ವಾರ್ತಾ ಭಾರತಿ
‘ಬಂಗಾರಪ್ಪ ಇನ್ನಿಲ್ಲ’ ಎನ್ನುವ ಮಾತು ಕರ್ನಾಟಕದ ಪಾಲಿಗೆ ತೀರಾ ಹಳೆಯದು. ಯಾವಾಗ ಅವರು ಬಿಜೆಪಿಗೆ ಸೇರಿ, ಅಲ್ಲಿಂದಲೂ ಹೊರ ದಬ್ಬಿಸಿಕೊಂಡರೋ, ಆಗಲೇ ಈ ಮಾತು ಕರ್ನಾಟಕ ರಾಜಕೀಯ ಚಾವಡಿಯಲ್ಲಿ ಬಳಕೆಗೆ ಬಂದಿತ್ತು. ರಾಜಕೀಯವಾಗಿ ಎಂದೋ ಮುಗಿದು ಹೋಗಿದ್ದ ಬಂಗಾರಪ್ಪ ಇಂದು ದೈಹಿಕವಾಗಿಯೂ ಮುಗಿದು ಹೋಗಿದ್ದಾರೆ. ರಾಜಕೀಯವನ್ನೇ ಉಸಿರಾಡುತ್ತಿದ್ದ ಬಂಗಾರಪ್ಪನವರಿಗೆ, ಯಾವಾಗ ರಾಜಕೀಯ ಕೈಕೊಟ್ಟಿತೋ, ಆಗಲೇ ತನ್ನ ದೈಹಿಕ ಆರೋಗ್ಯದ ಮೇಲೂ ಅನುಮಾನ ಹುಟ್ಟ ತೊಡಗಿತ್ತು. ಬಹುಶಃ ಇದೇ ಕಾರಣಕ್ಕಿರಬೇಕು, 75 ವರ್ಷ ಪೂರ್ತಿಯಾದಾಗ ಅವರು ಅದನ್ನೇ ಸಾಧನೆಯೆಂಬಂತೆ ಸ್ವಯಂ ಹಣಚೆಲ್ಲಿ ರಾಜ್ಯಾದ್ಯಂತ ಆಚರಿಸಿಕೊಂಡರು. ಬಂಗಾರಪ್ಪ ಇನ್ನಿಲ್ಲದ ಈ ಸಂದರ್ಭದಲ್ಲಿ ನಾವು ಧ್ಯಾನಿಸಬೇಕಾದುದು, ಬಂಗಾರಪ್ಪ ಈ ನಾಡಿನ ದುರ್ಬಲ ಜನರಿಗೆ ಕೊಟ್ಟ ಕೊಡುಗೆಗಳನ್ನಲ್ಲ. ಅವರು ಕೊಡಬಹುದಾಗಿದ್ದ ಕೊಡುಗೆಗಳ ಸಾಧ್ಯತೆಯನ್ನು. ಹೌದು. ಬಂಗಾರಪ್ಪನವರ ಏಳು ಬೀಳು ಈ ನಾಡಿನ ದುರ್ಬಲ ವರ್ಗದ ಜನರ ಏಳು ಬೀಳು ಕೂಡ ಹೌದು. ಈ ನಾಡಿಗೆ ಪರ್ಯಾಯ ಶಕ್ತಿಯೊಂದನ್ನು ನೀಡುವ ಎಲ್ಲ ಸಾಧ್ಯತೆಯಿದ್ದ ನಾಯಕನನ್ನು ರಾಷ್ಟ್ರೀಯ ಪಕ್ಷಗಳು ಸೇರಿ ಕೊಂದು ಹಾಕಿದವು ಎನ್ನುವುದಕ್ಕೆ ಬಂಗಾರಪ್ಪ ಉತ್ತಮ ಉದಾಹರಣೆ. ಅಂದ ಹಾಗೆ, ಬಂಗಾರಪ್ಪನವರ ಪತನದಲ್ಲಿ ಇತರ ಪಕ್ಷಗಳ ಪಾತ್ರ ಮಾತ್ರವಲ್ಲ, ಸ್ವಯಂ ಆತ್ಮಘಾತುಕತನವೂ ಕೆಲಸ ಮಾಡಿದೆ. ಇದರಲ್ಲಿ ಎರಡು ಮಾತಿಲ್ಲ.
ಬಂಗಾರಪ್ಪ ಈ ನಾಡಿಗೆ ಕೊಟ್ಟ ಅತಿ ದೊಡ್ಡ ಕೊಡುಗೆಯೆಂದರೆ, ಕಾಂಗ್ರೇಸೇತರ ಸರಕಾರವೊಂದರ ರಚನೆ. ಬಂಗಾರಪ್ಪನವರ ಶ್ರಮದಿಂದಲೇ ಇಲ್ಲಿ ಕಾಂಗ್ರೇಸೇತರ ಸರಕಾರವೊಂದು ಪ್ರಪ್ರಥಮ ಬಾರಿಗೆ ಅಸ್ತಿತ್ವಕ್ಕೆ ಬಂದಿತು. ನಾಡಿನ ಹಿಂದುಳಿದ ವರ್ಗವನ್ನು ರಾಜಕೀಯ ಶಕ್ತಿಯಾಗಿ ರೂಪಿಸುವಲ್ಲಿ ಬಂಗಾರಪ್ಪನವರ ಕೊಡುಗೆಯನ್ನು ನಾವೆಲ್ಲ ಸದಾ ಸ್ಮರಿಸಬೇಕಾಗಿದೆ. ಎಲ್ಲ ಸರಿಯಾಗಿದ್ದರೆ ಅಂದು ಬಂಗಾರಪ್ಪ ಮುಖ್ಯಮಂತ್ರಿಯಾಗಬೇಕಾಗಿತ್ತು. ಆದರೆ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಗಾದಿಯ ಮೇಲೆ ಬಂದು ಕೂತರು. ಇದು ಅವರ ರಾಜಕೀಯ ಬದುಕಿನಲ್ಲಿ ಅವರಿಗಾದ ಮೊದಲ ಭ್ರಮ ನಿರಸನ. ಅವರು ಹುಟ್ಟು ಹಾಕಿದ ‘ಕ್ರಾಂತಿ ರಂಗ’ ಆಗ ರಾಜಕೀಯದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿತ್ತು. ಮಲೆನಾಡು, ಕರಾವಳಿ ಭಾಗದಲ್ಲಿ ಜನರು ಕಾಂಗ್ರೆಸ್ ಹೊರತಾದ ರಾಜಕೀಯ ಪಕ್ಷವನ್ನು ಯೋಚಿಸ ತೊಡಗಿದುದೇ ಬಂಗಾರಪ್ಪನವರ ಮೂಲಕ. ಈಡಿಗ ಸಮುದಾಯದಲ್ಲಿ ಹುಟ್ಟಿ, ಕಾಂಗ್ರೆಸ್‌ಗೆ ಸಡ್ಡು ಹೊಡೆದು ಒಂದು ಪಕ್ಷವನ್ನು ಹುಟ್ಟಿಸಿ, ಬೆಳೆಸುವುದು ಸಣ್ಣ ವಿಷಯವೇನೂ ಅಲ್ಲ. ಬಂಗಾರಪ್ಪನವರ ಒಳಗಿದ್ದ ಪ್ರಾಮಾಣಿಕ ಸಮಾಜವಾದಿಗೆ ಸಿಕ್ಕ ಫಲವಾಗಿತ್ತು ಅದು. ಆದರೆ ಮುಂದೆ ಆ ಫಲವನ್ನು ಸಣ್ಣ ಬೆಲೆಗೆ ರಾಜಕೀಯ ಮಾರುಕಟ್ಟೆಯಲ್ಲಿ ಮಾರಿ ಬಿಟ್ಟರು. ಇದು ಕೇವಲ ಬಂಗಾರಪ್ಪನವರ ದುರದೃಷ್ಟ ಮಾತ್ರವಲ್ಲ, ರಾಜ್ಯದ ಹಿಂದುಳಿದ ವರ್ಗದ ದುರದೃಷ್ಟ ಕೂಡ.
ಶಿವಮೊಗ್ಗವನ್ನು ಮೂಲ ನೆಲೆಯಾಗಿ ಮಾಡಿ, ರಾಜ್ಯ ಮಟ್ಟದಲ್ಲಿ ಬೆಳೆದ ಇನ್ನೊಬ್ಬ ನಾಯಕನನ್ನು ನಾವು ಬಂಗಾರಪ್ಪನವರ ಜೊತೆಗಿಟ್ಟು ತೂಗಬಹುದು. ಅವರೇ ಯಡಿಯೂರಪ್ಪ. ರೈತ ನಾಯಕನಾಗಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಎಲ್ಲ ಹೆಗ್ಗಳಿಕೆ ಯಡಿಯೂರಪ್ಪನವರಿಗೆ ಸೇರಬೇಕು. ಅಂತೆಯೇ 80ರ ದಶಕದ ಸಂದರ್ಭದಲ್ಲಿ ಕಾಂಗ್ರೆಸನ್ನೂ ರಾಜ್ಯಾದ್ಯಂತ ಇನ್ನಷ್ಟು ಗಟ್ಟಿಗೊಳಿಸಿದ ಹೆಗ್ಗಳಿಕೆ ಬಂಗಾರಪ್ಪನವರದು. ಇಂದು ಯಡಿಯೂರಪ್ಪ ಭ್ರಷ್ಟಾತಿ ಭ್ರಷ್ಟರಾಗಿ ಗುರುತಿಸಿಕೊಂಡು ನಾಡಿನಾದ್ಯಂತ ಟೀಕೆಯನ್ನು ಎದುರಿಸುತ್ತಿದ್ದಾರೆ. ಆದರೆ ಅವರನ್ನು ಭ್ರಷ್ಟರಾಗಿಸುವಲ್ಲಿ ಬಿಜೆಪಿಯ ನಾಯಕರ ಪಾತ್ರ ಬಲು ದೊಡ್ಡಗಾಗಿದೆ. ಬಿಜೆಪಿಯ ಮುಖ್ಯಮಂತ್ರಿಯಾಗಲು ಎಲ್ಲ ಅರ್ಹತೆಯಿದ್ದು, ಅವರನ್ನು ಬದಿಗಿಡಲು ಸಂಚು ಹೂಡಿದ ಬ್ರಾಹ್ಮಣ್ಯ ಶಕ್ತಿಯನ್ನು ನೆಚ್ಚಿಕೊಂಡ ವರಿಷ್ಠರ ಕಾರ್ಯತಂತ್ರ ಯಡಿಯೂರಪ್ಪನವರನ್ನು ದುರ್ಬಲಗೊಳಿಸಿತು ಮತ್ತು ಅವರಲ್ಲಿ ಅಭದ್ರತೆಯನ್ನು ಹುಟ್ಟಿಸಿತು. ವರಿಷ್ಠರ ನಿರ್ದೇಶನದ ಮೇರೆಗೆ ಭ್ರಷ್ಟ ರೆಡ್ಡಿ ಸಹೋದರರಿಗೆ ಯಡಿಯೂರಪ್ಪ ಮಣೆ ಹಾಕಿದರು. ರೆಡ್ಡಿ ಸಹೋದರು ಗಣಿಗಳಿಂದ ದೋಚಿದ ದುಡ್ಡನ್ನು ಸುರಿದುದು ಬಿಜೆಪಿ ವರಿಷ್ಠರಿಗೆ ಇಂತಹ ವಾತಾವರಣದಲ್ಲಿ ಅಭದ್ರ ಭವಿಷ್ಯವನ್ನು ನೆನೆದು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಅವರು, ಎಲ್ಲರೊಳಗೊಂದಾಗಿ ಹೋದರು. ಬಂಗಾರಪ್ಪನವರ ಹಾದಿಯೂ ಇದಕ್ಕೆ ಹೊರತಾಗಿಲ್ಲ. ಬಂಗಾರಪ್ಪನವರಿಂದ ಸಿಗುವ ಮತಗಳು ಕಾಂಗ್ರೆಸ್‌ಗೆ ಬೇಕಿತ್ತು. ಆದರೆ ಮುಖ್ಯಮಂತ್ರಿಯನ್ನಾಗಿ ಮಾಡುವ ಪ್ರಶ್ನೆ ಬಂದಾಗ ಎಲ್ಲರೂ ಅವರ ವಿರುದ್ಧ ಸಂಚು ನಡೆಸಿದರು. ಇದು ಕಾಂಗ್ರೆಸ್‌ನಲ್ಲಿ ಮತ್ತೆ ಮತ್ತೆ ನಡೆಯಿತು. ಇಂತಹ ಸಂದರ್ಭದಲ್ಲಿ ಸಿಕ್ಕಿದ ಅಧಿಕಾರವನ್ನು ವೈಯಕ್ತಿಕವಾಗಿ ಸದುಪಯೋಗ ಪಡಿಸಿಕೊಳ್ಳುವ ಸನ್ನಿವೇಶದಲ್ಲಿ ಅವರು ನಿಂತರು. ಎಲ್ಲರೊಂದಿಗೆ ತನಗೆಷ್ಟು ಸಾಧ್ಯವೋ ಅಷ್ಟು ರಾಜ್ಯವನ್ನು ದೋಚಿದರು. ಆದರೂ ಅವರ ಆಳದಲ್ಲಿ ಒಬ್ಬ ಲೋಹಿಯಾ ವಾದಿ ಅಲ್ಪಸ್ವಲ್ಪವಾದರೂ ಜೀವಂತವಿದ್ದ. ಯಾವಾಗ ಅದನ್ನೂ ಬಲಿಕೊಟ್ಟು ತನ್ನ ಎದುರಾಳಿಗಳನ್ನು ಮಣಿಸಲು ಯತ್ನಿಸಿದರೋ ಅಲ್ಲಿಂದ ಬಂಗಾರಪ್ಪನವರ ಪತನ ಆರಂಭವಾಯಿತು. ತಾನೇ ಕೈ ಹಿಡಿದು ನಡೆಸಿದ, ಚಿತ್ರರಂಗದಲ್ಲಿ ಮುನ್ನಡೆಸಿದ, ರಾಜಕೀಯದಲ್ಲಿ ಬೆಳೆಸಿದ ಮಗನನ್ನು ಎದುರು ಹಾಕಿಕೊಳ್ಳುವ ಶಕ್ತಿಯಿಲ್ಲದೆ ಸ್ವಂತ ಮನೆಯಲ್ಲೇ ಮುದಿ ಹುಲಿಯಂತೆ ಬದುಕ ಬೇಕಾಯಿತು.
ಹೌದು. ರಾಜಕೀಯ ಚದುರಂಗದಾಟದಲ್ಲಿ ಎದುರಾಳಿಯ ಕಾಲಾಳನ್ನು ಸಾಯಿಸುವ ಆತುರದಲ್ಲಿ ತನ್ನ ರಾಣಿಯನ್ನೇ ಬಲಿ ಕೊಟ್ಟರು ಬಂಗಾರಪ್ಪ. ಬಿಜೆಪಿಗೆ ಸೇರಿದ ಅವರ ಆತುರದ ನಿರ್ಧಾರ ಅವರ ಅಸಹಾಯಕತೆಯ ಸ್ಥಿತಿಗೆ ನಿದರ್ಶನ. ಕಾಂಗ್ರೆಸ್‌ನ ಮೇಲಿನ ಸಿಟ್ಟಿಗೆ ಬಿಜೆಪಿ ಸೇರಿ, ನರೇಂದ್ರ ಮೋದಿಯವರ ಜೊತೆಗೆ ವೇದಿಕೆಯನ್ನು ಹಂಚಿಕೊಂಡರು. ಬಿಜೆಪಿಯೋ ಅವರನ್ನು ಎಷ್ಟು ಬಳಸಬೇಕೋ ಅಷ್ಟು ಬಳಸಿ ಎಸೆಯಿತು. ಬಿಜೆಪಿಯ ಕಳಂಕ ಅವರನ್ನು ತೊಳೆದಷ್ಟೂ ಅಂಟಿಕೊಳ್ಳುತ್ತಿತ್ತು. ಬಿಜೆಪಿಗೆ ಸೇರುವ ಮೂಲಕ ತನ್ನ ನೆಲೆಯನ್ನೇ ಬಿಜೆಪಿಯ ಕೈಗೆ ಒಪ್ಪಿಸಿದರು. ಮುಂದೆ ಬಿಜೆಪಿ ಬಿಟ್ಟರಾದರೂ, ಕಳೆದುಕೊಂಡ ಆ ನೆಲೆಯನ್ನು ಮರಳಿ ಪಡೆಯಲು ಅವರಿಗೆ ಸಾಧ್ಯವಾಗಲಿಲ್ಲ. ಒಂದಾನೊಂದು ಕಾಲದ ಮುಖ್ಯಮಂತ್ರಿ, ಶಾಸಕ ಸ್ಥಾನವನ್ನು ಗೆಲ್ಲುವುದಕ್ಕೂ ಸಾಧ್ಯವಾಗದೆ ನಗೆಪಾಟಲಿಗೀಡಾದರು.
ಬಂಗಾರಪ್ಪನವರ ಸೋಲು ನಿಸ್ಸಂಶಯವಾಗಿ ಈ ನಾಡಿನ ಹಿಂದುಳಿದ ವರ್ಗದ ರಾಜಕಾರಣದ ಸೋಲಾಗಿದೆ. ತೃತೀಯ ಶಕ್ತಿಯೊಂದನ್ನು ನಾಡಿನಾ ದ್ಯಂತ ಕಟ್ಟಿ ಬೆಳೆಸುವ ಸಾಧ್ಯತೆಯೊಂದು ಬಂಗಾರಪ್ಪ ನವರ ಮೂಲಕವೇ ಇಲ್ಲವಾಯಿತು. ಬಂಗಾರಪ್ಪನವರ ರಾಜಕೀಯ ಬದುಕು ಇತರ ಹಿಂದುಳಿದ ನಾಯಕರಿಗೆ ಒಂದು ಪಾಠವಾಗ ಬೇಕಾಗಿದೆ.







ಸ್ಸ್ವಾಮಿ,
ಯಡಿಯೂರಪ್ಪನವರನ್ನು ಕುರಿತಾಗಿ ತಮ್ಮ ವಾಕ್ಯ “ಅವರನ್ನು ಬದಿಗಿಡಲು ಸಂಚು ಹೂಡಿದ ಬ್ರಾಹ್ಮಣ್ಯ ಶಕ್ತಿಯನ್ನು ನೆಚ್ಚಿಕೊಂಡ ವರಿಷ್ಠರ …”
ಇಲ್ಲಿ ಬ್ರಾಹ್ಮಣ್ಯ ಶಕ್ತಿ ಯಾರು? ಅನಂತ ಕುಮಾರರೇ, ರಾಜ್ಯಪಾಲ ಭಾರದ್ವಾಜರೇ? ಹಾಗಿದ್ದರೆ ಅವರ ಹೆಸರನ್ನೇ ನೇರವಾಗಿ ಹೇಳಬಹುದಿತ್ತಲ್ಲ? ಅವರಿಬ್ಬರೂ ಹೆಸರು ಹೇಳಲು ಸಂಕೋಚ ಹುಟ್ಟಿಸುವ ದಾಯಾದಿಗಳು ತಮಗಲ್ಲ ಎಂದು ಭಾವಿಸುತ್ತೇನೆ. ಯಡಿಯೂರಪ್ಪನವರ ಬೆಂಬಲವನ್ನು “ಲಿಂಗಾಯಿತ ಶಕ್ತಿ” ಎಂದು ಸಂಬೋಧಿಸದ ನೀವು ಮತ್ಯಾರನ್ನೋ ಬ್ರಾಹ್ಮಣ್ಯ ಶಕ್ತಿ ಎಂದು ಕರೆಯುವ ಔಚಿತ್ಯವೇನು? ಇಲ್ಲಿ ಜಾತಿ ಸೂಚಕವನ್ನು ತರುವ ಅವಶ್ಯಕತೆಯಾದರೂ ಏನಿತ್ತು? – ಪ್ರಕಾಶ್
gud question mr.prakash…