ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾಲ್ಯದ ಕಥಾನಕ ಮಾತ್ರವಲ್ಲ, ಸಂಬಂಧಗಳ ಕಥೆಯೂ ಹೌದು

ಡೋರ್ ನಂಬರ್-142; ವರ್ತಮಾನಕ್ಕೆ ಪಾದ ಮೆಟ್ಟಿ ಭೂತದತ್ತ ಜಿಗಿಯುವ ..

-ಕುಮಾರ ರೈತ

ಸಂಕಥೆ

ಆತ್ಮಕಥನ ಅಥವಾ ಈ ಸ್ವರೂಪದ ಕೃತಿಗಳು ಸಾಮಾನ್ಯವಾಗಿ ಭೂತದಿಂದ ವರ್ತಮಾನಕ್ಕೆ ನಡೆಯುತ್ತಾ ಹೋಗುತ್ತವೆ. ವರ್ತಮಾನಕ್ಕೆ ಪಾದ ಮೆಟ್ಟಿ ಭೂತದತ್ತ ಜಿಗಿಯುವ ಅದೇ ರೀತಿ ವರ್ತಮಾನಕ್ಕೆ ಜೀಕುವ ಕೃತಿಗಳು ಕನ್ನಡದ ಮಟ್ಟಿಗೆ ಅಪರೂಪ. ‘ಡೋರ್ ನಂಬರ್ 142’ ಇಂಥ ಮಾದರಿ ಕೃತಿ; ಪೂರ್ವಾಗ್ರಹಗಳು ಹೇಗೆ ವ್ಯಕ್ತಿತ್ವ ರೂಪಿಸುತ್ತಾ ಹೋಗುತ್ತವೆ ಎನ್ನುವುದನ್ನು ತಿಳಿಸುತ್ತದೆ. ಈ ಸಂಗತಿ ಕೃತಿಕಾರನ ಅಂತರಂಗಕ್ಕೂ ತಿಳಿದು ಮನೋವೈಜ್ಞಾನಿಕ ಸ್ವಯಂ ವಿಶ್ಲೇಷಣೆ ಕೃತಿಯಾಗಿಯೂ ರೂಪುಗೊಂಡಿದೆ. ಆದರೆ ಢಾಳಾಗಿ ಕಾಣಿಸದಿರುವುದು ವಿಶೇಷ.

‘ಯಾಕಷ್ಟು ಶಬ್ದ ಮಾಡ್ತೀಯಾ; ಸದ್ದಿಲ್ಲದೇ ತಿನ್ನು, ಊರಿಗೆಲ್ಲ ಗೊತ್ತಾಗ್ಬೇಕಾ ನೀನು ತಿನ್ನೋದು’ ಅಂಟಿ ಹೀಗೆ ಹೇಳಿದ ತಕ್ಷಣ ಆ ಬಾಲ್ಯದ ಎಳೆ ಮನಸಿನ ಮೇಲೆ ಎಂಥ ಆಘಾತ ಆಗಿರಬಹುದು. ‘ಏನ್ ಸಾಯ್ತಿಯೋ, ಯಾವತ್ತೂ ಸ್ವೀಟ್ ಕಂಡೇ ಇಲ್ಲ ಅನ್ನುವವನ ಹಾಗೆ ? ಸಹಪಾಠಿ ಥಟ್ಟನೇ ಹೇಳಿದ್ದು. ಇವೆಲ್ಲ ಆ ಬಾಲಕನ ಭವಿಷ್ಯದಲ್ಲಿಯೂ ಭೂತದಂತೆ ಕಾಡತೊಡಗುತ್ತವೆ. ಇದನ್ನು ಓದಿದಾಗ ನನ್ನ ಬಾಲ್ಯದಲ್ಲಿ ಆಂಟಿ ಹೇಳಿದ್ದು ಥಟ್ಟಕ್ಕನೇ ನೆನಪಿಗೆ ಬಂತು. ‘ಊಟ ಮಾಡುವಾಗ ಯಾಕೆ ಹಾಗೆ ಮುಲುಕ್ತೀಯಾ’…? ಹೀಗೆ ಹೇಳಿದ ಆಂಟಿಯನ್ನು ದುರುಗುಟ್ಟಿ ನೋಡಿದ್ದೆ.

ಇದಕ್ಕೂ ಮುಂಚೆ ಮನೆಯಲ್ಲಿ-ಹೊರಗೆ ಯಾರೂ ಹಾಗೆ ಹೇಳಿರಲಿಲ್ಲ. ಅವರ್ಯಾರಿಗೂ ಕೇಳಿಸದ ಮುಲುಕು ಆಂಟಿಗೆ ಕೇಳಿಸಿದ್ದು ಹೇಗೆ ಅನ್ನುವುದು ಕಾಡತೊಡಗಿತು. ಕೆಲದಿನ ಇದು ನನ್ನ ಊಟದ ಸ್ವಾದ ಹಾಳು ಮಾಡಿತು. 101 ವರ್ಷ ದಾಟ್ಟಿದ್ದ, ಕನ್ನಡಕ ಹಾಕಿರದ, ಹಲ್ಲುಗಳೊಂದು ಬಿದ್ದಿರದ , ಕಿವಿ ಚುರುಕಾಗಿದ್ದ ಮುತ್ತಜ್ಜನೊಂದಿಗೆ ಬಾಡೂಟಕ್ಕೆ ಕುಳಿತಿದ್ದೆ. ‘ಯಾವ ಸೀಮೆ ಊಣ್ತಿಲಾ ಮೊಗ. ನೆಲ್ಲಿ ಮೂಳೆ ಖಟುಂ ಖಟುಂ ಅಂತ ಕಡಿ. ತುಪ್ಪದ ಮೂಳೆನ ಚೆನ್ನಾಗಿ ಚೀಪು’ ಅಂತ ಗದರಿದ. ಮುಂದೆ ಮನೋ ವಿಜ್ಞಾನದ ವಿದ್ಯಾರ್ಥಿಯಾದ ಮೇಲೆ ಆ ಆಂಟಿಯದು ಅಸಹನೆ ಮನೋಭಾವ ಎನ್ನುವುದು ಅರ್ಥವಾಯಿತು.

ಬಾಲ್ಯದಲಿ ಬಳಸಿದ ಕೆಲವೊಂದು ವಸ್ತುಗಳು-ಸಂಗತಿಗಳು ಮನೋಭಿತ್ತಿ ಮೇಲೆ ಮುದ್ರೆಯೊತ್ತಿರುತ್ತವೆ. ಲೈಫ್ ಬಾಯ್ ಸೋಪ್, ಅಂಟುವಾಳದ ಸಿಪ್ಪೆ, ಹುಳಿ ಸ್ವಾದದ ಚಾಕಲೇಟ್ ಮತ್ತು ಸುಪ್ರಭಾತ ಇವೆಲ್ಲ ತಮಗೆ ನೆನಪಿನಂಗಳದ ತಂತುಗಳಾಗಿರುವುದನ್ನು ಕೃತಿಕಾರ ಹೇಳುತ್ತಾ ಹೋಗುತ್ತಾರೆ. ‘ ಈಗಲೂ ಒಂದು ಹನಿ ನೀರಿದ್ದೀತು, ಆ ಕಣ್ಣುಗಳಲ್ಲಿ’ ಆಧ್ಯಾಯದಲ್ಲಿ ನಗರದಲ್ಲಿ ತಮ್ಮ ಕುಟುಂಬ ಸಾಕಿದ ಹಸು, ಸಹಜವಾದ ಅದರ ಕ್ರಿಯೆಗಳು ನಗರಿಕರಲಿ ಮೂಡಿಸುವ ಕಿರಿಕಿರಿ, ದಿಢೀರನೇ ಆ ಹಸು ಕಣ್ಮರೆಯನ್ನು ಚಿತ್ರಿಸುತ್ತಾರೆ. ‘ ಮನಸು ಕದಡಿ ಹೋಗಿದೆ. ಅಂದಿನಿಂದಲೂ ಯಾಕೋ ನನ್ನೊಳಗೆ ಆ ಒಂದು ಜೊತೆ ಕಳೆದು ಹೋದ ಕಣ್ಣುಗಳು ಮಾತ್ರವಲ್ಲ, ನನ್ನಿಂದ ಕಳಚಿ ಹೋದ ನೂರಾರು ಕಣ್ಣುಗಳು ಮನೆ ಮಾಡಿವೆ. ನಾನು ಸಹ ಇಂದಿಗೂ ಅಲ್ಲಿ-ಇಲ್ಲಿ, ಜೊತೆಗಾತಿಯಲಿ, ಸಜ್ಜನರ ಸಂಗದಲ್ಲಿ ಆ ಕಣ್ಣುಗಳನ್ನು ಹುಡುಕುತ್ತಲೇ ಇದ್ದೇನೆ’ ಸಾಲುಗಳ ಮೂಲಕ ಸಂವಹನ-ಭಾವಾಪ್ತತೆ-ಅಂತಃಕರಣ ಅರಸುವ ಹೊಳವುಗಳು ಮಿಂಚುತ್ತವೆ.

ಡೋರ್ ನಂಬರ್-142 , ಬಾಲ್ಯದ ಕಥಾನಕ ಮಾತ್ರವಲ್ಲ. ಸಂಬಂಧಗಳ ಕಥೆಯೂ ಹೌದು. ‘ಯಾಕೆ ಹೀಗೆ ಬೇಕು ಎನಿಸಿದ ಸಂಬಂಧಗಳು. ಈ ಅನಂತ ಜಗತ್ತಿನಲಿ ಇದಕ್ಕಿದಂತೆ ನನ್ನ ಕೆಲಸವಾಯ್ತು ಎಂಬಂತೆ ಕೈ ಬೀಸಿ ಮರೆಯಾಗಿ ಬಿಡುತ್ತವೆ. ಸುಖದ ಅಂಚಿನಲ್ಲಿದ್ದೇನೆ ಎಂದು ಅಂದುಕೊಳ್ಳುತ್ತಿರುವಾಗಲೇ ಎಷ್ಟೋ ಸಂಬಂಧಗಳು ದಿಢೀರನೆ ಎದ್ದು ನಡೆದುಬಿಡುತ್ತವೆ, ಆಗ ತಾನೆ ಚಿಗುರುತ್ತಿದ್ದ ವಸಂತದ ಹಸಿರುಬಣ್ಣದ ಗೆಳೆತನವೊಂದು ಬಣ್ಣ ಬದಲಿಸಿ ಮಾಗಿಯ ಮೌನ ಹೊದ್ದುಕೊಳ್ಳುತ್ತದೆ.’ ಸಾಲುಗಳಲಿ ನಿಜ ಸಂಬಂಧಗಳ ಕನವರಿಕೆ ವ್ಯಕ್ತವಾಗುತ್ತದೆ.

ಬಾಲ್ಯ-ಪ್ರೀತಿ-ಪ್ರೇಮ-ಕಚೇರಿ-ಆಧುನಿಕ ಆವಿಷ್ಕಾರ ಇಲ್ಲಿ ಇಣುಕಿ ಇಣುಕಿ ಹೋಗುತ್ತವೆ. ದೊಡ್ಡದೊಂದು ಕೃತಿಯೇ ಆಗುವ ಸಾಧ್ಯತೆಗಳಿದ್ದ ಆತ್ಮಕಥನ ಸ್ವರೂಪದ ಬರಹಗಳನ್ನು ಜಿ.ಎನ್. ಮೋಹನ್ 164 ಪುಟಗಳಲ್ಲಿ ಹಿಡಿದುಕೊಟ್ಟಿದ್ದಾರೆ. ಆದರೆ ಕೃತಿ ಮತ್ತಷ್ಟು ವಿವರ ಬಯಸುತ್ತದೆ. ಪ.ಸ.ಕುಮಾರ್ ಅವರ ಚಿತ್ರಗಳು ಅರ್ಥಪೂರ್ಣ.

‍ಲೇಖಕರು G

9 May, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading