ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸಣ್ಣಿಯೆಂಬೋ ಬಸಣ್ಣಿಯ ಕಥೆ

ಬಸಣ್ಣಿ

ಮಹಾದೇವ ಹಡಪದ

ಮುಖದ ಮುಂದೆ ಹಾರುವ ನೆರಿಗೆಗಳು ಗಡಿಯಿಂದಾಚೆ ಹರಿಯದೆ ತೊಳಲಾಡುತ್ತಿವೆ. ಕಣ್ಣಳತೆಯಲ್ಲಿ ಮುಂಗಾಲುಪುಟಿಗೆ ನೆಗೆತ. ಆ ಬಿರುಬಿಸುಲು ರಣಹೊಡೆಯುವ ತಗ್ಗು ದಿನ್ನೆಗಳಲ್ಲೆಲ್ಲ ಬಿಸಿಲಗುದರಿ ಸವಾರಿ ತೊನೆದಾಡುವುದ ಕಾಣುತ್ತ… ಇಲ್ಲೆ ಇಲ್ಲಿಯೇ ಹತ್ತಿರದ ಊರೆನುತ ಹತ್ತಾರು ಮೈಲಿ ನಡೆದು ತಾಲ್ಲೂಕು ಕೇಂದ್ರವಾದ ರಾಮದರ್ಗ ಮುಂದಲ ಗುಡ್ಡದ ಇಳಿಜಾರಿಗೆ ಬಂದ. ಸೂರ್ಯದೇವನಿಗೆ ಇದಿರಾಗಿ ನೀಲಗಿರಿ ಮರದ ಉದ್ದಾನುದ್ದದ ನೆರಳಲ್ಲಿ ನಡೆಯುವಾಗ ಆ ಹೊಟ್ಟೆ ದಿಕ್ಕಿನ ಬಣ್ಣ ಕೆಂಪೇರುತಲಿತ್ತು. ಆಯತವಾರದ ಸಂತೆಗೆ ದನಕರು, ಕುರಿಮರಿ, ಎತ್ತುಹೋರಿಗಳನ್ನು ಮಾರಲಿಕ್ಕೆ ಬರುವ ಮಾರ್ಗವಾಗಿ ನಡೆದು ಬಂದದ್ದಕ್ಕಾಗಿ ದನದ ಬಝಾರ್ ಮುಖೇನ ಊರೊಳಗೆ ಹೊಕ್ಕು ಪೋಲಿಸ್ ಠಾಣಾಕ್ಕೆ ಹೋಗಬೇಕಾಗಿತ್ತು. ಈ ಜಗತ್ತು ಬೆನ್ನು ಬಿದ್ದಿರುವ ರೊಕ್ಕದ ಕಿಮ್ಮತ್ತು ನಮ್ಮ ಕತಾನಾಯಕ ಬಸಣ್ಣಿ ಎದುರಿಗೆ ಕಾಲಕಸ ಆದ್ದರಿಂದ ಅರ್ಧ ಆಯಷ್ಯ ಕಳೆದರೂ ಅವನಲ್ಲಿ ನಯಾಪೈಸೆ ಸಹಿತ ಜೇಬಿನಲ್ಲಿ ಇಟ್ಟುಕೊಂಡವನಲ್ಲ. ಅಂವ ಬದುಕ ಪೂತರ್ಾ ಸೋಸಿದ ಗೋಳೆ ಕಣ್ಮುಂದಿನ ಕನವರಿಕೆ ಆಗಿತ್ತು. ಮದುವಿ ಸುಖ ಅಯ್ಯನಾರ ಚನ್ನಮಲ್ಲಯ್ಯನ ಕೂಡಿಕೊಂಡಿರಲು, ಉತ್ತಿಬಿತ್ತಿದ್ದು ದಲಾಲರ ಹನ್ಮಪ್ಪನ ಕಿಸೆದ ಪಾಲಾಗತಿತ್ತು. ಈಗ ರಾತೋರಾತ್ರಿ ಪೋರ್ಜರಿ ಮಾಡಿ ಊರಮುಂದಿನ ಹೊಲ ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದರು. ನುಂಗಿ ನೀರು ಕುಡಿಯಲು ಬಂದ ಕಿತಮಿ ಹೆಂಡತಿ ಅದೆಂಥ ಅಕ್ಕರದ ಸೋಗು ಹಾಕಿಬಂದಿದ್ದಳಲ್ಲ, ಹೀಗೆ ಬಂದವಳು ಹೊಲ ಮಾರುತ್ತಾಳೆಂಬ ಸುಳಿವುಗೊಡದೆ ಹಾರಹೊಡೆದು ಮಾತಾಡಿ ಗಲ್ಲಸವರಿ ಬಾಯಿ ಸಿಹಿ ಮಾಡಿ ತವರಮನೆ ಸೇರಿ ಗಪ್ಪಗಾರಾದಾಗಲೇ ಅನುಮಾನಿಸಿದ್ದ.

ಯಾರೋ ಹುರುಪುಕೊಟ್ಟದ್ದಲ್ಲ, ಆ ಚನ್ನ ಮತ್ತು ಈ ಇವನಾಕೆಯ ಸೊಕ್ಕು ಅಡಗಿಸುವ ಯಾವೊಂದು ಕುತಂತ್ರ ತಿಳಿಯದ ಬಸಣ್ಣಿ ಮನಸಿನ್ಯಾಗಿದ್ದದ್ದು ತನ್ನ ಜಮೀನು ತನಗೆ ಬಿಡಸಿಕೊಡಿ ಎಂದು ಪೋಲಿಸರನ್ನ ಕೇಳುವುದಷ್ಟೆ ಆಗಿತ್ತು. ನಚ್ಚು ಅಚ್ಚಚ್ಚಾಗಿದ್ದ ಹೊಲದೊಳಗಿನ ಕಳೆಯನ್ನು ಕಡೆಯಲು-ನ್ಯಾರಿಯ ಎರಡು ರೊಟ್ಟಿ, ತತರಾಣಿ ನೀರು-ತಗೊಂಡು ಹೋದವನಿಗೆ ನೇಗಲ ಓಡು ಕೊರೆಯುತ್ತಿದ್ದ ಟ್ಯಾಕ್ಟರ್ ಕಂಡು ದಿಗಿಲಾಯ್ತು. ‘ನಾ ತಪ್ಪಿ ಬ್ಯಾರೆದವರ ಹೊಲಕ್ಕ ಬಂದೀನೇನು’ ಅಂತ ಚರ್ಮ ಚಿವುಟಿಕೊಂಡು ನೆಲ ಮುಟ್ಟಿ ನೋಡಿ ಕನಸಲ್ಲ ಅಂಬೋದು ಖಾತ್ರಿ ಮಾಡಿಕೊಂಡ. ಎಲ್ಲಿ ಕಂಡಲ್ಲಿ ಬಲು ಪ್ರೀತಿಯಿಂದ ಆಸೆ ಮಾಡಿ ಮಾತಾಡಸತಿದ್ದ ಪಿಂಜಾರ ಫಕ್ರೂ ಇಂಜಿನ್ ಬಂದ್ ಮಾಡಿ ತಮ್ಮ ಬಸವಣ್ಣಿ ನಿನ್ನ ಹೇಂತಿ ಹೊಲ ಮಾರಕೊಂಡಾಳು ಅಂದ. ನಂಬಲಿಕ್ಕಾಗದ ಮಾತು ಗಂಟಲಕ್ಕ ಸಿಕ್ಕ ತುತ್ತಾಯಿತು. ‘ಹುಷಾರು ಧಣಿ ಹೆಸರಿಗೆ ಹೊಲಾ ಆಗ್ಯದ, ಊರಾಗಿನ ಹಿರೇರನ್ನ ಕೂಡಿಸಿ ಮಾತಾಡು. ಮಾತು ಮುಂದ ಮಾಡಕೊಂಡು ಒಬ್ಬನ ಕೇಳಲಿಕ್ಕ ಹೋದಿ ಮತ್ತ, ದೇಸಾರ ಅವರು ಬಡದು ಕಳಿಸತಾರು. ಸಹಜ ಸಿಬಿ ಕಾಕಾ ಅವರನ್ನ ಮುಂದಿಟಗೊಂಡು ನ್ಯಾಯ ಕೇಳು’ ಫಕ್ರೂ ದಾದಾ ಗಾಡಿ ಸುರು ಮಾಡಿದ. ದಾದಾ ಅಂದ್ರ ಮನಸೀಲೆ ಬಂಗಾರದಂತವ ಅನ್ನಿಸಿದ್ದರಿಂದ ಹೆಚ್ಚು ಮಾತು ಬೆಳೆಸಲಾರದ ಊರ ದಾರಿ ಹಿಡಿದ.

ನೋಡ ನೋಡುತ್ತಿದ್ದ ಹಾಗೆ ಹೊತ್ತೇರಿ ಸೂರ್ಯದೇವರ ನೆರಳು ಗುಡಿಯ ಕಳಸವನ್ನು ಅಜ್ಜಪ್ಪನ ಗುಡಿಯ ನೆತ್ತಿಗೆ ತಂದಿತ್ತು. ಆಯಿ ಹೇಳಿಕೊಟ್ಟ ನಡೆ ಅದೊಂದೆ -ಮುಖ ತೊಳೆದಾದ ಮೇಲೆ ಹಣೆತುಂಬ ವಿಭೂತಿ ಕಟ್ಟು ಕೊರೆದುಕೊಳ್ಳುವುದು, ಬಸವಣ್ಣದೇವರ ಮುಂದೆ ನಿಂತು ಕಣ್ಮುಚ್ಚಿ ಓಂ ನಮ ಶಿವಾಯ ಜಪಿಸುವುದು. ಅವನ ಆಪತ್ಕಾಲಕ್ಕೆ ಆಗುವ ಮತ್ತು ನಾಲಗೆ ತುದಿಯಲ್ಲೆ ಇರುವ ಏಕೈಕ ದೇವರು ಇವನೊಬ್ಬನೇ ಆದ್ದರಿಂದ ನೆನೆದ ಬಗೆ ಹುಸಿಯಾದ್ದು ಯಾವದೂ ಇರಲಿಲ್ಲ. ‘ಈಗಲೂ ಗೆಲುಮುಖ ನನಗಿರಲಿ’ ಎಂದು ಧ್ಯಾನಿಸಿದ. ನಿಲುಕಲಾರದ ಗಂಟೆಯನ್ನ ನೆಗೆದು ‘ಠಣ್’ ಅನ್ನಿಸಿದ ಬಾಳ್ಯಾ ಹನುಮಂತ ‘ಏನಪಾ ದೊರಿ, ನಿನ್ನ ಹೆಂಡತಿ ನೆನ್ನೆ ರಾಮದುರ್ಗ ಟ್ರೆಜರಿ ಮುಂದ ಇದ್ದಳಲ್ಲ, ಏನು ಹೊಲ ಮಾರಿದಿರೇನು’. ಇವನಂತೂ ಹೊಟ್ಟೆಕಿಚ್ಚಿಗಾಗಿ ಈ ಊರಲ್ಲಿ ಹುಟ್ಟಿದವನೆಂದು ಆಯಿ ಹೇಳಿದ್ದು ಹೊಳೆದದ್ದೆ ‘ಮಾರಿದ್ದು ಹೌದಂದ್ರ ನಿನಗೇನು ಬೆಳ್ಳಿ ಕಡೆ ಕೊಡವರ ಅದಾರೇನು ಯಾರಾರು’. ಹೀಗೆ ಯಪರಾತಪರಾ ಮಾತಾಡೋ ಬಸವಣ್ಣಿಯನ್ನ ಹತ್ತಿರದಿಂದ ಬಲ್ಲವರು ಯಾರು ಕೆನಕುತ್ತಿರಲಿಲ್ಲ. ಅವನು ಮಾತಾಡಿದ್ದರ ಅರಿವು ಆತನಿಗೇ ಇರುತ್ತಿರಲಿಲ್ಲವಾದ್ದರಿಂದ, ಊರವರೇ ಖುದ್ದು ನಕಲಿ ಮಾಡಿಯೋ, ಆಡಿಕೊಂಡೋ ನಗಾಡಿ ಸುಮ್ಮನಾಗಿಬಿಡುತ್ತಿದ್ದರು. ಉಡಾಳರನ್ನು ಕಂಡರೆ ಸಿಟ್ಟು ನೆತ್ತಿಗೇರಿ ಮಾತಿನ ಧಾಟಿಯೇ ಬದಲಾಗಿ ಮತ್ತಷ್ಟು ಮಜಾ ಕೊಡಲು ಸುರುಮಾಡುತ್ತಿದ್ದ. ಹೆಂಡತಿ ಹೊಸದಾಗಿ ಬಂದಾಗಿನ ಮೊದಲೆರಡು ದಿನ ಎಳೆ ಹುಡುಗರಿಂದ ಮುದಕರವರೆಗೆ ಮೊದಲ ರಾತ್ರಿಯ ಯಾವುದನ್ನ ಮುಚ್ಚಿಡಬೇಕೋ ಆ ಅದನ್ನೆಲ್ಲ ಕೂತೂಹಲದಿಂದ ಕೇಳಿ ತಿಳಿದ ಸುಖಿಗಳು ಒಬ್ಬಿಬ್ಬರಲ್ಲ… ಅವರಲ್ಲಿ ಹೆಚ್ಚು ನಗಾಡಿದ ಇವನ ಬಗ್ಗೆ ಅಸಹನೆ ಮಡುವುಗಟ್ಟಿತ್ತು. ಬಾಳ್ಯಾ ಹನುಮಂತನಿಗೂ ಚನ್ನಮಲ್ಲನಿಗೂ ಸರಸ, ಸಾವುಕಾರಿಕೆ, ರಾಜಕಾರಣ, ಅಧಿಕಾರಿಗಳ ಓಲೈಕೆ, ಗ್ರಾಮ ಮಟ್ಟದ ಟೆಂಡರ್, ಹೀಗೆ ಅವನಿದ್ದಲ್ಲಿ ಇವನಿಗೆ-ಇಂವ ಹೋದಲ್ಲಿ ಅವನಿಗೆ ಒಟ್ಟು ಇಬ್ಬರಲ್ಲಿ ಒಂದು ತೆರನಾದ ತುರುಸು ಬೆಳೆದಿತ್ತು. ‘ಬಸಣ್ಣಿ, ಏನಾಗ್ಯೇದ ಅಂತ ನನಗಾದರೂ ಗೊತ್ತು ಊರಾಗಿನ ಎಳೆಮಕ್ಕಳಿಗೂ ತಿಳಿದದ. ನೀ ನಾನು ಹೇಳಿಧಂಗ ಕೇಳತಿ ಅನ್ನೋದಾದರ… ಆ ಸೂಳೆಮಗನಿಗೆ ನೀರ ಕುಡಿಸಬಹುದು.’ ಮೆಲ್ಲಕಾಸೆ ಹೆಗಲ ಮ್ಯಾಲೆ ಕೈ ಹಾಕಿ ಗುಡಿ ಪಾವಳಿಯ ಪಾವಟಣಿಗೆ ಇಳಿಯುತಲಿದ್ದ. ‘ನನಗ ಯಾನೂ ತಿಳಿಯಂಗಿಲ್ಲ ಅಂದಕೊಂಡಿಯೇನ…’ ಹೆಗಲ ಮೇಲಿನ ಕೈ ಕೊಸರಿದ ಬಸಣ್ಣಿ ಮಾತಾಡುತ್ತ ಆಡುತ್ತ ಸೀಬಿ ಕಾಕಾನ ಮನೆಗೆ ಹೊರಟ. ಮೋಸಹೋಗುವ ಎಷ್ಟೋ ಸಲ, ಮಾತಾಡಿದ ಮೇಲೆ ಹೀಗೆ ಆಡಬಾರದಾಗಿತ್ತು ಎಂದು ಮರಗುವ ಮತ್ತು ತನ್ನನ್ನೂ ತಾನೇ ದೂಷಿಸಿಕೊಳ್ಳುವ, ತನ್ನ ಪೆದ್ದುತನಕ್ಕೆ ಒದ್ದಾಡುವ ಈ ಇವನಂತೆ ಆ ಅವರಿಗೆ ಎಳ್ಳಷ್ಟೂ ಮನುಷ್ಯತ್ವ ಇರುತ್ತಿರಲಿಲ್ಲ.

ಸೀಬಿಕಾಕಾ ಫಂಡರಪುರ ಹೋಗಿದ್ದು ಘಾತವಾದಂತಾಗಿತ್ತು. ಬಾಳ್ಯಾ ಹನುಮನೂ ಅಯ್ಯನಾರ ಚನ್ನಮಲ್ಲನೂ ಒಂದೇ ಜಾತಿಯ ನಾಯಿಗಳೆಂಬುದನ್ನ ಆಯಿ ಗೆರೆ ಕೊರೆದಂತೆ ಹೇಳಿದ್ದರಿಂದ ಅವನ ಬಗ್ಗೆ ಹುಷಾರಿದ್ದ. ಗುಸುಗುಸು ಮಾತಾಗಿ ಮುಗಿದ ಕತಿ ಈಗ ಉರುಲಾಗಿ ಬಂದದ್ದು ಬಸಣ್ಣಿ ಕೊರಳಿಗೆ. ‘ಊರದೈವ ನಂಬಬ್ಯಾಡ ಎಲ್ಲಾರು ಹಾಕಪ್ಪಗೋಳ ಅದಾರು, ನೀ ಕಾಯ್ದೆಶೀರ ಹಕ್ಕ ಕೇಳು’ ಅಂತ ಮಲ್ಲವ್ವ ಠಾಣಾಕ್ಕ ಹೋಗಲಿಕ್ಕ ಅಪ್ಪಣೆ ಕೊಟ್ಟಿದ್ದಳು.

** ** ** **

ಬಸಣ್ಣಿ ಹುಟ್ಟುವಾಗಲೇ ಅನಾಥ, ಅವ್ವನ ಅವ್ವ ಅಂದ್ರ ಖಾಸಾ ಆಯಿಯ ಮುಖದ ಮುಂದೆ ಬೆಳೆದು ದೊಡ್ಡವನಾದವ. ಪೆದ್ದ, ಪೆಕರ, ದಡ್ಡ,ಅಂತಲೇ ಗುರುತಿಸುವ ಕಾರಣದಿಂದ ಆಯಿಯ ಮಡಿಲು ಬಿಟ್ಟು ಆಚೀಚೆ ಸರಿದವನಲ್ಲ. ಸಾಯುವ ಮೊದಲು ಮದುವೆಕಾರ್ಯ ಮುಗಿಸುವ ಅವಸರದಲ್ಲಿ, ವಯಸ್ಸು ಮೀರಿದ್ದ ಹೆಣ್ಣನ್ನು ಮೊಮ್ಮಗನಿಗೆ ತಂದುಕೊಂಡಿದ್ದಳು. ಕಿಟಿಕಿಟಿ ಕರಕರೆ ಮಾಡುತ್ತಿದ್ದ ಅವಳ ಸ್ವಭಾವದಲ್ಲಿ ಗಂಡ ಅನ್ನುವ ಈ ಆಸಾಮಿಯ ಬಗ್ಗೆ ಒಂದಷ್ಟೂ ಗೌರವ ಇದ್ದಿರಲಿಲ್ಲ. ಮುಟ್ಟಿಸಿಕೊಳ್ಳಲು ಹೇಸಿಕೆ ಪಡುತ್ತಿದ್ದ ಅವಳು ತವರಿಗೆ ಹೋದವಳು ತಿಂಗಳಾನಗಟ್ಟಳೆ ಇತ್ತ ಸುಳಿಯುತ್ತಿರಲಿಲ್ಲ. ಈ ನಡುವೆ ಜೋಳಿಗೆ ಹಿಡಿದು ಭಿಕ್ಷೆಗೆ ಬರುತ್ತಿದ್ದ ಚನ್ನಮಲ್ಲನ ಸಂಗತಿ ಸಲುಗೆ ಬೆಳೆದು, ಒಲವಾಗಿ ಸಂಬಂಧ ಕುದುರಿದ್ದು ಗಾಳಿಸುದ್ದಿಯಾಗಿ ಆಯಿಯ ಕಿವಿಮುಟ್ಟಿತು. ಬಾಯಬಿಟ್ಟು ಯಾರಲ್ಲೂ ಹೇಳಲಾರದ ಮಾನಗೆಟ್ಟ ನಡೆಯನ್ನ, ಸುತಾರಾಂ ಸಹಿಸಲೂ ಆಗದ ವಿಷಾದದ ಗಳಿಗೆ ಅದಾಗಿತ್ತು. ‘ನಮ್ಮ ಮನೆತನದಾಗ ಇಂಥದ್ದೊಂದು ಹಾದರದ ಕತಿ ನಡೆದಿರಲಿಲ್ಲ ಈಗ ಹಿಂಗ ಈಕಿ ರೂಪದೊಳಗ ಬಂದದ..’ ಅಂತ ಹಣಿಹಣಿ ಬಡಕೊಂಡು ಕಣ್ಣೀರಿಟ್ಟದ್ದು,ಮತ್ತ ಶಾರವ್ವತ್ತಿ ಅವ್ವನ ಕಿವಿಯಾಗ ಮಣಮಣ ಅಂತ ಪಿಸುಗುಟ್ಟಿದ್ದು ಕೇಳಿಸಿದ್ದು ನೆನಪು.

ಎಳಸುತನದಲ್ಲಿ ಕುಸ್ತಿ ಒಗೆದವನಿಗೂ ಸೆಡ್ಡು ಹೊಡೆದ ಎದುರಾಳಿಗೂ ಕಣದಾಗ ಸೋತರೂ ಗೆದ್ದರು ಒಂದ ಬಾಳೆ ಹಣ್ಣು ಸಿಗತದ ಅನ್ನೋದು ಖಾತ್ರಿ ಇದ್ದದ್ದರಿಂದಾಗಿ, ನಾನು ಸಹಿತ ಒಂದಸಲ ಬಸಣ್ಣಿಯನ್ನ ಪಂದ್ಯಕ್ಕೆಳೆದದ್ದು ಇದೆ. ನನಗಿಂತ ಹತ್ತು ವರ್ಷ ದೊಡ್ಡವನಾದ ಅವನನ್ನ ಸೋಲಿಸಿದ್ದು ನೆರೆದ ಮಂದಿಗೆ ತಾಜಾ ಮಜಾ ಕೊಟ್ಟಿದ್ದಿರಬಹುದು. ಪಾಪ! ಈಗವನ ಮುಗುದ ನೇತ್ರಗಳಲ್ಲಿ ಸೋಲಿನ ಕಹಿ ತುಂಬಿಕೊಂಡಂತೆ ಅನ್ನಿಸತೊಡಗಿದಾಗ-ಅವನಂತೆ ನಾನು ಅಂದುಕೊಳ್ಳುತ್ತೇನೆ. ಅವ್ವನ ತವರುಮನೆ ಊರಿನವಳಾದ ಅವಳು ಗಂಡನ ಮನೆ ಮಾಡಲು ಬಂದಾಗಿನಿಂದಲೂ ಅಗದೀ ಹತ್ತಿರದಿಂದ ನಮ್ಮ ಮನೆಗೆ ಪರಿಚಿತಳಾಗಿದ್ದಳು. ಆಕೆಯ ನಡೆ ಕಂಡಿದ್ದ ನಮ್ಮ ತಾಯಿ ಆ ಮನೆಯ ತಕರಾರು ತಂಟೆಗಳಿಗೆ ಹಿರಿಯಳಾಗಿ ಹೋಗುತ್ತಿದ್ದಳು. ಅಂಗಳದ ಹೆಂಗಸರ ಬೈಠಕ್ ಚಚರ್ೆಗಳಲ್ಲೂ ಕೂಡಾ ಅದ ಅದೆ ಮಾತುಗಳ ಬಟವಾಡೆ ಆಗುತ್ತಿತ್ತು. ಅಲ್ಲಿ ಓದುವ ನೆಪದಿಂದ ಅವರ ಮಾತು ಕದ್ದು ಕೇಳಿಸಿಕೊಳ್ಳುತ್ತಿದ್ದ ನಾನು, ಹೋಗಿ ಅವನಲ್ಲಿ ಗಂಡಸುತನ ಪ್ರಮಾಣಿಕರಿಸುವ ಬಗ್ಗೆ ಉತ್ಸಾಹ ತುಂಬಲು ಹವಣಿಸಿದ್ದು ಇದೆ. ಪಾಪ! ಖರೇಖರೆ ಹೇಳಬೇಕಂದ್ರ ಆ ಹೆಣಮಗಳು ನೋಡಲು ಸಂಭಾವಿತಳಾಗಿ ಕಾಣಿಸಿದಾಗ ಹೇಳುವ ಮಾತು ಮರೆತು ಹಲ್ಲಕಿರಿದು ಮಾತಾಡಿಸಿ ಬಂದು ಬಿಡುತ್ತಿದ್ದೆ. ಆಕೆ ಖಾಸಾ ನನ್ನ ಅಕ್ಕನೇನೋ ಎಂಬಷ್ಟು ಪರಿಚಿತ ನಗು ಬೀರುತ್ತಿದ್ದಾಗ ವಿಚಿತ್ರ ಮುಜುಗರ ಅನಭವಿಸಿ ಸುಮ್ಮನಾಗಬಿಡುತ್ತಿದ್ದೆ.

ಹಾಂಗೂ ಹಿಂಗೂ ಆಯಿ ಮತ್ತು ತನ್ನ ಹೆಂಡತಿಯ ಗುದ್ದಾಟ ತಗ್ಗದೇ ಹೋದದ್ದು ಬಸಣ್ಣಿಗೆ ಇಕ್ಕಟ್ಟಾಗಿ ಇರಸುಮುರಸಾಗಬಿಟ್ಟಿತ್ತೇನೋ, ಆ ದಿನ ದೇವರ ಖೋಲಿಯೊಳಗೆ ಕುಳಿತ ಆಯಿ, ಸಿಟ್ಟಾಗಿ ಇಕ್ಕರಿಸಲು ಹೇಳಿದ್ದೆ ತಡ, ಮೈಮ್ಯಾಲೆ ದೆವ್ವ ಹೊಕ್ಕವನಂತೆ ಆವೇಶದಿಂದ ಅಂಗಳಕ್ಕೆಳೆದು ಹಿಗ್ಗಾಮುಗ್ಗಾ ಥಳಿಸಿಬಿಟ್ಟ. ಅಂದೆ ಕಡೆ ಮುಂದೆ ಆಯಿ ಬದುಕಿರುವವರೆಗೂ ಬಸಣ್ಣಿಯ ಹೆಂಡತಿ ಗಂಡನಮನೆ ಮಾಡಲಿಲ್ಲ.

ಈ ಇದು ಹೀಗಾಗಿರಲು, ಕಾಮದಹನದ ದಿನ ಕರೀ ಸೆರಗಿನ ಮಸಣಿಯ ಸರಹದ್ದು ದಾಟಿಸಿ ಲಬೋಲಬೋ ಹೊಯ್ಕೊಳ್ಳುತ್ತಾ ಹಾಡಾಡಿಕೊಂಡು, ಕಾಮದೇವನ ರಂಡೇರನ್ನ ಬೈಯುತ್ತ ಹೊಲಸು ಹೋಳಿ ಪದ ಕಟ್ಟಿ ಹಾಡುತ್ತಿದ್ದ ಸರಿ ಸಮಯಕ್ಕೆ, ಎಲ್ಲವನ್ನು ತಿಳಿದು ತಿಳಿಯದಂತಿದ್ದ ಬಸಣ್ಣಿ ಚನ್ನಮಲ್ಲನ ಕಂಡು, ಗೋಣು ಚಲ್ಲಿಕೊಂಡೆ-ವಾರಿ ನೋಟದಾಗ ಗುರ್ರ ಅನ್ನುವ ಯಬಡತನ ಮಾಡಿಬಿಟ್ಟ. ಮಾತಿಲ್ಲ ಕತಿಯಿಲ್ಲ ಆಗಿದ್ದಲ್ಲ ಹೋದ್ದಲ್ಲ ಪಾಪದ ಪ್ರಾಣಿಯ ಮೈ ಕಾವೇರುವ ಹಾಗೆ ಹೊಡೆದು ಕಳಿಸಿದರು. ಮೊಮ್ಮಗನ ತಲೆಗೆ ತಣ್ಣೀರು ಪಟ್ಟಿ ಕಟ್ಟುತಾ ಆ ಮುದುಕಿ ‘ಅಬಲೆ ನಾ ಅಸಹಾಯಕಿ ಬಲವುಳ್ಳವರ ಓಸು ಉರಿದು ಉರಿದು ಹುರುಪಳಿಸಿ ಹೋಗಲ್ಯಪ್ಪ ಕಾಮಪ್ಪ’ ಅಂತ ಶಾಪ ಹಾಕುತ್ತಿದ್ದಳು. ಬಾಳ್ಯಾ ಹನಮಂತ ಇವರ ಹುಕುಮ್ ಕೇಳಿ ಕಾಯುತ್ತಿದ್ದ… ಆಯಿ ಅವನಿಗೆ ಸಾತ್ ಕೊಟ್ಟು ಒಂದ ಮಾತು ‘ನೀ ಹೇಳಿಧಂಗ ಕೇಳತೀವೀ’ ಅಂದಿದ್ದರ ಸಾಕಿತ್ತು ಕೇಸು ಬರೆಯಿಸಿ ಒಳಗೆ ಹಾಕಿಸಿ ಒದಿಸುವ ವಿಚಾರ ಮಾಡಿದ್ದ. ಮಾನಕ್ಕಂಜಿ ನಡೆವ ಆ ಹೆಂಗಸು ಬಾಳ್ಯಾ ಹನುಮನ್ನ ತಡೆದು ‘ಇದನ್ನ ದೊಡ್ಡದು ಮಾಡುದರಾಗ ಏನು ಸುಖಾ ಇಲ್ಲ ಸಾವುಕಾರ, ನಮ್ಮ ಮನಿ ಹೆಣಮಗಳು ನಮ್ಮ ಕೈಯೊಳಗ ಇಲ್ಲ, ಅವರಿವರ ಮಾತು ಕಟಗೊಂಡ ಮಾಡೋದೇನೈತಿ? ಅವನ ಹೆಂಡತಿ ಅಂವಗ ವಿಧಿ ಆಗಿ ಕುಂತಾಳು’ ಅಂತ ಉಸರಬಿಟ್ಟಿದ್ದಳು. ಹೆಂಗೋ ಕನಸ ಕಟಗೊಂಡುದ್ದು ಹಿಂಗಾಯ್ತಲ್ಲ ಅಂತ ಒದ್ದ್ಯಾಡತಿದ್ದ ಆಯಿ ಸೆರಗಿಗೆ ಟಯಪಾಡ ಅನ್ನೋ ಜೀವಕಂಟಕ ರೋಗ ಸುತಕೊಂಡಿತು. ಬೆನ್ನ ಕಾಯೋ ಬಳಗ ಇಲ್ಲಧಂಗ ಬಸಣ್ಣಿಯನ್ನ ಒಬ್ಬಂಟಿ ಮಾಡಿ, ಈ ಲೋಕದ ವಹಿವಾಟು ಮುಗಿಸಿ ಹೊಂಡಬೇಕಾದ ಹೊತ್ತು ನಿಚ್ಚಳ ಕಣ್ಣು ಮುಂದ ಬಂದದ್ದೆ ತಡ, ಆಯಿ ಆವತ್ತು ಅವ್ವನನ್ನ ಜೀವಬಗಿಸಿ ಕರೆಸಿ ಯಮುನಕ್ಕ ನನ್ನ ಮೊಮ್ಮಗ ಏನೊಂದು ಅರಿಯದ ಬಾಲ ಇದ್ದಾನ, ಬಸಣ್ಣಿ ಬದುಕ ಸಂಭಾಳಿಸೋರು ಯಾ ಇಲ್ಲಧಂಗ ಆಯ್ತು. ಅದರ ಹೊಟ್ಟಿ ನೆತ್ತಿಗಂತ ಹೊಲಮನಿ ಅದಾವು, ಆದರ ಅದಕ್ಕ ಲೆಕ್ಕ ತಿಳಿಯೋದಿಲ್ಲ. ಆ ಕೂಸಿನ ಕಡೆ ಸೊಲಪ ಲಕ್ಷ್ಯ ಕೊಟ್ಟಿರು. ಹಸದ ಬಂದಾಗ ಒಂದ ರೊಟ್ಟಿ ಕೊಡು. ನಿನ್ನ ಉಡಿಯೊಳಗಿಂದ ಅಂಗಳಕ್ಕ ಹಾಕಬ್ಯಾಡ…. ಗೊಳೋ ಅಂತ ಇಬ್ಬರು ಕಣ್ಣೀರಿಟ್ಟಿದ್ದರು. ಹಾಂಗ ನೋಡಿದರ ಅವರೇನು ನಮ್ಮ ಹತಗಡಿಯವರಲ್ಲ ಬರೀ ನೆರಮನಿಯವರಾಗಿದ್ದರು. ಮುಂದೆರಡು ದಿನದಲ್ಲಿ ಪಾಪ ಬಸಣ್ಣಿ ಅನಾಥನಾಗುಳಿದ.

ಆಯಿ ಮಣ್ಣಿಗೆ ಬಂದಿದ್ದ ದೀಬರದಿಂಡಿ ದಿನಕರ್ಮ ಮುಗಿಸಿ ಹೋದವಳು ಮೊನ್ನೆದಿವಸ ಧಿಡಿರಂತ ಪಂಚಾಯ್ತಿ ಕೆಲಸಕ್ಕ ಬಂದಿದ್ದಳು. ಘಾತಕದ ಬೇತ ಮಾಡಿಕೊಂಡ ಬಂದವಳು ಏನು ಸದರ ಮಾಡಿ ಮಾತಾಡಸತಿದ್ದಳು…ಬಿಸಿಬಿಸಿ ಅಡುಗೆ ಮಾಡಿ ಹಾಕಿದ್ದೇನು, ಮಾತ ಮಾತಿಗೂ ಗಂಡನ ಮುಂದ ಮಾಡಕೊಂಡು ಮಾತಾಡಿದ್ದೇನು, ಹೊಸ ಅರಬಿ ಹೊಲಿಸಿ ತೊಡಿಸಿದ್ದೇನು, ಹಂಚಿಕೆಯಿಂದ ಬದುಕ ಮಾಡೋ ಕನಸ ಕಟ್ಟಿದ್ದೇನು, ಅಬಬಬ ಆ ಎಂಟ ದಿನದ ನಂಟಿನ್ಯಾಗ ಬಸಣ್ಣಿ ಮರ್ಮಕ್ಕ ಪೆಟ್ಟ ಕೊಟ್ಟಿದ್ದಳು. ಹುಚಪ್ಯಾಲಿ ನನ ಗಂಡ ಅಂತ ಮೂಗು ಮುರಿದದ್ದವಳಿಗೆ ಇಂಥ ಬುದ್ಧಿ ಬಂದದ್ದರ ಬಗ್ಗೆ ಪರಿಚಯದವರು ಅನುಮಾನದಿಂದ ನೋಡಿದರೂ, ಆಕಿ ಸನ್ನಡತೆ ಕಂಡು ಸಂಶಯ ಬಿಟ್ಟು ನಂಬಿಕೆ ಇಟ್ಟಿದ್ದರು. ಆದರೆ, ದಡ್ಡ ಅನ್ನುವ ನಮ್ಮ ಕತಾನಾಯಕ ಮಾತ್ರ ಆಕೆಯನ್ನ ಎಳ್ಳಷ್ಟು ನಂಬಿರಲಿಲ್ಲ. ಈಗ ಚನ್ನಮಲ್ಲಯ್ಯನೂ ತನಗೆ ವಿಪರೀತ ಸಲುಗೆ ತೋರಿಸುತ್ತಲಿದ್ದದ್ದು ಮುಜುಗರ ಮಾಡುತ್ತಿತ್ತು. ಸಂಜಿ ಯಾಳೆಕ್ಕ ಪಿಚ್ಚರ್, ದಾರಾವಾಹಿ ನೋಡಲಿಕ್ಕಂತ ಮನೆ ಮನೆ ಬಾಗಿಲುಗಳಿಗೆ ಎಡತಾಕುತ್ತಿದ್ದ ಬಸಣ್ಣಿ ಮನೆಯ ವಾರಪಡಸಾಲೆಗೆ ಹೊಸದು ಕಲರ್ ಟಿವಿ ಬಂತು, ಖರೆ ಮೋಸದ ಖೆಡ್ಡಾಕ್ಕ ಬಿದ್ದದ್ದು ಇಲ್ಲಿಯೇ….ಅದ್ಯಾವ ಮಾಯದಾಗ ಸಹಿ ತಗೊಂಡಳೋ ಮಾಟಗಾತಿ, ಅನ್ನ ಹಾಕತಿದ್ದ ಹೊಲ ಊರ ಧಣಿಗೆ ಮಾರಿ ನೀರು ಕುಡಿದಿದ್ದಳು.

** ** ** **

ಠಾಣಾದ ರಸ್ತೆಯಲ್ಲಿ ಮುಖ ಇಟ್ಟು ಜುನಿಪೇಠ ಅಂಗಡಿಯ ಸಾಲುಗಳಲ್ಲಿನ ತರತರದ ಬಣ್ಣಗಳನ್ನು, ಥರಾವರಿ ವೇಷದ ಪೇಟೆಯ ಜನಗಳನ್ನು ಅದೆ ಮುಗ್ಧ ನೇತ್ರಗಳಿಂದ ನೋಡನೋಡುತ್ತ ಮೂರುಕತ್ರಿಯ ಮೂಲೆಯಲ್ಲಿರುವ ಸ್ಟೇಶನ್ ಮುಂದೆ ಬಂದು ನಿಂತ….. ಕಮಾನಿಗೆ ಹೆದೇರಿಸಿಕೊಂಡು ಹಬ್ಬಿದ್ದ ಬಳ್ಳಿಯೊಂದರಲ್ಲಿ ಪೇಪರ್ ಹೂಗಳು ಪಕಳೆ ಪಕಳೆ ರಂಗೇರಿ ಅದರ ನಡುವೆ ಕೆಮ್ಮಣ್ಣಿನ ಕಟ್ಟಡ ಕಾಣಿಸಿತು. ಎರೆಮಣ್ಣಿನ ಹೊಲದ ತಕರಾರು ಬರೆಸಬೆಕಾದದ್ದು ಕೆಮ್ಮಣ್ಣಿನ ಆಫಿಸಿನಲ್ಲಿ, ಕೆಮ್ಮಣ್ಣು, ಹುರಮಂಜು ಬಳೆಸಿ ಚಿತ್ರ ಬರೆಯುವುದು ಕಾರಹುಣ್ಣಿವೇಲಿ ಮಾತ್ರ. ಬೆದರಿಸುವ ಜನರ ಗದ್ದಲಕ್ಕೆ ಕಂಗಾಲಾಗಿಯೇ ದಿಕ್ಕಾಪಾಲಾಗಿ, ಹರಿಗ್ಗಾಲು ಕೊಟ್ಟು ಓಡುವ ಕೆಂದೆತ್ತಿನ ಮತ್ತು ಬಿಳಿ ಎತ್ತುಗಳ ಪರಿಪಾಟಲು ಇವನದೂ ಆಗಿತ್ತು. ಕೊಂಡವಾಡ ದೊಡ್ಡಿಯಂತಿದ್ದ ಆ ಬಾಯ್ತೆರೆದಿದ್ದ ಬಾಗಿಲ ನಡುವಿನಿಂದ ಯಾರೊ ನಡೆದು ಎದುರು ಬಂದು ನಿಂತಂತಾಯ್ತು. ಒಳ ಹೋಗಿ ಏನೆಲ್ಲ ಹೇಳಬೇಕೆಂದು ಧೇನಿಸುತ್ತಿದ್ದನೋ ಅದೆ ಮರೆತು ನಿಜಕ್ಕೂ ಪೆಂಗನಂತಾದ. ಅಡಿಮುಡಿ ಏಕಾಗಿ ನಡುಕ ಶುರುವಿಟ್ಟಿತು. ಫರ್ಯಾದಿಯ ಮಾತು ಹಾಗಿರಲಿ ಆ ಪೋಲಿಸನ ಕಣ್ಣತಪ್ಪಿಸಿ ಪಾರಾಗಲೂ ತಿಳಿಯದಾಗಿ ಕುಗ್ಗಿಹೋದ. ಇಳಿಸಂಜೆಯ ಸೂರ್ಯ ರಾಮನಕೊಳ್ಳದ ಆಳದೊಳಗೆಲ್ಲೋ ಜಾರಿಕೊಂಡು ದಟ್ಟಕಪ್ಪು ಮೆಲಕಾಸೆ ದಟ್ಟೈಸಿ ಬರುವ ದಾರಿಗೆ ಮಿನುಕು ಬೆಳಕಿನ ದೀಪಗಳು ಒಂದೊಂದೆ ಊರೆಲ್ಲ ಹೊತ್ತಿಕೊಳ್ಳತೊಡಗಿದವು. ದಿನವೆಲ್ಲ ಒಂದ ತೊಟ್ಟು ನೀರು ಮುಟ್ಟಿರದ ಕರುಳಿನ ಗರಗುಡುವ ಹೊಟ್ಟೆ ಸದ್ದಿಗೂ ಪೋಲಿಸಿನವನ ಜಬರದಸ್ತಿನ ಮಾತಿಗೂ ಸರಿ ಹೋಯ್ತು…. ‘ಏನಲೇ,ಯಾರನೀ, ಏನಾಗಬೇಕಿತ್ತು?’ ಪೋಲಿಸಿನವರೇನು ನಮ್ಮನಿಮ್ಮಂಗ ಮನುಷ್ಯರೆಂದು ಯುವಕ ಸಂಘದ ಹುಡುಗರು ಹೇಳಿದ್ದು ಹುಡಗಾಟಿಕೆಗಾಗಿ ಎಂಬುದು ಖಾತ್ರಿ ಮಾಡಿಕೊಂಡವನಿಗೆ, ಸಗತಿ ಇಲ್ಲದಂತಾಗಿ ನಿತ್ರಾಣಗೊಂಡ. ಹಸಿವಾಗ್ಯದ.. ಒಂದೆ ಶಬ್ದ. ಕಿಸೆಯ ಚುಂಗಿನತನಕ ಕೈಯಾಡಿಸಿ ಒಂದರ ಗಟ್ಟಿ ನೋಡಿ ಎತ್ತಿ ಎಸೆದು ‘ಚಾ ಕುಡಿ’ ಎಂದ. ಆಗ ಆ ಊರಿನ ಆ ಬೀದಿ ಬೆಳಕಿನ್ಯಾಗ ತಾ ತೊಟ್ಟ ಮೈಮ್ಯಾಲಿನ ದಿರಿಸು ಹೊಸ ಬಣ್ಣದಾಗ ಅದ್ದಿ ತೆಗೆದ ಹೊಸ ಅಂಗಿ ಆಗಿ ಕಾಣತೊಡಗಿತು. ಚಣಹೊತ್ತು ಆ ಪ್ಯಾಟಿ ಪಟ್ಟಣದ ನಿತ್ಯ ಬದುಕಿನ್ಯಾಗ ತಾನೂ ಕರಗಿ ಹೊಸ ಮನಶ್ಯಾ ಆದ ಅನುಭವ ಏಕಾಂತದೊಳಗಡರಿತು.

ಹೊಟ್ಟೆಯ ತಾಳ ದಿನವಿಡೀ ಡುಮುಡುಮು ಡುರುಗುಟ್ಟಿತ್ತು ಖರೆ, ಅನಾದಿ ಕಾಲದ ಆಸ್ತಿ ಕೈತಪ್ಪೀತು ಕೂಸ ಹುಷಾರು ಎಂದು ಹೇಳಿದ್ದ ಆಯಿಯ ಮಾತು ಅವಳ ಸಾವಿನ ಬೆನ್ನಿಗೆ ಅಟಕಾಯಸಿದ್ದು ಮನಸಿನ ಇಂಬನ್ನ ಕಿರಿದು ಮಾಡಿ ಎಲ್ಲೋ ಹಗ್ಗ ಕೊಟ್ಟು ಕೈ ಕಟ್ಟಿ ಹಾಕಿಸಿಕೊಂಡಂತಾಗಿತ್ತು. ಕತ್ರಿ ಕಾಲು ತಳಕು ಮಾಡಿಕೊಂಡು ಒಪ್ಪಾಟೆ ಬಾಗಿಲಿಗೆ ಒರಗಿ ನಿಂತಿದ್ದ ಪೋಲಿಸಪ್ಪ ‘ಯಾರ ನೀನು ಏನಬೇಕಿತ್ತು’ ಅಂದ. ಆ ಅವಾಜ್ ಕೇಳಿ ಹೀಗೀಗೆ ಹೀಗೆ ಅಂತ ಫಿರ್ಯಾದಿ ಕೊಡಲು ಹೆಣೆದುಕೊಂಡಿದ್ದ ಮಾತು ಕೋಳಿಪುಕ್ಕ ಉದುರುವಂತೆ ತಟಕ್ಕನೆ ಹಾರಿ, ತಲೆಯಲ್ಲ ಖಾಲಿಯಾಗಿ ಬರಿ ಹೊಟ್ಟೆಯ ಹಸಿವೊಂದೆ ಮಾತಾಗಿ ಮೂಡಿತು. ‘ಹಸಿವಾಗ್ಯದ’ ಅನ್ನುತ್ತಿದ್ದವ ಹಲ್ಲಾಗಿನ ಮಾತು ದವಡೆಯೊಳಗೆ ಒತ್ತಿಕೊಂಡ… ಆಯಿ..ಹೊಲ, ನನ್ನ ಹೆಂಡತಿ ಅಂತ ಏನೇನೋ ತಡವರಿಸಿ ಕಂಪ್ಲೀಟ್ ಬರಕೊಳ್ರೀ ಅಂದ, ಅಂವ ತನ್ನ ಚೊನ್ನದ ಕಿಸೆಯಿಂದ ಮೊಬೈಲ್ ತೆಗೆದು ಹಲೋ, ಹಲೋ ಹೇಳುತ್ತಾ ಕಂಪೌಂಡಿನ ತುದಿಗೆ ಹೋದಂವ ಬಸಣ್ಣಿ ಮಾತು ಕೇಳಿಸಿಕೊಳ್ಳಲೇ ಇಲ್ಲ. ಕಾಯುತ್ತ ನಿಂತ ಇವನು ಹೀಗೆ ಇಲ್ಲಿ ಫಿರ್ಯಾದಿ ಹೇಳಲು ಮತ್ತೆ ಮಾತು ಹೊಸೆಯಲು ತೊಡಗಿದ… ಒಳಗೆ ಕತ್ತಲು, ಕತ್ತಲು ಕೋಣೆಯೊಳಗಿಂದ ಯಾರೋ ಕೆಮ್ಮಿದ್ದೊಂದು ಕೇಳಿಸಿದ್ದೆ ಅಲ್ಲಿ ಹಣಿಕಿದ-ಯಾರೂ ಕಾಣಿಸಲಿಲ್ಲ. ಭುಜದ ಮ್ಯಾಲೆ ಕೈ ಇಟ್ಟ ಪೋಲಿಸಪ್ಪ ‘ಯಾವೂರೂ ?’ ಕೇಳಿದ. ‘ಸಂಕದಾಳ ನಮ್ಮೂರು ಸಾಹೆಬರ’ ‘ಇರಲಿ ಹಸಿವು ಆಗ್ಯದ ಅಂದೆಲ್ಲ, ತಗೊ ಈ ರೊಕ್ಕ, ಚಾ ಕುಡದು ಬಸ್ಸ ಹತ್ತು’ ಅಂದವನೆ ಅಂವ ದುಡುದುಡು ಒಳಗೆ ನಡೆದುಬಿಟ್ಟ. ಹಳವಂಡಗಳಿಗೆಲ್ಲ ಧಿಡಿರಂತ ಬಾಗಲು ಮುಚ್ಚಿಧಂಗಾಗಿ ಖರೇನ ದಿಕ್ಕ ತೋಚಲಿಲ್ಲ. ‘ಏ ಪೋಲಿಸಮಾವಾ ನಿನ್ನ ರೊಕ್ಕ ನನಗ ಬ್ಯಾಡ ನೀನ ತಗೋ’ ಹಸಿವಿನ ಸಂಕಟಕ್ಕೆದರಾಗಿ ಕೊಟ್ಟ ಚಿಲ್ಲರೆಯನ್ನ ಅವನು ಹೋದ ದಿಕ್ಕಿಗೆ ತೂರಿ ಸರ್ರನೆ ಜುನಿಪೇಠ ಹಾದಿ ತಪ್ಪಿಸಿ ಹೊಳೆ ಹಾದಿಗುಂಟ ಓಡತೊಡಗಿದ.

ತೇರಬಜಾರ ಕಡೀ ಮನಿಯ ಮಹಡಿ ಮ್ಯಾಲ ಬಾಡಿಗೆಗಿದ್ದ ನನಗ ಅವತ್ತು ಯಾಕೋ ಪುಸ್ತಕದ ಯಸನ ತಪ್ಪಿಧಂಗಾಗಿತ್ತು. ಎನು ಅಂದ್ರ ಏನೂ ರುಚಿ ಹತ್ತಲಾರದ ತಳಮಳದ ಮನಸಿಟ್ಟಕೊಂಡು ‘ಇದು ಸೋಂಬೇರಿ ದಿನ’ ಅಂತ ಆಚರಿಸಲಿಕ್ಕಾಗಿ ಮೂರು ಸಂಜಿಗೆ ಮಾಳಿಗೆ ಹತ್ತಿ ಕೂತು ದೊಡ್ಡ ಬರಹಗಾರನಾಗುವ ಕನಸು ಕಾಣುತಲಿದ್ದೆ. ಗಸ್ತಿನ ಪೋಲಿಸ ಎದುರು ಸಿಕ್ಕಿದ್ದನ್ನು ಗಮನಿಸುತ್ತ ಬಜಾರದ ಜನಜಂಗುಳಿಯೊಳಗ ಮುಖ ಮರೆಸಿಕೊಳ್ಳುತ್ತ, ಬೇಲಿಯ ಓತಿಕ್ಯಾತದ ಹಾಗೆ ಆಚೀಚೆ ಹಣಿಕುತ್ತಿದ್ದ ಸಂಭಾವಿತ ಬಸಣ್ಣಿ ಕಾಣುತ್ತಲಿರುವವ ಯಾರಿವ? ದಟ್ಟಿಸಿ ಕಂಡದ್ದು-ಅಂದುಕೊಂಡುದ್ದು, ಅದೇ ಅವನೆ ಹ್ಞೂ ಬಸಣ್ಣ ಅನ್ನೋದು ಖಾತ್ರಿಯಾಯ್ತು. ಕೂಗಿ ಕರೆದರೆ ಕಿವಿ ಮಂದ ಕೇಳಿಸುತ್ತೋ ಇಲ್ಲವೋ? ಅನುಮಾನಿಸುತ್ತಲೆ ಮೆಟ್ಟಿಲಿಳಿದು ಬಂದು ನೋಡುವುದರೊಳಗೆ ಆತ ಅಲ್ಲಿಂದ ಕಾಲ್ಕಿತ್ತಿದ್ದ. ಪ್ಯಾಟೆಯ ಜನಸಂದಣಿಯಲ್ಲಿ ಗಪ್ಪಗಾರ ಆದವನನ್ನ ಹುಡುಕುವುದು ಆಗದ ಕೆಲಸ ಖರೆ, ಪಾಪದ ಮನಷ್ಯಾ ಎಲ್ಲಿ ಹೊಂಟಿದ್ದ, ಮತ್ತ ಈ ರಸ್ತಾಕ್ಕ ಯಾಕ ಬಂದಿದ್ದ, ಆಯಿ ಇದ್ದಾಗ ಉಳ್ಳಾಗಡ್ಡಿ ಮಾರಲಿಕ್ಕ ಮುದುಕಿ ಸಂಗಾಟ ಈ ಕಡೆ ಬಂದಿದ್ದನ್ನೊಮ್ಮೆ ನೋಡಿದ್ದೆ. ಹಂಗೇನಾದರೂ ಕಾಯಿಪಲ್ಲೆ ತಂದಿದ್ದನೇನು? ಅರೆ ಈ ಸಂಜೀ ಯಾಳೆಕ್ಕ ವ್ಯಪಾರ ಏನು ಮಾಡತಾನ! ಅಲ್ಲ ಅವನಿಗೆ ಈ ರೊಕ್ಕದ ವ್ಯವಹಾರ ಏನೇನು ಗೊತ್ತಾಗೋದಿಲ್ಲ….! ಮಾರಾಟದ ಹೊಯ್ಯನಯ್ಯ ಪೂತರ್ಾ ದಲಾಲರ ಹನ್ಮಂತ ನೋಡಕೊಳ್ಳುವಾಗ ಇಂವ ಯಾಕ ಬಂದ ? ಅನ್ನೋದು ತುಸ ತಲೆಕೆಡಿಸಿತು. ಒಂದ ಮಾಡಿ ಹೋದರಾಯ್ತು ಅಂತ ಸಾರ್ವಜನಿಕ ಪಾಯಖಾನೆಯೊಳಗ ಹೋದರೆ, ಆ ಗಬ್ಬುವಾಸನೆಯ ಸಂದಿಯ ಮೂಲೆಯೊಂದರಲ್ಲಿ ನೋಡಿಯೂ ನೋಡದಂತೆ ಧೋತಿಯ ಚುಂಗನ್ನೆತ್ತಿ ಮುಸುಕು ಮಾಡಿಕೊಳ್ಳುತ್ತಿದ್ದ ಬಸಣ್ಣಿ ಮರೆಯಾಗಿ ಕುಳಿತಿದ್ದ. ಪೋಲಿಸರಿಗೆ ಹಿಡಿದು ಕೊಡೋದಿಲ್ಲ ಅಂತ ನಂಬಿಸಿ ಕರೆದುಕೊಂಡು ಬರಲು ತಾಸ್ಹೊತ್ತಾಯಿತು.

ಅವನು ಕಣ್ಣೀರು ತೆಗೆದು ಅತ್ತಿದ್ದನ್ನೆ ಕಂಡಿರದ ನಾನು ಆ ದಿವಸ ಅವನ ಕಣ್ಣಲ್ಲಿ ಕರಳು ಸಂಕಟದ ಅಳುವನ್ನು ಕಂಡಾಗ ನನಗೂ ಅಳು ಬಂದಿತ್ತು. ದೂರದೂರಿಗೆ ಓಡುತ್ತಿದ್ದುದಾಗಿ, ಮುಂದೇನು? ಮುಂದೆಲ್ಲಿ ಎಂಬ ಅರಿಲ್ಲದೆ ಹೊರಟಿದ್ದಾಗಿ, ಮುಂದಿನದೇನನ್ನು ಕೇಳಬೇಡ ಎಂಬಂತೆ ಗಳಗಳ ಅಳತೊಡಗಿದ. ಹ್ಞೂ ಬಸಣ್ಣಿಯ ದೀರ್ಘ ಮೌನದಲ್ಲಿ ನನಗೆಂದೆ ನೂರೆಂಟು ಆಲೋಚನೆಗಳು ಹುಟ್ಟಿಕೊಂಡವು. ಅನ್ಯಾಯದ ಈ ನಡೆಯನ್ನ ಅಧಿಕಾರದ ಮುಂದಿಡುವುದು ಸುಲಭದ ಮಾತಲ್ಲ, ಯಾಕೆಂದರೆ ಕಾನೂನಿನ ನೆರಳಲ್ಲಿ ಅವಳು ಸಂಪೂರ್ಣ ಸುರಕ್ಷಿತಳು. ಊರಿನ ದೈವದೆದುರು ನ್ಯಾಯ ಕೇಳುವುದು ಅವಳ ಜಯಕ್ಕೆ ಸರಳವಾದ ದಾರಿ ಹಾಕಿಕೊಟ್ಟಂತಾಗುತ್ತದೆ, ಏನಂದರೆ ಖರೀದಿಸಿದವನೆ ಅಲ್ಲಿ ನ್ಯಾಯ ಹೇಳುವವ. ಊರಿನ ಉಡಿಯೊಳಗೆ ಕಾದು ಕುಳಿತಿರುವ ಕೆಲ ಕಿಡಿಗಳೂ ದೋಷಪೂರ್ಣರೇ…. ಹಿಂದೊಮ್ಮೆ ಊರಿಗೆ ಎದುರಾಗಿ ಮನೆಯ ಬಾಗಿಲನ್ನು ಬಿಟ್ಟುಕೊಂಡಿದ್ದ ದಲಿತರ ಕೇರಿಯ ಇಳಕಲ್ ಮಾಸ್ತರರ ಮನೆಯನ್ನ, ಇದೆ ದೈವ ತನ್ನೆಲ್ಲ ಓರೆಕೋರೆಯ ಸರಿಪಡಿಸಿಕೊಂಡು ಒಂದಾಗಿ, ಮಾಡು ಹಾಕಿದ್ದ ಬಂಗಲೆಯನ್ನ ನೆಲಸಮ ಮಾಡಿತ್ತು. ಗೆದ್ದೆತ್ತಿನ ಬಾಲ ಬಡಿಯುವ ನೀಚತನದಿಂದಾಗಿ ಅಂದುಕೊಂಡದ್ದೆಲ್ಲ ಢುಮುಕಿ ಹೊಡಿಯುತ್ತಲೆ ಬಂದಿರುವುದರಿಂದ ಸಮಾಜದೊಂದಿಗೆ ನ್ಯಾಯ ಕೇಳುವುದು ಈ ಅನಾಥ ಒಬ್ಬಂಟಿಗನ ನೀರತನ ಅಲ್ಲ ಅನ್ನಿಸಿತು. ಮಾದಣ್ಣ ನನಗ ಹೋಗಲಿಕ್ಕ ಬಿಡು, ನಾ ಯಾವಲ್ಯರ ದೂರ ಹೊಕ್ಕೀನಿ ಅಂದ. ಸಮಾಧಾನ ಮಾಡಿ ಊಟ ಮಾಡಿಸಿ ಮಲಗಿಸಿ ನಾನು ಮಲಗಿದರೂ ನನ್ನೊಳಗಿನ ಕಾವು ನಿದ್ದೆಯನ್ನ ಒಪ್ಪಿಕೊಳ್ಳಲಿಲ್ಲ.

ಮಳ್ಳಾಮರುದಿನದ ಎಂಟರ ಬಸ್ಸಿಗೆ ಅವನೊಂದಿಗೆ ಊರು ಸೇರಿದಾಗ ನೋಡುತ್ತಿದ್ದವರ ಕಣ್ಣುಗಳಲ್ಲಿ ಕೌತುಕ ತುಂಬಿಕೊಂಡಿತ್ತು. ಏನು ಅಲ್ಲದ ನಾನು ಅದ್ಯಾತರ ಕಿತಾಪತಿಗೆ ಕಾರಣನಾಗುವೆನೋ ಎಂಬುದು ಅಪ್ಪನ ಚಿಂತೆ. ಮುಖ ತೋರಿಸಲು ಹಿಂದೇಟು ಹಾಕುತ್ತಿದ್ದ ಅವನು ತನ್ನ ಮನೆಯತ್ತ ಹೆಜ್ಜೆ ತುಳಿದಾಗ ಮೊಹರಮ್ ಹಬ್ಬದ ಫಿರಫಕೀರನಂತೆ ‘ಬಂಬಲೆರೆ ಆಯಿಂಬೋ ದಿನ್ನ’ ಅಂತ ದೇವರ ಕುದುರೆಯಾಗಿ ಮನೆಮನೆ ತಿರುಗಿ ಬೇಡಿತಿನ್ನುವವನ ಹಾಗೆ ಕಾಣತೊಡಗಿದ. ಅಲ್ಲೇ ಕಟ್ಟೆ ಮ್ಯಾಲೆ ಕುಳಿತು ಯಾವನದೋ ತಲೆಯನ್ನ ಚರಚರ ಬೋಳಿಸುತ್ತಿದ್ದ ಅಪ್ಪ ನನ್ನ ಹಿಂದಿನಿಂದಲೆ ಮನೆಗೆ ಬಂದ. ಕೆಕ್ಕರಿಸಿಕೊಂಡು ನೋಡುತ್ತಿದ್ದ ಅಪ್ಪ ‘ನೀನಿನ್ನೂ ಊರ ಉಸಾಬರಿ ಕಾಯಕ ಬಿಟ್ಟಿಲ್ಲ’ ಎಂದು ಕೆಣಕಿದ. ಅವ್ವ ‘ಏನಾಯ್ತು, ಯಾಕ ಮತ್ತೇನು ಲಿಗಾಡ ಮೈಮ್ಯಾಲ ಎಳಕೊಂಡಾನು?’ ಕೇಳಿದಳು. ‘ನಿನ್ನ ಮಗ ಊರ ನ್ಯಾಯಾಧೀಶ ಆಗಾವನಿದ್ದಾನ ನೋಡು, ಲೇ ತಮ್ಮ ನಾವು ಆಯಗಾರರು, ರೈತರು ಕೊಟ್ಟ ಆಯಾ ಅಳಿಸಿಕೊಂಡು ಈ ಗೇನು ಹೊಟ್ಟಿ ತುಂಬಿಸಿಕೊಳ್ಳೋರು. ನಮ್ಮಂತವರಿಗಲ್ಲ ಇಂತದ್ದೆಲ್ಲ, ನೀನು ತಿಳಿದವ, ಸಾಲಿ ಬರದಂವ. ನೀ ಹಿಂಗ ಮಾಡಕೋತ ಹೊಂಟರ ಊರಾಗಿನ ಒಕ್ಕಲಿಗ್ಯಾರ ಮಂದಿನ್ನ ಎದರ ಹಾಕ್ಕೊಂಡು ಬದಲಿಕ್ಕಾಗತದ ಏನಲೇ…?’ ಅಡಕತ್ತರಿಯಲ್ಲಿ ಸಿಕ್ಕವನಂತಿದ್ದ ಅಪ್ಪನ ಮಾತಿನ ಅರ್ಥ ನನಗೆ ತಿಳಿಯಿತು. ಮನೆಯಿಂದ ಹೊರಬೀಳಬಾರದೆಂದು ತಾಕೀತು ಮಾಡಿ ಅಪ್ಪ ತನ್ನ ಅರಕಳಿಯಾಗಿದ್ದ ಕೆಲಸ ಪೂರೈಸಲು ಹೋದ. ಮುಂದಿನದು ಹೇಳಬೇಕಿಲ್ಲ, ಜಗತ್ತಿನ ಎಲ್ಲ ತಾಯಂದಿರರಂತೆ ನನ್ನ ತಾಯಿಯು ಬುದ್ಧಿ ಹೇಳಲು ಶುರುಮಾಡಿದಳು. ಬಸಣ್ಣಿಗೆ ಯಾವ ಗೋಜುಗೊಂದಲದ ಅಸಮಾನತೆ ಮೋಸಗಳು ತಿಳಿಯದು ಹಾಗಾಗಿ ಅವನಂತಿರುವವರು ನಿರಂತರವಾಗಿ ಕುಗ್ಗುತ್ತಲೆ ಇರುತ್ತಾರೆ.

** ** ** **

ಅತ್ತ ಕಂಪ್ಲೇಂಟ್ ಕೊಡುವ ಉಮೇದಿನಲ್ಲಿ ಬಸಣ್ಣಿ ರಾಮದುರ್ಗ ತಲುಪುವುದರೊಳಗೆ ಇಲ್ಲಿ ಅವನ ಹೆಂಡತಿ ಮನೆಯನ್ನ ಖಾಲಿ ಮಾಡಿಕೊಂಡು ತವರಮನೆ ಸೇರಿಕೊಂಡಿದ್ದಳು. ತಾನು ತಂದಿದ್ದ ಷೋಕಿ ಉಡುಗೊರೆಗಳ ಜೊತೆಯಲ್ಲಿ ಆಯಿ ಉಳಿಸಿಕೊಂಡು ಬಂದಿದ್ದ ವಸ್ತುಗಳನ್ನು ಲಾರಿ ತುಂಬಿಸಿಕೊಂಡು ಒಯ್ದಿದ್ದಳು. ಕೇಳಿದವರಿಗೆಲ್ಲ ಬಸಣ್ಣಿಯನ್ನು ಅಲ್ಲಿಯೇ ಉಳಿಸಿಕೊಳ್ಳುವುದಾಗಿ ಮತ್ತು ತಮ್ಮೂರಿನ ಸಕ್ಕರಿ ಫ್ಯಾಕ್ಟರಿಯಲ್ಲಿ ಕಾವಲುಗಾರನ ಕೆಲಸ ಕೊಡಿಸುವುದಾಗಿ ಹೇಳಿದ್ದಳು.

ಮನೆಯ ಅಂಗಳದಲ್ಲಿ ಗೌಡರ ಅಳಿಯನ ಆಳುಗಳು ಒಳ ಹೊರಗೋಡಾಡುತ್ತ, ನೀರಿಗೆ ಸುಣ್ಣ ಕಲಿಸುತ್ತ, ಗೋಡೆಗಂಟಿದ್ದ ಧೂಳು, ಜೇಡರಬಲೆ ತೆಗೆಯುತ್ತ ಹೊಸ ಮನೆಯ ಸಿಂಗಾರದಲ್ಲಿ ತೊಡಗಿದ್ದರು. ನಿಜಕ್ಕೂ ಅವಾಕ್ಕಾದ ಬಸಣ್ಣಿಯ ಕಣ್ಣು ಏನನ್ನೂ ನಂಬದಾಗಿದ್ದವು. ಪಂಚಾಯತ್ ತಂದಿಟ್ಟ ರಾಜಕಾರಣದಲ್ಲಿ ಗೌಡ, ಬಾಳ್ಯಾ ಹನುಮಂತ ಒಂದ ಕಡೆಗಿದ್ದರ, ಆ ದೇಸಾಯಿ ಮತ್ತು ಚನ್ನಮಲ್ಲ ಇನ್ನೊಂದು ಪಕ್ಷದೊಳಗಿದ್ದರು. ಕರೀ ಹೆಬ್ಬಾವೊಂದು ಹಾಡ ಹಗಲಲ್ಲಿ ಬಸಣ್ಣಿಯನ್ನ ನುಂಗುತಲಿತ್ತು. ಅದರ ಬಾಯೊಳಗ ಒಂದೂ ಚೂಪಾದ ಮುಳ್ಳಿರಲಿಲ್ಲ ಅಂದರೂ ಮೈಯಲ್ಲ ವಿಷವಾದ ಹಾವು. ಆಯಿ ಹೊಲಿದಿಟ್ಟಿದ್ದ ಹೊಸ ಕೌದಿ ಅಲ್ಲಿ ಸುಣ್ಣ ಸವರುವ ಕೈ ಸಾರಿಕೆ ಆಗಿತ್ತು. ಅತ್ತೆಬಿಡುತ್ತಾನೇನೋ… ಅನ್ನುವಷ್ಟರಲ್ಲಿ ಕಿರುಚಾಡಿದ. ಕುಸ್ತಿ ಮಾಡುವವನಂತೆ ಮುನ್ನುಗ್ಗಿ ಆಯಿಯ ಹಾಸಿಗೆಯೊಂದನ್ನು ಕಸಿದುಕೊಂಡ. ಮಾಡದಲ್ಲಿದ್ದ ಹಳೆಯ ಎಕ್ಕಡದಿಂದ ಮೈಯಲ್ಲ ಹಣ್ಣು ಹಣ್ಣಾಗುವಂತೆ ಬಡಿದುಕೊಂಡ. ಅವನ ಸಂಕಟದ ಮಡವು ಒಡೆಯದೇ ಹೋಯಿತು, ನಗತೊಡಗಿದ, ನೆಲವನೊದ್ದು ಕುಣಿಯತೊಡಗಿದ. ತೊಟ್ಟಿದ್ದ ಅಂಗಿಯನ್ನ ಬಿಚ್ಚಿ ಗೌಡನ ಮುಸುಡಿಗೆ ಗುರಿಯಿಟ್ಟು ಒಗೆದು ಬೆತ್ತಲಾಗಿ ಮತ್ತೆ ಓಡತೊಡಗಿದ. ಅಲ್ಲಿ ನೆರೆದವರಲ್ಲ, ಖುದ್ದ ಗೌಡರೂ ಅದನ್ನು ಕಂಡು ಮಮ್ಮಲ ಮರುಗಿರಬಹುದು. ಹುಚ್ಚು ಹಿಡಿಯಿತೆಂದು ಸುದ್ದಿಯಾಗಲು ಹೆಚ್ಚು ಹೊತ್ತು ಹಿಡಿಯಲಿಲ್ಲ.

ಸಂಕದಾಳ ಊರು ಹುಟ್ಟಿದಾಗಿನಿಂದ ಹಿಡಿದು ಈತನಕದ ಇತಿಹಾಸದೊಳಗೆ ಇಂಥ ಹುಚ್ಚು ಅದೆಷ್ಟು ಜನಕ್ಕೆ ಹಿಡಿದಿದೆಯೋ ಗೊತ್ತಿಲ್ಲ ಆದರೆ ನಿರಂತರವಾಗಿ ಈ ತೆರನಾದ ಘಟನೆಗಳು ಘಟಿಸುತ್ತ ಬಂದಿವೆ ಅನ್ನೋದು ಜನಮಾನಸದಲ್ಲಿ ನೆಲೆನಿಂತ ಸತ್ಯವಾಗಿತ್ತು. ಅದಕ್ಕೆ ಹೊರತಾಗಿ ನನ್ನ ಮನೆಯ ಕತೆಯೂ ಇಲ್ಲ. ಆ ದಿನ ಅವನೆಲ್ಲಿ ಹೋದನೋ ತಿಳಿಯದು. ಗಾಳಿ ಸುದ್ದಿಯಲ್ಲಿ- ಅಲ್ಲಿ ಕಂಡೆವು, ಇಲ್ಲಿ ಹೊಂಟಿದ್ದ, ಚನ್ನಮಲ್ಲನ ಅಂಗಡಿ ಮುಂದೆ ಹೊಂಚು ಹಾಕಿ ಕುಳಿತಿದ್ದ, ಹೆಂಡತಿಯ ಊರ ದಾರಿಯಲ್ಲಿ ಸಿಕ್ಕಿದ್ದ, ಗೌಡರ ಮನೆಯ ಮುಂದೆ ಓಡಾಡುತ್ತಿದ್ದ…ಹಿಂಗ ಏನೇನೋ ಗಾಸಿಪ್ಗಳು. ಮಾರನೆ ದಿನ ಟಪಾಲುಗಾಡಿ ಬಂದು ಹೋದ ನಂತರ, ನನ್ನದ್ಯಾವುದಾದರೂ ಪೋಸ್ಟ ಬಂದಿದ್ದರೆ ಅಂತ ಅಂಚೆಕಛೇರಿಯತ್ತ ಹೋಗಿದ್ದೆ. ಇನ್ನೂ ಬಸವಣ್ಣನ ಗುಡಿ ದಾಟಿರಲಿಲ್ಲ, ಎಳಸಲು ಹುಡುಗರಿಂದ ಹಿಡಿದು ಹೆಂಗಸರು, ದೊಡ್ಡವರು, ಮುದುಕರವರೆಗೆ ಊರ ನಾಗರಿಕರೆಲ್ಲ ಅಜ್ಜಪ್ಪನ ಗುಡ್ಡದ ಕಡೆ ಓಡುತ್ತಿರುವುದು ಕಾಣಿಸಿತು….ಆತಂಕಗೊಂಡು ಓಡುವ ಕುರಿ ಮಂದೆಯೊಳಗೆ ನಾನು ಸೇರಿಕೊಂಡು ಉದ್ದಾನುದ್ದದ ಟವರ್ ಕೆಳಗೆ ನಿಂತೆ, ತಲೆಯತ್ತಿ ನೋಡಿದರೆ ಟವರ್ ತುದಿಯಲ್ಲಿ ಬೆತ್ತಲೆ ಬಸವ ನಿಂತಿದ್ದ.

ಅಲ್ಲಿ ಆಯಿ ಕಾಣತಿದ್ದಾಳ, ಕಲ್ಲಿಲ್ಲದ ಮುಳ್ಳಿಲ್ಲದ ಹೂವಿನ ಹಾದಿಯೊಳಗ ಶಿವನ ಭಜನಿ ಮಾಡಕೊಂಡು ಹೊಂಟಿದಾಳ..ಕೇ..ಹೋ ಎಂದು ಕೂಗುತ್ತಿದ್ದ. ಅಲ್ಲಿ ನೋಡ್ರಪಾ.. ಸೀಬಿ ಕಾಕಾ ಪಂಡರಪುರದ ದಿಂಡಿ ಮ್ಯಾಳದಾಗ ಒಂದಾಗಿ ಕುಣಿತಿದಾನ ಅಂವ ಇದ್ದಿದ್ದರ ನನ್ನ ಮನಿ-ಹೊಲ ಉಳಿಸಿಕೊಡತಿದ್ದ ಅಂತ ಹೇಳುತ್ತಲೇ ಆಕಾಶಕ್ಕ ಮುಖ ಮಾಡಿ ಥೂ ಎಂದು ಉಗುಳಿದ. ಉಗಿದ ಎಂಜಲು ತನ್ನ ಮಾರಿಯ ಮ್ಯಾಲೆ ಬೀಳುತಲೆ ಚಲ್ಲಾಟಿಗೆ ಸುರುಮಾಡಿದ, ಉಗಿಯೋದು ಒರೆಸಿಕೊಳ್ಳೊದು ಸತತ ನಡೆಸಿಬಿಟ್ಟಿದ್ದ. ಕೆಳಗೆ ನಿಂತ ಗಂಡಸರ್ಯಾರೂ ಮ್ಯಾಲೇರುವ ಧೈರ್ಯ ಮಾಡಲಿಲ್ಲ. ಯಾಕಂದ್ರ ಹುಚ್ಚರಿಗೆ ನಮಗಿಂತ ನಾಲ್ಕಪಟ್ಟು ಜಾಸ್ತಿ ಕಸುವು ಇರತದ ಆದ್ದರಿಂದ ಅವನೇನಾದರೂ ತಿರುಗಿ ನಮ್ಮನ್ನ ನೂಕಿದರ ಬದುಕಿ ಉಳಿಯಲಾರೆವೆಂಬ ಜೀವಭಯ. ನನ್ನ ನೋಡೂತಲೆ ಹಲ್ಲಕಿಸಿದು ಆತ್ಮೀಯತೆ ತೋರಿಸಿದ. ‘ಮಾದೆಣ್ಣ ನನಗ ಹಸಿವ್ಯಾಗದ ರೊಟ್ಟಿ ಪುಂಡಿಪಲ್ಯ ಚಟ್ನಿ ತರಿಸಿಕೊಡೋ’ ಅಂತಂದ. ಬೇತಮಾಡಿ ಕೆಳಗಿಳಿಸಿಬೇಕು, ಆಚೀಚೆ ಆಯತಪ್ಪಿದರೂ ಬಿದ್ದು ಸಾಯುತ್ತಾನೆಂದು ತಲೆಗೊಂದು ಮಾತಾಡುತ್ತಿದ್ದರು. ಬಾಳ್ಯಾ ಹನುಮಂತ ಅಲ್ಲಿದ್ದವರನ್ನ ದೂರ ಕಳಿಸಿದ ‘ಹೆಂಗಾದರೂ ಮಾಡಿ ಕೆಳಗಿಳಿಸ ಸಾಕು’ ಅಂದ. ಕರೆದು ಮಾತಾಡಿಸಿ ಕೆಳಗಿಳಿಸಿಕೊಳ್ಳಲು ಹರಸಾಹಸ ಮಾಡಬೇಕಿರಲಿಲ್ಲ, ನಾಲ್ಕು ಪ್ರೀತಿಯ ಮಾತಿಗೆ ಬಸಣ್ಣಿ ಹ್ಞೂಗಟ್ಟಿ ಹೇಳಿದಂತೆ ಕೇಳತೊಡಗಿದ. ಐದಡಿ ಎತ್ತರದಲ್ಲಿದ್ದಾಗ ‘ಗಿಡ್ಡ ಸೂಳೆಮಗ ನನಗ ಮೋಸಮಾಡತಾನು ನಾನು ಬರೋದಿಲ್ಲ’ ಅಂತ ಮತ್ತೆ ಮ್ಯಾಲೇರ ತೊಡಗಿದ. ಈಗ ಬಾಳ್ಯಾ ಹನುಮನೂ ಜಾಗಾ ಖಾಲಿಮಾಡಬೇಕಾಗಿ ಬಂದಿತು. ನನ್ನ ಹೆಗಲ ಮ್ಯಾಗಳ ಟವಲ್ಲ ಕೊಟ್ಟು ಉಟ್ಟುಕೊಳ್ಳಲು ಹೇಳಿದೆ, ಮರುಮತಾಡದೆ ನನ್ನೊಂದಿಗೆ ಊರದಾರಿ ಹಿಡಿದ.

ಅಪ್ಪನ ಸಣ್ಣತನಕ್ಕ ಧಕ್ಕೆ ಬಂತೋ ಇಲ್ಲವೋ, ಅವ್ವ ಮಾತ್ರ ಎರಡು ರೊಟ್ಟಿಗೆ ಚಟ್ನಿ ಇಟ್ಟು ಮೊಸರು ಹಾಕಿ ಕೊಟ್ಟಳು. ಗಂಟಲೊಳಗೆ ಇಳಿಯಲಾರದ ತುತ್ತು ಮತ್ತು ಕಣ್ಣೀರು ಒಟ್ಟೊಟ್ಟಾಗಿ ಬರುತ್ತ್ತಿರಲು ಆಯಿಯ ನೆನೆ ನೆನೆದು ಬಿಕ್ಕಿದ. ಅವನ ಸಂಕಟದ ಕಟ್ಟೆ ಈಗ ಒಡೆದಿತ್ತು. ಅತ್ತುಅತ್ತು ಹಗುರಾದಾಗ ಅವ್ವ ಮೈಮ್ಯಾಲೆ ಅರಿಬಿ ಹಾಕಿಕೊಂಡಿರುವಂತೆ ಹೇಳಿ ಅಪ್ಪನ ದೋತಿ-ಕೈಕಪ್ಪ ಅಂಗಿ ಕೊಟ್ಟಳು. ‘ಹಸಿವಾದಾಗ ಬಂದು ಊಟ ಮಾಡಿ ಹೋಗು’ ಅವ್ವನ ಮಾತು ಕೇಳಿಸಿಕೊಂಡನೋ ಇಲ್ಲವೋ ಗೋಣಾಡಿಸಿ ಮೂಗೇರುಸುತ್ತಾ ನಡೆದ……

 

 

‍ಲೇಖಕರು G

2 December, 2012

1 Comment

  1. Ranjana

    ಇವರಿಂದ ನಾನು ಒಂದು ತಿಂಗಳುಗಳಕಾಲ ಸಾಕಷ್ಟು ಕಲಿತಿದ್ದೇನೆ 🙂 Hats off to him 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading