ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಬಹುವಚನ ಸಾಹಿತ್ಯ ವಿಮರ್ಶೆ’ ಪತ್ರಿಕೆಗೆ ಆಲ್ ದ ಬೆಸ್ಟ್

ಎಚ್ ಆರ್ ರಮೇಶ್

ಬಹುವಚನ ಸಾಹಿತ್ಯ ವಿಮರ್ಶೆ

ಸಂಪಾದಕರು:

ಸಂಪಾದಕರು: ಸಿರಾಜ್ ಅಹಮದ್ ಮತ್ತು ಸಂದೀಪ್ ನಾಯಕ್

ಎರಡು ತಿಂಗಳಿಗೊಮ್ಮೆ ಬರುವುದು.

ಒಂದು ಕೃತಿ ಉತ್ತಮವೆನಿಸಿಕೊಳ್ಳುವುದು ಅದು ತನ್ನೊಳಗೆ ಇಟ್ಟುಕೊಂಡಿರುವ ವಿಷಯದಿಂದಾಗಿ ಅಲ್ಲ; ಬದಲಿಗೆ, ಅದು ತಾನು ಏನನ್ನು ಹೇಳಲು ಆಗದೆ ಹೊರಗಡೆ ಉಳಿಸಿದೆಯೋ ಅದನ್ನು ವಿಮರ್ಶಕರು ಅಥವಾ ಓದುಗರು ಗುರುತಿಸಿದಾಗ ಅಥವಾ ಹೇಳಿದಾಗ ಎನ್ನುವ ಅರ್ಥ ಬರುವ ಮಾತುಗಳನ್ನು ಮಾರ್ಕ್ಟ್ವೈನ್ ಹೇಳಿದ್ದಾನೆ. ಅಂದರೆ, ಯಾವುದೂ ಸಹ ಪರಿಪೂರ್ಣವಾದಂತಹ ಸ್ಥಿತಿಯನ್ನು ಹೊಂದಿರುವುದಿಲ್ಲ. ಪರಿಪೂರ್ಣತೆಯೆಡೆಗಿನ ಚಲನೆಯಷ್ಟೆ. ಅಪರಿಪೂರ್ಣತೆಯನ್ನು ಅರಿಯುವುದೇ ಆಗಿದೆ. ಒಂದು ಓದು ಮಾಡಬೇಕಾದ ಕೆಲಸವನ್ನು ಮತ್ತು ವಿಮರ್ಶೆಯ ಕಾಳಜಿಯನ್ನು ಮಾರ್ಕ್ಟ್ವೈನ್ ಸರಿಯಾಗಿಯೇ ಗುರುತಿಸಿದ್ದಾನೆ ಅನ್ನಿಸುತ್ತದೆ. ಯಾಕೆಂದರೆ ಯಾವ ಕೃತಿಯೂ ಸಹ ತಾನು ಏನನ್ನು ಹೇಳಬೇಕೋ ಅದನ್ನು ಸಂಪೂರ್ಣವಾಗಿ ಹೇಳಲು ಸಾಧ್ಯವಾಗುವುದಿಲ್ಲ. ಮತ್ತು ಇದನ್ನು ಗಮನಿಸುವುದೂ ಸಹ ವೈಯಕ್ತಿಕ ನೆಲೆಯಲ್ಲಿಯೇ ಇರುತ್ತದೆ. ಅಲ್ಲದೆ, ಕಾಲಾದೇಶಕ್ಕೆ ಮತ್ತು ಓದುಗರ ಮನಸ್ಥಿತಿಗೆ ಅನುನುಣವಾಗಿಯೇ ಇರುತ್ತದೆ.

ಆದರೆ ವಿಮರ್ಶೆಯೆನ್ನುವುದು ಅನಿವಾರ್ಯ. ಆದಷ್ಟೂ ನಿಷ್ಠುರತೆ ಮತ್ತು ವಿನಯತೆಗಳನ್ನು ಮೈಗೂಡಿಸಿಕೊಂಡು ಕೃತಿಯೊಂದಕ್ಕೆ ತೀವ್ರವಾಗಿ ಪ್ರತಿಸ್ಪಂದನವನ್ನು ಕೊಡಬೇಕಾಗುತ್ತದೆ.   ಇವು ಇಲ್ಲದಿದ್ದರೆ ವಿಮರ್ಶೆ ಕೇವಲ ಟೀಕೆಯ ಮಟ್ಟಕ್ಕೆ ತಲುಪಿ ನಿಲ್ಲುತ್ತದೆ.  ಆ ಗುಣಗಳನ್ನು ಹೊಂದಿದ್ದಲ್ಲಿ  ವಿಮರ್ಶೆಗೆ ಮರುಸೃಜಿಸುವ ಚೈತನ್ಯ ದಕ್ಕುತ್ತದೆ. ಒಂದು ಕೃತಿ ಹೇಗೆ ಸಮಕಾಲೀನತೆಯನ್ನು ಪಡೆದಕೊಂಡಿದೆ ಎನ್ನುವುದನ್ನು ಒರೆಗೆ ಹಚ್ಚಿ ನೋಡುವುದು ಅದರ ಪ್ರಾಥಮಿಕ ಆದ್ಯತೆಯಲ್ಲಿ ಒಂದು. ಕೃತಿಯ ಒಳಗಡೆ ಇರುವುದನ್ನು ಹೊರಗಡೆ ತಂದು ಲೋಕದ ಗ್ರಹೀತಗಳ ಜೊತೆ ಇಟ್ಟು ಒಂದು ಸಂವಾದವನ್ನು ಏರ್ಪಸಿದಾಗ ವಿಮರ್ಶೆ ತನ್ನ ಸಾಫಲ್ಯತೆಯನ್ನು ಕಾಣುತ್ತದೆ. ಅಂದರೆ ಕೃತಿಯೊಂದು ವಿಮರ್ಶೆಯ ಮೂಲಕ ಸಮಾಜದಲ್ಲಿ ಚಲನಶೀಲವಾಗಿ, ಆರೋಗ್ಯ ಪೂರ್ಣವಾಗಿ, ಮತ್ತು ಪ್ರಜಾಸತ್ತಾತ್ಮಕ ನೆಲೆಯಲ್ಲಿ  ಮುಂದುವರೆಯಬೇಕು. ಒಂದು ಕೃತಿಯನ್ನು ಪ್ರಭಾವಿಸಿದ ಅಂಶಗಳು ಮತ್ತು ಅವು ಬರಹಗಾರನ/ಳ ಭಾಷೆ, ಸಂವೇದನೆ ಮತ್ತು ಇಮ್ಯಾಜಿನೇಷನ್ನಿನ ಮೂಲಕ ಹೇಗೆ ಅಭಿವ್ಯಕ್ತಗೊಂಡಿವೆ ಎಂಬುದನ್ನು ತೋರಿಸುವ ಹೊಣೆಗಾರಿಕೆಯನ್ನು ವಿಮರ್ಶೆ ಹೊಂದಿರಬೇಕಾಗಿರುತ್ತದೆ. ಹೀಗೆ ಕೃತಿಯೊಂದು ವಿಮರ್ಶೆಗೆ ಒಳಪಡುವುದರ ಮೂಲಕ ತನ್ನ ಸಮಕಾಲೀನತೆಯನ್ನು ಪಡೆದುಕೊಳ್ಳುತ್ತದೆ. 

ಅಂದರೆ ಕೃತಿಯೊಂದರೆ ವಿಮರ್ಶೆ ಅಂತಿಮವಾಗಿ ಲೋಕ ವಿಮರ್ಶೆ ಅಲ್ಲದೆ ಮತ್ತೇನಲ್ಲ. ಇಂತಹ ಗಂಭೀರವಾದ ಕೆಲಸ ಸಾಧುವಾಗುವುದಕ್ಕೆ ‘ಮಾಧ್ಯಮ’ದ ಸಹಕಾರ ಅತಿ ಅವಶ್ಯಕ. ಅದಿಲ್ಲದಿದ್ದರೆ ಅದು ಓದುಗರನ್ನು ತಲುಪುವುದು ಕಷ್ಟವೆಂದೇ ಹೇಳಬೇಕು. ಇಲ್ಲಿ ಒಂದು ಗಮನಸಿಲೇ ಬೇಕಾದ ಅಂಶವೆಂದರೆ ಮಾಧ್ಯಮದ ಜವಾಬ್ದಾರಿ. ಮಾಧ್ಯಮ ಯಾವತ್ತಿಗೂ ಕಾಲದ, ಸಮಾಜದ ಸಾಕ್ಷಿಯಂತೆ ಕೆಲಸ ಮಾಡಬೇಕಾಗುತ್ತದೆ. ವಿಪರ್ಯಾಸದ ಸಂಗತಿಯೆಂದರೆ ಇಂದು ಕಲವು ಮಾಧ್ಯಮಗಳು  ಐಡಿಯಾಲಾಜಿಗಳ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿವೆ. ಇದು ಅವುಗಳು ಬಿತ್ತರಿಸುವ ಹಾಗೂ ಪ್ರಕಟಿಸುವ ವರದಿ ಮತ್ತು ಬರಹಗಳ ಮೇಲೂ ಪ್ರಭಾವ ಬೀರುತ್ತದೆ. ಮುಕ್ತ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಸಾಹಿತ್ಯವನ್ನೂ ಕಲುಷಿತಗೊಳಿಸುತ್ತಿರುವುದನ್ನು ಕಾಣಬಹುದು.

ಸಾಹಿತ್ಯ ವಿಮರ್ಶೆ ಮತ್ತು ಈ ಬರಹದ  ಉದ್ದೇಶಕ್ಕೆ ಸೀಮಿತಗೊಳಿಸಿಕೊಂಡು ಹೇಳುವುದಾದರೆ, ಪುಸ್ತಕ ವಿಮರ್ಶೆಯಷ್ಟು ಮಾಧ್ಯಮದಲ್ಲಿ ತುಂಬ ಅವಗಾಹನೆಗೆ ಒಳಗಾಗಿದೆ. ಯಾಕೆಂದರೆ ಕೇವಲ ಒಂದು ಅಂಗೈ ಅಗಲದಷ್ಟು ಜಾಗವನ್ನು ಪುಸ್ತಕ ವಿಮರ್ಶೆಗೆ ಮೀಸಲಿಟ್ಟು ಅದನ್ನೇ ತಾವು ಸಾಹಿತ್ಯಕ್ಕೆ ಸಲ್ಲಿಸುತ್ತಿರುವ ಘನ ಸೇವೆ ಎಂದು ಭಾವಿಸಿಕೊಂಡಿರುವುದನ್ನು ಕಾಣಬಹುದಾಗಿದೆ.ಆದರೂ ಕೆಲವು ವಿಮರ್ಶೆಗೆ ಅವಕಾಶವನ್ನು ಕೊಡುತ್ತಿವೆ. ಕೆಲವು ಅಂತರ್ಜಾಲ ಪತ್ರಿಕೆಗಳು ಸಾಹಿತ್ಯ ವಿಮರ್ಶೆಯನ್ನು ಪ್ರಕಟಿಸುತ್ತಿವೆ.  ಇವುಗಳ ಜೊತೆಗೆ  ಇತ್ತೀಚೆಗೆ ಕನ್ನಡದಲ್ಲಿ ಬಹುವಚನ ಸಾಹಿತ್ಯ ವಿಮರ್ಶೆ ಎನ್ನುವ ದ್ವೈಮಾಸಿಕ ಪತ್ರಿಕೆಯೊಂದು ಹೊರ ಬಂದಿದೆ.

ಈ ಪತ್ರಿಕೆ ಕನ್ನಡ ಪತ್ರಿಕಾ ಲೋಕದಲ್ಲಿ ತುಂಬ ಹೊಸದೆಂಬಂತೆ ಕಾಣುವುದಕ್ಕೆ ಕಾರಣ ಅದು ಕೇವಲ ಪುಸ್ತಕ ವಿಮರ್ಶೆಗಷ್ಟೇ ಸೀಮಿತವಾಗಿರುವುದು. ಇಲ್ಲಿಯ ತನಕ ಪುಸ್ತಕ ವಿಮರ್ಶೆಗೆಂದೇ ಯಾವ ಪತ್ರಿಕೆಯೂ ಕನ್ನಡದಲ್ಲಿ ಇರಲಿಲ್ಲ. ಈ ಪತ್ರಿಕೆಯ ಮುಖೇನ ಕನ್ನಡದ ಪುಸ್ತಕಗಳ ಕುರಿತಾದ ವಿಮರ್ಶೆಯನ್ನು ತುಂಬಾ ವಿಸ್ತೃತವಾಗಿ ಓದುವ ಅವಕಾಶ ಕನ್ನಡಿಗರಿಗೆ ಲಭಿಸುವಂತಾಗಿದೆ.

ಮಾಧ್ಯಮವು ಸಾಹಿತ್ಯವನ್ನು ಜನರಿಗೆ ತಲುಪಿಸುವುದರಲ್ಲಿ ಮಹತ್ವವಾದ ಕೆಲಸವನ್ನು ಮಾಡಿರುವುದನ್ನು ನಾವು ಇತಿಹಾಸದ ಉದ್ದಕ್ಕೂ ನೋಡಬಹುದು. ಮುಖ್ಯವಾಗಿ ಇಂಗ್ಲೆಂಡಿನ ಹದಿನೇಳು ಮತ್ತು ಹದಿನೆಂಟನೆಯ ಶತಮಾನಗಳಲ್ಲಿ ಪತ್ರಿಕೆಗಳು ಸಾಹಿತ್ಯ ಮತ್ತು ವಿಮರ್ಶಾಕ್ಷೇತ್ರಕ್ಕೆ ನೀಡಿರುವ ಕಾಣಿಕೆ ಅನನ್ಯವಾದುದಾಗಿದೆ. ಅಂತಹದ್ದೇ ಒಂದು ಕೆಲಸವನ್ನು ಮಾಡುವ ಸಲುವಾಗಿ, ಮತ್ತು, ಕನ್ನಡದ ಮನಸ್ಸುಗಳಿಗೆ ಒಂದು ಭರವಸೆಯನ್ನು ಕೊಡುವಂತಹ ನಿಟ್ಟಿನಲ್ಲಿ ಈ ಬಹುವಚನ ಸಾಹಿತ್ಯ ವಿಮರ್ಶೆ ಪತ್ರಿಕೆಯು ರೂಪುಗೊಂಡಿದೆ ಎಂದು ಹೇಳಿದರೆ ಅತಿಶಯೋಕ್ತಿ ಆಗದು.

ಇದರ ಉದ್ದೇಶವೇ ಹೆಸರೇ ಸೂಚಿಸುವಂತೆ ಕನ್ನಡವನ್ನೂ ಒಳಗೊಂಡಂತೆ ಅನೇಕ ಭಾಷೆಗಳ ಕೃತಿಗಳ ಕನ್ನಡ ವಿಮರ್ಶೆ ಮಾಡುವುದಾಗಿದೆ. ಇದರ ವಿನ್ಯಾಸ ತುಂಬ ಅದ್ಭುತವಾಗಿರುವುದರ ಜೊತೆಗೆ ಪ್ರತಿ ಪುಟದಲ್ಲಿನ ಕೆಲವು ಚಿತ್ರಗಳು ಮನಸ್ಸಿಗೆ ಮುದವನ್ನು ನೀಡುತ್ತವೆ. ತನ್ನ ಹೆಸರಿಗೆ ಪ್ರತೀಕವೆಂಬಂತೆ ಇದರ ಲೋಗೋ ಇದೆ. ಒಂದು ಪುಟ್ಟ ಚೌಕಟ್ಟಿನಲ್ಲಿ ವಿವಿಧ ಭಾಷೆಗಳ  ‘ಬ’ ಎನ್ನುವ ಪದಗಳನ್ನು ಇಡಲಾಗಿದ್ದು ಅದು ತಕ್ಷಣಕ್ಕೆ ನೋಡಿದರೆ ಶಾಸನವೊಂದರ ತುಣುಕಿನ ರೀತಿ ಗೋಚರಿಸುತ್ತದೆ.

ಮೊದಲ ಸಂಚಿಕೆಯಲ್ಲಿ ಒಟ್ಟು ಎಂಟು ವಿಮರ್ಶೆಯ ಬರಹಗಳಿವೆ. ಆ ಎಂಟು ಬರಹಗಳು ಪ್ರಸ್ತುತ ಕನ್ನಡದ ಸಾಂಸ್ಕೃತಿಕ ವಲಯದಲ್ಲಿ ತುಂಬ ಹೆಸರು ಮಾಡಿರುವ ಲೇಖಕರಿಂದ ರಚಿಸಲ್ಪಟ್ಟವುಗಳಾಗಿವೆ. ಇಲ್ಲಿ ಕಾದಂಬರಿಯೊಂದರ ಕುರಿತು ವಿಮರ್ಶೆ ಇದೆ, ಕಾವ್ಯದ ಕುರಿತು ಚಿಂತನೆಗಳಿವೆ. ವೈಚಾರಿಕ ಪ್ರಬಂಧಗಳ ಕುರಿತಾದ ಅತ್ಯಂತ ಸೂಕ್ಷ್ಮವಾದ ಒಳನೋಟಗಳ ಬರಹಗಳಿವೆ. ಇವುಗಳನ್ನೆಲ್ಲ ಓದುವುದು ಚೇತೋಹಾರಿಯಾದಂತಹ ಅನುಭವವನ್ನು ನೀಡುತ್ತದೆ. ಪ್ರತಿ ಬರಹವೂ ಚಿಂತನೆಗೆ ಹಚ್ಚುವಂತಹವುಗಳಾಗಿರುವುದು ಈ ಪತ್ರಿಕೆಯ ಉದ್ದೇಶಕ್ಕೆ ಹೆಚ್ಚಿನ ಒತ್ತನ್ನು ಕೊಟ್ಟಿವೆ.

ಪತ್ರಕರ್ತ, ಕವಿ ಶಶಿ ಸಂಪಳ್ಳಿ ಅವರ ಬರಹ ರಾಜಾರಾಂ ತಲ್ಲೂರು ಅವರ ಆಧುನಿಕ ಕಾಲದ ಮಹಾದುರಂತಗಳಲ್ಲಿ ಒಂದಾದ ಕೋವಿಡ್ ಅನ್ನು ಕುರಿತು ಇರುವ ‘ಕರಿಡಬ್ಬಿ’ ಎನ್ನುವ ಅಧ್ಯಯನ ಬರಹದ ಕುರಿತು. ಈ ಬರಹದಲ್ಲಿ ಸಂಪಳ್ಳಿಯವರು ಆ ಪುಸ್ತಕದಲ್ಲಿನ ಕೋವಿಡ್ ಕುರಿತಾದ ಕೆಲವು ಹೃದಯವಿದ್ರಾವಕ ಘಟನೆಗಳ ಕುರಿತು ಲೇಖಕರ ವಿಚಾರಗಳನ್ನು ಕುರಿತು ತಮ್ಮ ವಿಮರ್ಶಾತ್ಮಕವಾದಂತಹ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಶಶಿ ಅವರ ಪುಸ್ತಕ ವಿಮರ್ಶೆಯಲ್ಲಿ ಕೋವಿಡ್ ಅನ್ನು ರಾಜಕೀಯವು ಹೇಗೆ ವ್ಯವಸ್ಥಿತವಾಗಿ ದುರ್ಬಳಕೆ ಮಾಡಿಕೊಂಡು ಜನಸಾಮಾನ್ಯರ ಜೊತೆ ಕೆಲವು ಸಂದರ್ಭದಲ್ಲಿ ಎಷ್ಟೊಂದು ಅಮಾನವೀಯವಾಗಿ ನಡೆದುಕೊಂಡಿತು ಎನ್ನುವ ಬರಹಕ್ಕೆ ಅವರ ತೀವ್ರ ಪ್ರತಿಸ್ಪಂದನೆಯನ್ನು ಕಾಣಬಹುದು.

ಈ ಪ್ರಥಮ ಸಂಚಿಕೆಗೆ ಶಿಖರಪ್ರಾಯವೆಂಬಂತೆ ಪ್ರೊ ರಾಜೇಂದ್ರ ಚೆನ್ನಿ ಅವರು ಅನಂತಮೂರ್ತಿ ಅವರ ‘ಅವಸ್ಥೆ’ ಕಾದಂಬರಿಯನ್ನು ಮರು ಓದುವಿಗೆ ಒಳಪಡಿಸಿಕೊಂಡು ಮಾಡಿರುವ ವಿಮರ್ಶೆ ಇದೆ. ಈ ವಿಮರ್ಶೆಯ ಒಟ್ಟೂ ಬರಹದ ಅರ್ಧದಷ್ಟು ಭಾಗದಲ್ಲಿ ಚೆನ್ನಿ ಅವರು ಕರ್ನಾಟಕದ ಮತ್ತು ಭಾರತದ ಪ್ರಕ್ಷುಬ್ಧ ರಾಜಕೀಯ ಸನ್ನಿವೇಶವನ್ನು ತುಂಬಾ ಪರಿಣಾಮಕಾರಿಯಾಗಿ ಚಿತ್ರಿಸಿರುವುದನ್ನು ಕಾಣಬಹುದದಾಗಿದೆ. ಚೆನ್ನಿ ಅವರು ಈಗಾಗಲೇ ಅವಸ್ಥೆ ಕಾದಂಬರಿಯು ರಾಜಕೀಯ ಕಾದಂಬರಿ ಎಂಬುದಾಗಿ ಜನಜನಿತವಾಗಿರುವುದನ್ನು ಪ್ರಶ್ನಿಸುತ್ತ ಹೇಗೆ ಅನಂತಮೂರ್ತಿ ಅವರ ಮತ್ತೊಂದು ಕಾದಂಬರಿ ‘ಭಾರತೀಪುರ’ವು ‘ಅವಸ್ಥೆ’ಗಿಂತಲೂ ನಿಜಕ್ಕು ರಾಜಕೀಯ ಕಾದಂಬರಿ ಎಂಬುದನ್ನು ಮೊದಲಬಾರಿಗೆ ಎಂಬಂತೆ ಗುರುತಿಸಿ  ಕೆಲವು ಹೊಸ ಒಳನೋಟಗಳ ಮೂಲಕ ವಿಮರ್ಶೆಮಾಡಿದ್ದಾರೆ.  ಕಾಲಕಾಲಕ್ಕೆ ಹೊಸಬಗೆಯಲ್ಲಿ ಕಟ್ಟಲ್ಪಡುತ್ತಿರುವ ಮಹಾಭಾರತದ ಕುರಿತಾದ ಜಿ.ಎನ್ ದೇವಿಯವರ ಕನ್ನಡ ಅನುವಾದದ ಕುರಿತು ಕೃಷ್ಣಮೂರ್ತಿ ಅವರು ಪುಟ್ಟ ವಿಮರ್ಶೆಯಲ್ಲಿ ಕನ್ನಡದ ಲೋಕಲ್ ಜನಪದದ ತೌಲನಿಕ ವಿಶ್ಲೇ಼ಷಣೆಯನ್ನು ಕಾಣಬಹುದು.

ರಾಜಾರಾಮ್ ತೋಳ್ಪಾಡಿ ಅವರು ಜಿ ರಾಜಶೇಖರ ಅವರ ಮಹತ್ವಾದ ಕೃತಿಗಳಲ್ಲಿ ಒಂದಾದ ‘ಬಹುವಚನ ಭಾರತ’ದ ಕೃತಿಯನ್ನು ವಿಸ್ತೃತವಾಗಿ ವಿಮರ್ಶೆಗೆ ಒಳಪಡಿಸಿದ್ದಾರೆ. ಮತ್ತೂ ಈ ಕೆಲವು ವಿಮರ್ಶೆಗಳ ಜೊತೆಗೆ ಖಲೀಲ್ ಗಿಬ್ರಾನ್ ಕುರಿತು ವಿಶಿಷ್ಟ ಒಳನೋಟಗಳಿಂದ ಕೂಡಿರುವ ಕೇಶವ ಮಳಗಿ ಅವರು ಬರಹ, ಮುಕ್ತಾಯಕ್ಕ ಅವರ ಗಝಲ್ ಗಳ ಕುರಿತಾದ ಸಂವರ್ತ ಸಾಹಿಲ್ ಅವರ ಸುಂದರವಾದ ವಿಮರ್ಶೆ ಇದೆ. ಇವುಗಳ ಜೊತೆಗೆ ಅಲೀಸ್ ವಾಕರ್ ಅವರ ‘ಕೆನ್ನೀಲಿ’ ಎಂ ಆರ್ ಕಮಲ ಅವರ ಕನ್ನಡ ಅನುವಾದದ ಕುರಿತು ಇರುವ ಒಂದು ಬರಹವಿದೆ. ಹೀಗೆ ಇವುಗಳನ್ನೆಲ್ಲ ಓದುವುದು ತುಂಬ ಖುಷಿಯ ಸಂಗತಿ.

ಇಡೀ ಪತ್ರಿಕೆಯ ಆಶಯ ಕನ್ನಡದ ವಿಮರ್ಶಾ ವಲಯದಲ್ಲಿ ಒಂದು ಗಂಭೀರವಾದ ಚರ್ಚೆಯನ್ನು ಹುಟ್ಟುಹಾಕುವುದಾಗಿರುವುದನ್ನು ಪತ್ರಿಕೆಯು ತನ್ನ ಮೊದಲ ಸಂಚಿಕೆಯಲ್ಲೇ ಮೈದುಂಬಿಕೊಂಡು ಕಂಗೊಳಿಸುತ್ತದೆ. ಮೊದಲ ಇಂಪ್ರೆಶನ್ ಚೆನ್ನಾಗಿಯೇ ಮೂಡಿಬಂದಿದೆ. ಮುಂದೆ ನೋಡಬೇಕು ಇದರ ಓಘ ಮತ್ತು ಕ್ರಮಿಸುವ ದಾರಿಯನ್ನು.

ಭಾಷೆಯ ಅಂತಃಸತ್ವವು ಅದು ಹೇಗೆ ಮುಕ್ತತೆಗೆ ತೆರೆದುಕೊಳ್ಳುತ್ತದೆ ಎನ್ನುವುದನ್ನು ಅವಲಂಬಿಸಿರುತ್ತದೆ. ಭಾಷೆಗೆ ತನ್ನ ಜೊತೆಗೆ ಒಂದು ವಿಸ್ಮಯಗೊಳಿಸುವಂತಹ ಗುಣ ಬಂದಿರುತ್ತದೆ. ಅದು ನುಡಿಯಲ್ಪಟ್ಟಾಗ ಅಲ್ಲಿ ಚಿಮ್ಮುವಂತಹ ಅರ್ಥ ಸಾಧ್ಯತೆಗಳು. ಈ ಅರ್ಥ ಸಾಧ್ಯತೆಗಳು ಲೋಕದ ಗ್ರಹಿಕೆಯಿಂದ ಬಂದವುಗಳಾಗಿದ್ದರೂ, ಅದನ್ನು ಸಾಧ್ಯಗೊಳಿಸುವುದು ಭಾಷೆಯೇ ಆಗಿದೆ. ನುಡಿಯನ್ನು ಆಗಿಸುವುದು ಭಾಷೆ, ಆದರೆ ನುಡಿಗೆ ಅರ್ಥದ ಚೌಕಟ್ಟನ್ನುವುದು ಸಮಾಜ/ಚಿಂತನೆಗಳು. ಮಾಧ್ಯಮವಾದ ಭಾಷೆ ಸಂವಾದಕ್ಕೆ ಮೂಲ ಭಿತ್ತಿಯಾಗಿ ಪರಿಣಮಿಸುವುದು. ಘಟಿಸುವುದೆಲ್ಲ ಭಾಷೆಯಲ್ಲಿಯೇ. ಮತ್ತು ಅಮೂರ್ತದ ಅರಿವು ಭಾಷೆಯಲ್ಲಿ ಮೂರ್ತವಾಗುತ್ತದೆ. 

ಭಾಷೆಯನ್ನು ಕೆಡಿಸಿದರೆ ನಮ್ಮ ಚಿಂತನೆಗಳೂ ಸಹ ಚರ್ವಿತಚರ್ವಿಣವಾಗುತ್ತವೆ. ಈ ನಿಟ್ಟಿನಲ್ಲಿ ‘ಬಹುವಚನ ಸಾಹಿತ್ಯ ವಿಮರ್ಶೆ’ಯು ನಿಗಾವಹಿಸುತ್ತ ತನ್ನ ಜವಾಬ್ದಾರಿಯನ್ನು ಹೇಗೆ ನಿರ್ವಹಿಸಬಲ್ಲದು ಎಂಬುದು ಮುಂಬರುವ ದಿನಗಳಲ್ಲಿ ಗೊತ್ತಾಗುವಂತಹದ್ದು. ತನ್ನ ಪ್ರತಿ ಸಂಚಿಕೆಯಲ್ಲಿನ ಪುಸ್ತಕ ವಿಮರ್ಶೆ ಕೇವಲ ‘ರಿವ್ಯೂ’ ಆಗದೆ, ಅದೊಂದು ಸಾಂಸ್ಕೃತಿಕ,  ಸಾಹಿತ್ಯಿಕ ವಾಗ್ವಾದಗಳಿಗೆ, ಹೊಸ ಬಗೆಯ ಆಲೋಚನೆ, ಚಿಂತನೆಗಳಿಗೆ ಪ್ರಚೋದಕ ಶಕ್ತಿಯಾಗಿ ಹೊಮ್ಮಲಿ ಎಂದು ಆಶಿಸುತ್ತ ಬಹುವಚನ ಸಾಹಿತ್ಯ ವಿಮರ್ಶೆ ಪತ್ರಿಕೆಗೆ ಆಲ್ ದ ಬೆಸ್ಟ್.

‍ಲೇಖಕರು avadhi

7 July, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading