
ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಸಿಡಿಯಲು ಸಜ್ಜಾಗಿರುವ ರಾಜ್ಯ ಬಿಜೆಪಿ ಆಂತರಿಕ ವಿದ್ಯಮಾನ ಮತ್ತು ಪ್ರಸಕ್ತ ಹಣಾಹಣಿ ರಾಜಕಾರಣ ಒಂದಕ್ಕೊಂದು ಹೇಗೆ ಬೆಸೆದುಕೊಂಡಿದೆ ಎಂಬ ಬಗ್ಗೆ ಇವತ್ತಿನ ಅಂಕಣದಲ್ಲಿ ನೋಡೋಣ.
ಯಾಕೆಂದರೆ ಬಿಜೆಪಿ ಯ ಫೈರ್ ಬ್ರಾಂಡ್ ನಾಯಕ ಬಿಎಸ್ ಯಡಿಯೂರಪ್ಪ ಅವರ ನಾಯಕತ್ವ ವೈಖರಿ ಬಗ್ಗೆ ಎರಡು ವಾರ ಮೊದಲಷ್ಟೇ ಬರೆದು, ಅವರ ವಿರುದ್ಧ ನಡೆದಿರುವ ಮಸಲತ್ತಿನ ಬಗ್ಗೆ ಸೂಕ್ಷ್ಮ ಸುಳಿವು ನೀಡಿದ್ದ ನನಗೆ ಅದು ಇಷ್ಟು ಬೇಗ ಚುನಾವಣೆಗೆ ಮುಂಚಿತವಾಗಿಯೆ ಸ್ಫೋಟವಾಗಿತ್ಠೆಎನ್ನುವುದು ಮಾತ್ರ ಸ್ವಲ್ಪ ಅನಿರೀಕ್ಷಿತವೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ಕೇವಲ ಅದೊಂದು ಹೆಸರು ಘೋಷಣೆ ಅಷ್ಟೆ ಆಗಿರದೆ , ಚುನಾವಣೆ ಸಾರಥ್ಯ ವಹಿಸಿದ ಯಡಿಯೂರಪ್ಪ ಅವರನ್ನು ನಿರ್ದಾಕ್ಷಿಣ್ಯವಾಗಿ ಎತ್ತಂಗಡಿ ಮಾಡುವ ಪಿತೂರಿಯ ಸುಳಿವು ಎಂದು ಬಿಜೆಪಿ ನಾಯಕರೇ ಭಾವಿಸಿರುವುದೇ..ಈ ಚುನಾವಣೆಯ ಮತ್ತೊಂದು ಮಹತ್ವದ ವಿದ್ಯಮಾನ.
ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ಹೆಸರು ಘೋಷಣೆಗೂ..ಬಿಎಸ್ವೈ ಎತ್ತಂಗಡಿ ಗೂ ಹೇಗೆ ಸಂಬಂಧ?

ಅಭ್ಯರ್ಥಿ ಹೆಸರು ಘೋಷಣೆ ಆಗುತ್ತಿದ್ದಂತೆ ದಂಗುಬಡಿದವರಂತೆ ಬೇಸರದಿಂದ , ಅದುಮಿಟ್ಟ ಕೋಪದಿಂದ ಬಿಎಸ್ವೈ “ನನಗೂ ಇದಕ್ಕೂ ಸಂಬಂಧವಿಲ್ಲ. ನಾನು ತೇಜಸ್ವಿನಿ ಅನಂತಕುಮಾರ್ ಹೆಸರನ್ನು ಶಿಫಾರಸ್ಸು ಮಾಡಿ ಕೇಂದ್ರಕ್ಕೆ ಕಳಿಸಿದ್ದೆ“ ಎಂದು ನೇರವಾಗಿ ಹೇಳಿದರು.
ಪಕ್ಷದ ರಾಜ್ಯಾಧ್ಯಕ್ಷರಾಗಿರುವ ”ತಮಗೆ ಇದು ಗೊತ್ತಿಲ್ಲ“ ಎನ್ನುವ ಮೂಲಕ ದಿಲ್ಲಿ ದರ್ಬಾರಿನಲ್ಲಿ”ಕಾಣದ ಕೈಗಳು“ ತಮ್ಮ ವಿರುದ್ದ ಒಳಸಂಚು ನಡೆಸಿರುವುದನ್ನು ಪರೋಕ್ಷವಾಗಿ ತಿಳಿಸಿದರು ಬಿಎಸ್ವೈ .
ಅಷ್ಟೆ ಅಲ್ಲ ಈ ಅಭ್ಯರ್ಥಿ ತಮ್ಮ ಆಯ್ಕೆ ಅಲ್ಲ ಎಂದು ತಮ್ಮ ಅಜ್ಞಾನ ಪ್ರದರ್ಶಿಸಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವಿದ್ಯಮಾನದಿಂದ ದೂರ ಉಳಿಯುವ ಸೂಚನೆ ನೀಡಿದ್ರು.
ಅತ್ಯಂತ ಆಗೌರವಯುತವಾಗಿ, ಅಪಮಾನಕಾರಿಯಾಗಿ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಎತ್ತಂಗಡಿ ಮಾಡಲು ದಿಲ್ಲಿಯಲ್ಲಿ ನಡೆಸಿರುವ ಯತ್ನ ಖುದ್ದು ಯಡಿಯೂರಪ್ಪ ಗಮನಕ್ಕೆ ಬಂದಿರುವುದು ಕೂಡಾ ಇದೀಗ ಬಿಜೆಪಿ ಆಂತರಿಕ ವಲಯದಲ್ಲಿ ಎಲ್ಲರಿಗೂ ತಿಳಿದ ಸಂಗತಿ ಆಗಿದೆ.
ಹಾಗಾದರೆ ಈ ಕಾಣದ ಕೈಗಳು ಯಾರು? ಯಾಕಾಗಿ ಈ ರಂಗಸಜ್ಜಿಕೆ? ಈಗಾಗಲೇ ಯಡಿಯೂರಪ್ಪ ಅವರಿಗೆ ಯಾವುದಾದರೂ ರಾಜ್ಯದ ರಾಜ್ಯಪಾಲರಾಗಲು ತಯಾರಾಗಿ ಎನ್ನುವ ಆದೇಶ ಬಂದಿದೆಯಾ? ಯಡಿಯೂರಪ್ಪ ಇದಕ್ಕೆ ಖಂಡ ತುಂಡವಾಗಿ ನಿರಾಕರಿಸಿದ್ದಾರಾ? ಈ ಎಲ್ಲ ಪ್ರಶ್ನೆಗಳೂ ಇದೀಗ ಬಿಜೆಪಿಯಲ್ಲಿ ಈಗಾಗಲೇ ಚರ್ಚೆಗೆ ಗ್ರಾಸವಾಗಿದೆ.
ಈಗಾಗಲೇ ಬಿಜೆಪಿ ಆಂತರಿಕ ವಲಯದಲ್ಲಿ ಹತೋಟಿ ಸಾಧಿಸಿರುವ ಆರ್.ಎಸ್.ಎಸ್. ಮೂಲದ ಸಂತೋಷ್ ಜೀ, ಮತ್ತು ಮುಕುಂದ ..ಈ ಇಬ್ಬರೇ ಇದೀಗ ವಿದ್ಯಮಾನದ ರೂವಾರಿಗಳು.
ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಆಯ್ಕೆ ಮೂಲಕ ಎರಡು ಪ್ರಮುಖ ಸಂದೇಶಗಳನ್ನು ಬಿತ್ತರಿಸಿ ಬಿಜೆಪಿಯ ದಿಕ್ಕನ್ನೇ ಬದ ಲಿಸುವ ವರಸೆ ತೋರಿದ್ದಾರೆ ಸಂತೋಷ್ ಮತ್ತು ಮುಕುಂದ್ ಎಂಬ “ಜೋಡೆತ್ಠುಗಳು”.
ರಾಜ್ಯ ರಾಜಕೀಯದಲ್ಲಿ ಎಲ್ಲೆಲ್ಲೂ “ಜೋಡೆತ್ಠುಗಳ“ ಚರ್ಚೆ ಸಾಗಿದ್ದು ಸುಮಲತಾ ಪಾಲಿಗೆ ನಟರಾದ ದರ್ಶನ – ಯಶ್ ಜೋಡೆತ್ಠಾದರೆ, ಇತ್ಠ ಮೈತ್ರಿ ಸರ್ಕಾರದ ಪಾಲಿಗೆ ಅವರೇ ಘೋಷಿಸಿಕೊಂಡಂತೆ ಕುಮಾರಸ್ವಾಮಿ – ಡಿ ಕೆ ಶಿವಕುಮಾರ್ ಜೋಡೆತ್ತುಗಳು. ಇಲ್ಲಿ ಬಿಜೆಪಿಯಲ್ಲಿ ಉದ್ಭವವಾಗಿರುವ ಹೊಸ ಜೋಡೆತ್ತುಗಳೇ ಈ ಸಂತೋಷ್ ಮತ್ತು ಮುಕುಂದ್.
ಅಷ್ಟಕ್ಕೂ ಈ ಜೋಡಿ ಎತ್ತುಗಳ ಹೆಜ್ಜೆ ಗುರುತು ಯಾವುದು? ಯಡಿಯೂರಪ್ಪ ಅವರನ್ನು ನೇಪಥ್ಯಕ್ಕೆ ಸೇರಿಸುವುದು ಒಂದು ಅಂಶವಾದರೆ, ಈವರೆಗೆ ಬಿಜೆಪಿ ಮಾಡಿಕೊಂಡು ಬಂದಿರುವ “ರೈತ ರಾಜಕಾರಣ“ವನ್ನೆ ಬದಲಿಸಿ ಉತ್ತರ ಪ್ರದೇಶ ಮಾದರಿಯ “ಕೋಮು ದಳ್ಳುರಿ” ರ ಆಧಾರದ ಮೇಲೆ ಕರ್ನಾಟಕದ ನಕಾಶೆ ಬದಲಿಸುವುದು ಮತ್ತೊಂದು ಪ್ರಮುಖ ಅಂಶ.
ನಿಮಗೆ ಈಗ ಅರ್ಥ ಆಗಿರಬೇಕು. ಏಕಾಏಕಿ ಶಂಖದಿಂದ ತೀರ್ಥದಂತೆ ಉದುರಿದ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯಗೆ ನೀಡಲಾದ ಟಾಸ್ಕ್ ಏನು ಎನ್ನುವುದು ನಿಚ್ಚಳ.
ಇದರ ಜೊತೆ ಇನ್ನೊಂದು ಮಹತ್ವದ ವಿಚಾರ.
ಉತ್ತರ ಕನ್ನಡ ಲೋಕ ಸಭೆಗೆ ಅನಂತ್ ಕುಮಾರ್ ಹೆಗಡೆ ಅವರಿಗೆ ಟಿಕೆಟ್ ನೀಡಬಾರದೆಂದು ಯಡಿಯೂರಪ್ಪ ಪಟ್ಟು ಹಿಡಿದಿದ್ದರು. ಅವರಿಂದ ಪಕ್ಷಕ್ಕೆ ಧಕ್ಕೆ ಆಗಿದ್ದು ಟಿಕೆಟ್ ನಿರಾಕರಿಸಬೇಕು ಎಂದು ಆಗ್ರಹಿಸಿದ್ದರು. ಆದರೆ.. ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ಇದನ್ನು ಸುತಾರಾಂ ಒಪ್ಪಲಿಲ್ಲ. ಅನಂತ್ ಕುಮಾರ್ ಹೆಗಡೆ ಗೆ ಹಿಂದುತ್ವದ “ಫ್ಯಾನ್ ಫಾಲೋಯಿಂಗ್ “ ಇದೆ. ಅವರೊಬ್ಬ “ಕ್ರೌಡ್ ಪುಲ್ಲರ್” ಎನ್ನುವುದೇ ಅವರ ಲೆಕ್ಕಾಚಾರ.
ಒಂದೆಡೆ ಬೆಂಗಳೂರು ದಕ್ಷಿಣಕ್ಕೆ “ಮರಿ ಅನಂತ್ಕುಮಾರ್ ಹೆಗಡೆ” ಖ್ಯಾತಿಯ ತೇಜಸ್ವಿ ಸೂರ್ಯಗೆ ಟಿಕೆಟ್, ಇತ್ತ ಉತ್ತರ ಕನ್ನಡಕ್ಕೆ ಅನಂತ್ ಕುಮಾರ್ ಹೆಗಡೆಗೆ ಪುನರಾಯ್ಕೆ ಟಿಕೆಟ್ ಇವೆಲ್ಲ ಬಿಜೆಪಿ ಯ ಜೋಡೆತ್ತುಗಳಾದ ಸಂತೋಷ್ ಮತ್ತು ಮುಕುಂದ್ ರೂಪಿಸಿದ ತಂತ್ರಗಾರಿಕೆಯ ಸಣ್ಣ ಭಾಗ ಮಾತ್ರ.
ಉನ್ನತ ಮೂಲಗಳ ಪ್ರಕಾರ ಈ ಜೋಡಿ ವರಿಷ್ಠರಿಗೆ ರವಾನಿಸಿರುವ ವರದಿಯಲ್ಲಿ ಬಿಎಸ್ವೈ ಅವರನ್ನು ಕಸಾಯಿಖಾನೆಗೆ ಸಾಗಿಸಬೇಕಾದ ಮುದಿ ಎತ್ತು ಎಂಬಂತೆ ಬಿಂಬಿಸಲಾಗಿದೆ.
ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ನಾಯಕರ ಬಾಯಲ್ಲೇ ಹೇಳುವುದಾದರೆ ಯಡಿಯೂರಪ್ಪ ಅವರ ಬಗ್ಗೆ ಅಮಿತ ಶಾ ಲಾಭ, ನಷ್ಟದ ಲೆಕ್ಕ ಹಾಕಿದ್ದಾರೆ. ಅವರಿಗೆ ಸ್ಥಾನದಲ್ಲಿ ಮುಂದುವರೆಸುವುದರಿಂದ ನಷ್ಟ ಹೆಚ್ಚು ಎಂದು ಅಂದಾಜು ಮಾಡಲಾಗಿದೆ.
“ಪ್ರತಿ ಹಂತದಲ್ಲೂ ತನ್ನ ಕಪಿಮುಷ್ಟಿಯನ್ನು ಬಿಗಿಪಡಿಸಿಕೊಳ್ಳುವ ಬಿಎಸ್ವೈ ಪಕ್ಷಕ್ಕಿಂತ ಹೆಚ್ಚಾಗಿ ವ್ಯಕ್ತಿಪ್ರತಿಷ್ಟೆಯ ರಾಜಕೀಯ ಮಾಡಿದ್ದಾರೆ. ಪಕ್ಷಕಟ್ಟುವ ಕೆಲಸ ಬಿಟ್ಟು ಬರೀ ಆಪರೇಶನ್ ಕಮಲ ಮಾಡಿಕೊಂಡು ಧಕ್ಕೆ ತಂದಿದ್ದಾರೆ. ಪ್ರತಿ ನೇಮಕದಲ್ಲಿ ಅವರ ಬೆಂಬಲಿಗರ ತುಂಬಿಕೊಂಡು ಹಿರಿಯ ನಾಯಕರ ಮಾತುಗಳನ್ನು ಗಾಳಿಗೆ ತೂರಿದ್ದಾರೆ .ಅವರ ಜನಪ್ರಿಯತೆ ಕುಗ್ಗಿದೆ” ಇದು ವರಿಷ್ಠರ ಬಳಿ ಇರುವ ವರದಿಯ ಸಾರಾಂಶ.
ಹೀಗಾಗಿಯೆ ಭವಿಷ್ಯದ ರಾಜಕಾರಣ ಕುತೂಹಲಕಾರಿ ಮತ್ತು ಕೋಲಾಹಲಕಾರಿ ಆಗಿರುವ ಸಾಧ್ಯತೆಯೇ ಹೆಚ್ಚು.
ಇನ್ನು ವಾಪಸ್ ಬೆಂಗಳೂರಿಗೆ ಬಂದು ಬಿಜೆಪಿ ರಾಜಕಾರಣವನ್ನು ಚರ್ಚಿಸುವುದಾದರೆ.. ದಿವಂಗತ ನಾಯಕ ಎಚ್. ಎನ್. ಅನಂತ್ ಕುಮಾರ್ ಪ್ರತಿನಿಧಿಸುವ ಕ್ಷೇತ್ರಕ್ಕೆ ತೇಜಸ್ವಿ ಸೂರ್ಯ ಸಮಂಜಸವೇ ? ಎನ್ನುವ ಪ್ರಶ್ನೆ.
ಅನಂತ್ ಕುಮಾರ್ ಬಿಜೆಪಿ ನಾಯಕರಾಗಿದ್ದರೂ ಕೂಡಾ ಅವರು ಮಾಡಿದ್ದು all party politics. ಬಹಿರಂಗವಾಗಿ ಹಿಂದುತ್ವದ ರಾಜಕೀಯ ಮಾಡಲಿಲ್ಲ.
ಆದರೆ ತೇಜಸ್ವಿ ಸೂರ್ಯ ಅವರನ್ನು ಮಹತ್ವಾಕಾಂಕ್ಷೆಯ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಮೂಲಕ ಮಹಾನಗರಿ ಬೆಂಗಳೂರಿನಲ್ಲಿ” ಹಿಂದುತ್ವದ ಸೋಂಕು” ಹರಡುವ ಪ್ರತಿನಿಧಿಯನ್ನು ಗೆಲ್ಲಿಸಲು ಯತ್ನಿಸಿರುವ ಅನುಮಾನ ಕಾಡಿದೆ.
ಕಡಲ ತೀರ ಮಂಗಳೂರು ಮಾದರಿಯಲ್ಲೇ ರಾಜಧಾನಿ ಬೆಂಗಳೂರಲ್ಲೂ ನೈತಿಕ ಪೊಲೀಸ್ ಗಿರಿ, ಕೋಮು ದಳ್ಳುರಿಯ ಪ್ರಯೋಗಕ್ಕೆ ಅಖಾಡ ಸಜ್ಜಾಗಿದೆಯೇ? ಸಿಲಿಕಾನ್ ಸಿಟಿ ಎಂಬ ಹೆಮ್ಮೆಯ ಬ್ರಾಂಡ್ ಕಥೆಯೇನು? ಇದು ಬಿಜೆಪಿ ಭವಿಷ್ಯದ ರಾಜಕೀಯದ ದಿಕ್ಸೂಚಿಯೆ? ಎನ್ನುವ ಪ್ರಶ್ನೆಗೆ ಉತ್ತರ ಬೇಕಿದೆ.
ಇದಕ್ಕೆ ಯಡಿಯೂರಪ್ಪ ಅವರು ಪಕ್ಷದ ಅಧ್ಯಕ್ಷರಾಗಿ ಉತ್ತರ ಬೇಕಿದೆ. ಇದಕ್ಕೆ ಒಪ್ಪಿಗೆ ಇದೆಯೋ? ಇಲ್ಲವೋ? ಎನ್ನುವುದನ್ನು ಬಹಿರಂಗ ಪಡಿಸಬೇಕಿದೆ.
ದಿವಂಗತ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ನೀಡುವುದಾಗಿ ಹೇಳಿ, ನಂಬಿಸಿ ಅಪಮಾನ ಮಾಡಿ ಕಾರಣ ಕೂಡಾ ಕೊಡದಿರುವ ಬಿಜೆಪಿ ವರಿಷ್ಠರ ನಿಲುವು ಮತದಾರರನ್ನು ಚಕಿತಗೊಳಿಸಿದೆ. ಈ ಅಪಮಾನವನ್ನು ಬಿಜೆಪಿ ನಾಯಕರು, ಕಾರ್ಯಕರ್ತರು ಸಹಿಸಿಕೊಂಡು ತೇಜಸ್ವಿ ಸೂರ್ಯರನ್ನು ಗೆಲ್ಲಿಸಬೇಕೆ? ಈ ಎಲ್ಲಕ್ಕೂ ಉತ್ತರ ಬೇಕಿದೆ.
ಚುನಾವಣೆಯ ಈ ಹೊತ್ತಲ್ಲಿ ಲಿಂಗಾಯತ ಸಮುದಾಯವನ್ನೆ ನಂಬಿಕೊಂಡಿರುವ ಬಿಜೆಪಿ, ಈ ಸಮುದಾಯದ ನಾಯಕನನ್ನು ಮೂಲೆಗುಂಪು ಮಾಡಲು ಹೊರಟಿರುವುದು ಅಪಾಯಕಾರಿ ನಡವಳಿಕೆ ಎನ್ನುವುದು ಬಿಜೆಪಿಯ ಜೋಡೆತ್ತುಗಳಿಗೂ, ವರಿಷ್ಟರಿಗೂ ಗೊತ್ತಿರುವ ವಿಚಾರವೆ.
ಆದರೆ ಬಿಜೆಪಿ ಗೆದ್ದರೆ ಮೋದಿ ಲೆಕ್ಕ, ಸೋತರೆ ಯಡಿಯೂರಪ್ಪ ಹೊಣೆ ಎಂಬ ಸೂತ್ರ ಹೊಸೆದು ಬಲಿಪೀಠಕ್ಕೆ ಏರಿಸಲು ಕಾದುಕುಳಿತಿರುವುದೇ ಈ ಹೊತ್ತಿನ ವಿದ್ಯಮಾನ ವಾಗಿದೆ. ಮತದಾರ ಮಹಾಪ್ರಭುಗಳ ತೀರ್ಮಾನ ಇವರ ತಂತ್ರಕ್ಕೆ ಉತ್ತರ ನೀಡಲಿದೆ.
ಬಿಜೆಪಿಯಲ್ಲೂ 'ಜೋಡೆತ್ತು'
ನಿಮಗೆ ಇವೂ ಇಷ್ಟವಾಗಬಹುದು…





ವಾಸ್ತವದ ವಿಶ್ಲೇಷಣೆ ಸರ್.ಚುನಾವಣೆ ನಂತರ ಮತ್ಯಾವ ಚುನಾವಣೆಯು ಹತ್ತಿರವಿಲ್ಲದ ಕಾರಣ ಯಡಿಯೂರಪ್ಪನೆಂಬ ಮುದಿ ಎತ್ತನ್ನು ಕಸಾಯಿಖಾನೆಗೆ ಕಳಿಸದೆ ನಿರಾಶ್ರಿತರ ತಾಣವಾದ ರಾಜ್ಯಪಾಲ ಹುದ್ದೆಗೆ ನೇಮಿಸಬಹುದು.