ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾತು, ಸಾವು ಮತ್ತು ಟ್ಯೂಲಿಪ್ ಹೂವು

ವುಲ್ಫ್ ಎಲ್ಬ್ರುಕ್ ಎಂಬಾತ ಬರೆದ ಈ ಸರಳಾತಿ ಸರಳ ಪುಸ್ತಕ ಕಣ್ಣಿಗೆ ಬಿದ್ದಾಗಿನಿಂದ ಅದರಲ್ಲಿನ ವಿಷಯ, ಅದನ್ನು ಆತ ಮಂಡಿಸಿರುವ ರೀತಿ, ಅದರ ಚಿತ್ರಗಳು ಎಲ್ಲವೂ ತಲೆಯೊಳಗೆ ಅಚ್ಚಾಗಿಬಿಟ್ಟಿವೆ.

ಯಾವ ವಯಸ್ಸಿನಲ್ಲಿ ನಮ್ಮವರ ಅಥವಾ ಸುತ್ತಮುತ್ತಲಿನವರ  ಸಾವನ್ನು ಕಂಡು ನಮಗೂ ಅದಕ್ಕೂ ಏನೂ ಸಂಬಂಧವಿಲ್ಲ, ಏನೂ ಆಗಿಲ್ಲ ಎಂಬಂತೆ  ಜೀವನ ಮುಂದುವರೆಸಿಕೊಂಡು ಹೋಗುತ್ತೇವೆ ನಾವು?

ದೊಡ್ಡವರಿಗೇ ಹೀಗೆ. ಇನ್ನು ಮಕ್ಕಳ ಮನದಲ್ಲಿ ಏನೇನು ಪ್ರಶ್ನೆ, ಕಲ್ಪನೆ, ಊಹಾಪೋಹ, ಯಾವ್ಯಾವ ಭಯ ಗೊಂದಲಗಳು ಇರಬಹುದು?

ಯಾವ ಉನ್ನತ ತತ್ವಶಾಸ್ತ್ರವನ್ನೂ ಹೇಳದೆ ಈ ಕತೆ ಎಂತಹ ಗಂಭೀರ ವಿಷಯವನ್ನು ಎಷ್ಟು ಸುಲಭದಲ್ಲಿ  ದಾಟಿಸುತ್ತದೆ!

ಜೊತೆಗೆ ಮನಮುಟ್ಟುವ ನಿರಾಡಂಬರ ಚಿತ್ರಗಳು. ಅದರ ಕನ್ನಡ ರೂಪ ಇಲ್ಲಿದೆ.

ಜರ್ಮನ್ ಮೂಲ: ವುಲ್ಫ್ ಎಲ್ಬ್ರುಕ್

ಕನ್ನಡಕ್ಕೆ: ಅಹಲ್ಯಾ ಬಲ್ಲಾಳ್

ಈಗ ಸಾಕಷ್ಟು ಸಮಯದಿಂದ ಬಾತುಕೋಳಿಗೆ ಏನೋ ಒಂಥರಾ ಅನ್ನಿಸ್ತಾ ಇತ್ತು. “ಯಾರು ನೀನು?” “ನನ್ನ ಹಿಂದೆ ಸದ್ದಿಲ್ಲದೆ ಬರ್ತಾ ಇದ್ದೀಯಲ್ಲ, ಏನು ಮಾಡ್ತಾ ಇದ್ದೀಯ?”

“ಕೊನೆಗೂ ನನ್ನನ್ನು ಗಮನಿಸಿದಿ,” ಎಂದನವ. ” ಒಳ್ಳೇದಾಯ್ತು. ನಾನು ಸಾವು”.

 

ಬಾತುಕೋಳಿಗೆ ಸಿಕ್ಕಾಪಟೆ ಅಂಜಿಕೆ ಆಯ್ತು. ಸಹಜವೇ. “ನನ್ನನ್ನು ಕರ್ಕೊಂಡು  ಹೋಗೋದಕ್ಕೆ ಬಂದ್ಯಾ?”.

“ಓಹ್, ನಾನು ನಿನ್ನ ಜೀವನದುದ್ದಕ್ಕೂ ನಿನ್ನ ಹತ್ತಿರನೇ  ಇದ್ದೀನಿ, ಯಾವುದಕ್ಕೂ ಇರಲಿ ಅಂತ.”

“ಅಂದ್ರೆ?” ಕೇಳಿದಳು  ಬಾತು.

“ನಿಂಗೇನಾದ್ರೂ ಆದ್ರೆ ಅಂತ. ಕೆಟ್ಟ ನೆಗಡಿ, ಅಪಘಾತ, ಯಾರಿಗೆ ಗೊತ್ತು ಹೇಳು. ”

“ಏನಾದರೂ ಆಗುವಂತೆ ಮಾಡ್ತೀಯಾ  ನೀನು?”


“ಅದನ್ನು ಜೀವನ ಸಂಭಾಳಿಸುತ್ತೆ.  ನೆಗಡಿ, ಕೆಮ್ಮು ಮತ್ತು  ಬಾತುಗಳಿಗೆ ಆಗೋ ಬೇರೆ ಎಲ್ಲದನ್ನೂ. ಉದಾಹರಣೆಗೆ ನರಿ.”

ಅದರ ಬಗ್ಗೆ ಯೋಚಿಸಬಾರದು ಅಂತ ಪ್ರಯತ್ನಪಟ್ಟಳು ಬಾತು. ಮೈಮೇಲೆ ಮುಳ್ಳು ಎದ್ದಂತಾಯ್ತು.

 

ಸಾವು ಅವಳನ್ನು ನೋಡಿ ಸ್ನೇಹದಿಂದ ಮುಗುಳ್ನಕ್ಕ. ಹಾಗೆ ನೋಡಿದ್ರೆ ಅವನು ಸಭ್ಯನೇ, ಅವನು ಯಾರು ಅನ್ನೋದನ್ನು ನೀವು ಒಂದು ಗಳಿಗೆ ಮರೆತರೆ- ನಿಜಕ್ಕೂ ಸಾಕಷ್ಟು ಒಳ್ಳೆಯವನು.

“ಓ ಅಲ್ಲಿರೋ  ಕೊಳಕ್ಕೆ ಹೋಗೋಣ್ವಾ?” ಅವಳು ಕೇಳಿದಳು.   ಸಾವಿಗೆ ಈ  ಅಂಜಿಕೆ ಮೊದಲಿಂದಲೇ ಇತ್ತು.

ಸ್ವಲ್ಪ ಸಮಯದಲ್ಲೇ ಅವನು ತನಗೆ ಮಿತಿಗಳಿವೆ ಅಂತ ನಿರ್ಧರಿಸಿಬಿಟ್ಟ. “ನನ್ನನ್ನು ಕ್ಷಮಿಸು,” ಎಂದ. ” ಈ ತೇವ ನಂಗೆ ಆಗಿಬರಲ್ಲ.  ಇಲ್ಲಿಂದ  ಹೊರಹೋಗಬೇಕು ನಾನು”.

 

” ಚಳಿ ಆಗ್ತಿದೆಯಾ?” ಬಾತು ಕೇಳಿದಳು. “ಸ್ವಲ್ಪ ಬೆಚ್ಚಗೆ ಮಾಡ್ಲಾ ನಿನ್ನನ್ನು?”

ಇಲ್ಲಿಯವರೆಗೆ ಯಾರೂ ಸಾವಿಗೆ ಈ ಮಾತುಗಳನ್ನು ಹೇಳಿರಲಿಲ್ಲ.

ಬೆಳಿಗ್ಗೆ ನಸುಕಿನಲ್ಲೇ ಮೊದಲು ಎಚ್ಚರಗೊಂಡದ್ದು ಬಾತು. “ನಾನಿನ್ನೂ ಸತ್ತಿಲ್ಲ” ಎಂದುಕೊಂಡಳು ಮನದೊಳಗೆ.
ಸಾವಿನ ಪಕ್ಕೆ ತಿವಿದಳು. “ನಾನಿನ್ನೂ ಸತ್ತಿಲ್ಲ, ಕ್ವಾಕ್” ಎಂದಳು ಸಂಭ್ರಮದಿಂದ.

ಕೈಕಾಲು ಚಾಚುತ್ತಾ “ಸಂತೋಷ, ನಿಂಗೋಸ್ಕರ” ಎಂದ ಸಾವು.

“ಒಂದು ವೇಳೆ ನಾನು  ಸತ್ತಿದ್ದರೆ?”

“ನಂಗೆ ನಿದ್ರೆ ಮಾಡೋದಕ್ಕೆ ಆಗ್ತಿರಲಿಲ್ಲ.” ಎಂದು ಆಕಳಿಸಿದ.

ಚೂರೂ ಹಿತವಿಲ್ಲ ಈ ಮಾತಲ್ಲಿ, ಅಂದುಕೊಂಡಳು ಬಾತು.

 

ಸ್ವಲ್ಪ ಸಮಯ ಮಾತೇ ಆಡಲಿಲ್ಲ ಅವಳು. ಆದ್ರೆ ಇದು ಹೆಚ್ಚು ಹೊತ್ತಿನವರೆಗಲ್ಲ. ಮತ್ತೆ ಕ್ವಾಕ್ ಕ್ವಾಕ್ ಶುರು ಮಾಡಿದಳು.

“ನಾವು ದೇವತೆಗಳಾಗಿ ಮೋಡದ ಮೇಲೆ ಕೂತು ಭೂಮಿಯನ್ನು ನೋಡ್ತೀವಿ ಅಂತ ಕೆಲವು ಬಾತುಗಳು ಹೇಳ್ತಾವೆ.”

“ಇರಬಹುದು.” ಸಾವು ಎದ್ದು ನಿಂತ. “ನಿನ್ನ  ಹತ್ತಿರ ರೆಕ್ಕೆಗಳಿವೆ.”

“ಭೂಮಿಯ ಆಳದಲ್ಲಿ ಒಂದು ಜಾಗ ಇದೆ; ನಾವು ಒಳ್ಳೆಯವರಲ್ಲದಿದ್ರೆ ಅಲ್ಲಿ ನಮ್ಮನ್ನು ಹುರೀತಾರಂತ ಕೆಲವು ಬಾತುಗಳು ಹೇಳ್ತಾವೆ.”

“ನೀವು ಬಾತುಗಳು ಕೆಲವು ಅದ್ಭುತ ಕತೆಗಳನ್ನು ಹೇಳ್ತೀರಿ, ಆದರೆ ಯಾರಿಗೆ ಗೊತ್ತು?”

“ಹಾಗಾದ್ರೆ ನಿಂಗೂ ಗೊತ್ತಿಲ್ಲ,” ಸಿಡುಕಿದಳು ಬಾತು.

ಸಾವು ಸುಮ್ಮನೆ ಅವಳತ್ತ ನೋಡಿದ.

 

“ಇವತ್ತೇನು ಮಾಡೋಣ?” ಸಾವು ಕೇಳಿದ.
“ಆ ಕೊಳಕ್ಕೆ ಹೋಗೋದಂತೂ ಬೇಡ. ಏನಾದ್ರೂ ನಿಜಕ್ಕೂ ಮಜ್ಜವಾದ್ದನ್ನ ಮಾಡೋಣ.”

ಸದ್ಯ, ಅಂದುಕೊಂಡ ಸಾವು. “ಮರ ಹತ್ತೋಣವಾ?” ಅವಳ  ಕಾಲೆಳೆದ.

ಓ ಅಷ್ಟು ದೂರದಲ್ಲಿ  ಕೆಳಗೆ ಕೊಳ ಕಾಣಿಸ್ತಾ ಇತ್ತು ಅವರಿಗೆ. ಅದು ಸುಮ್ಮನೆ ಅಲ್ಲಿತ್ತು – ನಿಶ್ಚಲ. ಅದೆಷ್ಟು ಏಕಾಂಗಿ. “ನಾ ಸತ್ತು ಹೋದಾಗ ಹೀಗೇ ಇರುತ್ತೆ ನಂಗೂ,” ಅಂದುಕೊಂಡಳು ಬಾತು. ” ಒಂಟಿ ಕೊಳ, ನಾನಿರೋದಿಲ್ಲ.”

 

ಸಾವಿಗೆ ಕೆಲವೊಮ್ಮೆ ಮನಸ್ಸುಗಳನ್ನು ಓದೋ ಶಕ್ತಿ ಇದೆ. “ನೀನು ಸತ್ತ ಮೇಲೆ, ಕೊಳವೂ ಇರೋದಿಲ್ಲ – ಕೊನೇ ಪಕ್ಷ ನಿನ್ನ ಪಾಲಿಗೆ.”

“ಹೌದಾ, ನಿಜಕ್ಕೂ?” ಬಾತುಕೋಳಿಗೆ ಆಶ್ವರ್ಯವೋ ಆಶ್ಚರ್ಯ.

“ಖಂಡಿತವಾಗಿಯೂ ಹೌದು ,” ಎಂದ ಸಾವು.
“ಇದಾದ್ರೆ ನೆಮ್ಮದಿ. ಅದರ ಬಗ್ಗೆ ನಾನು ದುಃಖಿಸಬೇಕಾಗಿಲ್ಲ, ಆಗ….”
“…..ನೀ ಸತ್ತಾಗಿರುತ್ತೆ.” ಅವನು ವಾಕ್ಯವನ್ನು ಪೂರ್ಣಗೊಳಿಸಿದ. ಈ ವಿಷಯದ ಬಗ್ಗೆ ಹಿಂಜರಿಕೆಯೇ ಇಲ್ಲ ಅವನಿಗೆ.

“ಕೆಳಗಿಳಿಯೋಣ,” ಅಂಗಲಾಚಿದಳು ಬಾತು, ಸ್ವಲ್ಪ ಸಮಯದಲ್ಲೇ. “ಮರದ  ಮೇಲೆ ವಿಚಿತ್ರ ಯೋಚನೆಗಳು ಬರುತ್ತವೆ.”

ಬೇಸಿಗೆ ಮುಗೀತಾ ಬಂತು. ಅವರಿಬ್ಬರು  ಕೊಳದ  ಬಳಿ ಹೋಗುವುದೂ ಕಡಿಮೆಯಾಯಿತು. ಹುಲ್ಲಿನ ಮೇಲೆ ಕೂತು ಅಷ್ಟಿಷ್ಟು ಮಾತಾಡ್ತಾ ಇದ್ದರು. ತಂಗಾಳಿ ಬೀಸಿ ಬಾತಿನ ರೆಕ್ಕೆಗಳನ್ನು ಕೆದರಿದಾಗ ಮೊದಲ ಬಾರಿಗೆ ಅವಳಿಗೆ ಅದರ ಶೀತಲತೆ ಅನುಭವಕ್ಕೆ ಬಂತು. “ಚಳಿ ಆಗ್ತಿದೆ,” ಎಂದಳು  ಒಂದು ಸಂಜೆ. “ನನ್ನನ್ನ ಕೊಂಚ ಬೆಚ್ಚಗೆ ಮಾಡ್ತೀಯ?”

 

ಹಿಮದ ಹಲ್ಲೆಗಳು ತೇಲುತ್ತಾ ಕೆಳಗಿಳಿದು ಬಂದವು.

ಏನೋ ನಡೆದ ಹಾಗಿತ್ತು. ಸಾವು ಬಾತುಕೋಳಿಯತ್ತ ನೋಡಿದ.

ಅವಳ  ಉಸಿರಾಟ ನಿಂತಿತ್ತು. ನಿಶ್ಚಲವಾಗಿದ್ದಳು.

 

ಸಾವು ಅವಳ ಕೆದರಿದ ಪುಕ್ಕಗಳನ್ನು ಸರಿಪಡಿಸಿದ, ಅವಳನ್ನು ಎತ್ತಿ ದೊಡ್ಡ ನದಿಗೆ ಕೊಂಡೊಯ್ದ. ಅವಳನ್ನು ಹಗುರವಾಗಿ ನೀರಿನ ಮೇಲೆ ತೇಲಿಬಿಟ್ಟು ಮೆತ್ತಗೆ ತಳ್ಳಿದ.

ಎಷ್ಟೋ  ಹೊತ್ತಿನವರೆಗೆ ಅವಳನ್ನು ನೋಡುತ್ತಲೇ ಇದ್ದ.

ಅವಳು ದೃಷ್ಟಿಯಿಂದ ಮರೆಯಾದಾಗ, ಅವನ ಮನ ಇನ್ನೇನು ಕರಗಿತು.

“ಇದೇ  ಜೀವನ,” ಅಂದುಕೊಂಡ.

‍ಲೇಖಕರು avadhi

11 April, 2020

4 Comments

  1. ರೇಣುಕಾ

    ಇಷ್ಟವಾಯ್ತು

    • Ahalya

      ಧನ್ಯವಾದ, ರೇಣುಕಾ ಅವರೇ.

  2. T S SHRAVANA KUMARI

    ಸಾವು ಜೀವನದ ಅಂತಿಮ ಸತ್ಯವಲ್ಲವೇ

    • Ahalya

      ಹೌದು. ಓದಿ ಸ್ಪಂದಿಸಿದ್ದಕ್ಕೆ thank you, ಶ್ರವಣ ಕುಮಾರಿಯವರೇ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading