಆಗೋದು. ಅದ್ಭುತ ಅಂತ ಅನ್ನಿಸೋದು.
ಇವೆಲ್ಲ ನಮಗೆ ಆಟ. ಇದೆಲ್ಲವೂ ನಡೀತಿರುವಾಗ ಹಿಂದೆ ಸಂಗೀತ ನಿರಂತರವಾಗಿ ಕೇಳಿಸ್ತಾನೇ ಇರೋದು. ಒಟ್ಟಿನಲ್ಲಿ 24ಗಂಟೇನೂ ನನ್ನ ಕಿವಿ ಮೇಲೆ ಸಂಗೀತ ಅನ್ನೋದು ಬೀಳ್ತಾನೆ ಇರೋದು. ಅದೇ ಹಾಡ್ತಾ ಹಾಡ್ತಾ ರಾಗ, ಮುಲುಕ್ತಾ ಮುಲುಕ್ತಾ ರೋಗ ಅಂತಾರಲ್ಲ ಹಾಗೆ. ನನಗೆ ಸಂಗೀತ ಅಂದ್ರೇನು ಅನ್ನೋದು ಗೊತ್ತಾಗೋಕೆ ಮೊದ್ಲಿಂದ ಅದು ನನ್ನ ಕಿವಿ ಮೇಲೆ ಬಿದ್ದು ಬಿದ್ದು ನನ್ನೊಳಗೆ ತನ್ನ ಜಾಗವನ್ನು ಪಡ್ಕೊಂಡುಬಿಟ್ಟಿತ್ತು.
ನನಗಾಗ ನಾಲ್ಕು ವರ್ಷ. ‘ದಶಾವತಾರ’ ನಾಟಕದಲ್ಲಿ ‘ವೇದಶಿಶು’ ಪಾತ್ರ ಮಾಡಬೇಕಾಗಿ ಬಂತು. ನಾನೇ ಹಾಡ್ಬೇಕಾಗಿತ್ತು. ಮೊದಲ ಬಾರಿಗೆ ಕಾಳಿಂಗರಾಯರು ಸಂಗೀತ ಮಾಡಿದ್ದರು. ಅಥರ್ವಣ ವೇದದ ಪಾತ್ರ ಅದು. ಮಿಕ್ಕ ವೇದಗಳಿಗೆ ನಾನು ಈ ಹಾಡನ್ನು ಅಂದರೆ ಶ್ಲೋಕವನ್ನು ಹೇಳಿಕೊಡಬೇಕಾಗಿತ್ತು.
“ಸಹನಾವವತು ಸಹನೌಭುನತ್ತು, ಸಹವೀರ್ಯಂ ಕರವಾವಹೈ
ತೇಜಸ್ವಿನಾವದೀತಮಸ್ತು ಮಾವಿದ್ವಿಷಾವಹೈ
ಓಂ ಶಾಂತಿ ಶಾಂತಿ ಶಾಂತಿಃ”
ಕಾಳಿಂಗರಾಯರು ವೇದ ಹೇಳಿಕೊಟ್ಟಿದ್ದು ಕಿವೀಲಿ ಗುಂಯ್ ಗುಡ್ತಾ ಇರೋದು. ಆಗ ನನಗೆ ಶೃತಿ ಅನ್ನೋದು ಅರ್ಥ ಆಗಕ್ಕೆ ಶುರುವಾಗಿತ್ತು. ಓಂಕಾರ ನಿರಂತರವಾಗಿ ನಡೀತಾಲೇ ಇರೋದು. ಈ ಶೃತಿ ರಾತ್ರಿಯೆಲ್ಲಾ ನನಗೆ ಕಿವೀಲಿ ಗುಂಯ್ ಗುಡೋದು. ಆಗ ನನ್ನ ಮನಸ್ಸು ಸಂಗೀತದ ಕಡೆಗೆ ವಾಲಿತು. ಸಂಗೀತ ಅನ್ನೋದು ನನ್ನ ಕಿವಿಯನ್ನು, ಹೃದಯವನ್ನು, ಮನಸ್ಸನ್ನು ಮುಟ್ಟಿತು.
ಆಗಂತೂ ನಮ್ಮ ಕಂಪನೀಲಿ ಅದ್ಭುತವಾದ ಹಾಡುಗಾರರಿದ್ದರು. ಅಚ್ಯುತರಾಯರು, ದೊಡ್ಡಮ್ಮ ಅಂದರೆ ಸ್ವರ್ಣಮ್ಮ, (ತಾತನ ಜ್ಯೇಷ್ಠ ಪುತ್ರಿ) ನಮ್ಮಮ್ಮ ಮಾಲತಮ್ಮ (ದ್ವಿತೀಯ ಪುತ್ರಿ) ಶ್ರೀಕಂಠರಾಯರು, ಶ್ರೀಕಂಠಮೂರ್ತಿಗಳು, ಜಯಮ್ಮಕ್ಕ (ತಾತನ ಮೂರನೇ ಸಂಸಾರ, ನಮ್ಮಜ್ಜಿ), ಹರಿಕತಮ್ಮನವರು ಇವರೆಲ್ಲ ಅದ್ಭುತವಾಗಿ ಹಾಡೋರು. ಜೊತೆಗೆ ಹಾರ್ಮೋನಿಯಂ ವೆಂಕೋಬರಾಯರು, ಕ್ಲಾರಿನೆಟ್ ಆಂಜನಪ್ಪನವರು, ವೈಲಿನ್ ಶಂಕ್ರಪ್ಪನವರು ಹೀಗೆ.. ಎಲ್ಲರೂ ಅದ್ಭುತವಾಗಿ ನುಡಿಸೋರು ಮತ್ತು ಹಾಡೋರು.
ದಶಾವತಾರದಲ್ಲಿ ಪಿ.ಕಾಳಿಂಗರಾಯರು ಕ್ಲಾರಿಯೋನೆಟ್ ನಲ್ಲಿ ಒಂದು ಹಾಡು ಸಂಯೋಜನೆ ಮಾಡಿದ್ದರು. ಈಗಲೂ ನನಗೆ ನೆನಪಿಸಿಕೊಂಡರೆ ಮೈ ಜುಂ ಅನ್ನತ್ತೆ. ನಾನು ಇವರೆಲ್ಲರ ಹಾಡುಗಳನ್ನು ಕೇಳ್ತಾ ಬೆಳೆದೆ. ನನಗಾಗ 8-10 ವರ್ಷ ಇರಬಹುದು. ನನಗೆ ಬುದ್ದಿ ಬಂತು ಅನ್ನೋ ಅಷ್ಟರಲ್ಲಿ ನನ್ನ ಬುದ್ದಿ, ಹೃದಯ, ಮನಸ್ಸಿನ ಮೇಲೆ ಸಂಗೀತ ಅನ್ನೋದು ಆಕ್ಟೋಪಸ್ ತರಹ ಹರಡಿಕೊಳ್ಳೊಕೆ ಶುರುವಾಯಿತು.
(ನೆನಪಿಸಿಕೊಳ್ತಾ ಹಾಡ್ತಾರೆ)
“ವಸಂತ ಮೇಘದ ಚೆಲುವ ನೌಕೆಯಲಿ
ಕುಂತು ನಾಮ್ ತೇಲಿಪೋಗುವ
ಮಿಂಚಿನಂತೆ ನಾ ಹಿಂದೆ ಬಂದು
ನಿನ್ನಂಚಲವ ಹಿಡಿದು ಸೆಳೆಯುವೆ.
ಹಾಡುಗಳು ಎಷ್ಟು ಚೆನ್ನಾಗಿರೋದು. ಹಾಡು ಅಂತಲೇ ಅನ್ನಿಸ್ತಿರಲಿಲ್ಲ. ಬಿಡಿ ಬಿಡಿಯಾಗಿ ಸಾಹಿತ್ಯ ಅರ್ಥ ಆಗೋದು. ಆಗ ನಾನು ಕಾಳಿಂಗರಾಯರನ್ನು ಕೇಳಿದೆ. ಚೆನ್ನಾಗಿ ಹಾಡೋದು ಅಂದರೆ ಏನು ಅಂತ? ಒಳ್ಳೆ ಶಾರೀರ, ಸ್ವಲ್ಪ ಶೃತಿ ಜ್ಞಾನ, ಸ್ವಲ್ಪ ಲಯ ಜ್ಞಾನ, ಹೇಳಿದ ಹಾಗೆ ಕೇಳೋ ಗಂಟಲು ಇದ್ರೆ ಸಾಕು. ಚೆನ್ನಾಗಿ ಹಾಡಬಹುದು ಅಂದಿದ್ದರು. ಅವೆಲ್ಲ ಇರೋದೆ ಕಷ್ಟ ಅಲ್ಲವಾ?
ನಮ್ಮ ಕಂಪನೀಲಿ ಆಗ ಶ್ರೀಕಂಠಮೂರ್ತಿಗಳು ಅದ್ಭುತವಾಗಿ ಹಾಡೋರು. “ಸಾರಸನಯನ ಮಾಂಪಾಲಯಾ..’ ನಮಗೆ ಈ ಹಾಡುಗಳನ್ನೆಲ್ಲ ಯಾರೂ ಹೇಳಿಕೊಟ್ಟಿಲ್ಲ. ಆದರೆ ಕೇಳ್ತಾ ಕೇಳ್ತಾ ಬಹಳಷ್ಟು ಕಲಿತೆವು. ಶ್ರೀಕಂಠಮೂರ್ತಿಗಳು ಅದೆಷ್ಟು ದೊಡ್ಡದಾಗಿ ಬಾಯಿ ತೆಗೆದು ಹಾಡ್ತಿದ್ದರು ಅಂದ್ರೆ, ನಾನು ಮೊದಲ ವಿಂಗ್ ನಿಂದ ನಿಂತು ನೋಡಿದರೆ ಅವರ ಕಿರುನಾಲಗೆ ಕಾಣಿಸೋದು. ನಾರದನ ಪಾತ್ರ ಮಾಡ್ತಿದ್ದರು. ಮುಖವನ್ನು ಒಂದು ಚೂರೂ ವಿಕಾರ ಮಾಡದೆ ಅದ್ಭುತವಾಗಿ ಹಾಡೋರು. ಕೇಳೋಕೆ ತುಂಬಾ ಸಂತೋಷ ಆಗೋದು. ಹೀಗೆ ನನಗೆ ಬಹಳಷ್ಟು ಹಾಡುಗಳು ಕಿವಿ ಮೇಲೆ ಬೀಳ್ತಾ ಇರೋದು. ಎಷ್ಟು ವೈವಿಧ್ಯಮಯವಾದ ಹಾಡುಗಳು ಅಂತೀರಿ ಅಬ್ಬಾ…!
ಮಣ್ಣಿಂದ ಕಾಯಾ ಮಣ್ಣಿಂದ
ಮಣ್ಣ ಬಿಟ್ಟವರಿಗೆ ಅನ್ನವೇ ಇಲ್ಲ…….”
ಸಾಹುಕಾರ್ ನಾಟಕದ ಹಾಡು. ಇದೊಂದು ಸಾಮಾಜಿಕ ನಾಟಕ. ಸಾಧು ಒಬ್ಬ ಈ ಹಾಡು ಹಾಡ್ತಾ ಹೋಗೋನು….
“ಆಸೆ….. ನಾಶವಾದೆ ನಿನ್ನ ಗುಣವ ತಿಳೀದೆ
ಉನ್ಮಾದದ ಮೋಹಕೆ ಸೋತೆ
ಅಂದಾಡಿದೆ ದರ್ಪದ ಮಾತನು”
ಸನ್ನಿವೇಶಕ್ಕೆ ತಕ್ಕಂತೆ ಹಾಕಿಕೊಂಡ ಹಾಡುಗಳಿವು. ಅವುಗಳ ಸಾಹಿತ್ಯ ನನಗೆ ಮನಸ್ಸನ್ನು ಬಹಳವಾಗಿ ಮುಟ್ತಿದ್ದವು. ದಶಾವತಾರ ನಾಟಕದ ನಂತರ ಸಂಗೀತ ಕಲೀಬೇಕು ಅಂತ ಆಸೆ ಆಯ್ತು. ಆಗ ಕಂಪನೀಲೆ ಸಂಗೀತಪಾಠ ಶುರುವಾಯ್ತು. ವೈಲಿನ್ ಶಂಕ್ರಪ್ಪನವರು ಹೇಳಿಕೊಡ್ತಿದ್ದರು. ಆಗ ನನಗೆ 10-12 ವರ್ಷ ಇರಬೇಕು.
ಗಣೇಶನ ಹಬ್ಬದ ಪ್ರಯುಕ್ತ ಒಂದು ಪಬ್ಲಿಕ್ ಪ್ರೋಗ್ರಾಂನಲ್ಲಿ ನಾನು “ನಗುಮೊಮು” ಹಾಡ್ಕೊಂಡು ಕಛೇರಿ ಕೊಟ್ಟಿದ್ದೆ. ಅದಾದ ನಂತರ ನನಗೊಂದು ಜ್ವರ ಬಂತು. ಸರಿಯಾಗಿ ಮಲಗಿಬಿಟ್ಟೆ. ಮೈಸೂರಿನ ದಸರಾ ಎಕ್ಸಿಬಿಷನ್ ನಲ್ಲಿ ನಮ್ಮದು ನಾಟಕ ಇತ್ತು. ನನಗೆ ಕುಳಿತುಕೊಳ್ಳೋಕೆ ಆಗ್ತಿಲ್ಲ. ನಮ್ಮಮ್ಮ ನೋಡಿದ್ರೆ ಚೆನ್ನಾಗಿ ಬಯ್ತಿದಾರೆ. ನಾವೆಂಥೆಂಥಾ ಪರಿಸ್ಥಿತೀಲಿ ನಾಟಕ ಮಾಡಿದೀವಿ. ನೀನೇನು ಒಂದು ಜ್ವರಕ್ಕೆ ಹೀಗೆಲ್ಲ ಆಡ್ತೀಯ, ಎದ್ದು ಮುಖಕ್ಕೆ ಬಣ್ಣ ಹಚ್ಚಿಕೋ ಅಂತ ಒತ್ತಾಯ ಮಾಡಿ ಮುಖಕ್ಕೆ ಬಣ್ಣ ಹಚ್ಚಿದರು.
ಅಷ್ಟರಲ್ಲಿ ಮಹಾದೇವ ಸ್ವಾಮಿಗಳ ಮಗ ಡಾ. ಸೋಮು ಬಂದರು. ಬಂದವರೆ, ‘ಅವಳಿಗೆ ಹುಷಾರಿಲ್ಲ ಅಂದ್ರಲ್ಲ ಏನಾಗಿದೆ? ಅಂತ ಕೇಳಿ ಬಾಯಿ ತೆಗಿ ಅಂದ್ರು. ನಾನು ಬಾಯಿ ತೆಗೆದೆ. ತಕ್ಷಣ ನನ್ನನ್ನು ಎತ್ತಿಕೊಂಡು ಡಾಕ್ಟರ್ ಹತ್ತಿರ ಹೋಗಿ ದೊಡ್ಡ ಸಿರಂಜಿನಲ್ಲಿ ಇಂಜೆಕ್ಷನ್ ಮಾಡಿಸಿ, ಅವಳಿಂದ ನಾಟಕ ಮಾಡೋಕೆ ಸಾಧ್ಯವೇ ಇಲ್ಲ. ಬೇರೆ ವ್ಯವಸ್ಥೆ ಮಾಡ್ಕೋಳಿ. ಅವಳಿಗೆ ಡಿಫ್ತೀರಿಯಾ ಆಗಿದೆ ಅಂದರು. ಅದಾದ ನಂತರ ನನಗೆ ಹಾಡೋಕೆ ತುಂಬ ಭಯ ಆಗಿಬಿಡೋದು. ಏನು ಆಗತ್ತೋ ಅಂತ ಹೆದರಿಕೊಳ್ತಾ ಇದ್ದೆ.
ಮತ್ತೊಮ್ಮೆ ನನಗೆ ಗಂಟಲಲ್ಲಿ ಸಮಸ್ಯೆ ಕಾಣಿಸಿಕೊಳ್ತು. ಆಗಂತೂ ಎರಡೂ ಗೆಡ್ಡೆಗಳು ಕೊಳೆತು ಗಂಟಲ ಆಪರೇಷನ್ ಮಾಡಿದರು. ಗೆಡ್ಡೆಗಳನ್ನು ಹೊರಗೆ ತೆಗೆದರು. ಈ ಎರಡೂ ಘಟನೆಗಳ ನಂತರ ತುಂಬಾ ಹೆದರಿಬಿಟ್ಟಿದ್ದೆ. ಆಮೇಲೆ ಹಾಗೇ ಮಾನಸಿಕವಾಗಿ ಗಟ್ಟಿಯಾಗ್ತಾ, ಅಬ್ಬಬ್ಬಾ ಅಂದ್ರೆ ಏನಾದೀತು, ಗೊಟಕ್ ಅನ್ನಬಹುದು ಅಷ್ಟೆ ಅಂದ್ಕೊಂಡು ಗಟ್ಟಿಯಾಗಿ ಬಾಯಿ ತೆರೆದು ಹಾಡೋಕೆ ಶುರು ಮಾಡಿದೆ.
ಅಷ್ಟೊತ್ತಿಗಾಗಲೇ ನಾನು, ಕಾಳಿಂಗರಾಯರು, ನಮ್ಮಮ್ಮ, ದೊಡ್ಡಮ್ಮ ಇನ್ನೂ ಮಿಕ್ಕವರ ಹಾಡುಗಳನ್ನು ಕೇಳ್ತಾ ಕೇಳ್ತಾ ಅವರುಗಳಲ್ಲಿ ಇಷ್ಟವಾದಂತ ಅಂಶಗಳನ್ನು ಅಳವಡಿಸಿಕೊಳ್ತಾ ಹೋದೆ. ಆಮೇಲೆ ನಾನು ನನ್ನದೇ ಆದಂತ ಹಾಡೋ ಕ್ರಮವನ್ನು ರೂಢಿ ಮಾಡ್ಕೊಂಡೆ. ಲತಾ ಮಂಗೇಶ್ಕರ್, ಆಶಾ ಭೋಂಸ್ಲೆ, ಬೇಗಂ ಅಖ್ತರ್, ಶಂಕರ್ ಶಂಭು, ಸುಬ್ಬಲಕ್ಷ್ಮಿ, ಚಿಂತನಪಲ್ಲಿ ರಾಮಚಂದ್ರರಾಯರು ಇವರೆಲ್ಲರ ಹಾಡುಗಳನ್ನು ಕೇಳ್ತಾ ಹೋದೆ. ಚಿ.ಪ.ರಾ.ಚಂದ್ರರಾಯರು ನನ್ನ ಸಂಗೀತದ ಗುರುಗಳು. ಗಜಲ್ ಗಳು, ಜುಗಲ್ ಬಂದಿಗಳನ್ನು ಕೇಳ್ತಿದ್ದೆ. ಎಲ್ಲದರ ಅಂಶಗಳನ್ನು ಯಾಕೆ ತಗೋಬಾರದು ಅಂತ ಅನ್ನಿಸಿತು. ಹಾಗಾಗಿ ನಾನು ಕರ್ನಾಟಕ ಸಂಗೀತಕ್ಕೂ ಹೋಗ್ತೀನಿ; ಹಿಂದೂಸ್ಥಾನೀಗೂ ಹೋಗ್ತೀನಿ. ಜನಪದಕ್ಕೂ ಹೋಗ್ತೀನಿ. ನನಗಿಷ್ಟವಾದ ಅಂಶಗಳನ್ನು ಮಿಕ್ಸ್ ಮಾಡ್ತಾ ಹಾಡೋಕೆ ಪ್ರಯತ್ನ ಮಾಡ್ತೀನಿ. ಅದನ್ನೇ ಡೆವಲಪ್ ಮಾಡೋಕೆ ಅಭ್ಯಾಸ ಮಾಡ್ತೀನಿ.
ಒಂದು ಸಲ ಏನಾಯ್ತೂಂದ್ರೆ, ನಾವು (ಗುಬ್ಬಿ ಕಂಪನಿ) ಮಂಗಳೂರಿನಲ್ಲಿ ಕ್ಯಾಂಪ್ ಮಾಡ್ತಿದ್ದಿವಿ. ಆಗ ನಮ್ಮ ತಾತ ನಮ್ಮನ್ನೆಲ್ಲ ಹಡಗು ನೋಡೋಕೆ ಕರೆದುಕೊಂಡು ಹೋಗಿದ್ದರು. ನಾವು ಎಲ್ಲೇ ಹೋಗಲಿ, ಆ ಊರಿನಲ್ಲಿ ಏನು ವಿಶೇಷ ಅಂತ ಇರತ್ತೋ, ಅಲ್ಲಿಗೆ ನಮ್ಮನ್ನು ತಾತ ಕರಕೊಂಡು ಹೋಗೋರು. ನಟ ನಟಿಯರಿಗೆ ಎಲ್ಲದರ ಪರಿಚಯ , ಅನುಭವ ಇರಬೇಕು ಅನ್ನೋದು ತಾತ ನಂಬಿಕೊಂಡು ಬಂದದ್ದು. ಹಾಗಾಗಿ ನಮ್ಮನ್ನೆಲ್ಲ ಮಂಗಳೂರಿನ ಬಂದರು ಮತ್ತು ಜನಜೀವನ, ಹಡಗು ಇವುಗಳನ್ನು ತೋರಿಸೋಕೆ ಕರಕೊಂಡು ಹೋಗಿದ್ದರು.
ಸರಿ, ದೋಣೀಲೇ ಹೋದೆವು. ಅಲ್ಲೆ ಒಂದು ದೊಡ್ಡ ಹಡಗು, ಓ! ಲಕ್ಷ್ಮಣಾ! ಅಂತ ನಿಂತಿತ್ತು. ನಾವೆಲ್ಲಾ ದೋಣಿಯಿಂದ ಆ ಹಡಗಿಗೆ ಸರ್ಕಸ್ ಮಾಡಿ ಎಗರಿಕೊಂಡೆವು. ಅಲ್ಲೊಬ್ಬರು ಕ್ಯಾಪ್ಟನ್ ಇದ್ದರು. ಅವರು ನಮ್ಮ ನಾಟಕಗಳನ್ನೆಲ್ಲ್ಲಾ ನೋಡಿದವರಂತೆ. ಅವರು ನನ್ನ ಹತ್ತಿರ ಬಂದು ಏನೋ ಮಾತಾಡಿಸಿದರು. ನನಗೇನೂ ಅರ್ಥವಾಗಲಿಲ್ಲ. ಸುಮ್ಮನೇ ಹಾಗೇ ಬಂದುಬಿಟ್ಟೆ. ಆಗ ನನ್ನ ತಂಗಿ ಪದ್ಮಶ್ರೀ ಕೂಡ ಬಂದಿದ್ದಳು. ಸ್ಕೂಲ್ ನಲ್ಲಿ ರಜೆ ಇದ್ದ ಕಾರಣ ನಮ್ಮ ಜೊತೆಗಿದ್ದಳು. ಅವಳು ಕಾನ್ವೆಂಟ್ ನಲ್ಲಿ ಓದ್ತಿದ್ದಳು. ಅವಳು ಆ ಕ್ಯಾಪ್ಟನ್ ಜೊತೆ ಏನೋ ಟಸ್ ಪುಸ್ ಅಂತ ಮಾತಾಡ್ತಿದ್ದಳು. ಆಮೇಲೆ ನಮ್ಮ ಹತ್ತಿರ ಬಂದಳು. ನಾವು ಏನು ಮಾತಾಡ್ತಿದ್ದೆ ಅಂತ ಕೇಳಿದೆವು. ಅವಳು ಏನೂ ಇಲ್ಲ ಅಂದವಳೇ ಸುಮ್ಮನೇ ಕೂತಳು.
ಆಮೇಲೆ ನನ್ನ ಹತ್ತಿರ ಬಂದು, ಅವರು ನಿನ್ನನ್ನು ಇಂಗ್ಲೀಷ್ ನಲ್ಲಿ ನಿನ್ನ ಹೆಸರೇನು ಅಂತ ಕೇಳಿದರಷ್ಟೇ, ಅದು ನಿನಗೆ ಹೇಳೋಕೆ ಗೊತ್ತಾಗಲಿಲ್ಲ, ಮುಂದೆ ಅದೇನು ಡ್ರಾಮಾ ಮಾಡ್ತೀಯೇ..? ಅಂತ ಅಂದುಬಿಟ್ಟಳು. ನನಗಾಗ ಓಹೋ.. ನಾನು ಒಂದು ಚೂರು ವಿದ್ಯಾಭ್ಯಾಸ ಅಂತ ಮಾಡಬೇಕು ಅನ್ನೋದು ತಲೆಗೆ ಬಂತು. ಅದಾದ ನಂತರ ತಾತನಿಗೆ ಹೇಳಿದೆ ನಾನು ಕಂಪನಿ ಬಿಟ್ಟು ಬಿಡ್ತೀನಿ. ನಾನು ಓದಬೇಕು ಅಂತ. ಆಗ ಅಷ್ಟು ದೊಡ್ಡ ವ್ಯಕ್ತಿ ನಮ್ಮ ತಾತ ( ಗುಬ್ಬಿ ವೀರಣ್ಣನವರು) “ನನಗೆ ಒಂದು ವರ್ಷ ಸಮಯ ಕೊಡು. ನಿನಗಾಗಿ ಒಂದು ನಾಟಕ ಬರೆಸ್ತಾ ಇದೀನಿ. ಅದನ್ನು ಮುಗಿಸಿ ನಂತರ ಆ ಜಾಗಕ್ಕೆ ಮತ್ತೊಬ್ಬರನ್ನು ತಯಾರು ಮಾಡ್ತೀನಿ. ಆಮೇಲೆ ಹೋಗು” ಅಂದರು. ಲವಕುಶ ನಾಟಕ ಅದು. ಇದನ್ನು ಮುಗಿಸಿಕೊಟ್ಟು ಸರಿಯಾಗಿ ಒಂದು ವರ್ಷಕ್ಕೆ ಓದೋಕೆ ಕಂಪನಿ ಬಿಟ್ಟು ಬಂದೆ.
ಆರು ತಿಂಗಳು ಗುಡ್ ಷೆಫರ್ಡ್ ಕಾನ್ವೆಂಟನಲ್ಲಿ ಇಂಗ್ಲೀಷ್ ಕಲಿತೆ. ಆರು ತಿಂಗಳು ಆರ್ಯ ವಿದ್ಯಾ ಶಾಲೆಯಲ್ಲಿ ಕನ್ನಡ ಕಲಿತೆ. ನಂತರ ಏಳನೇ ಕ್ಲಾಸ್ ಪರೀಕ್ಷೆಗೆ ಕೂತು ಪಾಸ್ ಮಾಡಿದೆ. ಆಮೇಲೆ ಮುಂದಕ್ಕೆ ಕಾರ್ಪೊರೇಷನ್ ಸ್ಕೂಲ್ ಗಾಂಧಿನಗರ, ಮಹಾರಾಣಿ ಕಾಲೇಜು. ಪಿಯುಸಿ ವರೆಗೂ ಬಂದೆ. ತಮಾಷೆಯೆಂದರೆ ಅಲ್ಲಿ ಕನ್ನಡದಲ್ಲಿ ಫೇಲ್ ಆಗ್ಬಿಟ್ಟೆ.
ಈ ಮಧ್ಯೆ ಬೆಂಗಳೂರಿನಲ್ಲಿ ಹವ್ಯಾಸಿ ರಂಗಭೂಮಿ ಶುರುವಾಗಿತ್ತು. ಶಿವಾನಂದ ಮಾಮನದ್ದು ಕಲಾಕುಂಜ ತಂಡ ಇತ್ತು. ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ ಕಪ್ಪಣ್ಣ ಅವರೆಲ್ಲ ನಾಟಕಕ್ಕೆ ಕರೀತಿದ್ದರು. ಪೋಲೀ ಕಿಟ್ಟಿ, ಸ್ವರ್ಗಕ್ಕೆ ಮೂರೇ ಬಾಗಿಲು, ಸರ್ವೇ ಜನಾ ಸುಖಿನೋಭವಂತು ಮಾಡಿದೆ. ಆಮೇಲೆ ಕಲಾಕುಂಜದಲ್ಲಿ ಕುರುಡುಕಾಂಚಾಣ ಮಾಡಿದೆ. ಕಾರಂತಣ್ಣಂದು ನಿರ್ದೇಶನ ಇತ್ತು.
ಆಗಲೇ ಶ್ರೀರಂಗರೂ ಮೊಟ್ಟ ಮೊದಲನೆಯದಾಗಿ ಕರ್ನಾಟಕದಲ್ಲಿ ಒಂದು theatre workshop ಮಾಡಿಸಿದರು. ನಮಗೆಲ್ಲಾ ಅದು ಹೊಚ್ಚ ಹೊಸತು. ಅಲ್ಲಿ ನಾಗಾಭರಣ, ನಾನು, ಲೋಕೇಶ್, ಇನ್ನೂ ತುಂಬಾ ಜನ ಅಭ್ಯರ್ಥಿಗಳು. ನಮ್ಗೆ faculty ಆಗಿ ಮೋಹನ್ ಮಹರ್ಷಿ, ಬಿ.ಎಮ್. ಷಾ, ವಿ. ರಾಮಮೂರ್ತಿ, ನಾಣಿಯವರು, ಸಾಯಿ ಪರಾಂಜಪೆ ಹೀಗೆ ಇನ್ನೂ ದೊಡ್ಡ ದೊಡ್ಡ ಅಧ್ಯಾಪಕರು ರಂಗತರಬೇತಿ ನೀಡಿದರು. ಈ ರಂಗಶಿಬಿರಕ್ಕೆ ಶ್ರೀರಂಗರೇ ನಿರ್ದೇಶಕರು. ಈ ರಂಗತರಬೇತಿಯಲ್ಲಿ ಬೂರ್ಜ್ವಾ ದಿ ಜಂಟಲ್ ಮೆನ್, ಬಿರುದಂತೆಂಬರ ಗಂಡ ಇತ್ಯಾದಿ ನಾಟಕಗಳ ಪ್ರಯೋಗಗಳಾದವು.
ಆಗ ಶ್ರೀರಂಗರು ಇವಳನ್ನು ಹೀಗೇ ಬಿಡೋದು ಬೇಡ. ಇವಳೊಬ್ಬಳು ಒಳ್ಳೆ ನಟಿ ಆಗ್ತಾಳೆ ಅಂತ ಹೇಳಿ ಶ್ರೀರಂಗರು, ಕಾರಂತರು, ಶಿವಾನಂದ ಮಾಮ ಎಲ್ಲರೂ ಸೇರಿ ನನ್ನನ್ನು ಎನ್.ಎಸ್.ಡಿ ಗೆ ಕಳುಹಿಸೋಕೆ ನಿರ್ಧರಿಸಿದರು. ಅಮ್ಮನ್ನ ಒಪ್ಪಿಸಿದರು. ಮೊದಲ ಸಲ ನಾನು ಮನೆ ಬಿಟ್ಟು ದೆಹಲಿಗೆ ಹೋದೆ. ಆಗಲೇ ನಾನು ನನ್ನ ಗುರುಗಳಾದ ಚಿ.ಪ.ರಾಮಚಂದ್ರರಾಯರನ್ನು, ಸಂಗೀತವನ್ನು ಬಿಟ್ಟು ಹೋದದ್ದು.
ದೆಹಲಿಯಲ್ಲಿ ನಾನು ಸಂಗೀತವನ್ನು ತುಂಬಾ ಮಿಸ್ ಮಾಡಿಕೊಂಡೆ. ಅಲ್ಲಿ ಸಂಗೀತ ಬೇಸಿಕ್ ಹೇಳ್ಕೊಡೋರು ಅಷ್ಟೆ. ಅದು ಬಿಟ್ರೆ ದೊಡ್ಡ ಸಂಗೀತ ಅಂತೇನು ನಾನು ಕಲೀಲಿಲ್ಲ. ನಾವು ನಮ್ಮ ತರಗತಿಯಲ್ಲಿದ್ದೋರು ಬೇರೆ ಬೇರೆ ರಾಜ್ಯದವರು, ತಮ್ಮ ತಮ್ಮ ರಾಜ್ಯದ ಜಾನಪದ ಸಂಗೀತವನ್ನು ಪರಸ್ಪರ ಹೇಳಿಕೊಡ್ತಿದ್ದೆವು. ಇದು ಬಿಟ್ಟರೆ ಸಂಗೀತಕ್ಕೆ ಸಂಬಂಧಪಟ್ಟ ಹಾಗೆ ನಾನು ಹೆಚ್ಚೇನು ಕಲೀಲಿಲ್ಲ. ಈಗಲೂ ಸಂಗೀತ ಅಂತ ಹೇಳಿಕೊಡೋರು ಯಾರೂ ಅಲ್ಲಿಲ್ಲ.
ನಾನು ಎನ್.ಎಸ್.ಡಿ ಯಲ್ಲಿದ್ದಾಗ , ಇಲ್ಲಿ ಬೆಂಗಳೂರಲ್ಲಿ ನಾಗಾಭರಣ ಮತ್ತು ಗೆಳೆಯರು ಒಂದು ತಂಡವನ್ನು ಶುರು ಮಾಡೋದರಲ್ಲಿದ್ದರು. ನಾಗಾಭರಣ ನನಗೆ ಪತ್ರ ಬರೆಯೋರು. ನೀನು ಎನ್.ಎಸ್.ಡಿ ಮುಗಿಸಿ ಸೀದಾ ನಮ್ಮ ತಂಡಕ್ಕೆ ಬಾ. ನಾಟಕ ಮಾಡೋಣ ಅಂತ. ಹಾಗೆ ನಾನು ಎನ್.ಎಸ್.ಡಿ ಮುಗಿಸಿ ಸೀದಾ ಬೆಂಗಳೂರಿಗೆ ಬಂದವಳೇ ಅವರ ಜೊತೆ ಸೇರಿಕೊಂಡೆ. ನಾಗಾಭರಣ, ಸೂರಿ, ಮೋಹನ ರಾಂ, ಅನಂತರಾಂ, ಲೋಕೇಶು, ಮೋಹನ, ಸುಂದ್ರ ಎಲ್ಲರೂ ಸೇರಿ “ಶಕಶೈಲೂಷರು” ಅನ್ನೋ ತಂಡ ಕಟ್ಟಿದ್ದರು.
ಶ್ರೀರಂಗರೇ ಕೊಟ್ಟ ಹೆಸರದು. ಅಲ್ಲಿ ಜಸ್ಮಾ ಒಡನ್ ನಾಟಕ ನಿರ್ದೇಶನ ಮಾಡಿದೆ. ಜಸ್ಮ ತಾಲೀಮು ಪ್ರಾರಂಭಿಸುವ ಮುನ್ನ “ನಟ ನಟಿಯರು ಬೇಕಿದ್ದಾರೆ, ನಾಟಕ ಪ್ರಯೋಗಕ್ಕೆ” ಎಂಬ ಮಾಹಿತಿ ಪತ್ರಿಕೆಯಲ್ಲಿ ಹಾಕಿಸಿದೆವು. 1973 ರಲ್ಲಿ ನಾವುಗಳು ಯೋಚನೆ ಮಾಡೋಕೂ ಸಾಧ್ಯವಿರದಷ್ಟು ಅಂದರೆ 100 ಕ್ಕೂ ಹೆಚ್ಚು ಜನ ಆಡಿಷನ್ ಗೆ ಬಂದರು.
ನಾಟಕ ಆಯಿತು. 50 ಶೋ ಭಜಾಯಿಸಿ ಬಿಟ್ಟಿವಿ. ಅದೂನು ಮ್ಯೂಸಿಕಲ್. ನಂತರ ಶಕಶೈಲೂಷರು ಬೆನಕ ತಂಡವಾಗಿ ಪರಿವರ್ತನೆಗೊಂಡಿತು. ಒಂದು ತಿಂಗಳು ಟೂರ್ ಹೋಯ್ತು. ಆಗ ಕಾರಂತರು ನನ್ನನ್ನು ಕರೆದರು. ಆಗ ಅವರ ಜೊತೆ ಬಹಳಷ್ಟು ನಾಟಕಗಳಲ್ಲಿ ಕೆಲಸ ಮಾಡಿದೆ. ಟಿಂಗರ್ ಬುಡ್ಡಣ್ಣ ನಾಟಕದಲ್ಲಿ ಕಾರಂತಣ್ಣಾನೆ ಮುದುಕ, ನಾನೇ ಮುದುಕಿ, ಜೆರ್ರಿ ಮಗ. “ಸಿದ್ಧತೆ” ನಾಟಕದಲ್ಲೂ ನಾವಿಬ್ಬರೇ ಗಂಡ ಹೆಂಡತಿ ಮೋಹನ್ ( ಈಗ ಕೋಕಿಲಾ ಮೋಹನ್) ಮಗ.
ನಾನು ಎನ್.ಎಸ್. ಡಿ ಯಿಂದ ಬಂದ ಮೇಲೆ ಎಲ್ಲ ತಂಡಗಳ ಜೊತೇನೂ ಕೆಲಸ ಮಾಡಿದೆ. ನಾನು ದೆಹಲಿಯಲ್ಲಿ ಯಾವ ಯಾವ ಪಾತ್ರ ಮಾಡಬೇಕೆಂದು ಆಸೆ ಪಟ್ಟಿದ್ದೆನೋ, ಮಿಸ್ ಮಾಡ್ಕೊಂಡಿದ್ದೆನೋ ಅವೆಲ್ಲವನ್ನೂ ಇಲ್ಲಿ ಪಡ್ಕೊಂಡೆ. ನಾನು ಮಾಡಿದ್ದೆಲ್ಲವೂ ಮೇಲ್ ಸ್ತರದಲ್ಲಿ ಅಭಿನಯ ಮತ್ತು ನಿರ್ದೇಶನ ಅಂತ ಅನ್ನಿಸಿದರೂ ಸಂಗೀತ ಅದರ ಜೊತೆ ಜೊತೆಗೇ ಹಾಸು ಹೊಕ್ಕೊಂಡು ಹೋಗಿದೆ.
ನನ್ನ ಪಾಡಿಗೆ ನಾನು ಸಂಗೀತವನ್ನು ನನ್ನೊಳಗೇ ಪ್ರಯೋಗ ಮಾಡ್ಕೋತಾ ಹೋಗಿದೀನಿ. ಜಸ್ಮಾ ಓಡನ್ ಸಂಪೂರ್ಣ ಜಾನಪದ, ತ್ರೀ ಪೆನ್ನಿ ಒಪೇರಾ ಪೂರಾ ಬ್ರೆಕ್ಟಿಯನ್. ಆಮೇಲೆ ಘಾಸಿರಾಂ ಕೊತ್ವಾಲ್ ಮಾಡಿದೆ. ಅದಕ್ಕೆ ಶ್ಯಾಮಲಾಜಿ ಭಾವೆ ಅವರನ್ನು ಸಂಗೀತ ಸಂಯೋಜಿಸಿ ಅಂತ ಕೇಳ್ಕೊಂಡೆ. ಅದೂನು ಪೂರಾ ಮ್ಯೂಸಿಕಲ್. ಚಿತ್ರಪಟದಲ್ಲಿ ಅಂಜನಾಪುರಿ ಅವರು ಮಧ್ಯಪ್ರದೇಶದ ಬುಂಡೇಲಿ ಅನ್ನೋ ಜಾನಪದ ಧಾಟಿಯಲ್ಲಿ ಸಂಗೀತ ನೀಡಿದ್ದಾರೆ.
ಸಿ. ಅಶ್ವಥ್ “ನಹಿ ನಹಿ ರಕ್ಷತಿ” ಗೆ , ಕಂಬಾರರು ಕರಿಮಾಯಿಗೆ ಸಂಗೀತ ನೀಡಿದ್ದಾರೆ. ಇತ್ತೀಚಿನ ಪೀಳಿಗೆಯ ಸುಮತಿ ಕೂಡ ಹೂವಿ ಮತ್ತು ಮಂಥರಾ ಗೆ ಸಂಗೀತ ನೀಡಿದ್ದಾರೆ. ನನ್ನ ನಾಟಕಗಳಿಗೆ ಬೇರೆ ಬೇರೆ ಸಂಗೀತ ನಿರ್ದೇಶಕರು ಸಂಗೀತ ಸಂಯೋಜನೆ ನೀಡೋದರಿಂದ ಯಾವಾಗಲೂ ಒಂದೇ ಥರಾ ಅನ್ನಿಸೋದಿಲ್ಲ. ನಾನು ಹೊಸದಾಗಿ ಕಲೀಬಹುದು. ನನ್ನ ತಂಡದ ಕಲಾವಿದರಿಗೂ ಹೊಸ ಹೊಸ ಅನುಭವ ಆಗುತ್ತೆ.
ಮೊದಲಿಗೆ ಕಂಪನೀಲಿ ಸಂಗೀತ ನಿರ್ದೇಶಕರು ಅಂತಾನೆ ಇರಲಿಲ್ಲ. ಹಾರ್ಮೋನಿಯಂ ಮೇಷ್ಟ್ರು ಅಂತ ಇರುತಿದ್ದರು. ಹಾಗೆ ಮೊಟ್ಟ ಮೊದಲಿಗೆ ಸಂಗೀತ ನಿರ್ದೇಶನ ಅಂತ ಮಾಡಿದ್ದು ಪಿ.ಕಾಳಿಂಗರಾಯರು. “ದಶಾವತಾರ” ನಾಟಕದಲ್ಲಿ ಅವರು ಹಾಡಿನ ಜೊತೆ ಬಿ.ಜಿ.ಎಂ ನುಡಿಸಿದಾಗ, ಹಾಡ್ತಿದ್ದ ನಟನಿಗೆ ಏನು ಮಾಡಬೇಕು ಅನ್ನೋ ಪ್ರಶ್ನೆ ಎದುರಾಯ್ತು. ಆಗ ನಟ ಎಚ್ಚೆತ್ತು ಬಿ.ಜಿ.ಎಂ ನಲ್ಲೂ ಅಭಿನಯಿಸಬೇಕಾಗಿ ಬಂದು ಅಭಿನಯಕ್ಕೊಂದು ಹೊಸತನ ಬಂತು. ತಿರುವು ಕೊಡ್ತು.
ಕಾಳಿಂಗರಾಯರು ಯಾವಾಗಲೂ ಹೇಳ್ತಿದ್ದರು. ” ಹಾಡುವಾಗ ಶಬ್ಧ ಸ್ಫುಟವಾಗಿದ್ದು, ಉಚ್ಚಾರಣೆ ಸರಿಯಾಗಿ ಹೇಳುವುದರ ಜೊತೆಗೆ ಕೇಳುವಂತೆ ಹಾಡಬೇಕು. ಶಬ್ಧವನ್ನು ಅರಿತು ನೋಡಿ, ಅನುಭವಿಸಿ ಹಾಡಬೇಕು” ಅಂತ. ಅವರ ಸಂಯೋಜನೆಯನ್ನು ಮೂರು ರೀತಿಯಲ್ಲಿ ನೋಡ್ತೀವಿ. ಶ್ಲೋಕಗಳನ್ನು ಸ್ಫುಟವಾಗಿ ಉಚ್ಚರಿಸುತ್ತಾ ಹಾಡುವುದು. ಇನ್ನೊಂದು ಅಲ್ಲಲ್ಲಿ ಹಿಂದೂಸ್ಥಾನಿಯ ಪಲಕುಗಳನ್ನು ಸೇರಿಸುತ್ತಿದ್ದರು. ಮತ್ತೆ ಜಾನಪದವನ್ನು ಬಳಸೋರು. ರಂಗಸಂಗೀತದ ಸ್ವರೂಪವೇ ಬೇರೆ. ಶಾಸ್ತ್ರೀಯ ಸಂಗೀತದ ಹಾಗೆ ಕಣ್ಣು ಮುಚ್ಚಿ ಹಾಡಲಾಗುವುದಿಲ್ಲ. ನಾಲ್ಕಾಣೆ ಕ್ಲಾಸಿಗೂ ಮುಟ್ಟುವ ಹಾಗೆ ಗಟ್ಟಿಯಾಗಿ ತೆರೆದ ಗಂಟಲಲ್ಲಿ ಹಾಡಬೇಕು. ರಂಗಭೂಮೀಲೂ ತಾಳ ಪಕ್ಕಾ ಇರಬೇಕು. ಶೃತಿ ಪಕ್ಕಾ ಇರಬೇಕು. ಜೊತೆಗೆ ಭಾವ ಸನ್ನಿವೇಶ ಬಹಳ ಮುಖ್ಯ ಆಗುತ್ತೆ.
ಕಾರಂತರನ್ನು ನಾವು ಅಧುನಿಕ ರಂಗಭೂಮಿಯ ಭೀಷ್ಮ ಅಂತ ಕರೀತೀವಿ. ಅವರು ಯಾವಾಗಲೂ ಹೇಳ್ತಿದ್ದರು. ಹಾಡು ಮಾತನಾಡಬೇಕು. ಮಾತು ಹಾಡಾಗಬೇಕು ಅಂತ. ಆಡಿದರೆ ಹಾಡಿದ ಹಾಗೆ ಕೇಳಿಸಬೇಕು. ಹಾಡಿದರೆ ಆಡಿದ ಹಾಗೆ ಇರಬೇಕು ಅಂತ. ಕಾರಂತರು ಹಾಡುಗಳಲ್ಲಿ ಹಾಡಿನ ಸಾಹಿತ್ಯ ಏನು ಹೇಳತ್ತೂ ಅದರ ಚಲನವಲನವನ್ನ ಅವಲಂಬಿಸಿರತ್ತೆ. ನೀರು ಅಂದ್ರೆ, ನೀರು ಹೇಗೆ ಹರಿಯತ್ತೆ, ಹ್ಯಾಗೆ ನಿಲ್ಲತ್ತೆ, ಹ್ಯಾಗೆ ಓಡತ್ತೆ, ಹ್ಯಾಗೆ ಸುರುಳಿ ಸುತ್ತತ್ತೆ ಅನ್ನೋದನ್ನು ಸಂಗೀತದ ಮೂಲಕ ಹೇಳ್ತಾರೆ. “ನೀರಿನ ಮೇಲೆ ಚಿತ್ರ ಕೆತ್ತಲಿಕ್ಕಾಗೋದಿಲ್ಲ…..” ಹಯವದನ ನಾಟಕದ ಈ ಹಾಡಿನಲ್ಲಿ ಸ್ಪಷ್ಟವಾಗಿ ಗೊತ್ತಾಗತ್ತೆ.
ಇನ್ನು ಕಂಬಾರರು ತಮ್ಮ ಹಾಡುಗಳನ್ನು ಅಂಶಗಣದಲ್ಲಿ ಬರೀತಾರೆ. ಅವರು ಯಾವಾಗಲೂ “ನಾನು ಅಂಶಗಣದಲ್ಲಿ ಬರೀತೀನಿ. ಅದನ್ನು ಹಾಡೋದು ಕಷ್ಟ. ಒಂದೇ ಉಸಿರಿನಲ್ಲಿ ಸಾಹಿತ್ಯಕ್ಕೆ ಧಕ್ಕೆ ಬಾರದ ಹಾಗೆ ಒಂದು ಸಾಲನ್ನು ಮುಗಿಸಬೇಕು. ಅದು ಅಂಶಗಣ” ಅಂತ ಹೇಳೋರು. “ಯವ್ವಾ…ಬ್ಯಾಟೀ…” ಹಾಡು ಅದಕ್ಕೆ ಉದಾಹರಣೆ. ಮತ್ತೊಂದು ” ಹೇ ಕುರುಬರಣ್ಣಾ….” ಹಾಡು. ಕಂಬಾರರ ಹಾಡುಗಳನ್ನು ಹಾಡಿದರೆ ಕೂತು ಹಾಡಲಿ, ನಿಂತು ಹಾಡಲಿ ಸುಸ್ತಾಗತ್ತೆ. ಉಸಿರಿಗೆ ಧ್ವನಿಗೆ ಎಕ್ಸರ್ಸೈಜ್ ಆಗೋ ತರಹದ ಹಾಡುಗಳು. ಉಸಿರು ಹಿಡಿದು ಹಾಡೋ ಹಾಡುಗಳು ಜೋಕುಮಾರ ಸ್ವಾಮಿ ನಾಟಕದಲ್ಲಿ. ಹಾಡು ಸಂಭಾಷಣೆ ಮತ್ತು ನೃತ್ಯ ಮೂರು ಮಿಲಿತವಾದ ಸುಂದರವಾದ ದೃಶ್ಯ ನಮ್ಮ ಜಾನಪದದಲ್ಲಿ ಇದೆ ಎಂದು ತೋರಿಸಿಕೊಟ್ಟವರು ಅವರು.
ಜನಪದದವರದ್ದಂತು ಅವರದೇ ಸೃಷ್ಟಿ. ಅಲ್ಲಿ ಆ ರಾಗ ಈ ರಾಗ ಅಂತ ಯಾವುದೂ ಇರಲ್ಲ. ಯಾವ ರಾಗದಿಂದ ಯಾವ ರಾಗಕ್ಕೆ ಬೇಕಾದರೂ ಹೋಗ್ತಾರೆ. ಆದರೆ ಲಯ ಮಾತ್ರ ಒಂದೇ ಇರುತ್ತೆ. ಅವರದೆ ರಾಗ ಸಂಯೋಜನೆ ಇಟ್ಕೊಂಡ “ಲಕ್ಷಾಪತಿ ರಾಜನ ಕಥೆ” ನಾಟಕ ಮಾಡಿದೆ. ಕಿಂದರಿ ಜೋಗೇರ ಆಟದ ಶೈಲಿ. ಅವರು ಏಕತಾರಿ, ಕಿನ್ನರ ವಾದ್ಯ, ದಮ್ಮಡಿ, ಗಗ್ಗರ ಮತ್ತು ತಾಳ ಇಷ್ಟು ವಾದ್ಯಗಳನ್ನು ಬಳಸ್ತಾರೆ ಅಷ್ಟೆ. ಶೃತಿಗೆ ಏಕತಾರಿ ಬಳಸ್ತಾರೆ. ಅವರೇನೇ ಮಾಡಿದರೂ ಶೃತಿ ಬಿಡಲ್ಲ. ನಾಲ್ಕು ಜನ ಇರ್ತಾರೆ. ಕಥೆ ಹೇಳಬೇಕಾದರೆ ಹುಂ..ಹುಂ…. ಅನ್ನೋ ಹಾಗೆ, ಆ….ಹೂಂ, ಆ……ಹೂಂ, ಅಂತಿರ್ತಾರೆ. ಇದೇ ಒಂದು ಶೃತಿ ಕೂಡಾ ಆಗತ್ತೆ.
ಇದನ್ನೇ ನಾವು ಲಕ್ಷಾಪತೀಲಿ ಮಾಡಿದ್ದು. ಈಗ ನಾಟಕಗಳಿಗೆ ಹಾರ್ಮೋನಿಯಂ ನುಡಿಸೋರು ಸಿಗೋದಿಲ್ಲ. ಈ ಕಾರಣಕ್ಕೆ ನಮಗೆ ಬೇರೆ ಬೇರೆ ರೀತಿಯ ಅನುಭವಗಳಾಗಿಬಿಟ್ಟಿದೆ. ಏನು ಮಾಡಬೇಕು ಅಂತ ಯೋಚಿಸಿದಾಗ ಜನಪದರ ಉದಾಹರಣೆ ನಮ್ಮೆ ಮುಂದಿತ್ತು. ಈಗ ಗದ್ದೇಲಿ ಕೆಲಸ ಮಾಡೋರು ಹಾಡ್ತಾರಲ್ಲ, ಅವರೇನು ಶೃತಿ ಪೆಟ್ಟಿಗೆ ಇಟ್ಕೋತಾರಾ? ಇಲ್ಲ. ಹಾಗಾಗಿ ನಾವೂನು ( ಸ್ಪಂದನ ತಂಡದವರು) ಅದೇ ರೀತಿ ಅಭ್ಯಾಸ ಮಾಡ್ಕೊಂಡಿದೀವಿ. ಮೊದ ಮೊದಲಿಗೆ ಕಷ್ಟ ಅನ್ನಿಸೋದು. ಶೃತಿ ಎತ್ತಿಕೊಡಬೇಕಾಗ್ತಿತ್ತು. ಈಗ ಎಲ್ಲರೂ ಅದಕ್ಕೇ ರೂಢಿ ಮಾಡ್ಕೊಂಡು ಇದಾರೆ.
ಇನ್ನು ನಮ್ಮ ತಾತ ವೀರಣ್ಣನವರು ಹಾಸ್ಯ ಅನ್ನೋದನ್ನು ಬಹಳ ಖುಷಿಯಾಗಿ ಮಾಡೋರು. ಹಾಡಿನಲ್ಲಿ ಹಾಸ್ಯ, ವ್ಯಂಗ್ಯ, ಲೆಕ್ಕಾಚಾರ ಇವನ್ನೆಲ್ಲ ರಂಗಭೂಮಿಗೆ ತಂದವರು ಅವರು. “ಪ್ರಭಾಮಣಿ ವಿಜಯ” ನಾಟಕದಲ್ಲಿ ವಿರೋಚನ ಪಾತ್ರದ ಒಂದು ಹಾಡಿದೆ. “ನಾನೇ ಪೋಗುವೆ” ಅನ್ನೋ ಹಾಡು. ಆ ಹಾಡನ್ನು ಕೇಳಿ ನಗದವರೇ ಇಲ್ಲ. ಇವರ ಪ್ರಭಾವ ಬಹುಶ: ಕಾರಂತರ ಮೇಲೂ ಬಿದ್ದಿರಬಹುದು. ಯಾಕೆಂದರೆ ಕಾರಂತರು ಮೊದಲಿಗೆ ನಮ್ಮ ಕಂಪನಿಯಲ್ಲೇ ಇದ್ದವರು. ಆ ಹಾಡಿನ ಛಾಯೆಯನ್ನು ನಾವು ಕಾರಂತರ ಹಯವದನ ನಾಟಕದ “ಗಜವದನಾ ಹೇರಂಭಾ” ಹಾಡಿನಲ್ಲಿ ಕಾಣಬಹುದು.
ಈಗ ರಂಗಭೂಮಿಗೆ ಬರುತ್ತಿರೋ ಹುಡುಗಿ ಸುಮತಿ. ಈಕೆ ಹಿಂದೂಸ್ಥಾನಿ ಸಂಗೀತ ಕಲ್ತಿದ್ದಾಳೆ. ಅವಳು ಸಂಯೋಜನೆ ಮಾಡಿರುವ ಹಾಡುಗಳು ಯಾವ ರೂಪ ತಗೋಳತ್ತೆ ಅನ್ನೋದು ಹಾಡ್ತಾ ಹಾಡ್ತಾ ಅರ್ಥವಾಗತ್ತೆ. ಈಕೆ ಕಾಳಿಂಗರಾಯರಿಗೆ ಮತ್ತು ಕಾರಂತರಿಗೆ ಹತ್ತಿರವಾಗ್ತಾಳೆ. ಆಗಲೇ ಹೇಳಿದೆನಲ್ಲಾ, ಕಾರಂತರು ಹೇಳ್ತಾರೆ ಅಂತ, ಹಾಡು ಮಾತಾಗಬೇಕು, ಮಾತು ಹಾಡಾಗಬೇಕು. ಅಂದರೆ ಹಾಡಿದರೆ ಆಡಿದ ಹಾಗೆ ಇರಬೇಕು , ಆಡಿದರೆ ಹಾಡಿದ ಹಾಗೆ ಇರಬೇಕು ಅನ್ನುವುದನ್ನು ನಾನು ಈಕೆಯಲ್ಲಿ ಕಾಣ್ತೀನಿ. ಇವಳು ಹಾಡಿನ ಜೊತೆ ಮಾತಾಡ್ತಾಳೆ. “ಮೋಡ ಒಡೀದೆ..ಮಳೆ ಹೆಂಗೆ ಬಂದಾವು…” ಹಾಡಿನಲ್ಲಿ ಗೊತ್ತಾಗತ್ತೆ.
ರಂಗಸಂಗೀತ ಶಾಸ್ತ್ರೀಯ ಸಂಗೀತ ಅಲ್ಲ. ಆದರೆ ಶಾಸ್ತ್ರೀಯ ಸಂಗೀತವೂ ಹೌದು. ರಂಗಸಂಗೀತ ರಂಗಭೂಮಿಯನ್ನು ಶ್ರೀಮಂತಗೊಳಿಸಿದೆ. ನಿನ್ನೊಳಗೆ ನಾನೋ, ನನ್ನೊಳಗೆ ನೀನೋ ಅನ್ನೋ ಹಾಗೆ ಸಂಗೀತ, ನೃತ್ಯ, ಅಭಿನಯ ಮೂರೂ ಮಿಲಿನವಾಗುವುದರ ಜೊತೆಯಲ್ಲಿ ಅನುಭವ, ಸಮಾಜದ ಅನುಭವ, ಚರಿತ್ರೆಯ ಅನುಭವ, ವ್ಯಕ್ತಿಯ ಅನುಭವ, ವ್ಯಕ್ತಿಯ ಪರಿಚಯ ಎಲ್ಲವೂ ಮಾಡಿಕೊಡುವಂತಹದ್ದು ರಂಗಸಂಗೀತ. ಇದು ಸಮುದ್ರ ಇದ್ದ ಹಾಗೆ. ಎಷ್ಟು ಕೊಟ್ಟರೂ ತಗೊಳ್ಳುತ್ತೆ. ಹಾಗೇ ನಮಗೂ ಕೊಡುತ್ತೆ.
ನಮಸ್ಕಾರ.
ಶರಣು ಶರಣಾರ್ಥಿ.





0 Comments