ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿ ಎ ವಿವೇಕ ರೈ ಕಂಡಂತೆ ‘ಸೋನ್ಸ್ ಫಾರ್ಮ್’

ಬಿ ಎ ವಿವೇಕ ರೈ

ನಿಮ್ಮ ‘ಕರ್ನಾಟಕ ಕೃಷಿ ಕಥನ ಮಾಲಿಕೆ’ಯ ಹೊಸ ಪುಸ್ತಕ ‘ಎಲ್ ಸಿ ಸೋನ್ಸ್ ಬಿತ್ತಿದ ಫಲಪ್ರಪಂಚ’ ಓದಿ ಮುಗಿಸಿದೆ. ಈ ಮಾಲಿಕೆಯ ‘ಚೌಟರ ತೋಟ’ ದ ಬಳಿಕ ಇನ್ನೊಂದು ವಿಶಿಷ್ಟ ಕೃತಿಯನ್ನು ರಚಿಸಿದ್ದೀರಿ. ಡಾ.ಡಿ ಸಿ ಚೌಟರ ಹಾಗೆಯೇ ಡಾ.ಎಲ್ ಸಿ ಸೋನ್ಸ್ ಅವರು ನನಗೆ ಸುಮಾರು ಐವತ್ತು ವರ್ಷಗಳಿಂದ ಪರಿಚಿತರು. ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿ ಅವರ ಫಾರ್ಮ್ ಗೆ ನಾನು ಮೊದಲು ಹೋದ ಹಾಗೆ ನೆನಪು. ಅದು ಅನಾನಾಸು ಬೆಳೆಯುತ್ತಿದೆ ಕಾಲ. ಆಮೇಲೆ ಮೂಡಬಿದ್ರೆ -ಕಾರ್ಕಳ ನಡುವಿನ ಪ್ರಯಾಣಗಳಲ್ಲಿ ಅವರ ಫಾರ್ಮ್ ಗೆ ಒಳಹೊಕ್ಕು ಅವರನ್ನು ಮಾತಾಡಿಸಿದ ಸಂದರ್ಭಗಳು ಸಾಕಷ್ಟು ಇವೆ. ಮಂಗಳೂರು ವಿವಿಯ ಸಸ್ಯವಿಜ್ಞಾನ ವಿಭಾಗದ ಪ್ರೊ.ಕೆ ಎಂ ಕಾವೇರಿಯಪ್ಪನವರ ಜೊತೆಗೆ, ಜರ್ಮನಿಯ ಪ್ರೊ.ಹೈದ್ರೂನ್ ಬ್ರೂಕ್ನರ್, ಪ್ರೊ.ಕಾರಿನ್ ಸ್ಟೈನರ್ ಜೊತೆಗೆ ಸೋನ್ಸ್ ಫಾರ್ಮ್ ನಲ್ಲಿ ಅಡ್ಡಾಡಿದ ನೆನಪುಗಳು ಇವೆ. ಮೂಡಬಿದರೆಯ ಸಮಾಜಮಂದಿರದಲ್ಲಿ ನಾನು ಅತಿಥಿಯಾಗಿ ಭಾಷಣಮಾಡಿದ ಸಂದರ್ಭಗಳಲ್ಲಿ ಎದುರು ಸಾಲಿನಲ್ಲಿ ಕುಳಿತು, ಬಳಿಕ ಪ್ರೀತಿಯಿಂದ ಮಾತಾಡುತ್ತಿದ್ದ ಹಿರಿಯರು ಎಲ್ ಸಿ ಸೋನ್ಸ್. ಸದಾ ನಗುಮುಖದ, ಆತ್ಮೀಯತೆಯ ಸ್ವಭಾವದ, ಸರಳತೆಯ ಸಾಕಾರ ಮೂರ್ತಿ ಡಾ.ಎಲ್ ಸಿ ಸೋನ್ಸ್ .

‘ಎಲ್ ಸಿ ಸೋನ್ಸ್ ಬಿತ್ತಿದ ಫಲಪ್ರಪಂಚ’- ಕನ್ನಡ ಸಾಹಿತ್ಯದಲ್ಲಿ ಹೊಸಮಾದರಿಯ ಒಂದು ಆಹ್ಲಾದಕರ ಕೃತಿ. ಇದರಲ್ಲಿ ಎಲ್ ಸಿ ಸೋನ್ಸ್ ಅವರ ಜೀವನಚರಿತ್ರೆಯ ವಿಶಾಲ ಕ್ಯಾನ್ವಾಸಿನ ಕಥನವಿದೆ. ‘ಸೋನ್ಸ್’ ಎನ್ನುವುದು ಒಂದು ಕುಟುಂಬದ ಹೆಸರಿನಿಂದ ಆರಂಭವಾಗಿ ಸಸ್ಯಲೋಕದ ಸಾಹಸಗಾಥೆಯ ಕಾವ್ಯದ ರೂಪಕವಾಗಿ ಬಿಂಬಿತವಾಗಿದೆ . ಎಲ್ ಸಿ ಸೋನ್ಸ್ ಅವರ ಶಿಕ್ಷಣದ ಮೆಟ್ಟಿಲುಗಳ ಪಯಣವೇ ಒಂದು ರೋಮಾಂಚಕ ಗಾಥೆ. ಅವರ ಬದುಕಿನ ಚಿತ್ರಣವನ್ನು ಓದುತ್ತಿದ್ದಾಗ ‘ಸಂಶೋಧನೆ’ ಎನ್ನುವ ಪರಿಭಾಷೆಗೆ ಹೊಸ ಅರ್ಥಗಳು ಪ್ರಾಪ್ತವಾಗುತ್ತವೆ .ಅಕಾಡೆಮಿಕ್ ವಲಯದ ಅನ್ವೇಷಣೆಯ ಗುಣವು ಬದುಕಿನ ಪ್ರಯೋಗಶಾಲೆಯಲ್ಲಿ ನಡೆಸುವ ಹೊಸ ಪ್ರಯೋಗಗಳ ಬಹುರೂಪಿ ವಿನ್ಯಾಸಗಳು ಇಲ್ಲಿ ಅನಾವರಣಗೊಂಡಿವೆ. ‘ಕೃಷಿ’ ಮತ್ತು ‘ತೋಟಗಾರಿಕೆ’ ಎಂಬ ಎರಡು ಜ್ಞಾನಶಿಸ್ತುಗಳು ಇಲ್ಲಿ ಸಮೀಕರಣಗೊಂಡು ‘ಮಣ್ಣು’ ಮತ್ತು ‘ನೀರು’ ಎಂಬ ಮೂಲಧಾತುಗಳ ಬಗ್ಗೆ ಹೊಸ ಚಿಂತನೆಗಳನ್ನು ಕೊಡುತ್ತವೆ.

ಡಾ.ಎಲ್ ಸಿ ಸೋನ್ಸ್ ಅವರು ತಮ್ಮ ಫಾರ್ಮ್ ನಲ್ಲಿ ಕಾಲಕಾಲಕ್ಕೆ ಬೇರೆಬೇರೆ ದೇಶಗಳಿಂದ ಪ್ರದೇಶಗಳಿಂದ ತಂದು ನೆಟ್ಟು ಬೆಳೆಸಿದ ವೈವಿಧ್ಯಮಯ ಸಸ್ಯಗಳು ಬಹುರೂಪಿ ಚಿಂತನೆಯ ಪ್ರತಿರೂಪಗಳಾಗಿವೆ. ಅನಾನಾಸಿನಿಂದ ತೊಡಗಿ, ಮಾವು, ಹಲಸು, ರಂಬುಟಾನ್, ಮ್ಯಾಂಗೋಸ್ಟಿನ್, ತೆಂಗು, ಬಿದಿರು ಸಹಿತ ಸಸ್ಯಗಳ ವಲಸೆ ಸಂಸ್ಕೃತಿಗೆ ಅವಕಾಶ ಕಲ್ಪಿಸಿದ್ದಾರೆ. ಇದನ್ನು ತುಳುನಾಡಿನ ಸಂಸ್ಕೃತಿಯ ‘ವಸ್ತುರೂಪ’ (T S Eliot ಬಳಸುವ ‘Objective Correlative’ ಪರಿಭಾಷೆಯ ಅರ್ಥದಲ್ಲಿ) ಎಂದು ಗ್ರಹಿಸಬಹುದು. ತುಳುನಾಡಿನಲ್ಲಿ ಕ್ರಿಸ್ತಶಕದ ಆರಂಭದ ಕಾಲದಿಂದಲೂ ಬೇರೆ ಬೇರೆ ದೇಶಗಳಿಂದ ಮತ್ತು ಹೊರಗಿನ ಪ್ರದೇಶಗಳಿಂದ ಅನೇಕ ಸಮುದಾಯದವರು ವಲಸೆ ಬಂದು ನೆಲಸಿದ್ದಾರೆ.

ಆರಂಭದ ಕಾಲಘಟ್ಟದಲ್ಲಿ ಸಮುದ್ರದ ಮಾರ್ಗವಾಗಿಯೇ ಜನರು ಇಲ್ಲಿಗೆ ಬಂದು ವಾಸ್ತವ್ಯ ಮಾಡಿದವರು, ವೃತ್ತಿಗಳನ್ನು ಕೈಕೊಂಡವರು. ಸುಮಾರು ಎರಡು ಸಾವಿರ ವರ್ಷಗಳಿಂದ ತುಳುನಾಡಿಗೆ ಇಂತಹ ವಲಸೆಯ ಪ್ರಕ್ರಿಯೆ ನಡೆಯುತ್ತಾ ಬಂದಿದೆ. ಅವರೆಲ್ಲರೂ ಸ್ಥಳೀಯ ಸಂಸ್ಕೃತಿಯ ಜೊತೆಗೆ ತಮ್ಮ ಭಾಷೆ ಮತ್ತು ಬದುಕನ್ನು ಕಟ್ಟಿಕೊಳ್ಳುತ್ತ ಬಂದಿದ್ದಾರೆ. ಇದನ್ನು ಸಮನ್ವಯ, ಸಹಬಾಳ್ವೆ, ಬಹುತ್ವ -ಇತ್ಯಾದಿ ಯಾವ ಹೆಸರಲ್ಲೂ ಕರೆಯಬಹುದು. ಇಂತಹ ವಿದ್ಯಮಾನ (Phenomenon) ದ ಸಸ್ಯಶಾಸ್ತ್ರೀಯ ರೂಪಕವೇ ‘ಸೋನ್ಸ್ ಫಾರ್ಮ್’.
ಆಧುನಿಕ ಕಾಲಘಟ್ಟದ ಒಂದು ನೇತ್ಯಾತ್ಮಕ ವಾಸ್ತವತೆ ಎಂದರೆ ಪರಂಪರೆಯ ಯಾವುದೇ ವೃತ್ತಿಯನ್ನು ಆ ಕುಟುಂಬದಲ್ಲಿ ಮುಂದುವರಿಸುವವರು ಇಲ್ಲದೆ, ಅದು ವ್ಯಕ್ತಿಯೊಬ್ಬರ ಬದುಕಿನೊಂದಿಗೆ ಕೊನೆಯಾಗುವುದು. ವಿದ್ವತ್ತು, ಸಾಹಿತ್ಯ, ಕಲೆ, ವಿಜ್ಞಾನ -ಇವುಗಳ ಸಾಲಿನಲ್ಲಿ ಮೊದಲನೆಯ ಸ್ಥಾನದಲ್ಲಿ ನಿಲ್ಲುವುದು ಕೃಷಿ. ಅದರ ಕಾರಣಗಳನ್ನು ಈ ಪುಸ್ತಕದಲ್ಲಿ ವಾಸ್ತವಿಕ ನೆಲೆಯಲ್ಲಿ ವಿವರಿಸಲಾಗಿದೆ. ಆದರೆ ‘ಸೋನ್ಸ್ ಫಾರ್ಮ್’ ಬಗ್ಗೆ ಹಾಗೆ ಆಗುವುದಿಲ್ಲ ಎನ್ನುವುದು ಅವರ ಮಗ ಮತ್ತು ಕುಟುಂಬದವರು ಎಲ್ ಸಿ ಸೋನ್ಸ್ ಅವರ ಇಳಿವಯಸ್ಸಿನ ವೇಳೆಗೇ ಜವಾಬ್ದಾರಿಯನ್ನು ಪ್ರೀತಿಯಿಂದ ಕೈಗೆತ್ತಿಕೊಂಡಿರುವುದು ಒಂದು ಅದ್ಭುತ ಮತ್ತು ಅಚ್ಚರಿ.

ಈ ಪುಸ್ತಕದಲ್ಲಿ ಡಾ. ಎಲ್ ಸಿ ಸೋನ್ಸ್ ಅವರ ಬಹುಮುಖಿ ಆಸಕ್ತಿಗಳ ಒಳನೋಟಗಳಿವೆ. ಅವರದ್ದೇ ಆದ ನಂಬಿಕೆಗಳ ಪ್ರಸ್ತಾವಗಳಿವೆ. ಅವುಗಳ ಜೊತೆಗಿನ ಅಧ್ಯಾತ್ಮದ ಸಂಬಂಧದ ಪ್ರಸ್ತಾವ ಇದೆ. ಭೂವಿಜ್ಞಾನದ ಹೊಸ ಶೋಧಗಳು ಇವುಗಳಿಗೆ ಬೇರೆಯದೇ ಆದ ವಿವರಣೆಯನ್ನು ಕೊಡಬಹುದು. ಸೋನ್ಸ್ ಅವರ ಸಾಮಾಜಿಕ ಮುಖವನ್ನು ಪರಿಚಯಿಸಿದ್ದು ಈ ಕೃತಿಗೆ ಹೊಸ ಆಯಾಮವನ್ನು ತಂದುಕೊಟ್ಟಿದೆ. ರೋಟರಿ ಕ್ಲಬ್ ನ ಮೂಲಕ ಕಡಲಕೆರೆಯ ಪುನರುಜ್ಜೀವನವು ಅಂತಹ ಒಂದು ಮಹತ್ ಸಾಧನೆ. ‘ನೀರಿಗಾಗಿ ಜೀರ್ಣೋದ್ಧಾರ’ ಪರಿಕಲ್ಪನೆಗೆ ಇದೊಂದು ಆದರ್ಶಪ್ರಾಯವಾದ ನಿದರ್ಶನ.

ಡಾ.ಎಲ್ ಸಿ ಸೋನ್ಸ್ ಅವರನ್ನು ಕುರಿತು, ಅವರ ಕೃಷಿಯ ಸಾಹಸದ ಕತೆಗಳನ್ನು ಕುರಿತು ಅವರ ಸಂಪರ್ಕಕ್ಕೆ ಬಂದ ಕೃಷಿಕರು ಕೃಷಿ ತಜ್ಞರು ಕಥಿಸಿದ್ದಾರೆ. ಸೋನ್ಸ್ ಅವರ ಪತ್ನಿ ಶ್ರೀಮತಿ ಬೆನಿಟಾ ಸೋನ್ಸ್, ತಮ್ಮ ಇರ್ವಿನ್ ವಿವೇಕಾನಂದ ಸೋನ್ಸ್, ಮಕ್ಕಳು, ಮೊಮ್ಮಕ್ಕಳು ಪ್ರೀತಿಯಿಂದ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ದುಃಖದ ಸಂಗತಿ ಎಂದರೆ ಡಾ.ನರೇಂದ್ರ ರೈ ದೇರ್ಲ ಅವರ ಈ ಪುಸ್ತಕ ಪ್ರಕಟ ಆಗುವಾಗ ಮೇಲೆ ಪ್ರಸ್ತಾವಿಸಿದ ಎಲ್ಲರ ಜೊತೆಗೆ ಇದ್ದ ಡಾ.ಎಲ್ ಸಿ ಸೋನ್ಸ್ ಅವರು ಈ ಪುಸ್ತಕ ಬಿಡುಗಡೆಯ ವೇಳೆಗೆ ತಮ್ಮ ಮಣ್ಣಿನಲ್ಲಿ ಲೀನವಾದದ್ದು. ಆದರೆ ಈ ನೋವಿನ ನಡುವೆ ಕೂಡಾ ಡಾ. ಎಲ್ ಸಿ ಸೋನ್ಸ್ ಅವರು ‘ಸೋನ್ಸ್ ಫಾರ್ಮ್’ನ ಗಿಡ ಮರ ಬಳ್ಳಿ ಕಾಯಿ ಹಣ್ಣುಗಳಲ್ಲಿ ಜೀವಂತವಾಗಿ ಇರುತ್ತಾರೆ. ದೇರ್ಲ ಅವರ ಈ ಪುಸ್ತಕದಲ್ಲಿ ನಾವು ಅವರನ್ನು ಮತ್ತೆ ಮತ್ತೆ ಚಿಗುರುವ ಕಲ್ಪವೃಕ್ಷದಂತೆ ಕಾಣಬಹುದು.

‍ಲೇಖಕರು avadhi

25 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading