-ಎನ್.ಎಸ್. ಶಂಕರ್
ಆಫ್ರಿಕಾ ಮತ್ತು ಅಮೆರಿಕಾ- ವಿಶ್ವ ನಾಗರಿಕ ಜಗತ್ತಿನ ಎರಡು ಧ್ರುವಗಳು. ಮೊದಲು ಆಫ್ರಿಕಾಗೆ ಹೋಗಿ ಬಂದು ತಾವು ಅಲ್ಲಿ ಪಾಲ್ಗೊಂಡಿದ್ದ ಸಮ್ಮೇಳನ ಹಾಗೂ ಆಫ್ರಿಕಾದ ಹೆಂಗಸರ ಬಗ್ಗೆ ಸಮಾನ ಆಸಕ್ತಿಯಿಂದ ಬರೆದಿದ್ದ ಗೆಳೆಯ ಡಾ. ಸಿ.ಎಸ್. ದ್ವಾರಕಾನಾಥ್, ಈಗ ’ಅಕ್ಕ’ ಸಮ್ಮೇಳನದ ನೆಪದಲ್ಲಿ ಅಮೆರಿಕಾ ಸುತ್ತಿ ಬಂದಿದ್ದಾರೆ. (ಅವರ ಪ್ರವಾಸ ಯಾವ ದಿನಾಂಕದಿಂದ ಎಂಬುದು ಗೊತ್ತಾಗುತ್ತದೆ; ಆದರೆ ಯಾವ ವರ್ಷ ಎಂದು ಎಲ್ಲೂ ನಮೂದಾಗಿಲ್ಲವಾದ್ದರಿಂದ ಈಚೆಗೆ ಎಂದೇ ಭಾವಿಸೋಣ.)
ಕೌತುಕವೆಂದರೆ ಅವರು ಅಮೆರಿಕೆಯಲ್ಲೂ ಆಫ್ರಿಕಾ ಪ್ರವಾಸವನ್ನೇ ಮುಂದುವರೆಸಿದಂತಿದೆ…!
ಪ್ರವಾಸ ಕಥನಗಳಲ್ಲಿ ಸಾಮಾನ್ಯ ನಾವು ಕಾಣುವುದು- ಯಾವ ಉದ್ದೇಶವೂ ಇಲ್ಲದೆ ಅಮೆರಿಕಾದಂಥ ದೇಶಕ್ಕೆ ಹೋಗಿಬಂದವರು ಅಲ್ಲಿ ಕಣ್ಣಿಗೆ ರಾಚುವ ಸಮೃದ್ಧಿ, ಭವ್ಯ ಕಟ್ಟಡ, ರಸ್ತೆ, ವ್ಯವಸ್ಥೆಗಳ ಬಗ್ಗೆ ಬೆರಗಿನಿಂದ ಕರುಬುತ್ತ ಬರೆಯುವುದು. ಅಥವಾ ಆ ವೈಭವವೆಲ್ಲ ಏನೂ ಅಲ್ಲ, ನಮ್ಮ ಭಾರತೀಯ ಸಂಸ್ಕೃತಿ, ಕುಟುಂಬ ಮೌಲ್ಯ, ಲೊಟ್ಟೆ ಲೊಸಕು ಎಂದು ಕಾರಿಕೊಳ್ಳುವ ಪರಿ ಇನ್ನೊಂದು. ಈ ಎರಡೂ ಅತಿಗಳು ಎಂಥ ರೇಜಿಗೆಯವು ಎಂದು ಬಿಡಿಸಿ ಹೇಳಬೇಕಿಲ್ಲ. ಅಂತೂ ಕಾಣುವ ಕಣ್ಣಿರದಿದ್ದರೆ, ಅಂದರೆ ಒಂದು ಸಂಸ್ಕೃತಿಯಲ್ಲಿ ಬೆಳೆದವನೊಬ್ಬ ಇನ್ನೊಂದು ಸಂಸ್ಕೃತಿಯ ಸ್ಪರ್ಶಕ್ಕೆ ತೆರೆದುಕೊಂಡು ಗ್ರಹಿಸುವ ಪ್ರಬುದ್ಧತೆ ಇಲ್ಲದಿದ್ದರೆ ಎಲ್ಲವೂ ಕುರುಡ ಕಂಡ ಆನೆಯ ದೃಷ್ಟಾಂತಗಳಾಗಿ ಮುಗಿಯುತ್ತವೆ.
ದ್ವಾರಕಾನಾಥ್ ತಮ್ಮ ’ಅಮೆರಿಕಾ: ಆ ಮುಖ’ದಲ್ಲಿ ಅಂಥ ಪ್ರಮಾದಕ್ಕೆ ಆಸ್ಪದ ಕೊಟ್ಟಿಲ್ಲ. ಆದರೆ ಅವರಿಲ್ಲಿ ತಮ್ಮ ಅನುಭವದ ನಿರೂಪಣೆಯ ಗಡಿಕಲ್ಲುಗಳನ್ನು ತಾವಾಗಿ ನೆಟ್ಟುಕೊಂಡೇ ಆರಂಭಿಸುತ್ತಾರೆ. ಈ ನಿರೂಪಣೆಯಲ್ಲಿ ಅವರ ಮುಖ್ಯ ಕಾಳಜಿ- ಅಮೆರಿಕೆಯ ವರ್ಣಭೇದದ ಇತಿಹಾಸ ಮತ್ತು ಕರಿಯರ ಹೋರಾಟದ (ಹಾಗೂ ಇತರೆ ಹೋರಾಟಗಳ) ಚರಿತ್ರೆ. ಹಾಗಾಗಿ ’ಮೊದಲೇ ಅಮೆರಿಕಾ ಕಂಡರಾಗದ’ ದ್ವಾರಕಾನಾಥ್- ಅವರೇ ಬರೆದುಕೊಂಡಂತೆ- ಗತಿಸಿದ ’ಕಪ್ಪು ನಾಯಕರ ಸಾಮಾಜಿಕ ಮೌಲ್ಯಗಳ ನೆರಳನ್ನು ಹುಡುಕುತ್ತಾ ಅದೇ ಜಾಡಿನಲ್ಲಿ’ ಮನಸ್ಸು ನೆಟ್ಟು ತಮ್ಮ ಆತ್ಮೀಯ ಗೆಳೆಯ- ಆತಿಥೇಯ ಹನುಮಂತ ರೆಡ್ಡಿಯೊಂದಿಗೆ ದೇಶ ಸುತ್ತಿದ್ದಾರೆ. ನಮ್ಮಲ್ಲಿ ಹಿಂದುಳಿದ ವರ್ಗಗಳ ಹೋರಾಟದಲ್ಲಿ ತೊಡಗಿಕೊಂಡಿರುವ ದ್ವಾರಕಾನಾಥ್ ಪ್ರಜ್ಞಾಪೂರ್ವಕವಾಗಿಯೇ ಈ ಜಾಡು ಆರಿಸಿಕೊಂಡಿರುವಂತಿದೆ. ಆದರೆ ಇದರಿಂದಾಗಿ ಒಂದೆರಡು ಕೌತುಕಗಳು ಘಟಿಸಿವೆ.
ಮೊದಲನೆಯದು- ಈ ಕಥನವು ನಿರುದ್ದಿಶ್ಯ ಅಲೆದಾಟದ ಪ್ರವರವಾಗುವುದು ತಪ್ಪಿ ಇದಕ್ಕೊಂದು ತಾತ್ವಿಕ ಚೌಕಟ್ಟು ಒದಗಿದೆ. ಎರಡನೆಯದು- ಅದೇ ಇದರ ಮಿತಿಯೂ ಆಗಿದೆ! ಯಾಕೆಂದರೆ ಇವರು ಹುಡುಕಿ ಹೊರಟ ಕಪ್ಪು ಇತಿಹಾಸ ಎಷ್ಟೆಂದರೂ ಓದಿ ಅಥವಾ ಕೇಳಿ ತಿಳಿದ ಆಗಂತುಕನ ವರದಿ ಮಾತ್ರ. ಆದ್ದರಿಂದಲೇ ಬರವಣಿಗೆ ಪೂರ್ವನಿಶ್ಚಿತ ಜಾಡಿನಲ್ಲೇ ಸಾಗುತ್ತ, ಓದುಗನಿಗೆ, ಪ್ರಶ್ನೆ ಉತ್ತರ ಎರಡೂ ಬಲ್ಲವನ ಸಮ್ಮುಖದಲ್ಲಿ ಕೂತಂಥ ಕಸಿವಿಸಿ ಹುಟ್ಟಿಸತೊಡಗುತ್ತದೆ! ಹಾಗೆಂದು ಇವರ ಸ್ಥಳ ಪುರಾಣಗಳು ಮತ್ತಿತರೆ ವಿವರಗಳು (ಒಮ್ಮೊಮ್ಮೆ ತುಸು ಜಾಸ್ತಿ ಅನಿಸಿದರೂ- ಉದಾಹರಣೆಗೆ ’ಟಾಯ್ಲೆಟ್ ಪೇಪರ್’ ಪ್ರವರ) ಶುಷ್ಕವಾಗಿವೆ ಎಂದರ್ಥವಲ್ಲ. ಈ ಪುಟಗಳಲ್ಲಿ ಅನೇಕ ಆಸಕ್ತಿದಾಯಕ ಮಾಹಿತಿಗಳಿವೆ. ಉದಾಹರಣೆಗೆ ಇರಾಕ್ ಯುದ್ಧದಲ್ಲಿ ಇದ್ದೊಬ್ಬ ಮಗನನ್ನು ಕಳೆದುಕೊಂಡು ಜಾರ್ಜ್ ಬುಷ್ ವಿರುದ್ಧ ಏಕಾಂಗಿ ಹೋರಾಟ ನಡೆಸಿ ದೇಶದ ಆತ್ಮಸಾಕ್ಷಿ ಕೆಣಕಿದ ಸಿಂಡಿ ಶಿಹಾನ್ ಎಂಬ ಮಹಿಳೆಯ ಕಥೆ ತನ್ನ ಸ್ಥೂಲ ವಿವರಗಳಲ್ಲೇ ಮನ ಕಲಕುವಂತಿದೆ… ಜೊತೆಗೆ, ಅಮೆರಿಕೆಗೆ ಸೂಫಿ ಸಂಗೀತದ ಪರಿಚಯವಾಗಿದ್ದು ಭಾರತೀಯನಿಂದ ಎಂಬ ಕುತೂಹಲಕರ ಸಂಗತಿ. ಇನಾಯತ್ ಖಾನ್ ಎಂಬ ಆ ಮಹಾನುಭಾವನಿಗೆ ಅಮೆರಿಕಾದವರು ’ಭಾರತದ ತಾನ್ಸೇನ್’ ಎಂಬ ಬಿರುದು ಕೊಟ್ಟರಂತೆ. ಅರೆ! ಸ್ವತಃ ತಾನ್ಸೇನ್ ಭಾರತೀಯನಲ್ಲವೇ ಎಂಬ ಗೊಂದಲ ನನ್ನದು. ಅಲ್ಲದೆ ಮೈಕೆಲ್ ಜಾಕ್ಸನ್ಗೆ ಲೇಖಕರು ’ಕೋಡಂಗಿ’ ಎಂಬ ಬಿರುದನ್ನೂ ದಯಪಾಲಿಸಿದ್ದಾರೆ! ಆತನೂ ಕಪ್ಪು ಮನುಜರ ಸ್ವಾಭಿಮಾನ ಹೋರಾಟದ ಪ್ರತೀಕವೇ ಅಲ್ಲವೇ? ಲೇಖಕರ ಬಾಯ್ತಪ್ಪಿ ಈ ಮಾತು ಬಂತೇ?!…
ಇರಲಿ, ಮೊಸರಲ್ಲಿ ಕಲ್ಲು ಹುಡುಕುವ ನನ್ನ ಇಂಥ ದುಷ್ಟ ಚಾಳಿಯನ್ನು ಬದಿಗೊತ್ತಿ ನೋಡಿದರೆ, ಎಂಥ ಲವಲವಿಕೆಯ ಗದ್ಯವಿದು! ಮೊದಲ ಪುಟದಿಂದಲೇ ದ್ವಾರಕಾನಾಥ್ ಜಾರಿಗೊಳಿಸುವ ಸುರಸವಾದ ತುಂಟ ಶೈಲಿ ನನಗಂತೂ ಸಾಕಷ್ಟು ಓದಿನ ಸುಖ ಕೊಟ್ಟಿದೆ. ಅಷ್ಟಲ್ಲದೆ ಈಗ ಅವರಲ್ಲಿ ಮೈಗೂಡಿರುವ ಸೂಕ್ಷ್ಮ ಪ್ರೌಢಿಮೆಗೂ ’ಅಮೆರಿಕಾ…’ ಅಸಂಖ್ಯ ನಿದರ್ಶನಗಳನ್ನು ಒದಗಿಸುತ್ತದೆ.
ಪ್ರಯಾಣದ ಹಾದಿಯಲ್ಲಿ ಅಮೆರಿಕಾ ತಲುಪುವ ಮುನ್ನವೇ ಲಂಡನ್ನಿನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಇಳಿದು ಕಾಲಹರಣ ಮಾಡುವಾಗ ಹೊರಗೆ ಕೆಲವು ಹಕ್ಕಿಗಳು ಇವರ ಕಣ್ಣಿಗೆ ಬೀಳುತ್ತವೆ. ಆ ಹಕ್ಕಿಗಳ ಬಗ್ಗೆ ದ್ವಾರಕಾನಾಥ್ ಬರೆಯುವುದು: ’ಅವು ನಮ್ಮೂರಿನ ಹಕ್ಕಿಗಳ ಭಾಷೆಯಲ್ಲೇ ಚಿಲಿಪಿಲಿಗುಟ್ಟುತ್ತಿದ್ದರಿಂದ ಲಂಡನ್ನಿನ ಇಂಗ್ಲಿಷ್ ಈ ಹಕ್ಕಿಗಳ ಮೇಲೆ ಪ್ರಭಾವ ಬೀರಿಲ್ಲವೆಂಬುದು ಖಚಿತವಾಯಿತು….!’
ತಮ್ಮ ಪ್ರವಾಸದುದ್ದಕ್ಕೂ ರೆಡ್ಡಿಯ ಕಿರುಬೆರಳು ಹಿಡಿದೇ ಓಡಾಡುವ ದ್ವಾರಕಾನಾಥ್ ಒಮ್ಮೆ ಮಾತ್ರ- ಡಲ್ಲಾಸ್ನಿಂದ ಸ್ಯಾನ್ ಫ್ರಾನ್ಸಿಸ್ಕೊಗೆ- ಒಂಟಿಯಾಗಿ ಪ್ರಯಾಣ ಮಾಡುವ ಪ್ರಸಂಗ ಬರುತ್ತದೆ. ಆಗ ರೆಡ್ಡಿ ನೀಡುವ ಸಾವಿರ ಮುನ್ನೆಚ್ಚರಿಕೆಗೆ ಸೋಜಿಗಗೊಂಡ ಇವರ ಪ್ರತಿಕ್ರಿಯೆ:
(ರೆಡ್ಡಿ ವರ್ತನೆ) ಹಿಂದೆ ನಾನು ಕೋಲಾರದಿಂದ ಇಪ್ಪತ್ತು ಮೈಲು ದೂರದ ಕೆಜಿಎಫ್ಗೆ ಹೋಗುವಾಗ ನನ್ನ ಮನೆಯವರೆಲ್ಲ ನನಗೆ ನೀಡುತ್ತಿದ್ದ ಮುನ್ನೆಚ್ಚರಿಕೆ ಕ್ರಮದಂತೆ ಕಾಣುತ್ತಿತ್ತು. ಆಗ ಬಸ್ಸಿನಲ್ಲಿ ಹೋಗುತ್ತಿದ್ದ ನಾನು ಕಿಟಕಿಯಲ್ಲಿ ಹೊರಕ್ಕೆ ಕೈಯಿಟ್ಟು ಪ್ರಯಾಣ ಮಾಡಬಹುದೆಂದು ನನ್ನವರು ಆತಂಕಪಡಲು ಕಾರಣವಿತ್ತು. ಆದರೆ ಕಿಟಕಿಯೇ ತೆರೆಯದ ವಿಮಾನಕ್ಕೇರಿಸಲು ರೆಡ್ಡಿ ಯಾಕೆ ಅಷ್ಟೊಂದು ಮುನ್ನೆಚ್ಚರಿಕೆ ವಹಿಸಿದ ಎಂದು ನನಗರ್ಥವಾಗಲೇಯಿಲ್ಲ!…
ಇಷ್ಟು ಹಗುರವಾಗಿ ನಮ್ಮಲ್ಲಿ ಮಂದಹಾಸ ಮೂಡಿಸಬಲ್ಲ ಲೇಖಕರು ಗಂಭೀರ ವಿಷಯಗಳನ್ನೂ ಹೇಗೆ ತೂಗಿಸಬಲ್ಲರು ಎಂಬುದಕ್ಕೆ ಉದಾಹರಣೆಯಾಗಿ ಅವರು ಕ್ಯಾಲಿಫೋರ್ನಿಯಾ ಬಗ್ಗೆ ಮಾಡುವ ಟಿಪ್ಪಣಿ ಗಮನಿಸಬೇಕು. ಪ್ರಾಚೀನ ಕಾಲದ ’ಗೋಲ್ಡ್ ರಶ್’, ಸಿಲಿಕಾನ್ ವ್ಯಾಲಿ ಮತ್ತು ನೈಸರ್ಗಿಕ ಸಂಪತ್ತುಗಳಿಂದ ಸಿರಿ ಸಮೃದ್ಧಿಯನ್ನೇ ಸುರಿದುಕೊಂಡಿರುವ ಕ್ಯಾಲಿಫೋರ್ನಿಯಾಗೆ (ಭಾರತೀಯರು ಅದರಲ್ಲೂ ಕನ್ನಡಿಗರೂ ಸೇರಿದಂತೆ) ಜಗತ್ತಿನ ಮೂಲೆಮೂಲೆಗಳಿಂದ ಜನ ಮುಕುರುತ್ತಾರೆ. ಹಾಗೆ ನೋಡಿದರೆ ಕ್ಯಾಲಿಫೋರ್ನಿಯಾ ಸದಾ ಭೂಕಂಪದ ಭೀತಿಯಲ್ಲೇ ಜೀವಿಸುವ ಸಾಮ್ರಾಜ್ಯ. ಆದರೆ ದ್ವ್ವಾರಕಾನಾಥ್ ಬರೆಯುತ್ತಾರೆ: ’ಇಲ್ಲಿನ ಚಿನ್ನಕ್ಕಾಗಿ, ಸಂಪತ್ತಿಗಾಗಿ, ಹಣಕ್ಕಾಗಿ ಮುಗಿಬೀಳುವ ಜನಕ್ಕೆ ಸಾವಿನ ಅರಿವಿಲ್ಲವೆಂದಲ್ಲ, ಆದರೆ ಮನುಷ್ಯನ ಆಸೆಯ ಮುಂದೆ ಸಾವೂ ಸೊರಗಿದಂತೆ ಕಾಣುತ್ತದೆ….’
ಇವರ ಇಂಥ ’ಹಗುರ ಗಾಂಭೀರ್ಯ’ದ ಕುರುಹಾಗಿ ’ಸುಮ್ಮನೆ ಕಳೆದ ಒಂದು ದಿನ’ ಅಧ್ಯಾಯವನ್ನು ಓದಬಹುದು. ಈ ಶೀರ್ಷಿಕೆ- ಲಂಕೇಶರ ಟೀಕೆ ಟಿಪ್ಪಣಿಯಿಂದ ಪಡೆದದ್ದು ಎಂಬ ನೆನಪು. ಮತ್ತು ಲಂಕೇಶರ ನೆನಪು ದ್ವಾರಕಾನಾಥ್ರನ್ನು ಅಲ್ಲಲ್ಲಿ ಕಾಡಿರುವುದು ಸಹಜವಾಗಿಯೇ ಇದೆ. ಹಾಗೆ ಅಮೆರಿಕಾದ ನೊಬೆಲ್ ಪ್ರಶಸ್ತಿ ವಿಜೇತ ಬರಹಗಾರ ಹೆಮಿಂಗ್ ವೇ ಮತ್ತು ಲಂಕೇಶರ ನಡುವೆ ಇವರು ತರುವ ಸಾಮ್ಯ ನೋಡಬೇಕು:
…ಇಬ್ಬರೂ ಸ್ವೇಚ್ಛೆಯನ್ನು ಪ್ರೀತಿಸಿದವರು. ಜೀವನವನ್ನು ಉತ್ಕಟವಾಗಿ ಪ್ರೀತಿಸಿದವರು. ತಮಗೆ ಸಿಕ್ಕ ಸ್ವಾತಂತ್ರ್ಯದಲ್ಲಿ ಯಶಸ್ವಿಯಾದರೊ ಇಲ್ಲವೊ, ಕಡೆ ತನಕ ಪ್ರೇಮಕ್ಕಾಗಿ ಕಾತರಿಸಿದವರು. ಸಾಯುವ ತನಕ ಅನುಭವಿಸಿದ್ದನ್ನು ಬರೆದವರು. ಬರಹವನ್ನೇ ಉಸಿರಾಗಿಸಿಕೊಂಡವರು…
ಬಿಟ್ಟರೆ ಹೀಗೆ ಎಲ್ಲವನ್ನೂ ನಾನೇ ಹೇಳಿ ಓದುಗರ ಸುಖಕ್ಕೆ ಭಂಗ ತರುವ ಅಪಾಯವಿದೆ. ಆದ್ದರಿಂದ ಇಲ್ಲಿಗೆ ನಿಲ್ಲಿಸಿ ಗೆಳೆಯ ದ್ವಾರಕಾನಾಥ್ರ ಈ ಚೈತನ್ಯಪೂರ್ಣ ಕಥನ ನನಗೆ ಕೊಟ್ಟ ಸಂತೋಷದ ಕಾರಣಕ್ಕೆ ಅವರಿಗೆ ಅಭಿನಂದನೆ ಹೇಳುತ್ತ ನನ್ನ ಮೆಚ್ಚಿನ ಭಾಗವೊಂದನ್ನು ಉಲ್ಲೇಖಿಸುತ್ತೇನೆ.
ನಯಾಗರಾ ಜಲಪಾತವನ್ನು ಕಂಡು ’ಆ ಅಪರಿಮಿತ ಆನಂದವನ್ನು ಅನುಭವಿಸಿ ಹೊರಬಂದ ಮೇಲೆ ಒಂದು ರೀತಿಯ ವೈರಾಗ್ಯ ಮುತ್ತಿಬಿಡುತ್ತೆ. ನಾವು ನಮ್ಮ ಸಾವನ್ನು ಡಿಕ್ಲೇರ್ ಮಾಡಬಹುದು ಎನಿಸಿಬಿಡುತ್ತದೆ’ ಎನ್ನುವ ದ್ವಾರಕಾನಾಥ್ಗೆ ಅನಿಸುವುದು ಇದಿಷ್ಟೇ ಅಲ್ಲ:
…ನಯಾಗರವನ್ನು ಅದೆಷ್ಟು ಆಂಗಲ್ಗಳಿಂದ ನೋಡಿದರೂ ಸಾಲದೆನಿಸುವ ಈ ಸಂತೋಷವನ್ನು ನನ್ನ ಊರಿಂದ ಇಲ್ಲಿಗೆ ಎಂದೆಂದಿಗೂ ಬರಲಾಗದ ನನ್ನ ಗೆಳೆಯರಿಗೆ, ಆತ್ಮೀಯರಿಗೆ ಹೇಗೆ ಕೊಂಡೊಯ್ಯಲಿ ಎಂದು ಮನಸ್ಸು ಭಾರವಾಯಿತು. ಈ ಇಡೀ ಫಾಲ್ಸ್ಅನ್ನು ತನ್ನ ಬೊಗಸೆಯಲ್ಲಿ ಹಿಡಿದು ಇಡೀ ಭೂಮಂಡಲಕ್ಕೆ ತೋರಿಸುತ್ತ ಜಗತ್ತೆಲ್ಲಾ ಸುತ್ತುವ ಶಕ್ತಿಯಿರುವುದು ಆ ಭಗವಂತನಿಗೆ ಮಾತ್ರ! ಈ ಕಾರಣಕ್ಕಾದರೂ ಆ ಭಗವಂತ ಅಸ್ತಿತ್ವದಲ್ಲಿರಬಾರದಿತ್ತೆ ಎಂದು ಮನಸ್ಸು ದೇವರ ಅಸ್ತಿತ್ವವನ್ನು ಬಯಸಿತು. ಈ ಹುಚ್ಚಿನಿಂದ ಹೊರಬರಲು ಇನ್ನೂ ಸಾಕಷ್ಟು ಕಾಲ ಬೇಕಾಗಬಹುದು ಎಂದು ಚಿಂತಿಸುತ್ತಾ ರೆಡ್ಡಿಯೊಂದಿಗೆ ಹೆಜ್ಜೆ ಹಾಕತೊಡಗಿದೆ….
ಪುಸ್ತಕಕ್ಕೆ ಬರೆದ ಮುನ್ನುಡಿ







0 Comments