ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿರಿಯಾನಿಗೆ ಜಾತಿ, ಮತ ಎಲ್ಲಿದೆ? 

ಮಾಳಿಂಗರಾಯ, ಕೆಂಭಾವಿ

**

ಭಾರತದ  ವೈವಿಧ್ಯತೆಯಲ್ಲಿ ಆಹಾರ ಸಂಸ್ಕೃತಿಯೂ ಒಂದು. ವಿಧ ವಿಧವಾದ ಖಾದ್ಯಗಳ ರುಚಿ ಕಾಣಸಿಗುವುದು ನಮ್ಮ ದೇಶದಲ್ಲೇ… ಅದರಲ್ಲಿ ಮುಖ್ಯವಾಗಿ ಮಾಂಸಾಹಾರ ತುಂಬಾ ಜನರು ಇಷ್ಟಪಟ್ಟೂ ಸೇವಿಸುವ ಆಹಾರ ಪದ್ಧತಿಯಾಗಿದೆ. ಆಹಾರ ಸಂಸ್ಕೃತಿಯ ಮೂಲವನ್ನು ಹುಡುಕುತ್ತಾ ಹೋದರೆ ಮಾಂಸಾಹಾರವೇ ನಮ್ಮ ದೇಶದ ಮೂಲ ಆಹಾರ ಎನ್ನುವುದು ಗೊತ್ತಾಗುತ್ತೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಆಹಾರ ಸಂಸ್ಕೃತಿಯು ಪಲ್ಲಟವಾಗುತ್ತ ಆಹಾರ ರಾಜಕೀಯವಾಗುತ್ತಿರುವುದು ದುರಂತ.

 ಇಷ್ಟೆಲ್ಲಾ ಆಹಾರದ ಬಗ್ಗೆ ಪೀಠಿಕೆ ಹಾಕುತ್ತಿರುವುದು ಯಾಕೆಂದರೆ… ಅನ್ನಪೂರ್ಣಿಯ ಬಗ್ಗೆ ಹೇಳಲು… ಅನ್ನಪೂರ್ಣಿ ನಯನತಾರ ಅಭಿನಯದ ಚಿತ್ರ. ಓಟಿಟಿಯಲ್ಲಿ ಭಾರಿ ಸದ್ದು, ಚರ್ಚೆಯಾಗುತ್ತಿರುವ ಸಿನಿಮಾ. ಚಿತ್ರದ ನಾಯಕಿಗೆ ಅಡುಗೆ ಮಾಡುವುದು ಎಂದರೆ ತುಂಬಾ ಇಷ್ಟ ತನಗೆ ಇಷ್ಟವಾದ ಅಡುಗೆಯನ್ನು ಕಲೆಯನ್ನಾಗಿ ರೂಢಿಸಿಕೊಂಡು ಮುಂದೆ ಭಾರತಕ್ಕೆ ಮಾಸ್ಟರ್ ಶೆಫ್ ಆಗಬೇಕೆನ್ನುವ ಕನಸಿನೊಂದಿಗೆ ಆರಂಭವಾಗುವ ಸಿನಿಮಾ… 

ಪ್ರತೀ ಮನೆಯಲ್ಲೂ ಅಡುಗೆ ಕಾಯಕ ಮಾಡುವವರು ಮಹಿಳೆಯರೇ… ಆದರೆ ದೊಡ್ಡ ದೊಡ್ಡ ಹೋಟೆಲ್ ಗಳಲ್ಲಿ ಅಡುಗೆ ಮಾಡುವವರು ಮಾತ್ರ ಗಂಡಸರೇ…

ಈ ಚಿತ್ರದಲ್ಲಿ ಅಡುಗೆ ಮಾತ್ರ ಇಲ್ಲ. ಮಹಿಳೆಯೊಬ್ಬಳು ಕನಸು ಕಂಡರೆ ಏನೆಲ್ಲ ಸ್ಟ್ರಗಲ್ ಮಾಡಬೇಕಾಗುತ್ತದೆ. ಎನ್ನುವುದನ್ನು ಕಾಣಬಹುದು. ಪ್ರತಿ ಹೆಣ್ಣು ಮಗಳು ವಯಸ್ಸಿಗೆ ಬಂದರೆ ಸಾಕು.. ನೀನು ಏನು ಓದಿದ್ದೀಯಾ? ಏನು ಕೆಲಸ ಮಾಡ್ತೀಯಾ? ಎಂದು ಕೇಳುವ ಬದಲು ನಿನಗೆ ಅಡುಗೆ ಮಾಡಲು ಬರುತ್ತಾ ಎಂದು ಕೇಳುವವರೇ ಹೆಚ್ಙು. ಮನೆಯವರಾದರೂ ನೀನು ಅಡುಗೆ ಕಲಿ ಎಂದು ಹೇಳುತ್ತಾರೆ. ಆವಾಗಲೇ ತೀರ್ಮಾನಿಸುತ್ತಾರೆ. ನೀನು ನಾಲ್ಕು ಗೋಡೆಗೆ ಮಾತ್ರ ಸೀಮಿತವೆಂದು,  ಇದೊಂದು ಜೆಂಡರ್ ಸಮಸ್ಯೆಯಾದರೆ !!  ಇನ್ನು ಜಾತಿಯ ಸಮಸ್ಯೆ ಬೇರೆ ತರಹದ್ದು, 

ಈ ಸಿನಿಮಾದ ಅನ್ನಪೂರ್ಣಿ ಬ್ರಾಹ್ಮಣ ಕುಟುಂಬದವಳು ಅವಳ ತಂದೆ ದೇವಸ್ಥಾನದಲ್ಲಿ ಪ್ರಸಾದ ತಯಾರಿಸುವ ಕೆಲಸ ಮಾಡುತ್ತಾನೆ. ತಂದೆ ಮಾಡುವ ಪ್ರಸಾದ ಅದು ಇದು ನೋಡಿ ಸಹಜವಾಗಿಯೇ ಅನ್ನಪೂರ್ಣಿ ಅಡುಗೆಯಲ್ಲಿ ಆಸಕ್ತಿ ಬರುತ್ತೆ… 

ಅವಳು ಶೆಫ್ ಆಗುವ ಕನಸಿಗೆ ಮೊದಲು ತೊಡಕಾಗುವುದು ಅವರ ತಂದೆ. ಬ್ರಾಹ್ಮಣ ಜಾತಿಯ ಅವಳು ಶೆಫ್ ಆದರೆ ಮಾಂಸಹಾರದ ಅಡುಗೆಯನ್ನು ಮಾಡಬೇಕಾಗುತ್ತದೆ. ಇದರಿಂದ ಬ್ರಾಹ್ಮಣರ ಕರ್ಮಠತನ ಹಾಳಾಗುತ್ತದೆ ಎಂದೂ… ಅನ್ನಪೂರ್ಣಿಯ ಕನಸನ್ನು ವಿರೋಧಿಸಿ ಮದುವೆ ಮಾಡಲು ಮುಂದಾಗುತ್ತಾರೆ. ಮಹಿಳೆಯೊಬ್ಬಳು ಸ್ವತಂತ್ರವಾಗಿ ಯೋಚಿಸಿ ಬದುಕಬೇಕು ಎಂದುಕೊಂಡ ತಕ್ಷಣ ಅವರ ಸ್ವತಂತ್ರ ಮತ್ತು ಕನಸನ್ನು ಹಾಳುಗೆಡುವಲು ಈ ಸಮಾಜ ಪ್ರಯೋಗಿಸುವ ಮೊದಲ ಅಸ್ತ್ರವೇ ಮದುವೆ,, 

ಮನೆಯವರನ್ನು ವಿರೋಧಿಸಿ ಹೇಗೋ ಮುಂದಿನ ಹೆಜ್ಜೆ ಇಡುವಾಗ ಪುರುಷ ಪ್ರಾಧಾನ್ಯತೆಯ ಭಾರತದಂತ ದೇಶದಲ್ಲಿ ಮಹಿಳೆಯೊಬ್ಬಳು ತನ್ನ ಗುರಿಯೆಡೆಗೆ ಸಾಗುವುದು ಸುಲಭದ ಮಾತಲ್ಲ. ಈ ಸಿನಿಮಾದಲ್ಲಿ ರುವಂತೆ ಸಹೋದ್ಯೋಗಿಗಳ ವಿರೋಧ, ಸೋಲಿಸುವ ಪ್ರಯತ್ನ ಎಲ್ಲವೂ ನಡೆಯುತ್ತವೆ.

ಸಸ್ಯಾಹಾರಿಯಾದ ಅನ್ನಪೂರ್ಣಿಗೆ ಶೆಫ್ ಕಾಂಪಿಟೇಶನ್ ನಲ್ಲಿ ಕೊನೆಯ ರೌಂಡ್ ನಲ್ಲಿ ಬಿರಿಯಾನಿಯೇ ಮಾಡಬೇಕಾಗುತ್ತದೆ. ಆ ಬಿರಿಯಾನಿ ಮಾಡುವುದನ್ನು ಅವಳು ಫರಾನ್ ಎಂಬ ಬಾಲ್ಯದ ಸ್ನೇಹಿತನ ತಾಯಿ ಬಿರಿಯಾನಿ ಮಾಡುವಾಗ ನಂಬಿಕೆಯಿಂದ ನಮಾಝ್ ಮಾಡಿ ಮಾಡುತ್ತಾರೆ. ಅದನ್ನೆ ಅನುಸರಿದ ಅನ್ನಪೂರ್ಣಿಯ ಬಿರಿಯಾನಿ ಗೆಲ್ಲುತ್ತೆ…

ಕೊನೆಗೆ ಬಿರಿಯಾನಿಗೆ ಜಾತಿ, ಮತ ಎಲ್ಲಿದೆ ? ಎನ್ನುವ ಮಾತು ಸೌಹಾರ್ದ ಮತ್ತು ವಿವಿಧ ಆಹಾರ ಸಂಸ್ಕೃತಿಯನ್ನು  ಎತ್ತಿಹಿಡಿಯುತ್ತದೆ. 

ಸಿನಿಮಾ ಪೂರ್ತಿ ಎಲ್ಲಿಯೂ ಬೋರ್ ಹೊಡಿಸದೇ ಪ್ರತಿಯೊಂದು ಸನ್ನಿವೇಶಗಳನ್ನು ಕುತೂಹಲದಿಂದ ನೋಡುವಂತೆ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ಈ ಸಿನಿಮಾ ಹೊಂದಿದೆ.

‍ಲೇಖಕರು avadhi

12 January, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading