ವಿನಯಾ ಒಕ್ಕುಂದ
ಜಾಗತಿಕ ಬಂಡವಾಳವಾದ ಹುಟ್ಟುಹಾಕಿರುವ ಅಭಿವೃದ್ಧಿಯ ಭಸ್ಮಾಸುರ ನರ್ತನದಲ್ಲಿ ಜೀವ ಜಗತ್ತು ತಲ್ಲಣಿಸಿ ಹೋದ ಕಥೆಯನ್ನು ಸಂತನ ಅನಂತ ಕರುಣೆಯ ಕಣ್ಣಿನಲ್ಲಿ ಕಾಣಿಸಿದ ಕೃತಿಯಿದು. ಸರ್ಕಾರವೇ ಬಂಡವಾಳಶಾಹಿ ವ್ಯವಸ್ಥೆಯಾಗಿರುವ ದೇಶದಲ್ಲಿ ಅಭಿವೃದ್ಧಿಯ ಪ್ರಕ್ರಿಯೆಯು ಜೀವವಿರೋಧಿ ನಿಲುವುಗಳಿಂದ ಕೆಲವೇ ಜನರ ಆರ್ಥಿಕ ಕ್ರೋಢೀಕರಣದ ಮಂತ್ರವಾಗುತ್ತಿರುವುದನ್ನು ಅಸಂಖ್ಯ ನಿದರ್ಶನಗಳಲ್ಲಿ ಪಿ ಸಾಯಿನಾಥ್ ತೆರೆದಿಟ್ಟರು. ಈ ದೇಶದ ಎಲೀಟ್ ಕ್ಲಾಸ್ ಎಷ್ಟೊಂದು ನಾಜೂಕಾಗಿ ಅಂಚಿನ ಜನಗಳನ್ನು ಒತ್ತುವರಿ ಮಾಡುತ್ತದೆನ್ನುವುದನ್ನು ತೋರಿಸಿದರು. “ಒಬ್ಬನೇ ಒಬ್ಬ ವೈದ್ಯ, ನರ್ಸ್, ತಜ್ಞ, ರೋಗಿ ಯಾರನ್ನೂ ಕರೆಯದೆ ವೈದ್ಯಕೀಯ ವಿಚಾರದ ಬಗ್ಗೆ ವಿಚಾರ ಸಂಕಿರಣ ಮಾಡಿದರೆ ವಿಚಿತ್ರ ಅನ್ನಿಸುತ್ತದೆಯಲ್ಲವೇ? ಭೂಸುಧಾರಣೆಯನ್ನು ಅರೆದು ಕುಡಿಯುವ ಸಂಕಿರಣಗಳಲ್ಲಿ, ಸಮಾವೇಶಗಳಲ್ಲಿ ಇದೇ ವಿಚಿತ್ರ. ತನ್ನ ಕಥೆ ಹೇಳಿಕೊಳ್ಳುವ ಒಬ್ಬನೆ ಒಬ್ಬ ಭೂರಹಿತ ಕಾರ್ಮಿಕನಿಲ್ಲ. ಆದರಿದು ಈ ದೇಶದ ಎಲೀಟ್ ಕ್ಲಾಸಿಗೆ ತುಂಬಾ ಸಹಜವೆನ್ನಿಸುತ್ತದೆ.” ನಮ್ಮ ಅಭಿವೃದ್ಧಿಯ ಪರಿಕಲ್ಪನೆಗಳು ಹೀಗೆ ಡೆವೆಲಪ್ ಮೆಂಟ್ ಬಿಸಿನೆಸ್ ಆಗಿರುವುದನ್ನು ಸಾಯಿನಾಥ್ ಎಳೆ ಎಳೆಯಾಗಿ ಬಿಡಿಸಿಡುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಅಂಗವಾದ ಮಾಧ್ಯಮಗಳು ತಮ್ಮನ್ನು ಪ್ರಭುತ್ವ ಮತ್ತು ಬಂಡವಾಳವಾದಿ ನಿಯತ್ತಿಗೆ ಲಗತ್ತಿಸಿಕೊಂಡಿರುವುದರಿಂದ ಉಂಟಾಗುವ ಅನಾಹುತಗಳನ್ನು ಬಿಚ್ಚಿಟ್ಟರು. ಸಮೂಹ ಬದುಕಿಗೆ ಬೆನ್ನು ಹಾಕಿ ನಿಂತಿರುವ ಮಾಧ್ಯಮಗಳ ನೀತಿಯನ್ನು ತಮ್ಮ ಪ್ರತ್ಯೇಕ ಹೆಜ್ಜೆಯ ಮೂಲಕವೇ ಪ್ರಶ್ನಿಸಿದರು. ಅತ್ಯುನ್ನತ ಸರ್ಕಾರಿ ಮೂಲಗಳ ಪ್ರಕಾರ ಅಥವಾ ಅತ್ಯುನ್ನತ ಬಂಡವಾಳದ ತೊಡಗಿಸುವಿಕೆಗುಂಟ ರೂಪುಗೊಳ್ಳುವ ವರದಿಗಳು ಯಾವ ಸತ್ಯವನ್ನು ಎಷ್ಟರ ಮಟ್ಟಿಗೆ ತಲುಪಿಸಿವೆ ಎಂದು ಕೇಳಿದರು. ಒಂದು ತಪಸ್ಸಿನಂತೆ ಈ ದೇಶದ ಬಡ ಮತ್ತು ಅತ್ಯಂತ ಬಡ ಪ್ರದೇಶಗಳ ಜನಬದುಕನ್ನು ಪ್ರವೇಶಿಸಿದರು.
ಅವರನ್ನು ಉದ್ಧರಿಸುವ, ಸವಲತ್ತುಗಳನ್ನು ಕೊಡುವ ಸರ್ಕಾರದ ಮಧ್ಯವರ್ತಿಯಂತಲ್ಲ, ಕಾರ್ಪೊರೇಟ್ ಲೋಕದ ಅಹಂಕಾರಿಯಂತಲ್ಲ, ಮತೀಯವಾದಿ ಮಠಾಧೀಶರಂತಲ್ಲ, ಜನರ ಸಂಕಟ ಮತ್ತು ವಿವೇಕಗಳನ್ನು ತನ್ನ ಜ್ಞಾನವಾಗಿಸಿಕೊಳ್ಳುವ ಬೌದ್ಧಿಕ ಗರ್ವಿಯಂತಲ್ಲ, ಸ್ವಾರ್ಥಿಯಂತಲ್ಲ. ಅವರು ಇಟ್ಟಿದ್ದು ಬೇರೆಯೇ ನಡೆ. ಆಯ್ದುಕೊಂಡದ್ದು ಬೇರೆಯದೇ ಪಥ. ಈ ಭಿನ್ನ ಹಾದಿಯ ಪಯಣದ ಹೆಜ್ಜೆ ಗುರುತುಗಳನ್ನು , ಆ ಅಗಮ್ಯ ಲೋಕವನ್ನು ಅಷ್ಟೇ ಆರ್ದ್ರವಾಗಿ ಕನ್ನಡಕ್ಕೆ ತಂದವರು ಜಿ ಎನ್ ಮೋಹನ್. ಈ ಅನುವಾದ ಕೃತಿಯ ಹಿಂದೆ ಇರುವುದು ಆ ಭಿನ್ನ ಪ್ರಯಾಣದ ಹಾದಿಯನ್ನು ಕಾಣಿಸುವ ಅಪರಿಮಿತ ಬದ್ಧತೆ.
ಅಭಿವೃದ್ಧಿಯ ಯೋಜನೆಗಳನ್ನು ಸಮಾಜದ ಅಂಚಿಗೆ ದೂಡಲ್ಪಟ್ಟವನ ಕಣ್ಣುಗಳಲ್ಲಿ ಕಾಣಿಸುವ, ಆ ಮೂಲಕ ಅದನ್ನು ಮರುನಿರ್ವಚನಕ್ಕೆ ಒಳಗುಮಾಡುವ ಕೃತಿಯಿದು. ಒಂದು ಸುರಕ್ಷಿತ ಆವರಣದೊಳಗೆ ಕೂತು, ತಂತ್ರಜ್ಞಾನವನ್ನು ಬಳಸಿ, ಮಾಹಿತಿಗಳನ್ನು ಕಲೆಹಾಕಿ, ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯ ಫಲಾನುಭವಿ ದೃಷ್ಟಿಕೋನದಿಂದ ಫಲಿತಗಳನ್ನು ಘೋಷಿಸಿದ ಬರಹಗಳು ಇವಲ್ಲ. ಭಾರತದ ಅಭಿವೃದ್ಧಿಯ ಹರಿಕಾರರು ಯಾವ ಚಿತ್ರವನ್ನು ನಮ್ಮ ಕಣ್ಣುಗಳಲ್ಲಿ ಮೂಡಿಸಿದ್ದಾರೋ ಅವುಗಳಿಗಿಂತ ಪೂರ್ತಿ ತಿರುವು ಮುರುವಾದ ಪುರಾವೆಗಳು ಇಲ್ಲಿ ದೊರೆಯುತ್ತವೆ. ಇದಕ್ಕೆ ಕಾರಣ ಅನ್ವೇಷಕ ಆಯ್ದುಕೊಂಡ ದಾರಿಯ ಪ್ರಾಮಾಣಿಕತೆ. ತನ್ನ ಉದ್ಯೋಗದ ಸೆಕ್ಯುರಿಟಿಯನ್ನು ಬಿಸಾಕಿ, ಸೌಲಭ್ಯಗಳೊಂದಿಗೆ ಬದುಕುವ ನಾಗರಿಕ ಹುತ್ತದಿಂದ ಹೊರಬಂದು ಈ ದೇಶದ ಅತ್ಯಂತ ಬಡ ಜಿಲ್ಲೆಗಳಲ್ಲಿ ಅವರು ಸಂಚರಿಸಿದರು. ಭಾರತದ ನಕಾಶೆಯಲ್ಲಿ ಎಲ್ಲಿದೆ ಎಂದೇ ತಿಳಿಯಲಾಗದ ಪ್ರದೇಶಗಳಲ್ಲಿ ಬುಡಕಟ್ಟು ಜನಾಂಗಗಳೊಟ್ಟಿಗೆ, ಆದಿವಾಸಿ ಜನರೊಂದಿಗೆ ಬದುಕಿದರು. ಒಂದೊಂದು ಪ್ರದೇಶದಲ್ಲಿ ತಿಂಗಳುಗಟ್ಟಲೆ ಉಳಿದರು. ೮೦ ಸಾವಿರ ಕಿಮೀ ಅನ್ನು ಎರದು ವರ್ಷಗಳಲ್ಲಿ ಹೊಕ್ಕಾಡಿದರು. ಒಮ್ಮೆ ಹೋಗಿ ಬಂದಲ್ಲಿ ಕೆಲಕಾಲ ಬಿಟ್ಟು ಮತ್ತೆ ಹೋದರು. ಲೆಕ್ಕವನ್ನು ತಿರುವು ಮುರುವು ಮಾಡಿ ಉತ್ತರವನ್ನು ನಿರ್ದಿಷ್ಟಗೊಳಿಸಿಕೊಳ್ಳುವಂತೆ. ತಮ್ಮ ಅಧ್ಯಯನದ ಫಲಿತವನ್ನು ವ್ಯವಧಾನದಿಂದ ಮತ್ತು ಜವಾಬ್ದಾರಿಯಿಂದ ನಿರೂಪಿಸಿದರು. ಅಲ್ಲಿಯ ಸಮಸ್ಯೆಗಳನ್ನು ಕಂಡರು ಮತ್ತು ಕಾಣಿಸಿದರು. ಆ ಅವರ ಜಗತ್ತನ್ನು ಜ್ಞಾನ ಗರ್ವಿಗಳೆದುರು ತಂದರು. ಆ ಮೂಲಕ ಭಾರತದ ಪರ್ಯಾಯ ಸಾಮಾಜಿಕ ಸಂಕಥನವನ್ನು ಮಂಡಿಸಿದರು.
ಜನಪ್ರತಿನಿಧಿಗಳಾಗಿ ಯೋಜನೆಗಳನ್ನು ರೂಪಿಸಬೇಕಾಗಿದ್ದ ಸರ್ಕಾರದ ಅಭಿವೃದ್ಧಿ ಪರಿಕಲ್ಪನೆಗಳು ಬಂಡವಾಳೋದ್ಯಮಿಗಳಿಗೆ ಬಂಡವಾಳವನ್ನು ಹಂಚಿಕೊಡುವ ಕೆಲಸಗಳಾಗಿವೆ. ಎಲ್ಲಿ ದೇಸಿ ಹಸುವಿನ ತಳಿಗಳಿದ್ದವೋ, ಹೈನುಗಾರಿಕೆ ಚನ್ನಾಗಿತ್ತೋ ಅಲ್ಲಿ ಜರ್ಸಿ ಆಕಳ ಆಗಮನದ ಹಾಲಿನ ಡೇರಿ ಪ್ರಾಜೆಕ್ಟ್ ಬರುತ್ತದೆ. ಕೆಲವೇ ವರ್ಷಗಳಲ್ಲಿ ಅಲ್ಲಿ ದೇಸಿ ತಳಿಗಳ ನಿರ್ನಾಮವಾಗುತ್ತದೆ. ಜರ್ಸಿ ತಳಿಗಳಿಗೆ ವ್ಯಯಿಸಬೇಕಾಗಿದ್ದ ಖರ್ಚಿನಿಂದ ಡೇರಿ ಉದ್ಯಮಕ್ಕೆ ನಷ್ಟವಾಗುತ್ತದೆ. ಮತ್ತು ಆ ಸರ್ಕಾರಿ ಪೋಷಿತ ಹೈನುಗಾರಿಕೆ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತದೆ. ಆದಿವಾಸಿ ಕಲ್ಯಾಣ ನಿಗಮದಿಂದ ಮಂಜೂರಾದ ೧೭.೪೪ ಲಕ್ಷ ರೂಪಾಯಿ ವೆಚ್ಚದ ೩ ಕಿಮೀ ರಸ್ತೆಯಿಂದ, ಯಾರ ಹೆಸರಿನಲ್ಲಿ ರಸ್ತೆ ಮಾಡಲಾಗಿದೆಯೋ ಅವನಿಗೆ ಏನೂ ಪ್ರಯೋಜನವಿಲ್ಲ. ಅವನಿಗೆ ಅಗತ್ಯವಾದ ಮೂಲಭೂತ ಸೌಕರ್ಯವನ್ನಾಗಲೀ, ನೆಮ್ಮದಿಯನ್ನಾಗಲೀ ಈ ಯೋಜನೆ ನೀಡಿಲ್ಲ. ಜನಸಂಖ್ಯಾ ನಿಯಂತ್ರಣದ ಸರ್ಕಾರಿ ಯೋಜನೆ ಹೆಣ್ಣುಮಕ್ಕಳಿಗೆ ನೋರ್ ಪ್ಲಾಂಟನಂತಹ ಹಾನಿಕಾರಕ ಗರ್ಭನಿರೋಧಕವನ್ನು ತಣ್ಣಗೆ ವಿತರಿಸುತ್ತದೆ.
ಇಂತಹ ಜೀವವಿರೋಧಿ ಅಸಂಬದ್ಧ ಯೋಜನೆಗಳ ಬಗ್ಗೆ ಖಚಿತವಾದ ತಿಳುವಳಿಕೆ ಇರುವುದು ಅಧಿಕಾರಶಾಹಿಗಳಿಗೆ. ಆದರೆ ಅದರ ಫಲಾನುಭವಿಗಳಾದ ಈ ವರ್ಗ ಕನಿಷ್ಠ ಮನುಷ್ಯತ್ವವನ್ನೂ ಉಳಿಸಿಕೊಳ್ಳುವುದಿಲ್ಲ. ಬರಗಾಲದ ಕಾರ್ಯಾಚರಣೆಯ ದಿನಗಳಲ್ಲಿ ಅದರಲ್ಲಿ ತೊಡಗಿಸಿಕೊಂಡ ವಕೀಲನೊಬ್ಬ, “ಈ ವರ್ಷದ ಬರದಲ್ಲಿ ಸ್ಕೂಟರು ಕೊಂಡಿದ್ದೇನೆ, ಮುಂದಿನ ವರ್ಷವೂ ಹೀಗೆ ಬರ ಬಿದ್ದರೆ ಒಂದು ಜೀಪು ಕೊಳ್ಳುವ ಉದ್ದೇಶವಿದೆ” ಎನ್ನುತ್ತಾನೆ. ಸಾಮಾನ್ಯ ಜನರನ್ನು ಬಳಕೆಯ ವಸ್ತುಗಳನ್ನಾಗಿಸಿಕೊಂಡಿರುವ ಅಧಿಕಾರಿ ವರ್ಗದ ನಿರ್ಲಜ್ಜತೆಯಿದು. ಬರವನ್ನು ಮೂರನೆ ಬೆಳೆಯಾಗಿ ಸ್ವೀಕರಿಸುವ ಜನರಿದ್ದಾರೆ. ಬರವನ್ನೆಲ್ಲಾ ಕೈಗಾರಿಕೆಯನ್ನಾಗಿಸಿಕೊಂಡ ಕಂಟ್ರಾಕ್ಟರ್ ಗಳಿದ್ದಾರೆ. ಸರ್ಕಾರ ಅಣೆಕಟ್ಟುಗಳ ಯೋಜನೆಯನ್ನು ತರುತ್ತದೆ. ಅದರ ಅನಾಹುತಕ್ಕಾಗಿ ಜನಾಂದೋಲನ ನಡೆಯುತ್ತದೆ. ಆ ಆಂದೋಲನದಲ್ಲಿ ಭಾಗವಹಿಸಿದ ಕಾರ್ಯಕರ್ತನೊಬ್ಬ ದಿಗಿಲಿನಿಂದ ಹೇಳಿದ್ದ, “ಸರ್ಕಾರದ ಯೋಜನೆಯನ್ನು ತಡೆಯಬಹುದು, ಈ ಕಂಟ್ರಾಕ್ಟರುಗಳ ಲಾಬಿಯನ್ನಲ್ಲ”.
ಮಧ್ಯಮವರ್ಗದ ಅಧಿಕಾರಶಾಹಿಗಳ ಸ್ವಾರ್ಥ ಲಾಲಸೆಗಳೇ ಪ್ರಭುತ್ವದ ಯೋಜನೆಗಳನ್ನು ರೂಪಿಸುತ್ತಿರುತ್ತವೆ. ಈ ಕೊಳ್ಳುಬಾಕ ಅಧಿಕಾರಶಾಹಿ, ಸರ್ಕಾರಿ ಯೋಜನೆಗಳ ಫಲಗಳನ್ನು ತಾವೇ ಅನುಭೋಗಿಸುತ್ತಾ ನಿಜವಾದ ಫಲಾನುಭವಿಗಳನ್ನು ಅತಂತ್ರರನ್ನಾಗಿಸುತ್ತದೆ. ರಣಬೀರ್ ಕೊರವನಿಗೆ ಸರ್ಕಾರ ಮಂಜೂರು ಮಾಡಿದ ೧.೮೦ ಎಕರೆ ಭೂಮಿ ಹುಡುಕಿಕೊಳ್ಳುವುದು ೨ ವರ್ಷವಾದರೂ ಸಾಧ್ಯವಾಗುತ್ತಿಲ್ಲ. ರಣಬೀರ್ ಕೊರವನ ಈ ಸ್ಥಿತಿಗೆ, “ದೊಡ್ಡ ಭೂಮಾಲಿಕರಿಂದ ಹಿಡಿದು ಸ್ಥಳೀಯವಾಗಿ ಅಧಿಕಾರವನ್ನು ಕೈಯಲ್ಲಿಟ್ಟುಕೊಂಡಿರುವ ಪೋಸ್ಟ್ ಮಾಸ್ಟರ್, ಶಾಲೆಯ ಹೆಡ್ ಮಾಸ್ಟರ್, ವಕೀಲ ಹೀಗೆ ಎಲ್ಲರೂ ಈ ಭೂಕಬಳಿಕೆಯಲ್ಲಿ ಪಾಲುದಾರರೇ”. ಕಾಗದಪತ್ರಗಳಲ್ಲಿಯೇ ಆಟವಾಡಿ ಯಾವುದೇ ಹೊಡೆದಾಟವಿಲ್ಲದಂತೆ ಭೂಕಬಳಿಕೆ ಮಾಡಿಕೊಂಡು ಬಿಡಬಹುದು. ಇಂತಹ ಕಥನಗಳನ್ನು ಸಾಮಾಜಿಕ ಉತ್ಖನನದ ಶ್ರಮ ಮತ್ತು ಶ್ರದ್ಧೆಯೊಂದಿಗೆ ಕಾಣಿಸಿದ ಕೃತಿಯಿದು.
ಸಾಯಿನಾಥ್ ಮುಚ್ಚಿಹೋದ ದನಿಗಳನ್ನು, ಮರೆತುಹೋದ ಮುಖಗಳನ್ನು ಕಾಣಿಸಿದರು. ಈ ಬರಹಗಳು ಅಂಚಿಗೆ ಒತ್ತುವರಿಯಾದವರ ಭಯ, ದಿಗಿಲಿನ ದನಿಗಳನ್ನು ಕೇಳಿಸುತ್ತವೆ. ಗುಜರಾತ್ ಸರ್ಕಾರದ ಪ್ಯಾಕೇಜ್ ತಿರಸ್ಕರಿಸಿ ತಮ್ಮ ನೆಲದ ಮುಳುಗಡೆಯನ್ನು ವಿರೋಧಿಸುತ್ತಿರುವ ಲೌರಿಯಾ; ನೀರು ಇಲ್ಲೇ ಹತ್ತಿರ ಎಂದು ಕನಿಷ್ಠ ೨ ಕಿಮೀ ದೂರವನ್ನು ಖುಷಿಯಿಂದ ಕೈ ಮಾಡಿ ತೋರಿಸುವ ಪಹಾರಿಯಾ ಮಹಿಳೆ; ಸರ್ಕಾರದ ಅಭಿವೃದ್ಧಿಯ ಧಾಳಿಗೆ ಸಿಲುಕಿ ಮೂರು ಸರ್ತಿ ಎತ್ತಂಗಡಿಯಾದ ಚೆಕಾಫರ್ ಊರಿನ ಖೋರಾನ ’ನಿಮ್ಮ ಮನೇಲಿ ನೀವೇ ಅತಿಕ್ರಮಣಕಾರರಾದ್ರೆ ಹೇಗಿರ್ತದೆ ಹೇಳಿ’ ಎಂದು ಪ್ರಶ್ನಿಸುವ ನಗು, ಇಂತಹುದೇ ತಿರುಗಣೆಗೆ ಸಿಲುಕಿ ಸುಸ್ತಾಗಿ, ’ಇದು ಯಾಕೆ ಯಾವಾಗಲೂ ನಮಗೇ ಆಗುತ್ತದೆ’ ಎಂದು ಪ್ರಶ್ನಿಸುವ ಆದಿವಾಸಿ ಮಹಿಳೆ, ಇಂಥಹ ಅಗಣಿತ ಕಥನಗಳು ಇಲ್ಲಿವೆ. ತನ್ನೆದುರು ತೆರೆದುಕೊಳ್ಳುವ ಸಂಗತಿಗಳನ್ನು ಒಂದು ಘಟನೆಯಾಗಲ್ಲ, ಪ್ರಕ್ರಿಯೆಯಾಗಿ ನೋಡುವ ಸಂಶೋಧನಾ ಶಿಸ್ತು ಇಲ್ಲಿದೆ. ಅಜ್ಜ ರೂ. ೧೫-೨೦ ಸಾಲ ಮಾಡಿದ್ದಕ್ಕೆ ಮೊಮ್ಮಗಳು ಕಾಮಾಟಿಪುರ ಸೇರುವುದನ್ನು ಗಮನಿಸುವುದು, ಒಂದು ದಿನಕ್ಕೆ ಕನಿಷ್ಠ ೧೩-೧೪ ಕಿಮೀ ನಡೆಯಬೇಕಾದ ಆ ಹೆಂಗಸರು ತಮ್ಮ ಆಯುಷ್ಯದ ೪೦-೪೫ ವರ್ಷಗಳನ್ನೂ ಕಾಣಲಾರದ್ದನ್ನು ಹೇಳುವುದು… ಇಂಥವೇ ದಾಖಲೆಗಳು.
ಸೃಜನಶೀಲತೆ ದಾಖಲೆಯಲ್ಲ. ಕಥನ ವರದಿಯಾಗಬಾರದು ಎನ್ನುವ ವಿಮರ್ಶೆಯ ಮಾನದಂಡಗಳನ್ನು ತಣ್ಣಗೆ ಲೇವಡಿ ಮಾಡುವ ಶಕ್ತಿ ಈ ಬರಹಗಳಿಗಿದೆ. ಇಲ್ಲಿಯ ಒಂದು ವರದಿ ಉಂಟು ಮಾಡುವ ಪರಿಣಾಮವನ್ನು ಒಂದು ಕಥೆ ಮಾಡಬಲ್ಲುದಾದರೆ ಅದು ಅತ್ಯಂತ ಸಾರ್ಥಕ ಕಥೆಯಾದೀತು. ಆರ್ದ್ರವಾದ ಅಂತಃಕರಣದ ಬರಹ ವಿಧಾನ ಸೃಜನ ಮತ್ತು ಸೃಜನೇತರ ಎಂಬ ತರತಮವನ್ನು ನಿರಾಕರಿಸುತ್ತದೆ. ಇಲ್ಲಿ ಭಾರತದ ರಾಜಕಾರಣದ ವಿಶ್ಲೇಷಣೆಯ ಸೈದ್ಧಾಂತಿಕ ನಿಲುವುಗಳಿವೆ. ದೊಡ್ಡ ಸಮಸ್ಯೆಯೊಂದನ್ನು ಧೀರ್ಘ ಕಾಲ ನಿರ್ಲಕ್ಷಿಸಿ ನಂತರ ಅದನ್ನು ಹಳೆಯದು ಎಂದು ತಳ್ಳಿಹಾಕೋ ಕ್ರಮಕ್ಕೆ ಉತ್ತರದಾಯಿಗಳು ಮಾಧ್ಯಮಗಳು ಮತ್ತು ಮಧ್ಯಮವರ್ಗ ಅಲ್ಲವೇ? ಎಂಬ ಪ್ರಶ್ನೆಯಿದೆ. ಖಂಡಿತಾ, ಇವು ಸಾಮಾಜಿಕ ಬದ್ಧತೆಯ ಬರಹಗಳು, ಬದ್ಧತೆಯ ಶಕ್ತಿಯನ್ನು ಕಾಣಿಸುವ ಬರಹಗಳು. ಜಾಗತಿಕ ಬಂಡವಾಳವಾದ ಜನರ ಆತ್ಮಬಲವನ್ನು ಕುಗ್ಗಿಸುವ ಯುದ್ಧವನ್ನು ಸಾರಿದೆ. ಪೇಮಾ ಎಂಬ ಚಿತ್ರಕಾರನ ಅದ್ಭುತ ಸೃಜನಶೀಲತೆಯನ್ನು ಕಾರ್ಪೊರೇಟ್ ವಲಯ ಕೊಳ್ಳುವುದರ ಮೂಲಕವೇ ಅವನ ಆತ್ಮಘನತೆಯನ್ನು ನಿರ್ನಾಮ ಮಾಡುವ ರೂಪಕದಂತಹ ದಾಖಲೆಯಿದೆ. ಮಾಧ್ಯಮಗಳಾ ರಿಯಾಲಿಟಿ ಶೋ ಪ್ರಯೋಗಗಳಿಗೆ ಬಲಿಯಾದವರ ಪ್ರತಿನಿಧಿಯಂತೆ ಕಾಣುತ್ತಾನೆ ಪೇಮಾ. ಬಂಡವಾಳವಾದ ಪ್ರತಿರೋಧದ ಹಾದಿಯನ್ನು ಹದಗೆಡಿಸುತ್ತಿದೆ. ದಿಕ್ಕೆಡಿಸುತ್ತಿದೆ. ಕವಿ ಹಾಡುಗಾರ ವೈದ್ಯನಾಥ ಸಿಂಗ್ ಹಿಂಸೆಗೆ ಬಲಿಯಾಗಿ ಹೋಗುವುದು ಇಂಥದೇ ಬೆಳವಣಿಗೆಯಲ್ಲಿ. ಸೈದ್ಧಾಂತಿಕತೆ ಆಳವಾದ ಪ್ರಾಮಾಣಿಕತೆಯಲ್ಲಿ ಬೆರೆತು ಪಡೆದುಕೊಳ್ಳುವ ಅನೂಹ್ಯ ಶಕ್ತಿ ಇಲ್ಲಿಯ ಬರಹಗಳಿಗಿದೆ.
ಎಂತಹ ಕಠಿಣ ಸ್ಥಿತಿಯಲ್ಲೂ ಹೋರಾಡಿ ಗೆಲ್ಲುವ ಛಾತಿಯಿರುವ ಜನರ ಬದುಕುಗಳಿವೆ. ಬರಿಗಾಲ ಗಣಿ ಒಡತಿಯರಿದ್ದಾರೆ. ಕಾಡಲ್ಲಿ ಹರಿವ ಇರುವೆ ಸಾಲಿನಂತೆ ತೆಂಡು ಎಲೆ ಸಂಗ್ರಹಿಸುವ ಹೆಂಗಸರಿದ್ದಾರೆ. ಮಹಿಳಾ ದಿನಾಚರಣೆ ದಿನ ತಮಿಳುನಾಡಿನ ಪುದುಕೊಟ್ಟೈಯಲ್ಲಿ ೧೫೦೦ಕ್ಕೂ ಹೆಚ್ಚು ಹೆಂಗಸರು ಸೈಕಲ್ rally ಮಾಡಿ ಬದಲಾವಣೆಯ ಕನಸು ಬಿತ್ತುತ್ತಾರೆ. ಅವರ ಎಚ್ಚರ ಮತ್ತು ಸಂಘಟನೆ ವರ್ತಮಾನದ ಅಸಹನೀಯತೆಯನ್ನು ಬದಲಿಸಬಹುದೆಂಬ ತಾತ್ವಿಕತೆಯಿದೆ. “ನಮಗೆ ೩ ಎಕರೆ ಭೂಮಿ, ಒಂದಿಷ್ಟು ನೀರು ಕೊಡಿ. ಚಿತ್ರ ಬದಲಿಸುತ್ತೇವೆ” ಎನ್ನುವ ಈ ಬದುಕಿನ ತಳಾತಳದಲ್ಲಿ ಎಲ್ಲರ ಭಾರವನ್ನೂ ಹೊತ್ತವರ ಮಾತುಗಳ ನೈತಿಕ ಬೆಳಕು ಇಲ್ಲಿದೆ.
ಅನುವಾದ ಭಾಷಿಕ ಬದಲಾವಣೆಯಲ್ಲ. ಅದು ಆ ಸಂವೇದನಾ ಲೋಕವನ್ನು ನಮಗೆ ಪುನರ್ ನಿರ್ಮಿಸಿಕೊಳ್ಳುವ ಸಾರ್ಥಕ ಕೆಲಸ. ಈ ಕೃತಿ ಕನ್ನಡ ಚಿಂತನೆಗೆ ಖಂಡಿತಾ ಹೊಸ ವಿಸ್ತಾರವನ್ನು ಒದಗಿಸಿದೆ. ವ್ಯವಸ್ಥೆಯ ಭಾಗವಾಗಿರುವ ಕಾರಣಕ್ಕೆ ಈ ಎಲ್ಲಾ ಪಾಪಗಳ ಪಾಲುದಾರರಾಗಿರುವ, ಸುರಕ್ಷಿತ ವಲಯದಲ್ಲಿರುವ ಯಾರಲ್ಲಿಯೂ ಉತ್ತರದಾಯಿತ್ವದ ಜವಾಬ್ದಾರಿಯನ್ನು ಹುಟ್ಟಿಸುವ ಬರಹಗಳಿವು. ಈ ಇಂಥ ಕಾರಣಗಳಿಗಾಗಿ ಸಾಯಿನಾಥ್ ಎಂಬ ತಾತ್ವಿಕತೆಯನ್ನು ಕನ್ನಡಕ್ಕೆ ತಂದ ಜಿ ಎನ್ ಮೋಹನ್ ಮತ್ತು ಅಭಿನವ ಪ್ರಕಾಶನಕ್ಕೆ ಕನ್ನಡಿಗರು ಋಣಿಗಳು.
(‘ಹೊಸತು’ ಮಾಸಿಕ ದಲ್ಲಿ ಪ್ರಕಟವಾಗಿದ್ದ ಬರಹ)







Sainath andare Sainath. nanuu uthsukalagiddene pusthaka odalu.sheershike nodi idenappa andukondidde.vinaya avara vishleshane pusthakada bagge preethiyannu moodisuththade.