ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬದುಕು ಬದಲಿಸಿದವರು…

ಖ್ಯಾತ ಲೇಖಕ, ಅಂಕಣಕಾರ ನಾಗೇಶ ಹೆಗಡೆ ಅವರ ಅಭಿನಂದನಾ ಗ್ರಂಥ ಮಾಚ್೯ 20 ರಂದು ಗಾಂಧಿ ಭವನದಲ್ಲಿ ಬಿಡುಗಡೆಯಾಗುತ್ತಿದೆ. ‘ನೆಲಗುಣ’ ಗುರುರಾಜ್ ಎಸ್ ದಾವಣಗೆರೆ ಅವರು ಸಂಪಾದಿಸಿದ್ದಾರೆ.

ಈ ಸಂದರ್ಭದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ನಿರಂಜನ ವಾನಳ್ಳಿ ಅವರು ತಾವು ಕಂಡ ನಾಗೇಶ ಹೆಗಡೆಯನ್ನು ಈ ಬರಹದಲ್ಲಿ ಮುಂದಿಟ್ಟಿದ್ದಾರೆ.

ಡಾ ನಿರಂಜನ ವಾನಳ್ಳಿ

ತೀರಾ ಕುಗ್ರಾಮದಿಂದ ಬಂದ ನನಗೆ ಪತ್ರಿಕೋದ್ಯಮ ಓದುವ ಆಸೆ ಹುಟ್ಟಿದ್ದು ಹೇಗೆ ಎಂದು ಅನೇಕರು ಕೇಳಿದ್ದಾರೆ. ಆಗ ಹೇಳಿದ್ದು ನಮ್ಮನೆಗೆ ಬರುತ್ತಿದ್ದ ಪ್ರಜಾವಾಣಿಯಲ್ಲಿ ನಾಗೇಶ ಹೆಗಡೆಯವರ ಹೆಸರನ್ನು ಓದಿ ಸ್ಫೂರ್ತಿ ಸಿಕ್ಕಿದ್ದು ಎಂಬುದಾಗಿ. ಅವರನ್ನು ಮೊದಲು ನೋಡಿದ್ದು ಮೈಸೂರಿನಲ್ಲಿ ಉತ್ತರಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘದ ಕಾರ್ಯಕ್ರಮಕ್ಕೆ ಅವರು ಬಂದಾಗ. ಅವರ ಜೊತೆ ಆಗ ಮಹರಾಜ ಕಾಲೇಜು ವಿದ್ಯಾರ್ಥಿಗಳಾಗಿದ್ದ ನಾನು ಮತ್ತು ಅಡಕಳ್ಳಿ ರಾಜು ಬಹಳ ಹೊತ್ತು ಕಳೆದೆವು.

ಆಗ ಶಿರಸಿಯಿಂದ ಬರುತ್ತಿದ್ದ ‘ಮುನ್ನಡೆ’ ಪತ್ರಿಕೆಗೆ ಅವರ ಭಾಷಣವನ್ನು ಇದು ಉತ್ತರ ಕಾಣದ ಜಿಲ್ಲೆ ಎಂಬುದಾಗಿ ವರದಿ ಮಾಡಿದ್ದೆ. ಅವರನ್ನು ಮೊದಲ ಬಾರಿಗೆ ಭೇಟಿಯಾದಾಗ ಖುಷಿಯಾಗಲು ಇನ್ನೊಂದು ಕಾರಣ- ನನ್ನ ಹಾಗೆ ಅವರೂ ಕುಳ್ಳರೇ ಎಂಬುದು. ಸಾಧನೆ ಮಾಡಲು ಕುಳ್ಳಗಿರುವಿಕೆ ಅಡ್ಡಿಯಾಗದು ಎಂಬುದು ನನಗೆ ಅಂದು ಮನದಟ್ಟಾಯ್ತು! ಆನಂತರ ದಿನಗಳಲ್ಲಿ ನಾಗೇಶ ಹೆಗಡೆಯವರೇ ನನ್ನ ಗುರುಗಳು ಎಂದು ಮನಃ ಪೂರ್ವಕವಾಗಿ ಹೇಳಬಲ್ಲೆ. ಅವರು ನನಗೆ ತರಗತಿಯಲ್ಲಿ ಕಲಿಸಿದವರಲ್ಲ. ಆದರೆ ನಾನು ಪತ್ರಿಕೆಗಳಿಗೆ ಬರೆಯಲು ಆರಂಭಿಸಿದ ದಿನಗಳಿಂದ ಅವರೇ ಪ್ರೇರಣೆ.

ನನಗೆ ಮಾತ್ರವಲ್ಲ, ೧೯೮೦ರ ದಶಕ ಕರ್ನಾಟಕದಲ್ಲಿ ಮ್ಯಾಗಜಿನ್‌ಗಳ ಸುವರ್ಣಯುಗವಾಗಿತ್ತು. ಆಗ ಬಹಳ ಜನ ಹೊಸ ಕ್ರಿಯಾಶೀಲ ಕನ್ನಡ ಪತ್ರಿಕಾ ಬರಹಗಾರರು ಹುಟ್ಟಿಕೊಂಡರು. ಅವರಿಗೆಲ್ಲ ನಾಗೇಶ ಹೆಗಡೆಯವರು ಏಕಲವ್ಯನಿಗೆ ದ್ರೋಣಾಚಾರ್ಯರು ಇದ್ದ ಹಾಗೆ ಎಂದರೆ ತಪ್ಪಲ್ಲ. ಎಷ್ಟೋ ಬಾರಿ ಅವರೇ ವಿಷಯ ಕೊಟ್ಟು ಬರೆಸಿದ್ದಿದೆ. ಬರೆದ ವಿಷಯವನ್ನು ಹೀಗಲ್ಲ ಹೀಗೆ ಬರಿ ಎಂಬ ಸೂಚನೆಯೊಂದಿಗೆ ಹಿಂದಿರುಗಿಸಿದ್ದು ಇದೆ, ಸುಮಾರಾಗಿದ್ದರೆ ತಾವೇ ತಿದ್ದಿ ಬರೆದದ್ದು ಹೆಚ್ಚಿನ ಸಂದರ್ಭಗಳಲ್ಲಿ.

ಒಳ್ಳೆಯ ಶೀರ್ಷಿಕೆ ಕೊಡುವ ಗೀಳು- ಅಭ್ಯಾಸ ನನಗೆ ಅಂಟಿಕೊಂಡಿದ್ದು ಅವರ ಬರಹಗಳಿಂದಲೇ. ನಾನು ಮನೆಯಲ್ಲಿ ಬಿಸಾಡಬೇಕಾದ ವಸ್ತುಗಳಲ್ಲಿ ಗಿಡಬೆಳೆಸುವ ಹವ್ಯಾಸದ ಮೈಸೂರಿನ ಶ್ರೀಮತಿ ಶಾರದಾ ಗುಪ್ತ ಅವರ ಬಗ್ಗೆ ಒಂದು ಲೇಖನ ಕಳಿಸಿದ್ದೆ ಅದನ್ನು ಅವರು ತಿದ್ದಿದರು ಮಾತ್ರವಲ್ಲ, ಅದಕ್ಕೆ ‘ಬೇರಿಗಿಷ್ಟು ನೆಲೆ ಮತ್ತೆಲ್ಲಾ ಕಲೆ’ ಎಂಬ ಶೀರ್ಷಿಕೆ ನೀಡಿದ್ದರು! ಆಲೇಖನಕ್ಕೆ ನೀಡಬಹುದಾಗಿದ್ದ ಅತ್ಯುತ್ಕೃಷ್ಟ ಶೀರ್ಷಿಕೆ ಅದುವೇ ಎಂದು ನನಗೆ ಇಂದಿಗೂ ಅನಿಸುತ್ತದೆ. ಆಗಿನಿಂದ ಅವರಿಗೆ ಶೀರ್ಷಿಕೆ ಬದಲಿಸಲು ಅವಕಾಶ ಕೊಡಬಾರದು ಎಂಬ ಗುರಿಯಿಟ್ಟುಕೊಂಡೇ ನಾನು ಲೇಖನ ಬರೆಯುತ್ತಿದ್ದೆ.

ಅತ್ಯಂತ ಎಚ್ಚರಿಕೆಯಿಂದ ಶೀರ್ಷಿಕೆ ಬರೆಯುತ್ತಿದ್ದೆ. ಈಗ ಕನ್ನಡದಲ್ಲಿ ಹೊಸತಲೆಮಾರಿನ ಪತ್ರಕರ್ತರು ತಮ್ಮ ಬರಹಗಳಿಂದ ಖ್ಯಾತರಾಗುವವರಿಗೆ ಯಾಕೆ ಬರವೆಂದರೆ ನಾಗೇಶ ಹೆಗಡೆಯವರ ಹಾಗೆ ಬರಹಗಾರರ ಪ್ರತಿಭೆ ಗುರುತಿಸಿ ಕಿವಿಹಿಂಡಿ ಬರೆಸುವ ಸಂಪಾದಕರುಗಳು ಈಗ ಎಲ್ಲಿದ್ದಾರೆ? ನಾಗೇಶ ಹೆಗಡೆಯವರು ಕನ್ನಡದ ಮೊದಲ ಫೀಚರ್ ರೈಟರ್. ಯಾಕೆಂದರೆ ಅವರ ಮೊದಲ ನೇಮಕಾತಿಯೇ ನುಡಿಚಿತ್ರಕಾಗಿ ಎಂಬುದಾಗಿತ್ತು. ಆವರೆಗೆ ಯಾವ ಪತ್ರಿಕೆಯಲ್ಲೂ ಈತೆರನ ಹುದ್ದೆ ಇದ್ದ ದಾಖಲೆಯಿರಲಿಲ್ಲ. ಅವರು ನುಡಿಚಿತ್ರವೆಂಬ ಪ್ರಕಾರವನ್ನು ಬರಹಗಾರರಾಗಿ ಬೆಳೆಸಿದರು ಹಾಗೂ ಸಂಪಾದಕರಾಗಿ ಪೋಷಿಸಿದರು.

ಕನ್ನಡದಲ್ಲಿ ನುಡಿಚಿತ್ರಕಾರರ ದೊಡ್ಡ ಪಡೆಯನ್ನೇ ಕಟ್ಟಿದರು. ಅವರು ಸುಧಾದ ಸಂಪಾದಕರಾಗಿದ್ದ ಕಾಲದಲ್ಲಿ, ಅದಕ್ಕೂ ಮೊದಲು ಪ್ರಜಾವಾಣಿಯ ‘ಕರ್ನಾಟಕ ದರ್ಶನ’ ಪುರವಣಿಯ ಸಂಪಾದಕರಾಗಿದ್ದ ಸಂದರ್ಭದಲ್ಲಿ ಅತಿಹೆಚ್ಚು ಪರಿಸರ ಲೇಖನಗಳು ಅಲ್ಲಿ ಪ್ರಕಟಗೊಂಡವು. ಅದಕ್ಕೆ ಕಾರಣ ಸಂಪಾದಕರ ಪರಿಸರಾಸಕ್ತಿಯೇ ಆಗಿತ್ತು. ಅವರು ಪ್ರಜಾವಾಣಿಯಲ್ಲಿ ಬರೆಯುವ ‘ವಿಜ್ಞಾನ ವಿಶೇಷ’ ಅಂಕಣ, ಕನ್ನಡದಲ್ಲಿ ಪ್ರಕಟಗೊಂಡ ಅತಿ ದೀರ್ಘ ಅಂಕಣಗಳಲ್ಲಿ ಒಂದು. ಅವರ ವಿಶೇಷವೆಂದರೆ ವಿಜ್ಞಾನವನ್ನು ಕನ್ನಡದಲ್ಲಿ ಜನಪ್ರಿಯವಾಗುವ ಹಾಗೆ, ಅತ್ಯಂತ ಸಾಮಾನ್ಯ ಓದುಗರಿಗೂ ಅರ್ಥವಾಗುವ ಹಾಗೆ ಹೇಗೆ ಬರೆಯಬಹುದು ಎಂಬ ಮಾದರಿಯನ್ನು ಅವರು ಹಾಕಿಕೊಟ್ಟರು. ಅವರಿಗಿಂತ ಮೊದಲು ವಿಜ್ಞಾನ ಬರಹಗಳನ್ನು ಬರೆಯುವುದೆಂದರೆ ಯಾರೂ ಓದದ ರೀತಿಯಲ್ಲಿ ಬರೆಯಲಾಗುತ್ತಿತ್ತು ಮತ್ತು ಹಾಗೆ ಬರೆಯುವುದೇ ಶ್ರೇಷ್ಠ ಎಂಬ ಭ್ರಮೆ ಇತ್ತು. ಅದನ್ನು ಕಳಚಿ ಜನಪ್ರಿಯ ಮಾದರಿಯ ವಿಜ್ಞಾನ ಬರವಣಿಗೆಯ ಮಾರ್ಗ ಪ್ರವರ್ತಕರು ಅವರೇ.

ನಾನು ಎಂಎ ಅಂತಿಮ ವರ್ಷದ ಕೊನೆಯ ದಿನಗಳಲ್ಲಿರುವಾಗ ನಮ್ಮ ವಿಭಾಗಕ್ಕೆ ಉಜಿರೆ ಕಾಲೇಜಿನಿಂದ ಪತ್ರಿಕೋದ್ಯಮ ಅಧ್ಯಾಪಕರ ಆಯ್ಕೆಗಾಗಿ ಪ್ರಾಂಶುಪಾಲರೇ ಬಂದಿದ್ದರು. ಸಂದರ್ಶನದಲ್ಲಿ ನಾನು ಆಯ್ಕೆಯಾದೆ. ಆಗ ನನಗೆ ಪೀಕಲಾಟಕ್ಕಿಟ್ಟುಕೊಂಡಿತು. ಯಾಕೆಂದರೆ ಆಗಷ್ಟೆ ಪತ್ರಿಕೆಗಳಿಗೆ ಬರೆಯುವ ಅಭ್ಯಾಸ ಮಾಡಿಕೊಂಡಿದ್ದೆ ಹಾಗೂ ವೃತ್ತಿನಿರತ ಪತ್ರಕರ್ತನಾಗುತ್ತೇನೆಂದೇ ಅಂದುಕೊಂಡಿದ್ದೆ.

ಪತ್ರಕರ್ತನಾಗಲೋ ಅಧ್ಯಾಪಕನಾಗಲೋ ಎಂಬ ಗೊಂದಲದಲ್ಲಿ ಆಗ ನಾಗೇಶ ಹೆಗಡೆಯವರಿಗೆ ಒಂದು ಕಾರ್ಡುಬರೆದೆ. ಮರುದಿನವೇ ಅವರ ಉತ್ತರ ಬಂತು ಹಾಗೂ ಕೂಡಲೇ ಹೋಗಿ ಪತ್ರಿಕೋದ್ಯಮ ಅಧ್ಯಾಪಕನಾಗಿ ಸೇರಿಕೋ ಅಲ್ಲಿಂದ ಯಾವಾಗ ಬೇಕಾದರೂ ಪತ್ರಿಕೆಗೆ ಬರಬಹುದು ಆದರೆ ಪತ್ರಿಕೆಗೆ ಬಂದಮೇಲೆ ಅಧ್ಯಾಪಕನಾಗುವ ಅವಕಾಶ ಮತ್ತೆ ಸಿಗಲಿಕ್ಕಿಲ್ಲ.

ಅಧ್ಯಾಪಕನಾಗಿದ್ದುಕೊಂಡೇ ಫ್ರೀಲಾನ್ಸ್ ಮಾಡು ಎಂಬುದಾಗಿ ಸೂಚಿಸಿದ್ದರು. ಅವರ ಆಶಯದಂತೆ ನಾನು ಹೋಗಿ ಪತ್ರಿಕೋದ್ಯಮ ಅಧ್ಯಾಪಕನಾದೆ. ಮತ್ತೆ ಹಿಂತಿರುಗಿ ನೋಡಿದ್ದಿಲ್ಲ ಹಾಗೂ ನನ್ನ ನಿರ್ಧಾರದ ಬಗ್ಗೆ ಯಾವತ್ತೂ ವಿಷಾದಪಟ್ಟಿದ್ದಿಲ್ಲ. ನಾಗೇಶ ಹೆಗಡೆಯವರ ಒಂದು ಪತ್ರ ನನ್ನ ಬದುಕನ್ನೇ ಬದಲಾಯಿಸಿತು ಎಂಬುದು ಈಗ ನೆನಪಾಗುತ್ತಿದೆ. ಅವರ ಒಡನಾಟಕ್ಕೆ ಬಂದು ಮೂರು ದಶಕಗಳೇ ಕಳೆದಿವೆ. ಅವರು ನಮ್ಮ ಹತ್ತಿರದ ಊರಿನವರು ಎಂಬುದೂ ಕಾರಣವಾಗಿ ಆತ್ಮೀಯತೆ ಬೆಳೆದಿದೆ.

ವೃತ್ತಿ ಬಾಂಧವ್ಯ ಬಿಟ್ಟೂ ಅವರ ಮನೆಯಲ್ಲಿ ಆತಿಥ್ಯದ ಪ್ರೀತಿಯನ್ನು ಅನುಭವಿಸಿದ್ದೇನೆ. ಮಗಳು ಸಿರಿ ಬೆಂಗಳೂರಿಗೆ ಓದಲು ಹೋದಾಗ ತಮ್ಮ ಮನೆಯನ್ನು ತೋರಿಸಿ ‘ಯಾವತ್ತೂ ನಿನಗೆ ನಮ್ಮನೆಯ ಬಾಗಿಲು ತೆರೆದಿದೆ’ ಎಂಬ ಧೈರ್ಯಕೊಟ್ಟಿದ್ದಾರೆ. ಅವರ ಮನೆಯವರು ಕೂಡಾ ನಮ್ಮ ಕುಟುಂಬಕ್ಕೆ ಆತ್ಮೀಯರಾಗಿದ್ದಾರೆ. ಹೀಗಾಗಿ ಇತರರಿಗೆ ಅವರು ವಿಜ್ಞಾನ ಬರಹಗಾರ ನಾಗೇಶ ಹೆಗಡೆಯವರಾದರೆ ನಮಗೆ ನಾಗೇಶಣ್ಣ.

ಇತ್ತೀಚೆಗೆ ನಾನು ಯೂಟ್ಯೂಬಿನಲ್ಲಿ ಫ್ರೀಲಾನ್ಸಿಯ ಕತೆಗಳನ್ನು ಆರಂಭಿಸಿದಾಗ ನಾಗೇಶ ಹೆಗಡೆಯವರೇ ನಮ್ಮ ಮೊದಲ ವಿಮರ್ಶಕರು. ಅವರು ಏನು ಹೇಳುತ್ತಾರೆ ಎಂಬುದು ನನಗೆ ಪ್ರತೀವಾರ ಮುಖ್ಯವಾಗಿತ್ತು. ನಾನಿಂದು ಏನು ಆಗಿದ್ದೇನೋ ಅದರಲ್ಲಿ ನಾಗೇಶ ಹೆಗಡೆಯವರ ಪಾಲೂ ಇದೆ ಎಂದು ನಿಸ್ಸಂಕೋಚವಾಗಿ ಹೇಳಬಲ್ಲೆ.

‍ಲೇಖಕರು Admin

14 March, 2022

1 Comment

  1. T S SHRAVANA KUMARI

    ಉತ್ತಮ ನುಡಿನಮನ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading