ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಬಹುಶಃ ಎಲ್ಲವನ್ನೂ ಪ್ರಶ್ನಿಸಬಲ್ಲೆ ಎನ್ನುವ ಧಿಮಾಕು….’ – ರಾಘವೇಂದ್ರ ಜೋಶಿ ಬರೀತಾರೆ

ಚರ್ಚೆಗೆಂದು ಒಂದು ವಿಷಯವನ್ನಿಡುವುದೆಂದರೆ ಅದೊಂದು ಸಮುದ್ರ ಮಥನ .. ಕಲ್ಪವೃಕ್ಷ, ಕಾಮಧೇನು, ಕಾರ್ಕೋಟಕ … ಅಮೃತ ….ಏನೆಲ್ಲಾ ಬೇಕು ಅಲ್ಲಿ … ಆದರೆ ಹೀಗೆ ಚರ್ಚೆ ಆಗುವಾಗ ಒಮ್ಮೊಮ್ಮೆ ಮೂಲ ವಿಷಯವನ್ನೇ ಬಿಟ್ಟು ವಿಷಯಾಂತರವಾಗುವ ಅಪಾಯ ಸಹ ಇದೆ. ಇದನ್ನು ತಪ್ಪಿಸಲು ಅದಕ್ಕೊಂದು ನಿಯಮಾವಳಿ ಬೇಕಲ್ಲವಾ ಅನ್ನುವ ಪ್ರಶ್ನೆಯನ್ನು ರಾಘವೇಂದ್ರ ಜೋಶಿ ಇಲ್ಲಿ ಎತ್ತಿದ್ದಾರೆ. ಚರ್ಚೆ ಝೀರೋ ಅವರ್ ರೀತಿಯಲ್ಲಿ ಮುಕ್ತವಾಗಿರಬೇಕಾ ಅಥವಾ ನಿಯಮಾವಳಿಗಳಿಗೆ ಬದ್ಧವಾಗಿರಬೇಕಾ? ನಿಮಗೇನನ್ನಿಸುತ್ತದೆ.

ಅರಿವಿನ ತಲೆ ಮತ್ತು ಬರೆಯುವ ಲೇಖನಿ..

– ರಾಘವೇಂದ್ರ ಜೋಶಿ


ಕೈ ಮುಗಿಯೋಣ ಅಂತ ಅನಿಸುತ್ತದೆ.
ಇವತ್ತು ನಮ್ಮಲ್ಲಿ ಯಾವುದೇ ವಿಷಯ ಕುರಿತು ‘ಚರ್ಚೆ’ ಅಂತ ಶುರುವಾಗಿಬಿಟ್ಟರೆ ಸಾಕು: ಅಲ್ಲಿ ನಡೆಯುವ ವಾದ-ವಿವಾದಗಳು, ಮಾತುಗಳು, ಬಾಣಗಳು,
ಕೀಟಲೆಗಳು-ಎಲ್ಲ ನೋಡುತ್ತಿದ್ದರೆ ‘ಚರ್ಚೆ’ಗೊಂದು ಕೈ ಮುಗಿದೇ ಬಿಡೋಣ ಅಂತ ಅನಿಸತೊಡಗುತ್ತದೆ.
ಸುಮ್ಮನೇ ಒಂದು ತಮಾಷೆ ಗಮನಿಸಿ.
“ಹುಲಿಯೊಂದು ರಸ್ತೆ ಯಾಕೆ ದಾಟಬೇಕು?”
ಅನ್ನುವದರ ಬಗ್ಗೆ ಚರ್ಚೆ ನಡೆಯುತ್ತಿದೆ ಅಂತ ಅಂದುಕೊಳ್ಳೋಣ. ಏನೇನು ವಾದ-ವಿವಾದ ನಡೆಯಬಹುದು?
ಹುಲಿಗಳ ಜೀವನಕ್ರಮ, ವರ್ತಮಾನದಲ್ಲಿ ಅವುಗಳ ಬದುಕಿನಲ್ಲಾಗುತ್ತಿರುವ ಏರುಪೇರು, ಭವಿಷ್ಯದಲ್ಲಿ ಅವುಗಳನ್ನು ಬರೀ ಪೋಸ್ಟರುಗಳಲ್ಲಿ ಕಾಣಬಹುದಾದ ಅಪಾಯ-
ಮುಂತಾದ ವೈಜ್ಞಾನಿಕ ಕಾರಣಗಳೊಂದಿಗೆ ಅಭಿಪ್ರಾಯಗಳ ವಿಚಾರ ವಿನಿಮಯ ನಡೆಯುತ್ತದೆ. ಇದರೊಂದಿಗೇ, ಕಾಡಲ್ಲಿ ರಸ್ತೆ ಯಾಕೆ ಮಾಡಿದ್ದು, ಯಾರು ಮಾಡೋಕೆ
ಹೇಳಿದ್ದು, ರಸ್ತೆ ಮಾಡಿದ್ದರಿಂದಲೇ ಹುಲಿ ಅದನ್ನು ದಾಟಬೇಕಾಯಿತು ಅನ್ನುವದರಿಂದ ಹಿಡಿದು, ಹುಲಿ ಮಾಂಸಾಹಾರಿ ಆಗಿರುವದರಿಂದಲೇ ಅದಕ್ಕೆ ಲಂಗುಲಗಾಮಿಲ್ಲ-
ಅನ್ನುವ ಥರೇವಾರಿ ಕಮೆಂಟುಗಳು ಬಂದು ಬೀಳುತ್ತವೆ. ಈ ನಡುವೆ ಹುಲಿ ‘ಇಂತಿಂಥ’ ದೇವರ ವಾಹನ,ಹಾಗಾಗಿ ಇದು ಸಸ್ಯಾಹಾರಿ ಆಗಿರಬೇಕಿತ್ತು, ಹಾದಿ ತಪ್ಪಿ ಅದು
ಮಾಂಸಾಹಾರಿ ಆಗಿದೆ – ಅಂತ ಕಾಲೆಳೆಯುವ ಮನಸ್ಸುಗಳಿಗೂ ಕೊರತೆಯೇನಿಲ್ಲ. ಇದೆಲ್ಲದರ ನಡುವೆ ಚಿತ್ರವಿಚಿತ್ರ ಅಭಿಪ್ರಾಯ ಮಂಡಿಸುತ್ತಲೇ ಕೊನೆಗೆ
“ಜೈ ಕನ್ನಡಾಂಬೆ..” ಅಂತಂದು, ಇನ್ಯಾರೋ ಆ ಇಡೀ ಚರ್ಚೆಯನ್ನೇ ಒಂದು ಪ್ರಾದೇಶಿಕ ಚೌಕಟ್ಟಿಗೆ ತಂದು ನಿಲ್ಲಿಸಿಬಿಡುತ್ತಾರೆ!

ಇದು ಸದ್ಯಕ್ಕೆ ನಮ್ಮ ಸಾಮಾಜಿಕ ತಾಣಗಳಲ್ಲಿ, ಅಂತರ್ಜಾಲ ಪತ್ರಿಕೆಗಳಲ್ಲಿ ಆಗೀಗ ನಡೆಯುವ ಚರ್ಚಾಸ್ವರೂಪ. ಚರ್ಚೆಯ ಹೆಸರಿನಲ್ಲಿ ವಿಭಿನ್ನ ಮುಖಗಳು ಚರ್ಚಾಪಟುಗಳ ಅರ್ಜೆಂಟಿಗೆ
ತಕ್ಕಂತೆ ಅನಾವರಣಗೊಳ್ಳುತ್ತವೆ. ಇಂದೊಂಥರಾ ಹರಿಯುವ ನದಿ. ಅದಕ್ಕೆ ಕಟ್ಟುಪಾಡುಗಳು ಇಲ್ಲ. ತನ್ನ ಪಾಡಿಗೆ ತಾನು ನಡೆಯುತ್ತಿದ್ದ ಹುಲಿಯನ್ನು ದಾರಿ ತಪ್ಪಿಸಿರುವ ಚರ್ಚೆಯೊಂದು
ಎಲ್ಲಿಂದೆಲ್ಲಿಗೋ ಜಿಗಿಯಬಲ್ಲದು. ಜಾತಿ,ಧರ್ಮ, ಭಾಷೆ ಮತ್ತು ಆಹಾರದ ವಿಷಯದ ಗೊಂದಲದೊಳಗೆ ಪ್ರವೇಶ ಪಡೆಯಬಲ್ಲದು. ಹಾಗೆಯೇ ಬ್ರಾಹ್ಮಣ, ವೈಶ್ಯ, ಲಿಂಗಾಯತ,
ಮುಸ್ಲಿಂ, ದಲಿತ ಸಂಸ್ಕೃತಿಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಈ ಚರ್ಚೆ ಮಾಂಸಾಹಾರ ಶ್ರೇಷ್ಠವೇ, ಸಸ್ಯಾಹಾರ ಒಳ್ಳೆಯದೇ? ಅಂತೆಲ್ಲ ಪ್ರಶ್ನಿಸುತ್ತ, ಅದಕ್ಕೆ ತಕ್ಕನಾದ
ಲೆಕ್ಕಾಚಾರಕ್ಕೆ ಸಿದ್ಧವಾಗಬಲ್ಲದು. ಈ ಲೆಕ್ಕಾಚಾರದಲ್ಲಿ ನಾವೆಷ್ಟು ಪಳಗಿ ಹೋಗಿದ್ದೇವೆಂದರೆ, ನಮ್ಮ ನಮ್ಮ ವಾದಕ್ಕೆ ಬಲ ನೀಡಬಲ್ಲ ಎಂಥ ಸಣ್ಣ ಪಾಯಿಂಟುಗಳನ್ನೂ ನಾವು
ಬಿಡಲು ಸಿದ್ಧರಿಲ್ಲ. ಸಸ್ಯಾಹಾರಿ ತನ್ನ ವಾದಕ್ಕೆ ಅಹಿಂಸೆಯನ್ನು ಹಿಡಿದುಕೊಂಡರೆ, ಮಾಂಸಾಹಾರಿ ಬುದ್ಧನನ್ನೂ ಬಿಡುವದಿಲ್ಲ!
ಲೋಕಕ್ಕೆಲ್ಲ ಅಹಿಂಸೆ ಬೋಧಿಸಿದ ಬುದ್ಧ ಕೂಡ ಮಾಂಸಾಹಾರ ಸೇವಿಸುತ್ತಿದ್ದ ಎಂಬ ಸತ್ಯವನ್ನು ಕಣ್ಣೆದುರಿಗೆ ಇರಿಸಿದಾಗ ವಾದಕ್ಕೆ ನಿಂತ ಸಸ್ಯಾಹಾರಿಗೆ ಗಲಿಬಿಲಿಯಾಗುತ್ತದೆ.
ಆತ ನಂಬಿಕೊಂಡಿದ್ದ ‘ಅಹಿಂಸೆ’ಯ ಮನೋಧರ್ಮ ಈಗ ಗೊಂದಲದಲ್ಲಿ ಬೀಳುತ್ತದೆ. ಈಗ ಹೇಳಿ : ಆ ಕ್ಷಣದವರೆಗೂ ಬುದ್ಧನನ್ನೂ, ಅವನ ಅಹಿಂಸಾ ಬೋಧನೆಯನ್ನೂ ಹಿಂಬಾಲಿಸುತ್ತಿದ್ದ
ಸಸ್ಯಾಹಾರಿ ಈಗ ಏನು ಮಾಡಬೇಕು? ತಮಾಷೆಯೆಂದರೆ,ಚರ್ಚೆಯಲ್ಲಿ ಪಾಲ್ಗೊಂಡಿರುವ ಸಸ್ಯಾಹಾರಿಗೂ ತನ್ನ existenceನ್ನು ತೋರ್ಪಡಿಸಬೇಕಿದೆ. ಆತನ ಕೈಯಲ್ಲೊಂದು
ವೈಜ್ಞಾನಿಕ ಆಧಾರವಿದೆ. “ಸಸ್ಯಾಹಾರ ಯಾಕೆ ಶ್ರೇಷ್ಠ?” ಅಂತ ಹೇಳುವ ಇತ್ತೀಚಿನ ಮೆಡಿಕಲ್ ವರದಿಯಿದೆ. ‘ಸರ್ವೇ ರಿಪೋರ್ಟ್’ ಎಂಬ ಬಾಣ ತಾಗಿಸಿಕೊಂಡ ಮಾಂಸಾಹಾರಿ
ಈಗ ಏನು ಮಾಡಬೇಕು?
ಈ ವಿಚಾರ ಸರಣಿಯ ಮಧ್ಯೆ ದಿಕ್ಕು ತಪ್ಪಿಸಿಕೊಂಡಿರುವ ಹುಲಿ ಮತ್ತೆಲ್ಲೋ ಕಳೆದು ಹೋಗುತ್ತದೆ..
ಇಷ್ಟೆಲ್ಲ ನಡೆಯುತ್ತಿರವಾಗಲೇ ಇನ್ನೊಬ್ಬ ಚರ್ಚಾಪಟು ಅಂಕಣ ಪ್ರವೇಶಿಸುತ್ತಾನೆ.
“ಮಾಂಸಾಹಾರವೆನ್ನುವದು ನಮ್ಮ ಸಂಸ್ಕೃತಿ. ನಮ್ಮ ಧರ್ಮ. ಅದರ ಬಗ್ಗೆ ನೀವ್ಯಾರೂ ಮಾತಾಡೋ ಹಾಗಿಲ್ಲ..”  ಅಂತೆಲ್ಲ ಹೇಳತೊಡಗುತ್ತಾನೆ. ಜೊತೆಗೆ ಬ್ರಾಹ್ಮಣ, ಮುಸ್ಲಿಂ,
ದಲಿತರ ಕುರಿತಂತೆ ಪುಂಖಾನುಪುಂಖ ವಾದವಿವಾದಗಳು ಹೊರಬೀಳುತ್ತವೆ. ಅಲ್ಲಿಗೆ ಚರ್ಚೆಯೆಂಬುದು ಮತ್ತೆ ಜಾತಿ-ಧರ್ಮದ ಅಮಲಿನೊಳಗೆ ಬಿದ್ದು ಒದ್ದಾಡತೊಡಗುತ್ತದೆ.
ಈ ನಡುವೆ ಯಾರೋ ಬಂದು ಶರಣ ಸಂಸ್ಕೃತಿಯ ಬಗ್ಗೆ trigger ಮಾಡುತ್ತಾರೆ. ಜೊತೆಗೇ ವಚನ ಸಾಹಿತ್ಯವೂ ಬರುತ್ತದೆ. ಎಲ್ಲ ಅವಧೂತರ, ಎಲ್ಲ ಸಂತರ ಸೂಕ್ತಿಗಳ
ಪದಗಳನ್ನು ‘ಡಿಕ್ಷನರಿ ಮೀನಿಂಗ್’ನಲ್ಲಿ ಹುಡುಕಿಕೊಳ್ಳುತ್ತ  ಚರ್ಚೆಯೊಂದು ಚಕ್ರವ್ಯೂಹದಲ್ಲಿ  ಸ್ವಯಂಬಂಧಿಯಾಗುತ್ತದೆ.

ಇದೆಲ್ಲ ತಮಾಷೆಯಾಗಿ ಕಾಣುತ್ತದೆ.ನಾಟಕೀಯವಾಗಿ ಕಾಡುತ್ತದೆ.
ಅರೆರೇ, ನಮ್ಮೆಲ್ಲ ವಿಷದ ಮನಸ್ಸನ್ನು ಕಕ್ಕಿ ಖಾಲಿ ಹೊಟ್ಟೆಯಿಂದ ಯೋಚಿಸಿದ್ದರೂ ಸಾಕಿತ್ತು:
ಇಂಥದ್ದು, ಅಂಥದ್ದು ಅನ್ನುವದು ಯಾವುದೋ ಒಂದು ಜಾತಿಯಲ್ಲ. ಒಂದು ಧರ್ಮವಲ್ಲ. ಅದೊಂದು ಮನೋಸ್ಥಿತಿ! ಇಡೀ ಲೋಕದಲ್ಲಿ ಇರುವುದೆರಡೇ ಮನಸ್ಥಿತಿಗಳು:
ಒಂದು ಕೆಟ್ಟದ್ದು, ಇನ್ನೊಂದು ಒಳ್ಳೆಯದು. ಅಷ್ಟೇ!
ಇದೆಲ್ಲದರ ಮಧ್ಯೆ ನನಗೆ ನಿರಾಸೆ ಮೂಡಿಸುವದು ನಮ್ಮ ಊಟದ ಬಗೆಗೆ ನಡೆಯುವ ಕೋಲಾಹಲ. ಆಹಾರ ಎನ್ನುವದು ಹಸಿವಿಗೆ ಸಂಬಂಧಿಸಿದ್ದು.
ಹಸಿವು ನಮ್ಮ ಜಾಗತಿಕ ನಿತ್ಯ ಸಮಸ್ಯೆ. ಇಂಥ ಸಮಸ್ಯೆಗಳನ್ನು ಎದುರಿಸಲು ಆಯಾ ಪ್ರದೇಶದ ವಾಯುಗುಣ, ಸಂಸ್ಕೃತಿ, ಪದ್ಧತಿಗೆ ಬಿಟ್ಟು ಬಿಡಬೇಕು.
ಇಲ್ಲಿ ಯಾರ ಪದ್ಧತಿ ಮೇಲು, ಯಾರ ಸಂಸ್ಕೃತಿ ಕೀಳು ಅಂತ ಚರ್ಚೆ ಮಾಡುವದೇ ಅನಾಗರಿಕ, ಅಸಂಬದ್ಧ ಮತ್ತು ಅಪ್ರಸ್ತುತ. ಗಾಂಧೀ, ಏಸು, ಬುದ್ಧ, ಬಸವಣ್ಣ, ಕನಕ,
ಪುರಂದರ, ರೂಮಿಗಳ ಸಾರ ನಮಗೆ ಮುಖ್ಯವಾಗಬೇಕೇ ಹೊರತು ಅವರೆಲ್ಲ ಯಾವ ‘ಸಾರು’ ಕುಡಿದಿದ್ದರು ಅನ್ನುವದು ನಮ್ಮ ವಾದಕ್ಕೆ ಪುಷ್ಟಿಕೊಡಬೇಕಿಲ್ಲ.
ಇಷ್ಟಕ್ಕೂ ಅವರೂ ಮನುಷ್ಯರೇ. ಅವರ ಹೇಳಿಕೆಗಳಲ್ಲೂ, ಅವರ ತಿರುಳಲ್ಲೂ ಅಲ್ಲೊಂದು ಇಲ್ಲೊಂದು ಅಪವಾದ ಇದ್ದಿರಬಹುದು. ಕಾಲನ ತಿಳುವಳಿಕೆಯಲ್ಲಿ, ಇತಿಹಾಸದ
ಗ್ರಹಿಕೆಯಲ್ಲಿ ಅವೆಲ್ಲ ಹೇಳಿಕೆಗಳು ತಮ್ಮ ತಮ್ಮ ಸತ್ವವನ್ನು ಆಗಾಗ ರುಜುವಾತು ಮಾಡಲೇಬೇಕಾಗುತ್ತದೆ. ಹಾಗೆ ವರ್ತಮಾನದ ಈ ಜರಡಿ ಹಿಡಿಯುವಿಕೆಯಲ್ಲಿ ಎಲ್ಲರಿಗೂ
ಒಪ್ಪಿತವಾಗಿದ್ದು ಕೊನೆಗೆ ಉಳಿದೇ ಉಳಿಯುತ್ತದೆ. ಇಲ್ಲವಾದಲ್ಲಿ ಅಳಿಯುತ್ತದೆ..
ಇರಲಿ, ರಸ್ತೆ ದಾಟುತ್ತಿರುವ ಈ ನಮ್ಮ ಹುಲಿಗೆ ಯಾವತ್ತಾದರೂ ಸರಿದಾರಿ ಸಿಕ್ಕೀತೆ?
ನಾವು ಮಾಡುವ ಚರ್ಚೆಗಳಲ್ಲಿ code of conduct ಅನ್ನುವದು ಇರಲೇಬೇಕು ಮತ್ತು ಅದು ಚರ್ಚೆ ಮಾಡುವವರಲ್ಲಿ ಅಂತರ್ಗತವಾಗಿರಬೇಕು ಅನ್ನುವದಷ್ಟೇ ನನ್ನ
ಸದ್ಯದ ಕಳಕಳಿ. ಅಮೃತದ ನಿರೀಕ್ಷೆಯಲ್ಲಿ ನಡೆಸುವ ಮಥನಕಾರ್ಯ ಯಾವಾಗಲೂ ಕುತೂಹಲಕರ. ಅಲ್ಲಿ ವಿಷದ ಆಗಮನ ನಿರೀಕ್ಷಿತ. ಆದರೆ ವಿಷವೇ ಅಂತಿಮ ಪ್ರಾಡಕ್ಟು
ಅಲ್ಲವಲ್ಲ? ಅರಿವಿನ ತಲೆ ಮತ್ತು ಬರೆಯುವ ಲೇಖನಿಯ ಮಧ್ಯೆ ಸಂಪರ್ಕ ತಪ್ಪದಂತೆ ಸ್ವಲ್ಪ ನಿಧಾನಿಸೋಣ, ಎಲ್ಲಿಂದೆಲ್ಲಿಗೋ ಜಾರುವ ಈ ಚರ್ಚೆಗಳಲ್ಲಿ ಮುಖ್ಯ ವಿಷಯವಾಗಿದ್ದ
‘ಹುಲಿಯ ಪ್ರಶ್ನೆ’ಗೆ ತಾರ್ಕಿಕ ಉತ್ತರ ದೊರಕುವ ಸಂಭವನೀಯತೆ ಕಡಿಮೆಯಾಗುತ್ತಿದೆ. ಇದನ್ನು ವಿಫಲಗೊಳಿಸಿ ಫಲಿತಾಂಶ ತಂದುಕೊಳ್ಳೋಣ. ಹಾಗೆಯೇ
“ಹುಲಿಯೊಂದು ರಸ್ತೆ ಯಾಕೆ ದಾಟಬೇಕು?” ಅನ್ನುವದನ್ನು ಚರ್ಚೆಯಾದರೂ ಯಾಕೆ ಮಾಡಬೇಕು? ಅಂತ ಪ್ರಶ್ನಿಸಿಕೊಳ್ಳುವ ವ್ಯವಧಾನವೂ ನಮಗೆ ಇಲ್ಲದಂತಾಗುತ್ತಿದೆ.
ಅಷ್ಟರಮಟ್ಟಿಗೆ ನಮ್ಮನ್ನು ನಾವೇ ಕೇಳಿಕೊಳ್ಳುವ, ಪ್ರಶ್ನಿಸಿಕೊಳ್ಳುವ ಛಾತಿ ಬೆಳೆಸಿಕೊಳ್ಳೋಣ.
ಬಹುಶಃ, ಎಲ್ಲವನ್ನೂ ಪ್ರಶ್ನಿಸಬಲ್ಲೆ ಎನ್ನುವ ಧಿಮಾಕು, “ಯಾವುದನ್ನು ಪ್ರಶ್ನಿಸಬಾರದು” ಎನ್ನುವ ವಿವೇಕವನ್ನು ನಿಧಾನವಾಗಿ ತಿಂದು ಹಾಕುತ್ತಿದೆಯೇ?

‍ಲೇಖಕರು avadhi

20 March, 2013

13 Comments

  1. M.S.Prasad

    Aadru Ond Prashne !!! Huli Yaake Road Cross maadabeku RJ ?? Wonderful Thought..

  2. prakash hegde

    ಲೇಖನ ಬಹಳ ಇಷ್ಟವಾಯ್ತು…

  3. sumathi

    “ನಾವು ಮಾಡುವ ಚರ್ಚೆಗಳಲ್ಲಿ code of conduct ಅನ್ನುವದು ಇರಲೇಬೇಕು ಮತ್ತು ಅದು ಚರ್ಚೆ ಮಾಡುವವರಲ್ಲಿ ಅಂತರ್ಗತವಾಗಿರಬೇಕು,” ನಿಜ.
    ಜೊತೆಗೆ, ಪ್ರಶ್ನೆಗೆ, ಮ೦ಥನಕ್ಕೆ, ಶ೦ಕೆಗೆ ಒ೦ದು ರಿಯಾಕ್ಷನ್ ಇರಲಿ. ಓವರ್ ರಿಯಾಕ್ಷನ್ ಬೇಡ. ಅಲ್ವಾ?
    -ಸುಮತಿ

  4. samyuktha

    very contemporary thought! tumba ishtavaytu nimma ee lekhana…

  5. sunil Rao

    ತೀರಾ ಚರ್ಚಿಸಲು ಅಸಹ್ಯ ಅನಿಸುವಷ್ಟು ಬೇಸರವಾಗುತ್ತದೆ.
    ನಮ್ಮಲ್ಲಿರುವ ಒಂದಷ್ಟು perceptionಗಳನ್ನು ಮತ್ತು ideology ಗಳನ್ನು ಮೀರಿ ಯೋಚಿಸುವಲ್ಲಿ ನಾವು ವಿಫಲರಾಗ್ತೀವಿ

  6. Anitha Naresh manchi

    🙂 charchegaagi charche aadre heege

  7. pravara

    ಚರ್ಚೆಯನ್ನು ಎಲ್ಲಿಂದಲೋ ಎಲ್ಲಿಗೋ ಹಾರಿಸಿಕೊಂಡು ಹೋಗಿಬಿಡುತ್ತಾರೆ, ಮತ್ತೆ ಅವರನ್ನು ಎಳೆದುಕೊಂಡು ಬರಲಾರದೇ “ಥೂ ಹೋಗಲೇ ನಿನ್ನ” ಅಂದುಕೊಂಡು ಸುಮ್ಮನಾದದ್ದೂ ಇದೆ… ಇಷ್ಟೋಳ್ಳೆ ಲೇಖನ ಓದಿಸಿ ಪುಣ್ಯ ಕಟ್ಟಿಕೊಂಡಿರಿ ಜೋಶಿ ಸರ್

  8. ಶ್ರೀವತ್ಸ ಜೋಶಿ

    ಚಿಂತನಯೋಗ್ಯ ವಿಚಾರವನ್ನು ಸೋದಾಹರಣವಾಗಿ ಮಂಡಿಸಿದ್ದಾರೆ ರಾಘವೇಂದ್ರ ಜೋಶಿಯವರು. ಲೇಖನ ಇಷ್ಟವಾಯಿತು. ಪ್ರಕಟಿಸಿದ ‘ಅವಧಿ’ಗೂ ಧನ್ಯವಾದಗಳು.
    ಇದು ಕುಹಕವಲ್ಲ, ನಾನೂ ಗಮನಿಸಿರುವ ಮಾತು. ಚರ್ಚೆಗಳಲ್ಲಿ ಇಲ್ಲಸಲ್ಲದೆ ಬೈರಪ್ಪನವರನ್ನೋ ಇನ್ನೊಬ್ಬರನ್ನೋ ಉಲ್ಲೇಖಿಸಿ ಆಮೇಲೆ ಅವರ ಪರ-ವಿರುದ್ಧ ಚರ್ಚೆ ಮುಂದುವರಿಯುವುದೂ ಇದೆ.
    ನಿಜವಾಗಿಯೂ ಹುಲಿ ರಸ್ತೆ ದಾಟುತ್ತಿರುವ ಸನ್ನಿವೇಶ ಎದುರಾದರೆ ಆ ಪರಮವೀರ ಚರ್ಚಾಪಟುಗಳೆಲ್ಲ ಚಡ್ಡಿಯಲ್ಲೇ “ಒಂದು+ಎರಡು” ಮಾಡುವರೋ ಏನೊ.

  9. Swarna

    ಹೌದು, ಖಂಡಿತಾ ಚರ್ಚೆಗಳು ಹಾದಿ ತಪ್ಪುತ್ತಿವೆ. ಸಕಾಲಿಕ ಓದಿಗಾಗಿ ಧನ್ಯವಾದಗಳು

  10. ಪ್ರಸನ್ನ ರೇವನ್

    ಸಿಕ್ಕಿದ್ದನ್ನೆಲ್ಲ ಪ್ರಶ್ನಿಸಬಾರದು, ಆದರೆ ಪ್ರಶ್ನಿಸಬೇಕಾದಾಗ ಪ್ರಶ್ನಿಸದಿರುವುದು ದಡ್ಡತನ…

  11. vijayraj

    ತುಂಬಾ ಒಳ್ಳೇ ವಿಚಾರ…ಇಷ್ಟ ಆಯ್ತು….

    • poornima naregal

      good one sir…yella mahapurushara bodhaneya sara versus avaru yaava saaru kudidaru is too good .
      I strongly feel with the world becoming more and more civilized(namma grahike) our thinking pattern is becoming more viscious which we think is a strong point. Neeti samhite namma mana-medulinalli alavadisikollabeku.

  12. bharathi

    tumba chennaagi bardiddeera RJ … entha sathyada maathu annisthu …

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading