ತನ್ನ ಪ್ರಾಯೊಗಿಕ ರಂಗಪ್ರದರ್ಶನಗಳಿಗೆ ನಾಡಿನಲ್ಲಿ ಹೆಸರಾದ ಬೆಂಗಳೂರಿನ ರಂಗ ತಂಡ `ಅನೇಕ ` ವು ಖ್ಯಾತ ನಾಟಕಕಾರ ಪ್ರೋ ಎಚ್ .ಎಸ್.ಶಿವಪ್ರಕಾಶರ ನಾಟಕ ` ಮಾರನಾಯಕ `ವನ್ನು ಇದೀಗ ಪ್ರದರ್ಶನಕ್ಕೆ ಸಿದ್ದಪಡಿಸಿಕೊಂಡಿದೆ. ಹಿರಿಯ ರಂಗ ನಿರ್ದೇಶಕ ಸುರೇಶ ಆನಗಳ್ಳಿಯವರು ಈ ನಾಟಕವನ್ನು ನಿರ್ದೇಶಿಸಿದ್ದಾರೆ .
ಮಾರನಾಯಕವು ಶೇಕ್ಸ್ಪಿಯರನ ಮ್ಯಾಕ್ಬೆಥ್ ನಾಟಕದ ಕನ್ನಡ ರೂಪಾಂತರ .ನಾಟಕದ ಮೊದಲರ್ಧವು ಮೂಲಪಠ್ಯ ಮ್ಯಾಕ್ಬೆಥ್ ನಂತೆಯೆ ಸಾಗಿದರೂ ಉತ್ತರಾರ್ಧದಲ್ಲಿ ಸಂಪೂರ್ಣ ಭಿನ್ನತಿರುವನ್ನು ಪಡೆದುಕೊಂಡು ಬೇರೆಯದೇ ಆದ ಅಂತ್ಯ ಕಾಣುವುದು ಇಲ್ಲಿಯ ವೈಶಿಷ್ಟ್ಯ . ಹಿಂಸೆಯು ಹೇಗೆ ತನ್ನೊಳಗೇ ಪ್ರತಿಹಿಂಸೆಯನ್ನು ಬಚ್ಚಿಟ್ಟುಕೊಂಡಿರುತ್ತದೆ ಎನ್ನುವ ಮೂಲ ನಾಟಕದ ವ್ಯಾಖ್ಯಾನದ ಜತೆಗೆ ಈ ಹಿಂಸೆಗೆ ಪರಿಹಾರ ಮಾರ್ಗವನ್ನೂ ಮಾರನಾಯಕ ನಿರೂಪಿಸಿತೋರಿಸುತ್ತದೆ. ಮಹಾತ್ವಾಕಾಂಕ್ಷೆಯ ಮ್ಯಾಕ್ಬೆಥ್ ಪಾತ್ರಕ್ಕೆ ಎದುರಾಗಿ ನಿರ್ಮೋಹಿ ಜೈನಮುನಿಯೊಬ್ಬನ ಪಾತ್ರವನ್ನು ಈ ನಾಟಕದಲ್ಲಿ ಸೃಷ್ಟಿಸಲಾಗಿದೆ . ಹಿಂಸೆಯಿಂದ ತುಂಬಿದ ಲೋಕಕ್ಕೆ ಎದುರು ಬದುರಾಗಿ ಅಹಿಂಸಾ ಲೋಕದ ಸಾಧ್ಯತೆಯನ್ನು ನಿರೂಪಿಸುವುದೇ ಈ ನಾಟಕದ ವಸ್ತು .ಅಲ್ಲದೆ ಮಾನವ ಹಿಂಸೆಯು ತನ್ನನ್ನೆ ತಾನು ಹೇಗೆ ನಿರ್ನಾಮ ಮಾಡಿಕೊಳ್ಳುತ್ತದೆ ಎಂಬುದರ ಜತೆಜತೆಗೆ ಅದು ತನ್ನ ಸುತ್ತಲಿನ ಪ್ರಕೃತಿಗೂ ಹೇಗೆ ಪಸರಿಸುತ್ತದೆ ಮತ್ತು ಎಲ್ಲವನ್ನೂ ಹೇಗೆ ನಿರ್ನಾಮದಂಚಿಗೆ ದೂಡುತ್ತದೆ ಎಂಬುದನ್ನೂ ಈ ನಾಟಕ ಸಾದರಪಡಿಸುತ್ತದೆ .
ಶೇಕ್ಸ್ಪಿಯರನ ಮ್ಯಾಕ್ಬೆಥ್ ನಾಟಕವು ಅರಿಸ್ಟಾಟಲ್ ಪ್ರಣೀತ ಪಾಶ್ಚಾತ್ಯ ದೃಷ್ಟಿಕೋನದ `ಡ್ರಮಾಟಿಕ್ ಅರ್ಥಾತ್ ನಾಟಕೀಯ ` ಮಾದರಿಯ ರಚನೆಯಾಗಿದ್ದರೆ ಶಿವಪ್ರಕಾಶರು ಇದನ್ನು ಪೌರ್ವಾತ್ಯ ದೃಷ್ಟಿಕೋನದ `ನರೇಟಿವ್ ಅರ್ಥಾತ್ ಕಥನ` ಮಾದರಿಯ ನಾಟಕವಾಗಿ ಸಾಂಸೃತಿಕ ರೂಪಾಂತರಣಕ್ಕೊಳಪಡಿಸಿದ್ದಾರೆ.ಹಾಗಾಗಿ ಕನ್ನಡ ನಾಟಕ ರಚನೆಯಲ್ಲಿ ಇದೊಂದು ದೊಡ್ಡ ನೆಗೆತವೇ ಸರಿ . ನಿರ್ದೇಶಕ ಸುರೇಶ ಆನಗಳ್ಳಿಯವರು ಪಾಶ್ಚಾತ್ಯ ನಾಟಕೀಯ ದುರಂತಾಂಶಗಳನ್ನೂ, ಪೌರ್ವಾತ್ಯ ದೃಷ್ಟಾಂತ ಕಥಾನಕವನ್ನೂ ಸಮ್ಮಿಶ್ರಗೊಳಿಸಿ , ಗೋಳೀಕರಣದ ಸಮಕಾಲೀನ ವಿಷಾದ ವಾಸ್ತವವನ್ನು ತಮ್ಮ ರಂಗಕೃತಿಯಲ್ಲಿ ಹೊಳೆಯಿಸಿತೋರಿಸಿದ್ದಾರೆ .
ಕನ್ನಡ ರಂಗಭೂಮಿಯ ಪ್ರಸಿದ್ಧ ನಟರಾದ ಅಶೋಕ್ ಕುಮಾರ್ , ಉಷಾಭಂಡಾರಿ , ಶ್ರೀಪತಿ ಮಂಜನಬೈಲು , ರವಿಶಂಕರ್ , ರಾಜ ಶೇಖರ್ ರಾವ್ , ಲೂಸಿ ಪಿರೇರಾ , ಭಾಸ್ಕರ್ , ಪ್ರಥ್ವಿ ಸುವರ್ಣ , ಮುರಳಿ, ನಿತಿನ್, ಅಪೂರ್ವ, ಸುರೇಶ ಹೆಗ್ಡೆ – ಮೊದಲಾದವರ ಜತೆಗೆ ಭರವಸೆಯ ಹೊಸ ನಟಿ ಶಿವಾನಿ , ಶುಭಾ , ರಂಗಪ್ರವೇಶ ಮಾಡಲಿದ್ದಾರೆ . ಬೆಳಕಿನ ವಿನ್ಯಾಸ – ಮಹದೇವ ಸ್ವಾಮಿ , ದೃಶ್ಯ ಸಜ್ಜಿಕೆ – ಸಂತೋಷ್ ಪಾಂಚಾಲ್ .
` ಮಾರನಾಯಕ `ದ ಮೊದಲ ಪ್ರದರ್ಶನವು ದಿನಾಂಕ 17. ಡಿಸೆಂಬರ್ ,2013 ರಂದು ಸಂಜೆ 7 ಕ್ಕೆ ಏರ್ಪಡಿಸಲಾಗಿದೆ .ಸ್ಥಳ : ಕೆ.ಎಚ್.ಕಲಾಸೌಧ .ರಾಮಾಂಜನೇಯ ಗುಡ್ಡದ ಬುಡ . ಹನುಮಂತ ನಗರ .ಸಂಪರ್ಕ ಸಂಖ್ಯೆ : 9448050950






0 Comments