ಪ್ರೇಮ ಕವಿತೆಗಳಿಂದ ಅಂತರ ಕಾಪಾಡಿಕೊಂಡಿರುವ ‘ಪ್ರೇಮಾಂತರ’
ಡಿ ಎಸ್ ರಾಮಸ್ವಾಮಿ
ಈಗಾಗಲೇ ಸಮಗ್ರ ಕಾವ್ಯವನ್ನು ಪ್ರಕಟಿಸಿರುವ ಮತ್ತು ಈಗಲೂ ಕಾವ್ಯರಚನೆಯಲ್ಲಿನ ತಮ್ಮ ವಿಧಾನವನ್ನು ಅಷ್ಟಾಗಿ ಬದಲಿಸಿಕೊಳ್ಳದ, ತುಂಟಕವಿ ಎಂದೇ ಖ್ಯಾತರಾಗಿರುವ ಬಿ.ಆರ್.ಲಕ್ಷ್ಮಣರಾವ್ ತಮ್ಮ ಈವರೆಗಿನ ಕವಿತೆಗಳಿಂದಾಯ್ದ ಕವಿತೆಗಳನ್ನು ಒಂದರ್ಥದಲ್ಲಿ ಸಂಯೋಜಿಸಿ ‘ಪ್ರೇಮಾಂತರ’ ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ. ಈಗಾಗಲೇ ಪ್ರಕಟಿಸಿರುವ ತಮ್ಮದೇ ಪದ್ಯಗಳಿಂದ ಒಟ್ಟು ಅರವತ್ತು ಪದ್ಯಗಳನ್ನು ಕವಿ ಇಲ್ಲಿ ತಮಗೆ ಬೇಕಾದಂತೆ ಆಯ್ದು ಪೋಣಿಸಿದ್ದರೂ ಹೊಸದಾಗಿಯೇ ಅವನ್ನು ಕಾವ್ಯಾಸಕ್ತರು ಓದಿಕೊಳ್ಳಬಲ್ಲಷ್ಟು ‘ಘನ’ಮತ್ತು ‘ವ್ಯಾಪ್ತಿ’ ಇಲ್ಲಿನ ಕವಿತೆಗಳಲ್ಲಿವೆ. ಮೇಲ್ನೋಟಕ್ಕೆ ಈ ಕವಿತೆಗಳೆಲ್ಲವೂ ಗಂಡು ಹೆಣ್ಣಿನ ಸಂಬಂಧಗಳ ಕಕ್ಷೆಯಲ್ಲೇ ಸುತ್ತುತ್ತವೆಯೆನ್ನಿಸಿದರೂ ಈಗಾಗಲೇ ನಾವೆಲ್ಲ ಅಂದುಕೊಂಡಿರುವ ‘ಪ್ರೇಮವೆಂಬ ಅಜರಾಮರ’ಕ್ಕೆ ಕವಿ ಇಲ್ಲಿ ಬೇರೆಯದೇ ಭಾಷ್ಯವನ್ನು ಬರೆದಿರುವ ಮತ್ತು ತಾನು ಹೇಳುತ್ತಿರುವುದೆಲ್ಲ ವಾಸ್ತವ ಜಗತ್ತಿನ ಕಡುಸತ್ಯಗಳೆಂದು ಕವಿ ಎಲ್ಲೂ ಪ್ರಮಾಣ ಮಾಡದಿದ್ದರೂ ಆ ಕಡುಸತ್ಯಗಳು ಓದುಗನಿಗೆ ಸರಳವಾಗಿ ಮತ್ತು ನೇರವಾಗಿ ದಾಟುತ್ತವೆ. ‘ನನ್ನದಲ್ಲ ಶುದ್ಧ ಪ್ರೇಮದ ಹಾದಿ’ ಅಂತ ಘೋಷಿಸುವ ಕವಿಯೇ ‘ನನ್ನ ಪ್ರೇಮ ಊಟವಾದೊಡನೆ ಎಲೆಗೋಮ'( ಪ್ರೇಮ ಗೀಮ. . .) ಅಂತಲೂ ಪ್ರಕಟಿಸಿಬಿಟ್ಟಿರುವುದರಿಂದ ಲಕ್ಷ್ಮಣರಾಯರ ಪದ್ಯಗಳನ್ನು ಕೆ.ಎಸ್.ನ ಥರದ ಶುದ್ಧ ಪ್ರೇಮದ ಕವಿತೆಗಳೊಡನೆ ಹೋಲಿಸಲಾಗುವುದಿಲ್ಲ. ಹಾಗಾಗಿ ಇಲ್ಲಿ ಸಂಕಲಿತಗೊಂಡಿರುವ ಕವಿತೆಗಳು ನಿಜದ ಪ್ರೇಮ ಕವಿತೆಗಳಿಂದ ಬಹಳ ದೂರವನ್ನು ಕಾಪಾಡಿಕೊಂಡಿವೆ ಮತ್ತು ಬೇಕೆಂತಲೇ ಶುದ್ಧತೆಯನ್ನು ಪ್ರಶ್ನಿಸುತ್ತಲೂ ಇವೆ.
‘ಈ ಜಗತ್ತೇ ನಿನಗೆ ಗುರಿ ಇಟ್ಟಿರುವ ಬೇಡ
ಮೇಲೇ ಸುತ್ತುತ್ತಿದೆ ಆಕಾಶದ ಡೇಗೆ
ಒಮ್ಮೆ ಚುಚ್ಚಿಸಿಕೊಳ್ಳೆ; ಆ ಸುಖದ ಬೇಗೆ
ಈ ಸಪ್ಪೆಜಗತ್ತಿಗೇ ಕಿಚ್ಚು ಹಚ್ಚದಿದ್ದರೆ ಕೇಳೆ'( ಉರಿ)ಪ್ರೇಮ ಪರಿಶುದ್ಧವಾದದ್ದು ಎಂಬ ಪುರಾತನ ತಿಳುವಳಿಕೆಗೆ ಆಧುನಿಕತೆಯ ರೀತಿಯನ್ನು ಎರಕ ಹೊಯ್ಯುವ ಕವಿ ಶುದ್ಧದಾರಿಯಲ್ಲಿ ಸಾಗುವುದನ್ನೇ ಋಜುತ್ವವೆಂದು ನಂಬಿದವರಿಗೆ ಶಾಕ್ ನೀಡುತ್ತಾರೆ. ಮೊದಲಿನಿಂದಲೂ ಬಿ.ಆರ್.ಎಲ್ ಈ ಥರದ ಪದ್ಯಗಳಿಂದಲೇ ಯುವಜನರ ಅಚ್ಚುಮೆಚ್ಚಿನ ಕವಿಯಾಗಿಯೇ ಉಳಿದವರು. ಪ್ರೇಮ ಮತ್ತು ಪ್ರಣಯಗಳ ನಡುವಿನ ಸೂಕ್ಷ್ಮಗೆರೆಯನ್ನು ಗಟ್ಟಿಯಾಗಿಯೇ ಅಳಿಸಿ, ಅವನ್ನು ಬೇರಲ್ಲವೆಂಬಂತೆ ಮತ್ತು ಗಂಡುಹೆಣ್ಣಿನ ನಡುವಣ ಜಗತ್ತು ಪ್ರಣಯದಲ್ಲಲ್ಲದೇ ಮತ್ತೆಲ್ಲಿ ಕೊನೆಗೊಳ್ಳಬೇಕೆಂಬ ತಾತ್ವಿಕ ಪ್ರಶ್ನೆಯನ್ನೂ ಮತ್ತೆ ಮತ್ತೆ ಅವರು ಕೇಳುತ್ತಲೇ ಬಂದಿದ್ದಾರೆ ಮತ್ತು ಆ ಕಾರಣಕ್ಕೇ ಇತರರು ಹೇರಿಕೊಂಡಿರುವ ಬದ್ಧತೆ ಮತ್ತು ಪೊಳ್ಳು ಆದರ್ಶಗಳನ್ನು ಗೇಲಿಮಾಡುತ್ತಲೇ ನಿತ್ಯ ಸೆಳೆತದ ಗುಪ್ತಗಾಮೀ ಕಾಮವನ್ನು ವೈಭವೀಕರಿಸುತ್ತಲೇ ಇದ್ದಾರೆ.
ವಾಮಾಚಾರದಲ್ಲಿ ಪೂಜೆ
ಹೂವಿನಿಂದ ದೇವಿಗೆ
ದೇವಿಯ ಹೂವಿಗೆ (ಹೂವೆಂದರೆ)
ಅವರ ಕಾವ್ಯ ಧರ್ಮದ ತಾತ್ವಿಕ ನಿಲುವುಗಳು ಇತರರ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಲೇ ನಿಜದ ತುರೀಯದಲ್ಲಿ ಸಹಜವಾಗಿ ಪಲಾಯನವಾದಿಯಾಗುವ ನಮ್ಮ ಇಬ್ಬಂದಿತನಗಳ ಪರಮಸ್ವರೂಪವೂ ಆಗಿರುವುದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ.
ಯೋಗದ ತುರೀಯದಲ್ಲೂ
ಗುಟ್ಟೊಡೆದದ್ದೇನು?
ಹೂವೇ ಅಲ್ಲವೇನು? (ಹೂವೆಂದರೆ)
ಕೌಟುಂಬಿಕ ನೆಮ್ಮದಿಯ ಅರಿವಿದ್ದೂ ಇವರ ಕಾವ್ಯ ನಾಯಕ ಮತ್ತೆ ಮತ್ತೆ ಬೇಲಿ ಹಾರುವ ಕಾಯಕಕ್ಕಿಳಿಯುತ್ತಾನೆ ಮತ್ತು ವೈವಾಹಿಕ ಬದುಕಿನಾಚೆಯ ಸಂಬಂಧಗಳ ರೋಚಕತೆಗೆ ತೆರೆದುಕೊಳ್ಳುತ್ತಲೇ ಇರುತ್ತಾನೆ. ಆದರೂ ನಿಜಬದುಕಿನ ಒತ್ತಡ ಮತ್ತು ಎಟುಕಲಾರದ ಕನಸಿನೆತ್ತರವನ್ನು ಪ್ರಣಯದ ಹಾದಿಯಲ್ಲೇ ಕಂಡುಕೊಳ್ಳುವ ಹಾದಿ ಹಿಡಿಯುತ್ತಾನೆ. ವಿಫಲ ಪ್ರೇಮದ ಕತೆಗಳನ್ನು ಪದೇ ಪದೇ ನೆನಪಿಸುತ್ತಲೇ ನಿಜ ವಾಸ್ತವವನ್ನು ಒಪ್ಪಿಕೊಂಡೇ ಬದುಕು ಸಾಗಿಸುವುದು ಅನಿವಾರ್ಯ ಕರ್ಮ ತಾನೆ?
ನನಗೆ ಲಭ್ಯವಿಲ್ಲ
ನಿನ್ನ ಪ್ರೇಮಾಮೃತದ ಗಿಂಡಿ
ಪ್ರಾಪ್ತಿ ಇಷ್ಟೇ ನನಗೆ
ನನ್ನ ಮಗನಿಗೆ
ಒಂದು ಮಣ್ಣಿನ ಬಂಡಿ (ಪ್ರಾಪ್ತಿ)
ಬಿ.ಆರ್.ಎಲ್ ಅವರ ಕವಿತೆಗಳನ್ನು ಹೀಗೆ ಡಿಸೆಕ್ಟ್ ಮಾಡುವ ಬದಲು ಅವರ ಕಾವ್ಯದಲ್ಲಿ ಒಳದನಿಯಾಗಿಯೇ ಉಳಿದಿರುವ ಮತ್ತು ಮೇಲ್ನೋಟಕ್ಕೆ ಅಷ್ಟು ಸುಲಭವಾಗಿ ದಕ್ಕದ ವಿಷಾದದ ದನಿಯನ್ನು ಸೂಕ್ಷ್ಮ ಓದಿನಿಂದ ಪಡೆಯುವುದೂ ಸಾಧ್ಯವಿದೆ.
ನಕ್ಕು, ವಾಸಂತಿ
ಬಾವಿ ಕಟ್ಟೆಯ ಬಿಟ್ಟು
ಕೆಳಗಿದಳು
ಅಂತ ಕೊನೆಯಾಗುವ ವಾಸಂತಿ ಎನ್ನುವ ಪದ್ಯ ತನ್ನೊಡಲಿನಲ್ಲಿ ವಿಷಾದದ ಸಾಗರವನ್ನೇ ಹೊತ್ತುಕೊಂಡಿದೆ. ಏರು ಯೌವನದಲ್ಲಿ ಮದುವೆಯಾಗದೇ ಉಳಿದ ಹೆಣ್ಣು, ಅಮ್ಮ ಬಿಸಿಲಿಗೆ ಹರವಿದ ಅಕ್ಕಿಯನ್ನು ತಿನ್ನಬಂದ ಹಕ್ಕಿಯನ್ನೋಡಿಸದೇ ಅಮ್ಮನ ಸಿಟ್ಟಿಗೆ ಕಾರಣಳಾಗಿ ಬಾವಿಕಟ್ಟೆಯ ಮೇಲೆ ಕೂತು ಯೋಚನೆಯಲ್ಲಿ ಲೀನಳಾಗಿದ್ದಾಳೆ. ಗೃಹಸ್ಥ ಅಪ್ಪ ಬಡತನದಲ್ಲಿ ಬೇಯುತ್ತ ಅವರಿವರನ್ನು ಹಳಿಯುವದರಲ್ಲಿ ಲೌಕಿಕದ ಜವಾಬ್ದಾರಿಯನ್ನು ಕಡೆಗಣಿಸುತ್ತಿದ್ದರೆ
ತಿಳಿಯದಾಳದ ಬಾವಿಯ ಆಳ ಪಾತಾಳಕ್ಕೆ
ಜಾರುವ ನುಣ್ಣನೆ ಗೋಳ ಭೂಗೋಳಕ್ಕೆ ವಾಸಂತಿ ವಿಷಾದದ ನಗುವನ್ನಲ್ಲದೇ ಇನ್ನೇನನ್ನು ನಕ್ಕಾಳು? ಕೆ.ಎಸ್.ನ ಅವರ ಅಕ್ಕಿ ಆರಿಸುವಾಗ ಸಣ್ಣ ನುಚ್ಚಿನ ನಡುವೆ ಬಂಗಾರವಿಲ್ಲದ ಬೆರಳು ಬೇರೆಯದೇ ರೀತಿಯಲ್ಲಿ ಇಲ್ಲಿ ಮಾರ್ದನಿಸುತ್ತಿಲ್ಲವೆ?
ಮದುವೆ ಮನೆಗಳಲ್ಲಿ ಕಂಡ ಹೆಣ್ಣುಗಳನ್ನೆಲ್ಲ ಮನದ ಭಿತ್ತಿಯಲ್ಲಿ ಭದ್ರ ಪಡಿಸಿಕೊಳ್ಳುವ ಕವಿಯ ಬಳಿ ಉಳಿಯುವುದು ಅವರೆಲ್ಲರ ಮಾಸುವ ನೆನಪಿನ ನೆಗೆಟಿವ್ಗಳು ಮಾತ್ರ!(ಫೋಟೋಗ್ರಾಫರ್) ಈ
ಬಾರಿ ಮಗುವಿನೊಂದಿಗೆ ನೀನು ಬಂದಿದ್ದಾಗ
ನನ್ನ ನೆನಪಿಸಿಕೊಂಡು ಏಕೋ ಬಿಕ್ಕಿ ಬಿಕ್ಕಿ ಅತ್ತೆಯಂತೆ;
ಹೌದೆ? (ನೆನಪು) ಅನ್ನುವಾಗಲೂ ನಿರೂಪಕನಿರುವುದು ಆಳ ವಿಷಾದದಲ್ಲೇ ತಾನೆ? ಸುಬ್ಬಾ ಭಟ್ಟರ ಮಗಳೇ ಇವೆಲ್ಲಾ ನಂದೇ ತಗೊಳ್ಳೇ ಎಂದು ಆರಂಭವಾಗುವ ‘ರಗಳೆ’ ಕವಿತೆ ಕೊನೆಯಾಗುವುದು ಹೀಗೆ:
ಈ ಸಿಂಹಾಸನದಲ್ಲಿ ಕುಳಿತಿರುವ ಹೆಣ, ಈ ಒಣಗಿದ ಬೇರು
ಒಳಗಡೆ ಹುಳು ನೂರಾರು;
ಸೋತು ಜೋಲುತಿವೆ ಆಲದ ಮರದಲಿ ಬಿಳಲು ಶಿಶ್ನ ಸರ್ಪ,
ಹಲ್ಲು ಮುರಿದ ದರ್ಪ. ಇಲ್ಲಿ ಪ್ರೇಮವಿದೆಯೋ, ಹುಚ್ಚು ಪ್ರಣಯದ ಆರ್ತ ನಾದವಿದೆಯೋ ಕಂಡೂ ಕಾಣದ ವಿಷಾದದ ಶೃತಿ ಇದೆಯೋ?
ವೆಂಕಟಲಕ್ಷ್ಮಿ,ಗಾಂಡಲೀನ, ಶಕೂ, ರಮಾ, ಉಮಾ, ಇಲ್ಲಿನ ಕವಿತೆಗಳಿಗೆ ನಾಟಕೀಯತೆಯ ಸ್ಪರ್ಶವನ್ನು ನೀಡುವಲ್ಲಿ ಸಫಲವಾಗಿದ್ದಾರೆ ಮತ್ತು ಕೇವಲ ಲಕ್ಷ್ಮಣರಾವ್ಗೆ ಮಾತ್ರ ಒಲಿದು ಬಂದ ಅಪ್ಸರೆಯರಾಗಿ, ಕಣಿ ಹೇಳಿದ್ದಾರೆ, ವಿಫಲ ಪ್ರೇಮಿಗಳ ಬದುಕಿನ ಕ್ಷಣ ಭಂಗುರತೆಗೆ ಒಂದು ಚಿಕ್ಕ ಅಲ್ಪವಿರಾಮ ಹಾಕಿಸಿ ಉದ್ದೋ ಉದ್ದ ಇರುವ ಬದುಕಿನುಳಿದ ದಿನಗಳ ಬಗ್ಗೆ ಆಲೋಚಿಸುವಂತೆಯೂ ಮಾಡಿದ್ದಾರೆ.
ಪರಿಪೂರ್ಣತೆ, ಇಂದ್ರಿಯಾತೀತ ಅನುಭೋಗ, ಅದ್ವೈತ ದರ್ಶನಗಳನ್ನೆಲ್ಲ ಕವಿತೆಯೆಂಬ ‘ಕಾಲಯಂತ್ರ’ದಲ್ಲೇ ಅರಸುತ್ತಿರುವ ಬಿ.ಆರ್.ಎಲ್ ಹೊಸ ಕಾಲದ ಫೋಟೊಗ್ರಾಫರ್ಗಳನ್ನೂ, ನೆಗೆಟಿವ್ಗಳೇ ಇಲ್ಲದ ಆಧುನಿಕತೆಯ ಬೆರಗುಗಳನ್ನೂ ಅವರ ಕಾವ್ಯದ ಮೂಲಕ ಕೊಡಲಿ. ಆದರೂ ಈಗಾಗಲೇ ಸಮಗ್ರ ಕಾವ್ಯದ ಮೂಲಕ ಓದುಗರಿಗೆ ಸಿಕ್ಕಿರುವ ಕವಿತೆಗಳನ್ನು ಹೀಗೆ ಬೇರೆ ಬೇರೆಯದೇ ಅರ್ಥ, ಸಂದರ್ಭ, ವಿಷಯ ಅಂತ ಮತ್ತೆ ಮತ್ತೆ ಆರಿಸಿ ಪ್ರಕಟಿಸುತ್ತಲೇ ಹೋದರೆ ಈಗಾಗಲೇ ತನ್ನ ಓದಿನ ಮೂಲಕ ತನ್ನದೇ ವಿಶ್ವವನ್ನು ಕಟ್ಟಿಕೊಂಡಿರುವ ಓದುಗನ ಕಲ್ಪನೆಯನ್ನು ನಿರಾಕರಿಸಿ ಸರಳತೆಗೆ ಎಳೆದಂತಾಗುತ್ತದೆ ಮತ್ತು ಓದಿದ್ದನ್ನೇ ಮತ್ತೆ ಮತ್ತೆ ಬೇರೆ ಬೇರೆಯ ಹೆಸರಿನ ಸಂಕಲನಗಳಲ್ಲಿ ಓದುವ ಕರ್ಮವೂ ಆಗುತ್ತದೆ ಅಲ್ಲವೆ?
ಕೃತಿ: ಪ್ರೇಮಾಂತರಂಗ ಕವಿ: ಬಿ.ಆರ್.ಲಕ್ಷ್ಮಣರಾವ್ ಪುಟ; 132 ವರ್ಷ;2010 ಬೆಲೆ; ರೂ. 75/- ಪ್ರಕಾಶನ: ವಸಂತ ಪ್ರಕಾಶನ, ಜಯನಗರ,ಬೆಂಗಳೂರು-01







0 Comments