’ಬಂಡಾಯಗಾರ ಪೂರ್ಣಚಂದ್ರ ತೇಜಸ್ವಿ’ – ಜಿ ಎನ್ ನಾಗರಾಜ್ ಬರೀತಾರೆ

ಬದುಕು-ಅರಿವು-ಬರಹಗಳ ಬಗ್ಗೆ ಪ್ರಮುಖ ತಾತ್ವಿಕ ಪ್ರಶ್ನೆಗಳನ್ನೆತ್ತಿದ

ಬಂಡಾಯಗಾರ ಪೂರ್ಣಚಂದ್ರ ತೇಜಸ್ವಿ

ಜಿ ಎನ್ ನಾಗರಾಜ್

ಕನ್ನಡ ಸಾಹಿತ್ಯ ನವೋದಯದ ಹೊಸ ಹರಹನ್ನು, ಪಾಳೆಯಗಾರಿ ಸಮಾಜದ ವಿರುದ್ಧ ಪ್ರಜಾಪ್ರಭುತ್ವದ ಮೌಲ್ಯಗಳ ಧಾಳಿಯ ಉತ್ಸಾಹವನ್ನು, ಸ್ವಾತಂತ್ರ್ಯ ಸಂಗ್ರಾಮ, ಏಕೀಕರಣ ಚಳುವಳಿಯ ದೀಪ್ತಿಯನ್ನು ಪಡೆದುಕೊಂಡು ಕನ್ನಡ ಜನಮನವನ್ನು ಆವರಿಸುತ್ತಿದ್ದ ಕಾಲದಲ್ಲಿಯೇ ಸ್ವತಂತ್ರ ಭಾರತದ ಮೊದಲ ದಶಕಗಳ ಸಮಾಜ, ಸರ್ಕಾರವನ್ನು ಕಟುವಾದ ಟೀಕೆಗೆ ಒಳಪಡಿಸುವ, ಮಾರ್ಗವಾಗಿ ನವ್ಯದ `ಚಂಡೆ’ ಮದ್ದಳೆಯ ಧ್ವನಿ ಕೇಳತೊಡಗಿತು. ಕನ್ನಡ ಯುವ ಸಾಹಿತಿಗಳೆಲ್ಲ ಬಾಲಕರಂತೆ ಅದರ ಸುತ್ತ ನೆರೆದರು. ತಲೆದೂಗಿದರು, ಕುಣಿದರು. ಅಂದಿನ ಭಾರತವನ್ನು ವಿಮರ್ಶಿಸುವ ಅಗತ್ಯ, ಅದನ್ನು ಭಾರತದ ಜನರ ಏಳಿಗೆಯ ದಾರಿಯತ್ತ ಎಳೆ ತರುವ ಅವಶ್ಯಕತೆಯನ್ನು ಮನಗಂಡವರೆಲ್ಲಾ ಕಟು ವಿಮರ್ಶೆಯನ್ನು ಸ್ವಾಗತಿಸಿದುದು ಸಹಜವೇ ಆಗಿತ್ತು.
ಆದರೆ ಕೆಲವೇ ವರ್ಷಗಳಲ್ಲಿ ಈ `ಚಂಡೆ ಮದ್ದಳೆ’ ಯ ಗುರಿ ಭಾರತದ ಪರಂಪರಾಗತ ಅಮಾನವೀಯ ಮೌಲ್ಯಗಳ ಅಟ್ಟಹಾಸದ ಆಳ್ವಿಕೆಯ ವಿಜೃಂಭಣೆಯ ಯಕ್ಷಗಾನದತ್ತ ಜನರನ್ನು ಸೆಳೆಯುವುದೇ ಆಗಿತ್ತು. ಭಾರತದ ಅಂದಿನ ಸಮಾಜದ ಪ್ರಗತಿಪರ-ಪ್ರಜಾಪ್ರಭುತ್ವೀಯ ಮೌಲ್ಯಗಳೇ ಈ ಕಟು ವಿಮರ್ಶೆಯ ಗುರಿಯಾಗಿತ್ತು. ಅದೇ ದಾರಿಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜನರಪ್ರಜ್ಞೆಯ ಭಾಗವಾಗಿಸುತಿದ್ದ ನವೋದಯ ಸಾಹಿತ್ಯವೂ ಅದರ ಅತ್ಯಂತ ಮೊನಚಾದ ತುದಿಯಾಗಿದ್ದ ಕುವೆಂಪುರವರು ಈ ವಿಮರ್ಶೆಯೆಂಬ ದಾಳಿಗೆ ಗುರಿಯಾಗಿದ್ದರು. ನವ್ಯ ಸಾಹಿತ್ಯ ಜನ ಸಮುದಾಯದ ವಿರುದ್ಧವಾಗಿ ವ್ಯಕ್ತಿಯನ್ನು ಸಮಷ್ಠಿಯ ವಿರುದ್ಧವಾಗಿ ವ್ಯಷ್ಟಿಯನ್ನು ಮೇಲೆತ್ತಿ, ಜನರ ಎದೆಗಳಲ್ಲಿ ಪ್ರತಿಧ್ವನಿಗೊಳ್ಳುತ್ತಿದ್ದ ಹಾಡಾಗಿದ್ದ ಕಾವ್ಯವನ್ನು ಕೆಲವೇ ಜನರ ವೈಯಕ್ತಿಕ ಅನುಭವಗಳ, ಸ್ವಂತಿಕೆಯ ಅಭಿವ್ಯಕ್ತಿಯಾಗಿ ಪರಿಣಮಿಸಿತ್ತು, ಸಾಹಿತ್ಯವೇ ಕುಗ್ಗತೊಡಗಿತ್ತು.
ನಿಧಾನವಾಗಿ ಮಬ್ಬು ಹರಿಯ ತೊಡಗಿತು
`ನವ್ಯ’ವೆಂಬ ಯಕ್ಷಗಾನದ ಅಬ್ಬರದ ಅಲೆಯಲ್ಲಿ ತೇಲಿಹೋಗಿದ್ದವರಲ್ಲಿ ಕೆಲವರಿಗೆ ರಂಗಸ್ಥಳವೆಂಬ ಅಟ್ಟಣೆಗೆ ಇಳಿದು ನೆಲಕ್ಕೆ ಬಂದ ಮೇಲೆ, ನಿಧಾನವಾಗಿ ಕೆಲವರಿಗೆ ಮಬ್ಬು ಹರಿಯತೊಡಗಿತು. ಅದನ್ನು ಧೈರ್ಯವಾಗಿ ಸಾಹಿತ್ಯದ ಮೂಲಕ ಅಭಿವ್ಯಕ್ತಿಸಿದ, ನಂತರ ಗುಡುಗಿನಂತೆ ಮೊಳಗಿಸಿದ ಮೊದಲ ಬಂಡಾಯಗಾರ ಪೂರ್ಣಚಂದ್ರ ತೇಜಸ್ವಿ. ಅವರು 1966 ರಲ್ಲಿ ಬರೆದ ಮೊದಲ ಕಿರು ಕಾದಂಬರಿ ಸ್ವರೂಪದಲ್ಲಿಯೇ ಈ ಪ್ರಶ್ನೆಯನ್ನು ಎತ್ತುತ್ತಾರೆ. “ಮಡಿ, ಮೈಲಿಗೆ, ಮುಟ್ಟು, ಒಬ್ಬಟ್ಟು” ಇವುಗಳ ಬಗ್ಗೆ ಬರೆದುಕೊಂಡಿರುವುದು ಸಾಹಿತ್ಯದ ಗುರಿಯಲ್ಲ ಎಂದು ಘೋಷಿಸುತ್ತಾರೆ. ನವ್ಯ ಸಾಹಿತ್ಯದ ವಿರುದ್ಧ ಅಂದಿನಿಂದ ಆರಂಭವಾದ ತೇಜಸ್ವಿಯವರ ಬಂಡಾಯ ಮುಂದಿನ ವರ್ಷಗಳಲ್ಲಿ, ಅವರ ಸಾಹಿತ್ಯ ಕೃತಿಗಳ ಮೂಲಕವೇ ಬೆಳೆಯುತ್ತದೆ. ಕೇವಲ ಘೋಷಣೆಯಾಗದೆ ಬದುಕಿನ ಸ್ವರೂಪ ಮತ್ತು ಸಾಹಿತ್ಯ ಮತ್ತು ಚಳುವಳಿಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತಾರೆ.

ಸಾಹಿತ್ಯೋಪಜೀವಿಗಳ ಸಾಹಿತ್ಯ
`ನಾನು ಲೆಕ್ಚರರ್ ಆದಾಗ ವಿದ್ಯಾರ್ಥಿ ಜೀವನಕ್ಕೂ ಮಾಸ್ತರ ಜೀವನಕ್ಕೂ ಯಾವ ಬದಲಾವಣೆಯನ್ನು ಕಾಣಲಿಲ್ಲ. ಮಿತ್ರರೂ ಶತ್ರುಗಳೂ ಯಾರೂ ಬದಲಾಗಲಿಲ್ಲ. ಬೋರ್ಡ್‌ಗೆ ಮೊದಲು ಮುಖ ಹಾಕಿ ಕೂರುತ್ತಿದ್ದವನು ಈಗ ಬೆನ್ನು ಹಾಕಿ ಕೂರತೊಡಗಿದೆ ಅಷ್ಟೇ. ಸಾಹಿತ್ಯವನ್ನು ಕಿವಿಯಿಂದ ಕೇಳುತ್ತಿದ್ದವನು ಅನಂತರ ಬಾಯಲ್ಲಿ ಕಾರತೊಡಗಿದೆ. ಬರೆಯುತ್ತಿದ್ದವರೆಲ್ಲಾ ಅಧ್ಯಾಪಕರು. ಅವರು ಅದನ್ನೇ ಓದಿ ಅದನ್ನೇ ಕೇಳಿ, ಅದನ್ನೇ ಪಾಠ ಮಾಡಿ ಅವುಗಳಿಂದಲೇ ಏನನ್ನೋ ಸೃಷ್ಟಿಸುತ್ತಿದ್ದರು. ಕುಳಿತಿದ್ದು, ನಿಂತದ್ದು, ಗುಂಡಿಬಿಚ್ಚಿದ್ದು ಎಲ್ಲ ಈ ಸಾಹಿತಿಗಳಿಗೆ ಮಹದರ್ಥಗಳ ವಿಶ್ವರೂಪವನ್ನೇ ಬಿಚ್ಚುತ್ತಿದ್ದಿತು. ಹಾಗಾಗಿ ತನ್ನ ಕಾಲದ ಸಾಹಿತ್ಯವೆಲ್ಲಾ ಸಾಹಿತ್ಯೋಪಜೀವಿಗಳ ಸಾಹಿತ್ಯ”.
`ನನಗೆ ಕರ್ನಾಟಕದ ಓದುಗರ, ಪ್ರಕಾಶಕರ, ವಿಮರ್ಶಕರ ಎಲ್ಲರ ಬಗ್ಗೆ ಬಹು ಆಳವಾದ ತಿಳುವಳಿಕೆ ಮೂಡಿ ಬಿಟ್ಟಿತು. ಅವರೆಲ್ಲ ಯಾವ ರೀತಿಯ ಜನ, ಅವರ ಕೈಯಲ್ಲಿ ಹೊಗಳಿಸಿಕೊಳ್ಳಬೇಕಾದರೆ ಯಾವ ರೀತಿಯ ಪದಸಮುಚ್ಚಯಗಳನ್ನು ಹೇಗೆ ಹೇಗೆ ಉಪಯೋಗಿಸಬೇಕು ಇವನ್ನೆಲ್ಲಾ ಆಮೂಲಾಗ್ರವಾಗಿ ತಿಳಿದುಕೊಂಡಿದ್ದೆ”
ಇದು ಅವರು 1973 ರಲ್ಲಿ ಪ್ರಕಟಿಸಿದ `ನಿಗೂಢ ಮನುಷ್ಯರು’ ಕಾದಂಬರಿಯ ನಾಯಕ ಜಗನ್ನಾಥನ ಬಾಯಿಂದ ಹೊರಡಿಸಿದ ತಮ್ಮ ಮಾತುಗಳು.
ಈ ಎಲ್ಲಾ ಶೋಧದ, ಚಿಂತನೆಯ ಫಲವಾಗಿ `ಅಬಚೂರಿನ ಪೋಸ್ಟಾಫೀಸು’ ಎಂಬ ಕಥಾಸಂಕಲನದ ಮುನ್ನುಡಿಯಾಗಿ ಹೊಸದಿಗಂತದೆಡೆಗೆ’ ಎಂಬ ತಾತ್ವಿಕ ಪ್ರಣಾಳಿಕೆಯು ಗಟ್ಟಿಯಾಗಿ ಮೊಳಗಿತು. ಬದುಕು, ಸಾಹಿತ್ಯ ಇವುಗಳ ನಡುವಿನ ಸಂಬಂಧದ ಸಾಹಿತ್ಯಿಕ, ತಾತ್ವಿಕ ಶೋಧ 1960-70 ರ ದಶಕದ ವಿದ್ಯಾಭ್ಯಾಸ ಪಡೆಯುತ್ತಿದ್ದ ಸಮಾಜದ ಕೆಳಜಾತಿ – ವರ್ಗಗಳ ಯುವಜನ ಮೇಲೆ ಅಪಾರ ಪ್ರಭಾವವನ್ನು ಬೀರಿತು. ಸಾಹಿತ್ಯ ವೈಯಕ್ತಿಕ ತೆವಲುಗಳಿಂದ ಸಾಮಾಜಿಕ ಕಾಳಜಿಗಳತ್ತ ಮುನ್ನಡೆಯಲು ನಾಂದಿಯಾಯಿತು.
ಚಳುವಳಿ ಪ್ರಭಾವ, ಸಂಬಂಧ
ತೇಜಸ್ವಿಯವರಲ್ಲಿ ನಡೆಯುತ್ತಿದ್ದ ಈ ಸಂಘರ್ಷಕ್ಕೆ ಅವರು ಸಾಹಿತ್ಯ ಬೋಧನೆಯನ್ನು ಬಿಟ್ಟು ಕೃಷಿಕನಾಗಿ ಮೂಡಿಗೆರೆಯಲ್ಲಿ ನೆಲೆಸಿದ್ದು ಮಾತ್ರವಲ್ಲದೆ ಅದೇ ಸಮಯದಲ್ಲಿ ನಡೆಯುತ್ತಿದ್ದ ತಲ್ಲಣಗಳ ಫಲವಾಗಿ ದೇಶವ್ಯಾಪಿಯಾಗಿ ನಡೆಯುತ್ತಿದ್ದ ಆಂದೋಲನಗಳ ಚಳುವಳಿಗಳ ಪ್ರಭಾವವೂ ಕಾರಣ. ತೇಜಸ್ವಿಯವರು ತಮ್ಮ ಬರಹಗಳ ಮೂಲಕ ಮುಂದಿನ ಸಾಹಿತಿಗಳಿಗೆ ಮಾದರಿಯಾದದ್ದಲ್ಲದೆ ಅಂದಿನ ಕರ್ನಾಟಕದ ತಮ್ಮ ಜೊತೆಗಾರರೊಡನೆ ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರ ಮೂಲಕವೂ ಬದುಕು – ಚಳುವಳಿ – ಬರಹಗಳ ನಡುವಣ ಸಂಬಂಧಕ್ಕೆ ಮಾದರಿ ಯಾದರು. ಹೀಗೆ ಬಂಡಾಯ ಸಾಹಿತ್ಯ ಚಳುವಳಿಯ ಮೊದಲ ಅಧ್ಯಾಯ ಅವರ ಜೊತೆಗಾರರೊಡಗೂಡಿ ತೇಜಸ್ವಿಯವರ ಕಾಣಿಕೆಯೇ ಆಗಿದೆ. ಅಂದು ಅವರು ಎತ್ತಿದ ಬದುಕು-ಸಾಹಿತ್ಯಗಳ ನಡುವಣ ಸಂಬಂಧಗಳು ಬಂಡಾಯ ಸಾಹಿತಿಗಳನೇಕರ ಬದುಕಿಗೂ ಅವರ ಸಾಹಿತ್ಯಿಕ ಏಳು ಬೀಳುಗಳಿಗೂ ಅನ್ವಯಿಸುತ್ತದೆ. ನಿಷ್ಟುರವಾಗಿ ಸ್ವಯಂ ವಿಮಶರ್ೆ ಮಾಡಿಕೊಳ್ಳುವುದರ ಮೂಲಕವೇ ಮುಂದಿನ ಸಾಹಿತ್ಯಿಕ ಚಲನೆಯನ್ನು ಸಾಧಿಸಬೇಕಾಗಿದೆ. ತೇಜಸ್ವಿಯವರ ಬದುಕು – ಬರಹಗಳ ಸಂಬಂಧ ಒಂದು ಕಡೆ ಶಿವರಾಮ ಕಾರಂತರೊಂದಿಗೆ, ಮತ್ತೊಂದೆಡೆ ದೇವನೂರು ಮಹಾದೇವರೊಂದಿಗೆ ತುಲನಾತ್ಮಕ ಅಧ್ಯಯನ ನಡೆಸಬೇಕಾದ ವಸ್ತುವಾಗಿದೆ.
ಸಾಹಿತ್ಯಿಕ ವಸ್ತು ಮತ್ತು ರೂಪಬಂಧ
ಜಗತ್ತಿನಲ್ಲಿ ಸಾಮಾನ್ಯ ಸೂತ್ರವಾಗಿ ಎಲ್ಲ ಬಗೆಯ ಜ್ಞಾನಶಾಖೆಗಳಿಂದಲೂ ಅಧ್ಯಯನಕ್ಕೊಳಗಾಗಿರುವ ವಸ್ತು ಮತ್ತು ರೂಪ (್ಞಈಠಓಠ ಒಕ ಖಈಟಜ)ಗಳ ನಡುವಣ ಸಂಬಂಧ ಸಾಹಿತ್ಯಕ್ಕೆ ಕೂಡಾ ಅನ್ವಯಿಸುವಂತಹದೆ. ವೈಯಕ್ತಿಕ ನೆಲೆಯ ಅನುಭವಗಳನ್ನು ಅಭಿವ್ಯಕ್ತಿಸಲು ಸಿದ್ಧಿಸಿದ ರೂಪಗಳನ್ನು ಬಳಸಿ ಸಾಮುದಾಯಿಕ ಅನುಭವಗಳನ್ನು ಹೇಳಲೆಳಿಸಿದ ಅವರ ಆರಂಭಿಕ ಪ್ರಯತ್ನಗಳು ಮುಂದೆ ಭಿನ್ನವಾಗಿ ಬರೆಯುವುದಕ್ಕೆ ದಾರಿ ಮಾಡಿಕೊಟ್ಟ ಬಗೆಯನ್ನು ಅನ್ವೇಷಿಸಬೇಕಾಗಿದೆ.
ಪ್ರಾಚೀನ ಕಾವ್ಯ ಪರಂಪರೆಯಲ್ಲಿ ಹಾಗೆಯೇ ನವೋದಯದಿಂದ ನವ್ಯಕ್ಕೆ, ನವ್ಯದಿಂದ ಬಂಡಾಯಕ್ಕೆ ಸಾಹಿತ್ಯ ಹೊರಳಿದ ಪರಿಯನ್ನು ಅಭ್ಯಸಿಸುವ ದಾರಿಯಲ್ಲಿ ವಸ್ತು ಮತ್ತು ರೂಪಗಳ ಸಂಬಂಧದ ಬಗ್ಗೆ ವಿಸ್ತಾರವಾದ ಅಧ್ಯಯನ ಅನೇಕ ಒಳನೋಟಗಳನ್ನು ನೀಡಬಲ್ಲದು.
ಸಾಹಿತ್ಯದ ವಸ್ತುವಾಗಿ ವಿಜ್ಞಾನ
ವಿಜ್ಞಾನವನ್ನು ಸಾಹಿತ್ಯದ ವಸ್ತುವಾಗಿ ಪರಿಣಾಮಕಾರಿಯಾಗಿ, ಆಕರ್ಷಕವಾಗಿ ಬಳಸಿಕೊಳ್ಳುವ ಮೂಲಕ ತೇಜಸ್ವಿಯವರು ಕನ್ನಡ ಸಾಹಿತ್ಯದ ಗಡಿಗೆರೆಗಳನ್ನು ವಿಸ್ತರಿಸಿದರು. ಸಾಹಿತ್ಯಕ್ಕೊಂದು ಹೊಸವಸ್ತುವನ್ನು ದೊರಕಿಸಿಕೊಟ್ಟುದಲ್ಲದೆ ಕನ್ನಡದ ಓದುಗರ ಸಮೂಹವನ್ನು ತಮ್ಮೊಡನೆ ವಿಜ್ಞಾನದ ಅನ್ವೇಷಣೆಯ ಹಾದಿಯಲ್ಲಿ ಕೊಂಡೊಯ್ದು ವೈಜ್ಞಾನಿಕ ಮನೋಭಾವದ ಬೆಳವಣಿಗೆಗೆ, ವಿಜ್ಞಾನದ ಜನಪ್ರಿಯತೆಗೆ ಕಾರಣರಾಗಿದ್ದಾರೆ. ಹತ್ತಾರುಸಾವಿರ ವಿಜ್ಞಾನ ಬೋಧಕ, ಪ್ರಾಧ್ಯಾಪಕರುಗಳಿಂದ ಸಾಧ್ಯವಾಗದ ಕೆಲಸವನ್ನು ಇವರು ತಮ್ಮ ಕವರ್ಾಲೊ, ಚಿದಂಬರ ರಹಸ್ಯ, ಅಲೆಮಾರಿಯ ಅಂಡಮಾನ್, ಮಿಸ್ಸಿಂಗ್ ಲಿಂಕ್ ಮೊದಲಾದ ಕೃತಿಗಳಿಂದ ಸಾಧಿಸಿದ್ದಾರೆ. ಒಂದು ಕಡೆ ಕವರ್ಾಲೊ, ಚಿದಂಬರ ರಹಸ್ಯ ಸೃಜನಶೀಲ ಕೃತಿಗಳಲ್ಲಿ ವಿಜ್ಞಾನವನ್ನು ವಸ್ತುವಾಗಿ ದುಡಿಸಿಕೊಳ್ಳುವುದಕ್ಕೆ ಒಂದು ಮಾದರಿಯಾದರೆ ವೈಜ್ಞಾನಿಕ ಪ್ರಬಂಧಗಳನ್ನು ಪತ್ತೇದಾರಿ ಕಾದಂಬರಿಯಷ್ಟೇ ಆಕರ್ಷಕವಾಗಿ ಓದಿಸಿಕೊಳ್ಳಬಲ್ಲ ಮಾದರಿಗಳಾಗಿ ಮಿಸ್ಸಿಂಗ್ ಲಿಂಕ್, ಅಲೆಮಾರಿಯ ಅಂಡಮಾನ್ ರೂಪುಗೊಂಡಿವೆ.
`ಕರ್ವಾಲೋ’ನಂತಹ ಕಾದಂಬರಿಗಳು ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ಹೊಸ ಅಲೆಯನ್ನೇ ಮೂಡಿಸಬಹುದಾದ ಸಾಧ್ಯತೆಯುಳ್ಳ ಬರವಣಿಗೆಗಳು. ಆದರೆ ಆ ದಾರಿಯಲ್ಲಿ ಕನ್ನಡದ ಬೇರೆ ಯಾವ ಸಾಹಿತಿಯೂ ಸಾಗಲಿಲ್ಲವೆಂಬುದು ಆಧುನಿಕ ವಿದ್ಯಾಭ್ಯಾಸ ವ್ಯವಸ್ಥೆಯ ದುರಂತವೇ ಆಗಿದೆ. ಅರಿವಿನ ಲೋಕವನ್ನು ಪ್ರಾಕೃತಿಕ ವಿಜ್ಞಾನ, ಸಾಮಾಜಿಕ ಅಥವಾ ಮಾನವಿಕ ವಿಜ್ಞಾನಗಳೆಂದು ವಿಭಜಿಸಿ ದೊಡ್ಡ ಅಡ್ಡ ಗೋಡೆಯನ್ನು ಕಟ್ಟಿರುವುದರ ಫಲ ಇದು. ಸಾಹಿತ್ಯದ ವಿದ್ಯಾರ್ಥಿಗೆ ವಿಜ್ಞಾನದ ನಿಯಮ ತತ್ವಗಳ ಆಳ ಪರಿಚಯವಿಲ್ಲದ್ದರ ಫಲ. ಅಪರೂಪಕ್ಕೆ ಶಿವರಾಮ ಕಾರಂತರಂತಹವರು, ಬಿ.ಜಿ.ಎಲ್. ಸ್ವಾಮಿಗಳಂತಹವರು ಇಂತಹ ಮೇರೆಯನ್ನು ಮೀರಿದ್ದಾರೆ. ಆದರೆ ತೇಜಸ್ವಿ ವಿಜ್ಞಾನವನ್ನು ಸೃಜನಶೀಲ ಸಾಹಿತ್ಯದ ವಸ್ತುವಾಗಿ ಒಳಗೆ ಇವರನ್ನೂ ಮೀರಿದ್ದಾರೆ (ವೈಜ್ಞಾನಿಕ ಕಾದಂಬರಿಗಳೆಂಬ ಪ್ರಕಾರಕ್ಕಿಂತ ಭಿನ್ನವಾದ ಸಾಮಾಜಿಕ ಕಾದಂಬರಿಗಳನ್ನು ಕುರಿತಾದ ಮಾತಿದು)
ನಿಗೂಢತೆ ಮತ್ತು ಅರಿವಿನ ಅನ್ವೇಷಣೆ
ತೇಜಸ್ವಿಯವರು ತಮ್ಮ ಕೃತಿಗಳ ಮೂಲಕ ನಮ್ಮ ಈ ಜಗತ್ತಿನ ವಿಶಾಲತೆಯ ಬಗ್ಗೆ ಗಮನಸೆಳೆಯುತ್ತಲೇ, ವಿಸ್ಮಯದಿಂದ ನೋಡುತ್ತಲೇ, ಆಳವಾದ ಅಧ್ಯಯನ, ಶೋಧದಲ್ಲಿ ತೊಡಗುತ್ತಲೇ ಜಗತ್ತು ನಿಗೂಢವಾದದ್ದು, ಅಧ್ಯಯನಕ್ಕೆ ಸಿಲುಕಲಾರದ್ದು ಎಂಬ ನಿಲುವನ್ನು ಹೊಮ್ಮಿಸುತ್ತಾರೆ. ಕರ್ವಾಲೊ ಹಾರುವ ಓತಿ ಕೈಗೆ ಸಿಗದೆ ತಪ್ಪಿಸಿಕೊಳ್ಳುವುದು ಅಂತಹ ಒಂದು ಉದಾಹರಣೆ. ಇದು ತೇಜಸ್ವಿಯವರಲ್ಲಿ ಹುದುಗಿದ್ದ ಒಂದು ವೈರುಧ್ಯ. ಇದನ್ನು ಅವರು ತಾತ್ವಿಕವಾಗಿ ಹಾಗೂ ಸೃಜನಶೀಲವಾಗಿ ಬಿಡಿಸಿಕೊಳ್ಳದಿರುವುದು, ವಿಜ್ಞಾನದ ಅತ್ಯುತ್ತಮ ಪ್ರಚಾರಕನೇ ವಿಜ್ಞಾನವಿರೋಧಿ ಓದಿಗೆ ಕಾರಣನಾಗುವಂತಾಗಿದೆ.
ತೇಜಸ್ವಿಯವರ ಕೊಡುಗೆಯ ಗುಣಾತ್ಮಕ ಅಂಶಗಳ ಪರಿಚಯಕ್ಕೆ ಈ ಲೇಖನದಲ್ಲಿ ಒತ್ತು ನೀಡಲಾಗಿದೆ. ಅದೇ ಸಂದರ್ಭದಲ್ಲಿ ಇಂದು ಪತ್ರಿಕೆ, ಮಾಧ್ಯಮಗಳಲ್ಲಿ ನಡೆಯುತ್ತಿರುವ ಏಕಮುಖ ವೈಭವೀಕರಣವನ್ನು ತೇಜಸ್ವಿಯವರ ಬಗ್ಗೆ ಗೌರವವಿರುವವರೆಲ್ಲ ಸಂಶಯದಿಂದ ನೋಡಬೇಕಾದದ್ದೇ ಪ್ರಶ್ನಿಸಬೇಕಾದ್ದೇ ಆಗಿದೆ. ಇರುವಾಗ ತೇಜಸ್ವಿಯವರನ್ನು ಪರಿಚಯಿಸದ ಈ ಮಾಧ್ಯಮ ಪ್ರಪಂಚ ಇಂದು ಮಾಡುತ್ತಿರುವ ಅಬ್ಬರವನ್ನು ನೋಡಿದರೆ ಪ್ರಮುಖ ಸಾಹಿತಿ, ವಿಜ್ಞಾನಿಗಳಿಗೆ ಇರುವುದಕ್ಕಿಂತ ಸಾಯುವುದೇ ಮೇಲು ಅನ್ನಿಸದಿರದು.
 

‍ಲೇಖಕರು avadhi

September 8, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. mahantesh

    evattu tejaswi kuritu bruttiruva brahgala baggee tejaswi badukiddare modala teeke maduttidddu avare.ekaprkara hogalubattagitanavannu avarendu sahisuttiralli.sahitydodige vignanavenba rasayana unisidavaru tejaswi. avrige adu sadyavadudu avaru idi badukannu janarodige kaledudadrinda.janara badukannu avare neladalle kannare kandiddarinda grameena janarannu odisalu bekada sayityvannu tejasi baredaru.agagiye tejaswi yavattu sayiya lokada vibinna payaniga.

    ಪ್ರತಿಕ್ರಿಯೆ
  2. ಸತ್ಯನಾರಾಯಣ

    ಸರ್ ಅತ್ಯುತ್ತಮವಾದ ಟಿಪ್ಪಣಿಯೊಂದನ್ನು ಕಟ್ಟಿಕೊಟ್ಟಿದ್ದೀರಿ, ತೇಜಸ್ವಿಯವರ ಬಗ್ಗೆ. ಹೀಗೆ ಬಹು ಆಯಾಮಗಳಿಂದ ತೇಜಸ್ವಿಯವರನ್ನು ನೋಡುವುದು ಖುಷಿಯ ವಿಚಾರವಾಗಿದೆ.
    “ಇಂದು ಪತ್ರಿಕೆ, ಮಾಧ್ಯಮಗಳಲ್ಲಿ ನಡೆಯುತ್ತಿರುವ ಏಕಮುಖ ವೈಭವೀಕರಣವನ್ನು ತೇಜಸ್ವಿಯವರ ಬಗ್ಗೆ ಗೌರವವಿರುವವರೆಲ್ಲ ಸಂಶಯದಿಂದ ನೋಡಬೇಕಾದದ್ದೇ ಪ್ರಶ್ನಿಸಬೇಕಾದ್ದೇ ಆಗಿದೆ. ಇರುವಾಗ ತೇಜಸ್ವಿಯವರನ್ನು ಪರಿಚಯಿಸದ ಈ ಮಾಧ್ಯಮ ಪ್ರಪಂಚ ಇಂದು ಮಾಡುತ್ತಿರುವ ಅಬ್ಬರವನ್ನು ನೋಡಿದರೆ ಪ್ರಮುಖ ಸಾಹಿತಿ, ವಿಜ್ಞಾನಿಗಳಿಗೆ ಇರುವುದಕ್ಕಿಂತ ಸಾಯುವುದೇ ಮೇಲು ಅನ್ನಿಸದಿರದು.” ಯೋಚಿಸಬೇಕಾದ ಮಾತುಗಳಿವು.

    ಪ್ರತಿಕ್ರಿಯೆ
  3. ಲೋಕೇಶ

    ಚೆನ್ನಾಗಿದೆ. ತೇಜಸ್ವಿಯವರ ಕರ್ವಾಲೋದಲ್ಲಿ ಹಾರುವ ಓತಿ ಕಾದಂಬರಿಯಲ್ಲೇ ಸಿಕ್ಕು ಬಿಟ್ಟಿದ್ದರೆ.. ಕಾದಂಬರಿ ಉದ್ದವಾಗಿ ಬೆಳೆಯ ಬೇಕಾಗುತಿತ್ತು. ಜೋತೆಗೆ ಹಾರುವ ಓತಿಯನ್ನು ಹಿಡಿದು ಮನೆಗೆ ಬರುವವರಿಗೆ ಸಮಜಾಯಿಸಿ ಕೊಡಬೇಕಾಗುತಿತ್ತು. ಅದಕ್ಕೆ ನೀವು ಕೊಟ್ಟ ಕಾರಣವಿರಲಾರದು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: