ಬಸವರಾಜ ರಾಜಗುರು ನೆನಪಿನಲ್ಲಿ..

ಗುರುವಂದನಾ 2018

ವಿಖ್ಯಾತ ಹಿಂದುಸ್ಥಾನಿ ಗಾಯಕ ಪಂ. ಬಸವರಾಜ ರಾಜಗುರು ಅವರ ಸ್ಮರಣಾರ್ಥ `ಗೆಳೆಯರ ಬಳಗ’ವು ಇದೇ ಶನಿವಾರ (ಏ. 7) ಹೆಸರಾಂತ ಗಾಯಕಿ ವಿದುಷಿ ಭಾರತಿ ಪ್ರತಾಪ್ ಅವರ ಸಂಗೀತ ಕಛೇರಿಯನ್ನು ಹಮ್ಮಿಕೊಂಡಿದೆ.

ಮಲ್ಲೇಶ್ವರದ ಸೇವಾಸದನದಲ್ಲಿ ಸಂಜೆ ಐದು ಗಂಟೆಗೆ ನಡೆಯುವ ಈ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ; ಭಾರತಿ ಪ್ರತಾಪ್ ಹಾಗೂ ಯುವ ಗಾಯಕ ವಿನಾಯಕ ಹಿರೇಹದ್ದ ಅವರ ಗಾಯನ ಕಾರ್ಯಕ್ರಮ ನಡೆಯಲಿದೆ.

ಈ ಕಲಾವಿದರಿಗೆ ಸಹವಾದನದಲ್ಲಿ ಗುರುಮೂರ್ತಿ ವೈದ್ಯ, ನಿತಿನ್ ಹೆಗಡೆ (ತಬಲಾ) ಹಾಗೂ ಮಧುಸೂದನ ಭಟ್, ಭರತ್ ಹೆಗಡೆ (ಹಾರ್ಮೋನಿಯಂ) ಸಹಯೋಗ ನೀಡಲಿದ್ದಾರೆ. ವಿವರಗಳಿಗಾಗಿ ಸಂಪರ್ಕ: 9035077237

ಸ್ಥಳ: ಸೇವಾಸದನ, 14ನೇ ಕ್ರಾಸ್, ಮಲ್ಲೇಶ್ವರ.
ಸಮಯ: ಶನಿವಾರ ಸಂಜೆ 5
ಪ್ರವೇಶ ಉಚಿತ.

* ಕಲಾವಿದರ ಪರಿಚಯ

ಭಾರತಿ ಪ್ರತಾಪ್

ವಿದುಷಿ ಭಾರತಿ ಪ್ರತಾಪ್ ಶಾಸ್ತ್ರೀಯ ಗಾಯನದಲ್ಲಿ ಆಕಾಶವಾಣಿಯ `ಬಿ’ ಹೈ ಗ್ರೇಡ್ ಕಲಾವಿದೆ. ದೇವರನಾಮ ಮತ್ತು ವಚನಗಳಲ್ಲಿ `ಎ’ ಗ್ರೇಡ್ ಕಲಾವಿದೆ. ಏಳನೇ ವಯಸ್ಸಿನಲ್ಲಿಯೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಕೆ ಆರಂಭಿಸಿದ ಭಾರತಿ ನಂತರ ಹಿಂದುಸ್ತಾನಿ ಸಂಗೀತದ ಕಡೆಗೆ ಆಸಕ್ತಿ ತೋರಿದರು. ಪಂ. ಮಾರುತಿ ರಾವ್, ಪಂ. ರಾಮರಾವ್ ವಿ. ನಾಯಕ್ ಅವರಲ್ಲಿ ಶಿಷ್ಯವೃತ್ತಿ ಆರಂಭಿಸಿದರು. ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಪೂರೈಸಿ ಕೆಲಕಾಲ ಎಚ್ಎಂಟಿಯಲ್ಲಿ ಸೇವೆ ಸಲ್ಲಿಸಿದರು. ನಂತರ ವೃತ್ತಿಗೆ ವಿದಾಯ ಹೇಳಿ ಪ್ರವೃತ್ತಿಯಲ್ಲಿಯೇ ಸಂಪೂರ್ಣವಾಗಿ ತೊಡಗಿಸಿಕೊಂಡರು. ಆಗ್ರಾ ಘರಾನಾದ ಹಿರಿಯ ಕಲಾವಿದೆ ವಿದುಷಿ ಲಲಿತ್ ಜೆ ರಾವ್ ಅವರ ಬಳಿ ಸಂಗೀತಾಭ್ಯಾಸವನ್ನು ಮುಂದುವರಿಸಿದ್ದಾರೆ. ದೇಶದ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ಕಛೇರಿ ನೀಡಿ ಸಂಗೀತ ವಿಮರ್ಶಕರಿಂದ ಸೈ ಎನಿಸಿಕೊಂಡ ಅವರು ಭಾರತವಷ್ಟೇ ಅಲ್ಲದೆ ಅಮೆರಿಕ ಮತ್ತು ಕೆನಡಾ ಮೊದಲಾದ ಕಡೆಗಳಲ್ಲಿಯೂ ಸಂಗೀತ ಕಛೇರಿ ನೀಡಿದ್ದಾರೆ. ಅವರ ಗಾಯನದ ಹಲವು ಸಿ.ಡಿ.ಗಳು ಬಿಡುಗಡೆಯಾಗಿವೆ.

ವಿನಾಯಕ ಹಿರೇಹದ್ದ

ಉತ್ತರ ಕನ್ನಡದ ಸಿದ್ದಾಪುರ ತಾಲೂಕು ಹಿರೇಹದ್ದದ ವಿನಾಯಕ ಅವರು ಸಾಂಸ್ಕೃತಿಕ ಹಿನ್ನೆಲೆಯ ಕುಟುಂಬದಿಂದ ಬಂದವರು. ಮಹಾಬಲೇಶ್ವರ ಮೂರೂರು ಅವರ ಬಳಿ ಸಂಗೀತದ ಪ್ರಾಥಮಿಕ ಪಾಠಗಳನ್ನು ಕಲಿತ ಬಳಿಕ ಹೆಸರಾಂತ ಗಾಯಕ ಪಂ. ಗಣಪತಿ ಭಟ್ ಹಾಸಣಗಿ ಅವರಲ್ಲಿ ಸಂಗೀತಾಭ್ಯಾಸವನ್ನು ಮುಂದುವರಿಸಿದ್ದಾರೆ. ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ಸಂಗೀತ ಕಛೇರಿ ನೀಡಿರುವ ಅವರು ಆಕಾಶವಾಣಿ ಹಾಗೂ ದೂರದರ್ಶನದ `ಎ’ ಗ್ರೇಡ್ ಕಲಾವಿದ. ತಬಲಾ ಹಾಗೂ ಹಾರ್ಮೋನಿಯಂಗಳನ್ನೂ ನುಡಿಸಬಲ್ಲ ಅವರು ಹಲವು ಆಸಕ್ತ ವಿದ್ಯಾರ್ಥಿಗಳಿಗೆ ಸಂಗೀತದಲ್ಲಿ ತರಬೇತಿ ನೀಡುತ್ತಿದ್ದಾರೆ. ಅದರ ಜತೆಗೆ `ಆಧಾರ ಷಡ್ಜ’ ಸಂಸ್ಥೆಯ ಮೂಲಕ ಸಂಗೀತದ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ.

ಗುರುಮೂರ್ತಿ ವೈದ್ಯ

ತಬಲಾಕ್ಷೇತ್ರದಲ್ಲಿ ಗುರುಮೂರ್ತಿ ವೈದ್ಯ ಅವರ ಹೆಸರು ಚಿರಪರಿಚಿತವಾದದ್ದು. ಜಿ. ಜಿ. ಹೆಗಡೆ ಹಿತ್ಲಳ್ಳಿ, ಪಂ. ಬಸವರಾಜ ಬೆಂಡೆಗೇರಿ ಅವರ ಬಳಿ ತಬಲಾ ಶಿಕ್ಷಣ ಪಡೆದ ಗುರುಮೂರ್ತಿ ಪಂ. ರವೀಂದ್ರ ಯಾವಗಲ್ ಅವರ ಬಳಿ ತಬಲಾ ಶಿಕ್ಷಣವನ್ನು ಮುಂದುವರಿಸಿದ್ದಾರೆ. ತಬಲಾದ ಜೊತೆಗೆ ಚಂಡೆ, ಮೃದಂಗ ವಾದನಗಳನ್ನೂ ಇವರು ಬಲ್ಲವರು. ವಿದುಷಿ ಪ್ರಭಾ ಅತ್ರೆ, ಪಂ. ಉಲ್ಲಾಸ್ ಕಶಾಲ್ಕರ್, ವಿದುಷಿ ಅಶ್ವಿನಿ ಭಿಡೆ ದೇಶಪಾಂಡೆ, ಪಂ. ವಿನಾಯಕ್ ತೊರವಿ, ಪಂ. ಅಜಯ ಪೋಹಣರ್ ಹೀಗೆ ಅನೇಕ ಸುಪ್ರಸಿದ್ಧ ಕಲಾವಿದರಿಗೆ ಸಾಥ್ ನೀಡಿರುವ ಇವರು ದೇಶವಿದೇಶಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಅನೇಕ ಸಬಲಾ ಸೋಲೋ ಕಛೇರಿಗಳನ್ನೂ ನೀಡಿದ್ದಾರೆ. ಆಕಾಶವಾಣಿಯ ಕಲಾವಿದರಾದ ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.

ಗೆಳೆಯರ ಬಳಗ

`ಗೆಳೆಯರ ಬಳಗ’ವು ಪಂ. ಬಸವರಾಜ ರಾಜಗುರು ಅವರ ಸ್ಮರಣಾರ್ಥ ಕಳೆದ ಆರು ವರ್ಷಗಳಲ್ಲಿ; ಹೆಸರಾಂತ ಗಾಯಕರಾದ ಪಂ. ಗಣಪತಿ ಭಟ್ ಹಾಸಣಗಿ, ಪಂ. ಎಂ.ಪಿ. ಹೆಗಡೆ ಪಡಿಗೇರಿ, ಪಂ. ಪರಮೇಶ್ವರ ಹೆಗಡೆ, ಪಂ. ಶ್ರೀಪಾದ ಹೆಗಡೆ ಕಂಪ್ಲಿ, ಪೂರ್ಣಿಮಾ ಭಟ್ ಕುಲಕರ್ಣಿ, ಕಿರಣ್ ಮಗೇಗಾರ್, ನಾಗರಾಜ್ ಶಿರನಾಲಾ, ನಾಗಭೂಷಣ ಬಾಳೆಹದ್ದ, ಧನಂಜಯ ಹೆಗಡೆ, ಸತೀಶ್ ಮಾಳಕೊಪ್ಪ ಅವರ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಜೊತೆಗೆ ಉದಯೋನ್ಮುಖ ಗಾಯಕರಾದ ನರಸಿಂಹ ಸೋಂದಾ, ವಿಶಾಲ್ ಕಂಪ್ಲಿ, ರಘುನಂದನ್ ಬ್ರಹ್ಮಾವರ, ಹರೀಶ್ ಹಳವಳ್ಳಿ, ಸುಮಾ ಹಿತ್ಲಳ್ಳಿ ಅವರೂ ಈ ಕಾರ್ಯಕ್ರಮಗಳಲ್ಲಿ ಗಾಯನವನ್ನು ಪ್ರಸ್ತುತಪಡಿಸಿದ್ದರು. ಗುಣಮಟ್ಟದ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವುದು, ಪ್ರತಿಭಾವಂತ ಹಿರಿಕಿರಿಯ ಕಲಾವಿದರಿಗೆ ವೇದಿಕೆಯನ್ನು ಒದಗಿಸಿ ಒಳ್ಳೆಯ ಸಂಗೀತ ವಾತಾವರಣವನ್ನು ನಿರ್ಮಾಣ ಮಾಡುವುದು ಈ ಬಳಗದ ಉದ್ದೇಶ.

‍ಲೇಖಕರು avadhi

April 5, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: