ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾಗಿಲು ಸದ್ದಾಗುತ್ತಿದೆ, ಹಸುವಾ, ಹುಲಿಯಾ? – ಜಿ ಪಿ ಬಸವರಾಜು ಸಣ್ಣಕಥೆ

ಜಿ ಪಿ ಬಸವರಾಜು

ನಮ್ಮ ಹಿತ್ತಲಿನ ಆಚೆಗೆ ಹುಲಿಯೊಂದು ಹಸುವನ್ನು ಹಿಡಿದುಬಿಟ್ಟಿತ್ತು. ಆ ಚಿತ್ರ ಎಷ್ಟು ಸ್ಪಷ್ಟವಾಗಿತ್ತೆಂದರೆ, ಹಸುವಿನ ಕತ್ತನ್ನು ಮುರಿದಿದ್ದ ಹುಲಿ ಅದರ ರಕ್ತವನ್ನು ಕುಡಿದು ಮಾಂಸವನ್ನು ತಿನ್ನುತ್ತಿತ್ತು. ಹುಲಿಯ ಮೂತಿಯೆಲ್ಲ ರಕ್ಕಮಯವಾಗಿತ್ತು. ಅದು ಅತ್ತ ಇತ್ತ ನೋಡುತ್ತ ತನ್ನ ಭೋಜನವನ್ನು ಸವಿಯುತ್ತಿತ್ತು. ಕಂಗಾಲಾದ ಇತರ ದನಗಳು ದಿಕ್ಕೆಟ್ಟು ಓಡಿದ್ದವು. ಒಂದೆರಡು ಹಸುಗಳು ನಮ್ಮ ಹಿತ್ತಲಿಗೆ ನುಗ್ಗಿಬಂದು ಭಯದಲ್ಲಿ ನಡುಗುತ್ತಿದ್ದವು. ಹಿತ್ತಲಿನ ಬಾಗಿಲನ್ನು ತೆರೆದು ಹುಲಿಯನ್ನೇ ನೋಡುತ್ತಿದ್ದ ನಮ್ಮೊಳಗೆ ಭೀತಿ ಕವಿದುಬಿಟ್ಟಿತ್ತು. ಆದರೂ ನಮ್ಮ ಕುತೂಹಲ ತಣಿದಿರಲಿಲ್ಲ. ಬಾಗಿಲನ್ನು ಅರೆತೆರೆದು ಒಬ್ಬರ ಮೇಲೊಬ್ಬರು ಬಿದ್ದು ಹುಲಿಯನ್ನು, ಅದು ತಿನ್ನುತ್ತಿರುವ ರೀತಿಯನ್ನು ನೋಡುತ್ತಿದ್ದೆವು. ಸತ್ತುಬಿದ್ದಿದ್ದ ದನ, ಅದರ ಸುತ್ತ ಸುರಿದಿದ್ದ ರಕ್ತ, ಮಾಂಸ ಎಲ್ಲ ನಮ್ಮನ್ನು ನಡುಗಿಸುತ್ತಿತ್ತು.
ಬಾಗಿಲು ಮುಚ್ಚಿರೋ ಎಂದು ಯಾರೋ ಕೂಗಿದರು. ಹುಲಿ ನಮ್ಮತ್ತ ಜಿಗಿದುಬರುವ ಸಾಧ್ಯತೆ ಇತ್ತು. ಹೀಗಾಗಿ ಥಟ್ಟನೆ ಬಾಗಿಲನ್ನು ಮುಚ್ಚಲು ನೋಡಿದೆವು. ಆದರೆ ಒಂದು ಹಸು ಬಾಗಿಲಿನ ಒಳಕ್ಕೆ ತನ್ನ ಕತ್ತನ್ನು ತೂರಿಸಿ ಒಳಬರಲು ಹವಣಿಸುತ್ತಿತ್ತು. ಅದು ಬಂದರೆ ನೇರವಾಗಿ ನಮ್ಮ ಅಡಿಗೆಯ ಮನೆಗೇ ನುಗ್ಗುವ ಸಂಭವ ಇತ್ತು. ಅದು ಯಾರೋ ಹಸುವಿನ ಕತ್ತನ್ನು ನಿಧಾನವಾಗಿ ತುರಿಸುತ್ತ, ‘ನಡಿಯವ್ವ ಆಕಡೆ ನಡಿ’ ಎಂದು ನಯವಾಗಿ ಹೊರಗೆ ತಳ್ಳುತ್ತಿದ್ದರು. ಅದನ್ನು ಒಳಗೆ ಕರೆದುಕೊಳ್ಳಬಹುದಾಗಿತ್ತು. ಆದರೆ ಯಾರೂ ಅದಕ್ಕೆ ಸಿದ್ಧವಿರುವಂತೆ ಕಾಣಲಿಲ್ಲ. ಬಲವಂತವಾಗಿ ಆ ಹಸುವನ್ನು ಹೊರಕ್ಕೆ ತಳ್ಳುತ್ತ ಬಾಗಿಲನ್ನು ಮುಚ್ಚಿಬಿಡಲು ಎಲ್ಲರೂ ಪ್ರಯತ್ನಿಸುತ್ತಿರುವಂತೆ ಕಾಣಿಸಿತು. ಯಾರದೋ ಕೈ ಹಸುವನ್ನು ಪ್ರೀತಿಯಿಂದ ನೇವರಿಸುತ್ತಿರುವಂತೆಯೂ ತೋರುತ್ತಿತ್ತು. ಬಾಗಿಲು ಇಷ್ಟಿಷ್ಟೆ ಮುಚ್ಚಿಕೊಳ್ಳುತ್ತಿತ್ತು. ಮಾಂಸ ತಿನ್ನುವ ಹುಲಿಯ ಚಿತ್ರ ಇಷ್ಟಿಷ್ಟೆ ಮರೆಯಾದಂತೆಯೂ ಕಾಣಿಸುತ್ತಿತ್ತು. ನಮ್ಮ ಕುತೂಹಲವಂತೂ ಹೆಚ್ಚುತ್ತಲೇ ಇತ್ತು. ಕೊನೆಯಬಾರಿ, ಕಂಡಷ್ಟನ್ನೇ ಕಣ್ಣಿಗೆ ತುಂಬಿಕೊಳ್ಳಲು ನಾವೆಲ್ಲ ಹೆಣಗುತ್ತಿದ್ದೆವು. ಒಳಗೆ ಬರಲು ಹವಣಿಸುತ್ತಿದ್ದ ಹಸು ತನ್ನ ಪ್ರಯತ್ನವನ್ನು ಬಿಟ್ಟಿರಲಿಲ್ಲ. ಅಂತೂ ಹೇಗೋ ಆ ಹಸುವನ್ನು ನೂಕಿ ಬಾಗಿಲನ್ನು ಭದ್ರವಾಗಿ ಹಾಕಿಬಿಟ್ಟರು.
ಬಾಗಿಲು ಮುಚ್ಚಿದ್ದರೂ ನಮ್ಮೆಲ್ಲರ ಕಣ್ಣೊಳಗೆ ಹುಲಿ ಇನ್ನೂ ಕುಣಿಯುತ್ತಲೇ ಇತ್ತು. ಅದು ಹಾರಿ ಬಂದು ಬಾಗಿಲಿಗೆ ಬಲವಾಗಿ ಅಪ್ಪಳಿಸಿ, ನುಚ್ಚುನೂರು ಮಾಡಿ ಮನೆಯಲ್ಲಿದ್ದ ನಮ್ಮೆಲ್ಲರನ್ನು ಕೊಂದು ರಕ್ತ ಹೀರಿಬಿಡಬಹುದೆಂಬ ಭಯ ನಮ್ಮನ್ನು ನಡುಗಿಸಿತ್ತು. ನಾವೆಲ್ಲ ಮಕ್ಕಳು ಎಷ್ಟು ಜನ ಇದ್ದೆವು ಎಂಬುದು ಸ್ಪಷ್ಟವಾಗುತ್ತಿಲ್ಲ. ಅಂತೂ ದೊಡ್ಡ ಗುಂಪಿತ್ತು ಎಂಬುದು ತಿಳಿಯುತ್ತಿತ್ತು. ಗುಂಪು ಎಷ್ಟೇ ದೊಡ್ಡದಿರಲಿ, ಅದು ವ್ಯಾಘ್ರನಿಗೆ ಯಾವ ಲೆಕ್ಕ.
ಈ ಭಯದಲ್ಲಿಯೇ ಯಾರಿಗೋ ಥಟ್ಟನೆ ಒಂದು ಉಪಾಯ ಹೊಳೆಯಿತು. ತಡಮಾಡದೆ 100ಕ್ಕೆ ಡಯಲ್ ಮಾಡಿದರು. ‘ನಮ್ಮ ಮನೆಯ ಹತ್ತಿರ ಹುಲಿ ಬಂದು ಹಸುವನ್ನು ತಿನ್ನುತ್ತಿದೆ, ಬೇಗ ಬನ್ನಿ’ ಎಂದು ಯಾರೋ ಹೇಳಿದರು. ಹಾಗೆ ಹೇಳಿದವರ ಧ್ವನಿ ನಡುಗುತ್ತಿತ್ತು. ಆ ಕಡೆಯಿಂದ ಪೊಲೀಸ ಹೇಳುತ್ತಿರುವುದು ಗಟ್ಟಿಯಾಗಿ ಕೇಳಿಸುತ್ತಿತ್ತು: ಕಳ್ಳರು ಬಂದರೆ ಹೇಳಿ, ದರೋಡೆಕೋರರು ಬಂದರೆ ಹೇಳಿ. ತಕ್ಷಣ ಬರುತ್ತೇವೆ. ಹುಲಿ ನಮ್ಮ ಜುರಿಸ್ಡಿಕ್ಷನ್ ಅಲ್ಲ.’
‘ಈ ಪೊಲೀಸರಿಗೆ ಬುದ್ಧಿಯಿಲ್ಲ’ ಎಂದು ಕೆಲವರು ಬೈದರು. ‘ಅದಕ್ಕೇ ಅದು ಪೊಲೀಸ್ ಡಿಪಾಟರ್್ಮೆಂಟು’ ಎಂದು ಮತ್ತಾರೋ ಸೇರಿಸಿದರು.
ತಕ್ಷಣವೇ ಫೋನ್ ಕಟ್ಟಾಯಿತು. ಇನ್ಯಾರೋ 101 ಡಯಲ್ ಮಾಡಿದರು. ಅದು ಅಗ್ನಿಶಾಮಕ ದಳಕ್ಕೆ ಹೋಯಿತು.
‘ಬೆಂಕಿ ಬಿದ್ದಿದೆಯಾ, ಎಲ್ಲಿ ಎಲ್ಲಿ?’ ಎಂಬ ಪ್ರಶ್ನೆ ತೂರಿಬಂತು.
ಭಯದಲ್ಲೂ ನಾವೆಲ್ಲ ನಕ್ಕೆವು.
‘ಹೌದು, ಹುಲಿಯ ಕಣ್ಣುಗಳು ಬೆಂಕಿಯ ಉಂಡೆಗಳಾಗಿವೆ’ ಎಂದ ಡಯಲ್ ಮಾಡಿದ ಹುಡುಗ.
‘ಅಂಕಲ್, ಬೇಗ ಬಂದು ಬಿಡಿ. ಹುಲಿ ನಮ್ಮ ಮನೆಯ ಮೇಲೆ ಎಗರಿಬಿಡಬಹುದು. ಮನೆಯಲ್ಲಿ ಬಹಳ ಜನರಿದ್ದೇವೆ.’
ಅವನು ನಕ್ಕ. ‘ಇಂಥ ತಮಾಷೆಯನ್ನೆಲ್ಲ ಮಾಡಬಾರದು ಮರಿ. ನೀವೆಲ್ಲ ಹೀಗೆ ಮಾಡುತ್ತ ಹೋದರೆ, ನಾವು ನಿಜವಾಗಲೂ ಬೆಂಕಿಬಿದ್ದಾಗ ಬರುವುದೇ ಇಲ್ಲ’ ಎಂದ.
ಮತ್ತೆ ಯಾರಿಗೆ ಫೋನ್ ಮಾಡುವುದು?
ಹಿತ್ತಲ ಬಾಗಿಲ ಬಳಿ ಸದ್ದಾಗುತ್ತಿತ್ತು. ಯಾರೋ ಆ ಬಾಗಿಲನ್ನು ದೂಡುತ್ತಿರುವಂತೆಯೂ ತೋರುತ್ತಿತ್ತು.
ಹಸುವೋ, ಹುಲಿಯೋ?
 
 
 
 
(ಸೌಜನ್ಯ: ವಿಜಯವಾಣಿ)
 
 

‍ಲೇಖಕರು G

19 July, 2014

1 Comment

  1. ಮಂಜುನಾಥ್. ಪಿ

    ಚೆನ್ನಾಗಿದೆ ಸರ್…!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading