ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿ ಎ ವಿವೇಕ ರೈ ಕಂಡಂತೆ ಪ್ರೊ ಎಚ್ ಜೆ ಲಕ್ಕಪ್ಪ ಗೌಡರು

ಡಾ ಬಿ ಎ ವಿವೇಕ ರೈ 

೧೯೬೮ರಲ್ಲಿ ಮಂಗಳೂರಿನಲ್ಲಿ ಮೈಸೂರು ವಿಶ್ವವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ ಆರಂಭವಾದಾಗ ಕನ್ನಡ ವಿಭಾಗಕ್ಕೆ ಪ್ರೊ .ಎಸ್ ವಿ ಪರಮೇಶ್ವರ ಭಟ್ಟರ ಜೊತೆಗೆ ಅಧ್ಯಾಪಕರಾದ ಬಂದ ಎಚ್ ಜೆ ಲಕ್ಕಪ್ಪ ಗೌಡರು ನನ್ನ ಗುರುಗಳು ಮೊನ್ನೆ ನಮ್ಮನ್ನು ಅಗಲಿದರು. (೮ ಮೇ ೧೯೩೯ -೨೬ ಜುಲೈ ೨೦೨೧). ಮಂಗಳೂರು ಸ್ನಾತಕೋತ್ತರ ಕೇಂದ್ರದಲ್ಲಿ ಮೊದಲ ತಂಡದ (೧೯೬೮-೭೦) ಕನ್ನಡ ಎಂಎ ವಿದ್ಯಾರ್ಥಿಯಾಗಿ ಇದ್ದ ನನಗೆ ಲಕ್ಕಪ್ಪ ಗೌಡರು ಗುರು, ಮಾರ್ಗದರ್ಶಕ, ಬಂಧು ಎಲ್ಲವೂ ಆಗಿದ್ದರು.

ದಕ್ಷಿಣ ಕನ್ನಡಜಿಲ್ಲೆಯ ಸಾಹಿತ್ಯದ ಇತಿಹಾಸದಲ್ಲಿ ೧೯೬೮ರಿಂದ ೧೯೭೪ ರ ಕಾಲವನ್ನು ಎಸ್ ವಿ ಪರಮೇಶ್ವರ ಭಟ್ಟರ (ಎಸ ವಿ ಪಿ) ಯುಗ ಎಂದು ಕರೆಯುತ್ತಾರೆ. ಆಗ ಎಸ ವಿ ಪಿ ಅವರೇ ಹೇಳುತ್ತಿದ್ದ ಹಾಗೆ- ರಾಮನಿಗೆ ಭರತ ಹೇಗೆಯೋ ಪರಮೇಶ್ವರ ಭಟ್ಟರಿಗೆ ಲಕ್ಕಪ್ಪ ಗೌಡರು ಹಾಗೆ.

ಲಕ್ಕಪ್ಪ ಗೌಡರು ೧೯೬೮ರ ನವಂಬರದಲ್ಲಿ ನಮ್ಮ ಕನ್ನಡ ವಿಭಾಗಕ್ಕೆ ಉಪನ್ಯಾಸಕರಾಗಿ ಬಂದಾಗ ಅವರಿಗೆ ೨೯ ರ ತಾರುಣ್ಯದ ಹರಯ. ಮೈಸೂರು ವಿವಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನಾ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಅವರಿಗೆ ಭಡ್ತಿ ನೀಡಿ ಉಪನ್ಯಾಸಕರಾಗಿ ಮಂಗಳೂರು ಕೇಂದ್ರಕ್ಕೆ ಕಳುಹಿಸಿದ್ದರು.

ನಮ್ಮ ಕನ್ನಡ ವಿಭಾಗ ೧೯೬೮ರಲ್ಲಿ ಮಂಗಳೂರಿನ ಕರಂಗಲಪಾಡಿಯ ಹಳೆಯ ಕಟ್ಟಡದಲ್ಲಿ ಆರಂಭವಾಗಿ ಒಂದೂವರೆ ವರ್ಷಗಳ ಕಾಲ ಪ್ರೊ. ಎಸ್ ವಿ ಪಿ ಮತ್ತು ಲಕ್ಕಪ್ಪ ಗೌಡರು ಇಬ್ಬರೇ ಅಧ್ಯಾಪಕರು ಎರಡು ವರ್ಷಗಳ ಎಂಎ ಯ ಎಲ್ಲ ವಿಷಯಗಳನ್ನೂ ಪಾಠಮಾಡಬೇಕಾಗಿತ್ತು. ಲಕ್ಕಪ್ಪ ಗೌಡರು ಮೊದಲನೆಯ ವರ್ಷ ನಮಗೆ ಪಾಠಮಾಡಿದ್ದು ಪಂಪ ಭಾರತವನ್ನು. ಅವರದ್ದು ಕಂಚಿನ ಕಂಠ, ಪುಂಖಾನುಪುಂಖದ ಪದಜೋಡಣೆ ಮತ್ತು ಗಂಭೀರವಾದ ವಾಕ್ ಸರಣಿ. ಕನ್ನಡ ಭಾಷೆಯಲ್ಲಿ ಅಷ್ಟೊಂದು ಪದ ಸಂಪತ್ತು ಮತ್ತು ಅರ್ಥ ವೈವಿಧ್ಯ ಇದೆ ಎನ್ನುವುದನ್ನು ಬೆರಗಿನಿಂದ ನಾವು ಗ್ರಹಿಸಿದ್ದು ಅವರ ಪಾಠಗಳನ್ನು ಕೇಳಿ.

ಪಂಪ ಭಾರತದ ಬಗ್ಗೆ ಮುಂದೆ ನನಗೆ ಆಸಕ್ತಿ ಬೆಳೆಯಲು ಲಕ್ಕಪ್ಪ ಗೌಡರ ಪಾಠಗಳು ಪ್ರೇರಣೆ. ಅದೇ ವರ್ಷ ಅವರು ನಮಗೆ ಕೇಶಿರಾಜನ ಶಬ್ದಮಣಿದರ್ಪಣ ಮತ್ತು ಕನ್ನಡ ಭಾಷೆಯ ಚರಿತ್ರೆಯನ್ನೂ ಪಾಠಮಾಡುತ್ತಿದ್ದರು. ಸಾಹಿತ್ಯ ಮತ್ತು ಶಾಸ್ತ್ರ ವಿಷಯಗಳಲ್ಲಿ ಅವರಿಗೆ ಸಮಾನವಾದ ಪಾಂಡಿತ್ಯವಿತ್ತು. ಎಂಎ ಎರಡನೆಯ ವರ್ಷ ಅವರು ನಮಗೆ ಕನ್ನಡ ಛಂದಸ್ಸು, ಸಾಹಿತ್ಯ ವಿಮರ್ಶೆ ಮತ್ತು ವಚನ ಸಾಹಿತ್ಯದ ಪಠ್ಯಗಳನ್ನು ಬೋಧಿಸಿದರು. ಅನೇಕ ಪಾಶ್ಚಾತ್ಯ ವಿಮರ್ಶಕರ ಹೆಸರುಗಳನ್ನು ನಾನು ಮೊದಲು ಕೇಳಿದ್ದು ಅವರ ತರಗತಿಗಳಲ್ಲಿ. ಬಹಳ ಕ್ಲಿಷ್ಟವಾದ ವ್ಯಾಕರಣ ಮತ್ತು ಛಂದಸ್ಸು ವಿಷಯಗಳನ್ನು ಅವರು ವಿವರಿಸುತ್ತಿದ್ದ ರೀತಿ, ವಿಜ್ಞಾನ ಪದವೀಧರರಾಗಿ ಕೇವಲ ಭಾಷಾ ವಿಷಯವಾಗಿ ಓದಿದ ನನ್ನಂಥವರಿಗೆ, ಮನಂಬುಗುವ ವಿಶಿಷ್ಟ ಮಾದರಿಯಾಗಿತ್ತು .

ಮೊದಲನೆಯ ವರ್ಷ ನಾವು ವಿದ್ಯಾರ್ಥಿಗಳು ಎಸ್ ವಿ ಪಿ ಮತ್ತು ಲಕ್ಕಪ್ಪ ಗೌಡರ ನೇತೃತ್ವದಲ್ಲಿ ಮೈಸೂರಿಗೆ ಪ್ರವಾಸ ಹೋದೆವು. ಅಲ್ಲಿ ‘ಪ್ರಬುದ್ಧ ಕರ್ನಾಟಕ’ ಪತ್ರಿಕೆಯ ಚಿನ್ನದ ಹಬ್ಬದಲ್ಲಿ ಭಾಗವಹಿಸಿದೆವು. ಕುವೆಂಪು ಅವರನ್ನು ನಾನು ಮೊದಲು ಕಂಡದ್ದು ಆ ಸಂದರ್ಭದಲ್ಲಿ. ಹಿರಿಯ ಸಾಹಿತಿ ಹಾಗೂ ಸಹಕಾರಿ ಧುರೀಣ ಏರ್ಯ ಲಕ್ಷ್ಮೀನಾರಾಯಣ ಆಳ್ವರು ನಮ್ಮ ಕನ್ನಡ ವಿಭಾಗದ ಹಿತೈಷಿಗಳಾಗಿ ಪ್ರೋತ್ಸಾಹ ಕೊಡುತ್ತಿದ್ದುದರಿಂದ ಅವರ ನೇತೃತ್ವದಲ್ಲಿ ೧೯೬೯ರ ಫೆಬ್ರವರಿಯಲ್ಲಿ ಮಂಗಳೂರು ಪುರಭವನದಲ್ಲಿ ನಡೆದ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದಲ್ಲಿ ಎಸ್ ವಿ ಪಿ ಅವರ ಜೊತೆಗೆ ಲಕ್ಕಪ್ಪ ಗೌಡರು ಹಗಲು ರಾತ್ರಿ ಸಂಘಟಕರಾಗಿ ದುಡಿದದ್ದನ್ನು ವಿದ್ಯಾರ್ಥಿಯಾಗಿ ಕಂಡು ನಾನು ಬೆರಗಾಗಿದ್ದೇನೆ.

೧೯೭೦ರಲ್ಲಿ ನನ್ನ ಎಂಎ ಪದವಿ ಮುಗಿಸಿ ಅದೇ ಕನ್ನಡ ವಿಭಾಗದಲ್ಲಿ ನಾನು ಉಪನ್ಯಾಸಕನಾಗಿ ಸೇರಿದ ಬಳಿಕ ನನಗೆ ಗುರುಗಳಾದ ಲಕ್ಕಪ್ಪ ಗೌಡರ ನಿಕಟ ಸಂಪರ್ಕ ದೊರೆಯಿತು. ಕನ್ನಡ ವಿಭಾಗದಲ್ಲಿ ನಾವು ನಾಲ್ಕು ಜನ ಅಧ್ಯಾಪಕರು ಪ್ರೊ. ಎಸ್ ವಿ ಪರಮೇಶ್ವರ ಭಟ್ಟರು, ಎಚ್ ಜೆ ಲಕ್ಕಪ್ಪ ಗೌಡರು, ಗುಂಡ್ಮಿ ಚಂದ್ರಶೇಖರ ಐತಾಳರು ಮತ್ತು ನಾನು – ಎಸ್ ವಿ ಪಿ ಕರ್ಣಧಾರತ್ವದಲ್ಲಿ ಬಹುರೂಪಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಕೆಲಸಗಳನ್ನು ಮಾಡಿದೆವು. ಮನೆ ಮನೆಗೆ ಸರಸ್ವತಿ, ಕವಿ ಪೂಜೆ, ಸಾಹಿತಿಗಳ ಭಾವಚಿತ್ರ ಅನಾವರಣ, ಸಾಹಿತ್ಯ ಉಪನ್ಯಾಸಗಳು, ಸಾಹಿತಿ ಕಲಾವಿದರ ಸನ್ಮಾನ, ಗ್ರಂಥ ಪ್ರಕಾಶನ ಮತ್ತು ಪುಸ್ತಕ ಬಿಡುಗಡೆ, ವಿದ್ಯಾರ್ಥಿ ಪ್ರತಿಭಾ ಪ್ರದರ್ಶನ, ಯಕ್ಷಗಾನ ತಾಳಮದ್ದಳೆ ಮತ್ತು ಬಯಲಾಟಗಳ ಪ್ರದರ್ಶನ, ಕಾಲೇಜು ವಿದ್ಯಾರ್ಥಿಗಳಿಗೆ ಯಕ್ಷಗಾನ ಬಯಲಾಟ ಸ್ಪರ್ಧೆ – ಹೀಗೆ ನಮ್ಮ ಕನ್ನಡ ವಿಭಾಗದಲ್ಲಿ ನಿತ್ಯೋತ್ಸವ ನಡೆಯುತ್ತಿತ್ತು.

ನಾವು ನಾಲ್ವರು ಅಧ್ಯಾಪಕರ ಹೆಸರಿನ ಮೊದಲ ಅಕ್ಷರಗಳ ಜೋಡಣೆಯ ‘ಪಲಚಂವಿ ಪ್ರಕಾಶನ’ದಲ್ಲಿ ನಮ್ಮ ಪುಸ್ತಕಗಳ ಪ್ರಕಟಣೆ ಮಾಡಿದೆವು. ಅದರಲ್ಲಿ ಲಕ್ಕಪ್ಪ ಗೌಡರ ಕತೆಗಳ ಸಂಕಲನ ‘ಹೊನ್ನಾರು’೧೯೭೦ರಲ್ಲಿ ಪ್ರಕಟವಾಯಿತು. ಕುವೆಂಪು ಅವರ ೬೭ನೆಯ ಹುಟ್ಟುಹಬ್ಬದ ನೆನಪಿನಲ್ಲಿ ನಮ್ಮ ಕನ್ನಡ ವಿಭಾಗದ ವಿದ್ಯಾರ್ಥಿಗಳು ಕುವೆಂಪು ಸಾಹಿತ್ಯದ ಬಗ್ಗೆ ಬರೆದ ಲೇಖನಗಳ ಸಂಕಲನ ‘ರಸಋಷಿ’ಯನ್ನು ಸಂಪಾದಿಸಿದವರು ಲಕ್ಕಪ್ಪ ಗೌಡರು (ಕನ್ನಡ ಸಂಘ, ಮಂಗಳಗಂಗೋತ್ರಿ, ೧೯೭೨). ಕನ್ನಡ ವಿಭಾಗದ ನಾವು ಮೂವರು ಅಧ್ಯಾಪಕರು -ಲಕ್ಕಪ್ಪ ಗೌಡರು, ಚಂದ್ರಶೇಖರ ಐತಾಳರು ಮತ್ತು ನಾನು -ಸಂಪಾದಕರಾಗಿ ‘ಮುಂಗಾರು’ ಎಂಬ ಸಾಹಿತ್ಯಕ ತ್ರೈಮಾಸಿಕ ಪತ್ರಿಕೆಯನ್ನು ೧೯೭೨ರಲ್ಲಿ ಆರಂಭಿಸಿ ಮೂರು ಸಂಚಿಕೆಗಳನ್ನು ಹೊರತಂದೆವು.

ನಮ್ಮ ಮಂಗಳ ಗಂಗೋತ್ರಿ ಕನ್ನಡ ಸಂಘದ ವತಿಯಿಂದ ಪ್ರೊ. ಎಸ್ ವಿ ಪಿ ಅವರ ಆಸಕ್ತಿಯ ಮಹೋನ್ನತ ಕಾರ್ಯಕ್ರಮ ಯಕ್ಷಗಾನದ ಹಿರಿಯ ಕಲಾವಿದರಿಗೆ ಸನ್ಮಾನ ಮತ್ತು ಬಯಲಾಟ ಪ್ರದರ್ಶನ ೧೯೭೩ರ ಜುಲೈ ೨೧ರಂದು ಮಂಗಳೂರಿನ ಪುರಭವನದಲ್ಲಿ ನಡೆಯಿತು. ಪ್ರಸಂಗ : ನರಕಾಸುರ ಮೋಕ್ಷ , ದಮಯಂತಿಯ ಪುನಃ ಸ್ವಯಂವರ, ಭೀಷ್ಮ ಪರ್ವ. ಭಾಗವತರು ದಾಮೋದರ ಮಂಡೆಚ್ಚ. ವೇಷಧಾರಿಗಳು : ಮಲ್ಪೆ ಶಂಕರನಾರಾಯಣ ಸಾಮಗ, ಶೇಣಿ ಗೋಪಾಲಕೃಷ್ಣ ಭಟ್ಟ, ಅಳಕೆ ರಾಮಯ್ಯ ರೈ, ರಾಮದಾಸ ಸಾಮಗ, ಕದ್ರಿ ವಿಷ್ಣು, ಕೋಳ್ಯೂರು ರಾಮಚಂದ್ರ ರಾವ್, ಮಿಜಾರು ಅಣ್ಣಪ್ಪ. ಈ ಕಾರ್ಯಕ್ರಮದ ಸ್ವಾಗತ ಭಾಷಣ ಮಾಡಿದವರು ಎಚ್ ಜೆ ಲಕ್ಕಪ್ಪ ಗೌಡರು. ಈ ಎಲ್ಲ ಹಿರಿಯ ಕಲಾವಿದರ ಪರಿಚಯದ ಜೊತೆಗೆ ಅವರ ಮಹತ್ವವನ್ನು ಲಕ್ಕಪ್ಪ ಗೌಡರು ತಮ್ಮ ಭಾಷಣದಲ್ಲಿ ಸಮರ್ಥವಾಗಿ ಪ್ರತಿಪಾದಿಸಿದರು. ಕಾರ್ಯಕ್ರಮದ ಬಳಿಕ ನಾನು ಅವರಲ್ಲಿ ಹೇಳಿದೆ : ‘ನೀವು ಈ ಜಿಲ್ಲೆಗೆ ಹೊರಗಿನಿಂದ ಬಂದರೂ ಇಲ್ಲಿಯವರಿಗಿಂತ ಹೆಚ್ಚು ಯಕ್ಷಗಾನದ ಬಗ್ಗೆ ತಿಳಿದುಕೊಂಡಿದ್ದೀರಿ’ ಎಂದು.

ಏರ್ಯ ಲಕ್ಸ್ಮಿನಾರಾಯಣ ಆಳ್ವರು ದ ಕ ಜಿಲ್ಲಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾಗಿ ಇದ್ದಾಗ ಅನೇಕ ಬಾರಿ ಅವರು ಲಕ್ಕಪ್ಪ ಗೌಡರು ಮತ್ತು ನನ್ನನ್ನು ಮಂಗಳೂರಿನಲ್ಲಿ ಒಳ್ಳೆಯ ಸಿನೆಮಾಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಸಿನೆಮ ನೋಡಿದ ಬಳಿಕ ನಾವು ಸಿನೆಮಾದ ವಿಮರ್ಶೆ ಮಾಡುತ್ತಿದ್ದೆವು. ಏರ್ಯರ ‘ಸ್ನೇಹ ಸೇತು’ ಪತ್ರ ಸಾಹಿತ್ಯದ ಬರಹವನ್ನು ಪ್ರಕಟಣೆಗೆ ಮೊದಲು ಅವರು ಓದಿ ಹೇಳಿದ್ದು ಅವರ ಜೊತೆಗೆ ಲಕ್ಕಪ್ಪ ಗೌಡರು ಮತ್ತು ನಾನು ಮಂಗಳೂರಿನ ಸಂತ ಅಲೋಸಿಯಸ್ ಕಾಲೇಜಿನ ಕಟ್ಟೆಯಲ್ಲಿ ಕುಳಿತು ೧೯೭೧ರ ಜುಲೈ ೧೧ ರ ರಾತ್ರಿ ಲೋಕಾಭಿರಾಮದ ಮಾತುಕತೆಯ ಸಂದರ್ಭದಲ್ಲಿ .

ಲಕ್ಕಪ್ಪ ಗೌಡರು ನನ್ನ ಪಾಲಿಗೆ ಗುರುವಾಗಿ, ಸಹೋದ್ಯೋಗಿಯಾಗಿ ಮಾತ್ರ ಉಳಿಯದೆ ಹಿತೈಷಿಯಾಗಿ, ಬಂಧುವಾಗಿ ನನ್ನನ್ನು ಬೆಳೆಸಿದರು. ನಮ್ಮ ಕನ್ನಡ ವಿಭಾಗವು ಮಂಗಳೂರಿನಲ್ಲಿ ಇದ್ದ ಅವಧಿಯಲ್ಲಿ (೧೯೭೦-೭೨) ನಾನು ಅಧ್ಯಾಪಕನಾಗಿ ಇದ್ದಾಗ ನನ್ನ ವಸತಿ ಇದ್ದದ್ದು ನಂದಿಗುಡ್ಡೆ ಸ್ಮಶಾನದ ಹತ್ತಿರ, ಅತ್ತಾವರದಲ್ಲಿ ಒಂದು ಬಾಡಿಗೆಯ ಕೊಠಡಿಯಲ್ಲಿ. ನನ್ನದು ಆಗ ವಿವಾಹಪೂರ್ವದ ಆಶ್ರಮ. ಲಕ್ಕಪ್ಪ ಗೌಡರು ಆಗ ಸಂಸಾರ ಸಮೇತ ವಾಸವಾಗಿ ಇದ್ದದ್ದು ಅತ್ತಾವರದ ಮಂಜಪ್ಪ ಶೆಟ್ಟಿ ಕಂಪೌಂಡ್ ನಲ್ಲಿ. ನನ್ನ ಕೊಠಡಿಯಿಂದ ಅವರ ಮನೆಗೆ ನಡೆದುಕೊಂಡು ಹೋದರೆ ಹತ್ತು ನಿಮಿಷದ ದಾರಿ.

ಲಕ್ಕಪ್ಪ ಗೌಡರ ಶ್ರೀಮತಿಯವರಾದ ಕಮಲಮ್ಮ ಅವರು ತಮ್ಮ ಮನೆಯಲ್ಲಿ ಒಳ್ಳೆಯ ಅಡುಗೆ ಮಾಡಿದರೆ ಮೇಸ್ಟ್ರು ನನ್ನನ್ನು ಊಟಕ್ಕೆ ಕರೆಯುತ್ತಿದ್ದರು. ರಾಗಿ ಮುದ್ದೆ ಮತ್ತು ಮಟನ್ ಸಾರು-ಇದರ ರುಚಿಯನ್ನು ನನ್ನ ಬದುಕಿನಲ್ಲಿ ಮೊದಲು ಸುಖಿಸಿದ್ದು ಲಕ್ಕಪ್ಪ ಗೌಡರ ಮನೆಯಲ್ಲಿ. ಗಂಡ ಹೆಂಡತಿ ಅವರಿಬ್ಬರೂ ನನ್ನನ್ನು ತಮ್ಮನ ಹಾಗೆ ನೋಡಿಕೊಳ್ಳುತ್ತಿದ್ದರು. ನಮ್ಮ ಸ್ನಾತಕೋತ್ತರ ಕೇಂದ್ರ ಹೊಸತು ಆದ್ದರಿಂದ ಅಧ್ಯಾಪನಕ್ಕೆ ಬೇಕಾದ ಹೆಚ್ಚಿನ ಪುಸ್ತಕಗಳು ಸಿಗುತ್ತಿರಲಿಲ್ಲ .ಆಗ ಅಧ್ಯಯನಕ್ಕೆ ಬೇಕಾದ ಅನೇಕ ಪುಸ್ತಕಗಳನ್ನು ಲಕ್ಕಪ್ಪ ಗೌಡರು ಮೇಷ್ಟ್ರರ ಮನೆಯಿಂದ ತರುತ್ತಿದ್ದೆ.

ಲಕ್ಕಪ್ಪ ಗೌಡರು‌ ಮತ್ತು ಕಮಲಮ್ಮ ‌ತಮ್ಮ ಪುಟಾಣಿ ಮಗ ರವಿಯ ಜೊತೆಗೆ ನನ್ನ ಊರು ಪುಣಚಾದ ನಮ್ಮ ಮನೆ ಮಲ್ಲಿಪ್ಪಾಡಿಗೆ ಬಂದು ನನ್ನ ಅಪ್ಪ ಅಮ್ಮನ ಜೊತೆಗೆ ಒಡನಾಡಿದ ಸುಮಾರು ಐವತ್ತು ವರ್ಷಗಳ ಹಿಂದಿನ‌ ನೆನಪು ಚೇತೋಹಾರಿಯಾಗಿದೆ. ಮಂಗಳೂರು ಸ್ನಾತಕೋತ್ತರ ಕೇಂದ್ರವು ಕೊಣಾಜೆಗೆ ಸ್ಥಳಾಂತರವಾದ ಬಳಿಕ ೧೯೭೩ರವರೆಗೆ ಲಕ್ಕಪ್ಪ ಗೌಡರು ನಿಯೋಜನೆಯ ಮೇರೆಗೆ ಕರ್ನಾಟಕ ರಾಜ್ಯ ಭಾಷಾಂತರ ಆಯೋಗದ ಸದಸ್ಯರಾಗಿ ಬೆಂಗಳೂರಿಗೆ ಹೋದರು. ಸುಮಾರು ಐದು ವರ್ಷಗಳ ಬಳಿಕ ಮತ್ತೆ ಕೊಣಾಜೆಗೆ ಬಂದು ನಮ್ಮ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಮಗೆ ಮಾರ್ಗದರ್ಶನ ನೀಡಿದರು.

ಮಂಗಳೂರು ವಿಶ್ವವಿದ್ಯಾನಿಲಯ ಸ್ಥಾಪನೆ ಆದ ಬಳಿಕವೂ (೧೯೮೦) ಕನ್ನಡ ವಿಭಾಗವನ್ನು ಮುನ್ನಡೆಸಿ, ೧೯೮೨ರಲ್ಲಿ ಮೈಸೂರು ವಿವಿಯ ಶಿವಮೊಗ್ಗ ಸ್ನಾತಕೋತ್ತರ ಕೇಂದ್ರ, ಬಿ ಆರ್ ಪ್ರಾಜೆಕ್ಟ್ ನ ಕನ್ನಡ ವಿಭಾಗಕ್ಕೆ ವರ್ಗಾವಣೆ ಪಡೆದರು. ಲಕ್ಕಪ್ಪ ಗೌಡರು ತಮ್ಮ ಸೇವಾವಧಿಯಲ್ಲಿ ಬಹುಮಟ್ಟಿಗೆ ಭೌತಿಕ ಸೌಲಭ್ಯ ಇಲ್ಲದ ಕಡೆಗಳಲ್ಲೇ ಸವಾಲುಗಳನ್ನು ಎದುರಿಸಿ ಸಂಸ್ಥೆಗಳನ್ನು ಕಟ್ಟುವ ಮತ್ತು ನಡೆಸುವ ಸಾಹಸವನ್ನು ಮಾಡಿದರು.

ಮಂಗಳೂರು ಸ್ನಾತಕೋತ್ತರ ಕೇಂದ್ರ, ಕೊಣಾಜೆಯ ಆರಂಭದ ದಿನಗಳು, ಮತ್ತೆ ಜೀರ್ಣವಾದ ಕಟ್ಟಡಗಳಿದ್ದ ಬಿ ಆರ್ ಪ್ರಾಜೆಕ್ಟ್, ಮುಂದೆ ಹೊಸತಾಗಿ ಆರಂಭವಾದ ಕುವೆಂಪು ವಿಶ್ವವಿದ್ಯಾನಿಲಯ, ಆಮೇಲೆ ಹಂಪಿಯ ಕನ್ನಡ ವಿಶ್ವವಿದ್ಯಾಲಯ – ಹೀಗೆ ಎಲ್ಲವೂ ಬಯಲು-ಆಲಯಗಳ ಸಂಘರ್ಷಗಳ ಕೇಂದ್ರಗಳು ಅವರ ಪಾಲಿಗೆ ದೊರೆತದ್ದು. ಮೈಸೂರು ವಿವಿಯ ಎರಡು ಸ್ನಾತಕೋತ್ತರ ಕೇಂದ್ರಗಳು -ಮಂಗಳೂರು ಮತ್ತು ಶಿವಮೊಗ್ಗ – ಇವುಗಳ ಆರಂಭದ ಕಾಲಘಟ್ಟದಲ್ಲಿ ಕೆಲಸಮಾಡುವುದು ವಿಶ್ವವಿದ್ಯಾನಿಲಯವೊಂದರ ಕುಲಪತಿ ಆಗುವುದಕ್ಕಿಂತ ಕಡಮೆ ಸವಾಲಿನದ್ದು ಏನೂ ಅಲ್ಲ.

ಲಕ್ಕಪ್ಪ ಗೌಡರು ಮಂಗಳೂರು ಮತ್ತು ಶಿವಮೊಗ್ಗ ಕೇಂದ್ರಗಳನ್ನು ಕಟ್ಟುವಲ್ಲಿ ತಮ್ಮ ಕಾಯಕ ಸೇವೆಯನ್ನು ಸಲ್ಲಿಸಿ ಮುಂದೆ ಅವು ಎರಡು ವಿಶ್ವವಿದ್ಯಾನಿಲಯಗಳು ಆಗುವುದಕ್ಕೆ ಬುನಾದಿ ಹಾಕುವಲ್ಲಿ ತಮ್ಮ ದೇಣಿಗೆಯನ್ನು ಸಲ್ಲಿಸಿದರು. ಬಿ ಆರ್ ಪ್ರಾಜೆಕ್ಟ್ ನ ಕೇಂದ್ರಕ್ಕೆ ನಾನು ಅನೇಕ ಬಾರಿ ವಿಚಾರ ಸಂಕಿರಣ, ಉಪನ್ಯಾಸ ಇತ್ಯಾದಿಗಳಿಗೆ ಹೋಗುತ್ತಿದ್ದೆ. ಮೊದಲು ಡಾ .ಎಚ್.ತಿಪ್ಪೇರುದ್ರಸ್ವಾಮಿ ಅವರು, ಬಳಿಕ ಲಕ್ಕಪ್ಪ ಗೌಡರು ತಮ್ಮ ಸಹೋದ್ಯೋಗಿಗಳಾಗಿದ್ದ ತೀನಂ ಶಂಕರನಾರಾಯಣ, ಶ್ರೀಕಂಠ ಕೂಡಿಗೆ, ಶಿವಕುಮಾರಸ್ವಾಮಿ ಮತ್ತು ಬಸವರಾಜ ನೆಲ್ಲೀಸರ ಅವರ ಜೊತೆಗೂಡಿ ನಡೆಸಿದ ಶೈಕ್ಷಣಿಕ ಚಟುವಟಿಕೆಗಳು ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ದಾಖಲಿಸಬೇಕಾದ ಸಂಗತಿಗಳು.

ಶಿವಮೊಗ್ಗ ಸ್ನಾತಕೋತ್ತರ ಕೇಂದ್ರವು ಕುವೆಂಪು ವಿಶ್ವವಿದ್ಯಾನಿಲಯ ಆಗಿ ಸ್ಥಾಪನೆ (೧೯೮೭) ಆದ ಬಳಿಕ ಲಕ್ಕಪ್ಪ ಗೌಡರು ಅಲ್ಲಿನ ಕನ್ನಡ ವಿಭಾಗವನ್ನು ‘ಕನ್ನಡ ಭಾರತಿ’ಯನ್ನಾಗಿಸಿ ಅದರ ಪ್ರಾಧ್ಯಾಪಕ ಮುಖ್ಯಸ್ಥರಾಗಿ ಬಹುಮುಖಿಯಾಗಿ ಕನ್ನಡದ ಕೆಲಸಗಳನ್ನು ಮಾಡಿದರು. ಕುವೆಂಪು ವಿವಿಯ ಕುಲಸಚಿವರಾಗಿ ( ೧೯೯೦-೧೯೯೩) ಆರಂಭದ ಹಂತದಲ್ಲಿ ವಿಶ್ವವಿದ್ಯಾನಿಲಯಕ್ಕೆ ಭದ್ರ ಅಡಿಪಾಯವನ್ನು ಹಾಕಿದರು. ಆಡಳಿತದ ಅನುಭವ, ದಕ್ಷತೆ ಮತ್ತು ಪ್ರಾಮಾಣಿಕತೆ ಇವು ಲಕ್ಕಪ್ಪ ಗೌಡರ ವೃತ್ತಿ ಬದುಕಿನ ಎಲ್ಲ ಹಂತಗಳಲ್ಲೂ ಕಾಣಿಸಿಕೊಂಡಿವೆ.

ಲಕ್ಕಪ್ಪ ಗೌಡರು ೧೯೯೫ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ನೇಮಕಗೊಂಡರು. ಅವರ ಹುಟ್ಟು ಬಾಲ್ಯ ಅನುಭವ ಮತ್ತು ಬರಹ ಎಲ್ಲವೂ ಸಹಜವಾದ ಜಾನಪದವೇ ಆಗಿತ್ತು. ಅವರು ಹುಟ್ಟಿದ್ದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಅಲಪನನಾಯಕನ ಹಳ್ಳಿಯಲ್ಲಿ. ತಂದೆ -ಜವರೇ ಗೌಡ, ತಾಯಿ -ಕಾಳಮ್ಮ. ಹೈಸ್ಕೂಲು -ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ. ಮುಂದೆ ಪಿಯುಸಿ -ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರಿನಲ್ಲಿ. ಲಕ್ಕಪ್ಪ ಗೌಡರ ವಾಸ್ತವ್ಯದ ಊರು ಹಾಸನ ಜಿಲ್ಲೆಯ ಹರಿಹರಪುರ ಆಗಿತ್ತು.

ಹೀಗೆ ಹಳ್ಳಿಯ ಬದುಕಿನ ಜೊತೆಗೆಯೇ ಕಲಿಕೆಯ ಆವರಣ ಇದ್ದ ಕಾರಣ ಜಾನಪದ ಬದುಕು ಅವರಿಗೆ ಸಹಜವಾಗಿತ್ತು. ಮುಂದೆ ಮೈಸೂರು ವಿವಿಯಲ್ಲಿ ಶಿಕ್ಷಣ ಪಡೆದು ಅಲ್ಲಿಯೇ ಅಧ್ಯಾಪನ ಮತ್ತು ಸಂಶೋಧನೆ ನಡೆಸಿದ ಕಾರಣ, ಜಾನಪದ ಅಧ್ಯಯನದ ಶೈಕ್ಷಣಿಕ ಶಿಸ್ತಿನ ಪರಿಚಯವಾಗಿತ್ತು. ಅವರು ಸಂಗ್ರಹಿಸಿ ಪ್ರಕಟಿಸಿದ ‘ಜಾನಪದ ಕಥಾವಳಿ’ ಕನ್ನಡ ಜನಪದ ಕತೆಗಳ ಒಂದು ಮುಖ್ಯ ಸಂಕಲನ. ಹಾಗೆಯೆ ಅವರ ‘ಒಗಟುಗಳು’ ಸಂಕಲನ ಕೂಡಾ. ಶಿವಮೊಗ್ಗ ಕೇಂದ್ರದಲ್ಲಿ ನಡೆಸಿದ ಜಾನಪದ ಸಂಕಿರಣಗಳ ಪ್ರಬಂಧಗಳ ಸಂಕಲನಗಳು ‘ಮಲೆನಾಡು ಜಾನಪದ’ ‘ವಿಶಿಷ್ಟ ಜಾನಪದ’ ಇವನ್ನು ಅವರು ಸಂಪಾದಿಸಿದ್ದಾರೆ.

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಎಚ್ ಎಲ್ ನಾಗೇಗೌಡ, ಎಸ ಕೆ .ಕರೀಂ ಖಾನ್ ಮತ್ತು ಪ್ರೊ.ಜೀ . ಶಂ. ಪರಮಶಿವಯ್ಯನವರು ಮಹತ್ವದ ಸಾಧನೆಯನ್ನು ಮಾಡಿದ್ದರು. ಈ ಅಕಾಡೆಮಿಯ ಅಧ್ಯಕ್ಷರಾಗಿ ಲಕ್ಕಪ್ಪ ಗೌಡರು (೧೯೯೫- ೧೯೯೮) ಅನೇಕ ಹೊಸ ಉಪಕ್ರಮಗಳನ್ನು ಆರಂಭಿಸಿದರು. ಜಾನಪದ ಕಲಾವಿದರಿಗೆ ‘ಜಾನಪದ ರತ್ನ’ ಪ್ರಶಸ್ತಿ ಅಂತಹ ಒಂದು ಮಹತ್ವದ ಹೆಜ್ಜೆ . ಜಾನಪದ ನಿಘಂಟು ಮತ್ತು ಜಾನಪದ ವಿಶ್ವಕೋಶಗಳ ಯೋಜನೆಗಳನ್ನು ಅವರು ಆರಂಭಿಸಿದರು.

‘ಜಾನಪದ ಗಂಗೋತ್ರಿ’ ನಿಯತಕಾಲಿಕೆಯ ಪ್ರಕಟಣೆಯು ಜಾನಪದ ವಿದ್ವತ್ ಕೆಲಸಗಳಿಗೆ ಪೂರಕವಾಯಿತು. ಪಾಶ್ಚಾತ್ಯ ಜಾನಪದ ವಿದ್ವಾಂಸರ ಪರಿಚಯ ಮಾಲಿಕೆಯಿಂದ ಕನ್ನಡ ವಿದ್ವಾಂಸರಿಗೆ ವಿಶ್ವದ ಜಾನಪದ ಜಗತ್ತು ತೆರೆದುಕೊಂಡಿತು. ಜಾನಪದ ವಿಚಾರ ಸಂಕಿರಣಗಳು, ಕಮ್ಮಟಗಳು, ಸಮಾವೇಶಗಳು ಅನೇಕವು ವಿದ್ವಾಂಸರನ್ನು ಮತ್ತು ಕಲಾವಿದರನ್ನು ಒಟ್ಟುಗೂಡಿಸಿದುವು. ಗುರುಗಳಾದ ಪ್ರೊ. ಲಕ್ಕಪ್ಪ ಗೌಡರು ಅಕಾಡೆಮಿಯ ಅಧ್ಯಕ್ಷರಾಗಿ ಇದ್ದಾಗ ೧೯೯೬ರಲ್ಲಿ ನನಗೆ ‘ಜಾನಪದ ತಜ್ಞ ಪ್ರಶಸ್ತಿ’ ದೊರೆತದ್ದು ನನಗೆ ಧನ್ಯತೆಯನ್ನು ತಂದುಕೊಟ್ಟಿತು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ (೧೯೯೯) ಲಕ್ಕಪ್ಪ ಗೌಡರು ಕಡಿಮೆ ಅವಧಿಯಲ್ಲಿ ಅನೇಕ ಹೊಸ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಮನೆಮನೆಗೆ ಮತ್ತು ಕಾಲೇಜು ಕಾಲೇಜಿಗೆ ಪುಸ್ತಕ ಯಾತ್ರೆ, ಪುಸ್ತಕ ಸಂಸ್ಕೃತಿ ಸಂವಾದ, ಕನ್ನಡದಲ್ಲಿ ವಿಜ್ಞಾನ ಪುಸ್ತಕಗಳು, ವಿಚಾರ ಸಾಹಿತ್ಯ, ರಾಜ್ಯಮಟ್ಟದ ಪುಸ್ತಕ ಪ್ರದರ್ಶನ ಮತ್ತು ಮಾರಾಟ – ಇಂತಹ ಕೆಲವು ಯೋಜನೆಗಳು ಕಾರ್ಯಕ್ರಮಗಳು ಅವರ ಕಾಲದಲ್ಲಿ ನಡೆದುವು.

ಕನ್ನಡ ವಿಶ್ವವಿದ್ಯಾಲಯ ಹಂಪಿಗೆ ಡಾ. ಚಂದ್ರಶೇಖರ ಕಂಬಾರ ಮತ್ತು ಡಾ .ಎಂ ಎಂ ಕಲಬುರ್ಗಿ ಅವರ ಬಳಿಕ ಮೂರನೆಯ ಕುಲಪತಿಯಾಗಿ ಬಂದವರು ಡಾ. ಎಚ್ ಜೆ ಲಕ್ಕಪ್ಪ ಗೌಡರು (೧೯೯೯-೨೦೦೩). ಆ ಸಂದರ್ಭದಲ್ಲಿ ಕುಲಪತಿಯ ಆಯ್ಕೆಗಾಗಿ ರಚಿಸಿದ ತಜ್ಞರ ಸಮಿತಿಯು ಶಿಫಾರಸು ಮಾಡಿದ ಮೂವರು ಅರ್ಹ ಅಭ್ಯರ್ಥಿಗಳ ಪಟ್ಟಿಯಲ್ಲಿ ಲಕ್ಕಪ್ಪ ಗೌಡರ ಹೆಸರಿನ ಜೊತೆಗೆ ನನ್ನ ಹೆಸರೂ ಇತ್ತು ಎಂದು ತಿಳಿಯಿತು. ಅನೇಕರು ನನ್ನಲ್ಲಿ ನನ್ನ ಸಲುವಾಗಿ ಪ್ರಯತ್ನಿಸುತ್ತೇವೆ ಎಂದು ಹೇಳಿದರು. ನಾನು ನೇರವಾಗಿ ನಿರಾಕರಿಸಿಬಿಟ್ಟೆ. ಲಕ್ಕಪ್ಪ ಗೌಡರು ನನ್ನ ಗುರುಗಳು .ಅವರು ಈ ಬಾರಿ ಕುಲಪತಿ ಆಗಲಿ. ನಾನು ಸ್ಪರ್ಧಿ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ವಿಷಯವನ್ನು ಪ್ರೊ. ಲಕ್ಕಪ್ಪ ಗೌಡರಿಗೆ ಫೋನ್ ಮಾಡಿ ಕೂಡಾ ತಿಳಿಸಿದೆ. ಲಕ್ಕಪ್ಪ ಗೌಡರು ಕುಲಪತಿಯಾಗಿ ಆಯ್ಕೆ ಆದರು. ವಿವಿಯಲ್ಲಿ ಆಗಬೇಕಾದ ಶೈಕ್ಷಣಿಕ ಕೆಲಸಗಳ ಬಗ್ಗೆ ಸಲಹೆ ಕೊಡಲು ಅವರು ಆಹ್ವಾನಿಸಿದ ಮೊದಲ ಸಭೆಯಲ್ಲಿ ನಾನು ಭಾಗವಹಿಸಿದೆ, ಸಲಹೆಗಳನ್ನು ಕೊಟ್ಟೆ. ಸಾಕಷ್ಟು ಆರ್ಥಿಕ ಮಿತಿಗಳ ನಡುವೆಯೂ ಪ್ರೊ.ಲಕ್ಕಪ್ಪ ಗೌಡರು ಕುಲಪತಿಯಾಗಿ ಪಾರದರ್ಶಕವಾಗಿ ಮತ್ತು ಶೈಕ್ಷಣಿಕವಾಗಿ ಅನೇಕ ಕೆಲಸಗಳನ್ನು ಮಾಡಿದರು.

ಯುಜಿಸಿಯ ನಿಯಮಗಳ ಪಾಲನೆಗಾಗಿ ಎಂಎ ಪಿ ಎಚ್ ಡಿ ಸಂಶೋಧನಾಧಾರಿತ ಪದವಿಯ ಆರಂಭ ಒಂದು ಮುಖ್ಯ ಬೆಳವಣಿಗೆ. ಸಂಗೀತ, ಚಿತ್ರಕಲೆ, ಶಿಲ್ಪಕಲೆಗಳಲ್ಲಿ ಸ್ನಾತಕೋತ್ತರ ಪದವಿಗಳ ಆರಂಭ, ಶಿಲ್ಪವನದ ಸ್ಥಾಪನೆ, ಶಂಬಾ, ಜೈನ ಸಂಸ್ಕೃತಿ, ಹೈದರಾಬಾದ್ ಕರ್ನಾಟಕ ಅಧ್ಯಯನ – ಇಂತಹ ಕೆಲವು ಪೀಠಗಳ ಸ್ಥಾಪನೆ, ಅನೇಕ ಶೈಕ್ಷಣಿಕ ವಿಚಾರ ಸಂಕಿರಣಗಳು-ಕಮ್ಮಟಗಳು – ಶಿಬಿರಗಳು -ಪ್ರಕಟಣೆಗಳು -ಸಮ್ಮೇಳನಗಳು : ಇಂತಹ ಬಹುಮುಖಿ ಚಟುವಟಿಕೆಗಳು ಅವರ ಅವಧಿಯಲ್ಲಿ ಕಾರ್ಯರೂಪಕ್ಕೆ ಬಂದುವು. ವಿವಿಯ ಆವರಣದಲ್ಲಿ ಅಧ್ಯಯನ ವಿಭಾಗಗಳಿಗೆ ಕಟ್ಟಡಗಳ ನಿರ್ಮಾಣಕ್ಕೆ ಹೆಚ್ಚಿನ ಚಾಲನೆ ದೊರೆಯಿತು.

ಕೆಲವು ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿದ ಕಾರಣ ಅವನ್ನು ಪ್ರತ್ಯಕ್ಷವಾಗಿ ನಾನು ಕಂಡಿದ್ದೇನೆ . ಆ ಕಾಲದಲ್ಲಿ ನಡೆದ ಒಂದು ವಿಶಿಷ್ಠ ಕಾರ್ಯಕ್ರಮ ‘ಅಖಿಲ ಕರ್ನಾಟಕ ದೇಸಿ ಸಮ್ಮೇಳನ’. ಪ್ರೊ. ಲಕ್ಕಪ್ಪ ಗೌಡರ ಕುಲಪತಿಯ ಅವಧಿಯ ಕೊನೆಯಲ್ಲಿ, ೨೦೦೩ ಸಪ್ಟೆಂಬರ್ ೨೬-೨೮ರಂದು ಕನ್ನಡ ವಿವಿಯ ದೇಸಿ ಸಮ್ಮೇಳನ ಬೀದರ್ ನಲ್ಲಿ ನಡೆಯಿತು. ಸಮ್ಮೇಳನದ ವಿಷಯ ‘ಅಲೆಮಾರಿಗಳ ಸ್ಥಿತಿಗತಿ’. ಸಮ್ಮೇಳನದ ಸರ್ವಾಧ್ಯಕ್ಷನಾಗಿ ನನ್ನನ್ನು ಆಯ್ಕೆಮಾಡಿದರು.

ಸಮ್ಮೇಳನದ ಅಧ್ಯಕ್ಷನಾದ ನನಗೆ ಸನ್ಮಾನ ಮಾಡುತ್ತಾ ಕುಲಪತಿಗಳಾದ ನನ್ನ ಗುರುಗಳು ಪ್ರೊ. ಲಕ್ಕಪ್ಪ ಗೌಡರು ಕನ್ನಡ ವಿಶ್ವವಿದ್ಯಾಲಯದ ಮುಂದಿನ ಕುಲಪತಿ ನಾನು ಆಗಲಿ ಎಂದು ಹರಸಿ ಹಾರೈಸಿದ್ದು ನನ್ನ ಬದುಕಿನ ಭಾವುಕ ಕ್ಷಣ. ಮುಂದೆ ಅವರ ಮಾತು ನಿಜ ಆಯಿತು ಎನ್ನುವುದು ನನ್ನ ಪಾಲಿನ ಬೆರಗು. ನಾನು ಕನ್ನಡ ವಿವಿಯ ಕುಲಪತಿ ಆದಾಗ ನಡೆಸಿದ ಮೊದಲನೆಯ ಅಖಿಲ ಕರ್ನಾಟಕ ದೇಸಿ ಸಮ್ಮೇಳನ ಹಾಸನದಲ್ಲಿ ೨೦೦೪ರ ದಶಂಬರ ೧೧ರಂದು ನಡೆಯಿತು. ಕೃಷಿಗೆ ಸಂಬಂಧಿಸಿದ ಆ ಸಮ್ಮೇಳನದ ಸರ್ವಾಧ್ಯಕತೆಗೆ ಗುರುಗಳಾದ ಪ್ರೊ. ಲಕ್ಕಪ್ಪ ಗೌಡರನ್ನು ಆಹ್ವಾನಿಸಿದೆವು. ಅವರು ಅಧ್ಯಕ್ಷರಾಗಿ ಸಮ್ಮೇಳನವನ್ನು ಬಹಳ ಅದ್ಭುತವಾಗಿ ಯಶಸ್ವಿಗೊಳಿಸಿದರು.

ನಾನು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಆಗಿದ್ದ ಕಾಲದ ಒಂದು ಘಟನೆ. ಡಾ. ಎಂ ಎಂ ಕಲಬುರ್ಗಿ ಅವರು ಅಲ್ಲಿ ಕುಲಪತಿ ಆಗಿ ನಿವೃತ್ತಿ ಹೊಂದಿದ ಬಳಿಕ ಮತ್ತೆ ವಿವಿ ಆವರಣಕ್ಕೆ ಬಂದಿಲ್ಲ ಎಂಬ ವಿಷಯ ಗೊತ್ತಾಯಿತು. ಪ್ರೊ.ಲಕ್ಕಪ್ಪ ಗೌಡರ ಕುಲಪತಿಯ ಅವಧಿಯಲ್ಲಿ ವಿವಿಗೆ ಬಂದಿರಲಿಲ್ಲ. ಅವರು ಕನ್ನಡ ವಿವಿ ಬಿಟ್ಟುಹೋಗುವ ಕಾಲದಲ್ಲಿ ಯಾವುದೋ ಕಾರಣಕ್ಕೆ ಮುನಿಸಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಕಲಬುರ್ಗಿ ಅವರ ಜೊತೆಗಿನ ನನ್ನ ದೀರ್ಘಕಾಲದ ಆತ್ಮೀಯ ಸ್ನೇಹದ ಕಾರಣದಿಂದ ಅವರನ್ನು ಬಲವಂತ ಮಾಡಿದೆ. ಆಗತಾನೇ ಅವರ ಸಂಶೋಧನಾ ಗ್ರಂಥ ‘ಮಾರ್ಗ-೪’ ಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೦೬ರ ಪ್ರಶಸ್ತಿ ಬಂದಿತ್ತು.

ಆ ಸಂದರ್ಭವನ್ನು ಬಳಸಿಕೊಂಡು ಅವರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಯೋಜಿಸಿದೆ .ಆ ಕಾರ್ಯಕ್ರಮಕ್ಕೆ ಪ್ರೊ. ಲಕ್ಕಪ್ಪ ಗೌಡರನ್ನು ಆಹ್ವಾನಿಸಿದೆ. ಮೇಷ್ಟ್ರು ಒಪ್ಪಿಕೊಂಡು ಬಂದರು. ಕಂಬಾರರನ್ನೂ ಆಮಂತ್ರಿಸಿದೆ. ಅವರಿಗೆ ಬರಲು ಆಗಲಿಲ್ಲ. ಪ್ರೊ.ಕಲಬುರ್ಗಿ ಮತ್ತು ಪ್ರೊ.ಲಕ್ಕಪ್ಪ ಗೌಡರು ಅಕ್ಕಪಕ್ಕ ಕುಳಿತುಕೊಂಡು ಆತ್ಮೀಯವಾಗಿ ಮಾತಾಡಿಕೊಂಡರು. ಲಕ್ಕಪ್ಪ ಗೌಡರು ಕಲಬುರ್ಗಿಯವರ ಬಗ್ಗೆ ಅಭಿನಂದನದ ಗೌರವದ ಮಾತುಗಳನ್ನು ಆಡಿದರು. ಇಬ್ಬರು ವಿಶ್ರಾಂತ ಕುಲಪತಿಗಳನ್ನು‌ ವೇದಿಕೆಯಲ್ಲಿ ಜೊತೆಯಾಗಿ ‌ನೋಡಿ, ಕನ್ನಡ ವಿವಿಯ ಎಲ್ಲರೂ ಬಹಳ ಸಂತೋಷಪಟ್ಟರು.

ಅಧ್ಯಯನ ಅಧ್ಯಾಪನ ಆಡಳಿತ ಸಂಘಟನೆಗಳ ಜೊತೆಜೊತೆಗೇ ಪ್ರೊ.ಲಕ್ಕಪ್ಪ ಗೌಡರ ಸಾಹಿತ್ಯರಚನೆಯ ಕಾಯಕ ನಿರಂತರವಾಗಿ ಸಾಗುತ್ತ ಬಂದಿದೆ. ಕಾವ್ಯ, ಸಣ್ಣಕತೆ, ನಾಟಕ, ಜೀವನ ಚರಿತ್ರೆ, ಸಾಹಿತ್ಯವಿಮರ್ಶೆ, ಜಾನಪದ ಅಧ್ಯಯನ, ಮಕ್ಕಳ ಸಾಹಿತ್ಯ – ಇಂತಹ ಅನೇಕ ಪ್ರಕಾರಗಳಲ್ಲಿ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಅವರು ಪ್ರಕಟಿಸಿದ್ದಾರೆ. ಸಂಪಾದಿತ ಕೃತಿಗಳ ಸಂಖ್ಯೆಯೇ ಮೂವತ್ತಕ್ಕಿಂತ ಹೆಚ್ಚು ಇದೆ. ‘ವಸಂತಗೀತ’ ಅವರ ಮೊದಲನೆಯ ಕವನಸಂಕಲನ. ಅವರು ಆಧುನಿಕ ವಚನಗಳನ್ನೂ ರಚಿಸಿದ್ದಾರೆ.

‘ಹೊನ್ನಾರು’ ಕಥಾ ಸಂಕಲನ ಜಾನಪದ ಜೀವಸೆಲೆ ಉಳ್ಳ ಕತೆಗಳಿಂದ ಕೂಡಿದೆ. ಅಂಬೇಡ್ಕರ್ ಮತ್ತು ಕುವೆಂಪು – ಲಕ್ಕಪ್ಪ ಗೌಡರ ಜೀವನ ಆದರ್ಶದ ಮಹಾನುಭಾವರು. ದಲಿತ ಸೂರ್ಯ, ಸಮತೆಯ ಶಿಲ್ಪಿ, ಡಾ. ಅಂಬೇಡ್ಕರ್, ವಿಶ್ವಕವಿ ಕುವೆಂಪು – ಇವು ಲಕ್ಕಪ್ಪ ಗೌಡರು ಬರೆದ ಜೀವನ ಚರಿತ್ರೆಗಳು. ಅವರ ಮಕ್ಕಳ ಸಾಹಿತ್ಯದ ಕೃತಿಗಳು ವಸ್ತು ವೈವಿಧ್ಯದಿಂದ ಕೂಡಿವೆ: ಇಲಿಯೆಡ್, ಒಡಿಸ್ಸಿ, ದೀನಬಂಧು, ಕಾಮನಬಿಲ್ಲು, ಕಾಯಕವೇ ಕೈಲಾಸ ಮುಂತಾದುವು.

ಕನಕದಾಸರ ಸಾಹಿತ್ಯದ ಬಗ್ಗೆ ಅವರು ವಿಶೇಷ ಅಧ್ಯಯನ ನಡೆಸಿ ಅನೇಕ ಗ್ರಂಥಗಳನ್ನು ಬರೆದಿದ್ದಾರೆ ಮತ್ತು ಸಂಪಾದಿಸಿ ಕೊಟ್ಟಿದ್ದಾರೆ. ಪ್ರೊ. ದೇ ಜವರೇಗೌಡರ ಮಾರ್ಗದರ್ಶನದಲ್ಲಿ‌ ಅವರು ಸಿದ್ಧಪಡಿಸಿದ ‘ಶ್ರೀ ರಾಮಾಯಣ ದರ್ಶನಂ : ಒಂದು ವಿಮರ್ಶಾತ್ಮಕ ಅಧ್ಯಯನ’ ಸಂಶೋಧನಾ ನಿಬಂಧಕ್ಕೆ ಮೈಸೂರು ವಿವಿಯ ಪಿ ಎಚ್ ಡಿ ಪದವಿ ದೊರೆಯಿತು. ಅವರು ತಮ್ಮ ಆರಂಭದ ಅನೇಕ ಪುಸ್ತಕಗಳನ್ನು ‌ತಾವೇ ತಮ್ಮ ‌ಮಗ ಮತ್ತು ಮಗಳ ಹೆಸರಿನ ಜೋಡಣೆಯ‌ ‘ರವಿಕಲಾ ಪ್ರಕಾಶನ’ ದಿಂದ ಪ್ರಕಟಿಸಿದ್ದಾರೆ.

ಪ್ರೊ. ಎಚ್ ಜೆ ಲಕ್ಕಪ್ಪ ಗೌಡರು ಬಸವಣ್ಣ, ಕನಕದಾಸ, ಅಂಬೇಡ್ಕರ್ ಮತ್ತು ಕುವೆಂಪು ಅವರ ಜೀವನ ತತ್ವಗಳನ್ನು ತಮ್ಮ ಬದುಕಿನ ಉದ್ದಕ್ಕೂ ಪಾಲಿಸಿಕೊಂಡು ಬಂದಿದ್ದಾರೆ. ಯಾವುದೇ ಪದವಿ ಮತ್ತು ಅಧಿಕಾರದ ಸ್ಥಾನಮಾನ ಇದ್ದಾಗಲೂ ಅವರು ತಮ್ಮ ಆದರ್ಶದ ತತ್ವಗಳಿಂದ ವಿಮುಖರಾಗದೆ ಇದ್ದುದನ್ನು ನಾನು ಕಂಡಿದ್ದೇನೆ. ಸರಳತೆ, ಮನುಷ್ಯ ಪ್ರೀತಿ, ಸ್ಪಷ್ಟ ನಿಲುವು ಮತ್ತು ಕಾಯಕ ನಿಷ್ಠೆ – ಅವರ ಬದುಕನ್ನು ಎಂಟು ದಶಕಗಳ ಕಾಲ ಮುನ್ನಡೆಸಿದೆ. ಎಲ್ಲ ಬಗೆಯ ನಿವೃತ್ತಿಯ ಬಳಿಕ ಅವರು ತಮ್ಮ ಮೈಸೂರು ಮನೆಯಲ್ಲಿ ವಾಸ ಮಾಡುತ್ತಿದ್ದರು. ಮತ್ತೆ ಕೆಲವು ವರ್ಷ ಹಾಸನದ ತಮ್ಮ ಕೃಷಿ ಆವರಣದಲ್ಲಿ ಸಾಂತ್ವನದ ಬದುಕು ಸಾಗಿಸುತ್ತಿದ್ದರು.

ಮಂಗಳಗಂಗೋತ್ರಿಯ ಕನ್ನಡ ವಿಭಾಗದ ೧೯೭೧-೭೩ ತಂಡದ ವಿದ್ಯಾರ್ಥಿ ವಿದ್ಯಾರ್ಥಿನಿಯರು ೨೦೧೨ ಆಗಸ್ಟ್ ೧೦ರಂದು ಮಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ‘ಸಹಜೀವನ- ಸ್ನೇಹ ಸಮ್ಮಿಲನ – ಸಹೃದಯ ಚಿಂತನ ‘ ಎಂಬ ಹೆಸರಿನಲ್ಲಿ ಪುನರ್ ಮಿಲನದ ಒಂದು ಕಾರ್ಯಕ್ರಮವನ್ನು ನಡೆಸಿದರು. ಇದರಲ್ಲಿ ಆ ಕಾಲದಲ್ಲಿ ಕನ್ನಡ ವಿಭಾಗದಲ್ಲಿ ಅಧ್ಯಾಪಕರಾಗಿದ್ದ ಪ್ರೊ. ಲಕ್ಕಪ್ಪ ಗೌಡರು ಮತ್ತು ನಾನು ಭಾಗವಹಿಸಿದ್ದು ಒಂದು ಅಪೂರ್ವ ಅನುಭವ. ಲಕ್ಕಪ್ಪ ಗೌಡರು ತಮ್ಮ ಆ ಕಾಲದ ಅನೇಕ ನೆನಪುಗಳನ್ನು ಆ ಕಾರ್ಯಕ್ರಮದಲ್ಲಿ ಮೆಲುಕು ಹಾಕಿದರು. ಚಂದ್ರಕಲಾ ನಂದಾವರ, ಜಯಪ್ರಕಾಶ ಗೌಡ, ನಟರಾಜ್, ಕನರಾಡಿ ವಾದಿರಾಜ ಭಟ್ ಮುಂತಾದ ಆ ಕಾಲದ ವಿದ್ಯಾರ್ಥಿಗಳು ಎಲ್ಲರನ್ನೂ ಒಟ್ಟುಮಾಡಿ ಐತಿಹಾಸಿಕ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.

ಗುರುಗಳಾದ ಪ್ರೊ. ಲಕ್ಕಪ್ಪ ಗೌಡರನ್ನು ನಾನು ಮುಖತಃ ಕೊನೆಯ ಬಾರಿ ಕಂಡದ್ದು ಮೈಸೂರಿನ ಅವರ ಮನೆಯಲ್ಲಿ ೨೦೧೯ರ ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ. ನಾನು ಮತ್ತು ನನ್ನ ಹೆಂಡತಿ ಮೈಸೂರಿನಲ್ಲಿ ಅವರ ಮನೆಗೆ ಹೋದಾಗ ಮೇಸ್ಟ್ರು ಮತ್ತು ಅವರ ಶ್ರೀಮತಿ ಕಮಲಮ್ಮ ಇದ್ದರು. ಅಮ್ಮ ಹೇಳಿದರು -ಮೇಸ್ಟ್ರಿಗೆ ಈಗ ಮರೆವಿನ ಸಮಸ್ಯೆ ಇದೆ. ಜನರ ಗುರುತು ಸಿಗುವುದಿಲ್ಲ ಎಂದು. ನಾನು ಗುರುಗಳಲ್ಲಿ ಮಾತಾಡಿದೆ, ನನ್ನ ಹೆಸರು ಹೇಳಿದೆ. ಕೂಡಲೇ ಗುರುತು ಹಿಡಿದು ಸಂತೋಷದಿಂದ ಮಾತಾಡಿದರು, ನಾನು ನನ್ನ ಕೆಲವು ಪುಸ್ತಕಗಳನ್ನು ಅವರಿಗೆ ಕೊಟ್ಟೆ. ನಾನು ಮತ್ತು ನನ್ನ ಹೆಂಡತಿ ಅವರ ಆಶೀರ್ವಾದ ಪಡೆದೆವು. ಅವರು ಹೆಚ್ಚು ನಗುತ್ತಿದ್ದರು. ಈಗ ಪದ್ಯಗಳನ್ನು ಬರೆಯುತ್ತಿದ್ದೇನೆ ಎಂದು ಹೇಳಿದರು. ಸ್ವಲ್ಪ ಹೊತ್ತು ೫೦ ವರ್ಷಗಳ ಹಿಂದಿನ ಮಂಗಳೂರಿನ ಹಳೆಯನೆನಪುಗಳನ್ನು ನಾನು ಅವರ ಎದುರು ಮೆಲುಕುಹಾಕಿದೆ. ಅವರು ಬಹಳ ಉಲ್ಲಾಸಗೊಂಡ ಹಾಗೆ ಕಂಡರು.

ಆಮೇಲೆ ಕಳೆದ ಎರಡು ವರ್ಷಗಳಿಂದ ಕೊರೋನ ಕಾರಣವಾಗಿ ನಾನು ಮೈಸೂರಿಗೆ ಹೋಗಿಲ್ಲ. ಒಂದೆರಡು ಬಾರಿ ಫೋನ್ ನಲ್ಲಿ ಮಾತಾಡಿದ್ದೆ. ಕೊನೆಯದಾಗಿ ಫೋನ್ ನಲ್ಲಿ ಮಾತಾಡಿದ್ದು ಎರಡು ತಿಂಗಳ ಹಿಂದೆ ಮೇ ೨೮ರಂದು. ಕಮಲಮ್ಮನವರು ಫೋನ್ ತೆಗೆದುಕೊಂಡು ಮಾತಾಡಿದರು. ಮೇಸ್ಟ್ರ ಅರೋಗ್ಯ ಚೆನ್ನಾಗಿಲ್ಲ ಎಂದು ಹೇಳಿದರು. ಹಾಗಾದರೆ ಅವರಲ್ಲಿ ಮಾತಾಡುವುದು ಬೇಡ ಎಂದು ನಾನು ಹೇಳಿದೆ. ಅಷ್ಟು ಹೊತ್ತಿಗೆ ಕಮಲಮ್ಮನವರು ‘ನಿಮ್ಮ ಹೆಸರು ಹೇಳಿದೆ. ನಿಮ್ಮ ಜೊತೆಗೆ ಮಾತಾಡಬೇಕು ಎಂದು ಹೇಳಿದರು’ ಎಂದರು. ನಾನು ಗುರುಗಳ ಜೊತೆಗೆ ಮಾತಾಡಿದೆ. ಸುಮಾರು ಐದು ನಿಮಿಷ ಮಾತಾಡಿದರು. ‘ನಿಮ್ಮನ್ನು ನೋಡಲು ಮೈಸೂರಿಗೆ ಬರುತ್ತೇನೆ ಸರ್’ ಎಂದು ಹೇಳಿದೆ. ಅವರ ನಗು ಕೇಳಿಸಿತು. ಮತ್ತೆ ಮೊನ್ನೆ ಜುಲೈ ೨೬ರಂದು ನೀರವ ಮೌನದೊಳಗೆ ಏನೂ ಕೇಳಿಸಲಿಲ್ಲ .

‍ಲೇಖಕರು Admin

30 July, 2021

1 Comment

  1. Shyamala Madhav

    ಮನಸ್ಪರ್ಶಿ! ವಿದ್ವತ್ತಿನ ಆಗರವಾದ ಆ ವಾತಾವರಣ, ಆ ಸಂಪರ್ಕ ಭಾಗ್ಯ!
    ಅಭಿನಂದನೆ ಸರ್.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading