ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬದುಕನ್ನು ಕಟ್ಟಿಕೊಂಡ ಮುದ್ರಕ ಕೃಷ್ಣಪ್ಪ…

ಮುದ್ರಣಾಲಯದಲ್ಲಿ ಕೆಲಸ ಮಾಡುವಾಗ ತನ್ನ ಎಂಟು ಕೈ ಬೆರಳುಗಳನ್ನು ಕಳೆದುಕೊಂಡರೂ ಧೃತಿಗೆಡದೆ ಬದುಕನ್ನು ಕಟ್ಟಿಕೊಂಡ ಮುದ್ರಕ ಕೃಷ್ಣಪ್ಪನವರನ್ನು ಮುದ್ರಕರ ದಿನಾಚರಣೆಯ ಪ್ರಯುಕ್ತ ಕರ್ನಾಟಕ ರಾಜ್ಯ ಮುದ್ರಣಾಲಯಗಳ ಕಾರ್ಮಿಕರ ಹಿತಾಸಕ್ತಿ ಬಳಗದ ವತಿಯಿಂದ ಗೌರವಿಸಲಾಯಿತು.

ಸ್ವ್ಯಾನ್ ಕೃಷ್ಣಮೂರ್ತಿ

ಪುಸ್ತಕ ಅಥವಾ ಮುದ್ರಣ ಸಾಮಗ್ರಿಗಳು ಅಂದವಾಗಿ ಮುದ್ರಣವಾಗಿ ಹೊರಬರುವುದರ ಹಿಂದೆಯೂ ಇರಬಹುದಾದ ದುರಂತ ಕತೆಗಳು.

ಈ ಫೋಟೋದಲ್ಲಿರುವ ಕೃಷ್ಣಪ್ಪ ಮೂಲತಃ ಬೆಂಗಳೂರಿನವರೇ ವಿದ್ಯಾಭ್ಯಾಸ ತಲೆಗೆಹತ್ತದೆ ಓದುವುದನ್ನು ಪ್ರಾರಂಭ ಹಂತದಲ್ಲೇ ನಿಲ್ಲಿಸಿ, ಒಂದು ಮುದ್ರಣಾಲಯದಲ್ಲಿ ಸಹಾಯಕನಾಗಿ ಕೆಲಸಕ್ಕೆ ಸೇರಿಕೊಂಡರು. ಮುದ್ರಣಾಲಯದ ವಿವಿಧ ಹಂತದ ಕೆಲಸ ಕಲಿತು, ಶಿಸ್ತಿನಿಂದ ಕೆಲಸಮಾಡುತ್ತ ಉತ್ತಮ ಬದುಕು ಕಟ್ಟಿಕೊಳ್ಳಲು ಕನಸು ಕಾಣುತ್ತಿರುವಾಗಲೇ ಅವರ ಮೇಲೆ ಚೇತರಿಸಿಕೊಳ್ಳಲಾಗದ ಆಪತ್ತೊಂದು ಬಂದೆರಗಿತು.

2000ನೇ ಇಸವಿಯಲ್ಲಿ ಮುದ್ರಣಾಲಯದಲ್ಲಿ ಅವರು ಕತ್ತರಿಸುವ ಯಂತ್ರ (Cutting Machine)ದ‌ಲ್ಲಿ ಅಂತಿಮವಾಗಿ ಸಿದ್ಧವಾಗಬೇಕಿದ್ದ ಪುಸ್ತಕಗಳನ್ನು ಕತ್ತರಿಸುತ್ತಿದ್ದರು. ಆಕಸ್ಮಿಕವಾಗಿ ನಡೆದ ಅವಗಡದಲ್ಲಿ ಪುಸ್ತಕದ ಜೊತೆ ಜೊತೆಗೆ ಅವರ ಹೆಬ್ಬೆರಳುಗಳನ್ನು ಬಿಟ್ಟು ಉಳಿದ ಎಂಟು ಕೈಬೆರಳುಗಳು ತುಂಡಾಗಿ ಅವರ ಜೀವನ ಪಯಣದ ಹಾದಿಯು ಕತ್ತರಿಸಿಹೋಯಿತು.

ಮುಂದೆ ಒಂದು ವರ್ಷ ವಿವಿಧ ಆಸ್ಪತ್ರೆಗಳಲ್ಲಿ ನರಳುತ್ತಾ ಚಿಕಿತ್ಸೆ ಪಡೆದು ಅವರ ಪತ್ನಿ ಭಾರತಿ ಅವರ ಆರೈಕೆಯಲ್ಲಿ ಚೇತರಿಸಿಕೊಂಡರು. ಆದರೆ ಕೈ ಬೆರಳುಗಳಿಲ್ಲದೆ, ಊಟವನ್ನೂ ಮಾಡಲಾಗದ ಪರಿಸ್ಥಿತಿಯಲ್ಲಿ ಇದ್ದಾಗ ಬದುಕಿಗಾಗಿ ಬೇರೆ ಕೆಲಸ ಮಾಡುವ ಮಾತೆಲ್ಲಿ! ಇಂತಹ ಪರಿಸ್ಥಿತಿಯಲ್ಲಿಯೂ ಧೃತಿಗೆಡದ ಕೃಷ್ಣಪ್ಪ ಸಂಸಾರ ನೌಕೆ ಸಾಗಿಸಲು ಕಾವಲುಗಾರನ (Security Guard) ಕೆಲಸಕ್ಕೆ ಸೇರಿಕೊಂಡರು.

ಈಗ ಕಷ್ಟಮಯ ಜೀವನವನ್ನು ನಡೆಸುತ್ತಿದ್ದರೂ ಅವರ ಇಬ್ಬರು ಮಕ್ಕಳಿಗೂ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ (ಮಗ ಇಂಜಿನಿಯರಿಂಗ್ ಹಾಗು ಮಗಳು ಡಿಪ್ಲೊಮೊ ಓದುತ್ತಿದ್ದಾರೆ). ಇವರು ಪುಸ್ತಕ ಬಿಡುಗಡೆಗೆ ಕಾರ್ಯಕ್ರಮಗಳಿಗೆ ಪ್ರಸಿದ್ಧಿ ಪಡೆದ ಬಸವನಗುಡಿಯ Indian Institute of World Culture ನಲ್ಲಿ ಕಾವಲುಗಾರನಾಗಿ ಅನೇಕ ವರ್ಷಗಳು ಕೆಲಸ ಮಾಡಿದರು. ತನ್ನ ಬೆರಳುಗಳನ್ನು ತುಂಡರಿಸಲು ಕಾರಣವಾದ ಯಂತ್ರದಂತ ಯಂತ್ರದಿಂದಲೇ ಸಿದ್ಧವಾಗಿ ಹೊರಬಂದ ಪುಸ್ತಕಗಳ ಸಂಭ್ರಮದ ವಾತಾವರಣದಲ್ಲಿ ಬಿಡುಗಡೆಗೊಳ್ಳುವುದನ್ನು ಕಂಡಾಗ ಅಚ್ಚರಿಯನ್ನು ಅನುಭವಿಸಿದರು. ಈಗ ಅಲ್ಲೇ ಪಕ್ಕದಲ್ಲಿರುವ ಒಂದು ಕಛೇರಿಯ ಕಾವಲುಗಾರನಾಗಿ ಕಾರ್ಯ ನಿರ್ವಹಿಸುತ್ತಾ ಸ್ವಾಭಿಮಾನದ ಜೀವನ ಸಾಗಿಸುತ್ತಿದ್ದಾರೆ.

ಮೊದಮೊದಲು ಮುದ್ರಣಾಲಯದ ಯಂತ್ರಗಳೊಂದಿಗೆ ಕೆಲಸ ಮಾಡುವಾಗ ಕೈ ಕಾಲು ಕಳೆದು ಕೊಳ್ಳುವ, ಪ್ರಾಣಾಪಾಯಗಳು ಆಗುವ ಭಯ ಕೆಲಸಗಾರರನ್ನು ಕಾಡುತ್ತಿತ್ತು (ಕೈಕಾಲು ಕಳೆದುಕೊಂಡ, ಪ್ರಾಣಾಪಾಯವಾದ ಉದಾಹರಣೆಗಳು ನಮ್ಮ ಮುಂದೆ ಸಾಕಷ್ಟಿವೆ). ಇಡೀ ವಿಶ್ವದಲ್ಲೇ ವಿಸ್ಮಯಕಾರಿ ಬದಲಾವಣೆ ತಂದ ಕಂಪ್ಯೂಟರ್ ತಂತ್ರಜ್ಞಾನ ಮುದ್ರಣ ಕ್ಷೇತ್ರವನ್ನು ಪ್ರವೇಶಿಸಿದ ಮೇಲೆ ಮುದ್ರಣಾಲಯದ ಯಂತ್ರಗಳಿಂದ ಕಾರ್ಮಿಕರಿಗಾಗುವ ಅಪಾಯಗಳನ್ನು ತಡೆಗಟ್ಟುವಂತಹ ಸೆನ್ಸಾರ್ ಅಳವಡಿಕೆಯ ಯಂತ್ರಗಳು ಬಂದವು. ಕೆಲಸಗಾರರು ಅಥವಾ
ಅವರ ನೆರಳು ಸೆನ್ಸಾರ್‌ಗಳ ದೃಷ್ಟಿಯಿಂದ ಹಿಂದೆ ಸರಿಯುವವರೆಗೂ ಯಂತ್ರಗಳು ಚಾಲನೆಯಾಗುವುದಿಲ್ಲ. ಆದ್ದರಿಂದ ಕೆಲಸಗಾರರು ಈಗ ಧೈರ್ಯವಾಗಿ ದೈತ್ಯ ಯಂತ್ರಗಳಲ್ಲಿ ಕೆಲಸ ಮಾಡ ಬಹುದಾಗಿದೆ.

ಮುದ್ರಣಾಲಯದಲ್ಲಿ ಕೆಲಸ ಮಾಡುವಾಗ ತನ್ನ ಎಂಟು ಕೈ ಬೆರಳುಗಳನ್ನು ಕಳೆದುಕೊಂಡರೂ ಧೃತಿಗೆಡದೆ ಬದುಕನ್ನು ಕಟ್ಟಿಕೊಂಡ ಮುದ್ರಕ ಕೃಷ್ಣಪ್ಪನವರನ್ನು ನಿನ್ನೆ (24-2-2021) ಮುದ್ರಕರ ದಿನಾಚರಣೆಯ ಪ್ರಯುಕ್ತ ಕರ್ನಾಟಕ ರಾಜ್ಯ ಮುದ್ರಣಾಲಯಗಳ ಕಾರ್ಮಿಕರ ಹಿತಾಸಕ್ತಿ ಬಳಗದ ವತಿಯಿಂದ ಗೌರವಿಸಲಾಯಿತು.

ಮುದ್ರಣ ಯಂತ್ರಗಳ ನಡುವೆ ಆಕಸ್ಮಿಕ ಅವಘಡಗಳು ಸಂಭವಿಸಿ, ಅಂಗವಿಕಲರಾಗಿರುವವರನ್ನು, ಬದುಕು ನಡೆಸಲಾಗದೆ ಕಷ್ಟಕ್ಕೆ ಸಿಲುಕಿಕೊಂಡಿರುವವರನ್ನು ಗುರುತಿಸಿ ಮುಂದಿನ ದಿನಗಳಲ್ಲಿ ಅವರಿಗೂ ಸಕಾಲಿನ ನೆರವು ನೀಡುವ, ಗೌರವಿಸುವ ಉದ್ದೇಶವನ್ನು ಕಾರ್ಮಿಕರ ಹಿತಾಸಕ್ತಿ ಬಳಗ ಹೊಂದಿರುತ್ತದೆ.

ಕೃಷ್ಣಪ್ಪನವರ ದೂರವಾಣಿ ಸಂಖ್ಯೆ: 8050062609

‍ಲೇಖಕರು Admin

26 February, 2022

1 Comment

  1. T S SHRAVANA KUMARI

    ಕ್ರಿಷ್ಣಪ್ಪನವರಿಗೆ ಅಭಿನಂದನೆಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading