ಸರೋಜಿನಿ ಪಡಸಲಗಿ
ಜೋಗಿ ಸರ್, ನೀವು ಈ ಎರಡು ಪ್ರಶ್ನೆ ಕೇಳಿ ಭಾಳ ಛಲೋ ಮಾಡಿದ್ರಿ ಸರ್. ಬಳಸದೆ ಉಳಿದ ಪದಗಳು ಕಳೆದು ಹೋಗ್ತಿವೆ. ಅಷ್ಟೇ ಅಲ್ಲ ಅವಕ್ಕೆ ಪರ್ಯಾಯ ಪದಗಳೂ ಸಿಗವಲ್ಲತು. ಹಿಂಗಾಗಿ ನಾನೇ ಕಳಕೊಂಡ ಹಂಗ ಅನಸ್ತದ ಒಂದೊಂದ ಸಾರೆ. ನಮ್ಮ ಕಡೆ ಅಟ್ಟ ಅಂದ್ರೆ ಮಾಳಿಗೆ ಕಟ್ಟುವಾಗ ಫಳಿ ಅಂದ್ರೆ ಹಲಿಗೆ ಬಡದು ಮ್ಯಾಲೆ ಖೋಲಿ ಕಟ್ತಾರ. ಅಂದ್ರ ಅಟ್ಟದ ಮ್ಯಾಲ. ಅದಕ್ಕ “ಖಡೇಪಾಟ” ಅಂತಾರ. ಈಗ ಆ ಶಬ್ದ ಹೋಗೇ ಬಿಟ್ಟದ. ಅದಕ್ಕೆ ಏನಂತಾರ ಗೊತ್ತೂ ಇಲ್ಲ ಸರ್. ನಾ ಹೇಳಿದ್ದು ಅರ್ಥನೂ ಆಗೂದಿಲ್ಲ ಇವರಿಗೆಲ್ಲಾ.
ಹಂಗೇ ಕಳಕೊಂಡ ಶಬ್ದಗಳ ಸಾಲೇ ಅದ. ನಂಗ ನೆನಪಿದ್ರೂ ಬಳಸದೇ ಮರೆ ಆಗಲಿಕ್ಹತ್ತ ಪದಗಳು ಅನಬಹುದು….
ಈ “ವರ್ತನೆ” ನಮ್ಮ ಕಡೆ ಅಂದ್ರ ಬೆಳಗಾವಿ ಕಡೆ “ರತೀಪು” ಅಂತೀವಿ. ಧಾರವಾಡಕ್ಕ ಬಂದ ಮ್ಯಾಲ ಅದು “ವರವಿ” ಆತು. ಈಗ “ವರ್ತನೆ” ಆಗೇದ. ಪಾತ್ರೆ ಮ್ಯಾಲ ಮುಚ್ಚೋ ತಟ್ಟೆಗೆ ನಮ್ಮಲ್ಲಿ “ಝಾಕಣಿ” ಅಂತ ಹೆಸರು. ಈಗ ಅದು ಪ್ಲೇಟ್ ಆಗಿ ಬಿಟ್ಟದ. ಇಂಥ ಶಬ್ದಗಳ ಖಜಾನೆ ಅದ. ಅವು ಮರತಿಲ್ಲ, ಆದ್ರೂ ಜಂಗ ಹತ್ತಿಧಂಗ ಆಗ್ಯಾವ. ಒಮ್ಮೊಮ್ಮೆ ಸಿಗಧಾಂಗ ಕಳಕೊಂಡೂ ಬಿಡ್ತಾವ. ಗುದ್ದಾಡಿ, ಗಜಂ ನಿಂತ್ರೂ ನೆನಪಾಗೂದಿಲ್ಲ. ‘ರತೀಪು’ ಹಂಗೇ ಆಗಿ ನೆನಪಾತು. ಖರೆ ನೆನಪಾಗಲಿಲ್ಲ ಅಂದ್ರ ಮಾತ್ರ ನಾನೇ ಕಳಕೊಂಡ ಹಂಗ ಅನಸ್ತದ. ನಿಮ್ಮ ಪ್ರಶ್ನೆ ಆ ಶಬ್ದಗಳ ಮ್ಯಾಲ ಒಂಚೂರ ಬೆಳಕ ಕೆಡವಿಧಂಗ ಮಾಡ್ತು. ಇಲ್ಲದಿದ್ರ ಮರತೀನಿ ಅಂಬೂದರ ಗೊತ್ತಾಗ್ತಿತ್ತೋ ಇಲ್ಲೋ ಯಾರಿಗ್ಗೊತ್ತು?…






0 Comments