ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಬಾಡಿಹೋಗದ ಬಾಳ ಕಂಬ’ – ಶ್ರೀದೇವಿ ಕೆರೆಮನೆ

ಶ್ರೀದೇವಿ ಕೆರೆಮನೆ

ಅದಮ್ಯ ಉತ್ಸಾಹದ ಬಸು ಬೇವಿನಗಿಡದ ಅವರ ಕಥೆಗಳನ್ನು ಓದುವುದೆಂದರೆ ನಮ್ಮೊಳಗೆ ಜೀವನೋತ್ಸಾಹವನ್ನು ತುಂಬಿಕೊಳ್ಳುವುದೆಂದೇ ಅರ್ಥ. ಅದೆಷ್ಟು ಉತ್ಸಾಹ, ಅದೆಂತಹ ಉಮ್ಮೇದಿ, ಅದ್ಯಾವ ಪರಿಯ ಜೀವನ ಪ್ರೀತಿಯನ್ನು ಕಥೆಗಳಲ್ಲಿ ತುಂಬುತ್ತಾರೆಂದರೆ ಓದುಗ ತಾನೇ ತಾನಾಗಿ ಕಥೆಗಳಲ್ಲಿ ಬೆರೆತು ಹೊಗಬೇಕು, ತಾನೆ ಆ ಕಥೆಯ ಪಾತ್ರಧಾರಿಯಾಗಬೇಕು. ಕಥೆ ಬರೆಯುವುದು, ಅದನ್ನು ಲೀಲಾಜಾಲವಾಗಿ ಓದಿಸಿಕೊಂಡು ಹೋಗುವುದು ಅಂತಹ ಕಷ್ಟದ ಕೆಲಸವೇನಲ್ಲ. ಶಬ್ಧ ದಾರಿದ್ರ್ಯವಿಲ್ಲದ ಯಾರಾದರೂ ಅದನ್ನು ಮಾಡಬಹುದು. ಆದರೆ ಆ ಕಥೆಯ ಪಾತ್ರವನ್ನು ಸುದೀರ್ಘ ಕಾಲ ಮನಸ್ಸಿನಲ್ಲುಳಿಸಿ ತಳಮಳಿಸುವಂತೆ ಮಾಡುವುದು ಮಾತ್ರ ಕಷ್ಟದ ಕೆಲಸ. ಆದರೆ ಬಸು ಬೇವಿನಗಿಡದ ಅವರ ಕಥೆಗಳು, ಅದರೊಳಗಿನ ಪಾತ್ರಗಳು ಮನದಾಳದಲ್ಲಿ ಬಹುಕಾಲದವರೆಗೆ ಕದಡದೇ ಉಳಿದುಬಿಡುವ ಶಕ್ತಿಯನ್ನು ಹೊಂದಿವೆ. ಬಾಳೆಯ ಕಂಬ ಕಥೆಯ ಕಮಲಮ್ಮ, ಬೆಳಕಿನ ಚಿಗುರ ಚಿವುಟಿ ಕಥೆಯ ಬಸಮ್ಮ, ಆಗಂತುಕದ ಅಜ್ಜಿ-ಯಲ್ಲಮ್ಮ, ನಡೆಯೊಂದು ಪರಿಯ ಕಲ್ಪನಾ ಹಾಗೂ ಉಮ್ಮವ್ವ, ನುಡಿಯಲಾರದ ಗಿಲಗಿಂಜಿಯ ಯಮನವ್ವ, ಚುರುಮುರಿಯ ಪರಿಮಳ ಕಥೆಯ ಕಂಡಕ್ಟರ್ ಸುರೇಶ,ಹನುಮವ್ವ, ಬಿಸಿಲುಗುದುರೆಯ ಬಿಸುಪು ಕಥೆಯ ಪಾರ್ವತಿ-ಕಲ್ಲಪ್ಪ ಎಷ್ಟು ಪ್ರಯತ್ನಿಸಿದರೂ ಮನದಿಂದ ದೂರವಾಗಲೊಲ್ಲದೇ ತಮ್ಮೊಳಗೆ ಸ್ಥಿರವಾಗಿ ಬಿಡುತ್ತಾರೆ. ಉತ್ತರ ಕನರ್ಾಟಕದ ಅಪ್ಪಟ ಜವಾರಿ ಭಾಷೆಯಲ್ಲಿ ಮೂಡಿಬಂದಿರುವ ಕಥೆಗಳು ನಮ್ಮನ್ನು ಈ ಜಗತ್ತಿನ ಬಗ್ಗೆ, ಜೀವಜಾಲದ ಬಗ್ಗೆ, ಸಂಬಂಧಗಳ ಹೆಣಿಕೆಗಳ ಬಗ್ಗೆ ಯೋಚಿಸುವಂತೆ ಮಾಡುತ್ತವೆ.
ಹಾಗೆ ನೋಡಿದರೆ ಇಡೀ ಕಥಾ ಸಂಕಲನ ಹೆಣ್ತನದ ಮುಸೆಯೊಳಗೆ ಅದ್ದಿ ಹೊರಬಂದಂತಿದೆ. ಎಲ್ಲಾ ಕಥೆಗಳೂ ಮಹಿಳಾ ಪ್ರಾಮುಖ್ಯತೆಯನ್ನು ಹೊಂದಿದ್ದು ಬಸೂರವರ ಹೆಂಗರುಳಿಗೆ ಅನುಸಾರವಾಗಿ ಮೂಡಿ ಬಂದಿದೆ. ಹಳ್ಳಿಯ ಸೊಗಡಿನಲ್ಲಿ ಥೇಟ್ ಹಳ್ಳಿಯ ನುರಿತ ಕಥೆಗಾರರ ಸ್ಟೈಲ್ನಲ್ಲಿ ಕಥೆ ಹೇಳುವ ಬಸು ಕಥೆಯ ಹಳಿ ಎಲ್ಲೂ ತಪ್ಪದಂತೆ ಎಳೆಯನ್ನು ಕಾಯ್ದುಕೊಳ್ಳುವುದರಲ್ಲಿ ನಿಸ್ಸೀಮರು.ಹಾಗೆಯೇ ಓದುಗರನ್ನು ಕಥೆಯಲ್ಲಿಯೇ ಹಿಡಿದಿಟ್ಟುಕೊಳ್ಳುವ ಕಲೆ ಕೂಡ ಅವರಿಗೆ ಸಿದ್ಧಿಸಿದೆ. ಹೀಗಾಗಿಯೇ ಒಮ್ಮೆ ಓದಲು ಪ್ರಾರಂಭಿಸಿದ ಕಥೆಯನ್ನು ಎಲ್ಲಿಯೂ ಮಧ್ಯ ನಿಲ್ಲಿಸಲು ಮನಸ್ಸಾಗದೇ ಸರಾಗವಾಗಿ ಓದಿಸಿಕೊಳ್ಳುವುದು. ಅದಕ್ಕೆಂದೇ ಜಿ.ಪಿ ಬಸವರಾಜು ತಮ್ಮ ಮುನ್ನುಡಿಯಲ್ಲಿ ‘ಇಲ್ಲಿನ ಕಥೆಗಳನ್ನು ಓದುವುದೆಂದರೆ ರೆಕ್ಕೆ ಬಿಚ್ಚಿದ ಹಕ್ಕಿಯ ಬೆನ್ನ ಮೇಲೆ ಕುಳಿತು ಬಾನಲ್ಲಿ ಹಗೂರಾಗಿ ತೇಲಿದಂತೆ, ಯಾವ ಅಡೆ ತಡೆಯೂ ಇಲ್ಲ, ಮೇಲಿನಿಂದ ಎಲ್ಲವನ್ನೂ ಸಲೀಸಾಗಿ ನೋಡುತ್ತ ಹೋಗಬಹುದು’ ಎನ್ನುತ್ತಾರೆ.

ಒಟ್ಟೂ ಹನ್ನೆರಡು ಕಥೆಗಳಿರುವ ಕಥಾ ಗುಚ್ಛದಲ್ಲಿ ಹೆಚ್ಚಿನ ಕಥೆಗಳು ಜೀವನ್ಮುಖಿ ಕಥೆಗಳು. ಅದರಲ್ಲೂ ಇಲ್ಲಿನ ಕಥೆಗಳಲ್ಲಿ ಬರುವ ಹೆಣ್ಣುಗಳು ಬದುಕನ್ನು ಅದಮ್ಯವಾಗಿ ಪ್ರೀತಿಸುತ್ತ ಓದುಗರಲ್ಲೂ ಬದುಕಿನ ಬಗ್ಗೆ ಹೆಚ್ಚಿನ ಪ್ರೀತಿ ಹುಟ್ಟುವಂತೆ ಮಾಡುವಲ್ಲಿ ಸಫಲವಾಗಿದೆ. ಜೀವನದ ಅನ್ಯಾಯದ ವಿರುದ್ಧ ಕೆಚ್ಚಿನಿಂದ ನಿಂತ ಹೆಣ್ಣಿನ ಚಿತ್ರಣ ನಿಜಕ್ಕೂ ಆಶಾಭಾವನೆಯನ್ನು ಹುಟ್ಟಿಸುತ್ತದೆ. ಮೊದಲ ಕಥೆ ಮತ್ತು ಶೀಷರ್ಿಕಾ ಕಥೆಯಾದ ಬಾಳೆಯ ಕಂಬದ ಕಮಲವ್ವ ಬದುಕಿಗೆ ಆಸರೆಯಾದ ಎಲ್ಲವನ್ನೂ ನುಂಗಿ ನೀರು ಕುಡಿದ ಗಂಡ ಕೊನೆಯ ಆಸರೆಯಾದ ಎಮ್ಮೆಯನ್ನೂ ಮಾರಲು ನಿಂತಾಗ ಕುಡಗೋಲು ಎತ್ತಿ ಎದುರಿಸಿದಂತೆ, ಬೆಳಕಿನ ಚಿಗುರ ಚಿವುಟಿ ಕಥೆಯ ಹೊಲ ಮಾರಲೊಲ್ಲದೇ ಉಪವಾಸ ಕುಳಿತ ಬಸಮ್ಮ, ಆಗಂತುಕ ಕಥೆಯ ಎಲ್ಲವನ್ನೂ ನಿಭಾಯಿಸುವ ಅಜ್ಜಿ, ನುಡಿಯಲಾರದ ಗಿಲಗಿಂಜಿ ಕಥೆಯ ಯಮನವ್ವ, ಮನ ಕರಗದವರಲ್ಲಿ ಕಥೆಯ ದಿಟ್ಟೆಯಾದರೂ ಮನೆತನಕ್ಕಾಗಿ ಕಣ್ಣೀರಿಡುವ ಸುಜಾತಾ, ನಡೆಯೊಂದು ಪರಿ ಕಥೆಯಲ್ಲಿ ಮನೆ ಕಟ್ಟಿಸಲು ತನ್ನ ಉದ್ಯೋಗದ ಜೊತೆಗೆ ಗಂಡನ ಅನಾದರದಲ್ಲಿ ಹೆಣಗುವ ಕಲ್ಪನಾ ನಮ್ಮಲ್ಲಿಯೂ ಹೋರಾಟದ ಮನೋಭಾವನೆಯನ್ನು ಹುಟ್ಟಿಸುತ್ತಾರೆ. ಕಥೆಗಳಲ್ಲಿ ಹೆಣ್ಣು ಸಮಾಜವನ್ನು ಎದುರಿಸಿ ನಿಲ್ಲುವ ಮನೋಭಾವದ ಕುರಿತು ನಿಜಕ್ಕೂ ಅಚ್ಚರಿಯೆನಿಸುತ್ತದೆ. ಇದು ಉತ್ತರ ಕನರ್ಾಟಕದ ಬಹುತೇಕ ಹೆಣ್ಣುಗಳ ಕಥೆಯೂ ಹೌದು. ಬಾಗುವಷ್ಟು ಬಾಗಿ, ಸಂಸಾರ ಉಳಿಸಿಕೊಳ್ಳಲ್ಲು ಶತಾಯಗತಾಯ ಹೆಣಗಾಡಿ ಕೊನೆಗೂ ನಿವರ್ಾಹವಿಲ್ಲದಿದ್ದಾಗ ಮನೆಯವರು, ಗಂಡ ಕೊನೆಗೆ ಸಮಾಜವನ್ನೂ ಎದುರಿಸಿ ನಿಲ್ಲುವ ದಿಟ್ಟತನವಿದೆ. ಅಂತಹ ದಿಟ್ಟತನದ ಪರಿಸರದಿಂದ ಬಂದಿದ್ದರಿಂದಲೇ ಕಥೆಗಳೂ ಕೂಡ ಮನದಾಳದಲ್ಲಿ ಬಹುಕಾಲ ನೆಲೆನಿಲ್ಲುತ್ತದೆ. ಬಿಸಿಲುಗುದುರೆಯ ಬಿಸುಪು ಕಥೆಯ ಪಾರ್ವತಿ, ಮನಕರಗದವರಲ್ಲಿ ಕಥೆಯ ರಾಮಣ್ಣ ಬದುಕಿಗೆ ಬೆನ್ನು ತಿರುಗಿಸಿ ಸಾವನ್ನು ಅಪ್ಪಿಕೊಂಡವರಂತೆ ಕಂಡರೂ ಆ ಸಾವಿನಲ್ಲಿಯೂ ಕೂಡ ಸಮಾಜವನ್ನು ತಿರಸ್ಕರಿಸುವ ದ್ರಾಷ್ಟ್ಯವನ್ನು ಕಾಣಬಹುದು. ತನ್ನ ಬಗ್ಗೆ ಹೊಲಸು ಮಾತನಾಡಿದ ಗಂಡನ ಬಾಯೊಳಗೆ ನಿಗಿನಿಗಿಸುವ ಕೆಂಡದುಂಡೆ ತುರುಕಿದ ಪಾರ್ವತಿ ಕೊನೆಗೆ ಸಮಾಜದ ಅಸಹ್ಯಕರ ಮಾತಿಗೆ ಪ್ರತಿರೋಧವಾಗಿ ಸಾವನ್ನು ಆಯ್ದುಕೊಳ್ಳುತ್ತಾಳೆ. ಆ ಮೂಲಕ ತಾನು ಅಂದುಕೊಂಡಂತೆ ಬದುಕಲು ಅವಕಾಶ ನೀಡದ ಸಮಾಜಕ್ಕೊಂದು ಕ್ರೌರ್ಯದ ವಿದಾಯ ಹೇಳುತ್ತಾಳೆ.
ಕಥೆಗಳು ಹೊರನೋಟಕ್ಕೆ ಬರೀ ಗಂಡು ಹೆಣ್ಣಿನ ಸಬಂಧದ ಕುರಿತಾದ ಕಥೆಗಳು ಎನ್ನುವಂತೆ ತೋರುತ್ತಿದ್ದರೂ ಅವುಗಳ ಒಳಹೊಕ್ಕು ನೋಡಿದರೆ ಅದು ಬರೀ ಗಂಡು ಹೆಣ್ಣಿನ ಸಂಬಂಧವಾಗಿರದೇ ಸಮಾಜದ ಸಂಬಂದಗಳಾಗಿರುವುದು ಗೋಚರವಾಗುತ್ತದೆ. ಯಾವ ಕಥೆಯೂ ಬರೀ ಆ ಪಾತ್ರಗಳ ಕಥೆಯಾಗದೇ ಸಮಾಜದಲ್ಲಿ ನಿತ್ಯ ನಡೆಯುವ ಕಥೆಯ ಒಳನೋಟವಾಗಿರುವುದು ವಿಶೇಷ. ಇಲ್ಲಿ ಬರುವ ಕಮಲಮ್ಮ, ಯಮನಮ್ಮ, ಬಸಮ್ಮ, ಪಾರ್ವತಿ, ಅಜ್ಜಿ, ಕಲ್ಪನಾ, ಸುಜಾತಾ ನಮ್ಮ ಸುತ್ತಮುತ್ತಲಿನ ಹತ್ತಾರು ಹೆಣ್ಣುಗಳ ಕಥೆಯನ್ನು ಹೆಸರು ಬದಲಿಸಿ ಬರೆದಿರಬಹುದೇ ಎಂದು ಅನ್ನಿಸುವಷ್ಟು ಆತ್ಮೀಯವಾಗುತ್ತದೆ. ಈ ಕತೆಗಳು ಕೇವಲ ಸಂಕಲನದ ಕಥೆಗಳಷ್ಟೇ ಆಗಿರದೇ ಮನೆಮನೆಯ ಕತೆಯೂ ಆಗಿರುವುದು ಇಲ್ಲಿನ ವಿಶೇಷ. ಮಢಿವಾಳಪ್ಪ, ರಾಮಪ್ಪರು ಇರುವುದರಿಂದಲೇ ಹೆಣ್ಣು ಹೆಣ್ಣಾಗಿರೋದಕ್ಕೆ ಸಾಧ್ಯ ಎನ್ನುತ್ತಲೇ ಗಂಡಿನ ಕುಟಿಲತೆಯನ್ನು, ಮೋಸವನ್ನು, ಹೆಣ್ಣಿನ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಕಣ್ಣಿಗೆ ಕಟ್ಟಿದಂತೆ ಆದರೂ ತುಂಬಾ ಸೂಕ್ಷ್ಮವಾಗಿ ನಿರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೆಲವೊಂದು ಕಥೆಗಳು ಇನ್ನೂ ಇರಬೇಕಿತ್ತು ಎಂದುಕೊಳ್ಳುತ್ತಿರುವಾಗಲೇ ಹಠಾತ್ ಆಗಿ ಮುಗಿದು ಹೋಗುತ್ತ ಓದುಗರಲ್ಲಿ ಚಿಂತನೆಯ ಸೆಳುಕನ್ನು ಹುಟ್ಟಿಸುತ್ತದೆ. ಕೆಲವೊಂದು ಸ್ವಲ್ಪ ವಾಚ್ಯ ಎನ್ನಿಸುವುದು ಬಿಟ್ಟರೆ ಓದುಗರನ್ನು ಕಥಾಲೋಕದಲ್ಲಿ ಮುಳುಗಿಸುವ ಈ ಸಂಕಲನವನ್ನು ಸಾಹಿತ್ಯಾಸಕ್ತರು ಒಮ್ಮೆಯಾದರೂ ಓದಲೇ ಬೇಕು.
 

‍ಲೇಖಕರು G

4 February, 2015

6 Comments

  1. chalam

    ಓದುವಂತೆ ಪ್ರೇರೇಪಿಸುವ ಬರಹಕ್ಕೆ ಧನ್ಯವಾದಗಳು.

  2. Shwetha.A......

    ಇಂದಿನ ದಿನದ ಬದುಕು..ಬದುಕ ಪಯಣದಲಿ ಹೆಣ್ಣಿನ ಹೋರಾಟ ಜೀವದ ಹುಟ್ಟು ಆರಂಭದಿಂದ ಅತಿಶಯ ಭಾವನಾತ್ಮಕ ಬಂಧಗಳ ಬಯಲಲಿ ಸಾಗುವ ಮುಂದಿನ ದಾರಿಯ ವಿವಿಧ ಮುಖಗಳ ನಿಮ್ಮ ಲೇಖನ ವಾಸ್ತವತೆಗೆ ಹಿಡಿದ ಕೈಗನ್ನಡಿ…..

  3. Gubbachchi Sathish

    nechchina kathegara.

  4. mahesh kalal

    nice work

  5. shridhar

    ಸೊಗಸಾದ ಪರಿಚಯ

  6. shivalingaiahm

    basu olle kathegara, gramina sogadu, dharawadadha bashe odisutade.odidare matte odabekennuva kathegara.innu bareyali.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading