ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸವರಾಜ ಕೋಡಗುಂಟಿ ಅಂಕಣ ಆರಂಭ – ನೂರು ಕೊರಳು

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು ಅಲುಗಾಡಿಸಬಹುದು.

1

ಕರ‍್ನಾಟಕದಲ್ಲಿ ನೂರಾರು ಬಾಶೆಗಳಿವೆ. ಕನ್ನಡ ಇಲ್ಲಿ ಪ್ರದಾನ ಬಾಶೆ. ಕನ್ನಡದಂತೆಯೆ ಇನ್ನೂ ಹಲವು ಪ್ರದಾನ ಬಾಶೆಗಳನ್ನು ಗುರುತಿಸಬಹುದು. ಇವುಗಳ ಜೊತೆಗೆ ಕೆಲಕೆಲವು ಬಾಶೆಗಳು ಕರ‍್ನಾಟಕದ ನಿರ್‍ದಿಶ್ಟ ಪ್ರದೇಶಗಳಲ್ಲಿ ಪ್ರದಾನ ಬಾಶೆಗಳಂತೆ ಬಳಕೆಯಲ್ಲಿವೆ. ಇವುಗಳ ಜೊತೆಗೆ ಕರ‍್ನಾಟಕದ ತುಂಬ ಹಲವಾರು ಸಣ್ಣ ಸಣ್ಣ ಬಾಶೆಗಳು ಇವೆ. ಇವುಗಳಲ್ಲಿಯೂ ಕೆಲವು ಕರ‍್ನಾಟಕದ ತುಂಬ ಹರಡಿಕೊಂಡಿದ್ದರೆ ಇನ್ನು ಕೆಲವು ನಿರ್‍ದಿಶ್ಟ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತವೆ. ಕರ‍್ನಾಟಕದ ತುಂಬ ಪಸರಿಸಿಕೊಂಡಿರುವಾಗಲೂ ಅವುಗಳ ಪಸರಿಸುವಿಕೆ ಪ್ರಮಾಣ ಸಮನಾಗಿಲ್ಲ.

ಕನ್ನಡವನ್ನೂ ಒಳಗೊಂಡು ನಾಡಿನ ಎಲ್ಲ ಬಾಶೆಗಳು ಕರ‍್ನಾಟಕದಾಗ ಅಸಮಾನವಾಗಿ ಹಂಚಿಕೊಂಡಿವೆ. ಕನ್ನಡವು ಕರ‍್ನಾಟಕದಲ್ಲಿ ಪ್ರದಾನ ಬಾಶೆ. ಆದರೆ ಇದು ನಾಡಿನೆಲ್ಲೆಡೆ ಸಮನಾಗಿ ಹರಡಿಕೊಂಡಿಲ್ಲ. ಕೆಲ ಜಿಲ್ಲೆಗಳಲ್ಲಿ ಕನ್ನಡದ ಪ್ರಮಾಣ 90%ಕ್ಕೂ ಹೆಚ್ಚು ಇದ್ದರೆ ಕೆಲವೆಡೆ 10%ಕ್ಕಿಂತ ಕಡಿಮೆ ಕಂಡುಬರುತ್ತದೆ. ಇಶ್ಟು ದೊಡ್ಡಪ್ರಮಾಣದ ಅಸಮಾನ ಹಂಚಿಕೆ ಯಾವುದೆ ನಾಡಿನಲ್ಲಿ ಹಲವಾರು ವಲಯಗಳಲ್ಲಿ ಹಲವು ಹಂತಗಳಲ್ಲಿ ವಿಬಿನ್ನ ಪಾತ್ರಗಳನ್ನು ಹೊಂದಿರುತ್ತದೆ. ಕರ‍್ನಾಟಕದ ಇತರ ಬಾಶೆಗಳ ಹಂಚಿಕೆಯೂ ಹೀಗೆಯೆ ಅಸಮಾನವಾಗಿದೆ. ಹೀಗೆ ರಾಜ್ಯದ ಬಾಶಿಕ ಪರಿಸರ ತುಂಬಾ ವಿಬಿನ್ನವೂ, ಕುತೂಹಲದಾಯಕವೂ ಮತ್ತು ಮುಕ್ಯವಾಗಿ ಬಹು ಸಂಕೀರ‍್ಣತೆವೂ ಆಗಿದೆ. ಈ ಬಾಶೆಗಳ ಅಸಮಾನ ಹಂಚಿಕ ನಾಡಿನ ಇತಿಹಾಸ, ಬೂಗೋಳ, ಸಮಾಜಶಾಸ್ತ್ರ, ಆರ‍್ತಿಕತೆ ಮೊದಲಾದ ಹಲವಾರು ವಲಯಗಳ ಅದ್ಯಯನಗಳಿಗೆ ಆಕರವಾಗುತ್ತದೆ. 

ಕರ‍್ನಾಟಕದಲ್ಲಿ ಬಾಶೆಗಳು ಹಲವು ಇರುವಂತೆ ಬಾಶಿಕ ಪರಿಸರವೂ ತುಂಬಾ ಸಂಕೀರ‍್ಣ ರಚನೆಯನ್ನು ಹೊಂದಿದೆ. ಕರಾವಳಿ ಪರಿಸರ ಹೆಚ್ಚಿನ ಬಾಶೆಗಳೊಂದಿಗೆ ಹೆಚ್ಚು ಸಂಕೀರ‍್ಣ ಪರಿಸರವನ್ನು ಒಳಗೊಂಡಿದೆ. ಉಳಿದಂತೆ ಮರಾಟಿ ಮತ್ತು ತೆಲುಗು ಗಡಿಗಳಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ಇದಕ್ಕಿಂತ ಕಡಿಮೆ ಸಂಕೀರ‍್ಣತೆ ಕಂಡುಬಂದರೆ, ಕುತೂಹಲವೆಂಬಂತೆ ತಮಿಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಕಡಿಮೆ ಸಂಕೀರ‍್ಣತೆ ಕಂಡುಬರುತ್ತದೆ. ಹಾಗೆ, ನಗರ ಪ್ರದೇಶಗಳಲ್ಲಿಯೂ ಸಂಕೀರ‍್ಣತೆ ಕಂಡುಬರುತ್ತದೆ, ಆದರೆ ಅದು ಇತರ ಪ್ರದೇಶಗಳಲ್ಲಿನ ಸಂಕೀರ‍್ಣತೆಗಿಂತ ತುಂಬಾ ಬಿನ್ನವಾಗಿದೆ. ಹೀಗೆ ನಾಡಿನ ಬಾಶೆಗಳ ಅವಲೋಕನೆಯಿಂದ ನಾಡಿನ ವಿಬಿನ್ನ ಪ್ರದೇಶಗಳ ತಿಳುವಳಿಕೆಯನ್ನು ಪಡೆದುಕೊಳ್ಳಲು ಸಾದ್ಯ. ಕನ್ನಡದ ಹಲವಾರು ಬಗೆಗಳು ನಾಡಿನ ತುಂಬ ಬಳಕೆಯಲ್ಲಿವೆ.

ಈ ಬಗೆಗಳು ತೋರಿಸುವ ರಾಚನಿಕ ಬಿನ್ನತೆಗಳನ್ನು ತಿಳಿದುಕೊಳ್ಳಬೇಕಿದೆ. ಈ ಬಗೆಗಳನ್ನು ತಿಳಿದುಕೊಳ್ಳುವ ಮೂಲಕ ಸ್ತಳೀಯತೆಯನ್ನು, ಕನ್ನಡದ ಸಾಮಾನ್ಯರನ್ನು ಸೂಕ್ತವಾಗಿ ಅರ‍್ತ ಮಾಡಿಕೊಳ್ಳುವುದಕ್ಕೆ ಸಾದ್ಯವಾಗುತ್ತದೆ. ಹಾಗೆ ಕರ‍್ನಾಟಕದ ಇತರ ಬಾಶೆಗಳನ್ನೂ ಕೂಡ. ಕನ್ನಡವು ಯಾವ ಪ್ರದೇಶದಲ್ಲಿ ಹೆಚ್ಚು ದಟ್ಟವಾಗಿದೆ ಎಲ್ಲಿ ತೆಳುವಾಗಿದೆ, ಯಾವ ಯಾವ ಪರಿಸರದಲ್ಲಿ ಯಾವ ಯಾವ ಬಾಶೆಗಳು ಪ್ರದಾನವಾಗಿವೆ, ಯಾವ ಯಾವ ಬಾಶೆಗಳ ಜೊತೆಗೆ ಕನ್ನಡ ಬಳಕೆಯಲ್ಲಿದೆ, ಆ ಬಾಶೆಗಳ ಜೊತೆ ಯಾವ ರೀತಿಯ ಸಂಬಂದಗಳನ್ನು ಹೊಂದಿದೆ ಎಂಬ ಮೊದಲಾದವನ್ನು ತಿಳಿದುಕೊಳ್ಳುವುದು ಅತ್ಯವಶ್ಯ. ಅದರೊಟ್ಟಿಗೆ ಕರ‍್ನಾಟಕದಲ್ಲಿನ ದ್ವಿಬಾಶಿಕತೆ, ಬಹುಬಾಶಿಕತೆ ಪರಿಸರಗಳು ಮತ್ತು ಅವುಗಳ ಸ್ವರೂಪ, ಆಯಾಮಗಳನ್ನು ಕೂಡ ತಿಳಿದುಕೊಳ್ಳಬೇಕಿದೆ. 

ದೇಶದೆಲ್ಲೆಡೆ ಬಳಕೆಯಲ್ಲಿರುವ ಬಾಶೆಗಳು ಕರ‍್ನಾಟಕದಲ್ಲಿ ಹೇಗೆ ಬಳಕೆಯಲ್ಲಿವೆ ಎಂಬುದನ್ನೂ ತಿಳಿದುಕೊಳ್ಳಲು ಸಾದ್ಯ. ಉದಾಹರಣೆಗೆ ಬೆಂಗಾಲಿಯನ್ನು ಇಲ್ಲಿ ಮಾತಿಗೆ ತೆಗೆದುಕೊಳ್ಳುವುದಾದರೆ ಕರ‍್ನಾಟಕದಲ್ಲಿ ಪರಿಗಣಿಸುವಶ್ಟು ಸಂಕೆಯ ಬೆಂಗಾಲಿಗಳು ದಾಕಲಾಗಿದ್ದಾರೆ. ಬೆಂಗಳೂರು ಹೊರತುಪಡಿಸಿ ಹೆಚ್ಚಿನ ಸಂಕೆಯ ಬೆಂಗಾಲಿಗಳು ರಾಯಚೂರು ಪರಿಸರದಲ್ಲಿ ಕಂಡುಬರುತ್ತಾರೆ ಮತ್ತು ಇವರ ಬೆಂಗಾಲಿ ತುಂಬಾ ಬಿನ್ನವಾಗಿದೆ. ಇನ್ನು ಕರ‍್ನಾಟಕದಲ್ಲಿಯೆ ವಿಶಿಶ್ಟವಾಗಿ ಕಂಡುಬರುವ ತುಳು, ಕೊಡವದಂತ ಹಾಗೆಯೆ ಕೊಂಕಣಿಯಂತ ಬಾಶೆಗಳು ಇವೆ. ಹಾಗೆ ಟಿಬೆಟಿಯನ್ ಬಾಶೆಯನ್ನೂ ಇಲ್ಲಿ ಉಲ್ಲೇಕಿಸಬೇಕು. ಲಂಬಾಣಿಯ ಹಾಗೆಯೆ ಬಾಶೆ ಎಂಬ ಸ್ತಾನವನ್ನು ಪಡೆದಿಲ್ಲದ ಕೊರವ, ಯರವ, ಆರೆ, ಕುಡುಬಿ, ನವಾಯಿತಿ ಮೊದಲಾದವೂ ಕೂಡ ಇವೆ.

ಸದ್ಯದ ಮಟ್ಟಿಗೆ ಕರ‍್ನಾಟಕದಲ್ಲಿ ಯಾವ ಬಾಶೆ ಎಲ್ಲಿ ಎಶ್ಟು ಪ್ರಮಾಣದಲ್ಲಿ ಬಳಕೆಯಲ್ಲಿದೆ ಎಂಬ ತಿಳುವಳಿಕೆ ಇಲ್ಲ. ರಾಜ್ಯದ ಆಡಳಿತ ಬಾಶೆಯಾಗಿರುವ ಕನ್ನಡದ ಹಂಚಿಕೆಯ ತಿಳುವಳಿಕೆಯೂ ಸರಿಯಾಗಿ ಇಲ್ಲ. ಈ ತಿಳುವಳಿಕೆ ಸರಕಾರದ, ಸಮಾಜದ ಹಲವಾರು ವಲಯಗಳಲ್ಲಿ ಅತ್ಯಂತ ಮಹತ್ವವನ್ನು ಪಡೆದುಕೊಳ್ಳುತ್ತದೆ. ಸರಕಾರದ ಕಾನೂನುಗಳು ಇನ್ನಿತರ ಕೆಲಸಗಳು, ಅರೆ-ಸರಕಾರಿ, ಕಾಸಗಿ ಸಂಗಸಂಸ್ತೆಗಳ ಸಾಮಾಜಿಕ ಮತ್ತು ಇನ್ನಿತರ ಹಲವು ವಲಯಗಳಲ್ಲಿನ ವಿಬಿನ್ನ ಕೆಲಸಗಳು, ಆಯಾ ಬಾಶಿಕ ಸಮುದಾಯಗಳ ಬಾಶೆ-ಸಾಹಿತ್ಯ ಮತ್ತು ಇತರೇತರ ವಿಶಯಗಳಿಗೆ ಸಂಬಂದಿಸಿದ ಕೆಲಸಗಳಿಗೆ ಯಾವ ಬಾಶೆ ಎಲ್ಲಿ ಎಶ್ಟು ಪ್ರಮಾಣದಲ್ಲಿ ಬಳಕೆಯಲ್ಲಿದೆ ಎಂಬ ಮಾಹಿತಿ ಹೆಚ್ಚು ಸಹಾಯಕವಾಗುವಂತದು. ಸ್ತ

ಳೀಯತೆಗೆ ಹೆಚ್ಚು ಹೆಚ್ಚು ಒತ್ತು ಬೀಳುತ್ತಿರುವ ಇಂದು ಸ್ತಳೀಯ ಹಂತದಲ್ಲಿ ಬಳಕೆಯಲ್ಲಿರುವ ಬಾಶೆಗಳು ಮಹತ್ವವನ್ನು ಪಡೆಯುತ್ತವೆ ಎಂಬುದನ್ನು ಬೇರೆ ಹೇಳಬೇಕಿಲ್ಲ. ಸ್ತಳೀಯ ಹಂತದ ವ್ಯಾಪಾರ, ವಹಿವಾಟು, ಸಾಮಾಜಿಕ ಮತ್ತು ಸರಾಕರದ ಜನಪರ ಕೆಲಸಕಾರ‍್ಯಗಳು, ಜಾಹಿರಾತುಗಳು ಹೀಗೆ ಸ್ತಳೀಯ ಬಾಶೆಗಳು ಹಲವು ವಲಯಗಳಲ್ಲಿ ಮಹತ್ವವನ್ನು ಪಡೆದುಕೊಳ್ಳುತ್ತವೆ. ಆಕಸ್ಮಿಕಗಳ ಸಂದರ‍್ಬದಲ್ಲಿ, ಸ್ತಳೀಯ ಮಂದಿಯನ್ನು ತಕ್ಶಣ ತಲುಪಬೇಕಾದ ಸಂದರ‍್ಬದಲ್ಲಿ ಇಂತಾ ತಿಳುವಳಿಕೆ ದೊಡ್ಡ ಸಹಾಯ ಮಾಡಬಲ್ಲದು.

ಕರ‍್ನಾಟಕ ರಾಜ್ಯದಲ್ಲಿ ಒಂದು ಬಾಶಾ ಪಾಲಸಿ ಇಲ್ಲ. ಬಾಶಾ ಪಾಲಸಿಯೊಂದನ್ನು ಮಾಡುವುದಕ್ಕೆ ರಾಜ್ಯದ ವಿವಿದ ಪ್ರದೇಶಗಳಲ್ಲಿನ ಬಾಶೆಗಳ ಹಂಚಿಕೆಯ ಅರಿವು ಅತ್ಯವಶ್ಯ. ರಾಜ್ಯದಲ್ಲಿ ಬಾಶೆಗೆ ಸಂಬಂದಿಸಿದ ಹವಲಾರು ಉರಿಯುವ ಸಮಸ್ಯೆಗಳು ಇವೆ. ಶಿಕ್ಶಣ ಮಾದ್ಯಮ, ಶಿಕ್ಶಣದಲ್ಲಿ ಯಾವ ಯಾವ ಬಾಶೆಗಳನ್ನು ಕೊಡುವುದು ಎಂಬ ವಿಚಾರಗಳು ಇತ್ತೀಚೆಗೆ ನಾಡಿನಲ್ಲಿ ದೊಡ್ಡ ಸಮಸ್ಯೆಗಳಾಗಿ ಬೆಳೆದು ನಿಂತಿವೆ. ಬಾಶಾ ಪಾಲಸಿಯೊಂದು ಸಂವಿದಾನವು ಕೊಡಮಾಡಿದ ಹಕ್ಕುಗಳು ಮತ್ತು ಬಾಶೆಗಳು, ಆ ಬಾಶೆಗಳ ಮಾತುಗರ ನಡುವೆ ಸೇತುವಾಗಿ ನಿಲ್ಲಬಹುದು.

ಹಲವಾರು ನೆಲೆಗಳಲ್ಲಿನ ಸಮಾನತೆಗಳನ್ನು ಮಾತನಾಡುವಾಗ ಸಂವಿದಾನ ಬಾಶೆ ಆದಾರದ ಸಮಾನತೆಯನ್ನೂ ಕೊಟ್ಟಿರುವುದು ಸಾಮಾನ್ಯವಾಗಿ ಯಾರ ಗಮನಕ್ಕೂ ಬರುವುದಿಲ್ಲ. ಬಾಶೆ ಆದರಿತ ಸಮಾನತೆ ಎಂದರೆ ಯಾವ ಬಾಶೆಯಲ್ಲಿ ಶಿಕ್ಶಣ ಕೊಡುವುದು ಎಂಬುದು ಮಾತ್ರವಲ್ಲದೆ ಯಾವ ಬಾಶೆಯಲ್ಲಿ ಗ್ನಾನಸ್ರುಶ್ಟಿಯಾಗಬೇಕು, ಯಾವ ಯಾವ ವಲಯಗಳಲ್ಲಿ ಯಾವ ಯಾವ ಬಾಶೆಗಳನ್ನು ಪರಿಗಣಿಸಬೇಕು ಎಂಬ ಮೊದಲಾದ ಹಲವಾರು ವಿಚಾರಗಳು ತೆರೆದುಕೊಳ್ಳುತ್ತವೆ. 

ನಾಡಿನ ಬೆಳವಣಿಗೆಗೆ ಎಲ್ಲ ಬಾಶೆಯ ಮಾತುಗರೂ ಸೇರಬೇಕು. ಎಲ್ಲ ಬಾಶೆಯ ಮಾತುಗರಲ್ಲಿಯೂ ಪ್ರತಿಬಾವಂತರು ಇದ್ದೇ ಇರುತ್ತಾರೆ. ಪ್ರತಿಯೊಂದು ಬಾಶೆಯಲ್ಲಿನ ಪ್ರತಿಬಾವಂತರೂ ನಾಡಿನ ಬೆಳವಣಿಗೆಗೆ ಕೊಡುಗೆ ಕೊಡುತ್ತಾರೆ. ಹೀಗೆ ನಾಡಿನ ಎಲ್ಲ ಮುಕದ ಬೆಳವಣಿಗೆಗೆ ಪೂರಕವಾಗಿ ಅವರನ್ನು ತಯಾರಿಸಿಬೇಕಿದೆ. ಇದಕ್ಕಾಗಿ ನಾಡಿನ ಎಲ್ಲ ಬಾಶೆಗಳನ್ನು ಸೂಕ್ತವಾಗಿ ನಿರ‍್ವಹಿಸಬೇಕಾದ ಜರೂರು ಇದೆ.

ಬಾಶೆಗಳನ್ನು ತಿಳಿದುಕೊಳ್ಳುವುದಕ್ಕೆ ಮುಂದಾದಾಗ ಹಲವಾರು ಸಮಸ್ಯೆಗಳು ಎದುರಾಗುತ್ತದೆ. ಹಲವು ಸಂದರ‍್ಬಗಳಲ್ಲಿ ಯಾವುವು ಬಾಶೆಗಳು, ಯಾವು ಅಲ್ಲ ಎಂಬ ಸಮಸ್ಯೆಯು ತುಂಬಾ ದೊಡ್ಡದು. ಕರ‍್ನಾಟಕದಲ್ಲಿ ಬಹುಶಾ ಎಲ್ಲರೂ ತಿಳಿದುಕೊಂಡಿರುವ ಹಾಗೆ ಲಂಬಾಣಿ ಒಂದು ಬಾಶೆ. ಬಾಶಾವಿಗ್ನಾನಿಗಳ ತಿಳುವಳಿಕೆಯೂ ಇದುವೆ ಆಗಿದೆ. ಆದರೆ ಸರಕಾರದ ದಾಕಲೆಗಳಲ್ಲಿ ಮಾತ್ರ ಲಂಬಾಣಿ ಬಾಶೆ ಅಲ್ಲ.

ಪ್ರಾಕ್ರುತ ಎನ್ನುವಂತದೊಂದು ಹೆಸರು ಸದ್ಯ ಬಳಕೆಯಲ್ಲಿರುವ ಯಾವುದೆ ಬಾಶೆಗೆ ಇದೆ ಎಂಬ ತಿಳುವಳಿಕೆಯನ್ನು ಯಾವ ಕರ‍್ನಾಟಕದವರೂ ಹೊಂದಿಲ್ಲ, ಬಾಶಾವಿಗ್ನಾನಿಗಳು ಕೂಡ. ಆದರೆ ಸರಕಾರದ ದಾಕಲೆಗಳ ಪ್ರಕಾರ ಅಂತದೊಂದು ತಾಯ್ಮಾತು ಕನ್ನಡದೊಳಗೆನೆ ಇದೆ. ಇಂತಾ ಹಲವಾರು ಸಮಸ್ಯೆಗಳು ಇವೆ. ಕೆಲವು ಬಾಶೆಗಳಿಗೆ ಸ್ತಾನಮಾನದ ಸಮಸ್ಯೆಯಾದರೆ, ಇನ್ನು ಕೆಲವಕ್ಕೆ ಹೆಸರಿನದೆ ಸಮಸ್ಯೆ. ಒಟ್ಟು ಕರ‍್ನಾಟಕದ ಬಾಶಿಕ ಚಿತ್ರಣವನ್ನು ಸರಿಯಾಗಿ ಚಿತ್ರಿಸಿಕೊಳ್ಳದ ಕಾರಣ ಈ ಸಮಸ್ಯೆಗಳು ಹಾಗೆ ಮುಂದುವರೆಯುತ್ತವೆ.

ಇಂತಾ ಹಲವಾರು ಸಮಸ್ಯೆಗಳೊಟ್ಟಿಗೆ ಕರ‍್ನಾಟಕದ ಬಾಶಿಕ ಚಿತ್ರಣವನ್ನು ರೂಪಿಸಿಕೊಳ್ಳುವುದು ಅತ್ಯವಶ್ಯ. ಇದರಿಂದ ರಾಜ್ಯ ಸರಕಾರದ ಕಾನೂನುಗಳು, ಇತರೆ ಕೆಲಸಗಳು, ಸಂಶೋದನೆಗಳು, ಸಾಮಾಜಿಕ ಚಟುವಟಿಕೆಗಳು, ಮಾದ್ಯಮ, ಮನರಂಜನಾ ಚಟುವಟಿಕೆಗಳು, ಸಾಮಾಜಿಕ ಜಾಲತಾಣಗಳು ಈ ಚಿತ್ರಣವನ್ನು ಬಳಸಿಕೊಂಡು ತಮ್ಮ ಕೆಲಸಗಳಲ್ಲಿ ಹೆಚ್ಚಿನ ಯಶಸ್ಸನ್ನು ಪಡೆದುಕೊಳ್ಳುವುದಕ್ಕೆ ಸಾದ್ಯವಾಗುತ್ತದೆ. ಈ ಆಶಯವನ್ನು ಇಟ್ಟುಕೊಂಡು ಕರ‍್ನಾಟಕದ ಜಿಲ್ಲಾವಾರು ಬಾಶೆಗಳ ಮಾಹಿತಿಯನ್ನು ತಯಾರಿಸಿ ಕೊಡುವ ಪ್ರಯತ್ನವನ್ನು ಈ ಸರಣಿಯಲ್ಲಿ ಮಾಡಿದೆ. ಇದಕ್ಕೆ ಪೂರಕವಾಗಿ ಜನಗಣತಿ ವರದಿಯ ಅಂಕಿಸಂಕೆಗಳನ್ನು ಬಳಸಿಕೊಂಡಿದೆ.

ಬಹುಬಾಶಿಕ ಬಾರತದಲ್ಲಿ ಬಾಶೆಗಳ ಬಗೆಗಿನ ಅಂಕಿಸಂಕೆಗಳು ಹೆಚ್ಚು ಮಹತ್ವವನ್ನು ಪಡೆದುಕೊಳ್ಳುತ್ತವೆ. ಬಾರತೀಯ ಬಾಶಾ ಸರ‍್ವೆಯೊಂದು ಆಗುವತನಕ ಜನಗಣತಿ ಒದಗಿಸುವ ಮಾಹಿತಿಯನ್ನು ನಮ್ಮ ಬಾಶೆಗಳ ಬೆಳವಣಿಗೆಗೆ, ಆ ಮೂಲಕ ಬಾಶಿಕರ, ಸಮಾಜದ ಬೆಳವಣಿಗೆಗೆ ಸೂಕ್ತವಾಗಿ ಬಳಸಿಕೊಳ್ಳಬೇಕು. ಇಂದು ಬಾಶೆಯ ವ್ಯವಹಾರವೆ ಬಹು ಮಹತ್ವದ್ದು. ಆದುನಿಕ ಕಾಲದ ರಾಜಕೀಯ ರಚನೆ, ಬರಹ, ಮುದ್ರಣ, ತಂತ್ರಗ್ನಾನ ಇವುಗಳ ಬೆಳವಣಿಗೆಯಲ್ಲಿ ಬಾಶೆ ಸಮಾಜದಲ್ಲಿ ತನ್ನ ಪಾತ್ರವನ್ನು ನಿರಂತರ ಅಗ್ಗಲಿಸಿಕೊಳ್ಳುತ್ತಾ ಬಂದಿದೆ.

ಮಗುವಿನ ಸಹಜ ವಿಕಸನದಿಂದ ನಾಡಿನ ಆರ‍್ತಿಕ ಬೆಳವಣಿಗೆಯವರೆಗೆ ಎಲ್ಲದಕ್ಕೂ ಬಾಶೆ ತನ್ನದೆ ಪಾತ್ರವನ್ನು ಹೊಂದಿದೆ. ಪ್ರತಿಯೊಂದು ಸಮಾಜದ, ಅದರಲ್ಲಿಯೂ ಬಹುಬಾಶಿಕ ಮತ್ತು ಬಹು ಆಯಾಮಗಳ ಸಂಕೀರ‍್ಣ ರಚನೆಯನ್ನು ಹೊಂದಿರುವ ಕರ‍್ನಾಟಕದಂತ, ಬಾರತದಂತ ಪರಿಸರದಲ್ಲಿ ಬಾಶೆಯ ನಿರ‍್ವಹಣೆ ಎಶ್ಟು ಸೂಕ್ತವಾಗಿ ಆಗುತ್ತದೆಯೊ ಅಶ್ಟು ಪ್ರಮಾಣದಲ್ಲಿ ಆ ಸಮಾಜದ ಬೆಳವಣಿಗೆಗೆ ಅದು ಪೂರಕವಾಗುತ್ತದೆ.

ಬಾಶೆಗಳನ್ನು ಸರಕಾರ ಹೇಗೆ ನಿರ‍್ವಹಿಸಬೇಕು ಎಂಬುದು ಬಹು ಮುಕ್ಯವಾದ ವಿಚಾರ. ಯಾವ ಬಾಶೆ, ಎಲ್ಲಿ, ಎಶ್ಟು, ಹೇಗೆ ಎಂಬುದೆಲ್ಲವೂ ಸಮಾಜದ ವಿಬಿನ್ನ ಆಯಾಮಗಳನ್ನು ತೋರಿಸುತ್ತಿರುತ್ತವೆ. ಈ ಮೇಲೆ ಮಾತಾಡಿದ ಹಿಂದಿ ಮತ್ತು ಲಂಬಾಣಿ ವಿಚಾರವನ್ನು ಇಲ್ಲಿ ಮತ್ತೊಮ್ಮೆ ಪ್ರಸ್ತಾಪಿಸುವುದಾದರೆ ಹಿಂದಿಯ ಒಳಗೆ ಲಂಬಾಣಿಯನ್ನು ಸೇರಿಸಿ ಇಡುವ ಮೂಲಕ ಲಂಬಾಣಿ ಎಂಬುದರ ಅಸ್ತಿತ್ವವನ್ನೆ ಇಲ್ಲವಾಗಿಸಲಾಗಿದೆ. ಕರ‍್ನಾಟಕದ ಪ್ರದಾನ ಬಾಶೆಯಾಗಿ ಹಿಂದಿ ಕಾಣಿಸುತ್ತದೆ, ಆದರೆ ಲಂಬಾಣಿ ಕಾಣಿಸುವುದಿಲ್ಲ.

ಲಂಬಾಣಿಯನ್ನು ಬಾಶೆ ಎಂದು ಪರಿಗಣಿಸಿದರೆ ತಕ್ಶಣವೆ ಹಿಂದಿ ಮತ್ತು ಕರ‍್ನಾಟಕದ ಇನ್ನಾವುದೆ ಪ್ರದಾನ ಬಾಶೆ ಅನುಬವಿಸುವ ಎಲ್ಲ ಪ್ರಯೋಜನಗಳನ್ನೂ, ಸವಲತ್ತುಗಳನ್ನೂ ಲಂಬಾಣಿ ಮಾತುಗರೂ ಪಡೆದುಕೊಳ್ಳಲು ಸಾದ್ಯವಾಗುತ್ತದೆ. ಲಂಬಾಣಿ ಮಾತುಗರಲ್ಲಿ ದೊಡ್ಡ ಸಂಕೆಯ ಕರ‍್ನಾಟಕದವರು ಇರುವುದರಿಂದ ಲಂಬಾಣಿಯಲ್ಲಿ ಗ್ನಾನ ಪ್ರಸರಣದ ಕೆಲಸವನ್ನು ಮಾಡಿದರೆ, ಕರ‍್ನಾಟಕದಲ್ಲಿ ಅಶ್ಟು ಮಟ್ಟಿಗೆ ಗ್ನಾನಸಮಾಜದ, ಗ್ನಾನಕರ‍್ನಾಕಟದ ಬೆಳವಣಿಗೆಗೆ ಸಹಾಯಕವಾಗುತ್ತದೆ.

ಬಾಶಾನಿರ‍್ವಹಣೆ ಎನ್ನುವುದು ಬಹುದೊಡ್ಡ ಅರ‍್ತ ಸಾದ್ಯತೆ ಪಡೆದುಕೊಳ್ಳುವ ಪದಪುಂಜ. ಮುಕ್ಯವಾಗಿ ವಿಶ್ವಸಂಸ್ತೆ ಒತ್ತಿ ಹೇಳುತ್ತಿರುವ ತಾಯ್ಮಾತಿನ ಶಿಕ್ಶಣ ಎನ್ನುವುದು ಅನಿವಾರ‍್ಯವಾಗಿರುವ ಹೊತ್ತಿನಲ್ಲಿ ಯಾವ ಬಾಶೆಗಳಲ್ಲಿ ಇದನ್ನು ಜಾರಿಗೆ ತರುವುದು ಎಂಬುದು ಕರ‍್ನಾಟಕದಂತ, ಬಾರತದಂತ ಬಹುಬಾಶಿಕ ಪರಿಸರಗಳಿಗೆ ದೊಡ್ಡ ಸವಾಲು. ಆದರೆ, ಅಸಾದ್ಯವೇನಲ್ಲ. ಇಂತಾ ಸಂದರ‍್ಬದಲ್ಲಿ ಜನಗಣತಿಯ ಮಾಹಿತಿ ವಿಶ್ಲೇಶಣೆ ಹೆಚ್ಚು ಸಹಾಯಕವಾಗುತ್ತದೆ. ಕರ‍್ನಾಟಕದ ಬಾಶಿಕ ಸಂದರ‍್ಬವನ್ನೆ ಗಮನಿಸಿದರೆ ಯಾವ ಯಾವ ಬಾಶೆಗಳಲ್ಲಿ ಈ ತಾಯ್ಮಾತಿನ ಶಿಕ್ಶಣವನ್ನು ಶುರು ಮಾಡಬಹುದು ಎಂಬುದಕ್ಕೆ ಹಲವು ಸಹಾಯಗಳು ದೊರೆಯುತ್ತವೆ.

ಕರ‍್ನಾಟಕದ ಎಲ್ಲ ಕಡೆ ಬಾಶೆಗಳು ಒಂದೆ ಪ್ರಮಾಣದಲ್ಲಿ ಹಂಚಿಕೊಂಡಿಲ್ಲ. ಕೆಲವು ಬಾಶೆಗಳು ನಾಡಿನಾದ್ಯಂತ ಪಸರಿಸಿಕೊಂಡಿದ್ದರೂ ಪ್ರಸರಣದ ಪ್ರಮಾಣ ಹೆಚ್ಚೂ ಕಡಿಮೆ ಇದೆ. ಇನ್ನು ಕೆಲವು ಬಾಶೆಗಳು ಕೆಲವು ನಿರ್‍ದಿಶ್ಟ ಪರಿಸರದಲ್ಲಿ ಮಾತ್ರ ಸಾಂದ್ರವಾಗಿ ಕಂಡುಬರುತ್ತವೆ. ಇನ್ನು ಕೆಲವು ಬಾಶೆಗಳು ಕೆಲವು ಪರಿಸರಗಳಲ್ಲಿ ಸಾಂದ್ರವಾಗಿಯೂ ಇನ್ನು ಕೆಲವೆಡೆ ಸಡಿಲವಾಗಿಯೂ ಹರಡಿರುವುದನ್ನು ಕಾಣಬಹುದು. ಕೆಲವು ಜಿಲ್ಲೆಗಳಲ್ಲಿ ಕನ್ನಡ ಮಾತುಗರು 10%ಕ್ಕೂ ಕಡಿಮೆ ಮಂದಿ ಇದ್ದರೆ, ಇನ್ನು ಕೆಲವು ಜಿಲ್ಲೆಗಳಲ್ಲಿ ಲಕ್ಶಗಟ್ಟಲೆ ಮಂದಿ ಆಡುವ ಬಾಶೆಗಳು ಹಲವು ಕಾಣಿಸುತ್ತವೆ.

ಕೆಲವು ಬಾಶೆಗಳು ವಿಬಿನ್ನ ಜಿಲ್ಲೆಗಳಲ್ಲಿ ಆವರಿಸಿಕೊಂಡಿರುವ ಪ್ರತಿಶತತೆ ಗಮನೀಯ. ಈ ಅಂಕಿಸಂಕೆಗಳನ್ನು ತಾಯ್ಮಾತಿನ ಶಿಕ್ಶಣಕ್ಕೆ ಮಾತ್ರವಲ್ಲದೆ, ತಾಯ್ಮಾತಿನ ಶಿಕ್ಶಣಕ್ಕೆ ಪೂರಕವಾಗಿ ಇರುವ ಇರ‍್ಮಾತಿನ (ದ್ವಿಕಾಲಿಕ) ಮತ್ತು ಪಲಮಾತಿನ (ಬಹುಬಾಶಿಕ) ತರಗತಿಗಳನ್ನು ಶುರು ಮಾಡುವುದಕ್ಕೂ ಪರಿಗಣಿಸಬೇಕು. 

ಜನಗಣತಿ ಸದ್ಯಕ್ಕೆ ಬಾರತದಾಗ ಬಾಶೆಗಳಿಗೆ ಸಂಬಂದಿಸಿದ ದೊಡ್ಡಪ್ರಮಾಣದ ಮಾಹಿತಿಯನ್ನು ಕೊಡುವ ಮುಕ್ಯವಾದ ಮೂಲವಾಗಿದೆ. ಬಾರತದಲ್ಲಿ ಇತ್ತೀಚಿನ ಜನಗಣತಿ ಎಂದರೆ 2011ರ ಜನಗಣತಿ (https://censusindia.gov.in/). 2021ರ ಜನಗಣತಿ ಇನ್ನೂ ಶುರುವಾಗಿಲ್ಲ ಮತ್ತು ಇದಕ್ಕೆ ಇನ್ನೂ ಕಾಲನಿರ‍್ದಾರವೂ ಆಗಿಲ್ಲ. ಕರೊನಾ ಕಾರಣಕ್ಕೆ ಶುರುವಾಗದ 2021ರ ಜನಗಣತಿ ಮುಂದಿನ ವರುಶ ಹಾಗೆ ಶುರುವಾಗಬಹುದು. ಸಾಮಾನ್ಯ ಜನಗಣತಿಯ ನಂತರ ಅದರ ವರದಿಗೆ ಎಂಟತ್ತು ವರುಶಗಳೆ ಆಗುತ್ತವೆ. ಈಗ ಸದ್ಯ ನಮಗೆ ಲಬ್ಯವಿರುವ ಮಾಹಿತಿಯನ್ನು ಬಳಸಿಕೊಂಡು ಕರ‍್ನಾಟಕದ ಬಾಶೆಗಳ ಪ್ರಾತಮಿಕ ಪರಿಚಯವನ್ನು ಮಾಡಿಕೊಡುವ ಪ್ರಯತ್ನ ಮಾಡಿದೆ.

ಜನಗಣತಿ ಜನರಿಂದ ಅವರ ‘ತಾಯ್ಮಾತಿ’ನ ಮಾಹಿತಿಯನ್ನು ಕಲೆ ಹಾಕುತ್ತದೆ. ಅದನ್ನು ತನ್ನದೆ ಆದ ಹಲವು ಕಾಲದಿಂದ ನಂಬಿಕೊಂಡ ನಿಲುವುಗಳ ಹಿನ್ನೆಲೆಯಲ್ಲಿ ವಿಶ್ಲೇಶಿಸುತ್ತದೆ. ಅದರಂತೆ ಮಾಹಿತಿಯನ್ನು ವರದಿ ಮಾಡುತ್ತದೆ. ಸಂಗ್ರಹಿಸಿದ ತಾಯ್ಮಾತುಗಳ ಮಾಹಿತಿಯನ್ನು ವಿಶ್ಲೇಶಿಸಿ ಅವುಗಳನ್ನು ವಿಬಿನ್ನ ಬಾಶೆಗಳಲ್ಲಿ ಜೋಡಿಸಲಾಗುತ್ತದೆ. ಹೀಗೆ ಜೋಡಿಸಿದ ನಂತರ ಪ್ರತಿ ಬಾಶೆಗೆ ದೇಶದಲ್ಲಿ ಹತ್ತು ಸಾವಿರ ಮಂದಿ ಇರಬೇಕು. ಹಾಗಿದ್ದಾಗ ಮಾತ್ರ ಅದನ್ನು ಪ್ರಕಟಿಸಲಾಗುತ್ತದೆ. ಅದಕ್ಕಿಂತ ಕಡಿಮೆ ಮಾತುಗರು ದಾಕಲಾಗಿದ್ದರೆ ಅವುಗಳನ್ನು ಕೊನೆಯಲ್ಲಿ ಇತರ ಎಂಬ ಗುಂಪಿನಲ್ಲಿ ಹಾಕಲಾಗುತ್ತದೆ.

ಇನ್ನು ಒಂದು ಬಾಶೆಯ ಒಳಗೆ ಗುರುತಿಸಿದ ತಾಯ್ಮಾತುಗಳನ್ನು ಆಯಾ ಬಾಶೆಯ ಕೆಳಗೆ ಪಟ್ಟಿಸಲಾಗುತ್ತದೆ. ಹೀಗೆ ತಾಯ್ಮಾತುಗಳನ್ನು ಕೊಡುವಾಗಲೂ ಅದಕ್ಕೆ ದೇಶಮಟ್ಟದಲ್ಲಿ ಹತ್ತು ಸಾವಿರ ಮಂದಿ ಇರಬೇಕು ಎಂಬುದನ್ನು ನೋಡಲಾಗುತ್ತದೆ. ಇಲ್ಲದಿದ್ದರೆ ಅಂತಾ ಎಲ್ಲ ತಾಯ್ಮಾತುಗಳನ್ನು ಆಯಾ ಬಾಶೆಯ ಒಳಗೆ ಇತರ ಎಂಬ ಒಂದು ಗುಂಪನ್ನು ಮಾಡಿ ಅದರೊಳಗೆ ಅವುಗಳನ್ನು ಹಾಕಲಾಗುವುದು, ಅವುಗಳ ಹೆಸರುಗಳನ್ನೂ ಉಲ್ಲೇಕಿಸುವುದಿಲ್ಲ.

ಬಾಶೆ ಮತ್ತು ಒಳನುಡಿ ಎಂಬ ಪರಿಕಲ್ಪನೆ ತುಂಬಾ ತೊಡಕಿನದು. ಬಾಶಾವಿಗ್ನಾನದ ಒಳಗೂ ಇದು ಸರಳವೇನಲ್ಲ. ಕನ್ನಡದ ಸಂದರ‍್ಬದಲ್ಲಿ ಹೀಗೆ ಹಲವಾರು ಸಮಸ್ಯೆಗಳು ಇವೆ. ಬಡಗ ಎನ್ನುವ ಒಂದು ಬಗೆಯನ್ನು ಕನ್ನಡದ ಒಳನುಡಿ ಎಂದು ಬಹುಕಾಲದಿಂದ ಕರೆಯುತ್ತಾ ಬಂದಿದೆ. ಇದು ಬಹುತೇಕ ಇಂದಿನ ನೀಲಗಿರಿಯಲ್ಲಿ, ತಮಿಳುನಾಡಿನಲ್ಲಿ ಬಳಕೆಯಲ್ಲಿದೆ. ಇದನ್ನು ಹೆಚ್ಚಿನವರು ಕನ್ನಡದ ಒಳನುಡಿ ಎಂದು ಪರಿಗಣಿಸಿದರೂ ಇದನ್ನು ಬೇರೆ ಬಾಶೆಯೆಂದು ಕರೆಯುವುದೂ ಹೆಚ್ಚಿದೆ.

ನೀಲಗಿರಿಯ ಹಲವಾರು ಬಾಶಾ ಬಗೆಗಳಿಗೆ ಸಂಬಂದಿಸಿಯೂ ಇಂತದೆ ಸಮಸ್ಯೆ ಇದೆ. ಕುರುಬ ಎಂಬುದು ಒಂದು ಗುಂಪು. ತಮಿಳುನಾಡಿನಲ್ಲಿ ಕುರುಬಕ್ಕೆ ಕುರುಂಬ ಎಂದೆ ಕರೆಯಲಾಗುತ್ತದೆ. ಇದರೊಳಗೆ ಹಲವು ಒಳಗುಂಪುಗಳು ಇವೆ. ಹಾಗೆಯೆ ನಾಯ್ಕ ಎಂಬ ಹಲವು ಒಳಗುಂಪುಗಳ ಗುಂಪನ್ನೂ ಹೆಸರಿಸಬಹುದು. ಇವುಗಳಲ್ಲಿ ಹಲವು ಬಾಶಾ ಬಗೆಗಳನ್ನು ಕನ್ನಡದ ಒಳನುಡಿಗಳೆಂದು ಗುರುತಿಸುವುದು ಇದೆಯಾದರೂ ಇವು ಸ್ವತಂತ್ರ ಬಾಶೆಗಳೆಂದು ಪರಿಗಣಿಸುವುದೂ ಇದೆ.

ಬಾಶೆ-ತಾಯ್ಮಾತು-ಒಳನುಡಿ ಈ ಎಲ್ಲ ವಿಚಾರಗಳು ತುಂಬಾ ಸೂಕ್ಶ್ಮವಾದವು. ಯಾವುದು ಬಾಶೆ, ಯಾವುದು ಒಳನುಡಿ ಎಂಬುದನ್ನು ನಿರ‍್ದರಿಸುವುದು ಕಶ್ಟ. ಇನ್ನು ತಾಯ್ಮಾತು ಎಂಬ ಪದ ಇನ್ನೂ ಸೂಕ್ಶ್ಮವಾಗುತ್ತದೆ. ಯಾವ ಯಾವ ತಾಯ್ಮಾತುಗಳು ಯಾವ ಬಾಶೆಯ ಒಳಗೆ ಸೇರಬೇಕು, ಯಾವುವನ್ನು ಪ್ರತ್ಯೇಕವಾಗಿ ಕೊಡಬೇಕು ಎಂಬುದು ಬಹು ಗೋಜಲಿನ ಸಂಗತಿ. ಇಲ್ಲಿ ಹೆಚ್ಚು ಸ್ಪಶ್ಟತೆಗಳು ಇಲ್ಲ. ಪರಸ್ಪರ ತಾಯ್ಮಾತುಗಳು ಒಂದು ಬಾಶೆಯೊ ಬಿನ್ನ ಬಾಶೆಗಳೊ ಎಂಬುದನ್ನು ಬಾಶಾವಿಗ್ನಾನದ ಸಹಾಯದಿಂದ ತೀರ‍್ಮಾನಿಸಬಹುದು. ಆದರೆ, ಸಮಾಜದಲ್ಲಿ ಯಾವಾಗಲೂ ಯಾವುದು ಒಳನುಡಿ, ಯಾವುದರ ಒಳನುಡಿ, ಅವುಗಳ ಹೆಸರು ಇವೆಲ್ಲ ನಿರ‍್ದರಿಸುವುದು ಸಮಾಜೊ-ರಾಜಕೀಯ ವಿಚಾರಗಳೆ ಆಗಿರುತ್ತವೆ.

ಹಾಗಾಗಿ ಯಾವ ಬಾಶೆಯ ಒಳಗೆ ಯಾವೆಲ್ಲ ತಾಯ್ಮಾತುಗಳು ಇವೆ, ಅವುಗಳಿಗೆ ಯಾಕೆ ಸ್ವಂತಿಕೆ ಇಲ್ಲ ಇಲ್ಲವೆ ಇದೆ ಎಂಬೆಲ್ಲ ಪ್ರಶ್ನೆಗಳಿಗೆ ಸಾಮಾನ್ಯವಾಗಿ ಉತ್ತರ ಇಲ್ಲ. ಆದರೆ ಹೀಗೆ ಯಾವುದೆ ಒಂದು ಬಾಶಾಬಗೆಯನ್ನು ಪ್ರಕಟಿಸುವುದರಿಂದ, ಒಂದನ್ನು ಪ್ರಕಟಿಸದೆ ಇರುವುದರಿಂದ ರಾಜಕೀಯ, ಸಾಮಾಜಿಕ ಪರಿಣಾಮಗಳು ಇರುತ್ತವೆ. ಈ ಅಂಕಿಸಂಕೆಗಳನ್ನು ನಿರ‍್ವಹಿಸುವ ಮೂಲಕ ಸಮಾಜದಲ್ಲಿ ಒಂದು ಬಾಶೆಯ ಮತ್ತು ಬಾಶಿಕರ ಸ್ತಿತಿಯನ್ನೂ ನಿರ‍್ದರಿಸಲಾಗುತ್ತದೆ. ಇಲ್ಲಿ ಲಂಬಾಣಿಯ ಉದಾಹರಣೆಯನ್ನು ತೆಗೆದುಕೊಂಡು ಮಾತಾಡಬಹುದು. ಈ ಉದಾಹರಣೆ ಕರ‍್ನಾಟಕದ ಬಾಶಿಕ ಪರಿಸರವನ್ನು ತಿಳಿದುಕೊಳ್ಳುವುದಕ್ಕೆ ಹೆಚ್ಚು ಸಹಾಯಕವಾಗುತ್ತದೆ. 

ಹಿಂದಿ ಎಂಬ ಒಂದು ಬಾಶೆಯ ಒಳಗೆ ಸುಮಾರು ಅಯ್ವತ್ತಾರು ತಾಯ್ಮಾತುಗಳನ್ನು ಕೊಟ್ಟಿದೆ, ಇತರ ಎಂಬ ಬಹುದೊಡ್ಡ ಸಂಕೆಯ ಮಾತುಗರಿರುವ ಗುಂಪು ಕೂಡ ಇದೆ. ಇದನ್ನು ಗಮನಿಸಿದಾಗ ಹಿಂದಿಯೊಳಗೆ ಸಾವಿರಾರು ತಾಯ್ಮಾತುಗಳು ಸೇರಿಕೊಂಡಿವೆ. ಇದರಲ್ಲಿ ಕನಿಶ್ಟ ನೂರಾರು ಬಾಶೆಗಳು ಸೇರಿಕೊಂಡಿವೆ. ಪರಸ್ಪರ ಅರ‍್ತವಾಗುವ ತಾಯ್ಮಾತುಗಳನ್ನು ಒಂದು ಬಾಶೆ ಎಂದು ಸಾಮಾನ್ಯವಾಗಿ ಪರಿಗಣಿಸಬಹುದು. ಆದರೆ ಪರಸ್ಪರ ಅರ‍್ತವಾಗುವ ಸಾಮರ‍್ತ್ಯ ತುಂಬಾ ಕಡಿಮೆ ಇರುವ ಇಲ್ಲವೆ ಅರ‍್ತವಾಗುವ ಸಾಮರ‍್ತ್ಯ ಇಲ್ಲದ ಹಲವು ತಾಯ್ಮಾತುಗಳನ್ನೂ ಹಿಂದಿಯ ಒಳಗೆ ಹಾಕಲಾಗಿದೆ. ಇದು ಒತ್ತಾಯಪೂರ‍್ವಕ ತುಂಬಿರುವಂತಿದೆ. ಇವುಗಳಲ್ಲಿ ಬಾರತದ ಮಹತ್ವದ ಬಾಶೆಗಳಲ್ಲಿ ಒಂದಾಗಬಹುದಾದ ಕರ‍್ನಾಟಕದ ಸಂದರ‍್ಬದಲ್ಲಿ ತುಂಬಾ ಮಹತ್ವವನ್ನು ಪಡೆದುಕೊಳ್ಳುವ ‘ಲಂಬಾಣಿ’ಯೂ ಸೇರಿದೆ.

ಹಿಂದಿಯ ಹಲವಾರು ಒಳನುಡಿಗಳು ಬಿನ್ನ ಪ್ರದೇಶಗಳಲ್ಲಿ ಬಳಕೆಯಲ್ಲಿವೆ, ಶಿಶ್ಟ ಹಿಂದಿಯೂ ಇದೆ. ಹಿಂದಿಯ ಯಾವುದೆ ಒಳನುಡಿಯೊಂದಿಗೂ ಲಂಬಾಣಿ ಅರ‍್ತವಾಗುವ ಸಾಮರ‍್ತ್ಯವನ್ನು ಹೊಂದಿಲ್ಲ. ಇನ್ನೊಂದು ಕಡೆ ಲಂಬಾಣಿ ಕೂಡ ವಿವಿದ ಹೆಸರುಗಳಲ್ಲಿ ದೇಶದ ತುಂಬ ಬಳಕೆಯಲ್ಲಿದೆ. ಆದರೆ ಲಂಬಾಣಿಯನ್ನು ನಿರಂತರ ಹಿಂದಿಯ ಒಳಗೆ ದಾಕಲಿಸಲಾಗುತ್ತದೆ. ಇದು ಲಂಬಾಣಿ ಅಸ್ತಿತ್ವವನ್ನು ತೋರಿಸದ ಮತ್ತು ಹಿಂದಿ ಪ್ರಮಾಣವನ್ನು ಹಿಗ್ಗಿಸುವ ರೀತಿಯಲ್ಲಿ ಕಾಣಿಸುತ್ತದೆ. ಇಂತಾ ಸಮಸ್ಯೆಗಳನ್ನು ತುಸು ಬಿನ್ನ ರೀತಿಯಲ್ಲಿ ಎದುರುಗೊಂಡಿದೆ. ಅವಶ್ಯವಿರುವಲ್ಲಿ ಬಾಶೆಯ ಮಾತುಗರ ಸಂಕೆಯನ್ನು ತೋರಿಸಿದರೂ, ಮುಂದುವರೆದು ಪ್ರತಿ ತಾಯ್ಮಾತಿನ ಸಂಕೆಯನ್ನು ಪರಿಗಣಿಸಿ ಚರ‍್ಚೆಯನ್ನು ಬೆಳೆಸಿದೆ.

ಹೀಗೆ ತಾಯ್ಮಾತುಗಳನ್ನು ಪರಿಗಣಿಸಿ ತೋರಿಸಿದಾಗ ಜನಗಣತಿ ಒದಗಿಸಿರುವ ಮಾಹಿತಿಯಲ್ಲಿ ಹೆಚ್ಚಿನ ಏರುಪೇರುಗಳಾಗುವುದನ್ನು ಕಾಣಬಹುದು. ಈಗ ಮಾತನಾಡುತ್ತಿರುವ ಹಿಂದಿಯಲ್ಲಿ ಕರ‍್ನಾಟಕದಲ್ಲಿ ಒಟ್ಟು 20,13,364 ಮಾತುಗರು ದಾಕಲಾಗಿದ್ದಾರೆ. ಇದರಲ್ಲಿ ಹಿಂದಿ ಎಂಬ ತಾಯ್ಮಾತಿನ ಮಾತುಗರ ಸಂಕೆ ಕೇವಲ 8,71,809 ಮಾತ್ರ. ಆದರೆ ಲಂಬಾಣಿಯ ಮಾತುಗರ ಸಂಕೆ 9,74,622. ಜನಗಣತಿಯೆ ಕೊಡುವ ಪ್ರಕಾರ ಹಿಂದಿ ತಾಯ್ಮಾತಿಗಿಂತಲೂ ಹೆಚ್ಚಾಗಿದೆ. ಲಂಬಾಣಿಯ ಇತರ ಹೆಸರುಗಳಲ್ಲಿ ದಾಕಲಾಗಿರುವವರನ್ನು ಸೇರಿಸಿದರೆ ಲಂಬಾಣಿ ಸಂಕೆ 10,00,071 ಆಗುತ್ತದೆ. ಈಗ ಲಂಬಾಣಿ ಕರ‍್ನಾಟಕದ ಮಹತ್ವದ ಬಾಶೆ ಎಂಬುದು ತಿಳಿಯುತ್ತದೆ.

ತಮಿಳಿನ ಒಳಗೆ ಕೊರವ (8,385) ಎಂಬ ಒಂದು ತಾಯ್ಮಾತನ್ನು ವರದಿ ಮಾಡಲಾಗುತ್ತದೆ. ಕೊರವ ಇದು ಕರ‍್ನಾಟಕದಲ್ಲಿ ವಿಶೇಶವಾಗಿ ಬಳಕೆಯಲ್ಲಿರುವ ಒಂದು ಬಾಶೆ. ಕೊರವರು ತಮ್ಮ ಮಾತಿಗೆ ಕುಳು ಎಂದು ಕರೆಯುತ್ತಾರೆ. ಮರಾಟಿಯಲ್ಲಿ ಆರೆ (50,339) ಎಂಬ ತಾಯ್ಮಾತಿಗೆ ದೊಡ್ಡ ಸಂಕೆಯ ಮಾತುಗರು ಕರ‍್ನಾಟಕದಲ್ಲಿ ದಾಕಲಾಗಿದ್ದಾರೆ. ಕೊಂಕಣಿಯಲ್ಲಿಯೂ ಹೀಗೆ ದೊಡ್ಡ ಸಂಕೆಯ ತಾಯ್ಮಾತುಗಳು ಇವೆ. ಗುಜರಾತಿಗೆ ಕರ‍್ನಾಟಕದಲ್ಲಿ 1,14,616 ಮಂದಿ ದಾಕಲಾಗಿದ್ದಾರೆ. ಇದರಲ್ಲಿ ಹೆಚ್ಚಿನ ಸಂಕೆಯ ಮಾತುಗರನ್ನು ಒಳಗೊಂಡ ಎರಡು ಗುಂಪುಗಳಿವೆ, ಒಂದು ಗುಜರಾತಿ ಇನ್ನೊಂದು ಇತರ ಎಂಬ ಗುಂಪು. ಕುತೂಹಲವೆಂದರೆ ಇತರ ಎಂಬ ಗುಂಪಿನಲ್ಲಿ ಬಹುದೊಡ್ಡ ಸಂಕೆಯ ಮಾತುಗರು ಅಂದರೆ 43,904ರಶ್ಟು ಮಂದಿ ಕಾಣಿಸುತ್ತಾರೆ. ಇಶ್ಟು ದೊಡ್ಡ ಸಂಕೆಯ ಮಂದಿ ಇತರ ಎಂಬ ಗುಂಪಿನಲ್ಲಿ ಇರುವುದು ಸಹಜವಾಗಿ ಕೂತುಹಲದಾಯಕ ವಿಚಾರ. 

ಇಲ್ಲಿ ಉಲ್ಲೇಕಿಸಿದ ಇಂತಾ ಸಮಸ್ಯೆಗಳು ಇನ್ನೂ ಹಲವಾರು ಬಾಶೆಗಳಿಗೆ ಸಂಬಂದಿಸಿ ಇವೆ. ಆದರೆ ಚಿತ್ರಣ ಸ್ಪಶ್ಟವಾಗಿ ಇಲ್ಲ. ಇದು ಬಹುದೊಡ್ಡ ಸಮಸ್ಯೆ. ಹಿಂದಿಯಂತ ಬಾಶೆಯನ್ನು ಪರಿಗಣಿಸಿದಾಗ ಬಾಶಾನಿರ‍್ವಹಣೆಯ ಸವಾಲುಗಳು, ಅದರ ಸಮಾಜ-ರಾಜಕೀಯ ಆಯಾಮಗಳು ಮೊದಲಾದವು ಕಾಣದಿರವು. ಈ ಮಹತ್ವವನ್ನು ಪರಿಗಣಿಸಿ ಈಗಿನ ಅದ್ಯಯನದಲ್ಲಿ ತಾಯ್ಮಾತುಗಳನ್ನು ಪ್ರದಾನವಾಗಿ ಪರಿಗಣಿಸಿದೆ.

ಪ್ರದಾನ ಬಾಶೆಗಳಿಗೆ, ಅಂದರೆ ಕರ‍್ನಾಟಕದ ಬಾಶಿಕ ಪರಿಸರದ ಚರ‍್ಚೆಯಲ್ಲಿ ಮಹತ್ವವನ್ನು ಪಡೆದುಕೊಳ್ಳುವ ಬಾಶೆಗಳ ಚರ‍್ಚೆಯ ಸಂದರ‍್ಬದಲ್ಲಿ ಆ ಬಾಶೆಗಳ ಒಳಗೆ ಅವುಗಳ ಹೆಸರಿನ ತಾಯ್ಮಾತಿನ ಹೆಸರಿನಲ್ಲಿ ದಾಕಲಾದ ಮಾತುಗರ ಸಂಕೆಯನ್ನು ಪರಿಗಣಿಸಿದೆ. ಸಾಮಾನ್ಯವಾಗಿ ಇಂತ ಪರಿಗಣನೆಗೆ ಬಾಶಾವಿಗ್ನಾನದ ಬೆಂಬಲ ದೊರೆಯಬಹುದು. ಆದರೆ, ಕೆಲವು ಸಂದರ‍್ಬದಲ್ಲಿ ಇದು ಕಶ್ಟವೂ ಆಗಬಹುದು. ಕನ್ನಡದ ಉದಾಹರಣೆಯನ್ನೆ ತೆಗೆದುಕೊಳ್ಳುವುದಾದರೆ ಕನ್ನಡದ ಒಳಗೆ ದಾಕಲಾಗಿರುವ ಪ್ರಾಕ್ರುತ ಎಂಬ ತಾಯ್ಮಾತಿಗೆ ಯಾವುದೆ ಆದಾರ ಇಲ್ಲ. 

ಕೊಡವ ಎಂಬ ಬಾಶೆಗೆ ಕೊಡವ ಮತ್ತು ಕೂರ‍್ಗಿ ಎಂಬ ಎರಡು ತಾಯ್ಮಾತುಗಳನ್ನು ಜನಗಣತಿ ಕೊಟ್ಟಿದೆ. ಇವು ಹೆಸರಿನ ಬಿನ್ನತೆಗಿಂತ ಬೇರೇನು ಅಲ್ಲದಿರುವುದರಿಂದ ಅದನ್ನು ಒಂದೆ ಎಂದು ಪರಿಗಣಿಸಿ ಬಾಶೆಯ ಸಂಕೆಯನ್ನು ಇಲ್ಲಿ ತೆಗೆದುಕೊಂಡಿದೆ. ಹಾಗೆಯೆ ಗುಜರಾತಿ ಒಳಗೆ ಇತರ ಎಂಬ ಹೆಸರಿನಲ್ಲಿ ದಾಕಲಾಗಿರುವ ದೊಡ್ಡ ಸಂಕೆಯ ಮಾತುಗರ ತಾಯ್ಮಾತುಗಳನ್ನು ಅಂದಾಜಿಸಲು ಸದ್ಯಕ್ಕೆ ಆದಾರಗಳು, ಗುಜರಾತಿಯ ಒಳನುಡಿಗಳ ಆದಾರಗಳೂ ಇಲ್ಲದಿರುವುದರಿಂದ ಒಟ್ಟು ಬಾಶೆಯ ಸಂಕೆಯನ್ನು ಪರಿಗಣಿಸಿದೆ.

ಇನ್ನು ಕರ‍್ನಾಟಕದಲ್ಲಿ ನೂರಿನ್ನೂರು ಇಲ್ಲವೆ ಕೆಲವು ಸಾವಿರ ಮಂದಿ ವರದಿಯಾಗಿರುವ ಹಲವಾರು ಬಾಶೆಗಳಲ್ಲಿಯೂ ಇಂತಾ ತಾಯ್ಮಾತುಗಳ ಬಿನ್ನತೆ ಇದೆ. ಕೆಲವೊಮ್ಮೆ ದಾಕಲಾಗಿರುವ ಎಂಟತ್ತು ಮಂದಿಯೂ ಎರಡು-ಮೂರು ತಾಯ್ಮಾತುಗಳನ್ನು ಆಡುವವರು. ಇವು ಒಟ್ಟು ಕರ‍್ನಾಟಕದ ಬಾಶಿಕ ಪರಿಸರದ ಚರ‍್ಚೆಯಲ್ಲಿ ಹೆಚ್ಚು ಮಹತ್ವವನ್ನು ಪಡೆದುಕೊಳ್ಳದ, ಇತ್ತೀಚಿನ ವಲಸೆ ಎಂದು ಸರಳವಾಗಿ ಅಂದಾಜಿಸಲು ಸಾದ್ಯವಿರುವ ಸ್ತಿತಿಗಳು. ಅಲ್ಲದೆ ಇದರೊಳಗೆ ತಾಯ್ಮಾತುಗಳ ಪರಿಗಣನೆಯಿಂದ ಬಾಶಿಕ ಪರಿಸರವನ್ನು ಅರ‍್ತ ಮಾಡಿಕೊಳ್ಳುವಲ್ಲಿ ಬೇರೆಯ ಒಳನೋಟಗಳು ದೊರೆಯವ ಅನುಮಾನಗಳು ಇಲ್ಲ. ಇದೆಲ್ಲದರ ಜೊತೆಗೆ ಅದ್ಯಯನದ ಬಾರವನ್ನು ಹೆಚ್ಚಿಸುವ ಅಪಾಯವೂ ಇರಬಹುದು. ಒಟ್ಟಾರೆ ಕರ‍್ನಾಟಕದ ಸಂದರ‍್ಬದಲ್ಲಿ ಮುಕ್ಯವೆನಿಸುವ ಬಾಶೆಗಳ ಒಳಗಿನ ತಾಯ್ಮಾತುಗಳನ್ನು ಪ್ರದಾನವಾಗಿ ಪರಿಗಣಿಸಿ ಜನಗಣತಿ ಒದಗಿಸಿರುವ ಮಾಹಿತಿಯನ್ನು ವಿಶ್ಲೇಶಿಸಿ ಕೊಡುವ ಪ್ರಯತ್ನವನ್ನು ಇಲ್ಲಿ ಮಾಡಿದೆ.

ಈ ಬರಹಗಳಲ್ಲಿ ಒಂದು ಸಾಮಾನ್ಯ ರಚನೆಯನ್ನು ಬಳಸಿಕೊಂಡಿದೆ. ಮೊದಲಿಗೆ ಜನಗಣತಿ ಒದಗಿಸಿರುವ ಆಯಾ ಜಿಲ್ಲೆಯ ಅಂಕಿಸಂಕೆಗಳನ್ನು ಹಾಗೆಯೆ ಕೊಟ್ಟಿದೆ. ಆನಂತರ ಅವುಗಳನ್ನು ಆದರಿಸಿ ಆಯಾ ಜಿಲ್ಲೆಯ ಬಾಶೆಗಳನ್ನು, ಆ ಬಾಶೆಗಳ ಮಾತುಗರ ಸಂಕೆಯನ್ನು ಆದರಿಸಿ ಪಟ್ಟಿಸಿದೆ. ಆನಂತರ, ಆ ಬಾಶೆಗಳ ತಾಯ್ಮಾತುಗಳನ್ನು, ಅವುಗಳ ಮಾತುಗರ ಸಂಕೆಯನ್ನು ಪರಿಗಣಿಗಿಸಿ ಜಿಲ್ಲೆಯ ಬಾಶೆಗಳನ್ನು ವಿಶ್ಲೇಶಿಸಿ ಅವುಗಳನ್ನು ಮರುಹೊಂದಿಸಿ ಕೊಟ್ಟಿದೆ.

ಹೀಗೆ ತಾಯ್ಮಾತುಗಳ ಸಂಕೆಯನ್ನು ಪರಿಗಣಿಸುವಾಗ ಗುಜರಾತಿ ಮತ್ತು ಕೊಡವ ಬಾಶೆಗಳ ಮಾಹಿತಿಯನ್ನು ಮಾತ್ರ ಒಂದೆ ಎಂದು ಪರಗಣಿಸಿದೆ. ಇದಕ್ಕೆ ಕಾರಣ ಗುಜರಾತಿ ಒಳಗೆ ಯಾವ ತಾಯ್ಮಾತುಗಳು ಎಂಬ ತಿಳುವಳಿಕೆ ಇಲ್ಲ ಮತ್ತು ಕೊಡವ ಮತ್ತು ಕೂರ‍್ಗಿ ಇವುಗಳ ನಡುವೆ ಹೆಸರಿನ ವ್ಯತ್ಯಾಸ ಮಾತ್ರ ಇರುವುದು. ಆನಂತರ, ಕಡಿಮೆ ಮಂದಿ ದಾಕಲಾಗಿರುವ ಬಾಶೆಗಳನ್ನು ಈ ರೀತಿ ವಿಶ್ಲೇಶಣೆಗೆ ತೆಗೆದುಕೊಂಡಿಲ್ಲ. ಇದು ನಾಡಿನ ಯಾವುದೆ ಕಾನೂನುಗಳನ್ನು, ಸಾಮಾಜಿಕ ಚಟುವಟಿಕೆಗಳನ್ನು ಪ್ರಬಾವಿಸುವುದಿಲ್ಲ ಎಂಬ ಕಾರಣಕ್ಕೆ. ಬರಹದ ಕೊನೆಯಲ್ಲಿ ಆಯಾ ಜಿಲ್ಲೆಯ ಬಾಶೆಗಳ ಚಿತ್ರಣವನ್ನು ಕೊಶ್ಟಕದಲ್ಲಿ ತೋರಿಸಿದೆ, ಮತ್ತು ಕೊನೆಯಲ್ಲಿ ಆ ಜಿಲ್ಲೆಯ ಹತ್ತು ದೊಡ್ಡ ಬಾಶೆಗಳನ್ನು ಪಟ್ಟಿಸಿದೆ. ಇದು ಆ ಜಿಲ್ಲೆಯ ಬಾಶೆ, ಮಾತುಗರನ್ನು ತಿಳಿದುಕೊಳ್ಳುವುದಕ್ಕೆ ಹೆಚ್ಚು ಸಹಾಯವಾಗುತ್ತದೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

24 February, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading