ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಫ್ಲಿಪ್ ಕಾರ್ಟ್, ಅಮೆಜಾನ್ ಗಳಂತಹ ದೈತ್ಯ ಹೆದ್ದೆರೆಗಳು ಬಂದು..

ಒಂದು ಪುಸ್ತಕದಂಗಡಿಯ ಸಾವು..!!

ಗಿರಿಧರ ಕಾರ್ಕಳ

ಈಚಿನ ದಿನಗಳಲ್ಲಿ ಪುಸ್ತಕದಂಗಡಿಗಳು ಮುಚ್ಚುವುದು ತೀರ  ಅನಿರೀಕ್ಷಿತವೇನಲ್ಲ. ಆದರೆ ಮುಂಬಯಿನ ಸ್ಟ್ರಾಂಡ್ ಬುಕ್ ಸ್ಟಾಲ್ ಮುಚ್ಚುತ್ತಿದೆ ಎಂದಾಗ ನಂಬುವುದು ಸ್ವಲ್ಪ ಕಷ್ಟವೇ. ಆದರೆ ಈಗ ಅದು ನಂಬಲೇ ಬೇಕಾದ ನೋವಿನ ಸಂಗತಿ.

ದಕ್ಷಿಣ ಕನ್ನಡದ ಸಾಹಸಿಗಳು ಮುಂಬಯಿನಲ್ಲಿ ಎಲ್ಲ ಬಗೆಯ ವ್ಯಾಪಾರ ವಹಿವಾಟು ನಡೆಸಿ ಗೆದ್ದಿರುವ ನೂರಾರು ಉದಾಹರಣೆಗಳಿವೆ. ಪುಸ್ತಕ ಮಳಿಗೆ ತೆರೆದು ಇತಿಹಾಸ ಬರೆದದ್ದು ಕುಂದಾಪುರ ತೆಕ್ಕಟ್ಟೆಯ ನಾರಾಯಣ ಶ್ಯಾನುಭಾಗರು ಮಾತ್ರ..!!

ಕೊಲಾಬಾದ ಸ್ಟ್ರಾಂಡ್ ಟಾಕೀಸಿನ ಪುಟ್ಟ ಕಿಯೋಸ್ಕಿನಲ್ಲಿ 1948 ರಲ್ಲಿ ಪುಸ್ತಕದಂಗಡಿ ತೆರೆದು ಮುಂದೆ ಬೃಹತ್ ಮಳಿಗೆಯಾಗಿ ದೇಶದ ಪ್ರಮುಖ ನಗರಗಳಲ್ಲಿ ಐದು ಶಾಖೆ ತೆರೆವಲ್ಲಿ ವರೆಗಿನ 70 ವರ್ಷಗಳ ಕತೆ ನಿಜಕ್ಕೂ ರೋಚಕ.

ಮುಂಬೈ ಫೋರ್ಟ್ ಬೋರಾಬಜಾರಿನ ಸ್ಟ್ರಾಂಡ್ ಪುಸ್ತಕ ಮಳಿಗೆ ಮುಚ್ಚಲಿದೆ ಎಂಬ ಸುದ್ದಿ ಬಂದಾಗಿನಿಂದ, ದಶಕಗಳ ಕಾಲದ ಮಳಿಗೆಯ ಪುಸ್ತಕ ನೆಂಟರೆಲ್ಲ ಭೇಟಿ ನೀಡಿ ಕಣ್ಣೀರಿನ ವಿದಾಯ ಹೇಳುತ್ತಿದ್ದಾರೆ. ಗುಡ್ಡೆ ಹಾಕಿದ  ಪುಸ್ತಕಗಳ ರಾಶಿಯಿಂದ ಬೇಕಾದ ಪುಸ್ತಕಗಳನ್ನು ಎದೆಗವಚಿಕೊಂಡು ಒಯ್ಯುತ್ತಿದ್ದಾರೆ. ಬಹುಶಃ ಈ ಪುಸ್ತಕದಂಗಡಿಗೆ ಭೇಟಿ ನೀಡದ ಲೇಖಕರು, ಪುಸ್ತಕಪ್ರಿಯರೇ ಮುಂಬೈನಲ್ಲಿ ಇರಲಿಕ್ಕಿಲ್ಲವೇನೋ..!!

ಜವಾಹರ ಲಾಲ್ ನೆಹರೂ, ಅಬ್ದುಲ್ ಕಲಾಂ, ಆರ್.ಕೆ.ಲಕ್ಷ್ಮಣ್, ವಿಜಯ್ ತೆಂಡೂಲ್ಕರ್.. ಹೀಗೇ ಬೆಳೆಯುತ್ತದೆ ಈ ಮಳಿಗೆಯ ಗಣ್ಯ ಗ್ರಾಹಕರ ಪಟ್ಟಿ..!! ಮುಂಬಯಿನಲ್ಲಿ ನಾನಿದ್ದ ಆರು ವರುಷಗಳಲ್ಲಿ ಪದೇ ಪದೇ ಭೇಟಿ ನೀಡಿದ ಪುಸ್ತಕ ಮಳಿಗೆ ಇದೊಂದೇ ಅನ್ನುವುದು ನನ್ನ ಹೆಮ್ಮೆ..!!

ಪುಸ್ತಕ ವ್ಯಾಪಾರವನ್ನು ಒಂದು ವೃತದಂತೆ ಪಾಲಿಸಿಕೊಂಡು ಬಂದು, ಮುಂಬಯಿ ಪುಸ್ತಕಪ್ರೇಮಿಗಳ ಮನಗೆದ್ದ ಶ್ಯಾನುಭಾಗರಿಗೆ ಅದಕ್ಕಾಗಿಯೇ ಪದ್ಮಶ್ರೀ ಪ್ರಶಸ್ತಿ ದೊರೆತಿರುವುದೇನೂ ಸಾಮಾನ್ಯ ಸಂಗತಿಯಲ್ಲ.

15 ವರ್ಷಗಳ ಹಿಂದೆ ಮಳಿಗೆಯ ಮಾಲಕತ್ವವನ್ನು ಮಗಳು ವಿದ್ಯಾಗೆ ವಹಿಸಿ ಕೊಡುವಾಗ ಆಗಷ್ಟೇ ಬೆಳೆಯುತ್ತಿದ್ದ ಚೈನ್ ಸ್ಟೋರ್ ಗಳ ಭರಾಟೆಯ ಮುಂದೆ ನಾವು ಸ್ಪರ್ಧಿಸುವುದು ಸಾಧ್ಯವೇ ಎಂದು ಮಗಳು ಆತಂಕ ವ್ಯಕ್ತ ಪಡಿಸಿದಾಗ 50 ವರ್ಷಗಳ ಅನುಭವಿ ಶ್ಯಾನುಭಾಗರು ಆತ್ಮವಿಶ್ವಾಸದಿಂದ ಹೇಳಿದ್ದು- “ನಮ್ಮ ಸ್ಟ್ರಾಂಡ್ ಮಳಿಗೆಯ ಮುಂದೆ ಯಾವ ಚೈನ್ ಸ್ಟೋರುಗಳೂ ನಿಲ್ಲುವುದಿಲ್ಲ..!!”

ಅವರ ಮಾತಿನಂತೇ, ಆ ಆತ್ಮವಿಶ್ವಾಸ ಮುಂದೆ 5 ನಗರಗಳಲ್ಲಿ ಶಾಖೆ ತೆರೆಯುವವರೆಗೂ ಬೆಳೆಯಿತು. 2009 ರಲ್ಲಿ ಶ್ಯಾನುಭಾಗ್ ತೀರಿಕೊಂಡರು.

ಕಾಲ ಯಾವಾಗಲೂ ಶ್ಯಾನುಭಾಗರದ್ದೇ ಆಗಿರುವುದಿಲ್ಲವೇನೋ..!! ಸ್ಟ್ರಾಂಡ್ ಎಂದರೆ ಸಮುದ್ರ ತೀರ ಎಂದರ್ಥ. ಹೌದು..!! ಫ್ಲಿಪ್ ಕಾರ್ಟ್, ಅಮೆಜಾನ್ ಗಳಂತಹ ದೈತ್ಯ ಹೆದ್ದೆರೆಗಳು ಬಂದು ಸ್ಟ್ರಾಂಡನ್ನು ಕೊಚ್ಚಿಕೊಂಡು  ಹೋಗುವಂತೆ ಮಾಡಿವೆ..!!

ಅಲ್ಲಿಗೆ 70 ವರ್ಷಗಳ “ಸಮುದ್ರ ತೀರ”ದ ಸುದೀರ್ಘ ಪಯಣದ ಹೆಜ್ಜೆಗಳು  ಮರಳರಾಶಿಯೊಳಗೆ ಸೇರಿಕೊಂಡಿವೆ..!!

‍ಲೇಖಕರು Avadhi GK

2 March, 2018

2 Comments

  1. nutana doshetty

    idakke barahagararoo karana irabshude? itteechege bahutekaru online maratakke manassu maduttiddare

  2. Suma Kalasapura

    ಶೀರ್ಷಿಕೆ ನೋಡಿಯೇ ತುಂಬಾ ಸಂಕಟವಾಯ್ತು. ಇದು ನಿಜಕ್ಕೂ ದೊಡ್ಡ ದುರಂತವೇ ಸರಿ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading