ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಬಿಂಬ – ಪ್ರತಿಬಿಂಬ’, ವಿನತೆ ಶರ್ಮ ಬರೆದ ಕಥೆ

ಡಾ ವಿನತೆ ಶರ್ಮ



“ನಾವು ಹೆಂಗಸರು ನಮ್ಮ ಪ್ರಪಂಚವನ್ನ ನಾಲ್ಕು ಗೋಡೆಗಳ ಮಧ್ಯ ಕಟ್ಕೊಂಡ್  ಬದಕತೀವಿ.”

ಹೀಗೆ ಹೇಳಿದ ಅವಳ ಕಣ್ಣಲ್ಲಿ ತೆಳ್ಳನೆ ನೀರಿನ ಅಲೆ. ಅವಳ ಆ ಮಾತನ್ನ ಕೇಳಿದ ಇವಳ ಕಣ್ಣಲ್ಲಿ ತೇವ. ಇಬ್ಬರಿಗೂ ಅದು ಅವಳಿಗೆ ಇವಳಿಗೆ ಕಾಣಿಸುತ್ತಿದೆಯೇನೋ ಎಂಬ ಆತಂಕ. ಅನುಮಾನ. ಮೌನ.  ಹಿಂಜರಿಕೆ, ಅವಳಿಗೆ. ಈ ಮೌನವನ್ನು ಮುರಿಯುವುದು ಹೇಗೆ ಎಂಬ ಪ್ರಶ್ನೆ ಇವಳಿಗೆ. ಅವಳೇ ಮುಂದುವರೆಸಿದಳು.

“ಬರೀ ಹೆಣ್ಣು ಮಕ್ಕಳಿದ್ದ ಮನೆ ನಮ್ಮದು. ಒಬ್ಬರ ಸಂಪಾದನೆ. ಡಿಗ್ರಿ ಮುಗಿಯುತ್ತಲೇ ಸಾಗಹಾಕೆಂಬ ಅಪ್ಪನ ಯೋಚನೆ ಸದಾ ನಮ್ಮನ್ನು ಆವರಿಸಿತ್ತು. ದೊಡ್ಡವಳಾದ ನನಗೆ ದೊಡ್ಡ ಪ್ರಶ್ನೆ – ಯಾಕೆ? ನಾನು ಕೆಲಸಕ್ಕೆ ಸೇರಿ ಸಂಪಾದಿಸಿ ಬದುಕುವ ಬೇರೆ ಬೇರೆ ದಾರಿಗಳನ್ನು ಹುಡುಕಿಕೊಳ್ಳುತ್ತೀನಿ.” ನನ್ನ ಹಿಂದೆ ಇನ್ನೂ ಇಬ್ಬರು – ಅಪ್ಪ ಅಮ್ಮನಿಗೆ ಹೆದರಿಕೆ. ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಎಂದು ಆಗಿಬಿಟ್ಟರೆ. ಅಮ್ಮಾ ತಾಯಿ, ಸುಮ್ಮನೆ ನಾವು ಹೇಳಿದ ಹಾಗೆ ಕೇಳು, ಅಷ್ಟು ಸಾಕು ಎಂಬ ಸೂಚನೆ ಎಲ್ಲ ತರದಲ್ಲೂ ಗೊತ್ತು ಮಾಡಿಸುತ್ತಿದ್ದರು. ಆದರೂ ನಾನು ಟೀಚರ್ ಕೆಲಸಕ್ಕೆ ಹೋಗುತ್ತಿದ್ದೆ. ಏನೇನೋ ಕನಸುಗಳು, ಬರೀ ಇಪ್ಪತ್ತೊಂದೆ ವಯಸ್ಸು ಆಗ.

ಆ ಮನೆಯಲ್ಲೋ, ಬರೀ ಗಂಡು ಮಕ್ಕಳು, ತಂದೆ ಇಲ್ಲ, ತಾಯಿಗೆ ಬಿಡದೆ ಕಾಡುವ ಅನಾರೋಗ್ಯ. ದೊಡ್ದವನದ್ದು ಆಗಲೇ ಮದುವೆಯಾಗಿ ಒಂದು ಮಗುವಿತ್ತು. ಎರಡನೆಯವನಿಗೆ ನನ್ನನ್ನು ನೋಡಿದ್ದು. ಅತ್ತೆಯ ಕಂಡೀಶನ್ – ಹುಡುಗಿ ಕೆಲಸದಲ್ಲಿ ಇರಬಾರದು. ಮನೆವಾರ್ತೆ ನೋಡಿಕೊಂಡು ನನಗೆ ಒಗ್ಗಿಕೊಂಡು ಇರಬೇಕು. ನನಗೆ ಆಘಾತ. ನಾನು ಕೆಲಸದಲ್ಲಿದ್ದರೆ ನಮ್ಮ ಮುಂದಿನ ಜೀವನಕ್ಕೆ ಎಷ್ಟೋ ಅಷ್ಟು ಸಹಾಯವಾಗುತ್ತದೆ ಎಂದು ಅವನಿಗೆ ಸೂಕ್ಷ್ಮವಾಗಿ ಹೇಳಿದೆ. “ನಮ್ಮಮ್ಮ ಹೇಳಿದ ಹಾಗೆ ಕೇಳು” ಎಂದು ಕೈ ಒರೆಸಿಕೊಂಡ ಅವನು. ನನ್ನ ಕಣ್ಣೀರು ಒರೆಸುವ ದೊಡ್ಡ ಹೃದಯವಾಗಲಿ, ಪ್ರೀತಿಯ ಮನಸ್ಸಾಗಲಿ, ಹೋಗಲಿಯಪ್ಪಾ ಎಂದರೆ ಆಪ್ಯಾಯಮಾನದ ಮಾತಾಗಲೀ ಇಲ್ಲ. ಎಷ್ಟಾದರೂ ಅವರು ಆಯ್ಕೆ ಮಾಡಿಕೊಂಡ ಸೊಸೆಯಲ್ಲವೇ. ಅವಳ್ ಬಿಟ್ ಅವಳ್ ಬಿಟ್ ಅವಳ್ಯಾರು? ಓಯ್ ಹೆಣ್ಣೇ ನೀನು, ಹೂ, ನೀನೆ, ನಿನ್ನನ್ನ ಸೆಲೆಕ್ಟ್ ಮಾಡಿದ್ದೀನಿ, ನಿನ್ನ ಮುಂದಿನ ಡೆಸಿಗ್ನೆಶನ್ ‘ಸೊಸೆ.’  ಹೆಂಡತಿ ಆಮೇಲೆ. ಅಥವಾ ನಾನು ಹಾಗೆ ಹೇಳಿದಾಗೆಲ್ಲ, ಮತ್ತು ಅವನು ಕದ್ದು ಮುಚ್ಚಿ ನಿನ್ನನ್ನ ಮುಟ್ಟಿದಾಗೆಲ್ಲ. ನಮಗಿಂತ ಹಣಕಾಸು ವಿಷಯದಲ್ಲಿ ಹೆಚ್ಚಿನವರಾಗಿದ್ದ ಅವರ ಮನೆಯ ಸೊಸೆ ನಾನು, ಸದ್ಯ ಅಪ್ಪ ಅಮ್ಮರ ಮನಸ್ಸಿಗೆ ಸಮಾಧಾನ. ತಂಗಿಯರಿಗೆ ಒಳ್ಳೊಳ್ಳೆಯ ಸಂಬಂಧ ಗಳು ಸಿಕ್ಕತ್ವೆ ಎಂಬ ಯೋಚನೆ ನನಗೆ. ಏನೋ ತಳಮಳ, ಆತಂಕ, ಭಯ. ಜೊತೆಗೆ, ಇವನು ನನ್ನವ, ಪ್ರೀತಿ ಮಾಡುತ್ತಾನೆ, ಜೊತೆಗಿರುತ್ತಾನೆ ಎಂಬ ನಿರೀಕ್ಷೆ, ಆಸೆ.

“ಹಾಗಾದ್ರೆ ನಿನ್ನ ಗಂಡ ಪ್ರೀತ್ಸಿದ್ರ?”

“ಇರೆ. ಹೇಳ್ತೀನಿ. ಅದೆಲ್ಲ ಉದ್ದಾನೂದ್ದದ ಕತೆ. ಚುಟುಕ ಮಾಡ್ತೀನಿ ಇರು. ಗಂಡ ಅವನಾಗಿದ್ದ. ಮಕ್ಕಳಿಗೆ ತಂದೆಯಾದ. ಪ್ರೇಮಿಯಾಗಲಿಲ್ಲ. ಪ್ರಿಯಕರನಾಗಲಿಲ್ಲ. ಇಪ್ಪತ್ತೊಂದರ ರೋಮ್ಯಾನ್ಸ್ ತುಂಬಿದ ನನ್ನ ಮನಸಲ್ಲಿ, ಎದೆಯಲ್ಲಿ ಏನೇನೋ ಕಲ್ಪನೆ, ಆಸೆ, ಆಕಾಂಕ್ಷೆ, ಅವನು ಮುಟ್ಟಿದರೆ ನನ್ನ ಕೆನ್ನೆಗಳು ಕೆಂಪಾಗುತ್ತವೆ, ಕೆಂಪು ಆಗೇ ಆಗುತ್ತವೆ… ಊಹೋಮ್, ಕೆನ್ನೆ ಕೆಂಪಾಗಲಿಲ್ಲ. ಅವನ ಆ ಸ್ಪರ್ಶದಲ್ಲಿ ಕೂಡ ಏನೋ ಭಯ, ಹಿಂಜರಿಕೆ, ಹೊರಗಡೆ ಹಾಲಿನಲ್ಲಿ ಮಲಗಿರುವ ಅಮ್ಮನಿಗೆ ಕೇಳಿಸಿಬಿಟ್ಟರೆ, ಅಥವಾ ಪಕ್ಕದ ರೂಮಿನಲ್ಲಿ ಮಲಗಿರುವ ತಮ್ಮಂದಿರಿಗೆ ತಿಳಿದುಬಿಟ್ಟರೆ – ನಿಧಾನವಾಗಿ, ದಿನ ಹೋದಂತೆ ನನಗೆ ಅರ್ಥವಾಯಿತು. ನನ್ನ ಗಂಡ ಈ ಮನೆಯಲ್ಲಿರುವ ಎಲ್ಲಾರ ಪೈಕಿ ಮೃದು ಸ್ವಭಾವದವನು, ಎಲ್ಲರಿಂದ ಛೇಡಿಸಿ ಕೊಳ್ಳುವವನು, ಅವನಿಗೆ ಯಾವಾಗಲೂ ಕಡೆಯ ರ್ಯಾಂಕ್ . ಈ ಕೆಲಸ ಮಾಡು ಎಂದರೆ ಮಾಡುವವನು. ನನ್ನ ಸ್ಥಾನವೂ ಹಾಗೆ, ಅಷ್ಟೇ ಎಂಬ ಸತ್ಯ ನನಗೆ ಅರ್ಥವಾಯಿತು. ಮೈ ಮುದುಡಿತು. ಮನಸ್ಸು ಬಾಡಿ ಹೋಯಿತು. ಸೊಸೆ ಎಂಬ ಪಾತ್ರ ತಲೆಗೆ ಅಂಟಿಕೊಂಡಿತು. ಹೆಂಡತಿಯಾ ಸ್ಥಾನ ಅಭ್ಯಾಸವಾಯಿತು.

“ಅಷ್ಟ ಬೇಗ ಅಡ್ಜಸ್ಟ್ ಆಗ್ ಬಿಟ್ಯಾ? “

“ಹ, ಅಡ್ಜಸ್ಟ್ – ಹೂಂ ಆದೆ ಆದೆ. ಹೇಗೆ ಗೊತ್ತಾ? ಮಾತು ಮರ್ತೇ ಬಿಟ್ಟೆ. ಮೌನದ ಜೊತೆ ಸ್ನೇಹ ಮಾಡಿದೆ. ಸರಿ ಅಮ್ಮ, ನೀವು ಹೇಗೆ ಹೇಳಿದ್ರೆ ಹಾಗೆ, ಎನ್ನವ ಬಾಯಿಪಾಟವಾಯ್ತು. ಬೇಕಾದಷ್ಟು ಇದ್ದವರ ಮನೆಯಿಂದ ಬಂದಿದ್ದ ದೊಡ್ಡ ಸೊಸೆ ಮಹಡಿ ಮೇಲಿನ ಅವರ ರೂಮಿನಲ್ಲಿ, ಕೆಳಗಡೆ ನಾನು, ಅತ್ತೆ – ಯಾವಾಗಲೂ ಇಬ್ಬರೇ. ಅವರ ಸೇವೆ, ಮನೆ ಕೆಲಸ. ಇವನ ಜೊತೆ ಮಾತನಾಡೋಣ ಎಂದರೆ ಬೆಡ್ ರೂಂಗೆ ಹೋಗೋ ತನಕ ಅವನು ನನ್ನನ್ನ ನೋಡ್ತಾನೆ ಇರಲಿಲ್ಲವಲ್ಲ. ಸೋದರರು ಗೇಲಿ ಮಾಡ್ತಾರೆ ಎಂಬ ಭಯ ಅವನಿಗೆ. ಜೊತೆಗೆ, ಬೆಳಿಗ್ಗೆ 5 ಗಂಟೆಗೆ ಮನೆ ಬಿಟ್ಟು ಸಂಜೆ 5 ಕ್ಕೆ ಬರ್ತಾ ಇದ್ದಾ. ನನ್ನ ಜೀವನ ಅವನ ಸಂಪಾದನೆ ಮೇಲೆ ನಿಂತಿತ್ತಲ್ಲ. ಅವನಿಗೆ ಆರೈಕೆ ಮಾಡುವುದು ನನ್ನ ಧರ್ಮ ಎನ್ನುವ ಮೆಸೇಜ್ ನನ್ನ ರಕ್ತದಲ್ಲಿ, ಜೀನ್ಸ್ ಗಳಲ್ಲಿ ಅಡಗಿತ್ತಲ್ಲ. ತವರು ಮನೆಗೆ ಹೋಗುವಂತಿಲ್ಲ. ಹಬ್ಬಹರಿದಿನಗಳು ಬಂದರೆ ಸೊಸೆಯ ಪಾತ್ರದ ಚೌಕಟ್ಟು ಇನ್ನೂ ದೊಡ್ದದಾಗುತಿತ್ತು. ನಾಲ್ಕು ಗೋಡೆಗಳ ಮಧ್ಯ ನನ್ನ ಪ್ರಪಂಚವನ್ನ ಕಟ್ಟಿಕೊಂಡೆ. ನನ್ನ ದನಿ ನನಗೆ ಅಪರಿಚಿತವಾಯ್ತು. ಮಾತಾಡಿದರೂ ಅದು ಯಾರಿಗೆ ಕೇಳತಿತ್ತು, ಹೇಳು? ನನ್ನ ದನಿ ಸತ್ತು ಹೋಯ್ತು. ಈ ಅಪರಿಚಿತ ಪ್ರಪಂಚವನ್ನ, ವ್ಯವಸ್ಥೆಯನ್ನ ಅರ್ಥ ಮಾಡಿಕೊಂಡು ಅದರಲ್ಲಿ ನನ್ನನ್ನು ಇಟ್ಟು ಹೊಂದಾಣಿಕೆ ಮಾಡಿಕೊಳ್ಳುವಷ್ಟರಲ್ಲಿ ನನ್ನ ಶಕ್ತಿ, ಚೇತನ, ಒಳಗಣ-ಹೊರಗಣ ಪ್ರಜ್ಞೆ, ನನ್ನ ಇರುವಿಕೆ ಎಲ್ಲವೂ, ನನ್ನನ್ನು ನಾನು ಪಣಕ್ಕೆ ಒಡ್ಡಿಕೊಂಡಂತೆ ಅನಿಸುತಿತ್ತು. ಅವನ ಜೊತೆ ರಾತ್ರಿ ಪಿಸುಗುಟ್ಟಿದರೆ ಅದು ಒಂಥರಾ ಅಸಹನೀಯವಾಯ್ತು – ಎದ್ದು ದೂರ ಓಡಿ ಬಿಡೋಣ ಅನ್ನೋ ಥರ, ಥಕ ಥಕ ಕುಣಿಯೋಣ, ಜೋರಾಗಿ ಕಿರುಚೋಣ, ಅವನನ್ನ ಹಿಡಿದು ಜೋರಾಗಿ ಅಲ್ಲಾಡಿಸಿ ಬೀಳಿಸೋಣ ಅನ್ನುವ ಭಾವನೆಗಳು ಕಾಡ ತೊಡಗಿ ಹೀಗೆ ಇದ್ದರೆ ಹುಚ್ಚು ಹಿಡಿಯುತ್ತದೆ ಎನ್ನುವ ಭಯ ಶುರುವಾಯ್ತು.

ಮೌನ ಹೆಪ್ಪುಗಟ್ಟಿದಾಗ ಏನನ್ನಿಸುತ್ತೆ? ಅನುಭವ. ನಾನಾ ರೀತಿಯ ಅನುಭವಗಳಾಗುತ್ತದೆ. ಹೆಪ್ಪುಗಟ್ಟಿದ ಮೊಸರಿನಲ್ಲಿ ಎಷ್ಟೋತರದ ರುಚಿಗಳಿರುವುದಿಲ್ಲವಾ, ಹಾಗೆ. ಸಿಹಿ, ಹುಳಿ, ಒಂಥರಾ ಒಗಚು – ಆ ಬ್ಯಾಕ್ಟೀರಿಯಾಗಳು ಮಾಡುವ ಮೋಜೇ ಮೋಜು. ಹೆಪ್ಪು ಗಟ್ಟಿದ ಹಿಮದಲ್ಲಿ ಸೌಂದರ್ಯವಿರುವುದಿಲ್ಲವಾ, ಹಾಗೆ. ಆದರೆ ಬಹಳ ಚಳಿ ಕೂಡ.  ನಾನು ಹೊರ ದನಿಯನ್ನು ತುಳಿದು ಏಕಾಕಿಯಾಗಿ ನಿಂತಾಗ ನನ್ನ ಒಳ ದನಿ ಮಾತನಾಡಿತು. ನೀನು ಓದಿದ, ಧೈರ್ಯದ, ಗಟ್ಟಿಯಾದ ಹೆಣ್ಣು. ಎದುರಿಸು. ಅವರು ನಿನ್ನನ್ನು ಅರ್ಥ ಮಾಡಿಕೊಳ್ಳಲಿಲ್ಲ ಎಂದರೆ ನೀನು ಅವರನ್ನು ಅರ್ಥ ಮಾಡಿಕೊ, ನೀನು ಜಯಿಸುತ್ತೀಯ, ಬದುಕುತ್ತೀಯ, ನಿಲ್ಲುತ್ತೀಯ, ನಿನ್ನ ಮಕ್ಕಳನ್ನು ನಿಲ್ಲಿಸುತ್ತೀಯ. ಹೀಗಂತ ಹೇಳಿದ ನನ್ನ ಒಳದನಿಗೆ ಇರುವ ಶಕ್ತಿಯನ್ನ ನಾನು ಕಂಡುಕೊಂಡೆ. ಮೌನದಲ್ಲಿರುವ ಆ ಮಾತಿನ ಶಕ್ತಿ ನನಗೆ ಗೊತ್ತಾಯಿ ಹೋಯ್ತು. ಕಾದೆ. ತಾಳ್ಮೆವಹಿಸಿದೆ. ಅವರೆಲ್ಲರನ್ನ ಅರ್ಥ ಮಾಡಿ ಕೊಳ್ಳಲು ಶುರು ಮಾಡಿದೆ. ಅದೊಂದು ನನ್ನ ಆಂತರಿಕ ಮುನ್ನಡೆ. ಆದರೆ ನಾನು ಏಕಾಕಿ. ಅದೊಂದು ದುಃಖದ, ಒಬ್ಬಂಟಿ ಪಯಣ. ಆದರೂ ನನ್ನ ದೋಣಿ ಮುಳುಗಲಿಲ್ಲ. ನಾನು ಹಾಯಿ ಹಾಕಿದ್ದೆ ಹಾಕಿದ್ದು. “

ಹೇಳುವುದನ್ನು ನಿಲ್ಲಿಸಿ ಅವಳು ಇವಳ ಮುಖವನ್ನ ನೇರವಾಗಿ ದೃಷ್ಟಿಸಿ ನೋಡಿದಳು. ಇವಳ ಮೈ ಝುಮ್ ಎನ್ನಿತು. ಅಳತಾಳೇನೋ, ಅಥವಾ ಇಲ್ಲಿಂದ ಎದ್ದು ಹೋಗ್ತಾಳೇನೋ ಎಂದು ಇವಳ ಗುಮಾನಿ. ಉಹೂಂ. ಅದೇನೂ ಆಗಲಿಲ್ಲ. ಅವಳೇ ಮುಖ ತಿರುವಿದಳು. ಅವಳು ಎಲ್ಲೋ ಯಾವ ಪ್ರಪಂಚದಲ್ಲೋ ಇದ್ದಾಳೆ, ಏನೋ ಹುಡುಕುತಿದ್ದಾಳೆ, ಏನನ್ನೂ ಹಿಡಿದುಕೊಳ್ಳಲು ಪ್ರಯತ್ನಿಸುತ್ತಿದ್ದಾಳೆ ಎಂದು ಇವಳ ಮನಸ್ಸಿಗೆ ತಟ್ಟಿತು. “ನನ್ನನ್ನ ಕಾಪಾಡಲೋ ಎನ್ನುವ ಹಾಗೆ ಮಗಳು ಹುಟ್ಟಿದಳು. ಮಗುವಿನ ಜೊತೆ ಮಾತಾಡಲು ಶುರು ಮಾಡಿದೆ. ಸಂಜೆ ಪಾರ್ಕ್ ಗೆ ಹೋದಾಗ ಅವರಿವರ ಜೊತೆ ಮಾತನಾಡಿದೆ. ಮೂರು ವರ್ಷದ ನಂತರ ನನಗೆ ಅಹ, ನನಗೆ ಮಾತನಾಡಲು ಬರತ್ತೆ, ನಾನು ನಗುತ್ತೀನಿ, ನನ್ನ ಜಡೆಯನ್ನ ನೋಡಿ ಬೇರೆ ಜನ ಎಷ್ಟು ಚಂದ ಇದೆ ನಿಮ್ಮ ಕೂದಲು ಅಂತ ಇಷ್ಟ ಪಡುತ್ತಾರೆ ಎಂದೆಲ್ಲ ಹೊರ ಅರಿವಿಗೆ ಬಂತು. ಅವನ ಜೊತೆಯಲ್ಲಿ ಎಲ್ಲರ ಮುಂದೆ ರೀ ಎಂದು ದನಿ ತೆಗೆದು ಮಾತನಾಡಲು ಶುರು ಮಾಡಿದೆ. ಅವನಿಗೆ ಆಶ್ಚರ್ಯ, ಅವಮಾನ, ಅಭಿಮಾನ. ರಾತ್ರಿ ಅವನ ಅಪ್ಪುಗೆಗೆ ಸ್ವಲ್ಪ ಹೆಚ್ಚು ಶಕ್ತಿ ಬಂತು.

“ಮತ್ತೆ, ನಿನ್ನ ಅತ್ತೆ? ಆ ಎಲ್ಲಾ ಬ್ರದರ್ಸ್? ಏನೂ ಅನ್ನಲಿಲ್ವಾ?”

“ನಾನು ಸೋತು ಮನೆ ಗೆದ್ದೇ ಕಣೆ, ಪೆದ್ದು. ರಾಜಿ ಮಾಡಿಕೊಂಡೆ ಹೌದು, ಮೂರು ವರ್ಷ ಸತ್ತು ಸತ್ತು ನಂತರ ನನ್ನ ಮನಸ್ಸೆಂಬ ಮರ ಮತ್ತೆ ಚಿಗಿಯ ತೊಡಗಿತು. ಆ ಒಳದನಿಯನ್ನ ಜೀವಂತವಾಗಿ ಇರಿಸಿದ್ದೆ ನೋಡು, ಮಾತಿಗೆ ಮತ್ತೆ ಉಸಿರು ಸಿಕ್ಕಿತು. ಮನೆಯ ಎಲ್ಲ ವಿಷಯಗಳು ನನಗೆ ಚೆನ್ನಾಗಿ ತಿಳಿದಿದ್ದರಿಂದ ಅವರೆಲ್ಲರೂ ನಿಧಾನವಾಗಿ ನನ್ನ ಮೇಲೆ ಅವಲಂಬಿತರಾದರು. ದೊಡ್ಡ ಮಗ ಸೊಸೆ ಬೇರೆ ಮನೆಗೆ ಹೋದರು. ಮತ್ತೊಬ್ಬ ಮಗ ತನ್ನಿಷ್ಟದ ಹುಡುಗಿಯನ್ನ ಮದುವೆಯಾದ. ಅವಳು ಕೆಲಸದಲ್ಲೂ ಇದ್ದಳು, ಮತ್ತೆ ಮನೆಯ ಕಡೆ ಕ್ಯಾರೆ ಅನ್ನಲಿಲ್ಲ. ಅತ್ತೆಯ ಮನಸ್ಸು ನನ್ನ ಕಡೆ ವಾಲಿತು. ಅತ್ತೆಯ ಕಾಲ ಮುಗಿಯಿತು. ಅವರು ಸತ್ತಾಗ ನನಗೆ ದುಃಖವಾಯ್ತು. ಆ ಹೆಂಗಸು ಪಟ್ಟಿದ್ದ ಎಷ್ಟೋ ಕಷ್ಟಗಳನ್ನು ಅವರೇ ಹೇಳಿದ್ದರಿಂದ ಕೇಳಿ ತಿಳಿದಿದ್ದ ನನಗೆ ಅವರೊಡನೆ ಬಾಂಧವ್ಯ ಉಂಟಾಗಿತ್ತು, ನೋಡು. ನಿನಗೆ ತಮಾಶಿ ಅನ್ನಿಸಬಹುದು. ಆದರೆ ಅದು ನಿಜ.

“ಆಮೇಲೆ?”

“ಆಮೆಲೇನು, ಎರಡು ಮಕ್ಕಳಾದ ನಂತರ ನಾನು ನನ್ನ ಕನಸುಗಳು, ಆಕಾಂಕ್ಷೆಗಳು, ಆಸೆಗಳು ನೆನಪಾದವು. ಈ ಇಬ್ಬರು ಮಕ್ಕಳನ್ನ ಬೆಳೆಸುವುದು ನನ್ನ ಮುಂದೆ ಗುರಿಯಾಗಿ ನಿಂತಿತು. ಅಷ್ಟರಲ್ಲಿ ಗಂಡನೂ ಸ್ವಲ್ಪ ಸ್ವಲ್ಪವಾಗಿ ಜೊತೆಗಾರನಾಗಿದ್ದ. ಅವನನ್ನು ಕರೆದುಕೊಂಡು ಬೇರೆ ಹೋದೆ. ಮಕ್ಕಳ ವಿದ್ಯಾಭ್ಯಾಸ, ಕುಟುಂಬದ ಲಾಲನೆ ಪಾಲನೆ, ಅದರ ಜೊತೆಗೆ ಮನೆ ಹತ್ತಿರದ ಶಾಲೆಯಲ್ಲಿ ಟೀಚರ್ ಕೆಲಸ. ಬೆಳಗ್ಗೆ 4 ರಿಂದ ರಾತ್ರಿ ಹತ್ತರವರಗೆ ನಿರಂತರ ದುಡಿಮೆ. ಆಗ ಅವರ ಮನೆಯಲ್ಲಿ ಮೂಗೆತ್ತಾಗಿದ್ದವಳು ಈಗ ನನ್ನದೇ ಮನೆಯಲ್ಲಿ. ನನ್ನದೇ ರಾಜ್ಯ. ಮಾತು, ಮಾತು, ಬರಿ ಮಾತು – ಇವನ ಜೊತೆ, ಮಕ್ಕಳ ಜೊತೆ, ಶಾಲೆಯಲ್ಲಿನ ಮಕ್ಕಳ ಜೊತೆ. ಅಯ್ಯಪ್ಪ, ದಿನಕ್ಕೆ ನಲವತ್ತೆಂಟು ಗಂಟೆ ಇದ್ದರೆ ಚೆನ್ನಿತ್ತು ಆಗ.”

“ಮತ್ತೆ, ಅದೇ ರೋಲೆ? ಖುಶಿಯಾಗಿದೇಯೆನೆ?”

“ಕೇಳಿಲ್ಲಿ. ನನ್ನ ಸ್ವಾತಂತ್ರ್ಯ ನನಗೆ. ಸ್ವೇಚ್ಛೆ ಅಲ್ಲ.ಈ ಕುಟುಂಬದ ಮುನ್ನಡೆ ನನ್ನ ದಾರಿ ಕೂಡ. ನನಗೊಂದು ಗುರಿ ಇದೆ. ಈ ಗುರಿಯನ್ನ ಸಾಧಿಸುವುದಲ್ಲಿ ಛಲವಿದೆ, ಹುಮ್ಮಸ್ಸಿದೆ. ಇದು ನನ್ನ ಜೀವನ, ಬದುಕು. ಇವು ನನ್ನ ಜೀವಗಳು ಎಂಬುದು ಹೆಣ್ಣಿಗೆ ತುಂಬಾ ತುಂಬಾ ಶಕ್ತಿ ಕೊಡುತ್ತದೆ. ನನ್ನದು ಎಂಬ ಭಾವನೆಯಿದೆಯಲ್ಲ ಅದು ಕೊಡುವ ಶಕ್ತಿ, ಚೇತನ, ಆ ಚೌಕಟ್ಟು, ಇದು ನನಗೆ ಈಗ ಬಹಳ ಮುಖ್ಯ. ಇದು ಯಾವ ವಸ್ತುವಿಗೆ ಸೇರಿದ್ದಲ್ಲ, ಅಥವಾ ಹಣಕಾಸು, ಸ್ಥಾನಮಾನಕ್ಕೆ ಅಂಟಿದ್ದಲ್ಲ. ಹೆಣ್ಣು ಕೋಳಿ ಮರಿಗಳನ್ನು ಕಟ್ಟಿಕೊಂಡು ಹಿತ್ತಲಲ್ಲಿ ಹೆಕ್ಕುತ್ತಿರುತ್ತದಲ್ಲ. ಅದರ ಹತ್ತಿರ ಹೋದರೆ ಪುರ್ ಅಂತ ಕುಕ್ಕಲು ಬರುತ್ತದೆ. ಯಾಕೆ ಹೇಳು? ಅದಕ್ಕೆ ಇದು ನನ್ನದು, ನನ್ನ ಪುಟ್ಟ ಪ್ರಪಂಚ, ನನ್ನವು ಎಂಬುದು ಇರತ್ತೆ.

ಇನ್ನು ನಾನು ಸಂತೋಷವಾಗಿದ್ದೀನ? ನಂಗೆ ಗೊತ್ತಿಲ್ಲ. ನನ್ನ ಸಂತೋಷ ಈ ಮಕ್ಕಳಲ್ಲಿ, ಈ ಗಂಡನಲ್ಲಿ ಇದೆಯೇನೋ. ಅದು ಬಿಟ್ಟರೆ? ಶಾಲೆಯಿಂದ ಅಲ್ಲಿ ಇಲ್ಲಿ ಅನುಭವಗಳಿಕೆಗೆ ಹೋಗಿ ಅಂತ ಹೇಳಿ ಔಟ್ ಸ್ಟೇಶನ್ ಹೋಗ್ತಾರೆ. ನಾನು ಹೋದರು ನನಗೆ ಈ ಕುಟುಂಬದ ಚಿಂತೆ ಸದಾ ಕಾಡುತ್ತಿರುತ್ತದೆ. ಅದರ ಬದಲು ಹೋಗದಿದ್ದರೆ ಸರಿ ಎಂದುಕೊಂಡು ಸುಮ್ಮನಾಗುತ್ತೀನಿ. ಆ ನೆಮ್ಮದಿಯೇ ಬಹುಷಃ ನನ್ನ ಸಂತೋಷವಿರಬೇಕು. ಇದರಲ್ಲಿ ತಪ್ಪಿದೆಯಾ? ಅದಕ್ಕೆ ಹೇಳಿದ್ದು, ನಾವು ಹೆಂಗಸರು ನಮ್ಮ ಪ್ರಪಂಚವನ್ನು ನಾಲ್ಕು ಗೋಡೆಗಳ ಮಧ್ಯೆ ಕಟ್ಕೊಂಡ್  ಬದಕತೀವಿ. ಅದೇ ನನ್ನ ಚೈತನ್ಯ, ಇರುವಿಕೆ. ನನ್ನತನ ಏನು ಎಂದು ನೀನು ಕೇಳಿದರೆ ಅಷ್ಟೇ ನನಗೆ ಗೊತ್ತಿರುವುದು ಅಂತ ನಾನು ಹೇಳಬೇಕಾಗುತ್ತದೆ. ಇದರ ಆಚೆ ನಾನು, ನನ್ನತನ, ನನ್ನ ಜಾಗ, ನನ್ನ ಕ್ರಿಯಾತ್ಮಕತೆ ಎಂದು ಹುಡುಕುತ್ತ ಹೊರಟರೆ ನನಗೆ ಸಿಕ್ಕುವುದು ಇಷ್ಟೇ. ಅಥವಾ ನಾನು ಆರಿಸಿ ಕೊಳ್ಳಲು ಇಷ್ಟಪಡುವುದು ಇಷ್ಟೇ. ಇನ್ನೇನೂ ಗೋಜಲು ನನಗೆ ಬೇಡ.” ಇವಳು ಮಾತಾಡದೆ ಕೂತಳು.

ಅವಳ ಅಮ್ಮ ಹೈಸ್ಕೂಲು ಓದಿ ಮೂರು ಹೆಣ್ಣು ಮಕ್ಕಳನ್ನು ಬೆಳೆಸಿದರು. ಅವರ ಓದು ಅವರ ಮದುವೆ, ಮಕ್ಕಳನ್ನು ಬೆಳೆಸಲು ಬೇಕಾಗಿತ್ತು. ಅವಳು ಕಾಲೇಜ್ ಡಿಗ್ರಿ ಮಾಡಿ ಅವಳ ಮಕ್ಕಳನ್ನು ಅವರು ತಮ್ಮ ಜೀವನದಲ್ಲಿ ಅವರಿಗೆ ಬೇಕಾದ ಆಯ್ಕೆ ಮಾಡಿಕೊಳ್ಳುವ ರೀತಿ ಬೆಳೆಸಿದಳು. ಅವಳ ಮಕ್ಕಳ ಓದು ಸಕಾರತ್ಮಕ ನಿರ್ಧಾರಗಳನ್ನ ತೆಗೆದು ಕೊಳ್ಳಕ್ಕೆ, ಬದುಕಿನ ನಿರ್ಧಾರಗಳನ್ನ, ಆಯ್ಕೆಗಳನ್ನ ಮಾಡಕ್ಕೆ ಅವರನ್ನು ತಯಾರು ಮಾಡುತ್ತಿದೆ. ಅದು ಅವಳ ಸಾಧನೆಯಲ್ಲವಾ? ಒಬ್ಬ ಹೆಣ್ಣು ಸಂಪ್ರದಾಯ, ಆಚಾರ, ಕಟ್ಟು ಪಾಡುಗಳ ಈ ಸಮಾಜದಲ್ಲಿ ಒಬ್ಬಂಟಿಯಾಗಿ ನಿಂತು, ರಾಜಿ ಮಾಡಿಕೊಂಡರೂ ಸಂವೇದನಾಶೀಲ ಹೆಂಡತಿಯಾಗಿ, ತಾಯಿಯಾಗಿ ಇದ್ದಾಳಲ್ಲ.

ಆದರೆ… ಇವಳಿಗೆ ಏನೋ ತಳಮಳ – ಏನೋ ಮಿಸ್ ಆಗಿದೆ ಎಂಬ ಭಾವನೆ. ಕೊನೆಗೂ ಇವಳ ಮರುಚಿಂತನೆಗೆ ಅದು ಸಿಕ್ಕಿತು. ಹೌದು, ಅವಳು ಅಷ್ಟನ್ನೇ ಆರಿಸಿ ಕೊಂಡರೆ ಅದೇ ಅವಳ ಐಡೆಂಟಿಟಿ ಆಗತ್ತಾ? ಬರಿ ಹೆಂಡತಿ, ತಾಯಿ ಅಷ್ಟರಲ್ಲೇ ಅವಳು ನಿಜವಾಗಿಯೂ ಸಂತೃಪ್ತಿ ಪಟ್ಟು ಕೊಂಡ್ಲಾ? ಅಥವಾ ಅವಳು ಇನ್ನೂ ಬಯಸಿ, ಅದನ್ನು ಹೇಳಲಾರದೆ, ಆಗದೆ, ಮುಚ್ಚಿಟ್ಟು ಕೊಂಡು, ಅವನ್ನೆಲ್ಲ ಡಬ್ಬಿಯಲ್ಲಿ ಹಾಕಿ ಮುಚ್ಚಳ ಬಡಿದು ಇಟ್ಟ್ಲಾ? ಅವಳು ಮನಸ್ಸು ಮಾಡಿದ್ರೆ ಅವಳು ಇನ್ನೇನನ್ನೋ ಸಾಧಿಸುವುದಕ್ಕೆ ಆಗುತಿತ್ತಾ? ಅಬ್ಬಾ, ಎಷ್ಟೊಂದು ಪ್ರಶ್ನೆಗಳು. ಎಷ್ಟೊಂದು ತಲ್ಲಣ, ಕ್ಷೋಭೆ, ಚಿಂತನೆ, ವಿಪರ್ಯಾಸ, ಇಬ್ಬಂದಿ, ಹರಿದು ಹೋದ ಭಾವನೆ, ಮತ್ತೆ ಒಟ್ಟು ಮಾಡಿಕೊಂಡ, ಒಟ್ಟಾದ, ಸಾಂದ್ರವುಳ್ಳ ಆ ಒಟ್ಟಿನ ಭಾವನೆಯ ಹರ್ಷ. ಅದು ಅವಳ ಕ್ರಿಯಾತ್ಮಕ ಜಾಗದಲ್ಲಿರುವ ಅವಳ ಖಾಸಗಿ ಸ್ಥಳ, ಸ್ಥಾನ, ಅವಳ ಪೆರ್ಸನಲ್ ಲೋಕೇಶನ್. ಅವಳ ಕ್ರಿಯಾತ್ಮಕ ಪ್ರಪಂಚದಲ್ಲಿ ಅವಳ ಹೆಜ್ಜೆ ಗುರುತು ಎಲ್ಲಿದೆ ಹೇಗಿದೆ ಎಂಬ ಸತ್ಯದ ಅರಿವು ಅವಳಿಗಿದ್ದ ಮೇಲೆ ಬೇರೆ ಮಾತೇನು. ಒಹ್, ಏನಿದು, ಈ ನಮ್ಮ ಕಾಲದ ನಮ್ಮಗಳ ಈ ಪರಿಯ ಪಯಣ ಎಂಬ ಭಾವ ಇವಳಿಗೆ ಬಂತು.

‍ಲೇಖಕರು avadhi

14 March, 2014

2 Comments

  1. Prabhakar Nimbargi

    Idu bahala manegala kathe. Chennagi barediddeeri.

  2. Manjula

    Swagata tumba chennagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading