ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ
ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.
ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.
ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.
‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ
ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ
ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.
ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು
ಅಲುಗಾಡಿಸಬಹುದು.
ಕರ‍್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ
ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.ಕರ್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ
ಇನ್ನು ಮುಂದೆ ಪರಿಚಯಿಸಲಾಗುವುದು.
41
ಗುಜರಾತಿ ದೇಶದ ಅನುಸೂಚಿತ ಬಾಶೆಗಳಲ್ಲಿ ಒಂದಾಗಿದೆ. ಒಟ್ಟ ದೇಶದಲ್ಲಿ ಗುಜರಾತಿ ಮಾತಾಡುವವರ ಸಂಕೆಯು ೫,೫೪,೯೨,೫೫೪ ಆಗಿದೆ. ಕರ‍್ನಾಟಕದ 0.108% ಪ್ರತಿಶತತೆಯನ್ನು ಗುಜರಾತಿ ಮಾತುಗರು ತುಂಬುತ್ತಾರೆ. ಗುಜರಾತಿಯ ಒಳಗೆ ಗುಜರಾತಿ, ಗುಜ್ರಾಒ/ಗುಜ್ರಾಉ, ಪಟ್ಟಣಿ, ಪೊಂಚಿ, ಸವುರಾಶ್ಟ್ರ/ಸವುರಾಶ್ಟ್ರಿ ಎಂಬ ಅಯ್ದು ತಾಯ್ಮಾತುಗಳು ಮತ್ತು ಇತರ ಎಂಬ ಒಂದು ಗುಂಪು ದಾಕಲಾಗಿದೆ. ಇವುಗಳಲ್ಲಿ ಅತಿ ಹೆಚ್ಚು ಮಂದಿ ಮಾತುಗರು ಗುಜರಾತಿ ತಾಯ್ಮಾತಿನಲ್ಲಿ ದಾಕಲಾಗಿದ್ದಾರೆ. ಈ ಇತರ ಗುಂಪನ್ನು ಅರಿತುಕೊಳ್ಳುವುದು ಕರ‍್ನಾಟಕದ ಮಟ್ಟಿಗೆ ಸದ್ಯ ತುಸು ಕಶ್ಟವಿರುವುದರಿಂದ ಇದನ್ನು ಇಡಿಯಾಗಿ ಒಂದು ಎಂದು ಪರಿಗಣಿಸಿದೆ.
ಕರ‍್ನಾಟಕದಲ್ಲಿ ೧,೧೪,೬೧೬ ಮಂದಿ ಗುಜರಾತಿ ಮಾತುಗರು ದಾಕಲಾಗಿದ್ದಾರೆ. ಇದು ದೇಶದ ಒಟ್ಟು ಗುಜರಾತಿ ಮಾತುಗರ ೦.೨೦೬% ಪ್ರತಿಶತತೆಯನ್ನು ರೂಪಿಸುತ್ತದೆ. ಇದು ಕರ‍್ನಾಟಕ ರಾಜ್ಯದ ಹನ್ನೊಂದನೆ ಅತಿದೊಡ್ಡ ಬಾಶೆಯಾಗಿದೆ. ಕರ‍್ನಾಟಕದಲ್ಲಿ ಗುಜ್ರಾಒ/ಗುಜ್ರಾಉ ಒಂದನ್ನು ಹೊರತುಪಡಿಸಿ ಉಳಿದ ನಾಲ್ಕು ತಾಯ್ಮಾತುಗಳು ಮತ್ತು ಇತರ ಎಂಬ ಗುಂಪು ದಾಕಲಾಗಿದೆ. ಆದರೆ, ಅತ್ಯಂತ ಕುತೂಹಲಕಾರಿಯಾದ ಒಂದು ವಿಚಾರವೆಂದರೆ ಗುಜರಾತಿ ಮಾತುಗರಲ್ಲಿ ದೊಡ್ಡ ಸಂಕೆಯ ಮಂದಿ ಇತರ ಎಂಬ ಗುಂಪಿನಲ್ಲಿ ದಾಕಲಾಗಿರುವುದು. ಕೆಳಗೆ ಕರ‍್ನಾಟಕದ ಗುಜರಾತಿ ಮಾತುಗರ ಪಟ್ಟಿಯನ್ನು ಕೊಟ್ಟಿದೆ, ಗಮನಿಸಿ
| ಗುಜರಾತಿ | 1,14,616 | |
| ಗುಜರಾತಿ | 66,265 | |
| ಪಟ್ಟಣಿ | 42 | |
| ಪೊಂಚಿ | 6 | |
| ಸವುರಾಶ್ಟ್ರ/ಸವುರಾಶ್ಟ್ರಿ | 4,399 | |
| ಇತರ | 43,904 |
ಇದರಲ್ಲಿ ಗುಜರಾತಿ ತಾಯ್ಮಾತಿಗೆ ೬೬,೨೬೫ ಮಂದಿ ಇದ್ದರೆ ಇತರ ಗುಂಪಿನಲ್ಲಿ ೪೩,೯೦೪ ಇದ್ದಾರೆ. ಇನ್ನುಳಿದಂತೆ ಸವುರಾಶ್ಟ್ರಿಗೆ ೪,೩೯೯ ಮಂದಿ ದಾಕಲಾಗಿದ್ದಾರೆ. ಆದರೆ, ಈ ಇತರ ಎಂಬ ಗುಂಪನ್ನು ಅರ‍್ತ ಮಾಡಿಕೊಳ್ಳುವುದಕ್ಕೆ ಸಾದ್ಯವಿಲ್ಲ. ಇದನ್ನು ಬೇರೆಯಾಗಿ ಪರಿಗಣಿಸಲೂ ಸದ್ಯಕ್ಕೆ ಸಾದ್ಯವಿಲ್ಲ. ಈ ಕಾರಣದಿಂದ ಗುಜರಾತಿಯ ಒಳಗಿನ ಎಲ್ಲ ತಾಯ್ಮಾತುಗಳನ್ನು ಒಡೆಯದೆ ಒಂದೆ ಗುಂಪು ಎಂದು ಪರಿಗಣಿಸಿದೆ. ಸವುರಾಶ್ಟ್ರಿಗೆ ಪರಿಗಣಿಸುವಶ್ಟು ಮಂದಿ ಇರುವುದು ನಿಜವಾದರೂ ಒಟ್ಟು ಕರ‍್ನಾಟಕದ ಗುಜರಾತಿ ತಾಯ್ಮಾತುಗಳ ಬಗೆಗೆ ಸರಿಯಾದ ಅರಿವು ಇಲ್ಲದಿರುವುದರಿಂದ ಗುಜರಾತಿಯನ್ನು ಇಲ್ಲಿ ಇಡಿಯಾಗಿ ಪರಿಗಣಿಸಿದೆ. ಇನ್ನೊಂದು ಗಮನಿಸಬೇಕಾದ ವಿಚಾರವೆಂದರೆ ಗುಜರಾತಿ ಪರಿಗಣಿಸುವಶ್ಟು ಮಂದಿಯನ್ನು ಬೆಂಗಳೂರು ನಗರ ಜಿಲ್ಲೆಯಲ್ಲಿ ಹೊಂದಿದೆ. ಅದೆ ವೇಳೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿಯೂ ಇದು ಹರಡಿಕೊಂಡಿದೆ. ಬೆಂಗಳೂರು ನಗರ ಜಿಲ್ಲೆಯಿಂದ ಗುಜರಾತಿ ತಾಯ್ಮಾತುಗರ ಸಂಕೆ ಹೆಚ್ಚಾಗಿ ದಾಕಲಾಗಿದ್ದರೆ ಉಳಿದ ಜಿಲ್ಲೆಗಳಲ್ಲಿ ಇತರ ಗುಂಪಿನಲ್ಲಿ ಹೆಚ್ಚು ಮಂದಿ ದಾಕಲಾಗಿದ್ದಾರೆ. ಇದೆಲ್ಲವೂ ಇಡಿಯಾಗಿ ಗುಜರಾತಿ ಮಾತುಗರನ್ನು ಅನುಮಾನಿಸಲು ಕರೆಯುತ್ತವೆ. ಹಾಗಾಗಿ ಇದನ್ನು ಒಂದೆ ಎಂದು ಪರಿಗಣಿಸಿದೆ.
ಕರ‍್ನಾಟಕದ ಒಳಗೆ ಈಗಾಗಲೆ ಹೇಳಿದಂತೆ ೧,೧೪,೬೧೬ ಮಂದಿ ಗುಜರಾತಿ ಮಾತುಗರು ದಾಕಲಾಗಿದ್ದಾರೆ. ಇದರಲ್ಲಿ ಹೆಚ್ಚಿನ ಸಂಕೆಯ ಗುಜರಾತಿಗಳು ಬೆಂಗಳೂರು ನಗರ (45,264) ಜಿಲ್ಲೆಯಲ್ಲಿ ಇದ್ದಾರೆ. ಬೆಂಗಳೂರಿನಲ್ಲಿ ಇರುವ ಕರ‍್ನಾಟಕದ ಒಟ್ಟು ಗುಜರಾತಿಗಳ ಪ್ರಮಾಣ (39.491%). ಆನಂತರ ಪರಿಗಣಿಸುವಶ್ಟು ಸಂಕೆಯ ಗುಜರಾತಿಗಳು ದಾರವಾಡ (26,887) ಜಿಲ್ಲೆಯಲ್ಲಿ ಇದ್ದಾರೆ. ಇದು ಕರ‍್ನಾಟಕದ ಗುಜರಾತಿಗಳ 23.458% ಆಗುತ್ತದೆ. ಆನಂತರ ಹನ್ನೊಂದು ಜಿಲ್ಲೆಗಳಲ್ಲಿ ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು, ಹದಿನಯ್ದು ಜಿಲ್ಲೆಗಳಲ್ಲಿ ಒಂದು ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಂದಿ ಮತ್ತು ಎರಡು ಜಿಲ್ಲೆಗಳಲ್ಲಿ ನೂರಕ್ಕಿಂತ ಕಡಿಮೆ ಮಂದಿ ದಾಕಲಾಗಿದ್ದಾರೆ.
ಇಲ್ಲಿ ಕೆಳಗೆ ಕರ‍್ನಾಟಕ ಗುಜರಾತಿ ಮಾತುಗರ ಜಿಲ್ಲಾವಾರು ಪಟ್ಟಿಯನ್ನು ಕೊಟ್ಟಿದೆ.
| ಪ್ರದೇಶ | ಜಿಲ್ಲೆಯ ಜನಸಂಕೆ | ಮಾತುಗರು | ಆ ಜಿಲ್ಲೆಯ % | ಆ ಬಾಶೆಯ % |
| ಕರ‍್ನಾಟಕ | 6,10,95,297 | 1,14,616 | 0.108% | 100% |
| ಬೆಂಗಳೂರು ನಗರ | 96,21,551 | 45,264 | 0.470% | 39.491% |
| ದಾರವಾಡ | 18,47,023 | 26,887 | 1.455% | 23.458% |
| ಗದಗ | 10,20,791 | 6,329 | 0.620% | 5.521% |
| ಬೆಳಗಾವಿ | 47,79,661 | 6,035 | 0.126% | 5.265% |
| ಕಲಬುರಗಿ | 25,66,326 | 3,830 | 0.149% | 3.341% |
| ಮಯ್ಸೂರು | 30,01,127 | 3,334 | 0.601% | 2.908% |
| ದಕ್ಶಿಣ ಕನ್ನಡ | 20,89,649 | 3,124 | 0.149% | 2.725% |
| ಬಾಗಲಕೋಟೆ | 18,89,752 | 2,506 | 0.132% | 2.186% |
| ದಾವಣಗೆರೆ | 19,45,497 | 2,042 | 0.104% | 1.781% |
| ಶಿವಮೊಗ್ಗ | 17,52,753 | 1,696 | 0.096% | 1.479% |
| ಕೊಪ್ಪಳ | 13,89,921 | 1,676 | 0.120% | 1.462% |
| ವಿಜಯಪುರ | 21,77,331 | 1,351 | 0.062% | 1.178% |
| ಬೀದರ | 17,03,300 | 1,209 | 0.070% | 1.054% |
| ಯಾದಗಿರಿ | 11,74,271 | 983 | 0.083% | 0.857% |
| ಬಳ್ಳಾರಿ | 24,52,595 | 955 | 0.038% | 0.833% |
| ಉತ್ತರ ಕನ್ನಡ | 14,37,169 | 887 | 0.061% | 0.773% |
| ಮಂಡ್ಯ | 18,05,769 | 851 | 0.047% | 0.742% |
| ಬೆಂಗಳೂರು ಗ್ರಾಮಂತರ | 9,90,923 | 835 | 0.084% | 0.728% |
| ತುಮಕೂರು | 26,78,980 | 706 | 0.026% | 0.615% |
| ರಾಯಚೂರು | 19,28,812 | 636 | 0.032% | 0.554% |
| ಹಾವೇರಿ | 15,97,668 | 615 | 0.038% | 0.536% |
| ಕೋಲಾರ | 15,36,401 | 516 | 0.033% | 0.450% |
| ರಾಮನಗರ | 10,82,636 | 471 | 0.043% | 0.410% |
| ಉಡುಪಿ | 11,77,361 | 419 | 0.035% | 0.365% |
| ಹಾಸನ | 17,76,421 | 374 | 0.021% | 0.326% |
| ಚಿತ್ರದುರ‍್ಗ | 16,59,456 | 370 | 0.022% | 0.322% |
| ಚಿಕ್ಕಬಳ್ಳಾಪುರ | 12,55,104 | 334 | 0.026% | 0.291% |
| ಚಿಕ್ಕಮಗಳೂರು | 11,37,961 | 296 | 0.026% | 0.258% |
| ಕೊಡಗು | 5,54,519 | 65 | 0.011% | 0.056% |
| ಚಾಮರಾಜನಗರ | 10,20,791 | 20 | 0.001% | 0.017% |
ಗುಜರಾತಿ ಮಾತುಗರ ಹಂಚಿಕೆ






0 Comments