ಹಿರಿಯ ಸಾಹಿತಿ ಬಸು ಬೇವಿನಗಿಡದ ಅವರ ಅನುವಾದ ಕೃತಿ ‘ದಕ್ಕದ ಕಾಡು’.
ಫ್ಲ್ಯಾನರಿ ಓ’ಕಾನರ್ ಅವರ ಕಥೆಗಳ ಅನುವಾದ ಇದು.
ಈ ಕೃತಿಗೆ ಖ್ಯಾತ ವಿಮರ್ಶಕರಾದ ಓ ಎಲ್ ನಾಗಭೂಷಣ ಸ್ವಾಮಿ ಅವರು ಬರೆದ ಮುನ್ನುಡಿ ಇಲ್ಲಿದೆ-
ಡಾ ಓ ಎಲ್ ನಾಗಭೂಷಣಸ್ವಾಮಿ
ಗೆಳೆಯ ಬಸು ಬೇವಿನಗಿಡದ ಅವರು ಅನುವಾದಿಸಿರುವ ಫ್ಲ್ಯಾನರಿ ಓ’ಕಾನರ್ ಅವರ ಐದು ಕಥೆಗಳ ಸಂಕಲನ ‘ದಕ್ಕದ ಕಾಡು’ ಓದುಗರು, ಸಾಹಿತ್ಯಾಭ್ಯಾಸಿಗಳು ಹಾಗೂ ಅನುವಾದಕರು ಗಮನಿಸಬೇಕಾದ ಕೃತಿ. ಇಂಗ್ಲಿಶ್ ವಾಕ್ಯಗಳ ನೆರಳು ಬೀಳದ ಹಾಗೆ ಕನ್ನಡದ ನುಡಿಗಟ್ಟಿಗೆ ಹೊಂದುವ ಹಾಗೆ ಅನುವಾದಗೊಂಡಿರುವ ಕಥೆಗಳಿಂದ ಓದುಗರು ಸಂತೋಷಪಡುತ್ತಾರೆ. ಸಾಹಿತ್ಯ ಅಭ್ಯಾಸಿಗಳು ಇಲ್ಲಿನ ‘ಕಪ್ಪು-ಬಿಳುಪು’ ರೀತಿಯ ಕತೆಗಳಲ್ಲಿ ಕನ್ನಡದ ಹಲವು ಕಥೆಗಳ ಪ್ರತಿಧ್ವನಿಯನ್ನು ಆಲಿಸುತ್ತ ಸಾಹಿತ್ಯದ ವಿಶ್ವಾತ್ಮಕ ಗುಣದ ಬಗ್ಗೆ ಕುತೂಹಲ ತಾಳಬಹುದು. ಅನುವಾದಕರು ಬಸು ಅವರು ರೂಪಿಸಿಕೊಂಡಿರುವ ಅನುವಾದ ಮಾದರಿಯ ಬಗ್ಗೆ ಫಲಪ್ರದವಾಗುವಂಥ ಚರ್ಚೆ ನಡೆಸಬಹುದು.

‘ಕಪ್ಪು-ಬಿಳುಪು’ ನಂತಹ ಕತೆಗಳು ಕನ್ನಡ ಓದುಗರಿಗೆ ಲಂಕೇಶರ ‘ಮುಟ್ಟಿಸಿಕೊಂಡವನು’ ಕಥೆಯ ನೆನಪನ್ನು ತಂದೀತು. ದಲಿತ ಸಾಹಿತ್ಯದ ಆಶಯಗಳಂಥದೇ ಆಶಯ ಅಮೆರಿಕನ್ ಕಥೆಯಲ್ಲೂ ವರ್ಣದ್ವೇಷದ ಹಿನ್ನೆಲೆಯಲ್ಲಿ ರೂಪ ಪಡೆಯುವ ಬಗೆ ಮನಸಿಗೆ ಬರಬಹುದು. ಹೀಗೆ ಫ್ಲಾö್ಯನರಿ ಓ’ಕಾನರ್ ಕಥೆಗಳು ಕನ್ನಡದ ಕಥೆಗಳ ನೆನಪಿನ ಜೊತೆಗೆ ಬೆಸೆದುಕೊಳ್ಳುವ ಗುಣವನ್ನು ಹೊಂದಿವೆ.
ಕೆಲವೊಮ್ಮೆ ನಮ್ಮ ಪರಿಸರದಲ್ಲೇ ನಡೆಯುವುದನ್ನು ಹೇಳುವ ಕಥೆಗಾರರ ಬಗ್ಗೆ ಹೆಚ್ಚಿನ ಗೌರವವೂ ಮೂಡಬಹುದು. ಅನ್ಯಭಾಷೆಯ ಸಾಹಿತ್ಯದೊಡನೆ ನಮ್ಮ ಕಥೆ, ಕಥನಗಳನ್ನು ಹೋಲಿಸಿನೋಡುವ ಆಸಕ್ತಿಯೂ ಬೆಳೆಯಬಹುದು. ಹೀಗೆ ‘ನಮ್ಮ’ ಅನುಭವಕ್ಕೆ ಸುಲಭ ಗಮ್ಯವೆನಿಸುವ ಕಾರಣದಿಂದಲೆ ಓ’ಕಾನರ್ ಕಥೆಗಳು ಸಾಮಾನ್ಯ ಓದಿಗೂ ಪ್ರಿಯವಾಗುವ ಲಕ್ಷಣ ಹೊಂದಿವೆ.
ಬಸು ಬೇವಿನಗಿಡದ ಅವರು ಓ’ಕಾನರ್ ಬಗೆಗೆ ಸಾಕಷ್ಟು ದೀರ್ಘವಾದ ಪ್ರಸ್ತಾವನೆಯನ್ನೇ ಬರೆದು ಓದುಗರಿಗೆ ಅನ್ಯಭಾಷೆಯ ಲೇಖಕಿಯ ಪರಿಚಯವನ್ನು ಸಮರ್ಥವಾಗಿ ಮಾಡಿಕೊಟ್ಟಿದ್ದಾರೆ. ಅನುವಾದಕರು ಹೀಗೆ ತಮ್ಮ ಅನುವಾದಕ್ಕೆ ತಾವು ಅನುವಾದಿಸುತ್ತಿರುವ ಕೃತಿಕಾರರಿಗೆ ತಕ್ಕ ಪರಿವೇಷವನ್ನು ಒದಗಿಸುವುದು ತೀರ ಅಗತ್ಯ ಹಾಗೂ ಅಪೇಕ್ಷಣೀಯ. ಬಹಳಷ್ಟು ಅನುವಾದಕರು ಇಂಥ ಶ್ರಮವನ್ನು ಹೊರಲು ಸಿದ್ಧರಾಗುವುದಿಲ್ಲ. ಬಸು ಅವರು ಅನುವಾದಕ್ಕೆ ಪೂರಕವಾದ ಮಾಹಿತಿ, ಸಾಮಗ್ರಿಯನ್ನೂ ಒದಗಿಸುವ ಶ್ರಮಪಟ್ಟಿರುವುದು ಮೆಚ್ಚುಗೆಗೆ ಅರ್ಹವಾಗಿದೆ.
ಓ’ಕಾನರ್ ಕಥೆಗಳು ಬಹುಪಾಲು ದಕ್ಷಿಣ ಅಮೆರಿಕದ ದಕ್ಷಿಣ ಪ್ರಾಂತಗಳಲ್ಲೇ ನಡೆಯುತ್ತವೆ. ಆಕೆಯ ಕಥೆಗಳ ಮುಖ್ಯ ಪಾತ್ರಗಳೆಲ್ಲ ಒಂದಿಷ್ಟು ನೈತಿಕ ದೋಷವನ್ನು ಹೊಂದಿರುವುದು ಗಮನಕ್ಕೆ ಬರುತ್ತದೆ. ಅಥವಾ ನೈತಿಕ ದೋಷಗಳ ಪಾತ್ರಗಳು ದೈಹಿಕವಾಗಿಯೋ ಮಾನಸಿಕವಾಗಿಯೋ ಊನವಾಗಿರುವ ಪಾತ್ರಗಳೊಡನೆ ವ್ಯವಹರಿಸುವ ಸಂದರ್ಭಗಳನ್ನು ಚಿತ್ರಿಸುತ್ತವೆ. ಇಂತಹ ಪಾತ್ರ ಮತ್ತು ಪಾತ್ರ ಸಂಬAಧಗಳ ಹಿನ್ನೆಲೆಯಲ್ಲಿ ಜನಾಂಗ ಆಧಾರಿತ ಅಸಹನೆಯದ್ದೋ ದ್ವೇಷದ್ದೋ ಹಿನ್ನೆಲೆ ಸುಪ್ತವಾಗಿ ಇರುತ್ತದೆ.

ಉದಾಹರಣೆಗೆ ‘ಒಳ್ಳೆಯ ಮನುಷ್ಯನನ್ನು ಹುಡುಕುತ್ತ’ ಎಂಬ ಕಥೆ ಮೃಗೀಯವಾಗಿದೆ, ಕಟುವಾದ ವಿಡಂಬನೆಯನ್ನು ಹೊಂದಿದೆ ಎಂದು ವಿಮರ್ಶಕರು ಅಭಿಪ್ರಾಯಪಟ್ಟೆ ಕಾನರ್ ಇದನ್ನು ‘ಕ್ರಿಶ್ಚಿಯನ್ ವಾಸ್ತವತೆ’ ಎನ್ನುತ್ತಾಳೆ. ಕ್ರಿಶ್ಚಿಯನ್ ವಾಸ್ತವತೆ ಎನ್ನುವುದು ಕಠಿಣವಾಗಿಯೇ ಇರುತ್ತದೆ, ಭಾವುಕವಾಗಿರುವುದಿಲ್ಲ ಎಂದು ತನ್ನ ನಿಲುವನ್ನು ಸಮರ್ಥಿಸಿಕೊಳ್ಳುತ್ತಾಳೆ. ಧರ್ಮದ ನಿಲುವುಗಳನ್ನು ಪರೀಕ್ಷೆಗೆ ಒಡ್ಡುವುದು ಕನ್ನಡದ ಸಮಕಾಲೀನ ಕಥೆಗಳಲ್ಲಿ ಅಪರೂಪದ ಸಂಗತಿಯೇ ಸರಿ. ಹಾಗಾಗಿ ಕರುಣೆ, ಮಾನವೀಯತೆಗಳ ಸ್ವರೂಪವನ್ನು ನಿಷ್ಠುರವಾಗಿ ಶೋಧಿಸುವ ಓ ಕಾನರ್ ಕಥೆಗಳು ಯುವ ಲೇಖಕರಿಗೆ ಹೊಸ ಸಾಧ್ಯತೆಗಳನ್ನು ತೋರುವುದು ಸಾಧ್ಯವಿದೆ. ಇಂತಹ ಕಥೆಗಳನ್ನು ಅನುವಾದಿಸಿರುವ ಕಾರಣಕ್ಕೆ ಬಸು ಬೇವಿನಗಿಡದ ಅವರನ್ನು ಅಭಿನಂದಿಸಬೇಕು.
ಅಮೆರಿಕದ ದಕ್ಷಿಣ ಪ್ರಾಂತಗಳ ಮೂಲಭೂತವಾದೀ ಪ್ರಾಟೆಸ್ಟೆಂಟ್ ಪಾತ್ರಗಳ ಕಥೆಯನ್ನು ಸೂಕ್ಷ್ಮವಾದ ವ್ಯಂಗ್ಯ ಹಾಗೂ ಸೂಕ್ಷ್ಮವಾದ ಅನ್ಯೋಕ್ತಿ ವಿಧಾನಗಳಲ್ಲಿ ಚಿತ್ರಿಸುತ್ತ ಆ ಪಾತ್ರಗಳು ಕ್ಯಾತೊಲಿಕ್ ಒಲವಿನತ್ತ ಸಾಗುವುದನ್ನು ಚಿತ್ರಿಸುವ ಓ’ಕಾನರ್ ಮತಾಂತರದಂತಹ ಸಂಗತಿಯನ್ನು ನಿರೂಪಿಸುವ ಬಗೆಯೂ ಕಥೆಗಾರರ ಗಮನವನ್ನು ಸೆಳೆಯುವಂಥದೇ ಆಗಿದೆ. ತೀರ ಸೀಮಿತವಾದ ಗ್ರಹಿಕೆ ಇರುವ ಪಾತ್ರಗಳು ಎದುರಿಸುವ ದುರ್ಭರವಾದ ವಿಧಿಯನ್ನು ಚಿತ್ರಿಸುವ ಈ ಕತೆಯಲ್ಲಿ ಧರ್ಮದ ಪ್ರಶ್ನೆ, ಕೆಡುಕಿನ ಪ್ರಶ್ನೆ, ಪವಿತ್ರವಾದದ್ದರ ಹುಡುಕಾಟ- ಇವನ್ನೆಲ್ಲ ನಿರ್ವಹಿಸಿರುವ ರೀತಿಯೂ ಹೊಸ ಲೇಖಕರು ಗಮನಿಸಬೇಕಾದ ಸಂಗತಿಗಳು.
‘ಪೆದ್ದರು ಮೊದಲು ಸ್ವರ್ಗವನ್ನು ಪ್ರವೇಶಿಸುವರು’ ಕಥೆಯಲ್ಲಿ ಬುದ್ಧಿ ಬೆಳೆಯದ ಮಗನನ್ನೂ ತನ್ನ ರಕ್ಷಣೆಯಲ್ಲಿರುವ ಬಾಲಾಪರಾಧಿಯನ್ನೂ ಸಜ್ಜನರನ್ನಾಗಿಸಿ ಒಳ್ಳೆಯ ಬದುಕು ನೀಡಬೇಕೆಂಬ ಹಟವಿರುವ ಆದರೆ ನಿಜವಾದ ಕರುಣೆಯ ಸ್ಪರ್ಶವಿಲ್ಲದ ಕಥಾನಾಯಕನ ಸೋಲು, ಮಕ್ಕಳ ದುರಂತ ಇವನ್ನು ಲೇಖಕಿ ನಿರ್ವಹಿಸಿರುವ ಪರಿ ನಿಜಕ್ಕೂ ಕಥೆಗಾರಿಕೆಯ ಕೌಶಲದ ಉದಾಹರಣೆಯಾಗಿದೆ. ದೈಹಿಕ ಅಸ್ವಸ್ಥತೆ ಅನುಭವಿಸುತ್ತ ಬಲುಮಟ್ಟಿಗೆ ಏಕಾಂಗಿಯಾಗಿ ಬದುಕಿದ ಫ್ಲ್ಯಾನರಿ ಓ’ಕಾನರ್ ಮನುಷ್ಯ ವರ್ತನೆಗಳ ಸೂಕ್ಷ್ಮವನ್ನು ಗ್ರಹಿಸಿರುವ ರೀತಿಯೂ ಅದ್ಭುತವೆಂದೇ ಹೇಳಬೇಕು.
‘ಒಳ್ಳೆಯ ಮನುಷ್ಯನನ್ನು ಹುಡುಕುತ್ತ…’ ಕಥೆಯು ಆಕೆಯ ಇತರ ಮುಖ್ಯ ಕಥೆಗಳಂತೆ ಕೆಡುಕು, ಒಳಿತು ಮತ್ತು ದೈವೀಕರುಣೆಗಳ ಪರಿಶೀಲನೆಯೇ ಆಗಿದೆ. ಅಜ್ಜಿಯ ಪಾತ್ರದ ಸಂಕೀರ್ಣತೆ, ಮರೆವು, ತಾನು ಸತ್ತಾಗಲೂ ಮರ್ಯಾದಸ್ಥ ಮಹಿಳೆಯ ಹಾಗಿರಬೇಕೆಂಬ ಅವಳ ಹಂಬಲ, ಜೈಲಿನಿಂದ ತಪ್ಪಿಸಿಕೊಂಡವನ ಜೊತೆಯಲ್ಲಿ ಆಕೆ ನಡೆಸುವ ಚರ್ಚೆ, ಕೆಡುಕನ್ನು ದೂರವಿಡಬೇಕೆಂಬ ಅವಳ ಅಪೇಕ್ಷೆಯೇ ದುರಂತಕ್ಕೆ ಕಾರಣವಾಗುವುದು. ಇವೆಲ್ಲವಕ್ಕೆ ಪೂರಕವಾಗಿ ಜೀವಕೊಡುವಂತೆ ಬರುವ ಸಣ್ಣಪುಟ್ಟ ವಿವರಗಳು- ಇವೆಲ್ಲ ಸೇರಿ ಇದನ್ನು ಬಹು ಚರ್ಚಿತ ಕಥೆಯನ್ನಾಗಿಸಿವೆ. ಬಸು ಬೇವಿನಗಿಡದ ಅವರು ಹೀಗೆ ಓದುಗರ ಮನಸಲ್ಲಿ ಬಹಳ ಕಾಲ ಉಳಿಯುವ ಕಥೆಗಳನ್ನು ಕನ್ನಡದಲ್ಲಿ ಹೇಳಿ ಓದುಗರ ಕೃತಜ್ಞತೆಗೆ ಪಾತ್ರವಾಗುವ ಕೆಲಸ ಮಾಡಿದ್ದಾರೆ.
ಈ ಕಥೆಗಳ ಅನುವಾದದ ಬಗ್ಗೆ ಹೇಳಬೇಕಾದ ಮಾತು ಕೆಲವು ಇವೆ. ಬಸು ಅವರು ಧಾರವಾಡದ ಶಿಷ್ಟ ಕನ್ನಡವನ್ನು ನಿರೂಪಣೆಗೆ ಸಹಜವಾಗಿ ಒಗ್ಗಿಸಿಕೊಂಡಿದ್ದಾರೆ. ಅನುವಾದಕರಿಗೆ ಪರಿಚಿತವಾಗಿರುವ ಭಾಷೆಯ ಬಳಕೆ ಅನುವಾದದ ಯಶಸ್ಸಿಗೆ ದೊಡ್ಡ ಕಾಣಿಕೆ ನೀಡುತ್ತದೆ. ಅನುವಾದದ ಜೀವಂತಿಕೆಗೂ ಕಾರಣವಾಗುತ್ತದೆ. ಎರಡನೆಯದಾಗಿ ಕನ್ನಡಕ್ಕೆ ಒಗ್ಗುವ, ಓದುಗರಿಗೆ ಶ್ರಮ ನೀಡದ ವಾಕ್ಯರಚನೆಗಳು ಸುಲಭದ ಹಾದಿಗೆ ಸಹಕಾರಿಯಾಗಿವೆ. ಈ ಮಾತು ಬಸು ಬೇವಿನಗಿಡದ ಅವರ ಅನುವಾದದ ಶಕ್ತಿಯಾಗಿರುವಂತೆಯೇ ಮಿತಿಯೂ ಆಗಿರಬಹುದು. ಈ ಮಿತಿ ಕೇವಲ ಅವರ ಭಾಷೆಯದ್ದಲ್ಲ, ಇದೀಗ ಕನ್ನಡದಲ್ಲಿ ಪ್ರಚಲಿತವಾಗಿರುವ ಭಾಷಾ ಬಳಕೆಯ ಪ್ರಭಾವ ಅನ್ನಿಸುತ್ತದೆ.

ಈಗಿನ ಕಥೆಗಾರರು ಕಥೆಗೆ ಅಂದರೆ ಏನು ನಡೆಯಿತು ಅನ್ನುವುದನ್ನು ಹೇಳುವುದಕ್ಕೆ ಕೊಡುವಷ್ಟು ಪ್ರಾಮುಖ್ಯವನ್ನು ವಿವರಗಳ ಖಚಿತ ಚಿತ್ರಣಕ್ಕೆ ಕೊಡುವುದಿಲ್ಲ. ಜಗತ್ತಿನ ಶ್ರೇಷ್ಠ ಕಥೆಗಳು ಕೇವಲ ಘಟನೆಗಳ ವರದಿಗಳಾಗದೆ ಅವು ನಡೆದ ಪರಿಸರದ ಖಚಿತ, ಸ್ಪಷ್ಟ ವಿವರವನ್ನೂ ನೀಡುತ್ತ ಓದುಗರ ಕಥೆಯ ಲೋಕವನ್ನು ನಿರ್ಮಿಸಿಕೊಳ್ಳಲು ನೆರವು ನೀಡುತ್ತವೆ. ‘ಒಳ್ಳೆಯ ಮನುಷ್ಯನನ್ನು ಹುಡುಕುತ್ತ..’ ಎಂಬ ಕಥೆಯ ಆರಂಭ ಭಾಗದಿಂದ ಎರಡು ನಿದರ್ಶನಗಳನ್ನು ನೋಡೋಣ. ‘ಮುದುಕಿ ಮಗನತ್ತ ಹೋಗಿ ತಾನು ಓದುತ್ತಿದ್ದ ಪೇಪರನ್ನು ಕಣ್ಣಿಗೆ ಹಿಡಿದಳು’ ಎಂಬ ವಿವರವಿದೆ.
ತನ್ನಷ್ಟಕ್ಕೇ ಇದು ಸಮರ್ಪಕ ಮತ್ತು ‘ಕಥೆ’ಯ ದೃಷ್ಟಿಯಿಂದ ಸಾಕಾಗುವಷ್ಟಿದೆ. ಕತೆಗಾರ್ತಿ ಓ’ಕಾನರ್ ಅದನ್ನು ಚಿತ್ರವತ್ತಾಗಿ ವಣ ðಸಿರುವುದು ಹೀಗೆ: ‘ನೋಡಿಲ್ಲಿ, ಬೇಲಿ. ಇಲ್ಲಿ ನೋಡು ಇದನ್ನ,’ ಅನ್ನುತ್ತ ಸೊಂಟದ ಮೇಲೆ ಕೈ ಇಟ್ಟುಕೊಂಡು, ಇನ್ನೊಂದು ಕೈಯಲ್ಲಿ ಅವನ ತಲೆಯ ಮೇಲೆ ಪೇಪರನ್ನು (ಪರಪರ ಸದ್ದು ಮಾಡುವ ಹಾಗೆ) ಒದರಿದಳು.’ ಹಾಗೆಯೇ ಕನ್ನಡದಲ್ಲಿ ಬರುವ ‘ಮಗ ಏನೂ ಉತ್ತರ ಹೇಳಲಿಲ್ಲ. ಮುದುಕಿ ಈಗ ಸೊಸೆಯತ್ತ ತಿರುಗಿದಳು.

ಮುಗ್ಧತೆ ಮತ್ತು ಆಲಸ್ಯದ ಪ್ರತೀಕದಂತಿದ್ದ ಸೊಸೆ’ ಈ ವಿವರವನ್ನು ಹೇಳುವಾಗ ‘ಬೇಲಿ ಕಣ್ಣೆತ್ತಿ ನೋಡಲಿಲ್ಲ. ಅದಕ್ಕೇ ಅವಳು ಸೊಸೆಯತ್ತ ತಿರುಗಿದಳು. ಆ ಮಕ್ಕಳ ತಾಯಿಯ ಮುಖ ಕ್ಯಾಬೇಜಿನ ಹಾಗೆ ವಿಶಾಲವಾಗಿ ಮುಗ್ಧವಾಗಿತ್ತು. ತಲೆಗೆ ಹಸಿರು ಕರ್ಚೀಫು ಕಟ್ಟಿಕೊಂಡು ಅದರ ತುದಿಗಳನ್ನು ಮೊಲದ ಕಿವಿಗಳ ಹಾಗೆ ಕಾಣುವಂತೆ ಗಂಟು ಕಟ್ಟಿದ್ದಳು’ ಅನ್ನುವ ವಿವರಗಳನ್ನು ಓ ಕಾನರ್ ನೀಡುತ್ತಾಳೆ. ಅಜ್ಜಿ ನಿಂತ ಭಂಗಿ, ಪೇಪರು ಕೊಡವಿದ ರೀತಿ, ಕಣ್ಣೆತ್ತಿ ನೋಡದ ಮಗ, ಕ್ಯಾಬೇಜಿನ ಮುಖದಂತಹ ಸೊಸೆ ಈ ವಿವರಗಳು ಅತ್ಯಂತ ಪರಿಣಾಮಕಾರಿಯಾಗಿ ಆಯಾ ವ್ಯಕ್ತಿತ್ವಗಳನ್ನು ಚಿತ್ರಿಸುತ್ತವೆಯಲ್ಲವೇ?
ಇದು ಖಂಡಿತ ಬಸು ಅವರ ಅನುವಾದದ ದೋಷವೆಂದು ಹೇಳುತ್ತಿಲ್ಲ. ನಮ್ಮ ಕಾಲದ ಪ್ರಚಲಿತ ಬರವಣ ಗೆ, ಓದುಗರಿಗೆ ಸಲೀಸಾಗಿ ಅರ್ಥವಾಗಬೇಕೆಂಬ ಬಯಕೆ ಹೇಗೆ ಉತ್ತಮ ಅನುವಾದಕರನ್ನೂ ಸೂಕ್ಷ್ಮಗಳನ್ನು ಕೈಬಿಡುವಂತೆ ಮಾಡುತ್ತದೆ ಎಂಬ ಸತ್ಯವನ್ನು ತೋರಿಸಲು ಹೇಳಿದ ಮಾತು. ಒಂದು ಭಾಷೆಯಲ್ಲಿ ಕಲಾತ್ಮಕವಾಗಿ ರಚನೆಗೊಂಡ ಕಥೆಯನ್ನು ಅನುವಾದಿಸುವಾಗ ಇಂಥ ಸೂಕ್ಷ್ಮಗಳು ಕಳೆದುಹೋಗದಿದ್ದರೆ ಆಗ ಕನ್ನಡಕ್ಕೆ ಬರುವ ಚೆಲುವೇ ಬೇರೆ. ಅಲ್ಲದೆ ಇಂಥವನ್ನು ಕನ್ನಡ ವಾಕ್ಯದಲ್ಲಿ ಸರಿಯಾಗಿ ಕೂರಿಸುವುದೂ ದೊಡ್ಡ ಸವಾಲು.
ಬಸು ಬೇವಿನಗಿಡದ ಅವರು ಈ ಅನುವಾದಗಳ ಮೂಲಕ ತಾವು ಅತ್ಯಂತ ಸಮರ್ಥ ಅನುವಾದಕರೆಂದು ಸಾಬೀತು ಮಾಡಿದ್ದಾರೆ. ಅನುವಾದಕ್ಕೆ ಆಯ್ದುಕೊಂಡ ಕೃತಿಗಳನ್ನು ಅದರ ಎಲ್ಲ ಸೂಕ್ಷ್ಮಗಳೊಡನೆ ಕನ್ನಡಕ್ಕೆ ತರುವ ಸಾಹಸಕ್ಕೆ ಬಸು ಅವರು ಸಿದ್ಧರಾಗಲಿ. ಅವರ ಮೂಲಕ ಜಗತ್ತಿನ ಶ್ರೇಷ್ಠ ಕೃತಿಗಳು ಕನ್ನಡಕ್ಕೆ ಬರುವಂತಾಗಲಿ ಎಂದು ಹಾರೈಸುತ್ತೇನೆ. ತಮ್ಮ ಅನುವಾದದ ಜೊತೆಯಲ್ಲಿ ನನ್ನವರೆಡು ಮಾತು ಸೇರಿಸಲು ಅವಕಾಶ ನೀಡಿದ ಬಸು ಬೇವಿನಗಿಡದ ಅವರಿಗೆ ಕೃತಜ್ಞನಾಗಿದ್ದೇನೆ.






0 Comments