ಬಾಲ್ಯದ ಜಗುಲಿಗೆ ಕರೆವ ನಾದಗಳು…

door_number142.jpg“ಡೋರ್ ನಂ. 142” ಕಾಲಂ

 

ಬಹುರೂಪಿ

magic11.gifಫೀಸ್ ನಲ್ಲಿ ಮಾರ್ನಿಂಗ್ ರಾಗ, ಈವನಿಂಗ್ ರಾಗದ ಬಗ್ಗೆ ಮಾತಾಡ್ತಿದ್ದೆ. ಹೇಗೆ ದಿನಾ ಅನ್ನೋದು ಹಲವು ಮೂಡ್ ಗಳ ಸಂಗಮ ಅನ್ನೋದನ್ನ ವಿವರಿಸ್ಬೇಕಿತ್ತು. ಸಡನ್ನಾಗಿ ನನ್ನ ಮನಸ್ಸು ಜಾರಿ ಹಿಂದಕ್ಕೆ ಹೋಯಿತು.
ಕೌಸಲ್ಯಾ ಸುಪ್ರಜಾರಾಮ…
ಕಲ್ಯಾಣಾದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ…
ಕಮಲಾಕುಚ ಚೂಚುಕ ಕುಂಕುಮತೋ…

ಆ ಸುಬ್ಬಲಕ್ಷ್ಮಿ ದಿಢೀರನೆ ತಲೆಯೊಳಗೆ ಎದ್ದು ಕೂತರು.

ಇನ್ನೂ ಹಾಸಿಗೆಯಲ್ಲಿ ಮಲಗಿರುವಾಗ ಬೆಳ್ಳಂಬೆಳಗ್ಗೆ ಬೀಳುತ್ತಿದ್ದ ಸ್ವರವೇ ಅದು. ನಂತರ ಢಣ್ ಢಣ್ ಘಂಟಾನಾದ. ನನ್ನೊಳಗೆ ಅದು ಹೇಗೆ ಇಳಿದುಹೋಗಿದೆಯೊ, ಬೆಳಗು ಅಂದರೆ ಆ ಅದೇ ಸುಬ್ಬಲಕ್ಷ್ಮಿ, ಅದೇ ಘಂಟಾನಾದ.

ಬೆಳಗು ಎಂಬುದಕ್ಕೆ ಏನೇನೋ ಬಣ್ಣ ಬಳಿಯಲು ಪ್ರಯತ್ನಿಸಿದ್ದೇನೆ. ಉಹೂಂ, ಎಲ್ಲರೂ ಬಣ್ಣಿಸುವ ಹಾಗೆ ಆ ಇಬ್ಬನಿ, ಚುಮುಚುಮು ಬೆಳಕು, ನಡುಗಿಸುವ ಚಳಿ, ಏಳು ಕುದುರೆ ಏರಿ ಬರುವ ಸೂರ್ಯ ಈ ಯಾವುದೂ ನನಗೆ ಬೆಳಗುಗಳಾಗಿಲ್ಲ. ಆದರೆ ಎಲ್ಲೋ ಕ್ಯಾಸೆಟ್ ತಟ್ಟೆಗಳಿಂದ ಹೊರಬೀಳುವ, ಯಾವ ಹೊತ್ತಿನಲ್ಲಾದರೂ ಬಾರಿಸುವ ಗಂಟೆ ನನ್ನೊಳಗೆ ಬೆಳಗಿನ ಎಲ್ಲಾ ಸಂಭ್ರಮವನ್ನೂ ಹುಟ್ಟುಹಾಕಿಬಿಡುತ್ತದೆ. ಅದು ರಾತ್ರಿಯಾಗಲಿ, ಇಲ್ಲಾ ಮಧ್ಯಾಹ್ನವಾಗಲಿ ನನ್ನನ್ನು ಬೆಳಗಿಗೆ ತಳ್ಳಿಬಿಡುವ ಮ್ಯಾಜಿಕ್ ಈ ಎರಡು ಸದ್ದಿಗಿದೆ.

ಮನೆಯ ಬಳಿಯೇ ದೇವಸ್ಥಾನವಿತ್ತು. ಅದು ಇತ್ತು ಎಂದು ಗೊತ್ತಾಗದಂತಿತ್ತು. ಆದರೆ ಈ ನಾದ ಮಾತ್ರ ಊರು ಕೇರಿಗಳನ್ನು ದಾಟುತ್ತಾ, ಮಲಗಿದ್ದ ನನ್ನ ಕಿವಿಯೊಳಗೆ ಇಳಿಯುತ್ತಿದ್ದಂತೆ ಕರಾಗ್ರೇ ವಸತೇ ಲಕ್ಷ್ಮಿ, ಕರಮಧ್ಯೇ ಸರಸ್ವತಿ, ಕರಮೂಲೇಶು ಗೋವಿಂದಂ ಪ್ರಭಾತೇ ಕರದರ್ಶನಂ… ಎಂಬಂತೆ ಎದ್ದು ಕುಳಿತುಬಿಡುತ್ತಿದ್ದೆ.

ಆಫೀಸ ನಲ್ಲಿ ಮೂಡ್ ಗಳ ಬಗ್ಗೆ ಭಾಷಣ ಕುಟ್ಟುವಾಗ ಎಷ್ಟು ಚೆನ್ನಾಗಿ ಅದನ್ನು ಬಿಡಿಸಿಟ್ಟುಬಿಟ್ಟೆ. ಬೆಳಗಿಗೂ ರಾತ್ರಿಗೂ ಇರುವ ತೆಳ್ಳನೆಯ ಪರದೆಯನ್ನು ಸರಿಸಿ ಹೇಳಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮೊಡನಿದ್ದೂ ನಿಮ್ಮಂತಾಗದೆ… ನಾನು ಅದು ಹೇಗೆ ಆ ಬಾಲ್ಯಕ್ಕೆ ಜಾರಿಹೋದೆ… ಅದು ಹೇಗೆ ಆ ಹಾಸಿಗೆ ಹೊಕ್ಕು ಮಲಗಿಬಿಟ್ಟೆ… ಅದು ಹೇಗೆ ಆ ಗಲ್ಲಿ ಗುಡಾರ ಗುಂಡಾರಗಳನ್ನು ನನ್ನದಾಗಿ ಮಾಡಿಕೊಂಡುಬಿಟ್ಟೆ ಎಂದು ಅಚ್ಚರಿಯಾಯಿತು.

ನನ್ನದು ಹೇಳಿಕೇಳಿ ಪಾಸ್ ವರ್ಡ್ ಗಳ ಸಾಮ್ರಾಜ್ಯ. ಸದಾ ಕಂಪ್ಯೂಟರ್ ನಲ್ಲಿ ಗಿರಗಿರ ತಿರುಗುವ, ಇಡೀ ಲೋಕ ಸುತ್ತುಹಾಕಿ ಬರುವ, ಅದಕ್ಕೊಂದು ಕೀಲಿ, ಈ ಜಗತ್ತಿಗೊಂದು ಕೀಲಿ, ಈ ಅನುಭವಕ್ಕೊಂದು ಕೀಲಿ ಎಂದು ನೂರೆಂಟು ಪಾಸ್ ವರ್ಡ್ ಗಳನ್ನು ಸೃಷ್ಟಿಸಿರುವ ನನಗೆ ಓಹ್ ಸುಬ್ಬಲಕ್ಷ್ಮಿ ಮತ್ತು ನಾಲಗೆಯ ಆ ಗಂಟೆ ಇಡೀ ಬಾಲ್ಯಕ್ಕೇ ಒದಗಿಬಂದ ಪಾಸ್ ವರ್ಡ್ ಎಂಬುದೇ ಗೊತ್ತಾಗಿರಲಿಲ್ಲ.

ಹೀಗೇ ಆಗಿತ್ತು. ಪ್ಲಾನೆಟ್ ಎಂನಲ್ಲಿ ಗುಡ್ಡೆಹಾಕಿರುವ ಸಾವಿರಾರು ಸಿ.ಡಿ.ಗಳು ನನ್ನನ್ನು ದಿಕ್ಕು ತಪ್ಪಿಸುತ್ತೇವೆ ಎಂಬ ಛಲ ಹೊತ್ತಂತಿರುತ್ತವೆ. ಆದರೆ ನಾನು ಮ್ಯಾಗಜೀನ್ ನಲ್ಲಿ ದಾರಿ ತಪ್ಪಿರುವ ಈ ನಾಯಿಮರಿಗೆ ದಾರಿ ತೋರಿಸಿ ಎಂದು ಮುದ್ದುಮುದ್ದಾಗಿ “ಸತ್ಯಕಲಾಧ್ವನಿ” ಅವರು ಬಿಡಿಸುತ್ತಿದ್ದ ಪಜಲ್ ನಂತೆ ದಾರಿ ಹುಡುಕಿಕೊಂಡುಬಿಡುತ್ತಿದ್ದೆ. ಅಥವಾ ಹುಟ್ಟಿಸಿದ ಶಿವ ಹುಲ್ಲು ಮೇಯಿಸುವುದಿಲ್ಲ ಎಂಬಂತೆ ಆ ಹುಟ್ಟಿಸಿದಾತ ನನಗೆ ಪ್ಲಾನೆಟ್ ಎಂನಲ್ಲೂ ಒದಗಿಬರುತ್ತಿದ್ದ. ಹುಲ್ಲು ಮೇಯುವ ಸಂದರ್ಭ ಬರುತ್ತಿರಲಿಲ್ಲ. ಅಷ್ಟು ಸಾವಿರಗಳ ಮಧ್ಯೆಯೂ ನನಗೆ ಬೇಕಾದ ಸುಬ್ಬಲಕ್ಷ್ಮಿಯನ್ನು ಹುಡುಕಿಕೊಳ್ಳುತ್ತಿದ್ದೆ. ಅಷ್ಟೇ ಅಲ್ಲ, ಆ ಬ್ರಿಗೇಡ್ ರೋಡಿನ ಕಲರವಗಳಿಂದ ಬಿಡಿಸಿಕೊಂಡು ಆ ಗಂಟಾನಾದದ ತೆಕ್ಕೆಗೆ ಬೀಳುತ್ತಿದ್ದೆ.

ಊರು ಬದಲಿಸಿದ್ದಾಯ್ತು. ಹತ್ತಾರು ಮನೆಯಲ್ಲಿ ನೆಲೆಸಿದ್ದಾಯ್ತು. ಕಣ್ಣ ಮುಂದೆಯೇ ಕಾಲ ಬದಲಾಗಿ ಹೋಯ್ತು. ಎಷ್ಟೋ ವಸಂತಗಳು ಜಾರಿ ಮಾಗಿಯೂ ನನ್ನಲ್ಲಿ ಜಾಗ ಮಾಡಿಕೊಂಡಿತು. ರೀಮಿಕ್ಸ್ ಗಳು ಬಂದವು. ಸಲ್ಸಾ ಕಾಲಿಟ್ಟಿತು. ಐಟಂ ನಂಬರ್ ಲೆಕ್ಕವಿಲ್ಲದಷ್ಟಾಯಿತು. ಯುದ್ಧಗಳೂ ಆಗಿಬಿಟ್ಟವು.

ಇಷ್ಟೆಲ್ಲ ಆದವುಗಳ ಗೊಂದಲಪುರದ ಮಧ್ಯೆಯೂ ಕೌಸಲ್ಯಾ ಸುಪ್ರಜಾರಾಮ… ಕೇಳುತ್ತಿದ್ದಂತೆ ಕಾಲಕೋಶ ಹಿಮ್ಮುಖವಾಗಿ ಚಲಿಸಿ ಡೋರ್ ನಂ ೧೪೨ರ ಹಾಸಿಗೆಯಲ್ಲಿ ಕೈಕಾಲಾಡಿಸುವಂತೆ ಮಾಡುತ್ತದೆ.

ದೂರದ ಗುಡಿಯಲಿ ಪೂಜೆಯ ವೇಳೆಗೆ ಗಂಟೆಯು ಮೊಳಗಿತ್ತು
ಢಣ್ ಢಣ್, ಢಣ್ ಢಣ್ ಎನ್ನುತ ನಾದವು ಹೊಮ್ಮಿತ್ತು
ಅದ ಕೇಳಿ ನಾ ಮೈಮರೆತೆ, ಸ್ವರವೊಂದು ಆಗಲೇ ಕಲಿತೆ
ಹಾಡಿದೆ ಈ ಕವಿತೆ, ನಾ ಹಾಡಿದೆ ಈ ಕವಿತೆ…magic.gif

ಯಸ್, ನನ್ನ ಕವಿತೆಗಳೂ ಇವನ್ನು ಉಸಿರಾಡುತ್ತಿವೆ.

‍ಲೇಖಕರು avadhi

August 25, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: