ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬದುಕಿನ ಪ್ರೀತಿ, ನೀತಿ ಎಚ್ಚರಿಸುವ ಪುಸ್ತಕ..

ಮಾಲಾ ಮ ಅಕ್ಕಿಶೆಟ್ಟಿ ಅವರು ಬರೆದ ಕೃತಿ ‘ತಿಳಿದು ನಡೆದರೆ’

‘ಸುಮಾ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತ ಸಾವಿತ್ರಿ ಗಾಯಕೊಂಡೆ ಅವರ ಅನಿಸಿಕೆ ಇಲ್ಲಿದೆ.

-ಸಾವಿತ್ರಿ ಗಾಯಕೊಂಡೆ

ಹದಿ ಹರೆಯದವರಿಗೆ ಇಂದಿನ ದಿನಗಳಲ್ಲಿ ನಾನಾ ಅವಕಾಶಗಳೊಂದಿಗೆ ಅಡಚಣೆ, ಅವರ ಮನವನ್ನು ಚಂಚಲಗೊಳಿಸುವ ನಾನಾ ಕಾರಣಗಳಿರುವಾಗ ಅವರಿಗಾಗಿ ವ್ಯಕ್ತಿತ್ವ ವಿಕಸನ ಬರಹಗಳು ಅವಶ್ಯವಾಗಿವೆ. ಮೊಬೈಲಿನಲ್ಲಿ ಸಮಯವನ್ನು ಉಪಯುಕ್ತಗೊಳಿಸುವ ಅವಕಾಶಗಳೊಂದಿಗೆ ಸುಮ್ಮನೆ ಸಮಯ ವ್ಯರ್ಥ ಮಾಡುತ್ತ, ಗೇಂಗಳನ್ನು ಆಡುತ್ತ, ರೀಲ್ಸ್ ಗಳನ್ನು ನೋಡುತ್ತಾ ಮಕ್ಕಳೂ ಕೂಡ ಬೇರೆ ದಾರಿ ತುಳಿಯುವ ಸಾಧ್ಯತೆಯಿರುವಾಗ ಮೊಬೈಲಿನಲ್ಲಿ ವೃತ್ತ ಪತ್ರಿಕೆ, ಲೇಖನ, ಪುಸ್ತಕಗಳನ್ನು ಓದುತ್ತ ಮನೆಗಾದರೆ ೧-೨ ವೃತ್ತಪತ್ರಿಕೆ ತರಬಹುದು, ಮೊಬೈಲಿನಲ್ಲಿ ನೀವು ೫-೬ ಪೇಪರ್ ಬೇಕಾದರೂ ಓದಬಹುದು ಎಂದು ಹೇಳುತ್ತಾ ಲೇಖಕರು ಉತ್ತಮ ಹಾದಿ ತೋರಿಸುತ್ತಿದ್ದಾರೆ.

ಈಗಿನ ಪ್ರಚಲಿತ ಜಗತ್ತಿಗೆ ತಕ್ಕಂತೆ ಮಕ್ಕಳಿರಬೇಕು ಎಂಬ ಆಸೆಯಿಂದಲೋ, ತಮ್ಮ ಕೆಲಸದ ಗಡಿಬಿಡಿಯ ನಡುವೆ ಮಕ್ಕಳ ಸಮಯ ವ್ಯಸ್ತವಾಗಿರಲೆಂದೋ ತಂದೆ-ತಾಯಿ ಅವರಿಗಾಗಿ ಮೊಬೈಲ್ ಕೊಡಿಸಿ ಬಳಸಲು ಅವಕಾಶ ಮಾಡಿಕೊಡುವುದರೊಂದಿಗೆ,ಅವರ ಮೇಲೆ ನಿಗಾ ವಹಿಸುವುದು ಅಗತ್ಯ ಎಂದು ಒತ್ತಿ ಹೇಳುತ್ತಿದ್ದಾರೆ.ಮಕ್ಕಳು ಆನ್ಲೈನ್ ಆಟದ ನೆಪದಲ್ಲಿ ಬ್ಲೂವೆಲ್, ಇತ್ಯಾದಿ ಆಟಗಳ ಜಾಲದಲ್ಲಿ ಮುಳುಗಿ ಪ್ರಾಣವನ್ನೇ ಕಳೆದುಕೊಳ್ಳುವಂತಾಗಬಾರದಲ್ಲವೇ?ಆಟ ಒಂದು ಮನರಂಜನೆ ನೀಡಬೇಕೆ ಹೊರತು ಅವರ ಪ್ರಾಣ ತೆಗೆದರೆ ಏನು ಪ್ರಯೋಜನ?

ಸಾಧನೆಯ ಹಾದಿಯಲ್ಲಿ ನಿದ್ರೆಯೂ ಮುಖ್ಯಎಂದು ಹೇಳುತ್ತಾ, ಓದು, ಕೆಲಸದ ನೆಪದಲ್ಲಿ ನಿದ್ರೆಗೆಡದಿರಿ.ಉತ್ತಮ ನಿದ್ರೆ, ವ್ಯಾಯಾಮ, ಸಮತೋಲಿತ ಆಹಾರ ಇವೆಲ್ಲ ನಮ್ಮ ಬದುಕಿಗೆ ಅತ್ಯವಶ್ಯಕ. ಒಂದರಲ್ಲಿ ಹೆಚ್ಚು ಕಡಿಮೆಯಾದರೂ ನಮ್ಮ ಆರೋಗ್ಯದಲ್ಲಿ ಏರುಪೇರಾಗಬಹುದು.ನಿದ್ರೆ ಕಡಿಮೆ ಮಾಡಿ ಹೆಚ್ಚು ದುಡಿದು ಹಣ ಸಂಪಾದಿಸುವೆ ಎಂದು ಹೊರಟರೆ ನಾಳೆ ಆರೋಗ್ಯದ ಪಾಡೇನು? ಆಸ್ಪತ್ರಗೆ ಗಳಿಸಿದ್ದಕ್ಕಿಂತ ಹೆಚ್ಚು ಹಣ ನೀಡಬೇಕಾಗಬಹುದು.

ಕನ್ನಡ ಭಾಷೆಯನ್ನು ಕಡೆಗಣಿಸಿ ಇಂಗ್ಲಿಷ್ ವ್ಯಾಮೋಹ ಬೆಳೆಸಿಕೊಂಡ ಇಂದಿನ ನಮ್ಮ ಪೀಳಿಗೆಗೆ ಕನ್ನಡವನ್ನು ಮರೆಯದಿರಿ. ಮುಂಚಿನ ೫ ವರ್ಷದ ಶಿಕ್ಷಣ ಮಾತೃ ಭಾಷೆಯಲ್ಲೇ ಪಡೆಯಬೇಕೆಂದು ಕರೆನೀಡುತ್ತಿದ್ದಾರೆ. ಕನ್ನಡ ಮಾಧ್ಯಮ ಶಾಲೆಗನ್ನು ಮುಚ್ಚಿ ಇಂಗ್ಲಿಷ್ ಶಾಲೆ ತೆರೆದಿದಕ್ಕೆ ನೋವು ವ್ಯಕ್ತಪಡಿಸುತ್ತಿದ್ದಾರೆ. ಒಮ್ಮೆ ಯೋಚಿಸಬೇಕಾದ ವಿಷಯವೇ ಸರಿ. ಮಾತೃಭಾಷೆಯಲ್ಲಿ ಪಡೆದ ಶಿಕ್ಷಣ ಸರಿಯಾಗಿ ಅರ್ಥವಾಗಿ ಮನಕ್ಕೆ ನಾಟುವುದು, ಇಂಗ್ಲೀಷನಲ್ಲಿ ಉರು ಹೊಡೆಯುತ್ತ ಕಲಿಯಬೇಕಾಬಹುದು.

ಹೀಗೆ ಅವರ ದಿನನಿತ್ಯದ ಜೀವನ, ಬಾಲ್ಯದ ನೆನಪುಗಳು, ಮೊದಲ ಲೇಖನ ಪ್ರಕಟವಾದಾಗಿನ ಸಂತೋಷ,ಇತ್ಯಾದಿಗಳನ್ನು ಮೆಲುಕು ಹಾಕುತ್ತ ಬರೆದ ಲೇಖನಗಳೊಂದಿಗೆ ಯುವಕರಿಗೆ ಬೈಕು, ಕಾರು ಓಡಿಸುತ್ತಾ ಇರಬೇಕಾದ ಎಚ್ಚರಗಳನ್ನು ನೀಡುವ ಅಕ್ಕನಾಗಿದ್ದಾರೆ, ಅನೇಕ ವ್ಯಕ್ತಿತ್ವ ವಿಕಸನ ಲೇಖನಗಳೊಂದಿಗೆ ಪಾಠ ಕಲಿಸುವ ಗುರುಗಳಾಗಿದ್ದಾರೆ. ಅವರ ವೃತ್ತಿಯಲ್ಲಿ ಗುರುಗಳಾಗಿರುವ ಮಾಲಾ ಅವರು ಈ ಲೇಖನಗಳ ಮಾಲಿಕೆಯನ್ನು ನೀಡುತ್ತಾ ನಮ್ಮಲ್ಲಿ ಬದುಕಿನ ಪ್ರೀತಿ, ನೀತಿಯನ್ನು ಎಚ್ಚರಿಸುತ್ತಾ ಸಾಗುತ್ತಿರುವ ಈ ಪುಸ್ತಕವನ್ನು ಪ್ರತಿಯೊಬ್ಬರೂ ಓದಲೇಬೇಕು.

‍ಲೇಖಕರು Admin

12 October, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading