ಅಕ್ಷರವನ್ನು ಬಂಧಮುಕ್ತಗೊಳಿಸಿದ ಕೆ ಬಿ ಸಿದ್ದಯ್ಯ

-ಸಿ. ಸುವರ್ಣ ಶಿವಪ್ರಸಾದ್

ಕಳೆದ ಮೂರು ತಿಂಗಳ ಹಿಂದೆಯಷ್ಟೇ  ‘ಹೇ ಕೆ.ಟಿ. ಯಾಕೋ ಏನೋ ನಿನ್ನ ನೋಡೋವಂಗಾಯ್ತು ಕಣೋ ಅದುಕ್ಕೆ ಬಂದೇ’ ಎಂದು ಹೇಳ್ತಾ ನಮ್ಮ ಮನೆಗೆ ಬಂದದ್ದು ಕೆ.ಬಿ. ಸಿದ್ದಯ್ಯನವರು. ಹಾಗೆ ಬಂದವರೇ ಕೆ.ಟಿ. ಶಿವಪ್ರಸಾದ್ ಜೊತೆ ಸಾಹಿತ್ಯ, ದಲಿತ -ರೈತ ಚಳುವಳಿ, ಸಂಸ್ಕೃತಿಯ ಕುರಿತು ದಿನವಿಡೀ ಚರ್ಚೆ ಮಾಡಿ ಕಾಲಕಳೆದುಕೊಂಡು ‘ಕೆ.ಟಿ. ನಾನು ಮತ್ತೊಂದು ಖಂಡಕಾವ್ಯ ಬರಿತಾ ಇದ್ದಿನೋ ಅದಕ್ಕೆ ನೀನೆ ಮುಖಪುಟ ಮಾಡಿಕೊಡ್ಬೇಕು. ಬರೆದು ಮುಗಿಸಿದ ಮೇಲೆ ಬರುತ್ತೇನೆ ಕಣೋ’ ಅಂತೇಳಿ ಹೋದರು. ದಲಿತ ಕವಿ ಸಂಸ್ಕೃತಿ ಚಿಂತಕ ಹಾಗೂ ದಲಿತ- ರೈತ ಪರ ಹೋರಾಟಗಾರ ಕೆ.ಬಿ. ಸಿದ್ದಯ್ಯ ಅವರು ಸಾಹಿತ್ಯ ಲೋಕಕ್ಕೆ ಮತ್ತೊಂದು ಖಂಡಕಾವ್ಯ ಪರಿಚಯಿಸುವ ಮುನ್ನವೇ ಬಾರದ ಲೋಕಕ್ಕೆ ಪಯಣಿಸಿದ್ದು ಇಡೀ ದಲಿತ ಕಾವ್ಯ ಲೋಕದಲ್ಲಿ ಈಗ ಕರಿ ನೆರಳ ಛಾಯೆ ಮೂಡಿದೆ.

ತಾಯಂದಿರೇ

ನನ್ನ ಅಂಗೈಯಲ್ಲಾಡುವ

ಮುಟ್ಟಬಾರದ ಕೂಸಿಗೊಂದು

ಹೆಸರಕೊಡಿ, ಹೆಸರಕೊಡಿ

ಸೀಳುಕ್ಕೆಯಲಿ ಬಿದ್ದಂಥ ಬೀಜವೆ

ದಟ್ಟಡವಿಯ ನಡುನೆತ್ತಿಯ ಮೊಳಕೆ

ಹುಟ್ಟಿದ ಬೆತ್ತಲ ಗಿಡಬಾಲೆ

ನೆಗೆಯುತ್ತಾ, ನಲಿಯುತ್ತಾ, ಕುಣಿಯುತ್ತ

ನನ್ನೆದೆಯ ಕಣಿವೆಯಲಿ ಜುಳಜುಳ

ಹರಿಯುತ್ತ ಎಂದು ‘ಬಕಾಲ’ ಖಂಡ ಕಾವ್ಯ ಬರೆದು ಬಂಧನದಲ್ಲಿ ಇದ್ದ ಅಕ್ಷರವನ್ನು ಬಂಧಮುಕ್ತಗೊಳಿಸಿದವರು ಕೆ.ಬಿ.ಸಿದ್ದಯ್ಯನವರು.

ಇಪ್ಪತ್ತೊಂದನೇ ಶತಮಾನದ ಈ ರೂಪಾಂತರ ಕಾಲದ ತಳಮಳ ಮತ್ತು ಗೊಂದಲಗಳು ಎಲ್ಲರನ್ನು ಕಾಡುತ್ತಿವೆ ಸಾಮಾಜಿಕ ಸಾಂಸ್ಕೃತಿಕ ಚಟುವಟಿಕೆಗಳು ಸೃಜನಶೀಲತೆ ಸಮಾಜ ಬದ್ಧತೆಯ ಸಂವಾದಗಳಿಲ್ಲದ ಕ್ರಿಯಾಶೀಲತೆ ಕಳೆದು ಮಂಕು ಕವಿದು ಜಡಗೊಂಡಿರುವ ಈ ಸಂದರ್ಭದಲ್ಲಿ ವಾಣಿಜ್ಯ ಕ್ಷೇತ್ರದ ಸರಕು ಸಂಸ್ಕೃತಿ ಹೊಸ ಉನ್ಮಾದದಿಂದ ರಾರಾಜಿಸುತ್ತಿದೆ.

ಕನ್ನಡ ಸಾಹಿತ್ಯದಲ್ಲಿ ಅಕ್ಷರಗಳು ಮಾನವೀಯತೆಯನ್ನು ಬಿತ್ತಿದ್ದು ಮೊದಲು ವಚನ ಚಳವಳಿಯಾದರೆ ನಂತರದ್ದು 1970ರ ದಶಕದ ದಲಿತ ಸಾಹಿತ್ಯ ಚಳುವಳಿಯಲ್ಲಿ ಅಕ್ಷರ ಸಂಸ್ಕೃತಿಯು ಧಾರ್ಮಿಕ ಪಂಜರದಿಂದ ಬಿಡಿಸಿಕೊಂಡು ಸಾಹಿತ್ಯ ಸ್ವತಂತ್ರಗೊಂಡಿದ್ದು ಕೂಡ ಇದೇ ಕಾಲದಲ್ಲಿ ಎಂಬುದನ್ನು ನಾವು ಡಾ. ಸಿದ್ದಲಿಂಗಯ್ಯನವರ ದಲಿತ ಕಾವ್ಯ ‘ಇಕ್ರಲಾ ವದೀರ್ಲಾ’ ಹಾಗೂ ಶತಮಾನಗಳಿಂದಲೂ ನನ್ನನ್ನು ನನ್ನಂಥವರನ್ನು ನನ್ನಂಥ ಸಮುದಾಯಗಳನ್ನು ಮುಟ್ಟಿಸಿಕೊಳ್ಳದೇ ಬಂಧನದಲ್ಲಿ ಇಡಲಾಗಿದ್ದ ಭಾಷೆಯನ್ನು ನಾನೇ ಮುಟ್ಟುವುದರ ಮೂಲಕ ಬಿಡುಗಡೆಗೊಳಿಸುತ್ತೇನೆ ಎಂದು ಪಣತೊಟ್ಟು ಹೆಪ್ಪುಗಟ್ಟಿದ ಮೌನದಲ್ಲಿ ಚಲನೆಯಿಲ್ಲದ ಜಡತೆಯ ಸಮಾಜದಲ್ಲಿ ಬೆಂಕಿಯಲ್ಲಿ ಕುದ್ದು ಸಿದ್ದ ಮಾದರಿಯ ಕಾವ್ಯ ಪ್ರಕಾರವನ್ನು ತ್ಯಜಿಸಿ ತನ್ನದೇ ಆದ ವಿಶಿಷ್ಟ ಕಾವ್ಯ  ಮಾರ್ಗ  ರೂಢಿಸಿಕೊಂಡು ಕಾವ್ಯ ಸಂಸ್ಕೃತಿಗೆ ಸವಾಲು ಹಾಕಿ ಬಕಾಲ ಕಾವ್ಯವನ್ನು ರಚಿಸಿದ ಆಧುನಿಕ ಯುಗದ ಅಲ್ಲಮನೆಂದೆ ಖ್ಯಾತಿಯಾಗಿದ್ದವರು ಕೆ.ಬಿ. ಸಿದ್ದಯ್ಯನವರು.

ಎಪ್ಪತ್ತು ಎಂಬತ್ತರ ದಶಕದಲ್ಲಿ ದಮನಿತರ ದನಿಯಾದ ‘ಪಂಚಮ’ ಪತ್ರಿಕೆಯಲ್ಲಿ ‘ಕತ್ತಲೊಡನೆ ಮಾತುಕತೆ’ ಅಂಕಣಕಾರರಾಗಿ ಕಾಣಿಸಿಕೊಂಡರೂ ಗದ್ಯ ಬರಹಗಾರಾಗಿ ಉಳಿಯಲಿಲ್ಲ. ಈ  ಕಾಲದ ಸಾಂಸ್ಕೃತಿಕ ಮತ್ತು ಸಾಹಿತ್ಯದ ಬಿಕ್ಕಟ್ಟುಗಳನ್ನು ಎದುರಿಸಲು ಇವರಿಗೆ ನೆರವಾದುದು ‘ಪಂಚಮ’ ಪತ್ರಿಕೆ.

ಈ ಸಂಪಾದಕ ಮಂಡಳಿಯಲ್ಲಿ ಇವರನ್ನು ಒಳಗೊಂಡು ರಾಮದೇವ ರಾಕೆ, ಪ್ರೊ ಬಿ. ಕೃಷ್ಣಪ್ಪ, ದೇವನೂರು ಮಹಾದೇವ, ಹೆಚ್. ಗೋವಿಂದಯ್ಯ , ಸಿದ್ದಲಿಂಗಯ್ಯ, ಶ್ರೀಧರ ಕಲಿವೀರ, ಬೊಳುವಾರು ಮಹಮದ್ ಕುಂಞ, ಶಿವಾಜಿ ಗಣೇಶನ್, ಜಂಜಣ್ಣ ಅಮರಚಿಂತ, ಕೋಟಿಗಾನಹಳ್ಳಿ ರಾಮಯ್ಯ, ರಂಜಾನ್ ದರ್ಗಾ, ದೇವಯ್ಯ ಹರವೆ, ಗುರುರಾಜ ಬೀಡಿಕರ್, ಇಂದೂಧರ ಹೊನ್ನಾಪುರ ಇಂತಹ ಸಮಾನ ಮನಸ್ಕರ ವೇದಿಕೆಯೊಂದು ಇತ್ತು. ಬಹುಶ: ಇಂತಹ ಒಟನಾಟ ಮತ್ತು ಸಹಭಾಗಿತ್ವವೆ ಕೆ.ಬಿ. ಸಿದ್ದಯ್ಯ ಅವರ ಈ ನಾಡಿನಲ್ಲಿ ಬಹುದೊಡ್ಡ ಶಕ್ತಿ ಎಂದು ಹೇಳಿದರೆ ತಪ್ಪಾಗಲಾರದು.

ಕತ್ತಲೊಡನೆ ಮಾತುಕತೆ ಆರಂಭಿಸಿ ಗಟ್ಟಿಯಾದ  ಅವರ ಬರಹ ಕತ್ತಲನ್ನು ಮೀರಿ ಕತ್ತಲಲ್ಲಿದ್ದವರಿಗೆ ಜ್ಯೋತಿಯಾಗಿ ಬುದ್ದಮಾರ್ಗದಿಂದ ಅಲ್ಲಮ, ಲೋಹಿಯಾ ಮತ್ತು ಕುವೆಂಪು ಅವರ ಚಿಂತನೆಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ಇವರು ಕಂಡ ಕ್ರಮವೇ ಒಂದು ಸುದೀರ್ಘ ರೋಚಕ ಪಯಣ.

ಕೆ.ಬಿ.ಸಿದ್ದಯ್ಯ ಅವರು  ಆರಂಭದ ಬರವಣಿಗೆಯಲ್ಲಿ ಸಂಕಟವನ್ನು ಸಹಜವಾಗಿ ನುಡಿಯಬಲ್ಲ ಶಬ್ಧ ಪ್ರತಿಮೆ ಸಂಕೇತದ ಮುಂತಾದ ಹುಡುಕಾಟದಲ್ಲಿ ತನ್ನ ಜಾತಿ ಜನಾಂಗದ ಅಸ್ಮಿತೆಯನ್ನು ಕಾಣಿಸುವ ಕಾವ್ಯಪ್ರಯೋಗದ ಅನ್ವೇಷಣೆ ಆಗಿದ್ದರೆ ಕಾವ್ಯ ಪ್ರಯೋಗದ ಪಯಣದಲ್ಲಿ ದಕ್ಲಕಥಾ ದೇವಿಕಾವ್ಯ, ಅನಾತ್ಮ ,ಗಲ್ಲೆ ಬಾನಿ ಮೈಲಿಗಲ್ಲಾದವು.

ಅಂದು ಅವರಿಗೆ ಇದ್ದ ನಾನು ಬರೆಯಬೇಕೆಂಬ ಹಂಬಲ ಈಗ ನಾನೇಕೆ ಬರೆಯುತ್ತೇನೆ ಎಂದು ಅನಿಸತೊಡಗಿದ್ದು ಇದೊಂದು ವಿಸ್ಮಯವೇ ಸರಿ.

ಇದಕ್ಕೆ ಉತ್ತರಿಸಲೇಬೇಕೆಂಬ ಬೌದ್ಧಿಕ ಹಠವೂ ಅವರೊಳಗೆ ಇದ್ದಿದ್ದು  ದಕ್ಕಿದ್ದ  ಅಕ್ಷರದೊಂದಿಗೆ ಮಾತುಕತೆ ನಡೆಸುತ್ತಾ ಅಕ್ಷರಗಳ ಪ್ರಶ್ನೆಗಳಿಗೆ ಉತ್ತರಿಸದಿದ್ದರೆ ಹೇಗೆ ಅಂದುಕೊಂಡು ಅದಕ್ಕೆ ಉತ್ತರಿಸು ಎಂದು ಪ್ರೀತಿಯಿಂದ ಒಳಗಿನಿಂದ ಹೊರಗಿನಿಂದ ಬರುತ್ತಿದ್ದ ಒತ್ತಾಯಕ್ಕೆ ಉತ್ತರಿಸಲು ಯತ್ನಿಸುತ್ತಾ ಹೊಸಖಂಡ ಕಾವ್ಯಕ್ಕೆ  ಹುಡುಕಾಟ ಆರಂಭಿಸಿದ್ದವರು ಸಿದ್ದಯ್ಯನವರು.

ಹೀಗೆ ಹೊಸ ಖಂಡ ಕಾವ್ಯದ ಕುರಿತು ಮಾತನಾಡುತ್ತಾ ಅವರು ಆಕಸ್ಮಾತ್ ಸಿಕ್ಕಿದ ಸಹಜೀವಿ ಅಕ್ಷರ  (ಕನ್ನಡದ ಅಕ್ಷರ ಮಾಲೆ) ದಾರಿ ಮಧ್ಯದಲ್ಲಿ ತಡೆದು ನಿಲ್ಲಿಸಿದೆ.

ಅಕ್ಷರ ತನ್ನ ಆತ್ಮಕತೆಯನ್ನು ಹೀಗೆ ಹೇಳುತ್ತಿದೆ. ಎಲೆ ಮನುಷ್ಯ ಜೀವಿಯೆ ಶತಶತಮಾನಗಳ ಕಾಲ ಇಂಡಿಯಾದ ನೆಲದಲ್ಲಿ ನಿನ್ನ ನಾನು ನೋಡದಂತೆ ಬಂಧಿಸಿಡಲಾಗಿತ್ತು ನಿನ್ನಿಂದ ಮಾತ್ರವಲ್ಲ  ಅಖಂಡ  ಇಂಡಿಯಾದ ಬಹುಸಂಖ್ಯಾತ ಹೆಣ್ಣು-ಗಂಡು ಜನಸಮುದಾಯಗಳು ನನ್ನ ಕಣ್ಣಿಗೆ ಕಾಣದಂತೆ ಮರೆಮಾಚಲಾಗಿತ್ತು.

ನೀನು ಯಾರು ಹೆತ್ತ ಮಗನೋ ಏನೋ ನನ್ನನ್ನು ಮುಟ್ಟಿದೆ ನಿನ್ನ ಸ್ಪರ್ಶ ಮಾತ್ರದಿಂದಲೇ ನಾನು ಬಂಧ ಮುಕ್ತನಾದೆ. ಈ ನಾಡಿನ ಅಸ್ಪೃಶ್ಯನೋ ಸ್ತ್ರೀಯೋ ನನ್ನ ಮುಟ್ಟಿದರೆ ಬಂಧನದಿಂದ ಬಿಡುಗಡೆ ಆಗುವೆನೆಂಬ ಅರಿವು ಮೈದೋರಿತು. ಬಯಲಿಗೆ ಬಂದೆ ನಾನು ಯಾವತ್ತಿಗೂ ಕಂಡರಿಯದ ಜಗತ್ತು ನನಗೆ ಕಾಣುತ್ತಿದೆ.

ಆಹಾ! ಎಂತಹ ಮಹಾಸ್ವರ್ಶಎಂತಹ ಮಹಾದರ್ಶೆಂ ಅಕ್ಷರವು ಬಹುಬಗೆಯಲ್ಲಿ ಬಹುವರ್ಣದಲ್ಲಿ ಅಗಣಿತ ಕಣ್ಣುಗಳನ್ನು ತೆರೆದು ನನ್ನೆದುರು ನರ್ತಿಸುತ್ತಿದೆ ಇದು ಅಕ್ಷರದ ಆತ್ಮಕತೆಯ ಭಾಗ ನನ್ನ ಆತ್ಮಕತೆಯೂ ಅಕ್ಷರದ ಆತ್ಮಕತೆಯೂ ಏಕೀಭವಿಸಿದ ಫಲ ನನ್ನ ಕಾವ್ಯ ಪ್ರಯೋಗ ಎಂದು ಅವರು ನುಡಿದಿರುವುದು ಇಂದಿಗೂ ನಾವು ಮರೆಯಲಾಗದ ಮಾತುಗಳಾಗಿವೆ. ಇವರು ಬರೆದುದು ಕಡಿಮೆಯಾದರೂ ಅದು ಮೌಲಿಕವಾದುದು ಮತ್ತು ಸಕಾಲಿಕವಾದುದು ಈ ಕಾರಣಕ್ಕಾಗಿ ಇವರ ಕಾವ್ಯಗಳು ಚಿಂತನೆಗೆ ಒಳಪಡಿಸುತ್ತದೆ.

ತೀರಿ ಹೋಗಲೆಂದು ಸಾಲ

ಇಡೀ ದೇಹ ಮಾರಿಬಿಟ್ಟೆ

ಮೂರು ಕಾಸಿಗೆ

ಕೊಲ್ಲುವವರೂ ಕೊಳ್ಳಲಿಲ್ಲ

ಮಡಿಯುವವರೂ ಮುಟ್ಟಲಿಲ್ಲ

ಇರಲಿ ಬಿಡು ಈ ದೇಹ

ಹೋಗಲಿ ಬಿಡು ನನ್ನ ದೇಹ

ಎಂದು ಅರಿತು

ಕಟ್ಟಕಡೆಗೆ

ಸುಲಿಸುಲಿದು ಸುಲಿದು

ಚರ್ಮ ಸುಲಿದು

ಮೆಟ್ಟು ಹೊಲಿದು

ಮೆಟ್ಟಿಮೆಟ್ಟಿ ಮೆಟ್ಟೀ

ಬಿಟ್ಟುಬಿಟ್ಟೆ ಮೆಟ್ಟು ಬಿಡುವ ಜಾಗದಲ್ಲಿ,

ದೇಹವೇ ದೇವಾಲಯ

ಗುರಿಯೇ ಪೂಡುವಿಗೆ

ಒಡೆಯನಾದ ಬಳಿಕ

ಈ  ದೇಹ  ಇಡೀ ದೇಹ ನನ್ನ ದೇಹ

ತ್ಯಜಿಸಲುಂಟೇ !

ಶಿವ. . . .ಶಿವ. . .

ಇಡೀ ದೇಹದಂಗುಲಂಗುಲವ

ಹೂವಾಗಿ ಅರಳಿಸಿ

ಹೂಮಾಂಸ ವನು

ಹೂಹಸಿ ಕರುಳದಾರಕ್ಕೆ ಪೋನಿಸಿ

ಮಾಂಸದ ಹಾರಕಟ್ಟಿ

ಹೂವಾಡಿಗನಂತೆ

ಮಾಲಾರ್ಪಣೆ ಮಾಡಲುಂಟೆ ?

ಶಿವ… ಶಿವ…

ಶಿರವನಲ್ಲದೆ ಅಂಗುಲಿಮಾಲನಂತೆ ಇದು ಅವರ ಗಲ್ಲೇ ಬಾನಿಯಲ್ಲಿ ಪ್ರಕಟಿಸಿರುವ ಕಾವ್ಯ. ಇವರ ಈ ಕಾವ್ಯವನ್ನು ನೆನಪಿಸುತ್ತಾ ಅವರಿಗೆ ನಮ್ಮೆಲ್ಲರ ಭಾವಪೂರ್ಣ ಶ್ರದ್ಧಾಂಜಲಿಯನ್ನು ಈ ಮೂಲಕ ಅರ್ಪಣೆ.

‍ಲೇಖಕರು avadhi

October 25, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: